ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು


ಇಂದು, 51 ಸಾವಿರಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ, ಇಂತಹ ಉದ್ಯೋಗ ಮೇಳಗಳ ಮೂಲಕ, ಲಕ್ಷಾಂತರ ಯುವಜನರು ಈಗಾಗಲೇ ಸರ್ಕಾರದಲ್ಲಿ ಖಾಯಂ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ, ಈಗ ಈ ಯುವಜನರು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ: ಪ್ರಧಾನಮಂತ್ರಿ

ಭಾರತವು ಎರಡು ಅಗಾಧ ಶಕ್ತಿಗಳನ್ನು ಹೊಂದಿದೆ ಎಂದು ಇಂದು ಜಗತ್ತು ಒಪ್ಪಿಕೊಂಡಿದೆ, ಒಂದು ಜನಸಂಖ್ಯೆ, ಇನ್ನೊಂದು ಪ್ರಜಾಪ್ರಭುತ್ವ, ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ: ಪ್ರಧಾನಮಂತ್ರಿ

ಇಂದು ದೇಶದಲ್ಲಿ ನಿರ್ಮಿಸಲಾಗುತ್ತಿರುವ ನವೋದ್ಯಮಗಳು, ನಾವೀನ್ಯತೆ ಮತ್ತು ಸಂಶೋಧನೆಯ ಪೂರಕ ವ್ಯವಸ್ಥೆಯು ರಾಷ್ಟ್ರದ ಯುವಜನತೆಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ: ಪ್ರಧಾನಮಂತ್ರಿ

ಇತ್ತೀಚೆಗೆ ಅನುಮೋದಿಸಲಾದ ಹೊಸ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಯ ಮೂಲಕ ಖಾಸಗಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತಲೂ ಸರ್ಕಾರ ಗಮನಹರಿಸಿದೆ: ಪ್ರಧಾನಮಂತ್ರಿ

ಇಂದು, ಭಾರತದ ದೊಡ್ಡ ಸಾಮರ್ಥ್ಯಗಳಲ್ಲಿ ಒಂದು ನಮ್ಮ ತಯಾರಿಕಾ ವಲಯ, ತಯಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ: ಪ್ರಧಾನಮಂತ್ರಿ

ತಯಾರಿಕಾ ವಲಯವನ್ನು ಉತ್ತೇಜಿಸಲು, ಈ ವರ್ಷದ ಬಜೆಟ್ ನಲ್ಲಿ ಮಿಷನ್ ಮ್ಯಾನುಫ್ಯಾಕ್ಚರಿಂಗ್ ಅನ್ನು ಘೋಷಿಸಲಾಗಿದೆ: ಪ್ರಧಾನಮಂತ್ರಿ

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ – ಐ ಎಲ್ ಒ ವರದಿಯ ಪ್ರಕಾರ, ಕಳೆದ ದಶಕದಲ್ಲಿ, ಭಾರತದ 90 ಕೋಟಿಗೂ ಹೆಚ್ಚು ನಾಗರಿಕರನ್ನು ಕಲ್ಯಾಣ ಯೋಜನೆಗಳ ವ್ಯಾಪ್ತಿಗೆ ತರಲಾಗಿದೆ: ಪ್ರಧಾನಮಂತ್ರಿ

ಇಂದು, ವಿಶ್ವಬ್ಯಾಂಕ್ ನಂತಹ ಪ್ರಮುಖ ಜಾಗತಿಕ ಸಂಸ್ಥೆಗಳು ಭಾರತವನ್ನು ಶ್ಲಾಘಿಸುತ್ತಿವೆ, ಭಾರತವು ವಿಶ್ವದ ಅತ್ಯುನ್ನತ ಸಮಾನತೆಯನ್ನು ಹೊಂದಿರುವ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ

Posted On: 12 JUL 2025 1:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಯುವಜನರಿಗೆ ಇಂದು ಹೊಸ ಜವಾಬ್ದಾರಿಗಳ ಆರಂಭದ ದಿನವಾಗಿದೆ ಎಂದು ಹೇಳಿದರು. ವಿವಿಧ ಇಲಾಖೆಗಳಲ್ಲಿ ತಮ್ಮ ಸೇವೆಗಳನ್ನು ಪ್ರಾರಂಭಿಸಿದ ಯುವಜನರನ್ನು ಅವರು ಅಭಿನಂದಿಸಿದರು ಮತ್ತು ವಿಭಿನ್ನ ಪಾತ್ರಗಳ ಹೊರತಾಗಿಯೂ, ಅವರ ಸಾಮಾನ್ಯ ಗುರಿ "ನಾಗರಿಕ ಮೊದಲು" ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ರಾಷ್ಟ್ರ ಸೇವೆಯಾಗಿದೆ ಎಂದು ಹೇಳಿದರು.

ಭಾರತದ ಜನಸಂಖ್ಯೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯಗಳ ಸರಿಸಾಟಿಯಿಲ್ಲದ ಶಕ್ತಿಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ದೇಶೀಯವಾಗಿ ಮತ್ತು ಜಾಗತಿಕ ವೇದಿಕೆಯಲ್ಲಿ ಭವಿಷ್ಯವನ್ನು ರೂಪಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ವಿಶಾಲ ಯುವ ಶಕ್ತಿಯು ಭಾರತದ ಅತಿದೊಡ್ಡ ಆಸ್ತಿಯಾಗಿದೆ ಮತ್ತು ಈ ಆಸ್ತಿಯನ್ನು ದೀರ್ಘಕಾಲೀನ ಸಮೃದ್ಧಿಗೆ ವೇಗವರ್ಧಕವಾಗಿ ಬಳಸುವ ಪ್ರಯತ್ನಗಳಲ್ಲಿ ಸರ್ಕಾರ ದೃಢವಾಗಿದೆ ಎಂದು ಪ್ರಧಾನಿ ಗಮನಿಸಿದರು.

"ಎರಡು ದಿನಗಳ ಹಿಂದೆಯಷ್ಟೇ ನಾನು ಐದು ರಾಷ್ಟ್ರಗಳ ಭೇಟಿಯಿಂದ ಹಿಂತಿರುಗಿದೆ. ನಾನು ಭೇಟಿ ನೀಡಿದ ಎಲ್ಲಾ ದೇಶಗಳಲ್ಲಿ, ಭಾರತದ ಯುವ ಶಕ್ತಿಯ ಬಲವಾದ ಪ್ರದರ್ಶನವನ್ನು ನಾನು ನೋಡಿದೆ. ಈ ಭೇಟಿಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದಗಳು ಭಾರತ ಮತ್ತು ವಿದೇಶಗಳಲ್ಲಿರುವ ಭಾರತೀಯ ಯುವಜನರಿಗೆ ಪ್ರಯೋಜನವನ್ನು ನೀಡುತ್ತವೆ" ಎಂದು ಶ್ರೀ ಮೋದಿ ಹೇಳಿದರು. ಈ ಭೇಟಿಯ ಸಮಯದಲ್ಲಿ ಸಹಿ ಹಾಕಲಾದ ರಕ್ಷಣೆ, ಔಷಧಗಳು, ಡಿಜಿಟಲ್ ತಂತ್ರಜ್ಞಾನ, ಇಂಧನ ಮತ್ತು ಅಪರೂಪದ ಖನಿಜಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ವಿವಿಧ ಒಪ್ಪಂದಗಳು ದೂರಗಾಮಿ ಪ್ರಯೋಜನಗಳನ್ನು ಹೊಂದಿವೆ ಎಂದು ಅವರು ಹೇಳಿದರು. "ಈ ಉಪಕ್ರಮಗಳು ಭಾರತದ ಜಾಗತಿಕ ಆರ್ಥಿಕ ಸ್ಥಾನವನ್ನು ಬಲಪಡಿಸುವುದಲ್ಲದೆ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಯುವ ಭಾರತೀಯರಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುತ್ತವೆ" ಎಂದು ಶ್ರೀ ಮೋದಿ ಹೇಳಿದರು.

