ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೈಪ್ರಸ್ ಗಣರಾಜ್ಯ, ಕೆನಡಾ ಮತ್ತು ಕ್ರೊಯೇಷಿಯಾಗಳಿಗೆ ಪ್ರಧಾನ ಮಂತ್ರಿಯವರ ಭೇಟಿ (ಜೂನ್ 15-19, 2025)

Posted On: 14 JUN 2025 7:22PM by PIB Bengaluru

ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 15-16 ರಂದು ಸೈಪ್ರಸ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಎರಡು ದಶಕಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ಸೈಪ್ರಸ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ನಿಕೋಸಿಯಾದಲ್ಲಿದ್ದಾಗ, ಪ್ರಧಾನಿಯವರು ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಲಿಮಾಸೋಲ್‌ನಲ್ಲಿ ವ್ಯಾಪಾರೋದ್ಯಮದ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಮೆಡಿಟರೇನಿಯನ್ ಪ್ರದೇಶ ಹಾಗು ಯುರೋಪಿಯನ್ ಒಕ್ಕೂಟದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಎರಡೂ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ತಮ್ಮ ಪ್ರವಾಸದ ಎರಡನೇ ಹಂತದಲ್ಲಿ ಕೆನಡಾದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿಯವರು ಜೂನ್ 16-17 ರಂದು ಕೆನಡಾದ ಕನನಾಸ್ಕಿಸ್‌ಗೆ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಯಾಣಿಸಲಿದ್ದಾರೆ. ಇದು ಜಿ-7 ಶೃಂಗಸಭೆಯಲ್ಲಿ ಪ್ರಧಾನಿಯವರ ಸತತ 6 ನೇ ಭಾಗವಹಿಸುವಿಕೆಯಾಗಿದೆ. ಶೃಂಗಸಭೆಯಲ್ಲಿ, ಪ್ರಧಾನ ಮಂತ್ರಿಯವರು ಜಿ-7 ದೇಶಗಳ ನಾಯಕರು, ಇತರ ಆಹ್ವಾನಿತ ಸಂಪರ್ಕ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ವಿಶೇಷವಾಗಿ ಎಐ-ಶಕ್ತಿ(ಇಂಧನ)  ಸಂಬಂಧ ಮತ್ತು ಕ್ವಾಂಟಮ್-ಸಂಬಂಧಿತ ವಿಷಯಗಳು ಸೇರಿದಂತೆ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನ ಮಂತ್ರಿಯವರು ಹಲವಾರು ದ್ವಿಪಕ್ಷೀಯ ಸಭೆಗಳನ್ನು ಸಹ ನಡೆಸಲಿದ್ದಾರೆ.

ತಮ್ಮ ಪ್ರವಾಸದ ಕೊನೆಯ ಹಂತದಲ್ಲಿ, ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿಯವರು 2025ರ ಜೂನ್ 18 ರಂದು ಕ್ರೊಯೇಷಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡುವ ಮೊದಲ ಭೇಟಿಯಾಗಿದ್ದು, ದ್ವಿಪಕ್ಷೀಯ ಸಂಬಂಧದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. ಪ್ರಧಾನಮಂತ್ರಿಯವರು ಪ್ರಧಾನಿ ಪ್ಲೆಂಕೋವಿಕ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಕ್ರೊಯೇಷಿಯಾದ ಅಧ್ಯಕ್ಷ ಘನತೆವೆತ್ತ ಶ್ರೀ ಜೋರನ್ ಮಿಲನೋವಿಕ್ ಅವರನ್ನು ಭೇಟಿ ಮಾಡಲಿದ್ದಾರೆ. ಕ್ರೊಯೇಷಿಯಾ ಭೇಟಿಯು ಯುರೋಪಿಯನ್ ಒಕ್ಕೂಟದ ಪಾಲುದಾರರೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****


(Release ID: 2136565)