ಪ್ರಧಾನ ಮಂತ್ರಿಯವರ ಕಛೇರಿ
ಘಾನಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
Posted On:
03 JUL 2025 2:35AM by PIB Bengaluru
ಗೌರವಾನ್ವಿತ ಅಧ್ಯಕ್ಷರಾದ ಜಾನ್ ಮಹಾಮ ಅವರೇ,
ಉಭಯ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಮೂರು ದಶಕಗಳ ಸುದೀರ್ಘ ಅಂತರದ ನಂತರ, ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಗೆ ಭೇಟಿ ನೀಡುತ್ತಿದ್ದಾರೆ.
ಈ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ.
“ಅಯ್ಯ ಮೆ ಅನೆಜೆ ಸೆ ಮೆವೊಹ್”
ಘಾನಾದಲ್ಲಿ ನನ್ನನ್ನು ಸೌಹಾರ್ದತೆ ಮತ್ತು ಗೌರವದಿಂದ ಸ್ವಾಗತಿಸಿರುವುದಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ.
ಖುದ್ದು ಅಧ್ಯಕ್ಷರೇ ನನ್ನನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಬಂದಿರುವುದು ನನಗೆ ಬಹಳ ಗೌರವದ ವಿಷಯವಾಗಿದೆ.
ಡಿಸೆಂಬರ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷ ಮಹಾಮ ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅವರ ಅದ್ಭುತ ಗೆಲುವಿಗೆ ನಾನು ಮತ್ತೊಮ್ಮೆ ಅವರನ್ನು ಅಭಿನಂದಿಸುತ್ತೇನೆ.
ಈ ಗೆಲುವು ಘಾನಾದ ಜನರು ಅವರ ದೃಷ್ಟಿಕೋನ ಮತ್ತು ನಾಯಕತ್ವದಲ್ಲಿ ಹೊಂದಿರುವ ಆಳವಾದ ವಿಶ್ವಾಸವನ್ನು ತೋರಿಸುತ್ತದೆ.
ಸ್ನೇಹಿತರೇ,
ಭಾರತ ಮತ್ತು ಘಾನಾ ನಡುವಿನ ಸ್ನೇಹದ ತಿರುಳು ನಮ್ಮ ಸಾಮಾನ್ಯ ಮೌಲ್ಯಗಳು, ಹೋರಾಟಗಳು ಮತ್ತು ಸಮಗ್ರ ಭವಿಷ್ಯಕ್ಕಾಗಿ ಇರುವ ಸಾಮಾನ್ಯ ಕನಸುಗಳಾಗಿವೆ.
ನಮ್ಮ ದೇಶಗಳ ಸ್ವಾತಂತ್ರ್ಯ ಹೋರಾಟವು ಇತರ ಅನೇಕರಿಗೆ ಸ್ಫೂರ್ತಿ ನೀಡಿದೆ.
ಇಂದಿಗೂ, ಪಶ್ಚಿಮ ಆಫ್ರಿಕಾದಲ್ಲಿ, ಘಾನಾ ಇತರ ದೇಶಗಳಿಗೆ "ಭರವಸೆಯ ದಾರಿದೀಪ"ವಾಗಿದೆ.
ಇಂದು, ಅಧ್ಯಕ್ಷರು ಮತ್ತು ನಾನು ನಮ್ಮ ದ್ವಿಪಕ್ಷೀಯ ಸಂಬಂಧವನ್ನು "ಸಮಗ್ರ ಪಾಲುದಾರಿಕೆ" ಯಾಗಿ ಉನ್ನತೀಕರಿಸಲು ನಿರ್ಧರಿಸಿದ್ದೇವೆ.
ಘಾನಾದ ರಾಷ್ಟ್ರ ನಿರ್ಮಾಣದ ಪ್ರಯಾಣದಲ್ಲಿ, ಭಾರತವು ಕೇವಲ ಬೆಂಬಲಿಗನಲ್ಲ, ಜೊತೆಗೆ ಸಹ ಪ್ರಯಾಣಿಕ ಕೂಡಾ ಆಗಿದೆ.
ಈ ಭವ್ಯವಾದ ಜುಬಿಲಿ ಹೌಸ್, ವಿದೇಶಾಂಗ ಸೇವಾ ಸಂಸ್ಥೆ, ಕೊಮಂಡಾ ಸಕ್ಕರೆ ಕಾರ್ಖಾನೆ, ಭಾರತ-ಘಾನಾ ಕೋಫಿ ಅನ್ನನ್ ಐಸಿಟಿ ಕೇಂದ್ರ, ಮತ್ತು 'ತೇಮಾ ಪಕದನ್ ರೈಲ್ವೆ ಮಾರ್ಗ' - ಇವು ಕೇವಲ ಇಟ್ಟಿಗೆಗಳು ಮತ್ತು ಗಾರೆಗಳಲ್ಲ, ಅವು ನಮ್ಮ ಪಾಲುದಾರಿಕೆಯ ಸಂಕೇತಗಳಾಗಿವೆ.
ನಮ್ಮ ದ್ವಿಪಕ್ಷೀಯ ವ್ಯಾಪಾರವು 3 ಬಿಲಿಯನ್ ಯು.ಎಸ್.ಡಾಲರ್ ದಾಟಿದೆ.
ಭಾರತೀಯ ಕಂಪನಿಗಳು ಸುಮಾರು 900 ಯೋಜನೆಗಳಲ್ಲಿ ಸುಮಾರು 2 ಬಿಲಿಯನ್ ಯು.ಎಸ್.ಡಾಲರ್ ಹೂಡಿಕೆ ಮಾಡಿವೆ.
ಇಂದು, ಮುಂದಿನ ಐದು ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಫಿನ್ ಟೆಕ್ ಕ್ಷೇತ್ರದಲ್ಲಿ, ಭಾರತವು ಘಾನಾದೊಂದಿಗೆ ಯುಪಿಐ ಡಿಜಿಟಲ್ ಪಾವತಿಯ ಅನುಭವವನ್ನು ಹಂಚಿಕೊಳ್ಳಲು ಸಿದ್ಧವಾಗಿದೆ.
ಸ್ನೇಹಿತರೇ,
ಅಭಿವೃದ್ಧಿ ಪಾಲುದಾರಿಕೆ ನಮ್ಮ ಪಾಲುದಾರಿಕೆಯ ಮೂಲಭೂತ ಆಧಾರಸ್ತಂಭವಾಗಿದೆ.
ಅಧ್ಯಕ್ಷ ಮಹಾಮ ಅವರ 'ಆರ್ಥಿಕ ಪುನರ್ ರಚನೆ' ಪ್ರಯತ್ನಗಳಲ್ಲಿ ನಾವು ಭಾರತದ ಸಂಪೂರ್ಣ ಬೆಂಬಲ ಮತ್ತು ಸಹಕಾರದ ಭರವಸೆ ನೀಡುತ್ತೇವೆ.
ಇಂದು, ಘಾನಾಗೆ ಐಟಿಇಸಿ ಮತ್ತು ಐಸಿಸಿಆರ್ ವಿದ್ಯಾರ್ಥಿವೇತನಗಳನ್ನು ದ್ವಿಗುಣಗೊಳಿಸಲು ನಾವು ನಿರ್ಧರಿಸಿದ್ದೇವೆ.
ಯುವಕರ ವೃತ್ತಿಪರ ಶಿಕ್ಷಣಕ್ಕಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಕೆಲಸ ಪ್ರಾರಂಭಿಸಲಾಗುವುದು.
ಕೃಷಿ ಕ್ಷೇತ್ರದಲ್ಲಿ, ಅಧ್ಯಕ್ಷ ಮಹಾಮಾ ಅವರ "ಫೀಡ್ ಘಾನಾ" ಕಾರ್ಯಕ್ರಮಕ್ಕೆ ಬೆಂಬಲ ನೀಡಲು ನಮಗೆ ಸಂತೋಷವಾಗುತ್ತದೆ.
ಜನ ಔಷಧಿ ಕೇಂದ್ರಗಳ ಮೂಲಕ ಘಾನಾದ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ರಕ್ಷಣೆ ಮತ್ತು ವಿಶ್ವಾಸಾರ್ಹ ಆರೈಕೆಯನ್ನು ಒದಗಿಸಲು ಭಾರತ ಪ್ರಸ್ತಾಪಿಸುತ್ತಿದೆ.
ಲಸಿಕೆ ಉತ್ಪಾದನೆಯಲ್ಲಿ ಸಹಕಾರದ ಬಗ್ಗೆ ನಾವು ಚರ್ಚಿಸಿದ್ದೇವೆ.
ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರದಲ್ಲಿ, ನಾವು "ಒಗ್ಗಟ್ಟಿನ ಮೂಲಕ ಭದ್ರತೆ" ಎನ್ನುವ ಮಂತ್ರದೊಂದಿಗೆ ಮುಂದುವರಿಯುತ್ತೇವೆ
ಸಶಸ್ತ್ರ ಪಡೆಗಳ ತರಬೇತಿ, ಕಡಲ ಭದ್ರತೆ, ರಕ್ಷಣಾ ಸರಬರಾಜು ಮತ್ತು ಸೈಬರ್ ಭದ್ರತೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು.
ಭಾರತೀಯ ಕಂಪನಿಗಳು ನಿರ್ಣಾಯಕ ಖನಿಜಗಳ ಪರಿಶೋಧನೆ ಮತ್ತು ಗಣಿಗಾರಿಕೆಯಲ್ಲಿ ಸಹಕರಿಸುತ್ತವೆ.
ಭಾರತ ಮತ್ತು ಘಾನಾ ಈಗಾಗಲೇ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಚೇತರಿಕೆ ಮೂಲಸೌಕರ್ಯಕ್ಕಾಗಿ ಒಕ್ಕೂಟದಂತಹ ವೇದಿಕೆಗಳಲ್ಲಿ ಸಹಕರಿಸುತ್ತಿವೆ.
ನವೀಕರಿಸಬಹುದಾದ ಇಂಧನದಲ್ಲಿ, ವಿಶೇಷವಾಗಿ ಶುದ್ಧ ಅಡುಗೆ ಅನಿಲದಲ್ಲಿ ಘಾನಾದ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು, ನಾವು ಅವರನ್ನು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಆಹ್ವಾನಿಸಿದ್ದೇವೆ.
ಸ್ನೇಹಿತರೇ,
ನಾವಿಬ್ಬರೂ ಜಾಗತಿಕ ದಕ್ಷಿಣದ ಸದಸ್ಯರಾಗಿದ್ದೇವೆ ಮತ್ತು ಅದರ ಆದ್ಯತೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ.
ವಾಯ್ಸ್ ಆಫ್ ಗ್ಲೋಬಲ್ ಸಮಿಟ್ ʼಜಾಗತಿಕ ದಕ್ಷಿಣದ ಧ್ವನಿ ಶೃಂಗಸಭೆʼಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಘಾನಾಗೆ ನಾವು ಧನ್ಯವಾದ ಹೇಳುತ್ತೇವೆ.
ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಆಫ್ರಿಕನ್ ಒಕ್ಕೂಟವು ಜಿ20 ನಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆದಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.
ಸಹೇಲ್ ಪ್ರದೇಶ ಸೇರಿದಂತೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ನಾವು ಚರ್ಚೆಗಳನ್ನು ನಡೆಸಿದ್ದೇವೆ. ಭಯೋತ್ಪಾದನೆ ಮಾನವೀಯತೆಯ ಶತ್ರು ಎನ್ನುವ ನಮ್ಮ ಅಭಿಪ್ರಾಯದಲ್ಲಿ ನಾವು ಒಗ್ಗಟ್ಟಾಗಿದ್ದೇವೆ.
ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ಘಾನಾ ನೀಡಿದ ಸಹಕಾರಕ್ಕೆ ನಾವು ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.
ಈ ಸಂದರ್ಭದಲ್ಲಿ, ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ವಿಶ್ವಸಂಸ್ಥೆಯ ಸುಧಾರಣೆಗಳ ಕುರಿತು ನಮ್ಮ ದೃಷ್ಟಿಕೋನಗಳು ಸಹ ನಿಕಟವಾಗಿ ಹೊಂದಿಕೊಂಡಿವೆ.
ಪಶ್ಚಿಮ ಏಷ್ಯಾ ಮತ್ತು ಯುರೋಪಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ನಾವಿಬ್ಬರೂ ಆಳವಾದ ಕಳವಳ ವ್ಯಕ್ತಪಡಿಸಿದ್ದೇವೆ. ಇದು ಯುದ್ಧದ ಯುಗವಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ.
ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು.
ಸ್ನೇಹಿತರೇ,
ಘಾನಾದಲ್ಲಿರುವ ಭಾರತೀಯ ಸಮುದಾಯವು ನಮ್ಮ ಜನರ ನಡುವಿನ ಸಂಬಂಧಗಳಲ್ಲಿ ಪ್ರಮುಖ ಕೊಂಡಿಯಾಗಿದೆ.
ಹಲವು ವರ್ಷಗಳಿಂದ, ಭಾರತೀಯ ಶಿಕ್ಷಕರು, ವೈದ್ಯರು ಮತ್ತು ಎಂಜಿನಿಯರುಗಳು ಘಾನಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ಸಮುದಾಯವು ಘಾನಾದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಸಕಾರಾತ್ಮಕ ಕೊಡುಗೆಯನ್ನು ನೀಡುತ್ತಿದೆ. ನಾಳೆ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ.
ಗೌರವಾನ್ವಿತ ಅಧ್ಯಕ್ಷರೇ,
ನೀವು ಭಾರತದ ಆಪ್ತರು. ನೀವು ಭಾರತದ ಬಗ್ಗೆ ಚೆನ್ನಾಗಿ ಪರಿಚಿತರು.
ಭಾರತಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ನಿಮ್ಮನ್ನು ಸ್ವಾಗತಿಸಲು ನೀವು ನಮಗೆ ಅವಕಾಶವನ್ನು ಒದಗಿಸುತ್ತೀರಿ ಎಂದು ನಾನು ನಂಬುತ್ತೇನೆ.
ಮತ್ತೊಮ್ಮೆ, ನಿಮ್ಮ ಆತ್ಮೀಯ ಆತಿಥ್ಯಕ್ಕಾಗಿ ನಿಮಗೆ, ಸರ್ಕಾರಕ್ಕೆ ಮತ್ತು ಘಾನಾ ಜನರಿಗೆ ನನ್ನ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಬಹಳ ಧನ್ಯವಾದಗಳು.
ಸೂಚನೆ:- ಇದು ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಯಿತು.
*****
(Release ID: 2141773)
Visitor Counter : 2
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam