ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ವಿಶ್ವ ವಾಯು ಸಾರಿಗೆ ಶೃಂಗಸಭೆಯ ಸರ್ವಸದಸ್ಯರ(ಸಮಗ್ರ) ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 02 JUN 2025 7:21PM by PIB Bengaluru

ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ರಾಮ್ ಮೋಹನ್ ನಾಯ್ಡು ಜಿ ಮತ್ತು ಮುರಳೀಧರ್ ಮೊಹೋಲ್ ಜಿ, ಐಎಟಿಎ ಆಡಳಿತ ಮಂಡಳಿಯ ಅಧ್ಯಕ್ಷ ಪೀಟರ್ ಎಲ್ಬರ್ಸ್ ಜಿ, ಐಎಟಿಎ ಮಹಾನಿರ್ದೇಶಕ ವಿಲ್ಲಿ ವಾಲ್ಷ್ ಜಿ, ಇಂಡಿಗೊ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಜಿ, ಇತರೆ ಎಲ್ಲ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಅಂತಾರಾಷ್ಟ್ರೀಯ ವಾಯು(ವೈಮಾನಿಕ) ಸಾರಿಗೆ ಸಂಘಟನೆ(ಐಎಟಿಎ)ಯ 81ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶ್ವ ವಾಯು ಸಾರಿಗೆ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮನ್ನು ಇಲ್ಲಿಗೆ ಸ್ವಾಗತಿಸುವುದು ನಿಜಕ್ಕೂ ಒಂದು ಗೌರವವಾಗಿದೆ. 4 ದಶಕಗಳ ನಂತರ ಈ ಕಾರ್ಯಕ್ರಮ ಭಾರತದಲ್ಲಿ ನಡೆಯುತ್ತಿದೆ. ಈ 4 ದಶಕಗಳಲ್ಲಿ, ಭಾರತದಲ್ಲಿ ಪರಿಸ್ಥಿತಿಗಳು ಬಹಳಷ್ಟು ಬದಲಾಗಿವೆ. ಇಂದಿನ ಭಾರತವು ಹಿಂದೆಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸದಿಂದ ತುಂಬಿದೆ. ನಾವು ಜಾಗತಿಕ ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ವಿಶಾಲವಾದ ಮಾರುಕಟ್ಟೆಯಷ್ಟೇ ಅಲ್ಲ, ನೀತಿ ನಾಯಕತ್ವ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯ ಸಂಕೇತವೂ ಆಗಿದ್ದೇವೆ. ಇಂದು ಭಾರತವು ಜಾಗತಿಕ ಬಾಹ್ಯಾಕಾಶ-ವಾಯುಯಾನ ರಂಗದಲ್ಲಿ ನಾಯಕನಾಗಿ ಹೊರಹೊಮ್ಮುತ್ತಿದೆ. ಕಳೆದ ದಶಕದಲ್ಲಿ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಐತಿಹಾಸಿಕ ಹೆಚ್ಚಳದ ಬಗ್ಗೆ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ.

ಸ್ನೇಹಿತರೆ,

ಈ ಶೃಂಗಸಭೆ ಮತ್ತು ಈ ಸಂವಾದವು ಕೇವಲ ವಾಯುಯಾನದ ಬಗ್ಗೆ ಅಲ್ಲ - ಅವು ಜಾಗತಿಕ ಸಹಕಾರ, ಹವಾಮಾನ ಬದ್ಧತೆಗಳು ಮತ್ತು ಸಮಾನ ಬೆಳವಣಿಗೆಯ ನಮ್ಮ ಹಂಚಿಕೆಯ ಕಾರ್ಯಸೂಚಿಯನ್ನು ಮುನ್ನಡೆಸಲು ಒಂದು ವೇದಿಕೆಯೂ ಆಗಿದೆ. ಈ ಶೃಂಗಸಭೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಜಾಗತಿಕ ವಾಯುಯಾನಕ್ಕೆ ಹೊಸ ದಾರಿ ತೋರುತ್ತದೆ. ಈ ವಲಯದ ಅನಂತ ಅಥವಾ ಅಪರಿಮಿತ ಸಾಧ್ಯತೆಗಳನ್ನು ನಾವು ಬಳಸಿಕೊಳ್ಳಲು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಇಂದು ನಾವು ನೂರಾರು ಕಿಲೋಮೀಟರ್ ದೂರವನ್ನು ಮತ್ತು ಖಂಡಾಂತರ ಪ್ರಯಾಣಗಳನ್ನು ಕೆಲವೇ ಗಂಟೆಗಳಲ್ಲಿ ಕ್ರಮಿಸುತ್ತೇವೆ. ಆದರೆ 21ನೇ ಶತಮಾನದ ಪ್ರಪಂಚದ ಕನಸುಗಳು ಮತ್ತು ನಮ್ಮ ಅನಂತ ಕಲ್ಪನೆಗಳು ನಿಂತಿಲ್ಲ. ಇಂದು ನಾವೀನ್ಯತೆ ಮತ್ತು ತಾಂತ್ರಿಕ ಉನ್ನತೀಕರಣದ ವೇಗವು ಹಿಂದೆಂದಿಗಿಂತಲೂ ವೇಗವಾಗಿದೆ. ನಮ್ಮ ವೇಗ ಹೆಚ್ಚಾದಂತೆ, ನಾವು ದೂರದ ಸ್ಥಳಗಳನ್ನು ನಮ್ಮ ಹಣೆಬರಹದ ಭಾಗವಾಗಿ ಪರಿವರ್ತಿಸಿದ್ದೇವೆ. ನಮ್ಮ ಪ್ರಯಾಣ ಯೋಜನೆಗಳು ನಗರಗಳಿಗೆ ಸೀಮಿತವಾಗಿಲ್ಲದ ಹಂತದಲ್ಲಿ ನಾವು ಈಗ ನಿಂತಿದ್ದೇವೆ. ಮಾನವತೆಯು ಈಗ ಬಾಹ್ಯಾಕಾಶ ಹಾರಾಟಗಳು ಮತ್ತು ಅಂತರಗ್ರಹ ಪ್ರಯಾಣವನ್ನು ವಾಣಿಜ್ಯೀಕರಿಸುವ ಕನಸು ಕಾಣುತ್ತಿದ್ದೇವೆ - ನಾಗರಿಕ ವಿಮಾನಯಾನಕ್ಕೆ ಈ ಗಡಿಗಳನ್ನು ತೆರೆಯುವ ಕನಸು ಅದಾಗಿದೆ. ಇದು ಇನ್ನೂ ಸಮಯ ತೆಗೆದುಕೊಳ್ಳಬಹುದು ಎಂಬುದು ನಿಜವಾದರೂ, ವಾಯುಯಾನ ವಲಯವು ಮುಂದಿನ ದಿನಗಳಲ್ಲಿ ಪ್ರಮುಖ ಪರಿವರ್ತನೆ ಮತ್ತು ನಾವೀನ್ಯತೆಯ ಕೇಂದ್ರವಾಗಲು ಸಿದ್ಧವಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಎಲ್ಲಾ ಸಾಧ್ಯತೆಗಳಿಗೆ ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ. ಭಾರತ ಹೊಂದಿರುವ 3 ಬಲವಾದ ಆಧಾರಸ್ತಂಭಗಳ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ. ಮೊದಲನೆಯದಾಗಿ, ಭಾರತವು ವಿಶಾಲ ಮಾರುಕಟ್ಟೆಯನ್ನು ಹೊಂದಿದೆ, ಈ ಮಾರುಕಟ್ಟೆ ಕೇವಲ ಗ್ರಾಹಕರ ಗುಂಪಲ್ಲ, ಇದು ಭಾರತದ ಕ್ರಿಯಾಶೀಲ ಮತ್ತು ಮಹತ್ವಾಕಾಂಕ್ಷೆಯ ಸಮಾಜದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಎರಡನೆಯದಾಗಿ, ನಮ್ಮಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಅಪಾರ ಜನಸಂಖ್ಯೆ ಮತ್ತು ಪ್ರತಿಭೆಗಳಿವೆ. ನಮ್ಮ ಯುವಕರು ಹೊಸ ಯುಗದ ನಾವೀನ್ಯಕಾರರಾಗಿದ್ದಾರೆ. ಅವರು ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಮೂರನೆಯದಾಗಿ, ನಾವು ಉದ್ಯಮಕ್ಕಾಗಿ ಮುಕ್ತ ಮತ್ತು ಬೆಂಬಲಿತ ನೀತಿ ಪರಿಸರ ವ್ಯವಸ್ಥೆ ಹೊಂದಿದ್ದೇವೆ. ಈ 3 ಸಾಮರ್ಥ್ಯಗಳ ಬಲದೊಂದಿಗೆ, ಭಾರತದ ವಾಯುಯಾನ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು.

ಸ್ನೇಹಿತರೆ,

ಇತ್ತೀಚಿನ ವರ್ಷಗಳಲ್ಲಿ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ. ಇಂದು  ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆ ಹೊಂದಿದೆ. ನಮ್ಮ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಯಶಸ್ಸು ಭಾರತೀಯ ನಾಗರಿಕ ವಿಮಾನಯಾನದಲ್ಲಿ ಒಂದು ಸುವರ್ಣ ಅಧ್ಯಾಯವಾಗಿದೆ. ಈ ಯೋಜನೆಯಡಿ, 15 ದಶಲಕ್ಷಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣವನ್ನು ಪಡೆದುಕೊಂಡಿದ್ದಾರೆ, ಅನೇಕ ನಾಗರಿಕರು ಮೊದಲ ಬಾರಿಗೆ ಹಾರಾಟ ನಡೆಸಲು ಸಾಧ್ಯವಾಯಿತು. ನಮ್ಮ ವಿಮಾನಯಾನ ಸಂಸ್ಥೆಗಳು ನಿರಂತರವಾಗಿ ಎರಡಂಕಿಯ ಬೆಳವಣಿಗೆ ಸಾಧಿಸುತ್ತಿವೆ. ಭಾರತೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಒಟ್ಟಾಗಿ ವಾರ್ಷಿಕವಾಗಿ ಸುಮಾರು 240 ದಶಲಕ್ಷ ಪ್ರಯಾಣಿಕರಿಗೆ ವಿಮಾನಗಳನ್ನು ನಿರ್ವಹಿಸುತ್ತಿವೆ, ಇದು ವಿಶ್ವದ ಹೆಚ್ಚಿನ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. 2030ರ ವೇಳೆಗೆ, ಈ ಸಂಖ್ಯೆ 500 ದಶಲಕ್ಷ ಪ್ರಯಾಣಿಕರನ್ನು ತಲುಪುವ ನಿರೀಕ್ಷೆಯಿದೆ. ಇಂದು ಭಾರತದಲ್ಲಿ 3.5 ದಶಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ವಿಮಾನದ ಮೂಲಕ ಸಾಗಿಸಲಾಗುತ್ತಿದೆ, ಈ ದಶಕದ ಅಂತ್ಯದ ವೇಳೆಗೆ, ಆ ಅಂಕಿಅಂಶವು 10 ದಶಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಸ್ನೇಹಿತರೆ,

ಇವು ಕೇವಲ ಅಂಕಿ ಸಂಖ್ಯೆಗಳಲ್ಲ, ಅವು ನವ ಭಾರತದ ಸಾಮರ್ಥ್ಯದ ಒಂದು ನೋಟ. ಮತ್ತು ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗರಿಷ್ಠಗೊಳಿಸಲು ಭಾರತವು ಭವಿಷ್ಯದ ಮಾರ್ಗಸೂಚಿಯಲ್ಲಿ ಕೆಲಸ ಮಾಡುತ್ತಿದೆ. ನಾವು ವಿಶ್ವ ದರ್ಜೆಯ ವಿಮಾನ ನಿಲ್ದಾಣ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಾಯ್ಡು ಜಿ ಹೇಳಿದಂತೆ, 2014ರ ವರೆಗೆ ಭಾರತವು 74 ಕಾರ್ಯಾಚರಣಾ ವಿಮಾನ ನಿಲ್ದಾಣಗಳನ್ನು ಹೊಂದಿತ್ತು. ಇಂದು ಆ ಸಂಖ್ಯೆ 162ಕ್ಕೆ ಏರಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು 2,000ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಆದೇಶಗಳನ್ನು ನೀಡಿವೆ. ಇದು ಕೇವಲ ಆರಂಭವಾಗಿದೆ, ಭಾರತದ ವಾಯುಯಾನ ವಲಯವು ಉನ್ನತ ಎತ್ತರಕ್ಕೆ ಏರಲು ಸಿದ್ಧವಾಗಿರುವ ಟೇಕ್-ಆಫ್ ಹಂತದಲ್ಲಿ ನಿಂತಿದೆ. ಈ ಪ್ರಯಾಣವು ಕೇವಲ ಭೌಗೋಳಿಕ ಗಡಿಗಳನ್ನು ದಾಟುವುದಲ್ಲ, ಜತೆಗೆ ಜಗತ್ತನ್ನು ಸುಸ್ಥಿರತೆ, ಹಸಿರು ಚಲನಶೀಲತೆ ಮತ್ತು ಸಮಾನ ಪ್ರವೇಶದತ್ತ ಕೊಂಡೊಯ್ಯುತ್ತದೆ.

ಸ್ನೇಹಿತರೆ,

ಇಂದು ನಮ್ಮ ವಿಮಾನ ನಿಲ್ದಾಣಗಳ ನಿರ್ವಹಣಾ ಸಾಮರ್ಥ್ಯವು ವಾರ್ಷಿಕವಾಗಿ 500 ದಶಲಕ್ಷ ಪ್ರಯಾಣಿಕರನ್ನು ತಲುಪಿದೆ. ತಂತ್ರಜ್ಞಾನದ ಮೂಲಕ ಬಳಕೆದಾರರ ಅನುಭವದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತಿರುವ ವಿಶ್ವದ ಆಯ್ದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ನಾವು ಸುರಕ್ಷತೆ, ದಕ್ಷತೆ ಮತ್ತು ಸುಸ್ಥಿರತೆಯ ಮೇಲೆ ಸಮಾನವಾಗಿ ಗಮನ ಹರಿಸಿದ್ದೇವೆ. ನಾವು ಸುಸ್ಥಿರ ವಾಯುಯಾನ ಇಂಧನಗಳತ್ತ ಸಾಗುತ್ತಿದ್ದೇವೆ, ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ, ನಮ್ಮ ಇಂಗಾಲ ಹೊರಸೂಸುವಿಕೆಯ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತಿದ್ದೇವೆ, ಪೃಥ್ವಿಯ ಪ್ರಗತಿ ಮತ್ತು ರಕ್ಷಣೆ ಎರಡನ್ನೂ ಖಚಿತಪಡಿಸಿಕೊಳ್ಳುತ್ತಿದ್ದೇವೆ.

ಸ್ನೇಹಿತರೆ,

ಇಲ್ಲಿರುವ ನಮ್ಮ ಅಂತಾರಾಷ್ಟ್ರೀಯ ಅತಿಥಿಗಳಿಗೆ, ಡಿಜಿ ಯಾತ್ರಾ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಲು ನಾನು ವಿಶೇಷವಾಗಿ ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಡಿಜಿ ಯಾತ್ರಾವು ವಿಮಾನಯಾನದಲ್ಲಿ ಡಿಜಿಟಲ್ ನಾವೀನ್ಯತೆಗೆ ಒಂದು ಉದಾಹರಣೆಯಾಗಿದೆ. ಮುಖ ಪರಿಶೀಲನಾ ತಂತ್ರಜ್ಞಾನ ಬಳಸಿಕೊಂಡು, ಇದು ವಿಮಾನ ನಿಲ್ದಾಣ ಪ್ರವೇಶದಿಂದ ಬೋರ್ಡಿಂಗ್ ಗೇಟ್‌ವರೆಗೆ ಸಂಪೂರ್ಣ ತಡೆರಹಿತ ಪ್ರಯಾಣ ಪರಿಹಾರಗಳನ್ನು ಒದಗಿಸುತ್ತದೆ. ಕಾಗದದ ದಾಖಲೆಗಳನ್ನು ಕೊಂಡೊಯ್ಯುವ ಅಥವಾ ಯಾವುದೇ ಐಡಿಯನ್ನು ತೋರಿಸುವ ಅಗತ್ಯವಿಲ್ಲ. ಇಷ್ಟು ದೊಡ್ಡ ಜನಸಂಖ್ಯೆಗೆ ಗುಣಮಟ್ಟದ ಸೇವೆಗಳನ್ನು ತಲುಪಿಸುವಲ್ಲಿ ಭಾರತದ ಅನುಭವದಿಂದ ಹುಟ್ಟಿದ ಈ ರೀತಿಯ ನಾವೀನ್ಯತೆಗಳು ಇತರ ಹಲವು ದೇಶಗಳಿಗೂ ಪ್ರಯೋಜನ ನೀಡಬಹುದು ಎಂದು ನಾನು ನಂಬುತ್ತೇನೆ. ಇದು ಸುರಕ್ಷಿತ ಮತ್ತು ಸ್ಮಾರ್ಟ್ ಪರಿಹಾರವಾಗಿದೆ, ಇದು ಜಾಗತಿಕ ದಕ್ಷಿಣಕ್ಕೆ ಮಾದರಿ ಮತ್ತು ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಸ್ನೇಹಿತರೆ,

ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ವಾಯುಯಾನ ವಲಯದ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು ಸ್ಥಿರವಾದ ಸುಧಾರಣೆಗಳನ್ನು ತರುತ್ತಿರುವ ನಮ್ಮ ಬದ್ಧತೆಯಾಗಿದೆ. ಭಾರತವನ್ನು ಜಾಗತಿಕ ಉತ್ಪಾದನಾ(ತಯಾರಿಕೆ) ಕೇಂದ್ರವನ್ನಾಗಿ ಮಾಡಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ, ನಾವು ಮಿಷನ್ ಮ್ಯಾನುಫ್ಯಾಕ್ಚರಿಂಗ್ ಘೋಷಿಸಿದ್ದೇವೆ. ಈ ವರ್ಷದ ಆರಂಭದಲ್ಲಿ, ನಾಯ್ಡು ಜಿ ಹೇಳಿದಂತೆ, ನಾವು ಭಾರತೀಯ ಸಂಸತ್ತಿನಲ್ಲಿ ವಿಮಾನ ವಸ್ತುಗಳ ಹಿತಾಸಕ್ತಿ ರಕ್ಷಣೆ ಮಸೂದೆಯನ್ನು ಅಂಗೀಕರಿಸಿದ್ದೇವೆ. ಇದು ಭಾರತದಲ್ಲಿ ನಡೆದ ಕೇಪ್ ಟೌನ್ ಸಮಾವೇಶಕ್ಕೆ ಕಾನೂನು ಬಲವನ್ನು ನೀಡಿದೆ. ಪರಿಣಾಮವಾಗಿ, ಜಾಗತಿಕ ವಿಮಾನ ಗುತ್ತಿಗೆ ಕಂಪನಿಗಳಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಹೊಸ ಅವಕಾಶ ತೆರೆದುಕೊಂಡಿದೆ. ನಿಮ್ಮಲ್ಲಿ ಅನೇಕರಿಗೆ ಗಿಫ್ಟ್ ಸಿಟಿ(ಗುಜರಾತ್ ಇಂಟರ ನ್ಯಾಷನಲ್ ಫೈನಾನ್ಸ್ ಟೆಕ್  ಸಿಟಿ)ಯಲ್ಲಿ ನೀಡಲಾಗುತ್ತಿರುವ ಪ್ರೋತ್ಸಾಹದ ಬಗ್ಗೆ ಈಗಾಗಲೇ ತಿಳಿದಿದೆ. ಈ ಪ್ರೋತ್ಸಾಹಗಳು ಭಾರತವನ್ನು ವಿಮಾನ ಗುತ್ತಿಗೆಗೆ ಆಕರ್ಷಕ ತಾಣವನ್ನಾಗಿ ಮಾಡಿವೆ.

ಸ್ನೇಹಿತರೆ,

ಹೊಸ ಭಾರತೀಯ ವಿಮಾನಯಾನ ಕಾಯ್ದೆಯು ನಮ್ಮ ವಾಯುಯಾನ ಕಾನೂನುಗಳನ್ನು ಜಾಗತಿಕ ಅತ್ಯುತ್ತಮ ಅಭ್ಯಾಸಗಳೊಂದಿಗೆ ಜೋಡಿಸುತ್ತಿದೆ. ಇದರರ್ಥ ಭಾರತದ ವಾಯುಯಾನ ಕಾನೂನುಗಳು ಈಗ ಸರಳವಾಗಿದೆ, ನಿಯಮಗಳು ಹೆಚ್ಚು ವ್ಯಾಪಾರ ಸ್ನೇಹಿಯಾಗಿವೆ, ತೆರಿಗೆ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಆದ್ದರಿಂದ, ವಿಶ್ವದ ಪ್ರಮುಖ ವಾಯುಯಾನ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಅವಕಾಶವಾಗಿದೆ.

ಸ್ನೇಹಿತರೆ,

ವಾಯುಯಾನ ವಲಯದಲ್ಲಿ ಬೆಳವಣಿಗೆ ಎಂದರೆ ಹೊಸ ವಿಮಾನಗಳು, ಹೊಸ ಉದ್ಯೋಗಗಳು ಮತ್ತು ಹೊಸ ಅವಕಾಶಗಳಾಗಿವೆ. ವಾಯುಯಾನ ವಲಯವು ಪೈಲಟ್‌ಗಳು, ಸಿಬ್ಬಂದಿ ಸದಸ್ಯರು, ಎಂಜಿನಿಯರ್‌ಗಳು ಮತ್ತು ಕೆಳ ಮಟ್ಟದ ಸಿಬ್ಬಂದಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಮತ್ತೊಂದು ಉದಯೋನ್ಮುಖ ವಲಯವೆಂದರೆ ಎಂ.ಆರ್.ಒ. ಅಂದರೆ, ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ. ನಮ್ಮ ಹೊಸ ಎಂ.ಆರ್.ಒ. ನೀತಿಗಳು ಭಾರತವನ್ನು ವಿಮಾನ ನಿರ್ವಹಣೆಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳನ್ನು ವೇಗಗೊಳಿಸಿವೆ. 2014ರಲ್ಲಿ, ಭಾರತದಲ್ಲಿ 96 ಎಂ.ಆರ್.ಒ. ಸೌಲಭ್ಯಗಳಿದ್ದವು. ಇಂದು ಆ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಸ್ವಯಂಚಾಲಿತ ಮಾರ್ಗದ ಅಡಿ, 100% ವಿದೇಶಿ ನೇರ ಹೂಡಿಕೆ, ಜಿಎಸ್ಟಿ ಕಡಿತ ಮತ್ತು ತೆರಿಗೆ ತರ್ಕಬದ್ಧಗೊಳಿಸುವಿಕೆಯಂತಹ ಸುಧಾರಣೆಗಳು ಎಂ.ಆರ್.ಒ. ವಲಯಕ್ಕೆ ಹೊಸ ಆವೇಗ ನೀಡಿವೆ. ಈಗ 2030ರ ವೇಳೆಗೆ ಭಾರತವನ್ನು 4 ಶತಕೋಟಿ ಡಾಲರ್ ಎಂ.ಆರ್.ಒ. ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ.

ಸ್ನೇಹಿತರೆ,

ಜಗತ್ತು ಭಾರತವನ್ನು ಕೇವಲ ವಿಮಾನಯಾನ ಮಾರುಕಟ್ಟೆಯಾಗಿ ನೋಡದೆ, ಮೌಲ್ಯ ಸರಪಳಿ ನಾಯಕನನ್ನಾಗಿ ನೋಡಬೇಕೆಂದು ನಾವು ಬಯಸುತ್ತೇವೆ. ವಿನ್ಯಾಸದಿಂದ ಹಿಡಿದು ವಿತರಣೆಯವರೆಗೆ, ಭಾರತವು ಜಾಗತಿಕ ವಾಯುಯಾನ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವಾಗುತ್ತಿದೆ. ನಮ್ಮ ನಿರ್ದೇಶನ ಸರಿಯಾಗಿದೆ, ನಮ್ಮ ವೇಗ ಸರಿಯಾಗಿದೆ, ಅದು ನಮಗೆ ವೇಗವಾಗಿ ಮುಂದುವರಿಯಲು ಆತ್ಮವಿಶ್ವಾಸ ನೀಡುತ್ತದೆ. ನಾನು ಎಲ್ಲಾ ವಾಯುಯಾನ ಕಂಪನಿಗಳನ್ನು ಒತ್ತಾಯಿಸುತ್ತೇನೆ: ಮೇಕ್ ಇನ್ ಇಂಡಿಯಾ ಜತೆಗೆ, ಭಾರತದಲ್ಲಿ ವಿನ್ಯಾಸದತ್ತಲೂ ಗಮನ ಹರಿಸಿ.

ಸ್ನೇಹಿತರೆ,

ಭಾರತದ ವಾಯುಯಾನ ಕ್ಷೇತ್ರದ ಮತ್ತೊಂದು ಬಲವಾದ ಆಧಾರಸ್ತಂಭವೆಂದರೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮಾದರಿ. ಇಂದು, ಭಾರತದಲ್ಲಿ 15%ಗಿಂತ ಹೆಚ್ಚು ಪೈಲಟ್‌ಗಳು ಮಹಿಳೆಯರಾಗಿದ್ದಾರೆ. ಇದು ಜಾಗತಿಕ ಸರಾಸರಿಗಿಂತ 3 ಪಟ್ಟು ಹೆಚ್ಚು. ಪ್ರಪಂಚದಾದ್ಯಂತ, ಕ್ಯಾಬಿನ್ ಸಿಬ್ಬಂದಿ ಪಾತ್ರಗಳಲ್ಲಿ ಮಹಿಳೆಯರ ಸರಾಸರಿ ಭಾಗವಹಿಸುವಿಕೆ ಸುಮಾರು 70%ರ ಷ್ಟಿದ್ದರೆ, ಭಾರತದ ಅಂಕಿಅಂಶವು 86%ರಷ್ಟಿದೆ. ಭಾರತದ ಎಂ.ಆರ್.ಒ. ವಲಯದಲ್ಲಿ ಮಹಿಳಾ ಎಂಜಿನಿಯರ್‌ಗಳ ಸಂಖ್ಯೆಯೂ ಜಾಗತಿಕ ಸರಾಸರಿಯನ್ನು ಮೀರುತ್ತಿದೆ.

ಸ್ನೇಹಿತರೆ,

ಇಂದು ವಾಯುಯಾನ ಕ್ಷೇತ್ರದ ಮತ್ತೊಂದು ಪ್ರಮುಖ ಅಂಶವೆಂದರೆ, ಡ್ರೋನ್ ತಂತ್ರಜ್ಞಾನ. ಭಾರತವು ಡ್ರೋನ್ ತಂತ್ರಜ್ಞಾನವನ್ನು ತಾಂತ್ರಿಕ ಪ್ರಗತಿಗೆ ಮಾತ್ರವಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಸೇರ್ಪಡೆಗೆ ಸಾಧನವಾಗಿ ಬಳಸುತ್ತಿದೆ. ಡ್ರೋನ್‌ಗಳ ಮೂಲಕ, ನಾವು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಬಲೀಕರಣ ನೀಡುತ್ತಿದ್ದೇವೆ. ಇದು ಕೃಷಿ, ವಿತರಣಾ ಸೇವೆಗಳು ಮತ್ತು ಇತರ ಅಗತ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಸ್ನೇಹಿತರೆ,

ನಾವು ಯಾವಾಗಲೂ ವಾಯುಯಾನದಲ್ಲಿ ಸುರಕ್ಷತೆಯನ್ನು ಪ್ರಮುಖ ಆದ್ಯತೆಯಾಗಿ ಇರಿಸಿದ್ದೇವೆ. ಭಾರತವು ತನ್ನ ನಿಯಮಗಳನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ(ಐಸಿಎಒ)ಯ ಜಾಗತಿಕ ಮಾನದಂಡಗಳೊಂದಿಗೆ ಜೋಡಿಸಿದೆ. ಇತ್ತೀಚೆಗೆ, ಐಸಿಎಒದ ಸುರಕ್ಷತಾ ಲೆಕ್ಕಪರಿಶೋಧನೆಯು ನಮ್ಮ ಪ್ರಯತ್ನಗಳನ್ನು ಶ್ಲಾಘಿಸಿದೆ. ಏಷ್ಯಾ-ಪೆಸಿಫಿಕ್ ಸಚಿವರ ಸಮ್ಮೇಳನದಲ್ಲಿ ದೆಹಲಿ ಘೋಷಣೆಯನ್ನು ಅಂಗೀಕರಿಸಿರುವುದು ಭಾರತದ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ಭಾರತವು ಯಾವಾಗಲೂ ಮುಕ್ತ ಆಕಾಶ ಮತ್ತು ಜಾಗತಿಕ ಸಂಪರ್ಕವನ್ನು ಬೆಂಬಲಿಸಿದೆ. ನಾವು ಷಿಕಾಗೊ ಸಮಾವೇಶದ ತತ್ವಗಳನ್ನು ಎತ್ತಿಹಿಡಿಯುತ್ತೇವೆ. ವಿಮಾನ ಪ್ರಯಾಣವು ಎಲ್ಲರಿಗೂ ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಸುರಕ್ಷಿತವಾಗಿರುವ ಭವಿಷ್ಯವನ್ನು ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. ವಾಯುಯಾನ ವಲಯವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನೀವೆಲ್ಲರೂ ಹೊಸ ಪರಿಹಾರಗಳೊಂದಿಗೆ ಬರುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು.

 

*****


(Release ID: 2133781) Visitor Counter : 3