ಪ್ರಧಾನ ಮಂತ್ರಿಯವರ ಕಛೇರಿ
ಬ್ರೆಜಿಲ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
Posted On:
09 JUL 2025 6:02AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಗೆ ಅಧಿಕೃತ ಭೇಟಿ ನೀಡಿದ್ದಾರೆ. ಅವರು ಇಂದು ಬ್ರೆಜಿಲ್ ನ ಅಧ್ಯಕ್ಷ ಘನತೆವೆತ್ತ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಬ್ರೆಜಿಲ್ ನ ಅಲ್ವೊರಾಡಾ ಅರಮನೆಯಲ್ಲಿ ಭೇಟಿಯಾದರು. ಪ್ರಧಾನಿಯವರನ್ನು ಅಧ್ಯಕ್ಷ ಲುಲಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಭವ್ಯ ಮತ್ತು ವರ್ಣರಂಜಿತ ವಿಧ್ಯುಕ್ತ ಸ್ವಾಗತವನ್ನು ನೀಡಿದರು.
ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಲುಲಾ ಅವರು ಸೀಮಿತ ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು ಮತ್ತು ಭಾರತ ಮತ್ತು ಬ್ರೆಜಿಲ್ ನಡುವಿನ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯ ಎಲ್ಲಾ ಅಂಶಗಳನ್ನು ಚರ್ಚಿಸಿದರು. ಭಾರತ-ಬ್ರೆಜಿಲ್ ನಡುವಿನ ಆತ್ಮೀಯ ಮತ್ತು ಸ್ನೇಹಪರ ಸಂಬಂಧಗಳ ಆಧಾರವಾಗಿರುವ ಸಮಾನ ಮೌಲ್ಯಗಳನ್ನು ಅವರು ಪುನರುಚ್ಚರಿಸಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆರೋಗ್ಯ ಮತ್ತು ಔಷಧಗಳು, ಬಾಹ್ಯಾಕಾಶ, ನವೀಕರಿಸಬಹುದಾದ ಇಂಧನ, ಕೃಷಿ ಮತ್ತು ಆಹಾರ ಸಂಸ್ಕರಣೆ, ಇಂಧನ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಯುಪಿಐ, ಸಾಂಪ್ರದಾಯಿಕ ಔಷಧ, ಯೋಗ, ಕ್ರೀಡಾ ಸಂಬಂಧಗಳು, ಸಂಸ್ಕೃತಿ ಮತ್ತು ಜನರು ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ನಾಯಕರು ಚರ್ಚಿಸಿದರು. ನಿರ್ಣಾಯಕ ಖನಿಜಗಳು, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಎಐ ಮತ್ತು ಸೂಪರ್ ಕಂಪ್ಯೂಟರ್ ಗಳು, ಡಿಜಿಟಲ್ ಸಹಕಾರ ಮತ್ತು ಚಲನಶೀಲತೆಯಂತಹ ಹೊಸ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳನ್ನು ಅವರು ಅನ್ವೇಷಿಸಿದರು.
ವ್ಯಾಪಾರ ಮತ್ತು ವಾಣಿಜ್ಯ ವಿಷಯಗಳ ಬಗ್ಗೆ ಚರ್ಚಿಸಲು ಸಚಿವ ಮಟ್ಟದ ವ್ಯವಸ್ಥೆಯ ಸ್ಥಾಪನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಭಾರತ-ಮೆರ್ಕೋಸರ್ ಆದ್ಯತೆಯ ವ್ಯಾಪಾರ ಒಪ್ಪಂದದ ವಿಸ್ತರಣೆ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವ ಬಗ್ಗೆ ಅವರು ಚರ್ಚಿಸಿದರು. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 20 ಬಿಲಿಯನ್ ಅಮೆರಿಕನ್ ಡಾಲರ್ ಗಳಿಗೆ ಹೆಚ್ಚಿಸುವ ಗುರಿಯನ್ನು ನಾಯಕರು ನಿಗದಿಪಡಿಸಿದರು. ಇಂಧನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಗಣಿಸಿ, ಎರಡೂ ದೇಶಗಳು ಹೈಡ್ರೋಕಾರ್ಬನ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿರುವುದರಿಂದ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಇಬ್ಬರು ನಾಯಕರು ಸಮ್ಮತಿಸಿದರು.
ಏಪ್ರಿಲ್ 2025 ರಲ್ಲಿ ಪಹಲ್ಗಾಮ್ ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯ ನಂತರ ಭಾರತಕ್ಕೆ ಬ್ರೆಜಿಲ್ ನೀಡಿದ ಬೆಂಬಲಕ್ಕಾಗಿ ಪ್ರಧಾನಿಯವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಇದು ಎಲ್ಲಾ ರೂಪದ ಮತ್ತು ಅಭಿವ್ಯಕ್ತಿಗಳ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳ ದೃಢ ಬದ್ಧತೆಯನ್ನು ಒತ್ತಿಹೇಳುತ್ತದೆ. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಮತ್ತು ಅಂತಹ ಅಮಾನವೀಯ ಕೃತ್ಯಗಳನ್ನು ಉತ್ತೇಜಿಸುವವರನ್ನು ದೃಢವಾಗಿ ಎದುರಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಮತ್ತು ಅದನ್ನು ಸೋಲಿಸಲು ಎರಡೂ ದೇಶಗಳು ಜಾಗತಿಕ ಸಮುದಾಯದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅಧ್ಯಕ್ಷ ಲುಲಾ ಒಪ್ಪಿಕೊಂಡರು.
ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಆಡಳಿತ ಸಂಸ್ಥೆಗಳ ಬಹುಪಕ್ಷೀಯತೆ ಮತ್ತು ಸುಧಾರಣೆಗೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಹವಾಮಾನ ಬದಲಾವಣೆಯನ್ನು ಎದುರಿಸಲು ಜಾಗತಿಕ ಕ್ರಮವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಅವರು ಒಪ್ಪಿಕೊಂಡರು. ಮುಂಬರುವ ಸಿಒಪಿ-30 ಹವಾಮಾನ ಬದಲಾವಣೆ ಸಮ್ಮೇಳನ ಆಯೋಜಿಸುವ ಬ್ರೆಜಿಲ್ ಗೆ ಪ್ರಧಾನಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಅವರು ಸಮ್ಮತಿಸಿದರು.
ಮಾತುಕತೆಯ ನಂತರ, ಭಯೋತ್ಪಾದನೆ ನಿಗ್ರಹ, ಭದ್ರತಾ ವಲಯದಲ್ಲಿ ಮಾಹಿತಿ ಹಂಚಿಕೆ, ಕೃಷಿ ಸಂಶೋಧನೆ, ನವೀಕರಿಸಬಹುದಾದ ಇಂಧನ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಡಿಜಿಟಲ್ ಸಹಕಾರ (ಇಂಡಿಯಾ ಸ್ಟಾಕ್) ಕ್ಷೇತ್ರಗಳಲ್ಲಿ ಆರು ಒಪ್ಪಂದಗಳನ್ನು (ವಿವರಗಳನ್ನು ಇಲ್ಲಿ ನೋಡಬಹುದು) ಅಂತಿಮಗೊಳಿಸಲಾಯಿತು. ಅಧಿಕೃತ ಭೇಟಿಯ ಸಂದರ್ಭದಲ್ಲಿ ಜಂಟಿ ಹೇಳಿಕೆ (Link) ನೀಡಲಾಯಿತು.
ಪ್ರಧಾನಮಂತ್ರಿ ಅವರ ಗೌರವಾರ್ಥವಾಗಿ ಅಧ್ಯಕ್ಷ ಲುಲಾ ಅವರು ಭೋಜನ ಕೂಟವನ್ನು ಆಯೋಜಿಸಿದ್ದರು. ಪ್ರಧಾನಮಂತ್ರಿ ಅವರು ಅಧ್ಯಕ್ಷ ಲುಲಾ ಅವರ ಆತ್ಮೀಯ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದರು.
*****
(Release ID: 2143374)
Read this release in:
English
,
Urdu
,
Marathi
,
Hindi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam