ಹಣಕಾಸು ಸಚಿವಾಲಯ
ರಾಷ್ಟ್ರವ್ಯಾಪಿ ʻಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನʼವು ಗಮನಾರ್ಹ ಪ್ರಗತಿಗೆ ಸಾಕ್ಷಿಯಾಗಿದೆ
2025ರ ಜುಲೈ 1 ರಿಂದ ದೇಶದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 43,447 ಶಿಬಿರಗಳನ್ನು ಆಯೋಜಿಸಲಾಗಿದೆ
ಸುಮಾರು 1.4 ಲಕ್ಷ ಹೊಸ ʻಪಿ.ಎಂ. ಜನ್ ಧನ್ ಯೋಜನೆʼ ಖಾತೆಗಳನ್ನು ತೆರೆಯಲಾಗಿದೆ; 3 ʻಜನ ಸುರಕ್ಷಾ ಯೋಜನೆʼಗಳ ಅಡಿಯಲ್ಲಿ 5.4 ಲಕ್ಷಕ್ಕೂ ಹೆಚ್ಚು ಹೊಸ ನೋಂದಣಿಗಳು ನಡೆದಿವೆ
Posted On:
15 JUL 2025 8:03PM by PIB Bengaluru
ʻಪ್ರಧಾನಮಂತ್ರಿ ಜನ್ ಧನ್ ಯೋಜನೆʼ(ಪಿ.ಎಂ.ಜೆ.ಡಿ.ವೈ), ʻಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆʼ(ಪಿ.ಎಂ.ಜೆ.ಜೆ.ಬಿ.ವೈ), ʻಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆʼ (ಪಿ.ಎಂ.ಎಸ್.ಬಿ.ವೈ) ಹಾಗೂ ʻಅಟಲ್ ಪಿಂಚಣಿ ಯೋಜನೆʼ(ಎ.ಪಿ.ವೈ) ಮುಂತಾದ ಪ್ರಮುಖ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದ ʻಹಣಕಾಸು ಸೇವೆಗಳ ಇಲಾಖೆʼಯು(ಡಿ.ಎಫ್.ಎಸ್) 2025ರ ಜುಲೈ 1 ರಿಂದ 2025ರ ಸೆಪ್ಟೆಂಬರ್ 30 ರವರೆಗೆ ಮೂರು ತಿಂಗಳ ರಾಷ್ಟ್ರವ್ಯಾಪಿ ಯೋಜನೆ ಪರಿಪೂರ್ಣತೆ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಎಲ್ಲಾ ಗ್ರಾಮ ಪಂಚಾಯಿತಿಗಳು (ಜಿಪಿಗಳು) ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಯು.ಎಲ್.ಬಿ) ಸಮಗ್ರ ವ್ಯಾಪ್ತಿಯನ್ನು ಸಾಧಿಸಲು ಪ್ರಯತ್ನಿಸುತ್ತದೆ. ಜೊತೆಗೆ ಪ್ರತಿಯೊಬ್ಬ ಅರ್ಹ ನಾಗರಿಕರು ಈ ಪರಿವರ್ತಕ ಯೋಜನೆಗಳ ಉದ್ದೇಶಿತ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದನ್ನು ಖಚಿತಪಡಿಸುತ್ತದೆ.
2025ರ ಜುಲೈ 1ರಂದು ಅಭಿಯಾನವನ್ನು ಪ್ರಾರಂಭಿಸಿದ ಎರಡು ವಾರಗಳಲ್ಲಿ, ಪ್ರಮುಖ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ನೋಂದಣಿಗೆ ಅನುಕೂಲವಾಗುವಂತೆ ಹಾಗೂ ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸಲು ವಿವಿಧ ಜಿಲ್ಲೆಗಳಲ್ಲಿ ಒಟ್ಟು 43,447 ಶಿಬಿರಗಳನ್ನು ನಡೆಸಲಾಗಿದೆ. ಈವರೆಗೆ 31,305 ಶಿಬಿರಗಳ ಪ್ರಗತಿ ವರದಿಗಳನ್ನು ಸಂಗ್ರಹಿಸಲಾಗಿದೆ.

ಛತ್ತೀಸ್ಗಢದ ಬಲೋಡ್ ಗ್ರಾಮ ಪಂಚಾಯತ್ನಲ್ಲಿ ನಡೆದ ಆರ್ಥಿಕ ಸೇರ್ಪಡೆ ಅಭಿಯಾನ
ಕೈಗೊಂಡ ಪ್ರಮುಖ ಚಟುವಟಿಕೆಗಳು:
- ಖಾತೆ ತೆರೆಯುವಿಕೆ:
- ಹೊಸ ಪಿ.ಎಂ.ಜೆ.ಡಿ.ವೈ ಖಾತೆಗಳು: 1,39,291
- ನಿಷ್ಕ್ರಿಯ ಖಾತೆಗಳಿಗೆ ʻನಿಮ್ಮ ಗ್ರಾಹಕರನ್ನು ತಿಳಿಯಿರಿʼ(ಕೆ.ವೈ.ಸಿ) ವಿವರಗಳ ಮರು-ಪರಿಶೀಲನೆ:
- ಪಿ.ಎಂ.ಜೆ.ಡಿ.ವೈ ಖಾತೆಗಳು: 96,383
- ಇತರ ಉಳಿತಾಯ ಖಾತೆಗಳು: 1,01,778
- ನಾಮನಿರ್ದೇಶನ ವಿವರಗಳ ನವೀಕರಣ:
- ಪಿ.ಎಂ.ಜೆ.ಡಿ.ವೈ ಖಾತೆಗಳು: 66,494
- ಇತರೆ ಖಾತೆಗಳು: 63,489
- ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೋಂದಣಿ:
- ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿ.ಎಂ.ಜೆ.ಜೆ.ಬಿ.ವೈ): 1,83,225
- ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿ.ಎಂ.ಎಸ್.ಬಿ.ವೈ): 2,88,714
- ಅಟಲ್ ಪಿಂಚಣಿ ಯೋಜನೆ (ಎ.ಪಿ.ವೈ): 67,668
- ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ಅಡಿಯಲ್ಲಿ ಇತ್ಯರ್ಥಪಡಿಸಿದ ಕ್ಲೈಮ್ಗಳು: 1,665
- ಡಿಜಿಟಲ್ ವಂಚನೆ ಜಾಗೃತಿ, ವಾರಸುದಾರರಿಲ್ಲದ ಠೇವಣಿಗಳಿಗೆ ಪ್ರವೇಶ ಮತ್ತು ಕುಂದುಕೊರತೆ ಪರಿಹಾರದ ಲಭ್ಯತೆ ಬಗ್ಗೆ ಹಣಕಾಸು ಸಾಕ್ಷರತಾ ಕಾರ್ಯಕ್ರಮ.

ಅಸ್ಸಾಂನ ಕರ್ಬಿ ಆಂಗ್ಲಾಂಗ್ ನಲ್ಲಿ ಆರ್ಥಿಕ ಸೇರ್ಪಡೆ ಅಭಿಯಾನ
ಈ ಅಭಿಯಾನವು 2025ರ ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದ್ದು, ಸುಮಾರು 2.70 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿದೆ. ಔಪಚಾರಿಕ ಹಣಕಾಸು ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವ ಹಾಗೂ ಸಾಮಾಜಿಕ-ಆರ್ಥಿಕ ಸೇರ್ಪಡೆಯನ್ನು ವಿಸ್ತರಿಸುವ ಸರ್ಕಾರದ ಬದ್ಧತೆಯನ್ನು ಇದು ಸಾಕಾರಗೊಳಿಸುತ್ತದೆ.
ಭಾರತ ಸರ್ಕಾರದ ಹಣಕಾಸು ಸೇರ್ಪಡೆ (ಎಫ್.ಐ) ಉಪಕ್ರಮಗಳು ಔಪಚಾರಿಕ ಹಣಕಾಸು ಸೇವೆಗಳಿಗೆ ಸಮಾನ ಪ್ರವೇಶವನ್ನು ಸುಗಮಗೊಳಿಸುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸಲು ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತವೆ. ಈ ಉಪಕ್ರಮಗಳನ್ನು ಬ್ಯಾಂಕಿಂಗ್ ಸೌಲಭ್ಯವಿಲ್ಲದ ವ್ಯಕ್ತಿಗಳನ್ನು ಮುಖ್ಯವಾಹಿನಿಯ ಬ್ಯಾಂಕಿಂಗ್ ವ್ಯಾಪ್ತಿಗೆ ತರಲು ವಿನ್ಯಾಸಗೊಳಿಸಲಾಗಿದೆ, ಆ ಮೂಲಕ ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲಾಗುತ್ತದೆ.
*****
(Release ID: 2145803)
Read this release in:
Odia
,
English
,
Khasi
,
Urdu
,
Hindi
,
Marathi
,
Nepali
,
Assamese
,
Bengali
,
Manipuri
,
Punjabi
,
Telugu
,
Malayalam