ಗೃಹ ವ್ಯವಹಾರಗಳ ಸಚಿವಾಲಯ
ಪ್ರವಾಹ, ಭೂಕುಸಿತ ಬಾಧಿತ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ಕೇರಳ, ಉತ್ತರಾಖಂಡ್‌ಗೆ ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣ ಬಿಡುಗಡೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ
ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ ಡಿ ಅರ್ ಎಫ್) ಅಡಿಯಲ್ಲಿ ಕೇಂದ್ರದ ಪಾಲಿನ ಭಾಗವಾಗಿ ಈ ನಿಧಿ ಹಂಚಿಕೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಖಾತೆ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ವರ್ಷ 19 ರಾಜ್ಯಗಳಿಗೆ ಎಸ್ ಡಿ ಆರ್ ಎಫ್ /ಎನ್ ಡಿ ಆರ್ ಎಫ್ ನಿಧಿಯಿಂದ 8 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನೆರವು ಬಿಡುಗಡೆ
ಶ್ರೀ ನರೇಂದ್ರ ಮೋದಿ ಅವರ ಸರ್ಕಾರದಿಂದ ಎಲ್ಲಾ ಸಂದರ್ಭಗಳಲ್ಲಿಯೂ ರಾಜ್ಯಗಳ ಬೆಂಬಲಕ್ಕೆ ದೃಢಸಂಕಲ್ಪ
ಹಣಕಾಸಿನ ನೆರವಿನ ಜೊತೆಗೆ, ಕೇಂದ್ರವು ಎಲ್ಲಾ ಎನ್ ಡಿ ಆರ್ ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ನೆರವು ಸೇರಿದಂತೆ ಪ್ರವಾಹ ಮತ್ತು ಭೂಕುಸಿತದಿಂದ ಬಾಧಿತ ಎಲ್ಲಾ ರಾಜ್ಯಗಳಿಗೆ ಸಾಗಾಣೆಗೆ ಎಲ್ಲಾ ರೀತಿಯ ಸಹಾಯ
Posted On:
10 JUL 2025 4:36PM by PIB Bengaluru
ಕೇಂದ್ರ ಸರ್ಕಾರವು ಪ್ರವಾಹ, ಭೂಕುಸಿತದಿಂದ ಬಾಧಿತ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ಕೇರಳ, ಉತ್ತರಾಖಂಡ್‌ಗೆ 1,066.80 ಕೋಟಿ ರೂಪಾಯಿ ಆರ್ಥಿಕ ನೆರವು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಆರು ಪ್ರವಾಹ ಪೀಡಿತ ರಾಜ್ಯಗಳಲ್ಲಿ, ಅಸ್ಸಾಂ ರಾಜ್ಯಕ್ಕೆ 375.60 ಕೋಟಿ ರೂ., ಮಣಿಪುರಕ್ಕೆ 29.20 ಕೋಟಿ ರೂ., ಮೇಘಾಲಯಕ್ಕೆ 30.40 ಕೋಟಿ ರೂ., ಮಿಜೋರಾಂಗೆ 22.80 ಕೋಟಿ ರೂ., ಕೇರಳಕ್ಕೆ 153.20 ಕೋಟಿ ರೂ. ಮತ್ತು ಉತ್ತರಾಖಂಡಕ್ಕೆ 455.60 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್ ಡಿ ಆರ್ ಎಫ್) ಕೇಂದ್ರದ ಪಾಲಾಗಿ ನೆರವು ನೀಡಲಾಗಿದೆ. ಈ ವರ್ಷದ ನೈಋತ್ಯ ಮುಂಗಾರು ಮಳೆಯ ಸಮಯದಲ್ಲಿ ಅತಿ ಹೆಚ್ಚು ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಈ ರಾಜ್ಯಗಳು ಹೆಚ್ಚಿನ ಹಾನಿಗೊಳಗಾಗಿವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಖಾತೆ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ಸರ್ಕಾರವು ಪ್ರವಾಹ, ಭೂಕುಸಿತ, ಮೇಘಸ್ಫೋಟ ಬಾಧಿತ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಎಲ್ಲಾ ಸಂದರ್ಭಗಳಲ್ಲಿಯೂ ರಾಜ್ಯಗಳಿಗೆ ನೆರವು ನೀಡಲು ದೃಢವಾಗಿ ನಿಂತಿದೆ.
ಕೇಂದ್ರ ಸರ್ಕಾರವು ಈ ವರ್ಷ ಈಗಾಗಲೇ 14 ರಾಜ್ಯಗಳಿಗೆ ಎಸ್ ಡಿ ಆರ್ ಎಫ್ ನಿಧಿಯಿಂದ 6,166.00 ಕೋಟಿ ರೂ. ಮತ್ತು 12 ರಾಜ್ಯಗಳಿಗೆ ಎನ್ ಡಿ ಆರ್ ಎಫ್ ನಿಂದ 1,988.91 ಕೋಟಿ ರೂ. ಹೆಚ್ಚುವರಿಯಾಗಿ, 05 ರಾಜ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್ ಡಿಎಂಎಫ್) 726.20 ಕೋಟಿ ರೂ. ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್ ಡಿಎಂಎಫ್) 17.55 ಕೋಟಿ ರೂ.ಗಳನ್ನು ಎರಡು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಪ್ರವಾಹ, ಭೂಕುಸಿತ, ಮೇಘಸ್ಫೋಟ ಬಾಧಿತ ರಾಜ್ಯಗಳಿಗೆ ಅಗತ್ಯವಿರುವ ಎನ್‌ಡಿಆರ್‌ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಸಾಗಣೆ ಸಹಾಯವನ್ನು ಒದಗಿಸಿದೆ. ಸದ್ಯ ಬೀಳುತ್ತಿರುವ ಮುಂಗಾರು ಮಳೆಯಿಂದಾಗಿ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಎನ್‌ಡಿಆರ್‌ಎಫ್‌ನ 104 ತಂಡಗಳನ್ನು ನಿಯೋಜಿಸಲಾಗಿದೆ.
*****
(Release ID: 2143773)
Visitor Counter : 5