ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಆಪರೇಷನ್ ಸಿಂದೂರʼ ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ʻವಿಜಯ್ ಉತ್ಸವʼ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ

ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ನಾನು ಈ ʻವಿಜಯ್‌ ಉತ್ಸವʼದ ಸ್ಫೂರ್ತಿಯೊಂದಿಗೆ ಸದನದಲ್ಲಿ ಎದ್ದು ನಿಂತಿದ್ದೇನೆ: ಪ್ರಧಾನಮಂತ್ರಿ

ʻಆಪರೇಷನ್ ಸಿಂದೂರʼ ಸ್ವಾವಲಂಬಿ ಭಾರತದ ಶಕ್ತಿಯನ್ನು ಎತ್ತಿ ತೋರಿಸಿದೆ: ಪ್ರಧಾನಮಂತ್ರಿ

ʻಆಪರೇಷನ್ ಸಿಂದೂರʼ ಸಮಯದಲ್ಲಿ, ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯ ಒಗ್ಗಟ್ಟು ಪಾಕಿಸ್ತಾನವನ್ನು ನಡುಗಿಸಿತು: ಪ್ರಧಾನಮಂತ್ರಿ

ಭಯೋತ್ಪಾದನೆಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ, ಪರಮಾಣು ಬ್ಲ್ಯಾಕ್ಮೇಲ್ ಅನ್ನು ಸಹಿಸುವುದಿಲ್ಲ ಮತ್ತು ಭಯೋತ್ಪಾದಕ ಪ್ರಾಯೋಜಕರು ಮತ್ತು ಮಾಸ್ಟರ್ ಮೈಂಡ್‌ಗಳನ್ನು ಸಮಾನವಾಗಿ ಪರಿಗಣಿಸುತ್ತೇವೆ ಎಂದು ಭಾರತ ಸ್ಪಷ್ಟಪಡಿಸಿದೆ: ಪ್ರಧಾನಮಂತ್ರಿ

ʻಆಪರೇಷನ್ ಸಿಂದೂರʼ ಸಮಯದಲ್ಲಿ, ಭಾರತವು ವ್ಯಾಪಕ ಜಾಗತಿಕ ಬೆಂಬಲವನ್ನು ಗಳಿಸಿತು: ಪ್ರಧಾನಮಂತ್ರಿ

ʻಆಪರೇಷನ್ ಸಿಂಧೂರʼ ಮುಂದುವರಿದಿದೆ, ಪಾಕಿಸ್ತಾನದ ಯಾವುದೇ ಅಜಾಗರೂಕ ಕ್ರಮವನ್ನು ದಿಟ್ಟ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುವುದು: ಪ್ರಧಾನಮಂತ್ರಿ

ಗಡಿಯಲ್ಲಿ ಬಲವಾದ ಮಿಲಿಟರಿಯು ಸದೃಢ ಮತ್ತು ಸುರಕ್ಷಿತ ಪ್ರಜಾಪ್ರಭುತ್ವವನ್ನು ಖಚಿತಪಡಿಸುತ್ತದೆ: ಪ್ರಧಾನಮಂತ್ರಿ

ಕಳೆದ ದಶಕದಲ್ಲಿ ಭಾರತದ ಸಶಸ್ತ್ರ ಪಡೆಗಳ ಶಕ್ತಿ ವರ್ಧನೆಗೆ ʻಆಪರೇಷನ್ ಸಿಂದೂರʼ ಸ್ಪಷ್ಟ ಪುರಾವೆಯಾಗಿದೆ: ಪ್ರಧಾನಮಂತ್ರಿ

ಭಾರತವು ಬುದ್ಧನ ಭೂಮಿಯೇ ಹೊರತು ಯುದ್ಧಭೂಮಿಯೊಲ್ಲ, ಶಕ್ತಿಯ ಮೂಲಕ ಶಾಶ್ವತ ಶಾಂತಿಯು ನೆಲೆಸುತ್ತದೆ ಎಂದು ನಂಬಿರುವ ನಾವು ಸಮೃದ್ಧಿ ಮತ್ತು ಸಾಮರಸ್ಯಕ್ಕಾಗಿ ಶ್ರಮಿಸುತ್ತೇವೆ: ಪ್ರಧಾನಮಂತ್ರಿ

ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ: ಪ್ರಧಾನಮಂತ್ರಿ

Posted On: 29 JUL 2025 10:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ದಿಟ್ಟ, ಯಶಸ್ವಿ ಮತ್ತು ನಿರ್ಣಾಯಕ ಕಾರ್ಯಾಚರಣೆ 'ಆಪರೇಷನ್ ಸಿಂದೂರ' ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಧಿವೇಶನದ ಆರಂಭದಲ್ಲಿ ಮಾಧ್ಯಮಗಳ ಜೊತೆಗಿನ ತಮ್ಮ ಸಂವಾದವನ್ನು ಸ್ಮರಿಸಿದರು, ಅಧಿವೇಶನವನ್ನು ಭಾರತದ ವಿಜಯಗಳ ಆಚರಣೆ ಮತ್ತು ಭಾರತದ ವೈಭವಕ್ಕೆ ಗೌರವ ಎಂದು ಪರಿಗಣಿಸುವಂತೆ ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾಗಿ ಹೇಳಿದರು.

ಭಯೋತ್ಪಾದನೆಯ ಪ್ರಧಾನ ಕೇಂದ್ರಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವುದನ್ನು 'ವಿಜಯ್ ಉತ್ಸವ್' ಸೂಚಿಸುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ʻವಿಜಯ್‌ ಉತ್ಸವʼವು ʻಆಪರೇಷನ್‌ ಸಿಂದೂರʼದ ವೇಳೆ ಕೈಗೊಂಡ ಕಠಿಣ ಸಂಕಲ್ಪದ ನೆರವೇರಿಕೆಯ ಸಂಕೇತವಾಗಿದೆ - ಇದು ರಾಷ್ಟ್ರ ಭಕ್ತಿ ಮತ್ತು ತ್ಯಾಗಕ್ಕೆ ಸಲ್ಲುವ ಗೌರವ ಎಂದು ಹೇಳಿದರು. "ವಿಜಯ್ ಉತ್ಸವ್ ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ" ಎಂದು ಒತ್ತಿ ಹೇಳಿದ ಅವರು, ವಿಜಯ್‌ ಉತ್ಸವವು 140 ಕೋಟಿ ಭಾರತೀಯರ ಏಕತೆ, ಇಚ್ಛಾಶಕ್ತಿ ಮತ್ತು ಸಾಮೂಹಿಕ ವಿಜಯವನ್ನು ಆಚರಿಸುತ್ತದೆ ಎಂದು ಹೇಳಿದರು.

ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ತಾವು ವಿಜಯದ ಸ್ಫೂರ್ತಿಯೊಂದಿಗೆ ಸದನದಲ್ಲಿ ನಿಂತಿರುವುದಾಗಿ ಪುನರುಚ್ಚರಿಸಿದ ಪ್ರಧಾನಮಂತ್ರಿ, ಭಾರತದ ದೃಷ್ಟಿಕೋನವನ್ನು ನೋಡಲು ವಿಫಲರಾದವರಿಗೆ, ಕನ್ನಡಿ ಹಿಡಿಯಲು ತಾವು ನಿಂತಿರುವುದಾಗಿ ಹೇಳಿದರು. 140 ಕೋಟಿ ನಾಗರಿಕರ ಭಾವನೆಗಳೊಂದಿಗೆ ತಮ್ಮ ಧ್ವನಿಯನ್ನು ಸೇರಲು ಬಂದಿರುವುದಾಗಿ ಪ್ರಧಾನಮಂತ್ರಿ ಹೇಳಿದರು. ಈ ಸಾಮೂಹಿಕ ಭಾವನೆಗಳ ಅನುರಣನವು ಸದನದಲ್ಲಿ ಕೇಳಿಬರುತ್ತಿದೆ ಮತ್ತು ಅದ್ಭುತ ಉತ್ಸಾಹಕ್ಕೆ ತಮ್ಮ ಧ್ವನಿಯನ್ನು ಸೇರಿಸಲು ತಾವು ಎದ್ದು ನಿಂತಿದ್ದೇವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ʻಆಪರೇಷನ್ ಸಿಂದೂರʼ ಸಂದರ್ಭದಲ್ಲಿ ಭಾರತದ ಜನರು ನೀಡಿದ ಅಚಲ ಬೆಂಬಲ ಮತ್ತು ಆಶೀರ್ವಾದಕ್ಕಾಗಿ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ, ಇದಕ್ಕಾಗಿ ತಾವು ರಾಷ್ಟ್ರಕ್ಕೆ ಋಣಿಯಾಗಿರುವುದಾಗಿ ಹೇಳಿದರು. ಅವರು ನಾಗರಿಕರ ಸಾಮೂಹಿಕ ಸಂಕಲ್ಪವನ್ನು ಒಪ್ಪಿಕೊಂಡರು ಮತ್ತು ಕಾರ್ಯಾಚರಣೆಯ ಯಶಸ್ಸಿನಲ್ಲಿ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ಪ್ರಧಾನಮಂತ್ರಿ ಖಂಡಿಸಿದರು, ಅಲ್ಲಿ ಭಯೋತ್ಪಾದಕರು ಮುಗ್ಧ ಜನರನ್ನು ಅವರ ಧರ್ಮವನ್ನು ಖಚಿತಪಡಿಸಿಕೊಂಡು ನಂತರ ಕ್ರೂರವಾಗಿ ಗುಂಡಿಕ್ಕಿ ಕೊಂದರು - ಇದನ್ನು ಕ್ರೌರ್ಯದ ಉತ್ತುಂಗ ಎಂದು ಬಣ್ಣಿಸಿದರು. ಇದು ಭಾರತವನ್ನು ಹಿಂಸಾಚಾರದ ಜ್ವಾಲೆಗೆ ದೂಡುವ ಮತ್ತು ಕೋಮು ಅಶಾಂತಿಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದರು. ಈ ಪಿತೂರಿಯನ್ನು ಏಕತೆ ಮತ್ತು ದಿಟ್ಟತನದಿಂದ ಸೋಲಿಸಿದ್ದಕ್ಕಾಗಿ ಅವರು ಭಾರತದ ಜನರಿಗೆ ಧನ್ಯವಾದ ಅರ್ಪಿಸಿದರು.

ಏಪ್ರಿಲ್ 22ರ ನಂತರ ಭಾರತದ ನಿಲುವನ್ನು ಜಗತ್ತಿಗೆ ಸ್ಪಷ್ಟಪಡಿಸಲು ತಾವು ಇಂಗ್ಲಿಷ್ ನಲ್ಲಿಯೂ ಸಾರ್ವಜನಿಕ ಹೇಳಿಕೆ ನೀಡಿದ್ದನ್ನು ಶ್ರೀ ಮೋದಿ ಸ್ಮರಿಸಿದರು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಭಾರತದ ದೃಢ ಸಂಕಲ್ಪವಾಗಿದೆ ಎಂದು ಘೋಷಿಸಿದ ಅವರು, ಭಯೋತ್ಪಾದನೆ ಕೃತ್ಯಗಳ ಮಾಸ್ಟರ್ ಮೈಂಡ್‌ಗಳು ಸಹ ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಒತ್ತಿ ಹೇಳಿದರು. ಏಪ್ರಿಲ್ 22ರಂದು ತಾವು ವಿದೇಶ ಪ್ರವಾಸದಲ್ಲಿದ್ದ ವಿಷಯ ಪ್ರಸ್ತಾಪಿಸಿದ ಅವರು, ಉನ್ನತ ಮಟ್ಟದ ಸಭೆಯನ್ನು ಕರೆಯಲು ತಕ್ಷಣ ಭಾರತಕ್ಕೆ ಮರಳಿದ ಸಂಗತಿಯನ್ನು ಸ್ಮರಿಸಿದರು. ಭಯೋತ್ಪಾದನೆಗೆ ನಿರ್ಣಾಯಕ ಪ್ರತಿಕ್ರಿಯೆ ನೀಡಲು ಅಂದಿನ ಸಭೆಯಲ್ಲಿ ಸ್ಪಷ್ಟ ಸೂಚನೆಗಳನ್ನು ನೀಡಲಾಯಿತು ಎಂದು ಅವರು ಹೇಳಿದರು. ಇದು ರಾಷ್ಟ್ರೀಯ ಬದ್ಧತೆಯಾಗಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು.

ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶಕ್ತಿ ಮತ್ತು ಧೈರ್ಯದ ಬಗ್ಗೆ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು, ಪ್ರತಿಕ್ರಿಯೆ ನೀಡುವ ಸಮಯ, ಸ್ಥಳ ಮತ್ತು ಪ್ರತಿಕ್ರಿಯೆಯ ವಿಧಾನವನ್ನು ನಿರ್ಧರಿಸಲು ಸೇನೆಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ಉನ್ನತ ಮಟ್ಟದ ಸಭೆಯಲ್ಲಿ ನಿರ್ದೇಶನಗಳನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು ಮತ್ತು ಕೆಲವು ಅಂಶಗಳು ಮಾಧ್ಯಮಗಳಲ್ಲೂ ವರದಿಯಾಗಿರಬಹುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಯೋತ್ಪಾದಕರಿಗೆ ನೀಡಲಾದ ಶಿಕ್ಷೆಯು ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಅವರ ಮಾಸ್ಟರ್ ಮೈಂಡ್‌ಗಳು ಸಹ ಅದರ ಬಗ್ಗೆ ನಿದ್ರೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಭಾರತದ ಪ್ರತಿಕ್ರಿಯೆ ಮತ್ತು ದೇಶದ ಸಶಸ್ತ್ರ ಪಡೆಗಳ ಯಶಸ್ಸನ್ನು ಸದನದ ಮೂಲಕ ರಾಷ್ಟ್ರದ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನ ಸೇನೆಯು ಭಾರತದಿಂದ ದಿಟ್ಟ ಪ್ರತಿಕ್ರಿಯೆಯನ್ನು ನಿರೀಕ್ಷಿಸಿತ್ತು. ಹೀಗಾಗಿ  ಪರಮಾಣು ಬೆದರಿಕೆಗಳನ್ನು ಒಡ್ಡಲು ಪಾಕ್‌ ಮುಂದಾಯಿತು ಎಂದು ಅವರು ಹೇಳಿದರು. ಮೊದಲ ಆಯಾಮವನ್ನು ವಿವರಿಸಿದ ಅವರು, ನಿಗದಿಯಂತೆ, ಭಾರತವು 2025ರ ಮೇ 6 ಮತ್ತು 7ರ ಮಧ್ಯರಾತ್ರಿ ತನ್ನ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿತು. ಹೀಗಾಗಿ ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸಲು ಸಹ ಸಾಧ್ಯವಾಗಲಿಲ್ಲ, ಭಾರತೀಯ ಸಶಸ್ತ್ರ ಪಡೆಗಳು ಕೇವಲ 22 ನಿಮಿಷಗಳಲ್ಲಿ ತಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸುವ ಮೂಲಕ ಏಪ್ರಿಲ್ 22ರ ದಾಳಿಗೆ ಪ್ರತೀಕಾರ ತೀರಿಸಿಕೊಂಡವು ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತದ ವ್ಯೂಹಾತ್ಮಕ ಪ್ರತಿಕ್ರಿಯೆಯ ಎರಡನೇ ಆಯಾಮವನ್ನು ಸದನದ ಮುಂದೆ ಮತ್ತಷ್ಟು ವಿವರಿಸಿದ ಶ್ರೀ ಮೋದಿ, ಭಾರತವು ಹಿಂದೆ ಪಾಕಿಸ್ತಾನದೊಂದಿಗೆ ಅನೇಕ ಯುದ್ಧಗಳನ್ನು ನಡೆಸಿದ್ದರೂ, ಈ ಹಿಂದೆ ಸ್ಪರ್ಶಿಸದ ಸ್ಥಳಗಳನ್ನು ತಲುಪುವ ಕಾರ್ಯತಂತ್ರವನ್ನು ಕಾರ್ಯಗತಗೊಳಿಸಿದ್ದು ಇದೇ ಮೊದಲು ಎಂದು ಹೇಳಿದರು. ಭಾರತವು ತಲುಪಬಹುದೆಂದು ಯಾರೂ ಊಹಿಸದ ಪ್ರದೇಶಗಳು ಸೇರಿದಂತೆ ಪಾಕಿಸ್ತಾನದಾದ್ಯಂತ ಉಗ್ರರ ಅಡಗುತಾಣಗಳನ್ನು ಇನ್ನಿಲ್ಲದಂತೆ ಗುರಿಯಾಗಿಸಲಾಗಿಯಿತು ಎಂದು ಅವರು ಒತ್ತಿ ಹೇಳಿದರು. ನಿರ್ದಿಷ್ಟವಾಗಿ ಬಹವಾಲ್ಪುರ ಮತ್ತು ಮುರಿಡ್ಕೆ ಸ್ಥಳಗಳನ್ನು ಉಲ್ಲೇಖಿಸಿದ ಅವರು, ಈ ನೆಲೆಗಳನ್ನು ಧ್ವಂಸಮಾಡಲಾಗಿದೆ ಎಂದು ಹೇಳಿದರು, ಭಾರತದ ಸಶಸ್ತ್ರ ಪಡೆಗಳು ಭಯೋತ್ಪಾದಕ ನೆಲೆಗಳನ್ನು ಯಶಸ್ವಿಯಾಗಿ ನಾಶಪಡಿಸಿವೆ ಎಂದು ದೃಢಪಡಿಸಿದರು.

ಪಾಕಿಸ್ತಾನದ ಪರಮಾಣು ಬೆದರಿಕೆಗಳು ಟೊಳ್ಳು ಎಂದು ಸಾಬೀತಾಗಿದೆ ಎಂಬ ಮೂರನೇ ಆಯಾಮವನ್ನು ಶ್ರೀ ಮೋದಿ ಒತ್ತಿ ಹೇಳಿದರು. ಜೊತೆಗೆ,  ಅಣ್ವಸ್ತ್ರ ದಾಳಿಯ ಬ್ಲ್ಯಾಕ್‌ಮೇಲ್‌  ಅನ್ನು ಸಹಿಸುವುದಿಲ್ಲ ಮತ್ತು ಎಂದಿಗೂ ಇಂತಹ ಗೊಡ್ಡು ಬೆದರಿಕೆಗಳಿಗೆ ತಲೆಬಾಗುವುದಿಲ್ಲ ಎಂದು ಭಾರತ ತೋರಿಸಿದೆ ಎಂದು ಹೇಳಿದರು.

ʻಆಪರೇಷನ್ ಸಿಂದೂರʼ ಅಡಿಯಲ್ಲಿ ಭಾರತದ ಕಾರ್ಯತಂತ್ರದ ಪ್ರತಿಕ್ರಿಯೆಯ ನಾಲ್ಕನೇ ಆಯಾಮವನ್ನು ವಿವರಿಸಿದ ಪ್ರಧಾನಮಂತ್ರಿ, ಪಾಕಿಸ್ತಾನದ ಭೂಪ್ರದೇಶದೊಳಗೆ ನಿಖರವಾದ ದಾಳಿಗಳನ್ನು ನಡೆಸುವ ಮೂಲಕ ಭಾರತವು ತನ್ನ ಅತ್ಯಾಧುನಿಕ ತಾಂತ್ರಿಕ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ಇದರ ಪರಿಣಾಮವಾಗಿ ಪಾಕಿಸ್ತಾನದ ವಾಯುನೆಲೆಯ ಸ್ವತ್ತುಗಳಿಗೆ ಗಮನಾರ್ಹ ಹಾನಿಯಾಗಿದೆ - ಅವುಗಳಲ್ಲಿ ಅನೇಕವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು. ನಾವು ಈಗ ತಂತ್ರಜ್ಞಾನ ಚಾಲಿತ ಯುದ್ಧದ ಯುಗದಲ್ಲಿದ್ದೇವೆ ಮತ್ತು ʻಆಪರೇಷನ್ ಸಿಂದೂರʼ ಕ್ಷೇತ್ರದಲ್ಲಿ ಭಾರತದ ಪಾಂಡಿತ್ಯವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಭಾರತವು ಕಳೆದ ಹತ್ತು ವರ್ಷಗಳ ಸೇನಾ ಸನ್ನದ್ಧತೆಯನ್ನು ಕೈಗೊಳ್ಳದಿದ್ದರೆ, ಈ ತಾಂತ್ರಿಕ ಯುಗದಲ್ಲಿ ದೇಶವು ಅಪಾರ ನಷ್ಟವನ್ನು ಎದುರಿಸಬೇಕಾಗಿತ್ತು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕಾರ್ಯಾಚರಣೆಯ ಐದನೇ ಆಯಾಮವನ್ನು ಪ್ರಸ್ತುತಪಡಿಸಿದ ಅವರು, ʻಆಪರೇಷನ್ ಸಿಂದೂರʼ ಸಮಯದಲ್ಲಿ ಮೊದಲ ಬಾರಿಗೆ ಜಗತ್ತು ʻಆತ್ಮನಿರ್ಭರ ಭಾರತʼದ ಶಕ್ತಿಯನ್ನು ನೋಡಿದೆ ಎಂದು ಹೇಳಿದರು. ʻಮೇಡ್ ಇನ್ ಇಂಡಿಯಾʼ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಎಷ್ಟು ಪರಿಣಾಮಕಾರಿಯಾಗಿದ್ದವು ಎಂದು ಅವರು ಎತ್ತಿ ತೋರಿದರು, ಇದು ಪಾಕಿಸ್ತಾನದ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿನ ದುರ್ಬಲತೆಯನ್ನು ಬಹಿರಂಗಪಡಿಸಿತು ಎಂದರು.

ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಸಾಧನೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ತ್ರಿವಳಿ ಪಡೆಗಳ ಮುಖ್ಯಸ್ಥರ (ಸಿಡಿಎಸ್) ಘೋಷಣೆಯನ್ನು ಉಲ್ಲೇಖಿಸಿ, ʻಆಪರೇಷನ್ ಸಿಂದೂರʼವು ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯ ಜಂಟಿ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ ಮತ್ತು ಪಡೆಗಳ ನಡುವಿನ ಒಗ್ಗಟ್ಟು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಆಘಾತಕ್ಕೆ ಒಳಪಡಿಸಿದೆ ಎಂದು ಹೇಳಿದರು.

ಭಾರತದಲ್ಲಿ ಹಿಂದೆಯೂ ಭಯೋತ್ಪಾದಕ ಕೃತ್ಯಗಳು ನಡೆದಿದ್ದವು. ಆದರೆ, ಆ ಕೃತ್ಯಗಳ ಮಾಸ್ಟರ್ ಮೈಂಡ್‌ಗಳು ಹಿಂದೆ ಯಾವುದೇ ತೊಂದರೆಗೆ ಒಳಗಾಗಿರಲಿಲ್ಲ. ಅಲ್ಲದೆ, ಭವಿಷ್ಯದ ಮತ್ತಷ್ಟು ದಾಳಿಗಳನ್ನು ನಿರ್ಭೀತಿಯಿಂದ ಯೋಜಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಇಂದು, ಪ್ರತಿ ದಾಳಿಯ ನಂತರ, ಮಾಸ್ಟರ್ ಮೈಂಡ್‌ಗಳು ನಿದ್ರೆಯನ್ನು ಕಳೆದುಕೊಳ್ಳುತ್ತಾರೆ - ಭಾರತವು ಪ್ರತಿದಾಳಿ ನಡೆಸುತ್ತದೆ ಮತ್ತು ಬೆದರಿಕೆಗಳನ್ನು ನಿಖರವಾಗಿ ಹೊಸಕಿಹಾಕುತ್ತದೆ ಎಂದು ಅವರಿಗೆ ತಿಳಿದಿದೆ. ಭಾರತವು "ಹೊಸ ಸಾಮಾನ್ಯ"ವನ್ನು ಸ್ಥಾಪಿಸಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ʻಸಿಂದೂರ್‌ʼನಿಂದ ಸಿಂಧುವರೆಗೆ ಪಾಕಿಸ್ತಾನದಾದ್ಯಂತ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿದ ಶ್ರೀ ಮೋದಿ, ಜಾಗತಿಕ ಸಮುದಾಯವು ಈಗ ಭಾರತದ ರಣತಂತ್ರದ ಕಾರ್ಯಾಚರಣೆಗಳ ವ್ಯಾಪಕ ಪ್ರಮಾಣ ಮತ್ತು ವ್ಯಾಪ್ತಿಯನ್ನು ಕಂಡಿದೆ ಎಂದು ಒತ್ತಿಹೇಳಿದರು. ʻಆಪರೇಷನ್ ಸಿಂದೂರʼ ಹೊಸ ಸಿದ್ಧಾಂತವನ್ನು ಸ್ಥಾಪಿಸಿದೆ: ಭಾರತದ ಮೇಲಿನ ಯಾವುದೇ ಭಯೋತ್ಪಾದಕ ದಾಳಿಗಾಗಿ ಅದರ ಸಂಚುಕೋರರು ಮತ್ತು ಪಾಕಿಸ್ತಾನ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ʻಆಪರೇಷನ್ ಸಿಂದೂರʼದಿಂದ ಉದ್ಭವಿಸಿದ ಮೂರು ಸ್ಪಷ್ಟ ತತ್ವಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಮೊದಲನೆಯದಾಗಿ, ಭಾರತವು ಭಯೋತ್ಪಾದಕ ದಾಳಿಗಳಿಗೆ ತನ್ನದೇ ಆದ ರೀತಿಯಲ್ಲಿ, ತನ್ನದೇ ಆದ ಮಟ್ಟದಲ್ಲಿ ಮತ್ತು ತನ್ನ ಆಯ್ಕೆಯ ಸಮಯದಲ್ಲಿ ಪ್ರತಿಕ್ರಿಯಿಸುತ್ತದೆ. ಎರಡನೆಯದಾಗಿ, ಯಾವುದೇ ರೀತಿಯ ಪರಮಾಣು ಬ್ಲ್ಯಾಕ್‌ಮೇಲ್‌ ಅನ್ನು ಇನ್ನು ಮುಂದೆ ಸಹಿಸುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆಯ ಪ್ರಾಯೋಜಕರು ಮತ್ತು ಅಂತಹ ದಾಳಿಗಳ ಹಿಂದಿನ ಸಂಚುಕೋರರ ನಡುವೆ ಭಾರತವು ಯಾವ ವ್ಯತ್ಯಾಸವನ್ನೂ ತೋರಿಸುವುದಿಲ್ಲ ಎಂದ ಶ್ರೀ ಮೋದಿ ಹೇಳಿದರು.

ʻಆಪರೇಷನ್ ಸಿಂದೂʼರ ಸಂದರ್ಭದಲ್ಲಿ ಭಾರತದ ಕ್ರಮಗಳಿಗೆ ಜಾಗತಿಕ ಬೆಂಬಲದ ಬಗ್ಗೆ ಪ್ರಧಾನಮಂತ್ರಿಯವರು ಸದನಕ್ಕೆ ಸ್ಪಷ್ಟತೆ ನೀಡಿದರು. ಭಾರತವು ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ವಿಶ್ವದ ಯಾವುದೇ ದೇಶವು ಆಕ್ಷೇಪಿಸುವುದಿಲ್ಲ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ ಕೇವಲ ಮೂರು ರಾಷ್ಟ್ರಗಳು ಮಾತ್ರ ಕಾರ್ಯಾಚರಣೆ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿ ಹೇಳಿಕೆ ನೀಡಿದವು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ʻಕ್ವಾಡ್ʼ ಮತ್ತು ʻಬ್ರಿಕ್ಸ್‌ʼನಂತಹ ಕಾರ್ಯತಂತ್ರದ ಮೈತ್ರಿಕೂಟಗಳು ಹಾಗೂ ಫ್ರಾನ್ಸ್, ರಷ್ಯಾ ಮತ್ತು ಜರ್ಮನಿಯಂತಹ ರಾಷ್ಟ್ರಗಳು ಸೇರಿದಂತೆ ವಿಶ್ವದಾದ್ಯಂತ ವಿವಿಧ ದೇಶಗಳಿಂದ ಭಾರತಕ್ಕೆ ವ್ಯಾಪಕ ಬೆಂಬಲ ಸಿಕ್ಕಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸಮುದಾಯವು ಭಾರತಕ್ಕೆ ಬಲವಾದ ಬೆಂಬಲವಾಗಿ ನಿಂತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಭಾರತವು ಜಾಗತಿಕ ಸಮುದಾಯದಿಂದ ಬೆಂಬಲ ಪಡೆದಿದ್ದರೂ, ರಾಷ್ಟ್ರದ ಸೈನಿಕರ ಶೌರ್ಯಕ್ಕೆ ಇಲ್ಲಿನ ಪ್ರತಿಪಕ್ಷಗಳಿಂದಲೇ ಬೆಂಬಲ ಸಿಗಲಿಲ್ಲ ಎಂದು ಪ್ರಧಾನಮಂತ್ರಿ ತೀವ್ರ ನಿರಾಶೆ ವ್ಯಕ್ತಪಡಿಸಿದರು. ಏಪ್ರಿಲ್ 22 ರ ಭಯೋತ್ಪಾದಕ ದಾಳಿಯ ಕೆಲವೇ ದಿನಗಳ ನಂತರ, ಕೆಲವು ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಅಣಕಿಸಲು ಪ್ರಾರಂಭಿಸಿದರು ಮತ್ತು ವೈಫಲ್ಯವನ್ನು ಆರೋಪಿಸಿದರು. ಈ ಅಪಹಾಸ್ಯ ಹಾಗೂ ಪಹಲ್ಗಾಮ್ ಹತ್ಯಾಕಾಂಡದ ನಂತರವೂ ರಾಜಕೀಯ ಅವಕಾಶವಾದದಲ್ಲಿ ಅವರು ತೊಡಗಿರುವುದು ರಾಷ್ಟ್ರೀಯ ಸಂತಾಪದ ಬಗ್ಗೆ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂತಹ ಹೇಳಿಕೆಗಳು ಕ್ಷುಲ್ಲಕ ಮಾತ್ರವಲ್ಲ, ಭಾರತದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಂದಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು. ಕೆಲವು ವಿರೋಧ ಪಕ್ಷದ ನಾಯಕರಿಗೆ ಭಾರತದ ಶಕ್ತಿ ಅಥವಾ ಸಶಸ್ತ್ರ ಪಡೆಗಳ ಸಾಮರ್ಥ್ಯದಲ್ಲಿ ವಿಶ್ವಾಸವಿಲ್ಲ. ಅವರು ʻಆಪರೇಷನ್ ಸಿಂದೂರʼ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಾಧ್ಯಮಗಳ ಶೀರ್ಷಿಕೆಗಳನ್ನು ಬೆನ್ನಟ್ಟುವುದರಿಂದ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಬಹುದು, ಆದರೆ ಅದರಿಂದ ಜನರ ನಂಬಿಕೆ ಅಥವಾ ಗೌರವವನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

2025ರ ಮೇ 10ರಂದು ಭಾರತವು ʻಆಪರೇಷನ್ ಸಿಂದೂರʼ ಅಡಿಯಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರಕಟಣೆಯು ವಿವಿಧ ಊಹಾಪೋಹಗಳಿಗೆ ಕಾರಣವಾಯಿತು ಎಂದು ಅವರು ಒಪ್ಪಿಕೊಂಡರು. ಇದನ್ನು ಗಡಿಯಾಚೆಯಿಂದ ಹುಟ್ಟಿಕೊಂಡ ಪ್ರಚಾರ ಎಂದು ಬಣ್ಣಿಸಿದರು. ಭಾರತದ ಸಶಸ್ತ್ರ ಪಡೆಗಳು ಪ್ರಸ್ತುತಪಡಿಸಿದ ಸಂಗತಿಗಳನ್ನು ಅವಲಂಬಿಸುವ ಬದಲು ಪಾಕಿಸ್ತಾನ ಮುಂದಿಟ್ಟ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಲು ನಿರ್ಧರಿಸಿದವರನ್ನು ಪ್ರಧಾನಮಂತ್ರಿ ಟೀಕಿಸಿದರು ಮತ್ತು ಭಾರತದ ನಿಲುವು ಸದಾ ಸ್ಪಷ್ಟ ಮತ್ತು ದೃಢವಾಗಿದೆ ಎಂದು ಪುನರುಚ್ಚರಿಸಿದರು.

ಹಲವು ವರ್ಷಗಳಿಂದ ಭಾರತದ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಮರಿಸಿದ ಶ್ರೀ ಮೋದಿ ಅವರು, ಇದು ಒಳಗೊಂಡಿರುವ ಕಾರ್ಯತಂತ್ರದ ಸ್ಪಷ್ಟತೆ ಮತ್ತು ಕಾರ್ಯಾನುಷ್ಠಾನವನ್ನು ಒತ್ತಿಹೇಳಿದರು. ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ, ಶತ್ರು ಭೂಪ್ರದೇಶದೊಳಗಿನ ಉಗ್ರ ತಾಣಗಳನ್ನು ನಾಶಪಡಿಸುವ ಸ್ಪಷ್ಟ ಗುರಿಯನ್ನು ಭಾರತ ಹೊಂದಿತ್ತು, ಇದನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ರಾತ್ರೋರಾತ್ರಿ ಸಾಧಿಸಲಾಯಿತು ಎಂದು ಹೇಳಿದರು. ಬಾಲಕೋಟ್ ವಾಯುದಾಳಿಯಲ್ಲಿ ಭಾರತವು ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತು ಎಂದು ಅವರು ಮಾಹಿತಿ ನೀಡಿದರು. ʻಆಪರೇಷನ್ ಸಿಂದೂರʼ ಅಡಿಯಲ್ಲಿ, ಭಾರತವು ಮತ್ತೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಿತು - ಭಯೋತ್ಪಾದನೆಯ ಕೇಂದ್ರಸ್ತಾನ ಮತ್ತು ಪಹಲ್ಗಾಮ್ ದಾಳಿಕೋರರ ಹಿಂದಿನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು, ಅವರ ಯೋಜನಾ ನೆಲೆಗಳು, ತರಬೇತಿ ಕೇಂದ್ರಗಳು, ಧನಸಹಾಯ ಮೂಲಗಳು, ಟ್ರ್ಯಾಕಿಂಗ್ ಮತ್ತು ತಾಂತ್ರಿಕ ಬೆಂಬಲ ಮತ್ತು ಶಸ್ತ್ರಾಸ್ತ್ರ ಪೂರೈಕೆ ಸರಪಳಿಗಳು – ಇವುಗಳನ್ನು ನಾಶಪಡಿಸುವುದು ಇದರ ಉದ್ದೇಶವಾಗಿತ್ತು. "ಭಾರತವು ಭಯೋತ್ಪಾದಕರ ನರಕೇಂದ್ರದ ಮೇಲೆ ನಿಖರವಾಗಿ ದಾಳಿ ಮಾಡಿತು ಮತ್ತು ಅವರ ಕಾರ್ಯಾಚರಣೆಗಳ ಕೇಂದ್ರವನ್ನು ಧ್ವಂಸ ಮಾಡಿತು," ಎಂದು ಪ್ರಧಾನಮಂತ್ರಿ ಹೇಳಿದರು.

"ಮತ್ತೊಮ್ಮೆ ಭಾರತೀಯ ಪಡೆಗಳು ತಮ್ಮ ಗುರಿಗಳಲ್ಲಿ ಶೇಕಡಾ 100ರಷ್ಟು ಸಾಧಿಸಿವೆ, ರಾಷ್ಟ್ರದ ಶಕ್ತಿಯನ್ನು ಪ್ರದರ್ಶಿಸಿವೆ," ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಮೈಲುಗಲ್ಲುಗಳನ್ನು ಉದ್ದೇಶಪೂರ್ವಕವಾಗಿ ಮರೆಯಲು ಮುಂದಾದವರನ್ನು ಟೀಕಿಸಿದರು. “ಕಾರ್ಯಾಚರಣೆಯು ಮೇ 6ರ ರಾತ್ರಿ ಮತ್ತು ಮೇ 7 ರ ಬೆಳಗ್ಗೆ ನಡುವೆ ನಡೆಯಿತು ಮತ್ತು ಮೇ 7ರಂದು ಸೂರ್ಯೋದಯದ ವೇಳೆಗೆ, ಭಾರತೀಯ ಸೇನೆಯು ಮಿಷನ್ ಪೂರ್ಣಗೊಂಡಿದೆ ಎಂದು ಪತ್ರಿಕಾಗೋಷ್ಠಿ ನಡೆಸಿತು ಎಂಬ ವಿಷಯವನ್ನು ರಾಷ್ಟ್ರವು ಚೆನ್ನಾಗಿ ನೆನಪಿಸಿಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು. ಭಯೋತ್ಪಾದಕ ಜಾಲಗಳು, ಅವುಗಳ ಮಾಸ್ಟರ್ ಮೈಂಡ್‌ಗಳು ಮತ್ತು ಅವರ ವ್ಯವಸ್ಥಾಪನಾ ಕೇಂದ್ರಗಳನ್ನು ನಿರ್ಮೂಲನೆ ಮಾಡುವುದು ಭಾರತದ ಉದ್ದೇಶ ಎಂಬುದು ಮೊದಲ ದಿನದಿಂದಲೇ ಸ್ಪಷ್ಟವಾಗಿತ್ತು. ಮತ್ತು ಯೋಜಿಸಿದಂತೆ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದ ಸಶಸ್ತ್ರ ಪಡೆಗಳು ತಮ್ಮ ಯಶಸ್ಸನ್ನು ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನದ ಸೇನೆಗೆ ತಿಳಿಸಿದವು. ತಮ್ಮ ಉದ್ದೇಶಗಳು ಮತ್ತು ಫಲಿತಾಂಶಗ  ಸ್ಪಷ್ಟತೆಯನ್ನು ಸಾರಿದವು ಎಂದರು.  ಬಹಿರಂಗವಾಗಿ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಪಾಕಿಸ್ತಾನದ ನಿರ್ಧಾರವು ವಿವೇಚನೆಯ ಕೊರತೆಯನ್ನು ಸೂಚಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಪಾಕಿಸ್ತಾನದವರು ಬುದ್ಧಿವಂತಿಕೆಯಿಂದ ವರ್ತಿಸಿದ್ದರೆ, ಅವರು ಅಂತಹ ನಾಚಿಕೆಗೇಡಿನ ತಪ್ಪನ್ನು ಮಾಡುತ್ತಿರಲಿಲ್ಲ. ಭಾರತವು ಸಂಪೂರ್ಣವಾಗಿ ಸಜ್ಜಾಗಿತ್ತು ಮತ್ತು ಸರಿಯಾದ ಕ್ಷಣಕ್ಕಾಗಿ ಕಾಯುತ್ತಿತ್ತು.  ಭಾರತದ ಗುರಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಆಗಿತ್ತೇ ವಿನಃ ರಾಷ್ಟ್ರದೊಂದಿಗೆ ಸಂಘರ್ಷದಲ್ಲಿ ತೊಡಗುವುದಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆದಾಗ್ಯೂ, ಭಯೋತ್ಪಾದಕರನ್ನು ಬೆಂಬಲಿಸುವ ಸಲುವಾಗಿ ಪಾಕಿಸ್ತಾನವು ಯುದ್ಧಭೂಮಿಗೆ ಪ್ರವೇಶಿಸಲು ನಿರ್ಧರಿಸಿದಾಗ, ಭಾರತವು ಪ್ರಬಲ ಪ್ರತಿದಾಳಿಯೊಂದಿಗೆ ಪ್ರತಿಕ್ರಿಯಿಸಿತು. ಮೇ 9ರ ಮಧ್ಯರಾತ್ರಿ ಮತ್ತು ಮೇ 10ರ ಬೆಳಿಗ್ಗೆ, ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದಾದ್ಯಂತ ಎಷ್ಟು ತೀವ್ರತೆಯಿಂದ ಅಪ್ಪಳಿಸಿದವು ಎಂದರೆ ಅದು ಅವರ ಕಲ್ಪನೆಯನ್ನು ಮೀರಿತ್ತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ʻಆಪರೇಷನ್ ಸಿಂದೂರʼ ಅಡಿಯಲ್ಲಿ ಭಾರತದ ನಿರ್ಣಾಯಕ ಕ್ರಮವು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತು ಎಂದು ಪ್ರಧಾನಮಂತ್ರಿ ಸದನದಲ್ಲಿ ಹೇಳಿದರು. ಪಾಕಿಸ್ತಾನಿ ನಾಗರಿಕರು ಹೇಗೆ ಆಘಾತ ವ್ಯಕ್ತಪಡಿಸಿದರು, ಅವರ ಪ್ರತಿಕ್ರಿಯೆಗಳು ಹೇಗಿದ್ದವು ದೂರದರ್ಶನದಲ್ಲಿ ವ್ಯಾಪಕವಾಗಿ ಗೋಚರಿಸುತ್ತಿದ್ದವು ಎಂದು ಅವರು ನೆನಪಿಸಿಕೊಂಡರು. ಈ ಪ್ರತಿಕ್ರಿಯೆಯಿಂದ ಪಾಕಿಸ್ತಾನವು ಎಷ್ಟು ದಿಕ್ಕೆಟ್ಟಿತೆಂದರೆ, ಆ ದೇಶದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ನೇರವಾಗಿ ಭಾರತಕ್ಕೆ ಕರೆ ಮಾಡಿ, ಆಕ್ರಮಣವನ್ನು ನಿಲ್ಲಿಸುವಂತೆ ಮನವಿ ಮಾಡಿದರು - ಹೆಚ್ಚಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡರು ಎಂದು ಶ್ರೀ ಮೋದಿ ಹೇಳಿದರು. ಮೇ 7ರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಭಾರತವು ತಾನು ತನ್ನ ಉದ್ದೇಶಗಳನ್ನು ಸಾಧಿಸಿರುವುದಾಗಿ ಮತ್ತು ಯಾವುದೇ ಹೆಚ್ಚಿನ ಪ್ರಚೋದನೆಗೆ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿತು ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. "ಭಾರತದ ನೀತಿಯು ಸ್ಪಷ್ಟ ಉದ್ದೇಶಗಳನ್ನು ಹೊಂದಿತ್ತು, ಬಹಳ ವಿವೇಚನೆಯಿಂದ ಕೂಡಿತ್ತು ಮತ್ತು ಅದರ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ರೂಪಿಸಲ್ಪಟ್ಟಿತ್ತು - ಭಯೋತ್ಪಾದನೆ, ಅದರ ಪ್ರಾಯೋಜಕರು ಮತ್ತು ಅವರ ನೆಲೆಗಳನ್ನು ನಿರ್ಮೂಲನೆ ಮಾಡುವತ್ತ ಮಾತ್ರ ಗಮನ ಕೇಂದ್ರೀಕರಿಸಿತ್ತು, ಭಾರತದ ಕ್ರಮವು ಪ್ರಚೋದನೆಯ ಸ್ವರೂಪವನ್ನು ಹೊಂದಿರಲಿಲ್ಲ," ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು.

ಭಾರತದ ಕಾರ್ಯಾಚರಣೆಗೆ ಯಾವುದೇ ಜಾಗತಿಕ ನಾಯಕರು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಪ್ರಧಾನಮಂತ್ರಿ ಪುನರುಚ್ಛರಿಸಿದರು. ಮೇ 9ರ ರಾತ್ರಿ, ತಾವು ಭಾರತೀಯ ರಕ್ಷಣಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿದ್ದಾಗ ತಮ್ಮನ್ನು ಸಂಪರ್ಕಿಸಲು ಅಮೆರಿಕದ ಉಪಾಧ್ಯಕ್ಷರು ಅನೇಕ ಬಾರಿ ಪ್ರಯತ್ನಿಸಿದರು ಎಂದು ಶ್ರೀ ಮೋದಿ ಬಹಿರಂಗಪಡಿಸಿದರು. ತಿರುಗಿ ಕರೆ ಮಾಡಿದಾಗ, ಪಾಕಿಸ್ತಾನವು ಪ್ರಮುಖ ಆಕ್ರಮಣವನ್ನು ಪ್ರಾರಂಭಿಸಬಹುದು ಎಂದು ಪ್ರಧಾನಮಂತ್ರಿಗೆ ಮಾಹಿತಿ ನೀಡಿದರು. "ಅದೇ ಪಾಕಿಸ್ತಾನದ ಉದ್ದೇಶವಾಗಿದ್ದರೆ, ಅದಕ್ಕೆ ಅವರು ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಪ್ರಧಾನಮಂತ್ರಿ ನಿಸ್ಸಂದಿಗ್ಧವಾಗಿ ಪ್ರತಿಕ್ರಿಯಿಸಿದ್ದರು. ಭಾರತವು ಹೆಚ್ಚಿನ ಬಲದಿಂದ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಅವರು ದೃಢವಾಗಿ ಹೇಳಿದರು, "ನಾವು ಗುಂಡುಗಳಿಗೆ ಫಿರಂಗಿಗಳೊಂದಿಗೆ ಪ್ರತಿಕ್ರಿಯಿಸುತ್ತೇವೆ" ಎಂದು ಹೇಳಿದ್ದರು. ಮೇ 9ರ ರಾತ್ರಿ ಮತ್ತು ಮೇ 10ರ ಬೆಳಗ್ಗೆ ಭಾರತವು ಶಕ್ತಿಯುತವಾಗಿ ಪ್ರತಿದಾಳಿ ನಡೆಸಿತು, ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯವನ್ನು ಭಾರಿ ಬಲದಿಂದ ನಾಶಪಡಿಸಿತು ಎಂದು ಪ್ರಧಾನಮಂತ್ರಿ ದೃಢಪಡಿಸಿದರು. ಭಾರತ ಪ್ರತಿ ಬಾರಿ ಪ್ರತಿಕ್ರಿಯಿಸಿದಾಗಲೂ ಅದು ಹಿಂದಿನದಕ್ಕಿಂತ ಬಲವಾಗಿರುತ್ತದೆ ಎಂದು ಪಾಕಿಸ್ತಾನವು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಎಂದು ಅವರು ಗಮನ ಸೆಳೆದರು. "ಪಾಕಿಸ್ತಾನ ಮತ್ತೆ ದುಸ್ಸಾಹಸಕ್ಕೆ ಕೈ ಹಾಕಿದರೆ, ಅದು ಸೂಕ್ತ ಮತ್ತು ಅಸಾಧಾರಣ ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ. ʻಆಪರೇಷನ್ ಸಿಂದೂರʼ ಸಕ್ರಿಯ ಮತ್ತು ದೃಢನಿಶ್ಚಯದಿಂದ ಕೂಡಿದೆ", ಎಂದು ಶ್ರೀ ಮೋದಿ ಘೋಷಿಸಿದರು.

"ಇಂದಿನ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ ಮತ್ತು ಸ್ವಾವಲಂಬನೆಯ ಮನೋಭಾವದಿಂದ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿ, ಆತ್ಮನಿರ್ಭರತೆಯತ್ತ ಭಾರತದ ಮುನ್ನಡೆಗೆ ರಾಷ್ಟ್ರವು ಸಾಕ್ಷಿಯಾಗಿದೆ. ಆದರೆ ಪ್ರತಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನವನ್ನು ಹೆಚ್ಚು ಅವಲಂಬಿಸುವ ದುರದೃಷ್ಟಕರ ಪ್ರವೃತ್ತಿಯನ್ನೂ ದೇಶವು ನೋಡುತ್ತಿದೆ ಎಂದು ಹೇಳಿದರು. ಪ್ರಸ್ತುತ ನಡೆಯುತ್ತಿರುವ 16 ಗಂಟೆಗಳ ಚರ್ಚೆಯ ಸಮಯದಲ್ಲಿ, ಪ್ರತಿಪಕ್ಷಗಳು ಪಾಕಿಸ್ತಾನದಿಂದ ಸಮಸ್ಯೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ - ಇದು ಅತ್ಯಂತ ವಿಷಾದದ ಸಂಗತಿ ಎಂದು ಪ್ರಧಾನಮಂತ್ರಿ ಹೇಳಿದರು.

ಯುದ್ಧದ ಸ್ವರೂಪ ಬದಲಾಗುತ್ತಿದ್ದು, ಮಾಹಿತಿ ಮತ್ತು ನಿರೂಪಣೆಗಳ ಸೃಷ್ಟಿಯು ಅದರಲ್ಲಿ ಈಗ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿಹೇಳಿದ ಪ್ರಧಾನಮಂತ್ರಿ, ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ದುರ್ಬಲಗೊಳಿಸಲು ಮತ್ತು ಸಾರ್ವಜನಿಕ ಅಪನಂಬಿಕೆಯನ್ನು ಬಿತ್ತಲು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ತಪ್ಪು ಮಾಹಿತಿ ಅಭಿಯಾನಗಳನ್ನು ಬಳಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಪ್ರಚಾರದ ವಕ್ತಾರರಾಗಿ ಮಾರ್ಪಟ್ಟಿವೆ, ಇದು ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಕಳವಳ ವ್ಯಕ್ತಪಡಿಸಿದರು.

ಭಾರತದ ಮಿಲಿಟರಿ ಸಾಧನೆಗಳನ್ನು ಪ್ರಶ್ನಿಸಲು ಮತ್ತು ಕುಗ್ಗಿಸಲು ಪದೇಪದೆ  ನಡೆಯುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿದ ಶ್ರೀ ಮೋದಿ, ಭಾರತದ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಂತರ, ವಿರೋಧ ಪಕ್ಷದ ನಾಯಕರು ಸಶಸ್ತ್ರ ಪಡೆಗಳಿಂದ ಪುರಾವೆಗಳನ್ನು ಕೋರಿದರು ಎಂದು ಹೇಳಿದರು. ಸಾರ್ವಜನಿಕ ಭಾವನೆಯು ಸೇನೆಯ ಪರವಾಗಿ ಬದಲಾದಂತೆ, ವಿರೋಧ ಪಕ್ಷದ ನಾಯಕರು ತಮ್ಮ ನಿಲುವನ್ನು ಬದಲಾಯಿಸಿದರು.  ಮೂರರಿಂದ ಹದಿನೈದು ಸಂಖ್ಯೆಗಳನ್ನು ಉಲ್ಲೇಖಿಸಿ ತಾವೂ ಸಹ ಅಂತಹ ಹಲವಾರು ದಾಳಿಗಳನ್ನು ನಡೆಸಿರುವುದಾಗಿ ವಿರೋಧ ಪಕ್ಷದ ನಾಯಕರು ಹೇಳಿಕೊಂಡದ್ದಾಗಿ ಎಂದು ಮೋದಿ ತಿಳಿಸಿದರು.

ಆದರೆ, ಬಾಲಕೋಟ್ ವಾಯುದಾಳಿಯ ನಂತರ ಪ್ರತಿಪಕ್ಷಗಳು ಸೇನಾ ಕಾರ್ಯಾಚರಣೆಯನ್ನು ಸಾರಾಸಗಟಾಗಿ ಪ್ರಶ್ನಿಸಲು ಸಾಧ್ಯವಾಗಲಿಲ್ಲ, ಬದಲಿಗೆ ಛಾಯಾಚಿತ್ರ ಪುರಾವೆಗಳನ್ನು ಕೇಳಲು ಪ್ರಾರಂಭಿಸಿದವು ಎಂದು ಪ್ರಧಾನಮಂತ್ರಿ ಹೇಳಿದರು. ದಾಳಿ ಎಲ್ಲಿ ನಡೆಯಿತು, ಏನು ನಾಶವಾಯಿತು, ಎಷ್ಟು ಜನರು ಕೊಲ್ಲಲ್ಪಟ್ಟರು ಎಂದು ಅವರು ಪದೇ ಪದೆ ಕೇಳುತ್ತಿದ್ದರು – ಈ ಪ್ರಶ್ನೆಗಳು ಖುದ್ದು ಪಾಕಿಸ್ತಾನದ ವಾಕ್ಚಾತುರ್ಯವನ್ನು ಪ್ರತಿಧ್ವನಿಸುತ್ತವೆ ಎಂದು ಪ್ರಧಾನಮಂತ್ರಿ ಗಮನಸೆಳೆದರು.

ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆಹಿಡಿದಾಗ, ಆ ದೇಶದಲ್ಲಿ ಸಂಭ್ರಮಾಚರಣೆಯನ್ನು ನಿರೀಕ್ಷಿಸಲಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಆದಾಗ್ಯೂ, ಭಾರತದೊಳಗಿನ ಕೆಲವು ವ್ಯಕ್ತಿಗಳು ಅನುಮಾನಗಳನ್ನು ಪಿಸುಗುಟ್ಟಲು ಪ್ರಾರಂಭಿಸಿದರು. ಪ್ರಧಾನಮಂತ್ರಿ ತೊಂದರೆಯಲ್ಲಿದ್ದಾರೆ ಎಂದು ಬಣ್ಣಿಸಿದರು ಮತ್ತು ಅಭಿನಂದನ್ ಅವರನ್ನು ಮರಳಿ ಕರೆತರಲು ಸಾಧ್ಯವೇ ಎಂದು ಪ್ರಶ್ನಿಸಿದರು. "ದಿಟ್ಟ ಸಂಕಲ್ಪ"ದಿಂದಾಗಿ ಅಭಿನಂದನ್ ಭಾರತಕ್ಕೆ ಮರಳಲು ಸಾಧ್ಯವಾಯಿತು. ಅವರು ವಾಪಸಾದ ಬಳಿಕ ಟೀಕಾಕಾರರ ದನಿ ಅಡಗಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪಹಲ್ಗಾಮ್ ದಾಳಿಯ ನಂತರ, ಬಿಎಸ್ಎಫ್ ಸೈನಿಕನನ್ನು ಪಾಕಿಸ್ತಾನವು ಸೆರೆಹಿಡಿದಾಗ, ಸರ್ಕಾರವನ್ನು ಮೂಲೆಗುಂಪು ಮಾಡಲು ದೊಡ್ಡ ಅವಕಾಶವನ್ನು ದೊರೆಯಿತೆಂದು ಕೆಲವು ಗುಂಪುಗಳು ನಂಬಿದ್ದವು ಎಂದು ಶ್ರೀ ಮೋದಿ ಹೇಳಿದರು. ಅವರ ವಲಯದವರು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ನಿರೂಪಣೆಗಳನ್ನು ಹರಡಿದ್ದನ್ನು ಪ್ರಧಾನಮಂತ್ರಿ ಎತ್ತಿ ತೋರಿದರು- ಸೈನಿಕನ ಭವಿಷ್ಯ, ಅವನ ಕುಟುಂಬದ ಸ್ಥಿತಿ ಮತ್ತು ಅವನು ಹಿಂದಿರುಗುವ ಸಾಧ್ಯತೆಯ ಬಗ್ಗೆ ಊಹಾಪೋಹದ ಪ್ರಶ್ನೆಗಳನ್ನು ಹುಟ್ಟುಹಾಕಲಾಯಿತು. ಈ ಪ್ರಯತ್ನಗಳ ಹೊರತಾಗಿಯೂ, ಭಾರತವು ಸ್ಪಷ್ಟತೆ ಮತ್ತು ಘನತೆಯಿಂದ ಪ್ರತಿಕ್ರಿಯಿಸಿತು. ತಪ್ಪು ಮಾಹಿತಿಯನ್ನು ತೊಡೆದುಹಾಕಿತು ಮತ್ತು ಪ್ರತಿಯೊಬ್ಬ ಸೈನಿಕನನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪಹಲ್ಗಾಮ್ ಘಟನೆಯ ನಂತರ ಸೆರೆಹಿಡಿಯಲ್ಪಟ್ಟ ಬಿಎಸ್ಎಫ್ ಸೈನಿಕ ಕೂಡ ಗೌರವ ಮತ್ತು ಘನತೆಯಿಂದ ಮರಳಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಭಯೋತ್ಪಾದಕರು ದುಃಖಿತರಾಗಿದ್ದಾರೆ. ಅವರ ಹ್ಯಾಂಡ್ಲರ್‌ಗಳು ದುಃಖಿಸುತ್ತಿದ್ದಾರೆ ಮತ್ತು ಅವರನ್ನು ನೋಡಿ ಭಾರತದೊಳಗಿನ ಕೆಲವು ವ್ಯಕ್ತಿಗಳು ಸಹ ದುಃಖಿತರಾಗಿದ್ದಾರೆ ಎಂದು ಹೇಳಿದರು. ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ, ರಾಜಕೀಯ ಆಟಗಳನ್ನು ಆಡುವ ಪ್ರಯತ್ನಗಳು ನಡೆದವು, ಆದರೆ ಅದು ಜನರ ಗಮನ ಸೆಳೆಯಲು ವಿಫಲವಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ವಾಯುದಾಳಿಯ ಸಮಯದಲ್ಲಿ, ಇದೇ ರೀತಿಯ ಪ್ರಯತ್ನಗಳು ನಡೆದವು, ಆದರೆ ಅವು ಸಹ ವಿಫಲವಾದವು. ʻಆಪರೇಷನ್ ಸಿಂದೂರʼ ನಡೆದಾಗ ಟೀಕಾಕಾರರು ಮತ್ತೆ ತಮ್ಮ ನಿಲುವನ್ನು ಬದಲಾಯಿಸಿದರು. ಮೊದಲು ಕಾರ್ಯಾಚರಣೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಅವರು, ನಂತರ ಕಾರ್ಯಾಚರಣೆ ನಿಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದರು. ವಿರೋಧಿಸುವವರು ಸದಾ ಆಕ್ಷೇಪಿಸಲು ಒಂದಲ್ಲಾ ಓಂದು ಕಾರಣವನ್ನು ಹುಡುಕುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಶಸ್ತ್ರ ಪಡೆಗಳ ಬಗ್ಗೆ ಪ್ರತಿಪಕ್ಷಗಳು ದೀರ್ಘಕಾಲದಿಂದ ನಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸುತ್ತಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇತ್ತೀಚೆಗೆ ಕಾರ್ಗಿಲ್ ವಿಜಯ ದಿವಸದ ಸ್ಮರಣೆಯ ಸಂದರ್ಭದಲ್ಲಿಯೂ ಪ್ರತಿಪಕ್ಷಗಳು ವಿಜಯವನ್ನು ಆಚರಿಸಲಿಲ್ಲ ಅಥವಾ ಅದರ ಮಹತ್ವವನ್ನು ಅಂಗೀಕರಿಸಲಿಲ್ಲ ಎಂದು ಗಮನಸೆಳೆದರು. ಡೋಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ, ಭಾರತೀಯ ಪಡೆಗಳು ಧೈರ್ಯವನ್ನು ಪ್ರದರ್ಶಿಸಿದರೆ, ವಿರೋಧ ಪಕ್ಷದ ನಾಯಕರು ರಹಸ್ಯವಾಗಿ ಪ್ರಶ್ನಾರ್ಹ ಮೂಲಗಳಿಂದ ಸಂಕ್ಷಿಪ್ತ ಮಾಹಿತಿಯನ್ನು ಪಡೆಯುತ್ತಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್ ನೀಡುತ್ತಿರುವುದಕ್ಕೆ ಪ್ರಧಾನಮಂತ್ರಿ ಅಚ್ಚರಿ ವ್ಯಕ್ತಪಡಿಸಿದರು. ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಎಂಬುದಕ್ಕೆ ಪುರಾವೆ ಒದಗಿಸುವಂತೆ ಪ್ರತಿಪಕ್ಷಗಳು ಎತ್ತಿರುವ ಬೇಡಿಕೆಯನ್ನು ಅವರು ಪ್ರಶ್ನಿಸಿದರು.  ಪಾಕಿಸ್ತಾನ ಸಹ ಅದೇ ಬೇಡಿಕೆಯನ್ನು ಮುಂದಿಟ್ಟಿದೆ ಎಂದು ಹೇಳಿದರು. ಬಾಹ್ಯ ಕಟ್ಟುಕತೆಗಳನ್ನು ಪ್ರತಿಧ್ವನಿಸುವ ಇಂತಹ ಅಭ್ಯಾಸಗಳು ಮತ್ತು ಧೈರ್ಯವು ವಿರೋಧ ಪಕ್ಷದಲ್ಲಿ ಇನ್ನೂ ಹಾಗೆಯೇ ಇದೆ ಎಂದು ಪ್ರಧಾನಮಂತ್ರಿ ಟೀಕಿಸಿದರು. ಇಂದು, ಸಾಕ್ಷ್ಯಾಧಾರಗಳ ಕೊರತೆಯಿಲ್ಲ ಮತ್ತು ಎಲ್ಲಾ ಸಂಗತಿಗಳು ಸಾರ್ವಜನಿಕರ ಮುಂದೆ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಆದರೂ ಕೆಲವು ವ್ಯಕ್ತಿಗಳು ಇನ್ನೂ ಅನುಮಾನಗಳನ್ನು ಎತ್ತುತ್ತಲೇ ಇದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತಹ ಸ್ಪಷ್ಟ ಪುರಾವೆಗಳು ಲಭ್ಯವಿಲ್ಲದಿದ್ದರೆ ವ್ಯಕ್ತಿಗಳು ಇನ್ನೂ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಮೋದಿ ಪ್ರಶ್ನಿಸಿದರು. ಅವರ ಪ್ರತಿಕ್ರಿಯೆಗಳು ಇನ್ನೂ ಹೆಚ್ಚು ದಾರಿತಪ್ಪಿಸುವ ಅಥವಾ ಬೇಜವಾಬ್ದಾರಿತನದಿಂದ ಕೂಡಿರುತ್ತಿದ್ದವು ಎಂದರು.

ಚರ್ಚೆಗಳು ಸಾಮಾನ್ಯವಾಗಿ ʻಆಪರೇಷನ್ ಸಿಂದೂರʼ ಕಾರ್ಯಾಚರಣೆ ಒಂದು ಭಾಗದ ಮೇಲಷ್ಟೇ ಕೇಂದ್ರೀಕೃತವಾಗಿವೆ ಎಂದು ಹೇಳಿದ ಶ್ರೀ ಮೋದಿ, ರಾಷ್ಟ್ರೀಯ ಹೆಮ್ಮೆ ಮತ್ತು ಶಕ್ತಿ ಪ್ರದರ್ಶನದ ಕ್ಷಣಗಳತ್ತಲೂ ಗಮನ ಹರಿಸಬೇಕು ಎಂದು ಒತ್ತಿ ಹೇಳಿದರು. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಶ್ಲಾಘಿಸಿದ ಅವರು, ಅವು ವಿಶ್ವದಾದ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿವೆ ಮತ್ತು ಅವು ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು "ಹುಲ್ಲಿನಂತೆ" ಹೊಸಹಕಿಹಾಕಿವೆ ಎಂದು ಹೇಳಿದರು. ಮೇ 9ರಂದು ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಿಕೊಂಡು ಸುಮಾರು ಒಂದು ಸಾವಿರ ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್‌ಗಳನ್ನು ಒಳಗೊಂಡ ದೊಡ್ಡ ಆಕ್ರಮಣಕ್ಕೆ ಪ್ರಯತ್ನಿಸಿತು ಎಂದು ಅವರು ಅಂಕಿ ಅಂಶಗಳನ್ನು ಉಲ್ಲೇಖಿಸಿದರು. ಈ ಕ್ಷಿಪಣಿಗಳು ಭಾರತದಲ್ಲಿನ ಗುರಿಗಳ ಮೇಲೆ ಬಿದ್ದಿದ್ದರೆ, ಅವು ವ್ಯಾಪಕ ವಿನಾಶಕ್ಕೆ ಕಾರಣವಾಗುತ್ತಿದ್ದವು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬದಲಾಗಿ, ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಅವೆಲ್ಲವನ್ನೂ ಗಾಳಿಯಲ್ಲೇ ನಾಶಪಡಿಸಿತು. ಈ ಸಾಧನೆಯು ಪ್ರತಿಯೊಬ್ಬ ನಾಗರಿಕನಲ್ಲೂ ಹೆಮ್ಮೆಯನ್ನು ತುಂಬುತ್ತದೆ ಎಂದು ಅವರು ಹೇಳಿದರು.

ಆದಂಪುರ ವಾಯುನೆಲೆಯ ಮೇಲಿನ ದಾಳಿಯ ಬಗ್ಗೆ ಪಾಕಿಸ್ತಾನವು ಸುಳ್ಳು ವರದಿಗಳನ್ನು ಹರಡಿತು ಮತ್ತು ಸುಳ್ಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಪ್ರಯತ್ನಿಸಿತು ಎಂದು ಟೀಕಿಸಿದ ಶ್ರೀ ಮೋದಿ, ಮರುದಿನವೇ ತಾವು ವೈಯಕ್ತಿಕವಾಗಿ ಆದಂಪುರಕ್ಕೆ ಭೇಟಿ ನೀಡಿ ಪಾಕ್‌ನ ಸುಳ್ಳುಗಳನ್ನು ಬಯಲು ಮಾಡಿದೆ ಎಂದರು. ಅಂತಹ ತಪ್ಪು ಮಾಹಿತಿ ಇನ್ನು ಮುಂದೆ ಯಶಸ್ವಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಿನ ವಿರೋಧ ಪಕ್ಷಗಳು ಭಾರತವನ್ನು ಸುದೀರ್ಘ ಅವಧಿಯ ಕಾಲ ಆಳಿವೆ ಮತ್ತು ಆಡಳಿತ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಅವುಗಳಿಗೆ ಸಂಪೂರ್ಣ ಅರಿವಿದೆ. ಈ ಅನುಭವದ ಹೊರತಾಗಿಯೂ, ಪ್ರತಿಪಕ್ಷಗಳು ಅಧಿಕೃತ ಸ್ಪಷ್ಟೀಕರಣಗಳನ್ನು ಒಪ್ಪದೆ ನಿರಂತರವಾಗಿ ನಿರಾಕರಿಸುತ್ತಾ ಬಂದಿವೆ ಎಂದು ಮೋದಿ ಟೀಕಿಸಿದರು. ಪ್ರತಿಪಕ್ಷಗಳ ಪ್ರವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಾಗಿರಲಿ, ವಿದೇಶಾಂಗ ವ್ಯವಹಾರಗಳ ಸಚಿವರ ಪುನರಾವರ್ತಿತ ಪ್ರತಿಕ್ರಿಯೆಯಾಗಿರಲಿ ಅಥವಾ ಗೃಹ ಮತ್ತು ರಕ್ಷಣಾ ಸಚಿವರ ಸ್ಪಷ್ಟೀಕರಣಗಳಾಗಿರಲಿ, ಪ್ರತಿಪಕ್ಷಗಳು ಅವುಗಳನ್ನು ನಂಬಲು ನಿರಾಕರಿಸುತ್ತವೆ ಎಂದು ಶ್ರೀ ಮೋದಿ ಗಮನ ಸೆಳೆದರು. ದಶಕಗಳಿಂದ ಆಡಳಿತ ನಡೆಸಿದ ಪಕ್ಷವು ರಾಷ್ಟ್ರದ ಸಂಸ್ಥೆಗಳಲ್ಲಿ ಇಂತಹ ವಿಶ್ವಾಸ ಕೊರತೆಯನ್ನು ಪ್ರದರ್ಶಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪ್ರತಿಪಕ್ಷಗಳು ಈಗ ಪಾಕಿಸ್ತಾನದ ರಿಮೋಟ್ ಕಂಟ್ರೋಲ್‌ನಂತೆ ಕಾರ್ಯನಿರ್ವಹಿಸುತ್ತಿವೆ, ಪ್ರತಿಪಕಷಗಳ ನಿಲುವು ಅದಕ್ಕೆ ಅನುಗುಣವಾಗಿ ಬದಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಲಿಖಿತ ಹೇಳಿಕೆಗಳನ್ನು ಸಿದ್ಧಪಡಿಸುವ ಮತ್ತು ತಮ್ಮ ಪರವಾಗಿ ಯುವ ಸಂಸದರು ಮಾತನಾಡುವಂತೆ ಮಾಡುವ ವಿರೋಧ ಪಕ್ಷದ ಹಿರಿಯ ನಾಯಕರನ್ನು ಶ್ರೀ ಮೋದಿ ಟೀಕಿಸಿದರು. ಅಂತಹ ನಾಯಕತ್ವವು ಸ್ವತಃ ಮಾತನಾಡಲು ಧೈರ್ಯ ಹೊಂದಿಲ್ಲ ಎಂದು ಖಂಡಿಸಿದರು.  26 ಜನರ ಸಾವಿಗೆ ಕಾರಣವಾದ ಹೇಯ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಿದ ʻಆಪರೇಷನ್ ಸಿಂದೂರʼವನ್ನು ಪ್ರತಿಪಕ್ಷಗಳ ನಾಯಕರು "ಒಂದು ಕಣ್ಣೋರೆಸುವ ತಂತ್ರ" ಎಂದು ಕರೆದರು. ಈ ಹೇಳಿಕೆಯು ಭಯಾನಕ ಘಟನೆಯ ಕರಾಳ ನೆನಪಿನ ಮೇಲೆ ಆಸಿಡ್ ಸುರಿಯುವುದಕ್ಕೆ ಹೋಲುತ್ತದೆ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಪ್ರತಿಪಕ್ಷಗಳ ನಡೆಯನ್ನು ನಾಚಿಕೆಗೇಡಿನ ವರ್ತನೆ  ಎಂದು ಟೀಕಿಸಿದರು.

ಹಿಂದಿನ ದಿನ ನಡೆದ ʻಆಪರೇಷನ್ ಮಹಾದೇವ್ʼನಲ್ಲಿ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಶ್ರೀ ಮೋದಿ ಮಾಹಿತಿ ಹಂಚಿಕೊಂಡರು. ಕಾರ್ಯಾಚರಣೆಯ ಸಮಯದ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳು, ನಗು ಮತ್ತು ಅಪಹಾಸ್ಯದ ಬಗ್ಗೆ ಮೋದಿ ಅಚ್ಚರಿ ವ್ಯಕ್ತಪಡಿಸಿದರು. ʻಇದನ್ನು ಶ್ರಾವಣ ಮಾಸದ ಪವಿತ್ರ ಸೋಮವಾರಕ್ಕೆ ನಿಗದಿಪಡಿಸಲಾಗಿತ್ತೇʼ ಎಂಬ ಪ್ರತಿಪಕ್ಷಗಳ ವ್ಯಂಗ್ಯವನ್ನು ಟೀಕಿಸಿದರು. ಈ ವರ್ತನೆಯನ್ನು ತೀವ್ರ ಹತಾಶೆ ಮತ್ತು ಹತಾಶೆಯ ಪ್ರತಿಬಿಂಬ ಎಂದು ಕರೆದ ಶ್ರೀ ಮೋದಿ ಇದು ಹದಗೆಡುತ್ತಿರುವ ಪ್ರತಿಪಕ್ಷಗಳ ಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಪ್ರಾಚೀನ ಧರ್ಮಗ್ರಂಥಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, ಒಂದು ರಾಷ್ಟ್ರವನ್ನು ಶಸ್ತ್ರಾಸ್ತ್ರಗಳಿಂದ ರಕ್ಷಿಸಿದಾಗ, ಜ್ಞಾನದ ಅನ್ವೇಷಣೆ ಮತ್ತು ತಾತ್ವಿಕ ಸಂವಾದವು ಅಭಿವೃದ್ಧಿ ಹೊಂದಬಹುದು ಎಂದರು. "ಗಡಿಯಲ್ಲಿ ಬಲವಾದ ಸೈನ್ಯವು ಸದೃಢ ಮತ್ತು ಸುರಕ್ಷಿತ ಪ್ರಜಾಪ್ರಭುತ್ವವನ್ನು ಖಾತ್ರಿಪಡಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.

"ಆಪರೇಷನ್ ಸಿಂದೂರ ಕಳೆದ ದಶಕದಲ್ಲಿ ಭಾರತದ ಮಿಲಿಟರಿ ಸಬಲೀಕರಣಕ್ಕೆ ನೇರ ಪುರಾವೆಯಾಗಿ ನಿಂತಿದೆ" ಎಂದು ಉದ್ಗರಿಸಿದ ಪ್ರಧಾನಮಂತ್ರಿ, ಅಂತಹ ಶಕ್ತಿಯು ತಾನಾಗಿಯೇ ಹೊರಹೊಮ್ಮಲಿಲ್ಲ. ಬದಲಿಗೆ, ಕೇಂದ್ರೀಕೃತ ಪ್ರಯತ್ನದ ಫಲವಾಗಿದೆ ಎಂದರು. ಇದನ್ನು ಪ್ರತಿಪಕ್ಷಗಳ ಅಧಿಕಾರಾವಧಿಗೆ - ರಕ್ಷಣೆಯಲ್ಲಿ ಸ್ವಾವಲಂಬನೆ ಎಂಬುದು ಪರಿಗಣನೆಯಲ್ಲೂ ಇರದ ಅವಧಿಗೆ ಹೋಲಿಸಿದರು. ಇಂದಿಗೂ ಗಾಂಧಿ ತತ್ವದಲ್ಲಿ ಬೇರೂರಿರುವ ಸ್ವಾವಲಂಬನೆ ಎಂಬ ಪದವನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಪಕ್ಷಗಳ ಆಡಳಿತದ ಅವಧಿಯಲ್ಲಿ, ಪ್ರತಿಯೊಂದು ರಕ್ಷಣಾ ಒಪ್ಪಂದವು ವೈಯಕ್ತಿಕ ಲಾಭಕ್ಕಾಗಿ ಒಂದು ಅವಕಾಶವಾಗಿತ್ತು ಎಂದು ಪ್ರತಿಪಾದಿಸಿದ ಶ್ರೀ ಮೋದಿ, ಭಾರತವು ಮೂಲಭೂತ ಉಪಕರಣಗಳಿಗಾಗಿಯೂ ವಿದೇಶಿ ಪೂರೈಕೆದಾರರನ್ನು ಅವಲಂಬಿಸಿತ್ತು ಎಂದು ಹೇಳಿದರು. ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ನೈಟ್ ವಿಷನ್ ಕ್ಯಾಮೆರಾಗಳ ಅನುಪಸ್ಥಿತಿಯಂತಹ ನ್ಯೂನತೆಗಳನ್ನು ಅವರು ಪಟ್ಟಿ ಮಾಡಿದರು. ಜೊತೆಗ ಜೀಪ್‌ಗಳಿಂದ ಬೋಫೋರ್ಸ್, ಹೆಲಿಕಾಪ್ಟರ್‌ಗಳವರೆಗೆ ಪ್ರತಿಯೊಂದು ರಕ್ಷಣಾ ಖರೀದಿಯಲ್ಲೂ ಹಗರಣಗಳು ನಡೆದಿವೆ ಎಂದು ಗಮನಸೆಳೆದರು. ಭಾರತದ ಪಡೆಗಳು ಆಧುನಿಕ ಶಸ್ತ್ರಾಸ್ತ್ರಗಳಿಗಾಗಿ ದಶಕಗಳ ಕಾಲ ಕಾಯಬೇಕಾಗಿತ್ತು. ಆದರೆ, ಐತಿಹಾಸಿಕವಾಗಿ, ಭಾರತವು ರಕ್ಷಣಾ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು ಎಂದು ಸದನಕ್ಕೆ ನೆನಪಿಸಿದರು. ಖಡ್ಗದಲ್ಲಿ ಯುದ್ಧ ಮಾಡುವ ಸಮಯದಲ್ಲಿಯೂ ಭಾರತೀಯ ಶಸ್ತ್ರಾಸ್ತ್ರಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತಿತ್ತು ಎಂದು ಅವರು ಉಲ್ಲೇಖಿಸಿದರು. ಸ್ವಾತಂತ್ರ್ಯದ ನಂತರ, ಭಾರತದ ದೃಢವಾದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಯಿತು ಮತ್ತು ವ್ಯವಸ್ಥಿತವಾಗಿ ನಾಶಪಡಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು.

ಸಂಶೋಧನೆ ಮತ್ತು ಉತ್ಪಾದನೆಯ ಮಾರ್ಗಗಳನ್ನು ಹಲವು ವರ್ಷಗಳಿಂದ ನಿರ್ಬಂಧಿಸಲಾಗಿತ್ತು. ಇಂದಿಗೂ ನೀತಿಗಳು ಮುಂದುವರಿದಿದ್ದರೆ, 21ನೇ ಶತಮಾನದಲ್ಲಿ ಭಾರತವು ʻಆಪರೇಷನ್ ಸಿಂದೂರʼ ಕಾರ್ಯಾಚರಣೆಯನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ, ಭಾರತವು ಸಮಯಕ್ಕೆ ಸರಿಯಾಗಿ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಮದ್ದುಗುಂಡುಗಳನ್ನು ಪಡೆಯಲು ಹೆಣಗಾಡಬೇಕಿತ್ತು. ಅಲ್ಲದೆ, ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಅಡೆತಡೆಗಳ ಭಯವೂ ಇತ್ತು ಎಂದು ಶ್ರೀ ಮೋದಿ ಹೇಳಿದರು. ಕಳೆದ ದಶಕದಲ್ಲಿ, ʻಮೇಕ್ ಇನ್ ಇಂಡಿಯಾʼ ಉಪಕ್ರಮದ ಅಡಿಯಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ʻಆಪರೇಷನ್ ಸಿಂದೂರʼ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅವರು ಒತ್ತಿ ಹೇಳಿದರು.

ಒಂದು ದಶಕದ ಹಿಂದೆ, ಭಾರತೀಯರು ಬಲವಾದ, ಸ್ವಾವಲಂಬಿ ಮತ್ತು ಆಧುನಿಕ ರಾಷ್ಟ್ರವನ್ನು ನಿರ್ಮಿಸಲು ಸಂಕಲ್ಪ ಮಾಡಿದರು. ಹಲವು ಸರಣಿ ರಕ್ಷಣಾ ಸುಧಾರಣೆಗಳಿಗೆ ಪ್ರೇರೇಪಿಸಿದರು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇವುಗಳನ್ನು ಜಾರಿಗೆ ತರಲಾಯಿತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ತ್ರಿವಳಿ ಪಡೆಗಳ ಮುಖ್ಯಸ್ಥರ (ಸಿಡಿಎಸ್‌) ನೇಮಕವು ಒಂದು ಪ್ರಮುಖ ಸುಧಾರಣೆಯಾಗಿದೆ - ಇದು ಜಾಗತಿಕವಾಗಿ ದೀರ್ಘಕಾಲದಿಂದ ಚರ್ಚಿಸಲ್ಪಟ್ಟಿದೆ ಮತ್ತು ಆಚರಣೆಯಲ್ಲಿದೆ, ಆದರೆ ಭಾರತದಲ್ಲಿ ಎಂದಿಗೂ ಕಾರ್ಯಗತಗೊಂಡಿಲ್ಲ ಎಂದು ಪ್ರಧಾನಮಂತ್ರಿ ಗಮನ ಸೆಳೆದರು. ಈ ಮೂರೂ ಸೇವೆಗಳು ವ್ಯವಸ್ಥೆಯನ್ನು ಹೃತ್ಪೂರ್ವಕವಾಗಿ ಬೆಂಬಲಿಸುತ್ತಿರುವುದನ್ನು ಮತ್ತು ಅಂಗೀಕರಿಸಿದ್ದನ್ನು ಅವರು ಶ್ಲಾಘಿಸಿದರು.

ಜಂಟಿತನ ಮತ್ತು ಒಗ್ಗೂಡುವಿಕೆಯಲ್ಲಿ ಈಗ ದೊಡ್ಡ ಶಕ್ತಿ ಅಡಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಗಳ ನಡುವಿನ ಒಗ್ಗಟ್ಟು ಭಾರತದ ರಕ್ಷಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ ಮತ್ತು ʻಆಪರೇಷನ್ ಸಿಂದೂರʼ ಪರಿವರ್ತನೆಯ ಯಶಸ್ಸನ್ನು ಸೂಚಿಸುತ್ತದೆ ಎಂದು ಹೇಳಿದರು.

ಅಶಾಂತಿ ಮತ್ತು ಮುಷ್ಕರಗಳು ಸೇರಿದಂತೆ ಆರಂಭಿಕ ಪ್ರತಿರೋಧದ ಹೊರತಾಗಿಯೂ ಸರ್ಕಾರಿ ಸ್ವಾಮ್ಯದ ರಕ್ಷಣಾ ಉತ್ಪಾದನಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಪರಿಚಯಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿ, ಸುಧಾರಣೆಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಮತ್ತು ಹೆಚ್ಚು ಹೆಚ್ಚು ಉತ್ಪಾದಕರಾಗಿದ್ದಕ್ಕಾಗಿ ಅವರು ಕಾರ್ಮಿಕರನ್ನು ಶ್ಲಾಘಿಸಿದರು. ಭಾರತವು ತನ್ನ ರಕ್ಷಣಾ ವಲಯವನ್ನು ಖಾಸಗಿ ಕಂಪನಿಗಳಿಗೆ ತೆರೆದಿದೆ ಮತ್ತು ಇಂದು, ಖಾಸಗಿ ವಲಯವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿನ ನೂರಾರು ನವೋದ್ಯಮಗಳು ತಲೆ ಎತ್ತಿವೆ. 2 ಮತ್ತು 3ನೇ ಶ್ರೇಣಿಯ ನಗರಗಳ 27-30 ವರ್ಷ ವಯಸ್ಸಿನ ಯುವ ವೃತ್ತಿಪರರ ನೇತೃತ್ವದಲ್ಲಿ ನೂರಾರು ನವೋದ್ಯಮಗಳು ನಾವೀನ್ಯತೆಗೆ ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ಶ್ರೀ ಮೋದಿ ಗಮನಸೆಳೆದರು.

ಡ್ರೋನ್ ವಲಯದಲ್ಲಿನ ಚಟುವಟಿಕೆಗಳನ್ನು 30-35 ವರ್ಷ ವಯಸ್ಸಿನ ವ್ಯಕ್ತಿಗಳು ಮುನ್ನಡೆಸುತ್ತಾರೆ ಮತ್ತು ಅವರ ಕೊಡುಗೆಗಳು ʻಆಪರೇಷನ್ ಸಿಂದೂರʼದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತಹ ಎಲ್ಲ ಕೊಡುಗೆದಾರರ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ಸೂಚಿಸಿದ ಪ್ರಧಾನಮಂತ್ರಿ, ದೇಶವು ನಾಗಾಲೋಟ ಮುಂದುವರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣಾ ಕ್ಷೇತ್ರದಲ್ಲಿ 'ಮೇಕ್ ಇನ್ ಇಂಡಿಯಾ' ಕೇವಲ ಘೋಷಣೆಯಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು ಬಜೆಟ್ ಅನುದಾನ ಹೆಚ್ಚಳ, ನೀತಿ ಬದಲಾವಣೆಗಳು ಮತ್ತು ಹೊಸ ಉಪಕ್ರಮಗಳನ್ನು ಸ್ಪಷ್ಟ ದೃಷ್ಟಿಕೋನದೊಂದಿಗೆ ಕೈಗೊಳ್ಳಲಾಗಿದ್ದು, ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ತ್ವರಿತ ಪ್ರಗತಿಗೆ ಇದು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಕಳೆದ ದಶಕದಲ್ಲಿ, ಭಾರತದ ರಕ್ಷಣಾ ಬಜೆಟ್ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಒತ್ತಿ ಹೇಳಿದರು. ರಕ್ಷಣಾ ಉತ್ಪಾದನೆಯು ಸರಿಸುಮಾರು 250 ಪ್ರತಿಶತದಷ್ಟು ಹೆಚ್ಚಾಗಿದೆ, ಮತ್ತು ರಕ್ಷಣಾ ರಫ್ತು ಕಳೆದ 11 ವರ್ಷಗಳಲ್ಲಿ 30 ಪಟ್ಟು ಹೆಚ್ಚಾಗಿದೆ, ಈಗ ಸುಮಾರು 100 ದೇಶಗಳನ್ನು ತಲುಪಿದೆ ಎಂದು ಮಾಹಿತಿ ನೀಡಿದರು.

