ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ದಿನಾಂಕ 27.07.2025 ರಂದು ಮಾಡಿದ ‘ಮನ್ ಕಿ ಬಾತ್’ – 124 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 27 JUL 2025 11:39AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ.

‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ ಅಲೆ ಹರಿದಾಡಿತು. ಇಡೀ ದೇಶ ಹೆಮ್ಮೆಯಿಂದ ಬೀಗಿತು. ಆಗಸ್ಟ್ 2023 ರಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಆದಾಗ, ದೇಶದಲ್ಲಿ ಹೊಸ ವಾತಾವರಣವೇ ಸೃಷ್ಟಿಯಾಗಿದ್ದು ನನಗೆ ನೆನಪಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲವೂ ಅರಳಿತು. ಈಗ ಚಿಕ್ಕ ಚಿಕ್ಕ ಮಕ್ಕಳು ಕೂಡ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಇಳಿಯುತ್ತೇವೆ - ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಹೇಳುತ್ತಾರೆ.

ಸ್ನೇಹಿತರೇ,

ನೀವು INSPIRE-MANAK ಅಭಿಯಾನದ ಹೆಸರನ್ನು ಕೇಳಿರಬಹುದು. ಇದು ಮಕ್ಕಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಅಭಿಯಾನವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಿಂದ ಐದು ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಮಗುವೂ ಒಂದು ಹೊಸ ಪರಿಕಲ್ಪನೆಯೊಂದಿಗೆ ಪಾಲ್ಗೊಳ್ಳುತ್ತದೆ. ಇಲ್ಲಿಯವರೆಗೆ ಲಕ್ಷಾಂತರ ಮಕ್ಕಳು ಇದಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಚಂದ್ರಯಾನ-3 ರ ನಂತರ, ಅದರ ಸಂಖ್ಯೆ ದ್ವಿಗುಣಗೊಂಡಿದೆ. ದೇಶದಲ್ಲಿ ಬಾಹ್ಯಾಕಾಶ ನವೋದ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಐದು ವರ್ಷಗಳ ಹಿಂದೆ 50 ಕ್ಕಿಂತ ಕಡಿಮೆ ನವೋದ್ಯಮಗಳಿದ್ದವು. ಇಂದು ಆ ಸಂಖ್ಯೆ ಕೇವಲ ಬಾಹ್ಯಾಕಾಶ ವಲಯದಲ್ಲಿ 200 ಮೀರಿದೆ. ಸ್ನೇಹಿತರೇ, ಮುಂದಿನ ತಿಂಗಳು ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತದೆ. ನೀವು ಅದನ್ನು ಹೇಗೆ ಆಚರಿಸುತ್ತೀರಿ, ಏನಾದರೂ ಹೊಸ ಆಲೋಚನೆ ಇದೆಯೇ? ನಮೋ ಅಪ್ಲಿಕೇಶನ್‌ನಲ್ಲಿ ಈ ಕುರಿತು ಖಂಡಿತ ನನಗೆ ಸಂದೇಶ ಕಳುಹಿಸಿ.

ಸ್ನೇಹಿತರೇ,

21 ನೇ ಶತಮಾನದ ಭಾರತದಲ್ಲಿ, ವಿಜ್ಞಾನವು ಹೊಸ ಶಕ್ತಿಯೊಂದಿಗೆ ಮುನ್ನಡೆದಿದೆ. ಕೆಲ ದಿನಗಳ ಹಿಂದೆ, ನಮ್ಮ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಪದಕ ಗೆದ್ದಿದ್ದಾರೆ. ದೇವೇಶ್ ಪಂಕಜ್, ಸಂದೀಪ್ ಕುಚಿ, ದೇಬ್ದತ್ ಪ್ರಿಯದರ್ಶಿ ಮತ್ತು ಉಜ್ವಲ್ ಕೇಸರಿ, ಈ ನಾಲ್ವರೂ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಗಣಿತ ಶಾಸ್ತ್ರದಲ್ಲಿಯೂ ಭಾರತ ತನ್ನ ಹೆಗ್ಗುರುತನ್ನು ಬಲಪಡಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ನಮ್ಮ ವಿದ್ಯಾರ್ಥಿಗಳು 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿದ್ದಾರೆ.

ಸ್ನೇಹಿತರೇ,

ಮುಂದಿನ ತಿಂಗಳು ಮುಂಬೈನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ನಡೆಯಲಿದೆ. 60 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ವಿಜ್ಞಾನಿಗಳು ಸಹ ಪಾಲ್ಗೊಳ್ಳಲಿದ್ದಾರೆ. ಇದು ಇಲ್ಲಿಯವರೆಗೆ ನಡೆದ ಅತಿದೊಡ್ಡ ಒಲಿಂಪಿಯಾಡ್ ಆಗಿರಲಿದೆ. ಒಂದು ರೀತಿಯಲ್ಲಿ, ಭಾರತ ಈಗ ಒಲಿಂಪಿಕ್ಸ್ ಮತ್ತು ಒಲಿಂಪಿಯಾಡ್ ಎರಡರಲ್ಲೂ ಸಾಧನೆ ಮೆರೆಯುತ್ತಿದೆ.

ನನ್ನ ಪ್ರಿಯ ದೇಶವಾಸಿಗಳೇ,

ನಾವೆಲ್ಲರೂ ಹೆಮ್ಮೆ ಪಡುವಂತಹ ಮತ್ತೊಂದು ಸುದ್ದಿ UNESCO ದಿಂದ ಬಂದಿದೆ. 12 ಮರಾಠಾ ಕೋಟೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಿದೆ. ಈ ಪೈಕಿ ಹನ್ನೊಂದು ಕೋಟೆಗಳು ಮಹಾರಾಷ್ಟ್ರದಲ್ಲಿವೆ, ಒಂದು ಕೋಟೆ ತಮಿಳುನಾಡಿನಲ್ಲಿದೆ. ಪ್ರತಿಯೊಂದು ಕೋಟೆಗೂ ತನ್ನದೇ ಆದ ಇತಿಹಾಸವಿದೆ. ಪ್ರತಿಯೊಂದು ಶಿಲೆಯು ಒಂದೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಮೊಘಲರನ್ನು ಸೋಲಿಸಿದ ಸಲ್ಹೇರ್ ಕೋಟೆ. ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ಶಿವನೇರಿ. ಶತ್ರುಗಳು ಭೇದಿಸಲಾಗದ ಅಭೇದ್ಯ ಕೋಟೆ. ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾದ ಅದ್ಭುತ ಖಾಂದೇರಿ ಕೋಟೆ. ಶತ್ರುಗಳು ಅವರನ್ನು ತಡೆಯಲು ಯತ್ನಿಸಿದ್ದರು ಆದರೆ ಶಿವಾಜಿ ಮಹಾರಾಜರು ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿದರು. ಅಫ್ಜಲ್ ಖಾನ್ ನನ್ನು ಸೋಲಿಸಿದ ಪ್ರತಾಪಗಢ ಕೋಟೆ, ಆ ಕಥೆಯ ಪ್ರತಿಧ್ವನಿ ಇನ್ನೂ ಕೋಟೆಯ ಗೋಡೆಗಳಲ್ಲಿ ರಿಂಗಣಿಸುತ್ತಿದೆ. ರಹಸ್ಯ ಸುರಂಗಗಳನ್ನು ಹೊಂದಿದ್ದ ವಿಜಯದುರ್ಗ ಕೋಟೆ, ಛತ್ರಪತಿ ಶಿವಾಜಿ ಮಹಾರಾಜರ ದೂರದೃಷ್ಟಿಗೆ ಪುರಾವೆಯಂತೆ ಕಂಡುಬರುತ್ತದೆ. ನಾನು ಕೆಲವು ವರ್ಷಗಳ ಹಿಂದೆ ರಾಯಗಢಕ್ಕೆ ಭೇಟಿ ನೀಡಿದ್ದೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮುಂದೆ ತಲೆ ಬಾಗಿದ್ದೆ. ಈ ಅನುಭವ ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಹಸಿರಾಗಿರಲಿದೆ.

ಸ್ನೇಹಿತರೇ,

ದೇಶದ ಇತರ ಭಾಗಗಳಲ್ಲಿಯೂ ಸಹ ಅಂತಹ ಅದ್ಭುತ ಕೋಟೆಗಳಿವೆ, ದಾಳಿಗಳನ್ನು ಎದುರಿಸಿದರೂ, ಹವಾಮಾನ ವೈಪರೀತ್ಯಕ್ಕೆ ಒಳಗಾದರೂ ತಮ್ಮ ಸ್ವಾಭಿಮಾನವನ್ನು ಎಂದಿಗೂ ಕುಗ್ಗದಂತೆ ತಲೆ ಎತ್ತಿ ನಿಂತಿವೆ. ರಾಜಸ್ಥಾನದ ಚಿತ್ತೋರ್‌ಗಢ ಕೋಟೆ, ಕುಂಭಲ್‌ಗಢ ಕೋಟೆ, ರಣಥಂಬೋರ್ ಕೋಟೆ, ಆಮೇರ್ ಕೋಟೆ, ಅದರಲ್ಲೂ ಜೈಸಲ್ಮೇರ್ ಕೋಟೆ ವಿಶ್ವಪ್ರಸಿದ್ಧವಾಗಿವೆ. ಕರ್ನಾಟಕದ ಗುಲ್ಬರ್ಗ ಕೋಟೆ ಕೂಡ ತುಂಬಾ ದೊಡ್ಡದಾಗಿದೆ. ಚಿತ್ರದುರ್ಗ ಕೋಟೆಯ ವಿಶಾಲತೆಯು ಆ ಕಾಲದಲ್ಲಿ ಈ ಕೋಟೆಯನ್ನು ಹೇಗೆ ನಿರ್ಮಿಸಲಾಯಿತು ಎಂದು ನಿಮ್ಮಲ್ಲಿ ಕುತೂಹಲವನ್ನು ಕೆರಳಿಸುತ್ತದೆ!

ಸ್ನೇಹಿತರೇ,

ಕಾಲಿಂಜರ್ ಕೋಟೆ ಉತ್ತರ ಪ್ರದೇಶದ ಬಾಂಡಾದಲ್ಲಿದೆ. ಮಹಮೂದ್ ಘಜ್ನವಿ ಈ ಕೋಟೆಯ ಮೇಲೆ ಹಲವು ಬಾರಿ ದಾಳಿ ಮಾಡಿದ ಆದರೆ ಪ್ರತಿ ಬಾರಿಯೂ ವಿಫಲನಾದ. ಗ್ವಾಲಿಯರ್, ಝಾನ್ಸಿ, ದತಿಯಾ, ಅಜಯ್‌ಗಢ, ಗಢಕುಂಡಾರ್, ಚಂದೇರಿ ಸೇರಿದಂತೆ ಬುಂದೇಲ್‌ಖಂಡ್‌ನಲ್ಲಿ ಅಂತಹ ಅನೇಕ ಕೋಟೆಗಳಿವೆ. ಈ ಕೋಟೆಗಳು ಕೇವಲ ಇಟ್ಟಿಗೆ ಮತ್ತು ಕಲ್ಲುಗಳ ಕಟ್ಟಡಗಳಲ್ಲ, ಅವು ನಮ್ಮ ಸಂಸ್ಕೃತಿಯ ಸಂಕೇತಗಳಾಗಿವೆ. ಈ ಕೋಟೆಗಳ ಎತ್ತರದ ಗೋಡೆಗಳಿಂದ ಇಂದಿಗೂ ಸಂಸ್ಕೃತಿ ಮತ್ತು ಸ್ವಾಭಿಮಾನದ ಮೆರಗನ್ನು ಕಾಣಬಹುದು. ಎಲ್ಲ ದೇಶವಾಸಿಗಳು ಈ ಕೋಟೆಗಳಿಗೆ ಭೇಟಿ ನೀಡಬೇಕು, ಅವುಗಳ ಇತಿಹಾಸವನ್ನು ಅರಿಯಬೇಕು, ಆ ಕುರಿತು ಹೆಮ್ಮೆಪಡಬೇಕು ಎಂದು ನಾನು ಆಗ್ರಹಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ,

ಕಲ್ಪನೆ ಮಾಡಿಕೊಳ್ಳಿ, ದಿನಾಂಕ 11 ಆಗಸ್ಟ್ 1908, ಅದು ನಸುಕಿನ ಸಮಯ, ಬಿಹಾರದ ಮುಜಫರ್‌ಪುರ ನಗರ, ಪ್ರತಿ ಬೀದಿ, ಪ್ರತಿ ಕೂಡು ರಸ್ತೆಗಳು, ಸಂಚಾರ ಆ ಸಮಯದಲ್ಲಿ ಸ್ಥಬ್ದಗೊಂಡಂತೆ ತೋರುತ್ತಿತ್ತು. ಜನರ ಕಣ್ಣುಗಳಲ್ಲಿ ಕಣ್ಣೀರು ತುಂಬಿತ್ತು, ಆದರೆ ಮನದಲ್ಲಿ ಜ್ವಾಲೆ ಉರಿಯುತ್ತಿತ್ತು. ಜನರು ಬಂದಿಖಾನೆಯನ್ನು ಸುತ್ತುವರೆದಿದ್ದರು, ಅಲ್ಲಿ ಬ್ರಿಟಿಷರ ವಿರುದ್ಧ ದನಿಯೆತ್ತಿದ್ದ 18 ವರ್ಷದ ಯುವಕನೊಬ್ಬ ತನ್ನ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಬೆಲೆ ತೆರುತ್ತಿದ್ದ. ಜೈಲಿನೊಳಗೆ, ಬ್ರಿಟಿಷ್ ಅಧಿಕಾರಿಗಳು ಒಬ್ಬ ಯುವಕನನ್ನು ಗಲ್ಲಿಗೇರಿಸುವ ಸಿದ್ಧತೆ ನಡೆಸುತ್ತಿದ್ದರು. ಆ ಯುವಕನ ಮುಖದಲ್ಲಿ ಕಿಂಚಿತ್ತು ಭಯವಿರಲಿಲ್ಲ, ಬದಲಿಗೆ ತಮ್ಮ ದೇಶಕ್ಕಾಗಿ ಪ್ರಾಣ ತೆರುವವರ ಮೊಗದಲ್ಲಿ ರಾರಾಜಿಸುವ ಹೆಮ್ಮೆ ಮನೆ ಮಾಡಿತ್ತು. ಆ ಧೈರ್ಯಶಾಲಿ, ಸಾಹಸಿ ಯುವಕನೇ ಖುದಿರಾಮ್ ಬೋಸ್. ಕೇವಲ 18 ನೇ ವಯಸ್ಸಿನಲ್ಲಿ, ಇಡೀ ದೇಶವನ್ನು ನಡುಗಿಸುವಂಥ ಧೈರ್ಯವನ್ನು ಅವರು ಮೆರೆದರು. "ಖುದಿರಾಮ್ ಬೋಸ್ ಗಲ್ಲುಗಂಬದೆಡೆಗೆ ಹೊರಟಾಗ, ಅವರ ಮುಖದಲ್ಲಿ ಮಂದಹಾಸವಿತ್ತು " ಎಂದು ನಂತರ ಪತ್ರಿಕೆಗಳಲ್ಲಿ ಸಹ ಬರೆಯಲಾಯಿತು. ಅಂತಹ ಅಸಂಖ್ಯಾತ ತ್ಯಾಗಗಳ ನಂತರ, ಶತಮಾನಗಳ ತಪಸ್ಸಿನ ನಂತರ, ನಮಗೆ ಸ್ವಾತಂತ್ರ್ಯ ಲಭಿಸಿತ್ತು. ದೇಶ ಪ್ರೇಮಿಗಳು ತಮ್ಮ ರಕ್ತದಿಂದ ಸ್ವಾತಂತ್ರ್ಯ ಚಳುವಳಿಯನ್ನು ಪೋಷಿಸಿದ್ದರು.

ಸ್ನೇಹಿತರೇ,

ಅದಕ್ಕಾಗಿಯೇ ಆಗಸ್ಟ್ ತಿಂಗಳು ಕ್ರಾಂತಿಯ ತಿಂಗಳಾಗಿದೆ. ಆಗಸ್ಟ್ 1 ಲೋಕಮಾನ್ಯ ಬಾಲಗಂಗಾಧರ ತಿಲಕರ ಪುಣ್ಯ ಜಯಂತಿಯಾಗಿದೆ. ಇದೇ ತಿಂಗಳು, ಆಗಸ್ಟ್ 8 ರಂದು, ಗಾಂಧೀಜಿಯವರ ನೇತೃತ್ವದಲ್ಲಿ 'ಕ್ವಿಟ್ ಇಂಡಿಯಾ ಚಳುವಳಿ' ಪ್ರಾರಂಭವಾಯಿತು. ನಂತರ ಆಗಸ್ಟ್ 15 ರಂದು ನಮ್ಮ ಸ್ವಾತಂತ್ರ್ಯ ದಿನ ಬರುತ್ತದೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಅವರಿಂದ ಸ್ಫೂರ್ತಿ ಪಡೆಯುತ್ತೇವೆ. ಆದರೆ ಸ್ನೇಹಿತರೇ, ನಮ್ಮ ಸ್ವಾತಂತ್ರ್ಯವು ವಿಭಜನೆಯ ನೋವಿನ ನಂಟನ್ನೂ  ಹೊಂದಿದೆ. ಆದ್ದರಿಂದಲೇ ನಾವು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಆಚರಿಸುತ್ತೇವೆ.

ನನ್ನ ಪ್ರಿಯ ದೇಶವಾಸಿಗಳೇ,

ಆಗಸ್ಟ್ 7, 1905 ರಂದು ಮತ್ತೊಂದು ಕ್ರಾಂತಿ ಪ್ರಾರಂಭವಾಯಿತು. ಸ್ವದೇಶಿ ಚಳುವಳಿಯು ಸ್ಥಳೀಯ ಉತ್ಪನ್ನಗಳಿಗೆ, ವಿಶೇಷವಾಗಿ ಕೈಮಗ್ಗಕ್ಕೆ ಹೊಸ ಪುಷ್ಟಿಯನ್ನು ನೀಡಿತು. ಈ ಸ್ಮರಣಾರ್ಥವಾಗಿ, ನಮ್ಮ ದೇಶದಲ್ಲಿ ಪ್ರತಿ ವರ್ಷ ಆಗಸ್ಟ್ 7 ರಂದು, 'ರಾಷ್ಟ್ರೀಯ ಕೈಮಗ್ಗ ದಿನ'ವನ್ನು ಆಚರಿಸುತ್ತೇವೆ. ಈ ವರ್ಷ ಆಗಸ್ಟ್ 7 ರಂದು 'ರಾಷ್ಟ್ರೀಯ ಕೈಮಗ್ಗ ದಿನ' 10 ವರ್ಷಗಳನ್ನು ಪೂರೈಸುತ್ತಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ಖಾದಿ ಸ್ವಾತಂತ್ರ್ಯ ಚಳವಳಿಗೆ ಹೇಗೆ  ಹೊಸ ಶಕ್ತಿಯನ್ನು ನೀಡಿತ್ತೋ, ಹಾಗೇ ಇಂದು ದೇಶವು ಅಭಿವೃದ್ಧಿ ಹೊಂದಿದ ಭಾರತವಾಗಿ ಮುನ್ನಡೆಯುತ್ತಿರುವಾಗ, ಜವಳಿ ವಲಯವು ದೇಶದ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ 10 ವರ್ಷಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಈ ವಲಯಕ್ಕೆ ಸಂಬಂಧಪಟ್ಟ ಲಕ್ಷಾಂತರ ಜನರು ಅನೇಕ ಯಶೋಗಾಥೆಗಳನ್ನು ಬರೆದಿದ್ದಾರೆ. ಮಹಾರಾಷ್ಟ್ರದ ಪೈಠಣ ಗ್ರಾಮದ ಕವಿತಾ ಧಾವಳೆ,  ಆರಂಭದಲ್ಲಿ ಒಂದು ಸಣ್ಣ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು - ಅಲ್ಲಿ ಬೇಕಾದಷ್ಟು ಸ್ಥಳವಾಗಲಿ ಅಥವಾ ಸೌಲಭ್ಯಗಳಾಗಲಿ ಇರಲಿಲ್ಲ. ಅವರಿಗೆ ಸರ್ಕಾರದಿಂದ ಸಹಾಯ ದೊರೆಯಿತು, ಈಗ ಅವರ ಪ್ರತಿಭೆ ಹೊರಹೊಮ್ಮುತ್ತಿದೆ. ಅವರು ಮೂರು ಪಟ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ. ತಾವೇ ತಯಾರಿಸಿದ ಪೈಠಣಿ ಸೀರೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಡಿಶಾದ ಮಯೂರ್‌ಭಂಜ್‌ನಲ್ಲಿಯೂ ಇಂಥದ್ದೇ ಯಶಸ್ಸಿನ ಕಥೆ ಇದೆ. ಇಲ್ಲಿ 650 ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರು ಒಗ್ಗೂಡಿ ಸಂಥಾಲಿ ಸೀರೆಗಳಿಗೆ  ಪುನರುಜ್ಜೀವನ ನೀಡಿದ್ದಾರೆ. ಈಗ ಈ ಮಹಿಳೆಯರು ಪ್ರತಿ ತಿಂಗಳು ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ. ಅವರು ಕೇವಲ ಬಟ್ಟೆಗಳನ್ನು ತಯಾರಿಸುತ್ತಿಲ್ಲ, ತಮ್ಮದೇ  ಗುರುತನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಬಿಹಾರದ ನಳಂದದ ನವೀನ್ ಕುಮಾರ್ ಅವರ ಸಾಧನೆಯೂ ಸ್ಪೂರ್ತಿದಾಯಕವಾಗಿದೆ. ಅವರ ಕುಟುಂಬವು ತಲೆಮಾರುಗಳಿಂದ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಆದರೆ ಸಂತೋಷದಾಯಕ ವಿಷಯವೆಂದರೆ, ಅವರ ಕುಟುಂಬವು ಈಗ ಈ ಕ್ಷೇತ್ರದಲ್ಲಿ ಆಧುನಿಕತೆಯನ್ನೂ ಅಳವಡಿಸಿಕೊಂಡಿದೆ. ಈಗ ಅವರ ಮಕ್ಕಳು ಕೈಮಗ್ಗ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ದೊಡ್ಡ ಬ್ರ್ಯಾಂಡ್‌ಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬದಲಾವಣೆ ಕೇವಲ ಒಂದು ಕುಟುಂಬದ್ದಲ್ಲ, ಸುತ್ತಮುತ್ತಲಿನ ಅನೇಕ ಕುಟುಂಬಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.

ಸ್ನೇಹಿತರೇ,

ಜವಳಿ ಭಾರತದ ಕೇವಲ ಒಂದು ವಲಯ ಮಾತ್ರವಲ್ಲ. ಇದು ನಮ್ಮ ಸಾಂಸ್ಕೃತಿಕ ವೈವಿಧ್ಯತೆಗೆ ಒಂದು ಪ್ರತಿಬಿಂಬವಾಗಿದೆ. ಇಂದು ಜವಳಿ ಮತ್ತು ಸಿದ್ಧ ಉಡುಪುಗಳ  ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ, ಮತ್ತು ಈ ಬೆಳವಣಿಗೆಯ ಅತ್ಯಂತ ಅದ್ಭುತವಾದ ವಿಷಯವೆಂದರೆ - ಹಳ್ಳಿಗಳ ಮಹಿಳೆಯರು, ನಗರಗಳ ವಿನ್ಯಾಸಕರು, ವೃದ್ಧ ನೇಕಾರರು ಮತ್ತು ನಮ್ಮ ಯುವ ಉದ್ಯಮಿಗಳು ಒಟ್ಟಾಗಿ ಇದನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಇಂದು ಭಾರತದಲ್ಲಿ 3000 ಕ್ಕೂ ಹೆಚ್ಚು ಜವಳಿ ನವೋದ್ಯಮಗಳು ಸಕ್ರಿಯವಾಗಿವೆ. ಅನೇಕ ನವೋದ್ಯಮಗಳು ಭಾರತದ ಕೈಮಗ್ಗಕ್ಕೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿವೆ. ಸ್ನೇಹಿತರೇ, 2047 ರ ಅಭಿವೃದ್ಧಿ ಹೊಂದಿದ ಭಾರತದ ಪಥವು ಸ್ವಾವಲಂಬನೆಯ ಮೂಲಕ ಹಾದು ಹೋಗಲಿದೆ ಮತ್ತು 'ಸ್ವಾವಲಂಬಿ ಭಾರತ'ದ ದೊಡ್ಡ ಆಧಾರವೆಂದರೆ - ‘Vocal for Local’. ಯಾವ ವಸ್ತುಗಳು ಭಾರತದಲ್ಲಿ ತಯಾರಾಗಿವೆಯೋ, ಅದನ್ನು ತಯಾರಿಸಲು ಯಾವ ಭಾರತೀಯನು  ಬೆವರು ಸುರಿಸಿದ್ದಾನೋ
ಅಂಥಾ ವಸ್ತುಗಳನ್ನು ಮಾತ್ರ ಖರೀದಿಸಿ ಮತ್ತು ಮಾರಾಟ ಮಾಡಿ. ಇದು ನಮ್ಮ ಸಂಕಲ್ಪವಾಗಿರಬೇಕು.

ನನ್ನ ಪ್ರಿಯ ದೇಶವಾಸಿಗಳೇ,

ಭಾರತದ ವೈವಿಧ್ಯತೆಯ ಅತ್ಯಂತ ಸುಂದರವಾದ ನೋಟ ನಮ್ಮ ಜಾನಪದ ಹಾಡುಗಳು ಮತ್ತು ಸಂಪ್ರದಾಯಗಳಲ್ಲಿ ಕಂಡುಬರುತ್ತದೆ ಮತ್ತು ಇದರ ಒಂದು ಭಾಗವಾಗಿದೆ ನಮ್ಮ ಭಜನೆಗಳು ಮತ್ತು ಕೀರ್ತನೆಗಳು. ಆದರೆ ಕೀರ್ತನೆಯ ಮೂಲಕ ಜನರಿಗೆ ಕಾಡ್ಗಿಚ್ಚಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು, ನೀವು ಎಂದಾದರೂ ಕೇಳಿದ್ದೀರಾ? ನಿಮಗೆ ನಂಬಿಕೆ ಬಾರದೇ ಇರಬಹುದು, ಆದರೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಒಂದು ಅದ್ಭುತ ಕೆಲಸ ನಡೆಯುತ್ತಿದೆ. ಇಲ್ಲಿ ರಾಧಾಕೃಷ್ಣ ಸಂಕೀರ್ತನಾ ಮಂಡಳಿ ಎಂಬ ತಂಡವಿದೆ. ಭಕ್ತಿಯ ಜೊತೆಗೆ ಈ ಗುಂಪು, ಪರಿಸರ ಸಂರಕ್ಷಣೆಯ ಮಂತ್ರವನ್ನೂ ಜಪಿಸುತ್ತಿದೆ. ಈ ಉಪಕ್ರಮದ ಹಿಂದಿನ ಸ್ಫೂರ್ತಿ - ಪ್ರಮೀಳಾ ಪ್ರಧಾನ್ ಅವರು. ಕಾಡುಗಳು ಮತ್ತು ಪರಿಸರವನ್ನು ರಕ್ಷಿಸಲು, ಸಾಂಪ್ರದಾಯಿಕ ಹಾಡುಗಳಿಗೆ ಹೊಸ ಸಾಹಿತ್ಯ ಮತ್ತು ಹೊಸ ಸಂದೇಶಗಳನ್ನು ಸೇರಿಸಿದರು. ಅವರ ತಂಡ ಹಳ್ಳಿ-ಹಳ್ಳಿಗೂ ತೆರಳಿ, ಕಾಡ್ಗಿಚ್ಚಿನಿಂದ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಹಾಡುಗಳ ಮೂಲಕ ಜನರಿಗೆ ವಿವರಿಸಿದರು. ಈ ಉದಾಹರಣೆಯು, ನಮ್ಮ ಜಾನಪದ ಸಂಪ್ರದಾಯಗಳು ಹಿಂದಿನ ಕಾಲಕ್ಕೆ ಸೇರಿದ ವಿಷಯಗಳಲ್ಲ, ಬದಲಿಗೆ, ಅವುಗಳಲ್ಲಿ ಇನ್ನೂ ಸಮಾಜಕ್ಕೆ ನಿರ್ದೇಶನ ನೀಡುವ ಶಕ್ತಿ ಇದೆ ಎಂಬುದು ಸಾಬೀತಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಹಬ್ಬಗಳು ಮತ್ತು ನಮ್ಮ ಸಂಪ್ರದಾಯಗಳು ಭಾರತೀಯ ಸಂಸ್ಕೃತಿಯ ಬಹು ದೊಡ್ಡ ಆಧಾರವಾಗಿದೆ ಆದರೆ, ನಮ್ಮ ಸಂಸ್ಕೃತಿಯ ಜೀವಂತಿಕೆಯ ಮತ್ತೊಂದು ಅಂಶವೂ ಇದೆ – ಈ ಅಂಶವೆಂದರೆ ನಮ್ಮ ವರ್ತಮಾನ ಮತ್ತು ನಮ್ಮ ಇತಿಹಾಸ ದಾಖಲಿಸುವುದನ್ನು ಮುಂದುವರಿಸುವುದು. ಶತಮಾನಗಳಿಂದಲೂ ಹಸ್ತಪ್ರತಿಗಳ ರೂಪದಲ್ಲಿ ರಕ್ಷಿಸಲಾಗಿರುವ ಜ್ಞಾನವೇ ನಮ್ಮ ನಿಜವಾದ ಶಕ್ತಿ. ಈ ಹಸ್ತಪ್ರತಿಗಳಲ್ಲಿ, ವಿಜ್ಞಾನವಿದೆ, ಚಿಕಿತ್ಸಾ ಪದ್ಧತಿಗಳಿವೆ, ಸಂಗೀತವಿದೆ, ತತ್ವಶಾಸ್ತ್ರವಿದೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಕುಲದ ಭವಿಷ್ಯವನ್ನು ಉಜ್ವಲಗೊಳಿಸಬಹುದಾದ ಚಿಂತನೆಯೂ ಅಡಗಿದೆ. ಸ್ನೇಹಿತರೇ, ಈ ಅಪ್ರತಿಮ ಜ್ಞಾನವನ್ನು, ಈ ಪರಂಪರೆಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಕಾಲಘಟ್ಟದಲ್ಲೂ ಇಂತಹ ಕೆಲಸವನ್ನು ತಮ್ಮ ಸಾಧನೆಯನ್ನಾಗಿಸಿಕೊಂಡ ವ್ಯಕ್ತಿಗಳಿದ್ದಾರೆ. ಅಂತಹ ಪ್ರೇರಣಾದಾಯಕ ವ್ಯಕ್ತಿತ್ವವುಳ್ಳ ಓರ್ವ ವ್ಯಕ್ತಿಯೇ – ತಮಿಳು ನಾಡಿನ ತಂಜಾವೂರಿನ ನಿವಾಸಿಯಾಗಿರುವ ಮಣಿ ಮಾರನ್. ಇಂದಿನ ಪೀಳಿಗೆಯವರು ತಮಿಳು ಭಾಷೆಯಲ್ಲಿರುವ ಹಸ್ತಪ್ರತಿಗಳನ್ನು ಓದುವುದನ್ನು ಕಲಿಯದೇ ಇದ್ದರೆ, ಮುಂಬರುವ ದಿನಗಳಲ್ಲಿ ಈ ಅಮೂಲ್ಯ, ಅಪೂರ್ವ ಸಂಪತ್ತು ಕಳೆದುಹೋಗುತ್ತದೆ ಎಂದು ಅವರು ಯೋಚಿಸಿದರು.  ಆದ್ದರಿಂದ ಅವರು ಸಂಜೆ ತರಗತಿಗಳನ್ನು ಪ್ರಾರಂಭಿಸಿದರು. ಅಲ್ಲಿಗೆ ವಿದ್ಯಾರ್ಥಿಗಳು, ಉದ್ಯೋಗ ಮಾಡುವ ಯುವಜನರು, ಸಂಶೋಧಕರು, ಎಲ್ಲರೂ ಬಂದು ಕಲಿಯಲಾರಂಭಿಸಿದರು. “ತಮಿಳ್ ಸುವಾದಿಯಿಯಾಲ್” ಅಂದರೆ ತಾಳೆ ಗರಿಯ ಹಸ್ತಪ್ರತಿಗಳನ್ನು ಓದುವ ಮತ್ತು ಅರ್ಥ ಮಾಡಿಕೊಳ್ಳುವ ವಿಧಿ ವಿಧಾನಗಳನ್ನು ಮಣಿ ಮಾರನ್ ಜನರಿಗೆ ಕಲಿಸಿದರು. ಇಂದು ಹಲವು ಪ್ರಯತ್ನಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಈ ವಿದ್ಯೆಯಲ್ಲಿ ಪ್ರವೀಣರಾಗಿದ್ದಾರೆ. ಕೆಲವು ವಿದ್ಯಾರ್ಥಿಗಳಂತೂ ಈ ಹಸ್ತಪ್ರತಿಗಳ ಆಧಾರದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯ ಕುರಿತಂತೆ ಸಂಶೋಧನೆಯನ್ನು ಆರಂಭಿಸಿದ್ದಾರೆ. ಸ್ನೇಹಿತರೆ, ಯೋಚಿಸಿ ನೋಡಿ, ಒಂದುವೇಳೆ ಇಂತಹ ಪ್ರಯತ್ನಗಳು ದೇಶಾದ್ಯಂತ ನಡೆದರೆ, ನಮ್ಮ ಪ್ರಾಚೀನ ಜ್ಞಾನ ಕೇವಲ ಗೋಡೆಗಳ ನಡುವೆ ಬಂಧಿಯಾಗಿರುವುದಿಲ್ಲ, ಅವು ಮುಂದಿನ ಪೀಳಿಗೆಯ ಚೈತನ್ಯದ ಭಾಗವೇ ಆಗಿರುತ್ತದೆ. ಇದೇ ಚಿಂತನೆಯಿಂದ ಪ್ರೇರಿತವಾಗಿ, ಭಾರತ ಸರ್ಕಾರವು ಈ ವರ್ಷದ ಆಯವ್ಯಯದಲ್ಲಿ ‘ಜ್ಞಾನ ಭಾರತಂ ಮಿಶನ್’ ಎಂಬ ಒಂದು ಐತಿಹಾಸಿಕ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನದ ಅಡಿಯಲ್ಲಿ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲಾಗುವುದು. ನಂತರ ಒಂದು ರಾಷ್ಟ್ರೀಯ ಡಿಜಿಟಲ್ ರೆಪೋಸಿಟರಿ ರಚಿಸಲಾಗುವುದು, ಆಗ ವಿಶ್ವಾದ್ಯಂತದ ವಿದ್ಯಾರ್ಥಿಗಳು, ಸಂಶೋಧಕರು, ಭಾರತದ ಜ್ಞಾನದ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಬಹುದು. ನೀವು ಕೂಡಾ ಅಂತಹ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರೆ, ಅಥವಾ ತೊಡಗಿಸಿಕೊಳ್ಳಲು ಬಯಸಿದರೆ, ಮೈ ಗೌ ಅಥವಾ ಸಂಸ್ಕೃತಿ ಸಚಿವಾಲಯವನ್ನು ಖಂಡಿತವಾಗಿಯೂ ಸಂಪರ್ಕಿಸಿ, ಏಕೆಂದರೆ ಇದು ಕೇವಲ ಹಸ್ತಪ್ರತಿ ಮಾತ್ರವಲ್ಲ, ನಾವು ಮುಂಬರುವ ಪೀಳಿಗೆಗಳಿಗೆ ಕಲಿಸಬೇಕಾದ ಭಾರತದ ಆತ್ಮದ ಅಧ್ಯಾಯಗಳಾಗಿವೆ.

ನನ್ನ ಪ್ರೀತಿಯ ದೇಶಬಾಂಧವರೇ,

ಒಂದುವೇಳೆ ನಿಮ್ಮ ಸುತ್ತ ಮುತ್ತ ಎಷ್ಟು ವಿಧದ ಹಕ್ಕಿಗಳಿವೆ, ಪಕ್ಷಿಗಳಿವೆ ಎಂದು ಕೇಳಿದರೆ – ನೀವು ಏನು ಹೇಳುವಿರಿ? ಬಹುಶಃ ನಿಮ್ಮ ಉತ್ತರ ಹೀಗಿರಬಹುದು – ನನಗೆ ಪ್ರತಿ ದಿನ 5-6 ಪಕ್ಷಿಗಳು ಕಾಣಸಿಗುತ್ತವೆ ಅಥವಾ ಪಕ್ಷಿಗಳು ಕಂಡುಬಂದರೂ ಕೆಲವು ತಿಳಿದಿರುವ ಮತ್ತು ಕೆಲವು ತಿಳಿಯದ ಜಾತಿಯ ಪಕ್ಷಿಗಳಾಗಿರುತ್ತವೆ. ಆದರೆ, ನಮ್ಮ ಸುತ್ತ ಮುತ್ತ ಯಾವ ಯಾವ ಜಾತಿಯ ಪಕ್ಷಿಗಳು ವಾಸಿಸುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಆಸಕ್ತಿಕರ ವಿಷಯವಾಗಿರುತ್ತದೆ. ಇತ್ತೀಚೆಗೆ ಇಂತಹ ಅದ್ಭುತ ಪ್ರಯತ್ನವೊಂದನ್ನು ಮಾಡಲಾಗಿದೆ, ಎಲ್ಲೆಂದರೆ – ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ. ಈ ಪ್ರದೇಶ ತನ್ನ ಘೇಂಡಾಮೃಗಗಳಿಗಾಗಿ ಹೆಸರುವಾಸಿಯಾಗಿದೆ – ಆದರೆ ಈ ಬಾರಿ ಇಲ್ಲಿಯ ಹುಲ್ಲುಗಾವಲು ಹಾಗೂ ಅದರಲ್ಲಿ ವಾಸಿಸುವ ಪಕ್ಷಿಗಳ ವಿಷಯ ಚರ್ಚೆಯ ಅಂಶವಾಗಿದೆ. ಇಲ್ಲಿ ಪ್ರಥಮ ಬಾರಿಗೆ ಹುಲ್ಲುಗಾವಲು ಪಕ್ಷಿಗಳ ಗಣತಿ ನಡೆದಿದೆ. ಈ ಪಕ್ಷಿಗಣತಿಯ ಕಾರಣದಿಂದಾಗಿ 40 ಕ್ಕೂ ಅಧಿಕ ಪಕ್ಷಿ ಪ್ರಬೇಧಗಳನ್ನು ಗುರುತಿಸಲಾಗಿದೆ ಎಂದು ತಿಳಿದು ನಿಮಗೆ ಸಂತಸವಾಗುತ್ತದೆ. ಇವುಗಳ ಪೈಕಿ ಕೆಲವು ಅಪರೂಪದ ಪಕ್ಷಿಗಳೂ ಸೇರಿವೆ. ಇಷ್ಟೊಂದು ಪಕ್ಷಿಗಳನ್ನು ಹೇಗೆ ಗುರುತಿಸಲಾಯಿತೆಂದು ನಿಮಗೆ ಆಶ್ಚರ್ಯವೆನಿಸಿಬಹುದು. ಇದರಲ್ಲಿ ತಂತ್ರಜ್ಞಾನ ಅದ್ಭುತಗಳನ್ನು ಮಾಡಿದೆ. ಪಕ್ಷಿಗಣತಿ ಮಾಡಿದ ತಂಡವು ಧ್ವನಿ ದಾಖಲಿಸುವ ಯಂತ್ರಗಳನ್ನು ಅಳವಡಿಸಿತು. ನಂತರ ಕಂಪ್ಯೂಟರ್ ನಲ್ಲಿ ಆ ಸ್ವರಗಳನ್ನು ವಿಶ್ಲೇಷಿಸಲಾಯಿತು, ಕೃತಕ ಬುದ್ಧಿಮತ್ತೆಯನ್ನು ಬಳಸಲಾಯಿತು. ಕೇವಲ ಧ್ವನಿಗಳಿಂದಲೇ ಪಕ್ಷಿಗಳನ್ನು ಗುರುತಿಸಲಾಯಿತು – ಅದು ಕೂಡಾ ಅವುಗಳಿಗೆ ತೊಂದರೆ ನೀಡದಂತೆಯೇ. ಯೋಚಿಸಿ ನೋಡಿ! ತಂತ್ರಜ್ಞಾನ ಮತ್ತು ಸೂಕ್ಷ್ಮಸಂವೇದನಾಶೀಲತೆ ಒಂದುಗೂಡಿದಾಗ, ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಸುಲಭ ಹಾಗೂ ಗಾಢವಾಗುತ್ತದೆ. ಇಂತಹ ಪ್ರಯತ್ನಗಳನ್ನು ನಾವು ಉತ್ತೇಜಿಸಬೇಕು, ತನ್ಮೂಲಕ ನಾವು ನಮ್ಮ ಜೀವ ವೈವಿಧ್ಯತೆಯನ್ನು ಗುರುತಿಸಬಹುದು ಮತ್ತು ಮುಂದಿನ ಪೀಳಿಗೆಗಳಿಗೆ ಅವುಗಳನ್ನು ಉಳಿಸಬಹುದು.

ನನ್ನ ಪ್ರೀತಿಯ ದೇಶಬಾಂಧವರೇ,

ಕೆಲವೊಮ್ಮೆ ಎಲ್ಲಿ ಗಾಡಾಂಧಕಾರ ತುಂಬಿರುತ್ತದೆಯೋ ಅಲ್ಲಿಯೇ ಉಜ್ವಲ ಬೆಳಕು ಮೂಡಿ ಬರುತ್ತದೆ. ಇಂತಹದ್ದೇ ಒಂದು ಉದಾಹರಣೆ ಜಾರ್ಖಂಡ್ ನ ಗುಮಲಾ ಜಿಲ್ಲೆಯದ್ದು. ಈ ಪ್ರದೇಶ ಮಾವೋವಾದಿ ಹಿಂಸಾಚಾರಕ್ಕಾಗಿ ಹೆಸರಾಗಿದ್ದ ಕಾಲವೊಂದಿತ್ತು. ಬಾಸಿಯಾ ಬ್ಲಾಕ್ ನ ಗ್ರಾಮ ನಿರ್ಜನವಾಗುತ್ತಿತ್ತು. ಜನರು ಭಯದ ನೆರಳಿನಲ್ಲೇ ಬದುಕುತ್ತಿದ್ದರು. ಉದ್ಯೋಗಾವಕಾಶದ ಸಾಧ್ಯತೆಯೇ ಕಂಡುಬರುತ್ತಿರಲಿಲ್ಲ. ಹೊಲಗಳು ಬೆಳೆ ಬೆಳೆಯದೆ ಒಣಗಿದ್ದವು. ಯುವಜನರು ವಲಸೆ ಹೋಗುತ್ತಿದ್ದರು, ಆದರೆ ನಂತರ ಒಂದು ಅತ್ಯಂತ ಶಾಂತ ಹಾಗೂ ಧೈರ್ಯದಿಂದ ತುಂಬಿದ ಬದಲಾವಣೆ ಆರಂಭವಾಯಿತು. ಓಂಪ್ರಕಾಶ್ ಸಾಹೂ ಹೆಸರಿನ ಯುವಕ ಹಿಂಸಾಚಾರದ ಮಾರ್ಗ ತೊರೆದು, ಮೀನು ಸಾಕಣೆ ಆರಂಭಿಸಿದನು.  ತನ್ನಂತಹ ಕೆಲವು ಸ್ನೇಹಿತರನ್ನು ಕೂಡಾ ಈ ರೀತಿ ಮಾಡಲು ಪ್ರೇರೇಪಿಸಿದನು. ಆತನ ಇಂತಹ ಪ್ರಯತ್ನಕ್ಕೆ ಫಲಿತಾಂಶವೂ ದೊರೆಯಿತು.  ಮೊದಲು ಬಂದುಕುಗಳನ್ನು ಹಿಡಿಯುತ್ತಿದ್ದ ಕೈಗಳು ಈಗ ಮೀನು ಹಿಡಿಯುವ ಬಲೆಗಳನ್ನು ಹಿಡಿದಿವೆ.

ಸ್ನೇಹಿತರೇ,

ಓಂಪ್ರಕಾಶ್ ಸಾಹೂ ಅವರ ಆರಂಭ ಸುಲಭವೇನೂ ಆಗಿರಲಿಲ್ಲ. ವಿರೋಧಿಗಳೂ ಇದ್ದರು, ಬೆದರಿಕೆಗಳನ್ನೂ ಎದುರಿಸಬೇಕಾಯಿತು, ಆದರೆ ಅವರ ಧೈರ್ಯಗೆಡಲಿಲ್ಲ. ‘ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ’ ಜಾರಿಗೆ ಬಂದಾಗ, ಅವರಿಗೆ ಹೊಸ ಬಲ ದೊರೆಯಿತು.  ಸರ್ಕಾರದಿಂದ ತರಬೇತಿ ದೊರೆಯಿತು, ಕೊಳ ನಿರ್ಮಿಸಲು ನೆರವು ದೊರೆಯಿತು, ನೋಡ ನೋಡುತ್ತಿದ್ದಂತೆಯೇ, ಗುಮಲಾದಲ್ಲಿ, ಮತ್ಸ್ಯ ಕ್ರಾಂತಿ ಆರಂಭವಾಗಿಬಿಟ್ಟಿತು. ಇಂದು ಬಾಸಿಯಾ ಬ್ಲಾಕ್ ನ 150 ಕ್ಕಿಂತಲೂ ಹೆಚ್ಚು ಕುಟುಂಬಗಳು ಮೀನು ಸಾಕಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಒಂದುಕಾಲದಲ್ಲಿ ನಕ್ಸಲೀಯ ಸಂಘಟನೆಯಲ್ಲಿದ್ದ ಅನೇಕರು ಈಗ ಗ್ರಾಮದಲ್ಲಿ ಗೌರವಾನ್ವಿತ ಜೀವನ ನಡೆಸುತ್ತಿದ್ದಾರೆ, ಮತ್ತು ಇತರರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ನಾವು ಸಾಗುವ ಮಾರ್ಗ ಸರಿಯಾಗಿದ್ದರೆ, ಮತ್ತು ಆತ್ಮವಿಶ್ವಾಸ ತುಂಬಿದ್ದರೆ, ಅತ್ಯಂತ ಕ್ಲಿಷ್ಠಕರ ಪರಿಸ್ಥಿತಿಗಳಲ್ಲಿ ಕೂಡಾ ಪ್ರಗತಿಯ ದೀಪ ಬೆಳಗಬಹುದು ಎಂಬುದನ್ನು ಗುಮಲಾದ ಈ ಪಯಣ ನಮಗೆ ಕಲಿಸುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ,

ಒಲಿಂಪಿಕ್ಸ್ ನಂತರ ಅತಿ ದೊಡ್ಡ ಕ್ರೀಡಾಕೂಟ ಆಯೋಜನೆ ಯಾವುದು ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಉತ್ತರವೆಂದರೆ - ‘World Police and Fire Games’. ವಿಶ್ವಾದ್ಯಂತದ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಭದ್ರತೆ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ನಡುವಿನ ಕ್ರೀಡಾ ಪಂದ್ಯಾವಳಿ. ಈ ಬಾರಿ ಈ ಕ್ರೀಡಾಕೂಟ ಅಮೆರಿಕಾದಲ್ಲಿ ನಡೆಯಿತು ಮತ್ತು ಇದರಲ್ಲಿ ಭಾರತ ಇತಿಹಾಸ ಸೃಷ್ಟಿಸಿತು. ಭಾರತ ಸುಮಾರು 600 ಪದಕಗಳನ್ನು ಗೆದ್ದಿತು. 71 ದೇಶಗಳ ಪೈಕಿ ನಾವು ಮೂರನೇ ಸ್ಥಾನಕ್ಕೆ ತಲುಪಿದೆವು. ಹಗಲು ರಾತ್ರಿ ದೇಶದ ರಕ್ಷಣೆಗೆಂದು ಸಿದ್ಧವಾಗಿ ನಿಂತಿರುವ ಈ ಸಮವಸ್ತ್ರಧಾರಿಗಳ ಪರಿಶ್ರಮಕ್ಕೆ ಫಲ ದೊರೆತಿದೆ. ನಮ್ಮ ಈ ಸ್ನೇಹಿತರು ಈಗ ಆಟದ ಮೈದಾನದಲ್ಲೂ ಧ್ವಜ ಹಾರಿಸುತ್ತಿದ್ದಾರೆ. ನಾನು ಎಲ್ಲಾ ಆಟಗಾರರು ಮತ್ತು ಕೋಚಿಂಗ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. 2029 ರಲ್ಲಿ ಈ ಕ್ರೀಡಾಕೂಟ ಭಾರತದಲ್ಲಿ ನಡೆಯಲಿದೆ ಎಂದು ತಿಳಿಯುವುದು ನಿಮಗೂ ಆಸಕ್ತಿದಾಯಕವಾಗಿರುತ್ತದೆ.ವಿಶ್ವದೆಲ್ಲೆಡೆಯಿಂದ ಆಟಗಾರರು ನಮ್ಮ ದೇಶಕ್ಕೆ ಬರಲಿದ್ದಾರೆ. ನಾವು ಅವರಿಗೆ ಭಾರತದ  ಆತಿಥ್ಯವನ್ನು ತೋರಿಸೋಣ, ನಮ್ಮ ಕ್ರೀಡಾ ಸಂಸ್ಕೃತಿಯ ಪರಿಚಯ ಮಾಡಿಕೊಡೋಣ.

ಸ್ನೇಹಿತರೇ,

ಕಳೆದ ಕೆಲವು ದಿನಗಳಲ್ಲಿ ನನಗೆ ಅನೇಕ ಯುವ ಆಟಗಾರರಿಂದ, ಮತ್ತು ಅವರ ಪೋಷಕರಿಂದ ಸಂದೇಶಗಳು ಬಂದಿವೆ. ಇವುಗಳಲ್ಲಿ ‘ಖೇಲೋ ಭಾರತ್ ನೀತಿ 2025’ ಬಗ್ಗೆ ಸಾಕಷ್ಟು ಮೆಚ್ಚುಗೆ ಸೂಚಿಸಲಾಗಿದೆ. ಈ ನೀತಿಯ ಉದ್ದೇಶ ಸ್ಪಷ್ಟವಾಗಿದೆ – ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡುವುದು. ಗ್ರಾಮಗಳು, ಬಡವರು ಮತ್ತು ಹೆಣ್ಣುಮಕ್ಕಳು ಈ ನೀತಿಯ ಪ್ರಾಧಾನ್ಯತೆ. ಶಾಲೆಗಳು ಮತ್ತು ಕಾಲೇಜುಗಳು ಈಗ ಕ್ರೀಡೆಯನ್ನು ದೈನಂದಿನ ಜೀವನದ ಭಾಗವಾಗಿಸುತ್ತವೆ. ಕ್ರೀಡೆಗಳಿಗೆ ಸಂಬಂಧಿಸಿದ ನವೋದ್ಯಮಗಳು, ಅವು ಕ್ರೀಡಾ ನಿರ್ವಹಣೆಯಿರಲಿ ಅಥವಾ ತಯಾರಿಕೆಯೊಂದಿಗೆ ಸಂಬಂಧಿಸಿದ್ದಿರಲಿ, - ಅವುಗಳಿಗೆ ಪ್ರತಿಯೊಂದು ರೀತಿಯ ನೆರವನ್ನು ನೀಡಲಾಗುತ್ತದೆ. ದೇಶದ ಯುವಜನತೆ ತಮ್ಮಲ್ಲೇ ತಯಾರಾದ ರಾಕೆಟ್, ಬ್ಯಾಟ್ ಮತ್ತು ಚೆಂಡಿನೊಂದಿಗೆ ಆಟವಾಡಿದಾಗ, ಸ್ವಾವಲಂಬನೆಯ ಅಭಿಯಾನಕ್ಕೆ ಎಷ್ಟೊಂದು ಶಕ್ತಿ ಬರುತ್ತದೆ ಎಂದು ಯೋಚಿಸಿ ನೋಡಿ. ಸ್ನೇಹಿತರೇ, ಆಟ, ತಂಡದ ಸ್ಫೂರ್ತಿಗೆ ಕಾರಣವಾಗುತ್ತದೆ. ಇದು ಆರೋಗ್ಯಪೂರ್ಣ, ಆತ್ಮವಿಶ್ವಾಸ ತುಂಬಿದ ಮತ್ತು ಬಲಿಷ್ಠ ಭಾರತ ನಿರ್ಮಾಣದ ಹಾದಿಯಾಗಿದೆ. ಆದ್ದರಿಂದ ಹೆಚ್ಚು ಆಟವಾಡಿ, ಹೆಚ್ಚು ಅರಳಿ.

ನನ್ನ ಪ್ರೀತಿಯ ದೇಶವಾಸಿಗಳೇ,

ಕೆಲವೊಮ್ಮೆ ಕೆಲವರಿಗೆ ಕೆಲಸ ಅಸಾಧ್ಯವೆಂದು ತೋರುತ್ತದೆ. ಈ ಕೆಲಸ ಸಾಧ್ಯವಾಗುತ್ತದೆಯೇ ಎನಿಸುತ್ತದೆ? ಆದರೆ, ದೇಶ ಒಂದು ಚಿಂತನೆಯೊಂದಿಗೆ ಒಗ್ಗಟ್ಟಾದರೆ, ಅಸಾಧ್ಯವೂ ಸಾಧ್ಯವಾಗುತ್ತದೆ. ‘ಸ್ವಚ್ಛ ಭಾರತ ಅಭಿಯಾನ’ ಇದಕ್ಕೆ ಅತಿ ದೊಡ್ಡ ಉದಾಹರಣೆಯಾಗಿದೆ. ಶೀಘ್ರದಲ್ಲೇ ಈ ಅಭಿಯಾನಕ್ಕೆ 11 ವರ್ಷಗಳು ಪೂರ್ಣಗೊಳ್ಳಲಿದೆ. ಆದರೆ, ಇದರ ಶಕ್ತಿ ಮತ್ತು ಇದರ ಅಗತ್ಯತೆ ಇಂದಿಗೂ ಹಾಗೆಯೇ ಇದೆ. ಈ 11 ವರ್ಷಗಳಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಒಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಜನರು ಇದನ್ನು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ ಮತ್ತು ನಿಜವಾದ ಜನ-ಭಾಗೀದಾರಿ ಎಂದರೆ ಇದೇ ಅಲ್ಲವೇ.

ಸ್ನೇಹಿತರೇ,

ಪ್ರತಿವರ್ಷ ನಡೆಯುವ ಸ್ವಚ್ಛತಾ ಸಮೀಕ್ಷೆಯು ಈ ಭಾವನೆಯನ್ನು ಮತ್ತಷ್ಟು ಬಲಪಡಿಸಿದೆ. ಈ ವರ್ಷ ದೇಶದ 4500 ಕ್ಕೂ ಅಧಿಕ ನಗರ ಮತ್ತು ಪಟ್ಟಣಗಳು ಈ ಅಭಿಯಾನದೊಂದಿಗೆ ಸೇರ್ಪಡೆಗೊಂಡಿವೆ. 15 ಕೋಟಿಗೂ ಅಧಿಕ ಜನರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇದು ಸಾಮಾನ್ಯ ಸಂಖ್ಯೆಯೇನಲ್ಲ. ಇದು ಸ್ವಚ್ಛ ಭಾರತದ ಧ್ವನಿಯಾಗಿದೆ.

ಸ್ನೇಹಿತರೇ,

ನಮ್ಮ ನಗರಗಳು ಮತ್ತು ಪಟ್ಟಣಗಳು ತಮ್ಮ ಅಗತ್ಯತೆಗಳು ಮತ್ತು ಪರಿಸರಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಅವುಗಳ ಪ್ರಭಾವ ಕೇವಲ ಈ ನಗರಗಳಿಗೆ ಮಾತ್ರಾ ಸೀಮಿತವಾಗಿಲ್ಲ, ಇಡೀ ದೇಶವೇ ಈ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಉತ್ತರಾಖಂಡದ ಕೀರ್ತಿನಗರ ಜನರು, ಬೆಟ್ಟಗುಡ್ಡಗಳಲ್ಲಿ ತ್ಯಾಜ್ಯ ನಿರ್ವಹಣೆಯ ಹೊಸ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಮಂಗಳೂರಿನಲ್ಲಿ ತಂತ್ರಜ್ಞಾನದಿಂದ ಸಾವಯವ ತ್ಯಾಜ್ಯ ನಿರ್ವಹಣೆಯ ಕೆಲಸ ನಡೆಯುತ್ತಿದೆ. ಅರುಣಾಚಲದಲ್ಲಿರುವ ಒಂದು ಸಣ್ಣ ಗ್ರಾಮ ರೋಯಿಂಗ್. ಇಲ್ಲಿನ ಜನರ ಆರೋಗ್ಯಕ್ಕೆ ತ್ಯಾಜ್ಯ ನಿರ್ವಹಣೆ ಎನ್ನುವುದು ಬಹು ದೊಡ್ಡ ಸವಾಲು ಎನಿಸಿದ್ದ ಕಾಲವೊಂದಿತ್ತು. ಇಲ್ಲಿನ ಜನರು ಇದರ ಜವಾಬ್ದಾರಿ ವಹಿಸಿಕೊಂಡರು. ‘ಹಸಿರು ರೋಯಿಂಗ್ ಉಪಕ್ರಮ (Green Roing Initiative)’ ಆರಂಭವಾಯಿತು ಮತ್ತು ರೀಸೈಕಲ್ ಮಾಡಿದ ತ್ಯಾಜ್ಯದಿಂದ ಇಡೀ ಒಂದು ಉದ್ಯಾನವನವನ್ನೇ ನಿರ್ಮಿಸಲಾಯಿತು. ಇದೇ ರೀತಿ ಕರಾಡ್ ನಲ್ಲಿ, ವಿಜಯವಾಡಾದಲ್ಲಿ ಜಲ ನಿರ್ವಹಣೆಯ ಹಲವಾರು ಹೊಸ ಉದಾಹರಣೆಗಳಿವೆ. ಅಹಮದಾಬಾದ್ ನಲ್ಲಿ  ನದಿ ದಂಡೆಯ ಸ್ವಚ್ಛತೆಯು ಎಲ್ಲರ ಗಮನ ಸೆಳೆದಿದೆ.

ಸ್ನೇಹಿತರೇ,

ಭೋಪಾಲ್ ನ ಒಂದು ತಂಡದ ಹೆಸರು ‘ಸಕಾರಾತ್ಮಕ ಚಿಂತನೆ’ ಎಂಬುದಾಗಿದೆ. ಇದರಲ್ಲಿ 200 ಮಹಿಳೆಯರಿದ್ದಾರೆ. ಇವರು ಕೇವಲ ಸ್ವಚ್ಛತೆಯ ಕೆಲಸ ಮಾಡುವುದು ಮಾತ್ರವಲ್ಲ, ಆಲೋಚನಾ ವಿಧಾನವನ್ನೂ ಬದಲಾಯಿಸುತ್ತಾರೆ. ಒಂದುಗೂಡಿ ನಗರದ 17 ಉದ್ಯಾನವನಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆಯ ಚೀಲಗಳನ್ನು ವಿತರಿಸುವುದು ಮಾಡುತ್ತಾರೆ. ಇವರು ಮಾಡುವ ಪ್ರತಿ ಕೆಲಸವೂ ಒಂದು ಸಂದೇಶವೇ ಆಗಿದೆ. ಇಂತಹ ಪ್ರಯತ್ನಗಳ ಕಾರಣದಿಂದಲೇ ಭೋಪಾಲ್ ಕೂಡಾ ಈಗ ಸ್ವಚ್ಛತಾ ಸಮೀಕ್ಷೆಯಲ್ಲಿ ಸಾಕಷ್ಟು ಮುಂದೆ ಬಂದಿದೆ. ಲಕ್ನೋದ ಗೋಮತಿ ನದಿ ತಂಡವನ್ನು ಉಲ್ಲೇಖಿಸುವುದು ಕೂಡಾ ಅಗತ್ಯವಾಗಿದೆ. 10 ವರ್ಷಗಳಿಂದ ಪ್ರತಿ ಭಾನುವಾರದಂದು ಅವಿಶ್ರಾಂತವಾಗಿ, ನಿಲ್ಲದೇ, ಈ ತಂಡದ ಜನರು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಛತ್ತೀಸ್ ಗಢದ ಬಿಲ್ಹಾದ ಉದಾಹರಣೆ ಕೂಡಾ ಬಹಳ ಆಸಕ್ತಿಕರವಾಗಿದೆ. ಇಲ್ಲಿನ ಮಹಿಳೆಯರಿಗೆ ತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ನೀಡಲಾಯಿತು, ಮತ್ತು ಅವರೆಲ್ಲರೂ ಸೇರಿ, ನಗರದ ಚಿತ್ರಣವನ್ನೇ ಬದಲಾಯಿಸಿಬಿಟ್ಟರು. ಗೋವಾದ ಪಣಜಿ ನಗರದ ಉದಾಹರಣೆ ಕೂಡಾ ಪ್ರೇರಣಾದಾಯಕವಾಗಿದೆ. ಅಲ್ಲಿ ತ್ಯಾಜ್ಯವನ್ನು 16 ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ ಮತ್ತು ಇದರ ನೇತೃತ್ವವನ್ನು ಕೂಡಾ ಮಹಿಳೆಯರೇ ವಹಿಸಿದ್ದಾರೆ. ಪಣಜಿಗೆ ರಾಷ್ಟ್ರಪತಿ ಪುರಸ್ಕಾರ ಕೂಡಾ ದೊರೆತಿದೆ. ಸ್ನೇಹಿತರೇ, ಸ್ವಚ್ಛತೆ ಎನ್ನುವುದು ಕೇವಲ ಒಂದು ಸಮಯದ, ಒಂದು ದಿನದ ಕೆಲಸವಲ್ಲ. ನಾವು ವರ್ಷದಲ್ಲಿ ಪ್ರತಿ ದಿನ, ಪ್ರತಿ ಕ್ಷಣ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು, ಆಗಲೇ ದೇಶ ಸ್ವಚ್ಛವಾಗಿರುತ್ತದೆ.

ಸ್ನೇಹಿತರೇ,

ಶ್ರಾವಣ ಮಾಸದ ವರ್ಷಧಾರೆಯ ನಡುವೆ, ದೇಶ ಮತ್ತೊಮ್ಮೆ ಹಬ್ಬಗಳ ಬಣ್ಣಗಳಿಂದ ಅಲಂಕೃತಗೊಳ್ಳುತ್ತಿದೆ. ಇಂದು ಹರಿಯಾಲಿ ತೀಜ್, ಮತ್ತೆ ಬರಲಿದೆ ನಾಗ ಪಂಚಮಿ, ಮತ್ತು ರಕ್ಷಾ ಬಂಧನ್, ನಂತರ ನಮ್ಮ ತುಂಟ ಕೃಷ್ಣನ ಹುಟ್ಟು ಹಬ್ಬದ ಆಚರಣೆ ಜನ್ಮಾಷ್ಠಮಿ. ಈ ಎಲ್ಲಾ ಹಬ್ಬಗಳು ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡಿವೆ, ಇದು ಪ್ರಕೃತಿಯೊಂದಿಗೆ ನಮ್ಮ ನಂಟು ಮತ್ತು ಸಮತೋಲನದ ಸಂದೇಶವನ್ನೂ ನೀಡುತ್ತವೆ. ನಿಮ್ಮೆಲ್ಲರಿಗೂ ಈ ಹಬ್ಬಗಳ ಶುಭ ಸಂದರ್ಭದಲ್ಲಿ ಶುಭ ಹಾರೈಕೆಗಳು. ನನ್ನ ಪ್ರೀತಿಯ ಸ್ನೇಹಿತರೇ, ನಿಮ್ಮ ಚಿಂತನೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಿರಿ. ಮುಂದಿನ ತಿಂಗಳು ದೇಶವಾಸಿಗಳ ಇನ್ನಷ್ಟು ಸಾಧನೆಗಳು ಮತ್ತು ಸ್ಫೂರ್ತಿಯ ವಿಚಾರಗಳೊಂದಿಗೆ ಪುನಃ ಭೇಟಿಯಾಗೋಣ. ನಿಮ್ಮ ಬಗ್ಗೆ ಕಾಳಜಿ ಇರಲಿ.

ಅನಂತಾನಂತ ಧನ್ಯವಾದಗಳು.

 

*****


(Release ID: 2149005)