ವಿಕಸನಗೊಳ್ಳುತ್ತಿರುವ ಉದ್ಯೋಗದ ಸನ್ನಿವೇಶವನ್ನು ಕುರಿತು ಮಾತನಾಡಿದ ಪ್ರಧಾನಿ, 21 ನೇ ಶತಮಾನದಲ್ಲಿ ಉದ್ಯೋಗದ ಸ್ವರೂಪವು ವೇಗವಾಗಿ ಬದಲಾಗುತ್ತಿದೆ ಎಂದು ಒತ್ತಿ ಹೇಳಿದರು. ನಾವೀನ್ಯತೆ, ನವೋದ್ಯಮಗಳು ಮತ್ತು ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು. ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು, ಇದು ಯುವಜನರಿಗೆ ದೊಡ್ಡ ಕನಸು ಕಾಣಲು ಅವಕಾಶ ನೀಡುತ್ತದೆ ಎಂದರು. ಹೊಸ ಪೀಳಿಗೆಯ ಬಗ್ಗೆ ತಮ್ಮ ವೈಯಕ್ತಿಕ ಹೆಮ್ಮೆ ಮತ್ತು ವಿಶ್ವಾಸವನ್ನು ಹಂಚಿಕೊಂಡ ಅವರು, ಮಹತ್ವಾಕಾಂಕ್ಷೆ, ದೂರದೃಷ್ಟಿ ಮತ್ತು ಹೊಸದನ್ನು ಸೃಷ್ಟಿಸುವ ಬಲವಾದ ಬಯಕೆಯೊಂದಿಗೆ ಯುವಜನತೆ ಮುಂದೆ ಹೆಜ್ಜೆ ಹಾಕುತ್ತಿರುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.

ಖಾಸಗಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಭಾರತ ಸರ್ಕಾರ ಗಮನ ಹರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಇತ್ತೀಚೆಗೆ, ಸರ್ಕಾರವು ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆ ಎಂಬ ಹೊಸ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಯಡಿಯಲ್ಲಿ, ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕರಿಗೆ ಸರ್ಕಾರವು ₹15,000 ನೀಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರವು ಅವರ ಮೊದಲ ಕೆಲಸದ ಮೊದಲ ಸಂಬಳಕ್ಕೆ ಕೊಡುಗೆ ನೀಡುತ್ತದೆ. ಇದಕ್ಕಾಗಿ, ಸರ್ಕಾರವು ಸುಮಾರು ₹1 ಲಕ್ಷ ಕೋಟಿ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಯೋಜನೆಯು ಸುಮಾರು 3.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಬೆಳವಣಿಗೆಗೆ ಚಾಲನೆ ನೀಡುವಲ್ಲಿ, ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತದ ಪ್ರಯಾಣವನ್ನು ವೇಗಗೊಳಿಸುವಲ್ಲಿ ಭಾರತದ ತಯಾರಿಕಾ ವಲಯದ ಪರಿವರ್ತನಾ ಶಕ್ತಿಯನ್ನು ಪ್ರಧಾನಿ ಒತ್ತಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮವು ಸಾಕಷ್ಟು ಬಲಗೊಂಡಿದೆ ಎಂದು ಪ್ರಧಾನಿ ಹೇಳಿದರು. ಪಿ ಎಲ್ ಐ (ಉತ್ಪಾದನೆ ಆಧಾರಿತ ಪ್ರೋತ್ಸಾಹ) ಯೋಜನೆಯೊಂದೇ ದೇಶಾದ್ಯಂತ 11 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ವಲಯವು ಅಸಾಧಾರಣವಾಗಿ ವಿಸ್ತರಿಸಿದೆ. ಇಂದು, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು 11 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ಕಳೆದ 11 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಹಿಂದೆ, ದೇಶದಲ್ಲಿ ಮೊಬೈಲ್ ಫೋನ್ ತಯಾರಿಸುವ ಕೇವಲ 2 ರಿಂದ 4 ಘಟಕಗಳು ಇದ್ದವು. ಇಂದು, ಭಾರತದಲ್ಲಿ ಸುಮಾರು 300 ಮೊಬೈಲ್ ಫೋನ್ ಉತ್ಪಾದನಾ ಘಟಕಗಳಿವೆ, ಇದು ಲಕ್ಷಾಂತರ ಯುವಜನರಿಗೆ ಉದ್ಯೋಗವನ್ನು ಒದಗಿಸಿದೆ ಎಂದು ಶ್ರೀ ಮೋದಿ ಹೇಳಿದರು.

ರಕ್ಷಣಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಬಗ್ಗೆಯೂ ಪ್ರಧಾನಿ ಮಾತನಾಡಿದರು, ₹1.25 ಲಕ್ಷ ಕೋಟಿಗೂ ಹೆಚ್ಚಿನ ಉತ್ಪಾದನೆಯೊಂದಿಗೆ. ವಿಶ್ವದ ಅತಿದೊಡ್ಡ ಲೋಕೋಮೋಟಿವ್ ತಯಾರಕನಾಗಿ ಭಾರತ ಹೊರಹೊಮ್ಮಿರುವುದನ್ನು ಮತ್ತು ಲೋಕೋಮೋಟಿವ್, ರೈಲು ಬೋಗಿಗಳು ಮತ್ತು ಮೆಟ್ರೋ ಬೋಗಿಗಳಲ್ಲಿ ದೇಶದ ಬಲವಾದ ರಫ್ತು ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದರು. ಆಟೋಮೊಬೈಲ್ ವಲಯವು ಕೇವಲ ಐದು ವರ್ಷಗಳಲ್ಲಿ 40 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ, ಇದರ ಪರಿಣಾಮವಾಗಿ ಹೊಸ ಕಾರ್ಖಾನೆಗಳು, ಹೊಸ ಉದ್ಯೋಗಾವಕಾಶಗಳು ಮತ್ತು ದಾಖಲೆಯ ವಾಹನ ಮಾರಾಟ ಕಂಡುಬಂದಿದೆ ಎಂದು ಅವರು ಹೇಳಿದರು.

ಭಾರತದ ಕಲ್ಯಾಣ ಉಪಕ್ರಮಗಳ ದೂರಗಾಮಿ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಿ, ಕಳೆದ ದಶಕದಲ್ಲಿ 90 ಕೋಟಿಗೂ ಹೆಚ್ಚು ಭಾರತೀಯ ನಾಗರಿಕರು ಸರ್ಕಾರದ ಕಲ್ಯಾಣ ಯೋಜನೆಗಳ ವ್ಯಾಪ್ತಿಗೆ ಬಂದಿದ್ದಾರೆ ಎಂದು ದೃಢಪಡಿಸಿದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐ ಎಲ್ ಒ) ಇತ್ತೀಚಿನ ವರದಿಯನ್ನು ಉಲ್ಲೇಖಿಸಿದರು. ಈ ಯೋಜನೆಗಳು ಕೇವಲ ಕಲ್ಯಾಣ ಸೌಲಭ್ಯಗಳಿಗೆ ಸೀಮಿತವಾಗಿಲ್ಲ, ಆದರೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವಲ್ಲಿ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಂತಹ ಪ್ರಮುಖ ಕಾರ್ಯಕ್ರಮಗಳ ಕುರಿತು ಪ್ರಧಾನಮಂತ್ರಿ ಮಾತನಾಡಿದರು, ಇದರ ಅಡಿಯಲ್ಲಿ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಮತ್ತು 3 ಕೋಟಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 12 ಕೋಟಿ ಶೌಚಾಲಯಗಳ ನಿರ್ಮಾಣವು ಪ್ಲಂಬರ್ ಗಳು ಮತ್ತು ನಿರ್ಮಾಣ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಉಜ್ವಲ ಯೋಜನೆಯಡಿಯಲ್ಲಿ 10 ಕೋಟಿಗೂ ಹೆಚ್ಚು ಎಲ್ ಪಿ ಜಿ ಸಂಪರ್ಕಗಳನ್ನು ಒದಗಿಸಲಾಗಿದೆ, ಇದು ಸಿಲಿಂಡರ್ ತುಂಬಿಸುವ ಮೂಲಸೌಕರ್ಯ ಮತ್ತು ವಿತರಣಾ ಜಾಲವನ್ನು ವಿಸ್ತರಿಸಿದೆ, ಇದರ ಪರಿಣಾಮವಾಗಿ ಸಾವಿರಾರು ವಿತರಣಾ ಕೇಂದ್ರಗಳು ಮತ್ತು ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದರು.

"ಮೇಲ್ಛಾವಣಿಯಲ್ಲಿ ಸೌರಶಕ್ತಿ ಅಳವಡಿಸಲು ಪ್ರತಿ ಕುಟುಂಬಕ್ಕೆ ₹75,000 ಕ್ಕೂ ಹೆಚ್ಚು ಒದಗಿಸುವ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಮನೆಯ ವಿದ್ಯುತ್ ಬಿಲ್ ಗಳನ್ನು ಕಡಿಮೆ ಮಾಡುತ್ತಿದೆ ಮತ್ತು ತಂತ್ರಜ್ಞರು, ಎಂಜಿನಿಯರ್ ಗಳು ಮತ್ತು ಸೌರ ಫಲಕ ತಯಾರಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ನಮೋ ಡ್ರೋನ್ ದೀದಿ ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲಟ್ ಗಳಾಗಿ ತರಬೇತಿ ನೀಡುವ ಮೂಲಕ ಸಬಲೀಕರಣಗೊಳಿಸಿದೆ" ಎಂದು ಶ್ರೀ ಮೋದಿ ಹೇಳಿದರು.

ದೇಶವು 3 ಕೋಟಿ ಲಕ್ಷಾಧಿಪತಿ ದೀದಿಯರನ್ನು ಸೃಷ್ಟಿಸುವ ಧ್ಯೇಯದೊಂದಿಗೆ ಮುಂದುವರಿಯುತ್ತಿದೆ ಮತ್ತು 1.5 ಕೋಟಿ ಮಹಿಳೆಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಬ್ಯಾಂಕ್ ಸಖಿ, ವಿಮಾ ಸಖಿ, ಕೃಷಿ ಸಖಿ ಮತ್ತು ಪಶು ಸಖಿಯಂತಹ ವಿವಿಧ ಯೋಜನೆಗಳು ಮಹಿಳೆಯರಿಗೆ ಸುಸ್ಥಿರ ಉದ್ಯೋಗವನ್ನು ಪಡೆಯಲು ಅನುವು ಮಾಡಿಕೊಟ್ಟಿವೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯು ಬೀದಿಬದಿ ವ್ಯಾಪಾರಿಗಳಿಗೆ ಔಪಚಾರಿಕ ಬೆಂಬಲವನ್ನು ಒದಗಿಸಿದೆ, ಲಕ್ಷಾಂತರ ಜನರನ್ನು ಮುಖ್ಯವಾಹಿನಿಯ ಆರ್ಥಿಕ ಚಟುವಟಿಕೆಗಳಿಗೆ ತಂದಿದೆ ಎಂದು ಅವರು ಹೇಳಿದರು. ಅಲ್ಲದೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ತರಬೇತಿ, ಉಪಕರಣಗಳು ಮತ್ತು ಸಾಲ ಪ್ರವೇಶದ ಮೂಲಕ ಸಾಂಪ್ರದಾಯಿಕ ಕುಶಲಕರ್ಮಿಗಳು, ಕರಕುಶಲಿಗಳು ಮತ್ತು ಸೇವಾ ಪೂರೈಕೆದಾರರನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬರಲು ಈ ಹಲವಾರು ಯೋಜನೆಗಳೇ ಕಾರಣ ಎಂದು ಪ್ರಧಾನಿ ಒತ್ತಿ ಹೇಳಿದರು. "ಉದ್ಯೋಗ ಅವಕಾಶಗಳಿಲ್ಲದೆ ಇಂತಹ ಬದಲಾವಣೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಇಂದು ವಿಶ್ವಬ್ಯಾಂಕ್ ನಂತಹ ದೊಡ್ಡ ಜಾಗತಿಕ ಸಂಸ್ಥೆಗಳು ಭಾರತವನ್ನು ಶ್ಲಾಘಿಸುತ್ತಿವೆ. ಸಮಾನತೆಯ ಮಟ್ಟವು ಅತ್ಯುನ್ನತವಾಗಿರುವ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ" ಎಂದು ಶ್ರೀ ಮೋದಿ ಹೇಳಿದರು.

ಪ್ರಸ್ತುತ ಹಂತವನ್ನು ಅಭಿವೃದ್ಧಿಯ ಮಹಾಯಜ್ಞ, ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಗೆ ಮೀಸಲಾಗಿರುವ ರಾಷ್ಟ್ರೀಯ ಧ್ಯೇಯ ಎಂದು ಬಣ್ಣಿಸಿದ ಪ್ರಧಾನಿ, ದೇಶದ ಯುವಕರು ಮತ್ತು ಹೊಸದಾಗಿ ನೇಮಕಗೊಂಡವರು ಈ ಧ್ಯೇಯವನ್ನು ಹೊಸ ಶಕ್ತಿ ಮತ್ತು ಸಮರ್ಪಣಾಭಾವದಿಂದ ಮುಂದುವರಿಸಬೇಕೆಂದು ಕರೆ ನೀಡಿದರು.

ಪ್ರತಿಯೊಬ್ಬ ನಾಗರಿಕನನ್ನು ದೈವಿಕವಾಗಿ ಕಾಣುವ "ನಾಗರಿಕ ದೇವೋ ಭವ" ಎಂಬ ಮಾರ್ಗದರ್ಶಿ ನೀತಿಯನ್ನು ಪ್ರಧಾನಿ ಪ್ರಸ್ತಾಪಿಸಿದರು ಮತ್ತು ಸಾರ್ವಜನಿಕ ಸೇವೆಯಲ್ಲಿ ಉಜ್ವಲ ಮತ್ತು ಅರ್ಥಪೂರ್ಣ ಭವಿಷ್ಯಕ್ಕಾಗಿ ಹೊಸದಾಗಿ ನೇಮಕಗೊಂಡವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಗೆ ಅನುಗುಣವಾಗಿ, 16 ನೇ ಉದ್ಯೋಗ ಮೇಳವನ್ನು ದೇಶಾದ್ಯಂತ 47 ಸ್ಥಳಗಳಲ್ಲಿ ನಡೆಸಲಾಗುವುದು. ಉದ್ಯೋಗ ಮೇಳವು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸುವಿಕೆಗಾಗಿ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಶಾದ್ಯಂತ ಉದ್ಯೋಗ ಮೇಳಗಳ ಮೂಲಕ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ.

ದೇಶಾದ್ಯಂತ ಆಯ್ಕೆಯಾದ ಹೊಸ ಉದ್ಯೋಗಿಗಳು ರೈಲ್ವೆ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಅಂಚೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಇತರ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೇರಲಿದ್ದಾರೆ.

 

 

*****

 


(Release ID: 2144226)