ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳು: ಕರಡು ಪಿ ಎನ್ ಜಿ ನಿಯಮಗಳು ಭಾರತದ ಅಪ್ ಸ್ಟ್ರೀಮ್ ತೈಲ ಮತ್ತು ಅನಿಲ ಮೂಲಸೌಕರ್ಯವನ್ನು ಆಧುನೀಕರಿಸುವ ಗುರಿಯನ್ನು ಹೊಂದಿವೆ


ನಿಯಮಗಳು ಹೂಡಿಕೆದಾರರ ಸ್ಥಿರತೆ, ವ್ಯವಹಾರ ಮಾಡುವ ಸುಲಭತೆ ಮತ್ತು ಇಂಗಾಲ ಮುಕ್ತಗೊಳಿಸುವಿಕೆಯ ಮೇಲೆ ಕೇಂದ್ರೀಕರಿಸುತ್ತವೆ

ಸಚಿವರಾದ ಶ್ರೀ ಹರ್‌ದೀಪ್‌ ಸಿಂಗ್ ಪುರಿ ಜುಲೈ 17, 2025 ರೊಳಗೆ ಪಾಲುದಾರರ ಸಲಹೆಗಳನ್ನು ಆಹ್ವಾನಿಸಿದ್ದಾರೆ

Posted On: 09 JUL 2025 3:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ನೇತೃತ್ವದಲ್ಲಿ ತೈಲ ಮತ್ತು ಅನಿಲ ಪರಿಶೋಧನೆಯನ್ನು ವೇಗಗೊಳಿಸುವ ನಮ್ಮ ಪ್ರಯತ್ನದ ಭಾಗವಾಗಿ, ನಾವು ಪರಿಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಪ್ರಗತಿಶೀಲ ನೀತಿ ಸುಧಾರಣೆಗಳ ಸರಣಿಯನ್ನು ತರುತ್ತಿದ್ದೇವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕರಡು ನಿಯಮಗಳು, 2025 ಸೇರಿದಂತೆ ಈ ಸುಧಾರಣೆಗಳು ನಮ್ಮ ಇ&ಪಿ ಆಪರೇಟರ್ಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್‌ದೀಪ್‌ ಸಿಂಗ್ ಪುರಿ ಹೇಳಿದರು. ಈ ನಿಟ್ಟಿನಲ್ಲಿ, 'ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕರಡು ನಿಯಮಗಳು', 'ಪರಿಷ್ಕೃತ ಮಾದರಿ ಆದಾಯ ಹಂಚಿಕೆ ಒಪ್ಪಂದ (MRSC)' ಹಾಗೂ 'ನವೀಕರಿಸಿದ ಪೆಟ್ರೋಲಿಯಂ ಗುತ್ತಿಗೆ ಸ್ವರೂಪ'ದ ಕುರಿತು, ಉದ್ಯಮದ ಗಣ್ಯರು, ವಿಷಯ ತಜ್ಞರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರು ತಮ್ಮ ಅಮೂಲ್ಯವಾದ ಅಭಿಪ್ರಾಯ ಮತ್ತು ಸಲಹೆಗಳನ್ನು ಜುಲೈ 17, 2025 ರೊಳಗಾಗಿ png-rules@dghindia.gov.in ಇ-ಮೇಲ್ ವಿಳಾಸಕ್ಕೆ ಸಲ್ಲಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಈ ಸಮಾಲೋಚನಾ ಪ್ರಕ್ರಿಯೆಯ ಸಮಾರೋಪವು, ಜುಲೈ 17 ರಂದು ನವದೆಹಲಿಯ ಪ್ರತಿಷ್ಠಿತ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ 'ಊರ್ಜಾ ವಾರ್ತಾ 2025' ವಿಶೇಷ ಕಾರ್ಯಕ್ರಮದಲ್ಲಿ ನಡೆಯಲಿದೆ.

'ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕರಡು ನಿಯಮಗಳು, 2025' ( Draft Petroleum & Natural Gas Rules, 2025) , ಭಾರತದ ಅಪ್ಸ್ಟ್ರೀಮ್ (ಪರಿಶೋಧನೆ ಮತ್ತು ಉತ್ಪಾದನೆ) ತೈಲ ಮತ್ತು ಅನಿಲ ಕ್ಷೇತ್ರದ ನಿಯಮಾವಳಿಗಳನ್ನು ಹಲವಾರು ಪ್ರಮುಖ ಸುಧಾರಣೆಗಳೊಂದಿಗೆ ಆಧುನೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ತೆರಿಗೆ, ರಾಯಲ್ಟಿ ಅಥವಾ ಇತರ ಸುಂಕಗಳ ಹೆಚ್ಚಳದಂತಹ ಯಾವುದೇ ಕಾನೂನಾತ್ಮಕ ಅಥವಾ ಹಣಕಾಸಿನ ಬದಲಾವಣೆಗಳಿಂದ ಗುತ್ತಿಗೆದಾರರ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳಿಂದ ಅವರನ್ನು ರಕ್ಷಿಸಲು, ಪರಿಹಾರ ಅಥವಾ ಕಡಿತಗಳಿಗೆ ಅವಕಾಶ ನೀಡುವ ಹೂಡಿಕೆದಾರ-ಸ್ನೇಹಿ ರಕ್ಷಣಾ ಷರತ್ತು ಅನ್ನು ಪರಿಚಯಿಸಿರುವುದು ಇದರಲ್ಲಿನ ಪ್ರಮುಖ ಸುಧಾರಣೆಯಾಗಿದೆ. ಇದಲ್ಲದೆ, ಮೂಲಸೌಕರ್ಯಗಳ ಅನಗತ್ಯ ಪುನರಾವರ್ತನೆಯನ್ನು ತಗ್ಗಿಸಲು ಮತ್ತು ಸಣ್ಣ ಕಂಪನಿಗಳಿಗೆ ಪ್ರೋತ್ಸಾಹ ನೀಡಲು, ಗುತ್ತಿಗೆದಾರರು ತಮ್ಮ ಪೈಪ್ ಲೈನ್ ಗಳು ಮತ್ತು ಇತರ ಸೌಲಭ್ಯಗಳಲ್ಲಿ ಪೂರ್ಣವಾಗಿ ಬಳಕೆಯಾಗದ ಸಾಮರ್ಥ್ಯವನ್ನು ಘೋಷಿಸುವುದನ್ನು ಈ ಕರಡು ಕಡ್ಡಾಯಗೊಳಿಸುತ್ತದೆ. ಹಾಗೆಯೇ, ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟು, ನ್ಯಾಯಯುತವಾದ ನಿಯಮಗಳ ಅಡಿಯಲ್ಲಿ ಮೂರನೇ ವ್ಯಕ್ತಿಗಳಿಗೆ ಈ ಸೌಲಭ್ಯಗಳ ಬಳಕೆಗೆ ಪ್ರವೇಶ ನೀಡಬೇಕೆಂದು ಸ್ಪಷ್ಟಪಡಿಸುತ್ತದೆ.

ಮೊದಲ ಬಾರಿಗೆ, ಈ ಕರಡು ನಿಯಮಗಳು ನಿರ್ವಾಹಕರಿಗೆ ತಮ್ಮ ತೈಲಕ್ಷೇತ್ರದ ಬ್ಲಾಕ್ ಗಳ ವ್ಯಾಪ್ತಿಯಲ್ಲೇ, ಸಮಗ್ರ ನವೀಕರಿಸಬಹುದಾದ ಇಂಧನ ಹಾಗೂ ಕಡಿಮೆ-ಇಂಗಾಲದ ಯೋಜನೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿವೆ. ಸೌರ, ಪವನ, ಹೈಡ್ರೋಜನ್ ಹಾಗೂ ಭೂಶಾಖದ ಶಕ್ತಿಯಂತಹ ಯೋಜನೆಗಳು ಇದರಲ್ಲಿ ಸೇರಿವೆ. ಆದರೆ, ಈ ಯೋಜನೆಗಳು ನಿಗದಿತ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಮತ್ತು ಚಾಲ್ತಿಯಲ್ಲಿರುವ ಪೆಟ್ರೋಲಿಯಂ ಉತ್ಪಾದನೆಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದಿರುವುದು ಅತ್ಯವಶ್ಯಕವಾಗಿದೆ. ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಇನ್ನಷ್ಟು ದೃಢಪಡಿಸುವ ನಿಟ್ಟಿನಲ್ಲಿ, ಈ ಕರಡು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ನಿಗಾ ಇಡಲು ಮತ್ತು ಅದರ ಬಗ್ಗೆ ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಅಳವಡಿಸಿದೆ. ಹಾಗೆಯೇ, ಕಾರ್ಬನ್ ಕ್ಯಾಪ್ಚರ್ ಮತ್ತು ಸ್ಟೋರೇಜ್ ಗಾಗಿ ಒಂದು ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸಿದ್ದು, ಘಟಕವನ್ನು ಮುಚ್ಚಿದ ನಂತರ ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯೊಂದಿಗೆ ಸ್ಥಳ ಪುನಃಸ್ಥಾಪನೆ ನಿಧಿಯನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಡೇಟಾ ನಿರ್ವಹಣೆಗೆ ಸಂಬಂಧಿಸಿದಂತೆ, ಪರಿಶೋಧನೆ ಮತ್ತು ಉತ್ಪಾದನೆಯ ಸಮಯದಲ್ಲಿ ಸಂಗ್ರಹಿಸಲಾದ ಎಲ್ಲಾ ಕಾರ್ಯಾಚರಣೆಯ ಡೇಟಾ ಮತ್ತು ಭೌತಿಕ ಮಾದರಿಗಳು ಭಾರತ ಸರ್ಕಾರದ ಸ್ವತ್ತಾಗಿರುತ್ತವೆ. ಗುತ್ತಿಗೆದಾರರು ಈ ಡೇಟಾವನ್ನು ತಮ್ಮ ಆಂತರಿಕ ಬಳಕೆಗಾಗಿ ಉಪಯೋಗಿಸಬಹುದು, ಆದರೆ ಅದನ್ನು ರಫ್ತು ಮಾಡಲು ಅಥವಾ ಯಾವುದೇ ಬಾಹ್ಯ ಉದ್ದೇಶಕ್ಕೆ ಬಳಸಲು ಸರ್ಕಾರದ ಅನುಮೋದನೆ ಕಡ್ಡಾಯವಾಗಿದೆ, ಮತ್ತು ಈ ಡೇಟಾದ ಗೌಪ್ಯತೆಯನ್ನು ಏಳು ವರ್ಷಗಳವರೆಗೆ ಕಾಪಾಡಲಾಗುತ್ತದೆ. ಇದಲ್ಲದೆ, ನಿಯಮಗಳ ಪಾಲನೆಯನ್ನು ಖಚಿತಪಡಿಸಲು, ವಿವಾದಗಳನ್ನು ಬಗೆಹರಿಸಲು ಮತ್ತು ದಂಡ ವಿಧಿಸಲು ಅಧಿಕಾರವುಳ್ಳ, ಜಂಟಿ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯ ನೇತೃತ್ವದಲ್ಲಿ ಮೀಸಲಾದ 'ನ್ಯಾಯನಿರ್ಣಯ ಪ್ರಾಧಿಕಾರ'ವನ್ನು (Adjudicating Authority) ಸ್ಥಾಪಿಸಲು ಈ ಕರಡು ಪ್ರಸ್ತಾಪಿಸಿದೆ. ಕಾರ್ಯಾಚರಣೆಯ ನಮ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಗುತ್ತಿಗೆಗಳ ವಿಲೀನ, ವಿಸ್ತರಣೆ ಹಾಗೂ ಬಹು ಬ್ಲಾಕ್ ಗಳಲ್ಲಿ ವ್ಯಾಪಿಸಿರುವ ಜಲಾಶಯಗಳ ಏಕೀಕರಣ  (unitisation) ಕ್ಕೆ ಸಂಬಂಧಿಸಿದಂತೆ  ಹೆಚ್ಚು ಸ್ಪಷ್ಟವಾದ ಪ್ರಕ್ರಿಯೆಗಳನ್ನು ಸಹ ಈ ನಿಯಮಗಳಲ್ಲಿ ಸೇರಿಸಲಾಗಿದೆ.

