ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ತೂತುಕುಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 26 JUL 2025 11:03PM by PIB Bengaluru

ವಣಕ್ಕಂ!

ತಮಿಳುನಾಡು ರಾಜ್ಯಪಾಲರಾದ ಗೌರವಾನ್ವಿತ ಆರ್.ಎನ್. ರವಿ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಕಿಂಜರಾಪು ರಾಮಮೋಹನ್ ನಾಯ್ಡು ಜಿ, ಡಾ. ಎಲ್. ಮುರುಗನ್ ಜಿ, ತಮಿಳುನಾಡು ಸಚಿವರಾದ ತಂಗಂ ತೆನ್ನರಸು ಜಿ, ಡಾ. ಟಿ.ಆರ್.ಬಿ. ರಾಜಾ ಜಿ, ಪಿ. ಗೀತಾ ಜೀವನ್ ಜಿ, ಅನಿತಾ ಆರ್. ರಾಧಾಕೃಷ್ಣನ್ ಜಿ, ಸಂಸದೆ ಕನಿಮೊಳಿ ಜಿ, ತಮಿಳುನಾಡು ಬಿಜೆಪಿ ಅಧ್ಯಕ್ಷರು ಮತ್ತು ನಮ್ಮ ಶಾಸಕರಾದ ನಾಯನಾರ್ ನಾಗೇಂದ್ರನ್ ಜಿ, ಮತ್ತು ತಮಿಳುನಾಡಿನ ನನ್ನ ಸಹೋದರ ಸಹೋದರಿಯರೆ!

ಇಂದು ಕಾರ್ಗಿಲ್ ವಿಜಯ ದಿವಸ. ಮೊದಲನೆಯದಾಗಿ, ನಾನು ಕಾರ್ಗಿಲ್ ವೀರ ಯೋಧರಿಗೆ ನಮಸ್ಕರಿಸುತ್ತೇನೆ ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೆ,

4 ದಿನಗಳ ವಿದೇಶ ವಾಸ್ತವ್ಯದ ನಂತರ, ರಾಮೇಶ್ವರನ ಈ ಪವಿತ್ರ ಭೂಮಿಗೆ ನೇರವಾಗಿ ಬರುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ವಿದೇಶ ವಾಸ್ತವ್ಯದ ಸಮಯದಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಭಾರತದ ಮೇಲೆ ವಿಶ್ವದ ಬೆಳೆಯುತ್ತಿರುವ ನಂಬಿಕೆ ಮತ್ತು ಭಾರತದ ಹೊಸ ಆತ್ಮವಿಶ್ವಾಸದ ಸಂಕೇತವಾಗಿದೆ. ಈ ಆತ್ಮ ವಿಶ್ವಾಸದಿಂದ, ನಾವು ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ತಮಿಳುನಾಡನ್ನು ನಿರ್ಮಿಸುತ್ತೇವೆ. ಇಂದಿಗೂ, ರಾಮೇಶ್ವರಂ ದೇವರು ಮತ್ತು ತಿರುಚೆಂಡೂರ್ ಮುರುಗನ್ ದೇವರ ಆಶೀರ್ವಾದದೊಂದಿಗೆ, ತೂತುಕುಡಿಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲಾಗುತ್ತಿದೆ. 2014ರಲ್ಲಿ ತಮಿಳುನಾಡನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲು ಪ್ರಾರಂಭಿಸಲಾದ ಧ್ಯೇಯಕ್ಕೆ ತೂತುಕುಡಿ ನಿರಂತರವಾಗಿ ಸಾಕ್ಷಿಯಾಗುತ್ತಿದೆ.

ಸ್ನೇಹಿತರೆ,

ಕಳೆದ ವರ್ಷ ಫೆಬ್ರವರಿಯಲ್ಲಿ ನಾನು ಇಲ್ಲಿ ‘ವಿ.ಒ. ಚಿದಂಬರನಾರ್ ಬಂದರು’ಗಾಗಿ ‘ಔಟರ್ ಹಾರ್ಬರ್ ಕಂಟೇನರ್ ಟರ್ಮಿನಲ್’ಗೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಆ ಸಮಯದಲ್ಲಿ ನೂರಾರು ಕೋಟಿ ರೂಪಾಯಿ ಯೋಜನೆಗಳನ್ನು ಸಹ ಉದ್ಘಾಟಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ನಾನು ಹೊಸ ತೂತುಕುಡಿ ಅಂತಾರಾಷ್ಟ್ರೀಯ ಕಂಟೇನರ್ ಟರ್ಮಿನಲ್ ಉದ್ಘಾಟಿಸಿದ್ದೆ. ಇಂದು ಮತ್ತೊಮ್ಮೆ 48 ನೂರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವುಗಳಲ್ಲಿ ವಿಮಾನ ನಿಲ್ದಾಣ, ಹೆದ್ದಾರಿಗಳು, ಬಂದರುಗಳು ಮತ್ತು ರೈಲ್ವೆಗಳ ಯೋಜನೆಗಳು ಮತ್ತು ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಪ್ರಮುಖ ಉಪಕ್ರಮಗಳು ಸೇರಿವೆ. ಇದಕ್ಕಾಗಿ ತಮಿಳುನಾಡಿನ ಜನರೇ, ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಯಾವುದೇ ರಾಜ್ಯದ ಅಭಿವೃದ್ಧಿಯ ಮೂಲಸೌಕರ್ಯ ಮತ್ತು ಇಂಧನ ಅಭಿವೃದ್ಧಿಯೇ ಬೆನ್ನೆಲುಬಾಗಿದೆ. ಈ 11 ವರ್ಷಗಳಲ್ಲಿ ಮೂಲಸೌಕರ್ಯ ಮತ್ತು ಇಂಧನದ ಮೇಲೆ ನಮ್ಮ ಗಮನವು ತಮಿಳುನಾಡಿನ ಅಭಿವೃದ್ಧಿ ನಮಗೆ ಎಷ್ಟು ದೊಡ್ಡ ಆದ್ಯತೆಯಾಗಿದೆ ಎಂಬುದನ್ನು ತೋರಿಸುತ್ತದೆ. ಇಂದಿನ ಎಲ್ಲಾ ಯೋಜನೆಗಳು ತೂತುಕುಡಿ ಮತ್ತು ತಮಿಳುನಾಡನ್ನು ಸಂಪರ್ಕ, ಸ್ವಚ್ಛ ಇಂಧನ ಮತ್ತು ಹೊಸ ಅವಕಾಶಗಳ ಕೇಂದ್ರವನ್ನಾಗಿ ಮಾಡುತ್ತದೆ.

ಸ್ನೇಹಿತರೆ,

ತಮಿಳುನಾಡು ಮತ್ತು ತೂತುಕುಡಿಯ ಭೂಮಿ ಮತ್ತು ಅದರ ಜನರು ಶತಮಾನಗಳಿಂದ ಸಮೃದ್ಧ ಮತ್ತು ಬಲಿಷ್ಠವಾದ ಭಾರತಕ್ಕೆ ಕೊಡುಗೆ ನೀಡಿದ್ದಾರೆ. ವಿ.ಒ. ಚಿದಂಬರಂ ಪಿಳ್ಳೈ ಅವರಂತಹ ದಾರ್ಶನಿಕರು ಜನಿಸಿದ ನಾಡು ಇದು. ಗುಲಾಮಗಿರಿಯ ಕಾಲದಲ್ಲೂ ಅವರು ಸಮುದ್ರದ ಮೂಲಕ ವ್ಯಾಪಾರದ ಶಕ್ತಿಯನ್ನು ಅರ್ಥ ಮಾಡಿಕೊಂಡರು. ಸಮುದ್ರದಲ್ಲಿ ಸ್ಥಳೀಯ ಹಡಗುಗಳನ್ನು ಓಡಿಸುವ ಮೂಲಕ ಅವರು ಬ್ರಿಟಿಷರಿಗೆ ಸವಾಲು ಹಾಕಿದರು. ಈ ಭೂಮಿಯಲ್ಲಿಯೇ, ವೀರ-ಪಾಂಡ್ಯ ಕಟ್ಟ-ಬೊಮ್ಮನ್ ಮತ್ತು ಅಲಗು-ಮುತ್ತು ಕೋನ್ ಅವರಂತಹ ಮಹಾನ್ ವ್ಯಕ್ತಿಗಳು ಸ್ವತಂತ್ರ ಮತ್ತು ಬಲಿಷ್ಠ ಭಾರತದ ಕನಸನ್ನು ಹೆಣೆದರು. ಸುಬ್ರಮಣಿಯಂ ಭಾರತಿ ಅವರಂತಹ ರಾಷ್ಟ್ರ ಕವಿ ಕೂಡ ಇಲ್ಲೇ ಜನಿಸಿದರು. ನಿಮಗೆಲ್ಲರಿಗೂ ತಿಳಿದಿದೆ, ಸುಬ್ರಮಣಿಯಂ ಭಾರತಿ ಅವರು ತೂತುಕುಡಿಯೊಂದಿಗೆ ಬಲವಾದ ಬಾಂಧವ್ಯ ಹೊಂದಿದ್ದರು, ಅವರು ನನ್ನ ಸಂಸದೀಯ ಕ್ಷೇತ್ರ ಕಾಶಿಯೊಂದಿಗೆ ಅಷ್ಟೇ ಬಲವಾದ ಬಾಂಧವ್ಯವನ್ನು ಹೊಂದಿದ್ದರು. ಕಾಶಿ-ತಮಿಳು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಬಲಪಡಿಸುತ್ತಿದ್ದೇವೆ.

ಸ್ನೇಹಿತರೆ,

ನನಗೆ ನೆನಪಿದೆ, ಕಳೆದ ವರ್ಷ ಮಾತ್ರ ನಾನು ತೂತುಕುಡಿಯ ಪ್ರಸಿದ್ಧ ಮುತ್ತುಗಳನ್ನು ಬಿಲ್ ಗೇಟ್ಸ್‌ಗೆ ಉಡುಗೊರೆಯಾಗಿ ನೀಡಿದ್ದೆ. ಅವರು ಆ ಮುತ್ತುಗಳನ್ನು ತುಂಬಾ ಇಷ್ಟಪಟ್ಟಿದ್ದರು. ಇಲ್ಲಿನ ಪಾಂಡ್ಯ ಮುತ್ತುಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಭಾರತದ ಆರ್ಥಿಕ ಶಕ್ತಿಯ ಸಂಕೇತವಾಗಿದ್ದವು.

ಸ್ನೇಹಿತರೆ,

ಇಂದು ನಮ್ಮ ಪ್ರಯತ್ನಗಳಿಂದ, ನಾವು ಅಭಿವೃದ್ಧಿ ಹೊಂದಿದ ತಮಿಳುನಾಡು ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಬ್ರಿಟನ್ ಮತ್ತು ಭಾರತ ನಡುವೆ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ)ಕ್ಕೆ ಸಹಿ ಹಾಕಲಾಗಿದೆ. ಎಫ್‌ಟಿಎ ಈ ದೃಷ್ಟಿಕೋನಕ್ಕೆ ಉತ್ತೇಜನ ನೀಡುತ್ತದೆ. ಇಂದು ಭಾರತದ ಬೆಳವಣಿಗೆಯಲ್ಲಿ ಜಗತ್ತು ತನ್ನ ಬೆಳವಣಿಗೆಯನ್ನು ನೋಡುತ್ತಿದೆ. ಈ ಒಪ್ಪಂದವು ಭಾರತದ ಆರ್ಥಿಕತೆಗೆ ಹೊಸ ಶಕ್ತಿ ನೀಡುತ್ತದೆ. ಇದು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ನಮ್ಮ ವೇಗವನ್ನು ಮತ್ತಷ್ಟು ವೇಗಗೊಳಿಸುತ್ತದೆ.

ಸ್ನೇಹಿತರೆ,

ಈ ಎಫ್‌ಟಿಎ ಒಪ್ಪಂದದ ನಂತರ, ಬ್ರಿಟನ್‌ನಲ್ಲಿ ಮಾರಾಟವಾಗುವ 99% ಭಾರತೀಯ ಉತ್ಪನ್ನಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಭಾರತೀಯ ಉತ್ಪನ್ನಗಳು ಬ್ರಿಟನ್‌ನಲ್ಲಿ ಅಗ್ಗವಾದರೆ, ಅಲ್ಲಿ ಬೇಡಿಕೆ ಹೆಚ್ಚಾಗುತ್ತದೆ, ಆ ಉತ್ಪನ್ನಗಳನ್ನು ಇಲ್ಲಿ ಭಾರತದಲ್ಲಿ ತಯಾರಿಸಲು ಹೆಚ್ಚಿನ ಅವಕಾಶಗಳಿವೆ.

ಸ್ನೇಹಿತರೆ,

ತಮಿಳುನಾಡಿನ ಯುವಕರು, ನಮ್ಮ ಸಣ್ಣ ಕೈಗಾರಿಕೆಗಳು, ಎಂಎಸ್ಎಂಇಗಳು ಮತ್ತು ಸ್ಟಾರ್ಟಪ್‌ಗಳು ಭಾರತ-ಬ್ರಿಟನ್ ಎಫ್‌ಟಿಎಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಅದು ಉದ್ಯಮವಾಗಿರಲಿ, ನಮ್ಮ ಮೀನುಗಾರ ಸಹೋದರ ಸಹೋದರಿಯರಾಗಿರಲಿ ಅಥವಾ ಸಂಶೋಧನೆ ಮತ್ತು ನಾವೀನ್ಯತೆಯಾಗಿರಲಿ, ಅದು ಎಲ್ಲರಿಗೂ ಪ್ರಯೋಜನಕಾರಿಯಾಗಲಿದೆ.

ಸ್ನೇಹಿತರೆ,

ಇಂದು ಭಾರತ ಸರ್ಕಾರವು ಮೇಕ್ ಇನ್ ಇಂಡಿಯಾ ಮತ್ತು ಮಿಷನ್ ಮ್ಯಾನುಫ್ಯಾಕ್ಚರಿಂಗ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ನೀವೆಲ್ಲರೂ ಮೇಕ್ ಇನ್ ಇಂಡಿಯಾದ ಶಕ್ತಿಯನ್ನು ನೋಡಿದ್ದೀರಿ. ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಭಯೋತ್ಪಾದನೆಯ ಅಡಗುತಾಣಗಳನ್ನು ನಾಶ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿವೆ. ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಇನ್ನೂ ಭಯೋತ್ಪಾದನೆಯ ಸೂತ್ರಧಾರಿಗಳಿಗೆ ನಿದ್ರೆ ಕೆಡಿಸುತ್ತಿವೆ.

ಸ್ನೇಹಿತರೆ,

ತಮಿಳುನಾಡಿನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು, ಭಾರತ ಸರ್ಕಾರವು ತಮಿಳುನಾಡಿನ ಮೂಲಸೌಕರ್ಯ ಆಧುನೀಕರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ತಮಿಳುನಾಡಿನಲ್ಲಿ, ನಾವು ಬಂದರು ಮೂಲಸೌಕರ್ಯವನ್ನು ಹೈಟೆಕ್ ಮಾಡುತ್ತಿದ್ದೇವೆ. ಇದಲ್ಲದೆ ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ರೈಲ್ವೆಗಳನ್ನು ಸಹ ಪರಸ್ಪರ ಸಂಯೋಜಿಸಲಾಗುತ್ತಿದೆ. ಇಂದು ತೂತುಕುಡಿ ವಿಮಾನ ನಿಲ್ದಾಣದ ಹೊಸ ಸುಧಾರಿತ ಟರ್ಮಿನಲ್ ಉದ್ಘಾಟನೆಯು ಈ ದಿಕ್ಕಿನಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ. 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಟರ್ಮಿನಲ್ ಈಗ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿದೆ. ಹಿಂದೆ ಇದರ ವಾರ್ಷಿಕ ಸಾಮರ್ಥ್ಯ ಕೇವಲ 3 ಲಕ್ಷ ಪ್ರಯಾಣಿಕರಾಗಿತ್ತು.

ಸ್ನೇಹಿತರೆ,

ಹೊಸ ಟರ್ಮಿನಲ್ ತೂತುಕುಡಿಯನ್ನು ದೇಶದ ಹಲವು ಮಾರ್ಗಗಳಿಗೆ ಸಂಪರ್ಕ ಹೆಚ್ಚಿಸುತ್ತದೆ. ಕಾರ್ಪೊರೇಟ್ ಪ್ರಯಾಣ, ಶಿಕ್ಷಣ ಕೇಂದ್ರಗಳು, ತಮಿಳುನಾಡಿನಲ್ಲಿ ಆರೋಗ್ಯ ಮೂಲಸೌಕರ್ಯಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಇದರೊಂದಿಗೆ, ಈ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವು ಹೊಸ ಶಕ್ತಿ ಪಡೆಯುತ್ತದೆ.

ಸ್ನೇಹಿತರೆ,

ಇಂದು ನಾವು ತಮಿಳುನಾಡಿನ 2 ಪ್ರಮುಖ ರಸ್ತೆ ಯೋಜನೆಗಳನ್ನು ಜನರಿಗೆ ಅರ್ಪಿಸಿದ್ದೇವೆ. ಸುಮಾರು 2,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರಸ್ತೆಗಳು ಚೆನ್ನೈನ 2 ಪ್ರಮುಖ ಅಭಿವೃದ್ಧಿ ಪ್ರದೇಶಗಳನ್ನು ಸಂಪರ್ಕಿಸಲಿವೆ. ಈ ರಸ್ತೆಗಳಿಂದಾಗಿ, ಚೆನ್ನೈ ಮತ್ತು ಡೆಲ್ಟಾ(ಕಾವೇರಿ ನದಿ ತೀರದ ಜಿಲ್ಲೆಗಳು) ಜಿಲ್ಲೆಗಳ ನಡುವಿನ ಸಂಪರ್ಕವು ಮತ್ತಷ್ಟು ಸುಧಾರಿಸಿದೆ.

ಸ್ನೇಹಿತರೆ,

ಈ ಯೋಜನೆಗಳ ಸಹಾಯದಿಂದ, ತೂತುಕುಡಿ ಬಂದರಿನ ಸಂಪರ್ಕವು ಸಾಕಷ್ಟು ಸುಧಾರಿಸಿದೆ. ಈ ರಸ್ತೆಗಳು ಇಡೀ ಪ್ರದೇಶದ ಜೀವನ ಸುಲಭತೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಾಪಾರ ಮತ್ತು ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಸ್ನೇಹಿತರೆ,

ನಮ್ಮ ಸರ್ಕಾರವು ದೇಶದ ರೈಲ್ವೆಗಳನ್ನು ಕೈಗಾರಿಕಾ ಬೆಳವಣಿಗೆ ಮತ್ತು ಸ್ವಾವಲಂಬಿ ಭಾರತದ ಜೀವನಾಡಿ ಎಂದು ಪರಿಗಣಿಸುತ್ತದೆ. ಅದಕ್ಕಾಗಿಯೇ, ಕಳೆದ 11 ವರ್ಷಗಳಲ್ಲಿ ದೇಶದ ರೈಲ್ವೆ ಮೂಲಸೌಕರ್ಯವು ಆಧುನೀಕರಣದ ಹೊಸ ಹಂತ ಕಂಡಿದೆ. ತಮಿಳುನಾಡು ರೈಲ್ವೆ ಮೂಲಸೌಕರ್ಯದ ಆಧುನೀಕರಣ ಅಭಿಯಾನದ ಪ್ರಮುಖ ಕೇಂದ್ರವಾಗಿದೆ. ಅಮೃತ ಭಾರತ್ ನಿಲ್ದಾಣ ಯೋಜನೆಯಡಿ, ನಮ್ಮ ಸರ್ಕಾರ ತಮಿಳುನಾಡಿನ 77 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿದೆ. ಆಧುನಿಕ ವಂದೇ ಭಾರತ್ ರೈಲುಗಳ ಮೂಲಕ ತಮಿಳುನಾಡಿನ ಜನರು ಹೊಸ ಅನುಭವ ಪಡೆಯುತ್ತಿದ್ದಾರೆ. ದೇಶದ ಮೊದಲ ಮತ್ತು ವಿಶಿಷ್ಟವಾದ ಲಂಬ ಲಿಫ್ಟ್ ರೈಲು ಸೇತುವೆ ಪಂಬನ್ ಸೇತುವೆಯನ್ನು ತಮಿಳುನಾಡಿನಲ್ಲಿ ನಿರ್ಮಿಸಲಾಗಿದೆ. ಪಂಬನ್ ಸೇತುವೆಯು ವ್ಯಾಪಾರ ಮಾಡುವ ಸುಲಭತೆ ಮತ್ತು ಪ್ರಯಾಣದ ಸುಲಭತೆ ಎರಡನ್ನೂ ಹೆಚ್ಚಿಸಿದೆ.

ಸ್ನೇಹಿತರೆ,

ಇಂದು ದೇಶದಲ್ಲಿ ಬೃಹತ್ ಮತ್ತು ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಒಂದು ಬೃಹತ್ ಅಭಿಯಾನ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಉದ್ಘಾಟನೆಯಾದ ಜಮ್ಮು-ಕಾಶ್ಮೀರದ ಚೆನಾಬ್ ಸೇತುವೆ ಒಂದು ಎಂಜಿನಿಯರಿಂಗ್ ಅದ್ಭುತವಾಗಿದೆ. ಈ ಸೇತುವೆಯು ಜಮ್ಮುವನ್ನು ಶ್ರೀನಗರಕ್ಕೆ ರೈಲ್ವೆ ಮೂಲಕ ಮೊದಲ ಬಾರಿಗೆ ಸಂಪರ್ಕಿಸಿದೆ. ಇದರ ಹೊರತಾಗಿ, ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಿಸಲಾಗಿದೆ, ಅಸ್ಸಾಂನಲ್ಲಿ ಬೋಗಿಬೀಲ್ ಸೇತುವೆ ನಿರ್ಮಿಸಲಾಗಿದೆ, 6 ಕಿ.ಮೀ.ಗಿಂತ ಹೆಚ್ಚು ಉದ್ದದ ಸೋನಾಮಾರ್ಗ್ ಸುರಂಗ ನಿರ್ಮಿಸಲಾಗಿದೆ, ಭಾರತ ಸರ್ಕಾರ, ಎನ್‌ಡಿಎ ಸರ್ಕಾರವು ಅಂತಹ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇವೆಲ್ಲವೂ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ.

ಸ್ನೇಹಿತರೆ,

ಇಂದಿಗೂ ನಾವು ತಮಿಳುನಾಡಿನಲ್ಲಿ ಅರ್ಪಿಸಿರುವ ರೈಲ್ವೆ ಯೋಜನೆಗಳು ದಕ್ಷಿಣ ತಮಿಳುನಾಡಿನ ಲಕ್ಷಾಂತರ ಜನರಿಗೆ ಪ್ರಯೋಜನ ನೀಡುತ್ತವೆ. ಮಧುರೈನಿಂದ ಬೋಡಿ-ನಾಯಕನೂರ್ ವರೆಗಿನ ಮಾರ್ಗದ ವಿದ್ಯುದ್ದೀಕರಣವು ಈಗ ವಂದೇ ಭಾರತ್‌ನಂತಹ ರೈಲುಗಳನ್ನು ಓಡಿಸಲು ದಾರಿ ಮಾಡಿಕೊಟ್ಟಿದೆ. ಈ ರೈಲ್ವೆ ಯೋಜನೆಗಳು ತಮಿಳುನಾಡಿನ ವೇಗ ಮತ್ತು ಅದರ ಅಭಿವೃದ್ಧಿ ಪ್ರಮಾಣ ಎರಡಕ್ಕೂ ಹೊಸ ಪ್ರಚೋದನೆಯನ್ನು ನೀಡಲಿವೆ.

ಸ್ನೇಹಿತರೆ,

ಇಂದು 2,000 ಮೆಗಾವ್ಯಾಟ್ ಸಾಮರ್ಥ್ಯದ ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಗೆ ಸಂಬಂಧಿಸಿದ ಪ್ರಸರಣ ಯೋಜನೆಗೆ ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ವ್ಯವಸ್ಥೆಯು ಮುಂಬರುವ ವರ್ಷಗಳಲ್ಲಿ ದೇಶಕ್ಕೆ ಸ್ವಚ್ಛ ಇಂಧನ ಒದಗಿಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ. ಈ ಇಂಧನ ಯೋಜನೆಯು ಭಾರತದ ಜಾಗತಿಕ ಇಂಧನ ಗುರಿಗಳು ಮತ್ತು ಪರಿಸರ ಬದ್ಧತೆಗಳನ್ನು ಪೂರೈಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ವಿದ್ಯುತ್ ಉತ್ಪಾದನೆ ಹೆಚ್ಚಾದಾಗ, ತಮಿಳುನಾಡಿನ ಉದ್ಯಮ ಮತ್ತು ದೇಶೀಯ ಬಳಕೆದಾರರು ಸಹ ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೆ,

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ತಮಿಳುನಾಡಿನಲ್ಲಿಯೂ ವೇಗವಾಗಿ ಚಾಲನೆಯಲ್ಲಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇಲ್ಲಿಯವರೆಗೆ, ಸರ್ಕಾರವು ಸುಮಾರು 1 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು 40,000 ಸೌರ ಮೇಲ್ಛಾವಣಿ ಅಳವಡಿಕೆಗಳು ಪೂರ್ಣಗೊಂಡಿವೆ. ಈ ಯೋಜನೆಯು ಉಚಿತ ಮತ್ತು ಸ್ವಚ್ಛ ವಿದ್ಯುತ್ ಒದಗಿಸುವುದಲ್ಲದೆ, ಸಾವಿರಾರು ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೆ,

ತಮಿಳುನಾಡಿನ ಅಭಿವೃದ್ಧಿ, ಅಭಿವೃದ್ಧಿ ಹೊಂದಿದ ತಮಿಳುನಾಡಿನ ಕನಸು ನಮ್ಮ ಪ್ರಮುಖ ಬದ್ಧತೆಯಾಗಿದೆ. ತಮಿಳುನಾಡಿನ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳಿಗೆ ನಾವು ನಿರಂತರವಾಗಿ ಆದ್ಯತೆ ನೀಡಿದ್ದೇವೆ. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ಅಧಿಕಾರ ವಿಕೇಂದ್ರೀಕರಣದ ಮೂಲಕ ತಮಿಳುನಾಡಿಗೆ 3 ಲಕ್ಷ ಕೋಟಿ ರೂಪಾಯಿ ಒದಗಿಸಿದೆ. ಈ ಮೊತ್ತವು ಹಿಂದಿನ ಯುಪಿಎ ಸರ್ಕಾರ ಕಳುಹಿಸಿದ ಮೊತ್ತಕ್ಕಿಂತ 3 ಪಟ್ಟು ಹೆಚ್ಚು. ಈ 11 ವರ್ಷಗಳಲ್ಲಿ  ತಮಿಳುನಾಡಿಗೆ 11 ಹೊಸ ವೈದ್ಯಕೀಯ ಕಾಲೇಜುಗಳು ಬಂದಿವೆ. ಮೊದಲ ಬಾರಿಗೆ, ಯಾವುದೇ ಸರ್ಕಾರವು ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಸಮುದಾಯಗಳ ಬಗ್ಗೆ ಇಷ್ಟೊಂದು ಕಾಳಜಿಯನ್ನು ತೋರಿಸಿದೆ. ನಾವು ನೀಲಿ ಕ್ರಾಂತಿಯ ಮೂಲಕ ಕರಾವಳಿ ಆರ್ಥಿಕತೆಯನ್ನು ವಿಸ್ತರಿಸುತ್ತಿದ್ದೇವೆ.

ಇಂದು ತೂತುಕುಡಿಯ ಈ ಭೂಮಿ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದೆ. ಸಂಪರ್ಕ, ವಿದ್ಯುತ್ ಪ್ರಸರಣ, ಮೂಲಸೌಕರ್ಯದ ಈ ಎಲ್ಲಾ ಯೋಜನೆಗಳು ಅಭಿವೃದ್ಧಿ ಹೊಂದಿದ ತಮಿಳುನಾಡು ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಅಡಿಪಾಯ ಹಾಕಲಿವೆ. ಈ ಎಲ್ಲಾ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ತಮಿಳುನಾಡಿನ ನನ್ನ ಎಲ್ಲಾ ಕುಟುಂಬ ಸದಸ್ಯರನ್ನು ಅಭಿನಂದಿಸುತ್ತೇನೆ. ತುಂಬಾ ಧನ್ಯವಾದಗಳು. ನಾನೊಂದು ಮನವಿ ಮಾಡುತ್ತೇನೆ, ಇಂದು ನೀವೆಲ್ಲರೂ ತುಂಬಾ ಉತ್ಸಾಹಭರಿತರಾಗಿರುವುದನ್ನು ನಾನು ನೋಡುತ್ತಿದ್ದೇನೆ, ಒಂದು ಕೆಲಸ ಮಾಡಿ, ನಿಮ್ಮ ಮೊಬೈಲ್ ಫೋನ್ ತೆಗೆದುಕೊಂಡು ನಿಮ್ಮ ಮೊಬೈಲ್ ಫೋನ್‌ನ ಫ್ಲ್ಯಾಶ್‌ಲೈಟ್‌ನಿಂದ ಈ ಹೊಸ ವಿಮಾನ ನಿಲ್ದಾಣದ ವೈಭವವನ್ನು ಹೆಚ್ಚಿಸಿ.

ಭಾರತ್ ಮಾತಾ ಕೀ ಜೈ.

ಭಾರತ್ ಮಾತಾ ಕೀ ಜೈ.

ಭಾರತ್ ಮಾತಾ ಕೀ ಜೈ.

ತುಂಬು ಧನ್ಯವಾದಗಳು.

ವಣಕ್ಕಮ್.

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(Release ID: 2149076)