ಕೆಲವು ಮೈಲುಗಲ್ಲುಗಳು ಇತಿಹಾಸದ ಮೇಲೆ ಶಾಶ್ವತ ಪರಿಣಾಮ ಬೀರಿವೆ ಎಂದು ಹೇಳಿದ ಪ್ರಧಾನಮಂತ್ರಿ, ʻಆಪರೇಷನ್ ಸಿಂದೂರʼ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಮೇಲೆತ್ತಿದೆ ಎಂದು ಹೇಳಿದರು. ಭಾರತೀಯ ಶಸ್ತ್ರಾಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ದೇಶೀಯ ಕೈಗಾರಿಕೆಗಳನ್ನು ಬಲಪಡಿಸುತ್ತದೆ, ʻಎಂಎಸ್ಎಂಇʼಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಅವರು ಗಮನ ಸೆಳೆದರು. ಯುವ ಭಾರತೀಯರು ಈಗ ತಮ್ಮ ಆವಿಷ್ಕಾರಗಳ ಮೂಲಕ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಕೇವಲ ರಾಷ್ಟ್ರೀಯ ಹಿತಾಸಕ್ತಿಗೆ ಮಾತ್ರವಲ್ಲ, ಜಾಗತಿಕ ಶಾಂತಿಗೂ ಅತ್ಯಗತ್ಯ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. "ಭಾರತವು ಬುದ್ಧನ ಭೂಮಿಯೇ ಹೊರತು ಯುದ್ಧಭೂಮಿಯಲ್ಲ. ರಾಷ್ಟ್ರವು ಸಮೃದ್ಧಿ ಮತ್ತು ಶಾಂತಿಯನ್ನು ಬಯಸುತ್ತದೆಯಾದರೂ ಇವೆರಡರ ಸಾಧನೆಗೆ ಶಕ್ತಿ ಮತ್ತು ಸಂಕಲ್ಪದ ಅಗತ್ಯವಿದೆ," ಎಂದು ಶ್ರೀ ಮೋದಿ ಹೇಳಿದರು. ಭಾರತವನ್ನು ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಜ ರಂಜಿತ್ ಸಿಂಗ್, ರಾಜೇಂದ್ರ ಚೋಳ, ಮಹಾರಾಣಾ ಪ್ರತಾಪ್, ಲಚಿತ್ ಬೋರ್ಫುಕನ್ ಮತ್ತು ಮಹಾರಾಜ ಸುಹೇಲ್ದೇವ್ ಅವರಂತಹ ಮಹಾನ್ ಯೋಧರ ಭೂಮಿ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು ಅಭಿವೃದ್ಧಿ ಮತ್ತು ಶಾಂತಿಗೆ ಕಾರ್ಯತಂತ್ರದ ಶಕ್ತಿ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಪ್ರತಿಪಕ್ಷಗಳು ರಾಷ್ಟ್ರೀಯ ಭದ್ರತೆಯ ಬಗ್ಗೆ ಎಂದಿಗೂ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿಲ್ಲ ಮತ್ತು ಅದರ ಬಗ್ಗೆ ನಿರಂತರವಾಗಿ ರಾಜಿ ಮಾಡಿಕೊಂಡಿವೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಏಕೆ ಮರಳಿ ಪಡೆಯಲಾಗಿಲ್ಲ ಎಂದು ಈಗ ಪ್ರಶ್ನಿಸುವವರು, ಮೊದಲು ಪಾಕಿಸ್ತಾನಕ್ಕೆ ಅದರ ನಿಯಂತ್ರಣವನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟರು ಯಾರು ಎಂಬುದಕ್ಕೆ ಉತ್ತರಿಸಬೇಕು ಎಂದು ಅವರು ಹೇಳಿದರು.

ರಾಷ್ಟ್ರದ ಮೇಲೆ ಹೊರೆಯಾಗಿ ಮುಂದುವರಿದಿರುವ ಸ್ವಾತಂತ್ರ್ಯೋತ್ತರ ನಿರ್ಧಾರಗಳನ್ನು ಬಲವಾಗಿ ಟೀಕಿಸಿದ ಶ್ರೀ ಮೋದಿ, ನಿರ್ಣಾಯಕ ತಪ್ಪು ನಿರ್ಧಾರಗಳು ʻಅಕ್ಸಾಯ್ ಚಿನ್ʼನಲ್ಲಿ 38,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಕಳೆದುಕೊಳ್ಳಲು ಕಾರಣವಾಯಿತು. ಇದನ್ನು ಬಂಜರು ಭೂಮಿ ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ ಎಂದು ಒತ್ತಿ ಹೇಳಿದರು. 1962 ಮತ್ತು 1963ರ ನಡುವೆ, ಆಗಿನ ಆಡಳಿತ ಪಕ್ಷದ ನಾಯಕರು ಪೂಂಚ್, ಉರಿ, ನೀಲಂ ಕಣಿವೆ ಮತ್ತು ಕಿಶನ್‌ಗಂಗಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರದೇಶಗಳನ್ನು ಬಿಟ್ಟುಕೊಡಲು ಪ್ರಸ್ತಾಪಿಸಿದ್ದರು ಎಂದು ಅವರು ಹೇಳಿದರು.

"ಶಾಂತಿ ರೇಖೆ"ಯ ಸೋಗಿನಲ್ಲಿ ಶರಣಾಗತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಗಮನಸೆಳೆದರು. 1966ರಲ್ಲಿ ʻರಣ್‌ ಆಫ್ ಕಚ್ʼ ಮೇಲೆ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿದ್ದಕ್ಕಾಗಿ ಅವರು ಪ್ರತಿಪಕ್ಷಗಳನ್ನು ಟೀಕಿಸಿದರು, ಇದರ ಪರಿಣಾಮವಾಗಿ ವಿವಾದಿತ ಚಾಡ್‌ಬೆಟ್ ಪ್ರದೇಶ ಸೇರಿದಂತೆ ಸುಮಾರು 800 ಚದರ ಕಿಲೋಮೀಟರ್ ಭೂಮಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು. 1965ರ ಯುದ್ಧದಲ್ಲಿ ಭಾರತೀಯ ಪಡೆಗಳು ಹಾಜಿಪಿರ್ ಪಾಸ್ ಅನ್ನು ಮರಳಿ ಪಡೆದಿದ್ದರೂ, ಆಗಿನ ಆಡಳಿತವು ಅದನ್ನು ಹಿಂದಿರುಗಿಸಿತು, ಇದು ರಾಷ್ಟ್ರದ ಕಾರ್ಯತಂತ್ರದ ವಿಜಯವನ್ನು ದುರ್ಬಲಗೊಳಿಸಿತು ಎಂದು ಅವರು ಸ್ಮರಿಸಿದರು.

1971ರ ಯುದ್ಧದ ಸಮಯದಲ್ಲಿ, ಭಾರತವು ಸಾವಿರಾರು ಚದರ ಕಿಲೋಮೀಟರ್ ಪಾಕಿಸ್ತಾನದ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಮತ್ತು 93,000 ಯುದ್ಧ ಕೈದಿಗಳನ್ನು ಬಂಧಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅನುಕೂಲಕರ ಪರಿಸ್ಥಿತಿಗಳ ಹೊರತಾಗಿಯೂ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು. ಗಡಿಯ ಸಮೀಪದಲ್ಲಿರುವ ಕರ್ತಾರ್ಪುರ್ ಸಾಹಿಬ್ ಅನ್ನು ಸಹ ಸುರಕ್ಷಿತವಾಗಿಡಲು ಸಾಧ್ಯವಾಗಲಿಲ್ಲ. 1974ರಲ್ಲಿ ಕಚ್‌ತೀವು ದ್ವೀಪವನ್ನು ಶ್ರೀಲಂಕಾಕ್ಕೆ ಉಡುಗೊರೆಯಾಗಿ ನೀಡುವ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಈ ವರ್ಗಾವಣೆಯಿಂದಾಗಿ ತಮಿಳುನಾಡಿನ ಮೀನುಗಾರರು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿದರು.

ಸಿಯಾಚಿನ್‌ನಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವ ದಶಕಗಳ ಉದ್ದೇಶವನ್ನು ಪ್ರತಿಪಕ್ಷಗಳು ಹೊಂದಿದ್ದು, ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

26/11ರ ಭೀಕರ ಮುಂಬೈ ದಾಳಿಯ ಬಳಿಕ, ವಿದೇಶಿ ಒತ್ತಡದ ಮೇರೆಗೆ ದುರಂತದ ಕೆಲವೇ ವಾರಗಳ ನಂತರ ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಪುನರಾರಂಭಿಸಲು ಅಂದಿನ ಸರ್ಕಾರ ನಿರ್ಧರಿಸಿತು ಎಂದು ಪ್ರಧಾನಮಂತ್ರಿ ಸದನಕ್ಕೆ ನೆನಪಿಸಿದರು. 26/11 ದಾಳಿಯ ತೀವ್ರತೆಯ ಹೊರತಾಗಿಯೂ, ಆಗಿನ ಸರ್ಕಾರವು ಒಬ್ಬ ಪಾಕಿಸ್ತಾನಿ ರಾಜತಾಂತ್ರಿಕನನ್ನು ಹೊರಹಾಕಲಿಲ್ಲ ಅಥವಾ ಒಂದೇ ಒಂದು ವೀಸಾವನ್ನು ರದ್ದುಗೊಳಿಸಲಿಲ್ಲ ಎಂದು ಅವರು ಟೀಕಿಸಿದರು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗಳು ಅಡೆತಡೆಯಿಲ್ಲದೆ ಮುಂದುವರೆದಿವೆ, ಆದರೂ ಪಾಕಿಸ್ತಾನವು ಆಗಿನ ಸರ್ಕಾರದ ಅಡಿಯಲ್ಲಿ "ಅತ್ಯಂತ ಆದ್ಯತೆಯ ದೇಶ" (ಎಂಎಫ್ಎನ್) ಸ್ಥಾನಮಾನವನ್ನು ಉಳಿಸಿಕೊಂಡಿದೆ, ಅದನ್ನು ಎಂದಿಗೂ ಹಿಂತೆಗೆದುಕೊಳ್ಳಲಾಗಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.

ರಾಷ್ಟ್ರವು ಮುಂಬೈ ದಾಳಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದರೆ, ಆಗಿನ ಆಡಳಿತ ಪಕ್ಷವು ಪಾಕಿಸ್ತಾನದೊಂದಿಗೆ ವ್ಯಾಪಾರದಲ್ಲಿ ತೊಡಗಿತ್ತು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪಾಕಿಸ್ತಾನವು ವಿನಾಶವನ್ನು ಉಂಟುಮಾಡಲು ಭಯೋತ್ಪಾದಕರನ್ನು ಕಳುಹಿಸುತ್ತಿದ್ದರೆ, ಆಗಿನ ಸರ್ಕಾರವು ಭಾರತದಲ್ಲಿ ಶಾಂತಿ ಆಧಾರಿತ ಕಾವ್ಯ ಸಭೆಗಳನ್ನು ನಡೆಸಿತು ಎಂದು ಅವರು ಒತ್ತಿ ಹೇಳಿದರು.

ತಮ್ಮ ಸರ್ಕಾರವು ಭಯೋತ್ಪಾದನೆಯ ಏಕಮುಖ ಸಂಚಾರವನ್ನು ಕೊನೆಗೊಳಿಸಿದೆ ಮತ್ತು ಪಾಕಿಸ್ತಾನದ ʻಎಂಎಫ್ಎನ್ʼ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೂಲಕ, ವೀಸಾಗಳನ್ನು ನಿಲ್ಲಿಸುವ ಮೂಲಕ ಮತ್ತು ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವ ಮೂಲಕ ತಪ್ಪು ಆಶಾವಾದವನ್ನು ಕೊನೆಗೊಳಿಸಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ʻಸಿಂಧು ಜಲ ಒಪ್ಪಂದʼವನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪದೇಪದೆ ಒತ್ತೆ ಇಡುತ್ತಿರುವುದಕ್ಕಾಗಿ ಅವರು ಪ್ರತಿಪಕ್ಷಗಳನ್ನು ಟೀಕಿಸಿದರು. ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಭಾಗವಾಗಿರುವ ಭಾರತದಲ್ಲಿಉಗಮವಾಗುವ ನದಿಗಳನ್ನು ಒಳಗೊಂಡ ಒಪ್ಪಂದವನ್ನು ಆಗಿನ ಪ್ರಧಾನಮಂತ್ರಿ ಕಾರ್ಯಗತಗೊಳಿಸಿದ್ದರು ಎಂದು ಅವರು ಗಮನಸೆಳೆದರು.

ಒಂದು ಕಾಲದಲ್ಲಿ ಭಾರತದ ಅಸ್ಮಿತೆಗೆ ಸಮಾನಾರ್ಥಕವಾಗಿದ್ದ ಸಿಂಧು ಮತ್ತು ಝೀಲಂ ನಂತಹ ನದಿಗಳನ್ನು, ಅವು ಭಾರತದ್ದೇ ಸ್ವಂತ ನದಿಗಳಾಗಿದ್ದರೂ ಮತ್ತು ನಮ್ಮದೇ ನೀರಾಗಿದ್ದರೂ ಸಹ ಮಧ್ಯಸ್ಥಿಕೆಗಾಗಿ ವಿಶ್ವಬ್ಯಾಂಕ್‌ಗೆ ಹಸ್ತಾಂತರಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ಈ ಕ್ರಮವನ್ನು ಅವರು ಭಾರತದ ಸ್ವಾಭಿಮಾನ ಮತ್ತು ಸಾಂಸ್ಕೃತಿಕ ನೀತಿಗಳಿಗೆ ಮಾಡಿದ ದ್ರೋಹ ಎಂದು ಖಂಡಿಸಿದರು.

ಭಾರತದ ಜಲ ಹಕ್ಕುಗಳು ಮತ್ತು ಅಭಿವೃದ್ಧಿ ವಿಚಾರದಲ್ಲಿ, ವಿಶೇಷವಾಗಿ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ರಾಜಿ ಮಾಡಿಕೊಂಡ ಐತಿಹಾಸಿಕ ರಾಜತಾಂತ್ರಿಕ ನಿರ್ಧಾರಗಳನ್ನು ಪ್ರಧಾನಮಂತ್ರಿ ಖಂಡಿಸಿದರು. ಭಾರತದಲ್ಲಿ ಹುಟ್ಟುವ ನದಿಗಳಿಂದ 80% ನೀರನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲು ಅಂದಿನ ಪ್ರಧಾನಮಂತ್ರಿ ಒಪ್ಪಿಕೊಂಡರು, ಆದರೆ ಭಾರತದಂತಹ ವಿಶಾಲ ರಾಷ್ಟ್ರಕ್ಕೆ ಕೇವಲ 20% ಮಾತ್ರ ಉಳಿದಿದೆ ಎಂದು ಒತ್ತಿ ಹೇಳಿದರು. ಈ ವ್ಯವಸ್ಥೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಅವರು, ಇದು ಬುದ್ಧಿವಂತಿಕೆ, ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವೈಫಲ್ಯ ಎಂದು ಕರೆದರು.

ಭಾರತದ ಮಣ್ಣಿನಿಂದ ಹುಟ್ಟುವ ನದಿಗಳು ನಾಗರಿಕರಿಗೆ, ವಿಶೇಷವಾಗಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಸೇರಿದ್ದು ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಆಗಿನ ಆಡಳಿತಾರೂಢ ಸರ್ಕಾರದ ಒಪ್ಪಂದವು ದೇಶದ ಹೆಚ್ಚಿನ ಭಾಗವನ್ನು ಜಲಬಿಕ್ಕಟ್ಟಿಗೆ ತಳ್ಳಿತು ಮತ್ತು ರಾಜ್ಯ ಮಟ್ಟದ ಆಂತರಿಕ ಜಲ ವಿವಾದಗಳನ್ನು ಹುಟ್ಟುಹಾಕಿತು. ಆದರೆ ಪಾಕಿಸ್ತಾನವು ಪ್ರಯೋಜನಗಳನ್ನು ಬಳಸಿಕೊಂಡಿತು ಎಂದು ಮೋದಿ ಹೇಳಿದರು.

ನದಿಗಳೊಂದಿಗಿನ ಭಾರತದ ಸಾಂಸ್ಕೃತಿಕ ಮತ್ತು ನಾಗರಿಕ ಸಂಪರ್ಕವನ್ನು ಕಡೆಗಣಿಸಲಾಗಿದೆ ಮತ್ತು ಹೆಚ್ಚು ಬಾಧಿತರಾದ ಜನರಿಗೆ - ಭಾರತದ ರೈತರಿಗೆ - ಅವರ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪರಿಸ್ಥಿತಿ ಉದ್ಭವಿಸದಿದ್ದರೆ, ಪಶ್ಚಿಮ ನದಿಗಳಲ್ಲಿ ಹಲವಾರು ಪ್ರಮುಖ ಜಲಯೋಜನೆಗಳನ್ನು ಅಭಿವೃದ್ಧಿಪಡಿಸಬಹುದಿತ್ತು ಎಂದು ಅವರು ಹೇಳಿದರು. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯ ರೈತರಿಗೆ ಸಾಕಷ್ಟು ನೀರು ಸಿಗುತ್ತಿತ್ತು ಮತ್ತು ಕುಡಿಯುವ ನೀರಿನ ಕೊರತೆ ಇರುತ್ತಿರಲಿಲ್ಲ. ಹೆಚ್ಚುವರಿಯಾಗಿ, ಭಾರತವು ಕೈಗಾರಿಕಾ ವ್ಯವಸ್ಥೆಗಳ ಮೂಲಕ ವಿದ್ಯುತ್ ಉತ್ಪಾದಿಸುತ್ತಿತ್ತು ಎಂದರು.

ಆಗಿನ ಸರ್ಕಾರವು ಕಾಲುವೆಗಳನ್ನು ನಿರ್ಮಿಸಲು ಪಾಕಿಸ್ತಾನಕ್ಕೆ ಕೋಟಿ ರೂಪಾಯಿಗಳನ್ನು ಸಹ ನೀಡಿತು, ಈ ನಡೆಯು ಭಾರತದ ಹಿತಾಸಕ್ತಿಗಳನ್ನು ಮತ್ತಷ್ಟು ಕಡೆಗಣಿಸಿತುಎಂದು ಪ್ರಧಾನಮಂತ್ರಿ ಗಮನಿಸಿದರು. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ಈಗ ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. "ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು.

2014ಕ್ಕೂ ಮೊದಲು ದೇಶವು ನಿರಂತರ ಅಭದ್ರತೆಯ ನೆರಳಿನಲ್ಲಿ ಬದುಕಿತ್ತು ಎಂದು ಹೇಳಿದ ಶ್ರೀ ಮೋದಿ, ಸಾರ್ವಜನಿಕ ಸ್ಥಳಗಳಾದ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ದೇವಾಲಯಗಳಲ್ಲಿ ಬಾಂಬ್‌ ದಾಳಿ ಭಯದಿಂದಾಗಿ ವಾರಸುದಾರರಿಲ್ಲದ ವಸ್ತುಗಳ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ಹೇಗೆ ಸೂಚಿಸಲಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡರು. ಆಗಿನ ಆಡಳಿತ ವ್ಯವಸ್ಥೆಯಲ್ಲಿ ದುರ್ಬಲ ಆಡಳಿತವು ಅಸಂಖ್ಯಾತ ನಾಗರಿಕ ಸಾವುನೋವುಗಳಿಗೆ ಕಾರಣವಾಯಿತು ಎಂದು ಒತ್ತಿ ಹೇಳಿದ ಅವರು, ಸರ್ಕಾರವು ತನ್ನ ನಾಗರಿಕರನ್ನು ರಕ್ಷಿಸಲು ವಿಫಲವಾಗಿತ್ತು ಎಂದರು. ಭಯೋತ್ಪಾದನೆಯನ್ನು ನಿಗ್ರಹಿಸಬಹುದಿತ್ತು ಎಂದು ಪ್ರತಿಪಾದಿಸಿದ ಶ್ರೀ ಮೋದಿ, 2004 ಮತ್ತು 2014ರ ನಡುವೆ ದೇಶವನ್ನು ಬಾಧಿಸಿದ್ದ ಭಯೋತ್ಪಾದಕ ಕೃತ್ಯಗಳಲ್ಲಿ ಗಂಭೀರ ಇಳಿಕೆಯಾಗಿರುವುದನ್ನು ಎತ್ತಿ ತೋರಿದರು.

ನಿಜವಾಗಿಯೂ ಸಾಧ್ಯವಾದರೆ ಹಿಂದಿನ ಆಡಳಿತಗಳು ಭಯೋತ್ಪಾದನೆಯನ್ನು ನಿಯಂತ್ರಿಸಲು ಏಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ತುಷ್ಟೀಕರಣ ಮತ್ತು ವೋಟ್‌ಬ್ಯಾಂಕ್ ಪರಿಗಣನೆಗಳ ರಾಜಕೀಯದಿಂದಾಗಿ ಸರ್ಕಾರಗಳು ಭಯೋತ್ಪಾದನೆಯನ್ನು ಪ್ರವರ್ಧಮಾನಕ್ಕೆ ತರಲು ಅವಕಾಶ ಮಾಡಿಕೊಟ್ಟವು ಎಂದು ಅವರು ಆರೋಪಿಸಿದರು.

2001ರಲ್ಲಿ ದೇಶದ ಸಂಸತ್ತಿನ ಮೇಲೆ ದಾಳಿ ನಡೆದಾಗ ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಅಫ್ಜಲ್ ಗುರುವಿಗೆ ಸಂಶಯದ ಪ್ರಯೋಜನ ಒದಗಿಸುವ ಬಗ್ಗೆ ಮಾತನಾಡಿದ್ದನ್ನು ಶ್ರೀ ಮೋದಿ ಸ್ಮರಿಸಿದರು. ಭಯೋತ್ಪಾದಕ ಅಜ್ಮಲ್ ಕಸಬ್‌ ಸೆರೆ ಸಿಕ್ಕಿದ್ದರೂ ಮತ್ತು ಆತನ ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಜಾಗತಿಕವಾಗಿ ಗುರುತಿಸಿದ್ದರೂ, 26/11 ಮುಂಬೈ ದಾಳಿಯನ್ನು "ಕೇಸರಿ ಭಯೋತ್ಪಾದನೆ" ಎಂದು ಅಪಪ್ರಚಾರ ಮಾಡಲು ಹೇಗೆ ಬಳಸಲಾಯಿತು ಎಂಬುದನ್ನು ಮೋದಿ ಎತ್ತಿ ತೋರಿದರು.

ಲಷ್ಕರ್-ಎ-ತಯ್ಬಾಗಿಂತ ಹಿಂದೂ ಗುಂಪುಗಳು ಹೆಚ್ಚಿನ ಬೆದರಿಕೆಯನ್ನು ಒಡ್ಡುತ್ತಿವೆ ಎಂದು ಆಗಿನ ಆಡಳಿತ ಪಕ್ಷದ ನಾಯಕರೊಬ್ಬರು ಅಮೆರಿಕದ ಉನ್ನತ ರಾಜತಾಂತ್ರಿಕರಿಗೆ ಹೇಳಿದ್ದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸಂವಿಧಾನದ ಸಂಪೂರ್ಣ ಅನುಷ್ಠಾನವನ್ನು ತಡೆಯುತ್ತಿರುವುದಕ್ಕಾಗಿ ಪ್ರತಿಪಕ್ಷಗಳನ್ನು ಬಲವಾಗಿ ಖಂಡಿಸಿದ ಅವರು, ತುಷ್ಟೀಕರಣ ರಾಜಕೀಯದಿಂದಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು ಎಂದರು.

ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ರಾಷ್ಟ್ರೀಯ ಹಿತದೃಷ್ಟಿ ವಿಚಾರದಲ್ಲಿ ಉದ್ದೇಶದ ಏಕತೆ ಮೇಲುಗೈ ಸಾಧಿಸಬೇಕು ಎಂದು ಶ್ರೀ ಮೋದಿ ಅವರು ಏಕತೆಯ ಭಾವನೆಯನ್ನು ಉತ್ತೇಜಿಸಿದರು. ಪಹಲ್ಗಾಮ್ ದುರಂತವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ರಾಷ್ಟ್ರವನ್ನು ಹೇಗೆ ಆಳವಾಗಿ ಗಾಯಗೊಳಿಸಿತು ಮತ್ತು ಧೈರ್ಯ, ಸ್ವಾವಲಂಬನೆ ಮತ್ತು ರಾಷ್ಟ್ರೀಯ ಸಂಕಲ್ಪವನ್ನು ಒಳಗೊಂಡಿರುವ ʻಆಪರೇಷನ್ ಸಿಂದೂರʼದ ಮೂಲಕ ಭಾರತದ ನಿರ್ಣಾಯಕ ಪ್ರತಿಕ್ರಿಯೆಯನ್ನು ಹೇಗೆ ಪ್ರೇರೇಪಿಸಿತು ಎಂಬುದನ್ನು ಎತ್ತಿ ತೋರಿದರು.

ದೃಢನಿಶ್ಚಯ ಮತ್ತು ಸ್ಪಷ್ಟತೆಯೊಂದಿಗೆ ಜಾಗತಿಕವಾಗಿ ದೇಶವನ್ನು ಪ್ರತಿನಿಧಿಸಿದ ಭಾರತೀಯ ನಿಯೋಗಗಳನ್ನು ಅವರು ಶ್ಲಾಘಿಸಿದರು. ಅವರ ವಾದವು 'ಸಿಂದೂರ ಸ್ಫೂರ್ತಿ'ಯನ್ನು ಪ್ರತಿಧ್ವನಿಸುತ್ತದೆ, ಅದು ಈಗ ಭಾರತದ ನಿಲುವಿಗೆ ಅದರ ಗಡಿಯೊಳಗೆ ಮತ್ತು ಹೊರಗೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು.

ಭಾರತದ ದೃಢವಾದ ಜಾಗತಿಕ ಸಂದೇಶವನ್ನು ವಿರೋಧಿಸಿದ ಕೆಲವು ಪ್ರತಿಪಕ್ಷದ ನಾಯಕರ ಪ್ರತಿಕ್ರಿಯೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ರಾಷ್ಟ್ರದ ರಕ್ಷಣೆಗಾಗಿ ಸದನದಲ್ಲಿ ಮಾತನಾಡಿದವರನ್ನು ಮೌನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದಿಸಿದರು. ಈ ಮನಸ್ಥಿತಿಯನ್ನು ಉದ್ದೇಶಿಸಿ, ಅವರು ಧೈರ್ಯಶಾಲಿ ಮತ್ತು ಉದ್ದೇಶಪೂರ್ವಕ ಸಂವಾದಕ್ಕೆ ಕರೆ ನೀಡುವ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಹಂಚಿಕೊಂಡರು.

ಪಾಕಿಸ್ತಾನದ ಬಗ್ಗೆ ಸಹಾನುಭೂತಿಗೆ ಕಾರಣವಾದ ರಾಜಕೀಯ ಒತ್ತಡಗಳನ್ನು ಕೈಬಿಡುವಂತೆ ಶ್ರೀ ಮೋದಿ ಪ್ರತಿಪಕ್ಷಗಳನ್ನು ಒತ್ತಾಯಿಸಿದರು ಮತ್ತು ರಾಷ್ಟ್ರೀಯ ವಿಜಯದ ಕ್ಷಣಗಳನ್ನು ರಾಜಕೀಯ ಅಪಹಾಸ್ಯವಾಗಿ ಪರಿವರ್ತಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು.

ಭಾರತವು ಭಯೋತ್ಪಾದನೆಯನ್ನು ಅದರ ಬೇರುಗಳಿಂದ ನಿರ್ಮೂಲನೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ನಿಸ್ಸಂದಿಗ್ಧವಾಗಿ ಸ್ಪಷ್ಟಪಡಿಸಿದರು. ʻಆಪರೇಷನ್ ಸಿಂದೂರʼ ಮುಂದುವರೆದಿದೆ, ಇದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ - ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ, ಭಾರತವು ತನ್ನ ಪ್ರತಿಕ್ರಿಯೆಯ ಕ್ರಮಗಳನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಭಾರತದ ಭವಿಷ್ಯವು ಸುರಕ್ಷಿತ ಮತ್ತು ಸಮೃದ್ಧವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ದೃಢ ಸಂಕಲ್ಪದೊಂದಿಗೆ ಶ್ರೀ ಮೋದಿ ಅವರು ತಮ್ಮ ಮುಕ್ತಾಯಗೊಳಿಸಿದರು. ಜನರ ಭಾವನೆಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿದ್ದಕ್ಕಾಗಿ ಅವರು ಸದನಕ್ಕೆ ಕೃತಜ್ಞತೆ ಸಲ್ಲಿಸಿದರು.

 

 

*****


(Release ID: 2150175)