ಪ್ರಸ್ತುತ ಸುಧಾರಣೆಗಳು, ದಶಕಗಳಷ್ಟು ಹಳೆಯದಾದ 'ಪೆಟ್ರೋಲಿಯಂ ರಿಯಾಯಿತಿ ನಿಯಮಗಳು, 1949' ಮತ್ತು 'ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಮಗಳು, 1959'ರ ಬದಲಾಗಿ ಜಾರಿಗೆ ತರಲಾಗಿದ್ದು, ಇವು ಇತ್ತೀಚಿನ 'ತೈಲಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 1948'ರ ತಿದ್ದುಪಡಿಯನ್ನು ಅನುಸರಿಸುತ್ತವೆ. ಭಾರತದ ಇತಿಹಾಸದಲ್ಲೇ ಅತಿದೊಡ್ಡದೆನಿಸಿದ ಪರಿಶೋಧನೆ ಮತ್ತು ಉತ್ಪಾದನಾ ಹರಾಜು ಪ್ರಕ್ರಿಯೆಯಾದ 'OALP ರೌಂಡ್ X' ಆರಂಭಗೊಳ್ಳುವ ಮುನ್ನವೇ ಈ ನಿಯಮಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಈ ಕರಡು ನಿಯಮಗಳ ಜೊತೆಗೇ, ಸಚಿವಾಲಯವು ಪರಿಷ್ಕರಿಸಿದ 'ಮಾದರಿ ಆದಾಯ ಹಂಚಿಕೆ ಒಪ್ಪಂದ'ವನ್ನೂ ಪ್ರಕಟಿಸಿದೆ; ಇದು ಹೊಸ ನಿಯಮಾವಳಿಯ ಪ್ರಮುಖ ಅಂಶಗಳಾದ 'ಯೂನಿಟೈಸೇಶನ್', ಗುತ್ತಿಗೆ ಪ್ರದೇಶಗಳ ವಿಲೀನ, ಹಾಗೂ ಮೂಲಸೌಕರ್ಯ ಹಂಚಿಕೆಯ ಹೊಣೆಗಾರಿಕೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಅಂತೆಯೇ, ನವೀಕೃತ 'ಪೆಟ್ರೋಲಿಯಂ ಗುತ್ತಿಗೆ'ಯ ಸ್ವರೂಪದಲ್ಲಿ, ಗುತ್ತಿಗೆಯನ್ನು ಹಿಂದಿರುಗಿಸುವ, ಜಲಾಶಯಗಳನ್ನು ವಿಸ್ತರಿಸುವ ಹಾಗೂ ಗುತ್ತಿಗೆ ರದ್ದತಿಗೆ ಕಾರಣವಾಗುವ ಸಂದರ್ಭಗಳ ಕುರಿತಾದ ಕಾರ್ಯವಿಧಾನಗಳನ್ನು ಹೆಚ್ಚು ನಿಖರಗೊಳಿಸಲಾಗಿದ್ದು, ಇದು ನಿರ್ವಾಹಕರಿಗೆ ತಮ್ಮ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಸ್ಥಿರತೆ ಮತ್ತು ಭರವಸೆಯನ್ನು ನೀಡುತ್ತದೆ.

ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಒತ್ತಿ ಹೇಳಿದಂತೆ, “ಭಾರತದಲ್ಲಿ ತೈಲ ಮತ್ತು ಅನಿಲ ಪರಿಶೋಧನೆಯು ಹಿಂದೆಂದಿಗಿಂತಲೂ ಹೆಚ್ಚು ಸುಲಭ, ವೇಗ ಹಾಗೂ ಲಾಭದಾಯಕವಾಗಿದೆ. ಆಧುನಿಕ ಹಾಗೂ ಹೂಡಿಕೆದಾರ-ಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ನಾವು ರಚನಾತ್ಮಕ ಸಹಭಾಗಿತ್ವವನ್ನು ನಿರೀಕ್ಷಿಸುತ್ತೇವೆ.” ಎಲ್ಲಾ ಪಾಲುದಾರರು ತಮ್ಮ ಅಮೂಲ್ಯವಾದ ಅಭಿಪ್ರಾಯ ಮತ್ತು ಸಲಹೆಗಳನ್ನು ಮುಂಬರುವ ಜುಲೈ 17, 2025 ರ ಅಂತಿಮ ಗಡುವಿನೊಳಗೆ png-rules@dghindia.gov.in ಇ-ಮೇಲ್ ವಿಳಾಸಕ್ಕೆ ಸಲ್ಲಿಸುವಂತೆ ಕೋರಲಾಗಿದೆ. ಪಾರದರ್ಶಕ, ದಕ್ಷ ಮತ್ತು ಸುಸ್ಥಿರವಾದ ಪರಿಶೋಧನೆ ಮತ್ತು ಉತ್ಪಾದನಾ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಈ ಪ್ರಯತ್ನಗಳ ಮುಖ್ಯ ಗುರಿಯಾಗಿದ್ದು, ಇದು ಭಾರತದ ವಿಶಾಲವಾದ ಇಂಧನ ಪರಿವರ್ತನೆಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿದೆ.

 

*****
 


(Release ID: 2143446)