ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ರೊಯೇಷಿಯಾದ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

Posted On: 19 JUN 2025 5:32PM by PIB Bengaluru

ಘನತೆವೆತ್ತ ಪ್ರಧಾನಮಂತ್ರಿಗಳೇ,

ಉಭಯ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ್!

ದೋಬರ್ ದಾನ್!

 

ಐತಿಹಾಸಿಕ ಮತ್ತು ಸುಂದರ ನಗರವಾದ ಜಾಗ್ರೆಬ್‌ನಲ್ಲಿ ನನ್ನನ್ನು ಆತ್ಮೀಯತೆಯ, ಉತ್ಸಾಹ ಭರಿತ ಮತ್ತು ವಾತ್ಸಲ್ಯಭರಿತ ರೀತಿಯಲ್ಲಿ ಸ್ವಾಗತಿಸಿದುದಕ್ಕೆ ನಾನು ಪ್ರಧಾನ ಮಂತ್ರಿ ಮತ್ತು ಕ್ರೊಯೇಷಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯ ಮೊದಲ ಭೇಟಿ ಇದು. ಈ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಸ್ನೇಹಿತರೇ,

ಭಾರತ ಮತ್ತು ಕ್ರೊಯೇಷಿಯಾ ಪ್ರಜಾಪ್ರಭುತ್ವ, ಕಾನೂನಿನ ನಿಯಮ, ಬಹುತ್ವ ಮತ್ತು ಸಮಾನತೆಯಂತಹ ಹಂಚಿಕೆಯ ಮೌಲ್ಯಗಳಿಂದ ಒಂದಾಗಿವೆ. ಕಳೆದ ವರ್ಷ, ಭಾರತದ ಜನರು ನನ್ನ ಮೇಲೆ ನಂಬಿಕೆ ಇಟ್ಟರು - ಮತ್ತು ಕ್ರೊಯೇಷಿಯಾದ ಜನರು ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವಂತೆ ಮಾಡಿದರು, ಇದು ಸಂತೋಷದ ವಿಷಯ ಮತ್ತು ಅದು ಕಾಕತಾಳೀಯ. ಈ ನವೀಕರಿಸಿದ ಜನತಾ ತೀರ್ಪಿನೊಂದಿಗೆ , ಈ ಅವಧಿಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳ ವೇಗವನ್ನು ಮೂರು ಪಟ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.

ರಕ್ಷಣಾ ವಲಯದಲ್ಲಿ ದೀರ್ಘಕಾಲೀನ ಸಹಕಾರಕ್ಕಾಗಿ 'ರಕ್ಷಣಾ ಸಹಕಾರ ಯೋಜನೆ'ಯನ್ನು ಸಿದ್ಧಪಡಿಸಲಾಗುವುದು, ಇದು ತರಬೇತಿ, ಮಿಲಿಟರಿ ವಿನಿಮಯ ಮತ್ತು ರಕ್ಷಣಾ ಉದ್ಯಮದಲ್ಲಿ ಸಹಕಾರದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ನಮ್ಮ ಆರ್ಥಿಕತೆಗಳು ಪರಸ್ಪರ ಪೂರಕವಾಗಿರುವ ಹಲವಾರು ಕ್ಷೇತ್ರಗಳನ್ನು ಗುರುತಿಸಲಾಗಿದೆ ಮತ್ತು ಅವುಗಳನ್ನು ಸಕ್ರಿಯವಾಗಿ ಅನುಸರಿಸಲಾಗುವುದು.

ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ನಾವು ಅನೇಕ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಔಷಧ, ಕೃಷಿ, ಮಾಹಿತಿ ತಂತ್ರಜ್ಞಾನ, ಸ್ವಚ್ಛ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಅರೆವಾಹಕಗಳಂತಹ ಹಲವು ಪ್ರಮುಖ ಕ್ಷೇತ್ರಗಳಲ್ಲಿ ನಾವು ಸಹಕಾರವನ್ನು ಉತ್ತೇಜಿಸುತ್ತೇವೆ.

ಹಡಗು ನಿರ್ಮಾಣ ಮತ್ತು ಸೈಬರ್-ಭದ್ರತೆಯಲ್ಲಿ ನಾವು ಸಹಕಾರವನ್ನು ಬಲಪಡಿಸುತ್ತೇವೆ. ಭಾರತದ ಸಾಗರಮಾಲಾ ಯೋಜನೆಯಡಿಯಲ್ಲಿ ಕ್ರೊಯೇಷಿಯಾದ ಕಂಪನಿಗಳು ಬಂದರು ಆಧುನೀಕರಣ, ಕರಾವಳಿ ವಲಯ ಅಭಿವೃದ್ಧಿ ಮತ್ತು ಬಹು-ಮಾದರಿ ಸಂಪರ್ಕ ಉಪಕ್ರಮಗಳಲ್ಲಿ ಭಾಗವಹಿಸಲು ಗಮನಾರ್ಹ ಅವಕಾಶಗಳನ್ನು ಹೊಂದಿವೆ. ನಮ್ಮ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳ ನಡುವಿನ ಜಂಟಿ ಸಂಶೋಧನೆ ಮತ್ತು ಸಹಯೋಗವನ್ನು ಸಹ ನಾವು ಒತ್ತಿ ಹೇಳಿದ್ದೇವೆ. ಮಾತ್ರವಲ್ಲದೆ, ಭಾರತವು ಕ್ರೊಯೇಷಿಯಾದೊಂದಿಗೆ ತನ್ನ ಬಾಹ್ಯಾಕಾಶ ಪರಿಣತಿ ಮತ್ತು ಅನುಭವವನ್ನು ಹಂಚಿಕೊಳ್ಳಲು ಬದ್ಧವಾಗಿದೆ.

ಸ್ನೇಹಿತರೇ,

ನಮ್ಮ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಸಂಬಂಧಗಳು ನಮ್ಮ ಪರಸ್ಪರ ಪ್ರೀತಿ ಮತ್ತು ಸದ್ಭಾವನೆಯ ಅಡಿಪಾಯವನ್ನು ರೂಪಿಸುತ್ತವೆ. 18 ನೇ ಶತಮಾನದಲ್ಲಿ, ಇವಾನ್ ಫಿಲಿಪ್ ವೆಜ್ಡಿನ್ ಯುರೋಪಿನಲ್ಲಿ ಸಂಸ್ಕೃತ ವ್ಯಾಕರಣವನ್ನು ಪ್ರಕಟಿಸಿದ ಮೊದಲಿಗರು. ಕಳೆದ 50 ವರ್ಷಗಳಿಂದ, ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಭಾರತಶಾಸ್ತ್ರ ವಿಭಾಗವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಇಂದು, ನಮ್ಮ ಸಾಂಸ್ಕೃತಿಕ ಮತ್ತು ಜನತೆ ಹಾಗು ಜನತೆಯ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠದ ತಿಳುವಳಿಕಾ ಒಡಂಬಡಿಕೆಯ  ಅವಧಿಯನ್ನು 2030 ರವರೆಗೆ ವಿಸ್ತರಿಸಲಾಗಿದೆ ಮತ್ತು ಮುಂದಿನ ಐದು ವರ್ಷಗಳವರೆಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಜನರ ಚಲನೆಯನ್ನು ಸುಗಮಗೊಳಿಸಲು, ಮೊಬಿಲಿಟಿ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಕ್ರೊಯೇಷಿಯಾದ ಕಂಪನಿಗಳು ಭಾರತದ ನುರಿತ ಐಟಿ ಮಾನವಶಕ್ತಿಯಿಂದ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಉಭಯ ದೇಶಗಳ ನಡುವೆ ಪ್ರವಾಸೋದ್ಯಮವನ್ನು ಹೆಚ್ಚಿಸುವ ಮಾರ್ಗಗಳನ್ನು ಸಹ ನಾವು ಚರ್ಚಿಸಿದ್ದೇವೆ.

ಯೋಗದ ಜನಪ್ರಿಯತೆಯನ್ನು ನಾನು ಇಲ್ಲಿ ಸ್ಪಷ್ಟವಾಗಿ ಅನುಭವಿಸಿದ್ದೇನೆ. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಕ್ರೊಯೇಷಿಯಾದ ಜನರು ಸದಾ ಸಂದರ್ಭವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಭಯೋತ್ಪಾದನೆ ಮಾನವೀಯತೆಯ ಶತ್ರು ಮತ್ತು ಪ್ರಜಾಪ್ರಭುತ್ವ ಶಕ್ತಿಗಳಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರನ್ನು ವಿರೋಧಿಸುತ್ತದೆ ಎಂದು ನಾವು ಒಪ್ಪುತ್ತೇವೆ. ಏಪ್ರಿಲ್ 22 ರಂದು ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಒಗ್ಗಟ್ಟಿನ ಅಭಿವ್ಯಕ್ತಿಗಾಗಿ ಪ್ರಧಾನ ಮಂತ್ರಿ ಮತ್ತು ಕ್ರೊಯೇಷಿಯಾ ಸರ್ಕಾರಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಇಂತಹ ಕಷ್ಟದ ಸಮಯದಲ್ಲಿ, ನಮ್ಮ ಸ್ನೇಹಿತರ ಬೆಂಬಲ ನಮಗೆ ಅಪಾರ ಬೆಂಬಲದ ಮೌಲ್ಯವನ್ನು ತಂದಿದೆ.  

ಇಂದಿನ ಜಾಗತಿಕ ಪರಿಸರದಲ್ಲಿ, ಭಾರತ ಮತ್ತು ಯುರೋಪ್ ನಡುವಿನ ಪಾಲುದಾರಿಕೆಯು ಹೆಚ್ಚಿನ ಮಹತ್ವದ್ದಾಗಿದೆ ಎಂದು ನಾವಿಬ್ಬರೂ ಒಪ್ಪುತ್ತೇವೆ. ಯುರೋಪಿಯನ್ ಒಕ್ಕೂಟದೊಂದಿಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಕ್ರೊಯೇಷಿಯಾದ ಬೆಂಬಲ ಮತ್ತು ಸಹಕಾರವು ಅತ್ಯಂತ ಮುಖ್ಯವಾಗಿದೆ.

ಯುರೋಪ್ ಆಗಿರಲಿ ಅಥವಾ ಏಷ್ಯಾವಾಗಲಿ, ಯುದ್ಧಭೂಮಿಯಲ್ಲಿ ಪರಿಹಾರಗಳನ್ನು ಕಂಡುಹಿಡಿಯಲಾಗುವುದಿಲ್ಲ ಎಂಬುದನ್ನು  ನಾವಿಬ್ಬರೂ ದೃಢವಾಗಿ ನಂಬುತ್ತೇವೆ. ಸಂವಾದ ಮತ್ತು ರಾಜತಾಂತ್ರಿಕತೆಯು ಮುಂದಿರುವ ಏಕೈಕ ಕಾರ್ಯಸಾಧ್ಯವಾದ ಮಾರ್ಗವಾಗಿದೆ. ಪ್ರತಿಯೊಂದು ರಾಷ್ಟ್ರದ  ಭೌಗೋಳಿಕ/ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವುದು ಅತ್ಯಗತ್ಯ.

ಸ್ನೇಹಿತರೇ,

ಇಂದು 'ಬನ್ಸ್ಕಿ ದ್ವೋರಿ'ಯಲ್ಲಿ ಇರುವುದು ನನ್ನ ಪಾಲಿಗೆ ವಿಶೇಷ ಕ್ಷಣ. ಸಕ್ಕಿನ್ಸ್ಕಿ ಅವರು ಕ್ರೊಯೇಷಿಯನ್ ಭಾಷೆಯಲ್ಲಿ ತಮ್ಮ ಐತಿಹಾಸಿಕ ಭಾಷಣವನ್ನು ಮಾಡಿದ್ದು ಇದೇ ಸ್ಥಳದಲ್ಲಿ, ಮತ್ತು ಇಂದು, ನನ್ನ ಆಲೋಚನೆಗಳನ್ನು ಹಿಂದಿಯಲ್ಲಿ ವ್ಯಕ್ತಪಡಿಸುವಲ್ಲಿ ನನಗೆ ಹೆಮ್ಮೆ ಮತ್ತು ತೃಪ್ತಿಯ ಭಾವನೆ ಮೂಡಿದೆ. ಅವರು 'ಭಾಷೆ ಒಂದು ಸೇತುವೆ' ಎಂದು ಬಹಳ ಸರಿಯಾಗಿಯೇ ಹೇಳಿದ್ದಾರೆ ಮತ್ತು ಇಂದು, ನಾವು ಸೇತುವೆಯನ್ನು ಬಲಪಡಿಸುತ್ತಿದ್ದೇವೆ.

ಮತ್ತೊಮ್ಮೆ, ಕ್ರೊಯೇಷಿಯಾಕ್ಕೆ ನಮ್ಮ ಭೇಟಿಯ ಸಮಯದಲ್ಲಿ ನಮಗೆ ನೀಡಿದ ಆತ್ಮೀಯ ಮತ್ತು ಉದಾತ್ತ ಆತಿಥ್ಯಕ್ಕಾಗಿ ಪ್ರಧಾನಿಯವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಪ್ರಧಾನಮಂತ್ರಿಗಳೇ, ಶೀಘ್ರದಲ್ಲೇ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುವುದನ್ನು  ನಾನು ಎದುರು ನೋಡುತ್ತಿದ್ದೇನೆ.

ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ನಮ್ರ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(Release ID: 2137927)