ಪ್ರಧಾನ ಮಂತ್ರಿಯವರ ಕಛೇರಿ
ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಮಂತ್ರಿಯೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
Posted On:
04 JUL 2025 11:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋರ್ಟ್ ಆಫ್ ಸ್ಪೇನ್‌ನ ರೆಡ್ ಹೌಸ್‌ನಲ್ಲಿ ಟ್ರಿನಿಡಾಡ್ ಮತ್ತು ಟೊಬೆಗೊ ಗಣರಾಜ್ಯದ [ಟಿ&ಟಿ] ಪ್ರಧಾನಮಂತ್ರಿ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರ ಜೊತೆ ಮಾತುಕತೆ ನಡೆಸಿದರು. ಇತ್ತೀಚಿನ ಚುನಾವಣೆಗಳಲ್ಲಿ ಜಯಗಳಿಸಿದ ನಂತರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಶುಭ ಕೋರಿದರು. ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದ್ದಕ್ಕಾಗಿ ಟ್ರಿನಿಡಾಡ್ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.
ಕೃಷಿ, ಆರೋಗ್ಯ ರಕ್ಷಣೆ ಮತ್ತು ಔಷಧೀಯ ವಸ್ತುಗಳು, ಡಿಜಿಟಲ್ ರೂಪಾಂತರ, ಯುಪಿಐ, ಸಾಮರ್ಥ್ಯ ವೃದ್ಧಿ, ಸಂಸ್ಕೃತಿ, ಕ್ರೀಡೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ಸಂಭಾವ್ಯ ಸಹಯೋಗದ ವ್ಯಾಪಕ ಕ್ಷೇತ್ರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು. ಅಭಿವೃದ್ಧಿ ಸಹಕಾರವು ಭಾರತ-ಟ್ರಿನಿಡಾಡ್ ಮತ್ತು ಟೊಬೆಗೊ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿದೆ. ಪ್ರಧಾನಿ ಮೋದಿಯವರ ಟ್ರಿನಿಡಾಡ್ ಮತ್ತು ಟೊಬೆಗೊ ಭೇಟಿಯು ಎರಡೂ ದೇಶಗಳ ನಡುವಿನ ಆಳವಾದ ಬೇರೂರಿರುವ ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಪ್ರಧಾನಿ ಬಿಸ್ಸೆಸರ್ ತಿಳಿಸಿದರು.
ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ ಮತ್ತು ಸೈಬರ್ ಭದ್ರತೆಯಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಜನರಿಗೆ ಟಿ & ಟಿ ನೀಡಿದ ಬಲವಾದ ಬೆಂಬಲ ಮತ್ತು ಒಗ್ಗಟ್ಟಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಇತರೆ ವಿಷಯಗಳ ವಿರುದ್ಧ ಹೋರಾಡಲು ಇಬ್ಬರು ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಜಾಗತಿಕ ದಕ್ಷಿಣದ ದೇಶಗಳಲ್ಲಿ ಹೆಚ್ಚಿನ ಒಗ್ಗಟ್ಟಿಗಾಗಿ ಮತ್ತು ಭಾರತ-ಕ್ಯಾರಿಕಾಮ್ ಪಾಲುದಾರಿಕೆಯನ್ನು ಬಲಪಡಿಸಲು ಅವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.
ಮಾತುಕತೆಯ ನಂತರ, ಔಷಧಶಾಸ್ತ್ರ, ತ್ವರಿತ ಪರಿಣಾಮ ಯೋಜನೆಗಳು, ಸಂಸ್ಕೃತಿ, ಕ್ರೀಡೆ, ರಾಜತಾಂತ್ರಿಕ ತರಬೇತಿ ಮತ್ತು ಹಿಂದಿ ಮತ್ತು ಭಾರತೀಯ ಅಧ್ಯಯನಕ್ಕಾಗಿ ಐಸಿಸಿಆರ್ ಪೀಠಗಳ ಕ್ಷೇತ್ರಗಳಲ್ಲಿ ಆರು ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಟಿ & ಟಿಯಲ್ಲಿ ಭಾರತೀಯ ಮೂಲದ ಜನರಿಗೆ ಒಸಿಐ ಕಾರ್ಡ್ ನೀಡುವುದು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು ಹಲವಾರು ಘೋಷಣೆಗಳನ್ನು ಮಾಡಲಾಯಿತು. ಫಲಿತಾಂಶಗಳ ಪಟ್ಟಿ ಇಲ್ಲಿದೆ.
ಭಾರತಕ್ಕೆ ಭೇಟಿ ನೀಡಬೇಕೆಂದು ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು. ಅದಕ್ಕೆ ಪ್ರಧಾನಿ ಕಮಲಾ ಸೂಕ್ತವಾಗಿ ಸ್ಪಂದಿಸಿದ್ದಾರೆ. ಪ್ರಧಾನಮಂತ್ರಿಯವರ ಟ್ರಿನಿಡಾಡ್ ಮತ್ತು ಟೊಬಾಗೋ ಭೇಟಿಯು ಎರಡೂ ದೇಶಗಳ ನಡುವಿನ ವಿಶೇಷ ಬಾಂಧವ್ಯಕ್ಕೆ ಇನ್ನಷ್ಟು ಉತ್ತೇಜನ ನೀಡಿದೆ.
*****
(Release ID: 2142657)
Read this release in:
Odia
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam