ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 18 JUL 2025 5:57PM by PIB Bengaluru

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ. ಸಿ.ವಿ. ಆನಂದ ಬೋಸ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಹರ್ದೀಪ್ ಸಿಂಗ್ ಪುರಿ ಜೀ, ಶಾಂತನು ಠಾಕೂರ್ ಜೀ ಮತ್ತು ಸುಕಾಂತ ಮಜುಂದಾರ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಸೌಮಿಕ್ ಭಟ್ಟಾಚಾರ್ಯ ಜೀ ಮತ್ತು ಜ್ಯೋತಿರ್ಮಯ್ ಸಿಂಗ್ ಮಹತೋ ಜೀ, ಇಲ್ಲಿರುವ ಜನಪ್ರತಿನಿಧಿಗಳೆ, ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಮಸ್ಕಾರ!

ನಮ್ಮ ದುರ್ಗಾಪುರವು ಉಕ್ಕಿನ ನಗರವಾಗಿರುವ ಜತೆಗೆ, ಭಾರತದ ಕಾರ್ಯ (ಉದ್ಯೋಗ) ಪಡೆಯ ಪ್ರಮುಖ ಕೇಂದ್ರವೂ ಆಗಿದೆ. ದುರ್ಗಾಪುರವು ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಂದು ಆ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಅವಕಾಶ ನಮಗೆ ಸಿಕ್ಕಿದೆ. ಸ್ವಲ್ಪ ಸಮಯದ ಹಿಂದೆ, 5,400 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಗಳು ಈ ಪ್ರದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ. ಅವು ಅನಿಲ ಆಧಾರಿತ ಸಾರಿಗೆ ವ್ಯವಸ್ಥೆ ಮತ್ತು ಅನಿಲ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುತ್ತವೆ. ಇಂದು ಪ್ರಾರಂಭಿಸಲಾದ ಯೋಜನೆಗಳು ಈ ಉಕ್ಕಿನ ನಗರದ ಗುರುತನ್ನು ಮತ್ತಷ್ಟು ಬಲಪಡಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಉಪಕ್ರಮಗಳು ಪಶ್ಚಿಮ ಬಂಗಾಳವು "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಎಂಬ ಮಂತ್ರದಡಿ ಮುಂದುವರಿಯಲು ಸಹಾಯ ಮಾಡುತ್ತದೆ. ಇವು ಇಲ್ಲಿನ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಈ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಇಂದು ಜಗತ್ತು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ನಿರ್ಣಯಗಳ ಬಗ್ಗೆ ಮಾತನಾಡುತ್ತಿದೆ. ಇದರ ಹಿಂದೆ ಭಾರತದಾದ್ಯಂತ ಕಾಣುತ್ತಿರುವ ಪರಿವರ್ತನೆಗಳಿವೆ - 'ವಿಕಸಿತ ಭಾರತ'ಕ್ಕೆ ಅಡಿಪಾಯ ಹಾಕುತ್ತಿರುವ ರೂಪಾಂತರಗಳು. ಈ ಬದಲಾವಣೆಗಳ ಪ್ರಮುಖ ಅಂಶವೆಂದರೆ, ಭಾರತದ ಮೂಲಸೌಕರ್ಯ. ನಾನು ಮೂಲಸೌಕರ್ಯದ ಬಗ್ಗೆ ಮಾತನಾಡುವಾಗ ನಾನು ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಸೇರಿಸುತ್ತೇನೆ. ಬಡವರಿಗೆ 4 ಕೋಟಿಗೂ ಹೆಚ್ಚು ಕಾಯಂ ಮನೆಗಳು, ಕೋಟ್ಯಂತರ ಶೌಚಾಲಯಗಳು, 12 ಕೋಟಿಗೂ ಹೆಚ್ಚಿನ ನಲ್ಲಿ ನೀರಿನ ಸಂಪರ್ಕಗಳು, ಸಾವಿರಾರು ಕಿಲೋಮೀಟರ್ ಹೊಸ ರಸ್ತೆಗಳು, ಹೊಸ ಹೆದ್ದಾರಿಗಳು, ಹೊಸ ರೈಲು ಮಾರ್ಗಗಳು, ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳು, ಪ್ರತಿ ಮನೆ ಮತ್ತು ಹಳ್ಳಿಯನ್ನು ತಲುಪುವ ಅಂತರ್ಜಾಲ ಪ್ರವೇಶ - ಈ ಎಲ್ಲಾ ಆಧುನಿಕ ಮೂಲಸೌಕರ್ಯಗಳು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯಕ್ಕೂ ಪ್ರಯೋಜನ ನೀಡುತ್ತಿವೆ.

ಸ್ನೇಹಿತರೆ,

ಪಶ್ಚಿಮ ಬಂಗಾಳದಲ್ಲಿ ರೈಲು ಸಂಪರ್ಕದ ಅಭೂತಪೂರ್ವ ಕೆಲಸ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ವಂದೇ ಭಾರತ್ ರೈಲುಗಳು ಓಡುತ್ತಿರುವ ರಾಜ್ಯಗಳಲ್ಲಿ ಬಂಗಾಳವೂ ಒಂದಾಗಿದೆ. ಕೋಲ್ಕತಾ ಮೆಟ್ರೋ ವೇಗವಾಗಿ ವಿಸ್ತರಿಸುತ್ತಿದೆ. ಇಲ್ಲಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ, ಮಾರ್ಗ ವಿಸ್ತರಣೆ ಮತ್ತು ವಿದ್ಯುದೀಕರಣ ಕೆಲಸಗಳು ವೇಗವಾಗಿ ಪ್ರಗತಿಯಲ್ಲಿವೆ. ಅನೇಕ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಇದರ ಜತೆಗೆ, ಹೆಚ್ಚಿನ ಸಂಖ್ಯೆಯ ರೈಲ್ವೆ ಮೇಲ್ಸೇತುವೆಗಳನ್ನು ಸಹ ನಿರ್ಮಿಸಲಾಗುತ್ತಿದೆ. ಇಂದು, ಪಶ್ಚಿಮ ಬಂಗಾಳಕ್ಕೆ ಇನ್ನೂ 2 ರೈಲ್ವೆ ಮೇಲ್ಸೇತುವೆಗಳನ್ನು ನೀಡಲಾಗಿದೆ. ಈ ಎಲ್ಲಾ ಪ್ರಯತ್ನಗಳು ಬಂಗಾಳ ಜನರ ಜೀವನವನ್ನು ಗಮನಾರ್ಹವಾಗಿ ಸುಗಮಗೊಳಿಸುತ್ತವೆ.

ಸ್ನೇಹಿತರೆ,

ನಾವು ಇಲ್ಲಿನ ವಿಮಾನ ನಿಲ್ದಾಣವನ್ನು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯೊಂದಿಗೆ ಸಂಪರ್ಕಿಸಿದ್ದೇವೆ. ಕಳೆದ ವರ್ಷವೊಂದರಲ್ಲೇ, 500,000ಕ್ಕೂ ಹೆಚ್ಚು ಪ್ರಯಾಣಿಕರು ಇದರ ಮೂಲಕ ಪ್ರಯಾಣಿಸಿದ್ದಾರೆ. ಅಂತಹ ಮೂಲಸೌಕರ್ಯ ಅಭಿವೃದ್ಧಿಪಡಿಸಿದಾಗ, ಜನರು ಉತ್ತಮ ಸೌಲಭ್ಯಗಳಿಂದ ಪ್ರಯೋಜನ ಪಡೆಯುವುದಲ್ಲದೆ, ಸಾವಿರಾರು ಯುವಜನರು ಉದ್ಯೋಗವನ್ನು ಸಹ ಪಡೆಯುತ್ತಾರೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ಬಳಸುವ ಕಚ್ಚಾ ವಸ್ತುಗಳ ಉತ್ಪಾದನೆ ಸಮಯದಲ್ಲಿ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೆ,

ಕಳೆದ 10–11 ವರ್ಷಗಳಲ್ಲಿ, ದೇಶದಲ್ಲಿ ಅನಿಲ ಸಂಪರ್ಕದ ಕುರಿತು ಮಾಡಿದ ಕೆಲಸಕ್ಕೆ ಸರಿಸಾಟಿಯೇ ಇಲ್ಲ. ಕಳೆದ ದಶಕದಲ್ಲಿ, ಎಲ್‌.ಪಿ.ಜಿ ಅನಿಲ ದೇಶದ ಪ್ರತಿಯೊಂದು ಮನೆ ತಲುಪಿದೆ, ಈ ಸಾಧನೆಯನ್ನು ಜಾಗತಿಕವಾಗಿ ಪ್ರಶಂಸಿಸಲಾಗಿದೆ. ನಾವು ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್‌ನ ದೃಷ್ಟಿಕೋನದ ಮೇಲೆ ಕೆಲಸ ಮಾಡಿದ್ದೇವೆ, ಪ್ರಧಾನ ಮಂತ್ರಿ ಉರ್ಜಾ ಗಂಗಾ ಯೋಜನೆ ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ಭಾರತದ 6 ರಾಜ್ಯಗಳಲ್ಲಿ ಅನಿಲ ಪೈಪ್‌ಲೈನ್‌ಗಳನ್ನು ಹಾಕಲಾಗುತ್ತಿದೆ. ಈ ರಾಜ್ಯಗಳಲ್ಲಿನ ಕೈಗಾರಿಕೆಗಳು ಮತ್ತು ಮನೆಗಳಿಗೆ ಕೈಗೆಟುಕುವ ಪೈಪ್ ಅನಿಲ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಅನಿಲ ಲಭ್ಯವಾದಾಗ ಮಾತ್ರ ಈ ರಾಜ್ಯಗಳಲ್ಲಿನ ವಾಹನಗಳು ಸಿ.ಎನ್‌.ಜಿಯಲ್ಲಿ ಚಲಿಸಲು ಸಾಧ್ಯವಾಗುತ್ತದೆ. ನಮ್ಮ ಕೈಗಾರಿಕೆಗಳು ಅನಿಲ ಆಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ದುರ್ಗಾಪುರದ ಕೈಗಾರಿಕಾ ಭೂಮಿ ಈಗ ರಾಷ್ಟ್ರೀಯ ಅನಿಲ ಗ್ರಿಡ್‌ನ ಭಾಗವಾಗಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇದು ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಈ ಯೋಜನೆಯ ಮೂಲಕ, ಪಶ್ಚಿಮ ಬಂಗಾಳದ ಸುಮಾರು 25ರಿಂದ 30 ಲಕ್ಷ ಮನೆಗಳು ಕೈಗೆಟುಕುವ ದರದಲ್ಲಿ ಪೈಪ್‌ ಲೈನ್ ಅನಿಲ ಪಡೆಯುತ್ತವೆ. ಇದರರ್ಥ ಈ ಕುಟುಂಬಗಳಿಗೆ ಮತ್ತು ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಜೀವನ ಸುಲಭವಾಗುತ್ತದೆ. ಇದರ ಪರಿಣಾಮವಾಗಿ ಸಾವಿರಾರು ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತವೆ.

ಸ್ನೇಹಿತರೆ,

ಇಂದು ದುರ್ಗಾಪುರ ಮತ್ತು ರಘುನಾಥಪುರದ ಪ್ರಮುಖ ಉಕ್ಕು ಮತ್ತು ವಿದ್ಯುತ್ ಸ್ಥಾವರಗಳು ಸುಧಾರಿತ ತಂತ್ರಜ್ಞಾನದಿಂದ ಸಜ್ಜುಗೊಂಡಿವೆ. ಅವುಗಳಿಗೆ ಸುಮಾರು 1,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಸ್ಥಾವರಗಳು ಈಗ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಪಟ್ಟಿವೆ, ಜಾಗತಿಕವಾಗಿ ಸ್ಪರ್ಧಿಸಲು ಸಿದ್ಧವಾಗಿವೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಬಂಗಾಳದ ಜನರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಅದು ಭಾರತದ ಕಾರ್ಖಾನೆಗಳಾಗಲಿ, ನಮ್ಮ ಹೊಲಗಳು ಮತ್ತು ಗದ್ದೆಗಳಾಗಲಿ - 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸ್ಪಷ್ಟ ನಿರ್ಣಯದೊಂದಿಗೆ ಎಲ್ಲೆಡೆ ಕೆಲಸ ನಡೆಯುತ್ತಿದೆ. ನಮ್ಮ ಮಾರ್ಗ: ಅಭಿವೃದ್ಧಿಯ ಮೂಲಕ ಸಬಲೀಕರಣ, ಉದ್ಯೋಗದ ಮೂಲಕ ಸ್ವಾವಲಂಬನೆ ಮತ್ತು ಸೂಕ್ಷ್ಮತೆಯ ಮೂಲಕ ಉತ್ತಮ ಆಡಳಿತ. ಈ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ನಾವು, ಭಾರತದ ಅಭಿವೃದ್ಧಿಯ ಪಯಣದಲ್ಲಿ ಪಶ್ಚಿಮ ಬಂಗಾಳವನ್ನು ಬಲಿಷ್ಠ ಎಂಜಿನ್ ಆಗಿ ಮಾಡಲು ನಿರ್ಧರಿಸಿದ್ದೇವೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಈಗ ಅಷ್ಟೆ - ನಾನು ಇನ್ನೂ ಹೆಚ್ಚಿನದನ್ನು ಹೇಳುವುದಿದೆ, ಆದರೆ ಈ ವೇದಿಕೆಯಲ್ಲಿ ಹೇಳುವ ಬದಲು, ಮುಂದಿನ ಕಾರ್ಯಕ್ರಮದಲ್ಲಿ ಹೇಳುವುದು ಉತ್ತಮ. ಅಲ್ಲಿ ಏನು ಹೇಳಲಾಗುವುದು ಎಂದು ಕೇಳಲು ಇಡೀ ಬಂಗಾಳ ಮತ್ತು ಇಡೀ ದೇಶವು ಕುತೂಹಲದಿಂದ ಕಾಯುತ್ತಿದೆ. ಮಾಧ್ಯಮದವರು ಸಹ ತುಂಬಾ ಕುತೂಹಲದಿಂದ ಇದ್ದಾರೆ. ಆದ್ದರಿಂದ ಸ್ನೇಹಿತರೆ, ಈ ಕಾರ್ಯಕ್ರಮದಲ್ಲಿ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ. ಆದರೆ ಕೆಲವೇ ಕ್ಷಣಗಳಲ್ಲಿ, ನಾನು ಮತ್ತೆ ದೃಢನಿಶ್ಚಯದಿಂದ ಮಾತನಾಡುತ್ತೇನೆ, ಮುಂದಿನ ಕಾರ್ಯಕ್ರಮದಲ್ಲಿ. ತುಂಬು ಧನ್ಯವಾದಗಳು.

 

*****


(Release ID: 2146078)