ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಘಾನಾ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, 1.4 ಶತಕೋಟಿ ಭಾರತೀಯರ ಅಭಿಮಾನ ಮತ್ತು ಶುಭಾಶಯಗಳನ್ನು ನಾನು ನನ್ನೊಂದಿಗೆ ತಂದಿದ್ದೇನೆ: ಪ್ರಧಾನಮಂತ್ರಿ

ನಿಜವಾದ ಪ್ರಜಾಪ್ರಭುತ್ವವು ಚರ್ಚೆ ಮತ್ತು ಸಂವಾದವನ್ನು ಉತ್ತೇಜಿಸುತ್ತದೆ; ಇದು ಜನರನ್ನು ಒಂದುಗೂಡಿಸುತ್ತದೆ; ಇದು ಘನತೆಯನ್ನು ಬೆಂಬಲಿಸುತ್ತದೆ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುತ್ತದೆ: ಪ್ರಧಾನಮಂತ್ರಿ

ನಮಗೆ, ಪ್ರಜಾಪ್ರಭುತ್ವವು ಕೇವಲ ಒಂದು ವ್ಯವಸ್ಥೆಯಲ್ಲ; ಇದು ನಮ್ಮ ಮೂಲಭೂತ ಮೌಲ್ಯಗಳ ಒಂದು ಭಾಗವಾಗಿದೆ: ಪ್ರಧಾನಮಂತ್ರಿ

ಭಾರತ ಮತ್ತು ಘಾನಾದ ಇತಿಹಾಸಗಳು ವಸಾಹತುಶಾಹಿ ಆಳ್ವಿಕೆಯ ಗಾಯಗಳನ್ನು ಹೊಂದಿವೆ; ಆದರೆ ನಮ್ಮ ಆತ್ಮಗಳು/ಉತ್ಸಾಹಗಳು ಸದಾ ಮುಕ್ತ ಮತ್ತು ನಿರ್ಭೀತವಾಗಿ ಉಳಿದಿವೆ: ಪ್ರಧಾನಮಂತ್ರಿ

ಎರಡನೇ ಮಹಾಯುದ್ಧದ ನಂತರ ರೂಪುಗೊಂಡ ವಿಶ್ವ ವ್ಯವಸ್ಥೆಯು ವೇಗವಾಗಿ ಬದಲಾಗುತ್ತಿದೆ; ತಂತ್ರಜ್ಞಾನದಲ್ಲಿನ ಕ್ರಾಂತಿ, ಜಾಗತಿಕ ದಕ್ಷಿಣದ ಉದಯ ಮತ್ತು ಬದಲಾಗುತ್ತಿರುವ ಜನಸಂಖ್ಯಾಶಾಸ್ತ್ರವು ಅದರ ವೇಗ ಮತ್ತು ಪ್ರಮಾಣಕ್ಕೆ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ

ಬದಲಾಗುತ್ತಿರುವ ಸಂದರ್ಭಗಳು ಜಾಗತಿಕ ಆಡಳಿತದಲ್ಲಿ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ಬಯಸುತ್ತವೆ: ಪ್ರಧಾನಮಂತ್ರಿ

ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡದೆ ಪ್ರಗತಿ ಬರಲು ಸಾಧ್ಯವಿಲ್ಲ: ಪ್ರಧಾನಮಂತ್ರಿ

ಇಂದು, ಭಾರತವು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯಾಗಿದೆ: ಪ್ರಧಾನಮಂತ್ರಿ

ಭಾರತವು ನಾವೀನ್ಯತೆ ಮತ್ತು ತಂತ್ರಜ್ಞಾನ ಕೇಂದ್ರವಾಗಿದೆ, ಅಲ್ಲಿ ಜಾಗತಿಕ ಕಂಪನಿಗಳು ಸೇರಲು ಬಯಸುತ್ತವೆ: ಪ್ರಧಾನಮಂತ್ರಿ

ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ: ಪ್ರಧಾನಮಂತ್ರಿ

Posted On: 03 JUL 2025 6:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಸತ್ತಿನ ಸ್ಪೀಕರ್ ಗೌರವಾನ್ವಿತ ಆಲ್ಬನ್ ಕಿಂಗ್ಸ್‌ಫೋರ್ಡ್ ಸುಮನಾ ಬಾಗ್ಬಿನ್ ಅವರು ಕರೆದಿದ್ದ ಅಧಿವೇಶನದಲ್ಲಿ ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ಎರಡೂ ರಾಷ್ಟ್ರಗಳ ಗಣ್ಯ ಅತಿಥಿಗಳು ಭಾಗವಹಿಸಿದ್ದರು. ಈ ಭಾಷಣವು ಭಾರತ-ಘಾನಾ ಸಂಬಂಧಗಳಲ್ಲಿ ಮಹತ್ವದ ಕ್ಷಣವನ್ನು ದಾಖಲಿಸಿತು, ಇದು ಎರಡೂ ದೇಶಗಳನ್ನು ಒಂದುಗೂಡಿಸುವ ಪರಸ್ಪರ ಗೌರವ ಮತ್ತು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ತಮ್ಮ ಭಾಷಣದಲ್ಲಿ, ಪ್ರಧಾನಿಯವರು ಭಾರತ ಮತ್ತು ಘಾನಾ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಪ್ರಮುಖವಾಗಿ ಉಲ್ಲೇಖಿಸಿದರು, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳು ಮತ್ತು ಪ್ರಜಾಪ್ರಭುತ್ವ ಹಾಗು ಸಮಗ್ರ ಅಭಿವೃದ್ಧಿಗೆ ಸಾಮಾನ್ಯ ಬದ್ಧತೆಯ ಮೂಲಕ ಇವು ಪರಸ್ಪರ ಬೆಸೆದುಕೊಂಡಿವೆ ಎಂದವರು ಹೇಳಿದರು. ತಮಗೆ ನೀಡಲಾದ ರಾಷ್ಟ್ರೀಯ ಗೌರವಕ್ಕಾಗಿ ಅವರು ಘಾನಾದ ಅಧ್ಯಕ್ಷ ಘನತೆವೆತ್ತ ಜಾನ್ ಡ್ರಾಮಾನಿ ಮಹಾಮ ಮತ್ತು ಘಾನಾದ ಜನರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಇದು ನಿರಂತರ ಸ್ನೇಹದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಘಾನಾದ ಮಹಾನ್ ನಾಯಕ ಡಾ. ಕ್ವಾಮೆ ನ್ಕ್ರುಮಾ ಅವರ ಕೊಡುಗೆಗಳ ಬಗ್ಗೆ ಗಮನ ಸೆಳೆದ ಅವರು, ಅವುಗಳನ್ನು ಆಧರಿಸಿ, ಏಕತೆ, ಶಾಂತಿ ಮತ್ತು ನ್ಯಾಯದ ಆದರ್ಶಗಳು ಬಲವಾದ ಮತ್ತು ಶಾಶ್ವತ ಪಾಲುದಾರಿಕೆಗಳ ಅಡಿಪಾಯವಾಗಿವೆ ಎಂದು ಅವರು ಒತ್ತಿ ಹೇಳಿದರು.

"ನಮ್ಮನ್ನು ಒಗ್ಗೂಡಿಸುವ ಶಕ್ತಿಗಳು ಆಂತರಂಗದಲ್ಲಿವೆ ಮತ್ತು ನಮ್ಮನ್ನು ದೂರವಿಡುವ ಪ್ರಭಾವಗಳಿಗಿಂತ ಅವು ದೊಡ್ಡವು" ಎಂದು ಹೇಳಿದ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಿರ್ಮಿಸುವ ದೀರ್ಘಕಾಲೀನ ಪ್ರಭಾವದ ಮೇಲೆ ಹೆಚ್ಚಿನ ಒತ್ತು ನೀಡಿದ ಡಾ. ನ್ಕ್ರುಮಾ ಅವರನ್ನು ಉಲ್ಲೇಖಿಸಿದ ಪ್ರಧಾನಿಯವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪೋಷಿಸುವ ಮಹತ್ವವನ್ನು ಒತ್ತಿ ಹೇಳಿದರು. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತವು ತನ್ನ ಸಂಸ್ಕೃತಿಯ ಭಾಗವಾಗಿ ಪ್ರಜಾಪ್ರಭುತ್ವ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದ ಪ್ರಧಾನಿಯವರು, ಭಾರತದಲ್ಲಿ ಪ್ರಜಾಪ್ರಭುತ್ವದ ಆಳವಾದ ಮತ್ತು ರೋಮಾಂಚಕ ಬೇರುಗಳನ್ನು ಎತ್ತಿ ತೋರಿಸಿದರು. ಘಾನಾವು ತನ್ನ  ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಪ್ರತಿಧ್ವನಿಸಿದ ಮೌಲ್ಯವು ವೈವಿಧ್ಯತೆಯಲ್ಲಿ ಏಕತೆಯ ಶಕ್ತಿಗೆ ಸಾಕ್ಷಿಯಾಗಿ ಭಾರತದ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವ  ನಿಂತಿದೆ ಎಂದವರು ಹೇಳಿದರು.  ಹವಾಮಾನ ಬದಲಾವಣೆ, ಭಯೋತ್ಪಾದನೆ, ಸಾಂಕ್ರಾಮಿಕ ರೋಗಗಳು ಮತ್ತು ಸೈಬರ್ ಬೆದರಿಕೆಗಳಂತಹ ಅತ್ಯಂತ ಒತ್ತಡದ ಜಾಗತಿಕ ಸವಾಲುಗಳನ್ನು ಸಹ ಅವರು ಎತ್ತಿ ತೋರಿಸಿದರು ಮತ್ತು ಜಾಗತಿಕ ಆಡಳಿತದಲ್ಲಿ ಸಾಮೂಹಿಕ ಜಾಗತಿಕ ದಕ್ಷಿಣದ ಧ್ವನಿಗೆ ಬಲ ಬೇಕು ಎಂದು ಕರೆ ನೀಡಿದರು. ಭಾರತದ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ರ ಶಾಶ್ವತ ಸದಸ್ಯರನ್ನಾಗಿ ಸೇರಿಸಿರುವುದನ್ನು ಅವರು ಸಂದರ್ಭದಲ್ಲಿ ಒತ್ತಿ ಹೇಳಿದರು.

ಘಾನಾದ ಕ್ರಿಯಾಶೀಲ ಸಂಸದೀಯ ವ್ಯವಸ್ಥೆಯನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಎರಡೂ ದೇಶಗಳ ಶಾಸಕಾಂಗಗಳ ನಡುವೆ ಹೆಚ್ಚುತ್ತಿರುವ ವಿನಿಮಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಘಾನಾ-ಭಾರತ ಸಂಸದೀಯ ಸ್ನೇಹ ಸಂಘ ಸ್ಥಾಪನೆಯನ್ನು ಅವರು ಸ್ವಾಗತಿಸಿದರು. 2047 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭಾರತದ ಜನರ ಸಂಕಲ್ಪವನ್ನು ವ್ಯಕ್ತಪಡಿಸಿದ ಪ್ರಧಾನಿ, ಘಾನಾದ ಪ್ರಗತಿ ಮತ್ತು ಸಮೃದ್ಧಿಯ ಪ್ರಯಾಣದಲ್ಲಿ ಭಾರತವು ಅದರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಹೇಳಿದರು.

 

 

*****


(Release ID: 2142180) Visitor Counter : 2