ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ ಅವರಿಂದ ಗುಜರಾತ್ ನ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ
ಅಹಮದಾಬಾದ್-ಧೋಲೆರಾ ಎಕ್ಸ್ ಪ್ರೆಸ್ ವೇ ಕಾಮಗಾರಿ ವೀಕ್ಷಿಸಿದ ಡಾ. ಮಿಶ್ರಾ: ಸಕಾಲಿಕ ಪೂರ್ಣಕ್ಕೆ ಒತ್ತು
ಧೋಲೆರಾವನ್ನು ಜಾಗತಿಕ ದರ್ಜೆಯ ಸ್ಮಾರ್ಟ್ ಕೈಗಾರಿಕಾ ನಗರವಾಗಿ ಅಭಿವೃದ್ಧಿಪಡಿಸುವ ಗುಜರಾತ್ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಡಾ. ಮಿಶ್ರಾ
ಡಾ. ಮಿಶ್ರಾ ನೇತೃತ್ವದಲ್ಲಿ ಲೋಥಲ್ ನ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣದ ಪರಿಶೀಲನಾ ಸಭೆ
Posted On:
16 JUN 2025 6:22PM by PIB Bengaluru
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ ಅವರು, ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಇಂದು ಗುಜರಾತ್ ನ ಧೋಲೆರಾ ಮತ್ತು ಲೋಥಲ್ ಗಳಲ್ಲಿ ಸ್ಥಳ ಪರಿಶೀಲನೆ ಹಾಗೂ ಉನ್ನತ ಮಟ್ಟದ ಸಭೆಗಳನ್ನು ನಡೆಸಿದರು. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯ ದೃಷ್ಟಿಕೋನಕ್ಕೆ ಅನುಗುಣವಾಗಿವೆ.
ಡಾ. ಮಿಶ್ರಾ ಅವರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ನಿರ್ಮಿಸುತ್ತಿರುವ ಅಹಮದಾಬಾದ್-ಧೋಲೆರಾ ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ಕಾಮಗಾರಿಯನ್ನು ವೀಕ್ಷಿಸಿದರು. ಈ ಹೆದ್ದಾರಿಯು ಅಹಮದಾಬಾದ್ ಮತ್ತು ಧೋಲೆರಾ ನಡುವಿನ ಪ್ರಯಾಣದ ಅವಧಿಯನ್ನು ಕೇವಲ 45 ನಿಮಿಷಗಳಿಗೆ ಇಳಿಸಲಿದೆ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದರು. ಜೊತೆಗೆ, ಯೋಜನೆಯನ್ನು ಜಾಗತಿಕ ದರ್ಜೆಯ ಮಾನದಂಡಗಳೊಂದಿಗೆ ಸಕಾಲಿಕವಾಗಿ ಪೂರ್ಣಗೊಳಿಸಬೇಕೆಂದು ಒತ್ತಿ ಹೇಳಿದರು.
ನಂತರ, ಧೋಲೆರಾ ವಿಶೇಷ ಹೂಡಿಕೆ ವಲಯಕ್ಕೆ (DSIR) ಭೇಟಿ ನೀಡಿದ ಡಾ. ಮಿಶ್ರಾ, ಧೋಲೆರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. 2025ರ ಅಕ್ಟೋಬರ್ ವೇಳೆಗೆ ಸರಕು ಸಾಗಾಟ ಕಾರ್ಯಾಚರಣೆಗಳು ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು. ನಿಗದಿತ ಸಮಯದ ಮಿತಿಯನ್ನು ಪಾಲಿಸುವಂತೆ ಮತ್ತು ಎಕ್ಸ್ ಪ್ರೆಸ್ವೇಯೊಂದಿಗೆ ಸುಗಮ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇಶೀಯ ಚಿಪ್ ತಯಾರಿಕೆಯಲ್ಲಿ ಒಂದು ಪ್ರಮುಖ ಉಪಕ್ರಮವಾದ ಟಾಟಾ ಎಲೆಕ್ಟ್ರಾನಿಕ್ಸ್ ನ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ (ಫ್ಯಾಬ್) ಯೋಜನೆಯನ್ನು ಡಾ. ಮಿಶ್ರಾ ಅವರು ಪರಿಶೀಲಿಸಿದರು. ಮೊಬೈಲ್ ಸಾಧನಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೋಟಿವ್ ಅಪ್ಲಿಕೇಶನ್ಗಳಿಗಾಗಿ ಚಿಪ್ ಗಳ ತಯಾರಿಕೆ ಸೇರಿದಂತೆ, ಅದರ ಉತ್ಪಾದನಾ ವ್ಯಾಪ್ತಿಯನ್ನು ಅವರು ಅವಲೋಕಿಸಿದರು.
ನಂತರ, ಧೋಲೆರಾ ಇಂಡಸ್ಟ್ರಿಯಲ್ ಸಿಟಿ ಡೆವಲಪ್ಮೆಂಟ್ ಲಿಮಿಟೆಡ್ (DICDL) ಅಭಿವೃದ್ಧಿಪಡಿಸಿರುವ ಶಾಲೆಗಳು, ಆಸ್ಪತ್ರೆಗಳು ಮತ್ತು ವಸತಿ ಸಂಕೀರ್ಣಗಳಂತಹ ಸಾಮಾಜಿಕ ಮೂಲಸೌಕರ್ಯ ಯೋಜನೆಗಳಿಗೂ ಅವರು ಭೇಟಿ ನೀಡಿದರು. ಬಳಕೆದಾರರ ಅನುಭವಕ್ಕೆ ಒತ್ತು ನೀಡಿದ ಅವರು, ಯೋಜನೆಗಳಲ್ಲಿ ಪಾಲುದಾರರ ಅಭಿಪ್ರಾಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಮಿಶ್ರಾ ಅವರು ಡಿ ಐ ಸಿ ಡಿ ಎಲ್, ಡಿ ಐ ಎ ಸಿ ಎಲ್ , ಎನ್ ಎಚ್ ಎ ಐ , ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಭಾರತೀಯ ರೈಲ್ವೆ ಯ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಹಮದಾಬಾದ್-ಧೋಲೇರಾ ಎಕ್ಸ್ ಪ್ರೆಸ್ ವೇ, ಭೀಮನಾಥ್-ಧೋಲೇರಾ ಸರಕು ರೈಲು ಸಂಪರ್ಕ, ಅಹಮದಾಬಾದ್-ಧೋಲೇರಾ ಅರೆ-ಅತಿವೇಗದ ರೈಲು ಮಾರ್ಗ ಮತ್ತು ಧೋಲೇರಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಯೋಜನೆಗಳನ್ನು ಅವರು ಪರಿಶೀಲಿಸಿದರು. ಗುಜರಾತ್ ಸರ್ಕಾರವು ಧೋಲೇರಾವನ್ನು ಜಾಗತಿಕ ಗುಣಮಟ್ಟದ ಸ್ಮಾರ್ಟ್ ಕೈಗಾರಿಕಾ ನಗರವಾಗಿ ಅಭಿವೃದ್ಧಿಪಡಿಸುವ ಬದ್ಧತೆಯನ್ನು ಶ್ರೀ ಮಿಶ್ರಾ ಪುನರುಚ್ಚರಿಸಿದರು. ಈ ಗುರಿ ಸಾಧನೆಗೆ, ಯೋಜನೆಗಳ ಸಕಾಲಿಕ ಪೂರ್ಣಗೊಳ್ಳುವಿಕೆ, ಕುಶಲ ಕಾರ್ಯಪಡೆಯ ಲಭ್ಯತೆ ಮತ್ತು ಸದೃಢ ಯೋಜನೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ (MoPSW) ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣದ (NMHC) ಕಾಮಗಾರಿಯನ್ನು ಡಾ. ಮಿಶ್ರಾ ಅವರು ಪರಿಶೀಲಿಸಿದರು. ತದನಂತರ, ಅವರು MoPSW ಕಾರ್ಯದರ್ಶಿ ಶ್ರೀ ಟಿ. ರಾಮಚಂದ್ರನ್, ಗುಜರಾತ್ ಕಡಲ ಮಂಡಳಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಎನ್ಎಚ್ಎಐ ಹಾಗೂ ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು."ಈ ಸಂಕೀರ್ಣವು ಭಾರತದ ಸಮೃದ್ಧ ಕಡಲ ಪರಂಪರೆಗೆ ಸಲ್ಲಿಸುವ ಪಾಂಡಿತ್ಯಪೂರ್ಣ ಗೌರವವಾಗಬೇಕು. ಇದನ್ನು ಸಾಧಿಸಲು ಆಳವಾದ ಸಂಶೋಧನೆ, ಶೈಕ್ಷಣಿಕ ಸಹಯೋಗ ಮತ್ತು ಸಂದರ್ಶಕರಿಗೆ ಉತ್ತಮ ಅನುಭವ ನೀಡುವ ಸುಯೋಚಿತ ಯೋಜನೆ ಅತ್ಯಗತ್ಯ" ಎಂದು ಶ್ರೀ ಮಿಶ್ರಾ ಪ್ರತಿಪಾದಿಸಿದರು.
ಸ್ಥಳೀಯ ಪ್ರಭೇದದ ಸಸ್ಯಗಳನ್ನು ನೆಡುವುದು ಮತ್ತು ನೀರು ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಂತೆ, ಪರಿಸರ ಸುಸ್ಥಿರತೆಯ ಕ್ರಮಗಳನ್ನೂ ಶ್ರೀ ಮಿಶ್ರಾ ಅವರು ಪರಿಶೀಲಿಸಿದರು. ಅವರು NMHC ಯ ಅಪ್ರತಿಮ ಪ್ರಮಾಣ ಮತ್ತು ಮಹತ್ವವನ್ನು ಎತ್ತಿ ತೋರಿಸಿದರು. ಹರಪ್ಪ ನಾಗರಿಕತೆಯ ಕಾಲದಿಂದ ಇಂದಿನವರೆಗಿನ ಭಾರತದ ಕಡಲ ಪರಂಪರೆಯನ್ನು ವಿವರಿಸುವ ಕಲಾಕೃತಿಗಳನ್ನು ಸಂಗ್ರಹಿಸಿ ಪ್ರದರ್ಶಿಸುವ ಅಗತ್ಯವನ್ನು ಒತ್ತಿ ಹೇಳಿದರು. ಆರು ಗ್ಯಾಲರಿಗಳನ್ನು ಒಳಗೊಂಡ ಮೊದಲ ಹಂತ-ಎ (Phase I-A) ನಿರ್ಮಾಣ ಕಾರ್ಯವನ್ನು ಸಹ ಪರಿಶೀಲಿಸಿದ ಅವರು, ಅದನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಡಾ. ಮಿಶ್ರಾ ಅವರೊಂದಿಗೆ ಪ್ರಧಾನಮಂತ್ರಿಯವರ ಸಲಹೆಗಾರರಾದ ಶ್ರೀ ತರುಣ್ ಕಪೂರ್ ಮತ್ತು ಪಿಎಂಒ ಉಪ ಕಾರ್ಯದರ್ಶಿ ಶ್ರೀ ಮಂಗೇಶ್ ಘಿಲ್ಡಿಯಾಲ್ ಅವರೂ ಉಪಸ್ಥಿತರಿದ್ದರು.
*****
(Release ID: 2136863)
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam