ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರದ ಕರಕಟ್‌ನಲ್ಲಿ 48,520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಅವರು ಪಾಕಿಸ್ತಾನದಲ್ಲಿ ಕುಳಿತು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದರು, ನಮ್ಮ ಸೈನ್ಯವು ಅವರ ಅಡಗುತಾಣಗಳನ್ನು ಅವಶೇಷಗಳನ್ನಾಗಿ ಮಾಡಿತು: ಪ್ರಧಾನಮಂತ್ರಿ
ಭಾರತದ ಹೆಣ್ಣುಮಕ್ಕಳ ಸಿಂಧೂರದ ಶಕ್ತಿಯನ್ನು ಪಾಕಿಸ್ತಾನ ಮತ್ತು ಜಗತ್ತು ನೋಡಿದೆ!: ಪ್ರಧಾನಮಂತ್ರಿ
ಮಾವೋವಾದಿ ಹಿಂಸಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾಗುವ ದಿನ ದೂರವಿಲ್ಲ, ಶಾಂತಿ, ಭದ್ರತೆ, ಶಿಕ್ಷಣ ಮತ್ತು ಅಭಿವೃದ್ಧಿ ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಹಳ್ಳಿಯನ್ನು ತಲುಪುತ್ತದೆ: ಪ್ರಧಾನಮಂತ್ರಿ
ಪಾಟ್ನಾ ವಿಮಾನ ನಿಲ್ದಾಣದ ಟರ್ಮಿನಲನ್ನುಆಧುನೀಕರಿಸಬೇಕೆಂಬ ಬಿಹಾರದ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರ ಮಖಾನಾ ಮಂಡಳಿಯನ್ನು ಘೋಷಿಸಿತು, ಬಿಹಾರದ ಮಖಾನಾಗೆ ಜಿಐ ಟ್ಯಾಗ್ ನೀಡಿತು, ಇದರಿಂದ ಮಖಾನಾ ರೈತರಿಗೆ ಅಪಾರ ಪ್ರಯೋಜನವಾಗಿದೆ: ಪ್ರಧಾನಮಂತ್ರಿ
Posted On:
30 MAY 2025 1:11PM by PIB Bengaluru
ಬಿಹಾರದ ಕರಕಟ್‌ನಲ್ಲಿ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 48,520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪವಿತ್ರ ಭೂಮಿಯಲ್ಲಿ ಬಿಹಾರದ ಅಭಿವೃದ್ಧಿಯನ್ನು ವೇಗಗೊಳಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಹೇಳಿದರು ಹಾಗು ₹48,000 ಕೋಟಿಗೂ ಹೆಚ್ಚಿನ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ತಮ್ಮನ್ನು ಆಶೀರ್ವದಿಸಲು ಬಂದಿದ್ದ ಬೃಹತ್ ಸಭೆಯನ್ನು ಪ್ರಧಾನಿ ಸ್ಮರಿಸಿದರು ಮತ್ತು ಬಿಹಾರದ ಮೇಲಿನ ಅವರ ವಾತ್ಸಲ್ಯ ಮತ್ತು ಪ್ರೀತಿಗೆ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಅವರ ಬೆಂಬಲವನ್ನು ತಾವು ಸದಾ ಅತ್ಯುನ್ನತ ಗೌರವದಿಂದ ಕಾಣುವುದಾಗಿ ಒತ್ತಿ ಹೇಳಿದರು. ಅವರು ಬಿಹಾರದ ತಾಯಂದಿರು ಮತ್ತು ಸಹೋದರಿಯರಿಗೆ ತಮ್ಮ ಭಾವನಾತ್ಮಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಸಾರಾಮ್‌ನ ಮಹತ್ವದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಅದರ ಹೆಸರು ಕೂಡ ಭಗವಾನ್ ರಾಮನ ಪರಂಪರೆಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು, ಶ್ರೀ ಮೋದಿ ಅವರು ಭಗವಾನ್ ರಾಮನ ವಂಶಾವಳಿಯ ಆಳವಾಗಿ ಬೇರೂರಿರುವ ಸಂಪ್ರದಾಯಗಳತ್ತಲೂ ಗಮನ ಸೆಳೆದರು. ಅಚಲವಾದ ಬದ್ಧತೆಯ ತತ್ವವನ್ನು ಒತ್ತಿ ಹೇಳಿದರು - ಒಮ್ಮೆ ಭರವಸೆ ನೀಡಿದ ನಂತರ, ಅದನ್ನು ಪೂರೈಸಬೇಕು. ಈ ಮಾರ್ಗದರ್ಶಿ ತತ್ವವು ಈಗ ನವ ಭಾರತದ ನೀತಿಯಾಗಿದೆ ಎಂದು ಅವರು ದೃಢಪಡಿಸಿದರು. ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಶ್ರೀ ಮೋದಿ ನೆನಪಿಸಿಕೊಂಡರು, ಇದು ಅನೇಕ ಮುಗ್ಧ ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡಿತು. ಘೋರ ದಾಳಿಯ ಒಂದು ದಿನದ ನಂತರ, ತಾವು ಬಿಹಾರಕ್ಕೆ ಭೇಟಿ ನೀಡಿದ್ದನ್ನು ಮತ್ತು ಭಯೋತ್ಪಾದನೆಯ ಸೂತ್ರಧಾರಿಗಳು ಸೂಕ್ತ ನ್ಯಾಯವನ್ನು ಅನುಭವಿಸಬೇಕಾಗುತ್ತದೆ ಹಾಗು ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ರಾಷ್ಟ್ರದೆದುರು ಪ್ರತಿಜ್ಞೆ ಮಾಡಿದ್ದನ್ನು ನೆನಪಿಸಿಕೊಂಡರು. ಇಂದು, ತಾವು ಮತ್ತೊಮ್ಮೆ ಬಿಹಾರದಲ್ಲಿ ನಿಂತಿರುವಾಗ, ಆ ಪ್ರತಿಜ್ಞೆಯನ್ನು ಪೂರೈಸಿದ್ದಾಗಿಯೂ ಅವರು ಹೇಳಿದರು. "ಪಾಕಿಸ್ತಾನದಲ್ಲಿ ಕುಳಿತು ನಮ್ಮ ಸಹೋದರಿಯರ ಸಿಂದೂರವನ್ನು ನಾಶಪಡಿಸಿದವರ ಅಡಗುತಾಣಗಳನ್ನು ನಮ್ಮ ಸಶಸ್ತ್ರ ಪಡೆಗಳು ಅವಶೇಷಗಳಾಗಿ ಪರಿವರ್ತಿಸಿದವು" ಎಂದು ಶ್ರೀ ಮೋದಿ ಉದ್ಗರಿಸಿದರು. "ಭಾರತದ ಹೆಣ್ಣುಮಕ್ಕಳ ಸಿಂದೂರದ ಶಕ್ತಿಯನ್ನು ಪಾಕಿಸ್ತಾನ ಮತ್ತು ಜಗತ್ತು ನೋಡಿದೆ" ಎಂದು ಅವರು ಹೇಳಿದರು, ಒಂದು ಕಾಲದಲ್ಲಿ ಪಾಕಿಸ್ತಾನಿ ಸೇನೆಯ ರಕ್ಷಣೆಯಲ್ಲಿ ಸುರಕ್ಷಿತರೆಂದು ಭಾವಿಸಿದ್ದ ಭಯೋತ್ಪಾದಕರನ್ನು ಭಾರತದ ಪಡೆಗಳು ಒಂದೇ ನಿರ್ಣಾಯಕ ಕ್ರಮದಲ್ಲಿ ಮೊಣಕಾಲೂರಿ ನಿಲ್ಲುವಂತೆ ಮಾಡಿ ಸೋಲಿಸಿವೆ ಎಂದು ಹೇಳಿದರು. "ಇದು ಹೊಸ ಭಾರತ - ಅಪಾರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ಭಾರತ" ಎಂದು ಹೇಳಿದ ಪ್ರಧಾನ ಮಂತ್ರಿಗಳು, ಪಾಕಿಸ್ತಾನದ ವಾಯುನೆಲೆಗಳು ಮತ್ತು ಮಿಲಿಟರಿ ಸ್ಥಾಪನೆಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸಲಾಗಿದೆ ಎಂದೂ ಒತ್ತಿ ಹೇಳಿದರು.
ಬಿಹಾರವು ವೀರ ಕುನ್ವರ್ ಸಿಂಗ್ ಅವರ ಭೂಮಿಯಾಗಿದ್ದು, ಅದು ತನ್ನ ಧೈರ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿಹಾರದ ಸಾವಿರಾರು ಯುವಜನರು ದೇಶವನ್ನು ರಕ್ಷಿಸಲು ನೀಡುತ್ತಿರುವ ಕೊಡುಗೆಯನ್ನು ಎತ್ತಿ ತೋರಿಸಿದರು. ಆಪರೇಷನ್ ಸಿಂದೂರ್ ಸಮಯದಲ್ಲಿ ಬಿಎಸ್‌ಎಫ್ ಪ್ರದರ್ಶಿಸಿದ ಅಸಾಧಾರಣ ಶೌರ್ಯ ಮತ್ತು ಅದಮ್ಯ ಧೈರ್ಯವನ್ನು ಅವರು ಒತ್ತಿ ಹೇಳಿದರು, ಅವರ ಅಪ್ರತಿಮ ಶೌರ್ಯವನ್ನು ಜಗತ್ತು ಕಂಡಿದೆ ಎಂದೂ ಹೇಳಿದರು. ಭಾರತದ ಗಡಿಗಳಲ್ಲಿ ಬೀಡುಬಿಟ್ಟಿರುವ ಬಿಎಸ್‌ಎಫ್ ಸಿಬ್ಬಂದಿ ಮುರಿಯಲಾಗದ ಭದ್ರತೆಯ ಕವಚದಂತಿದ್ದು, ಅವರ ಪ್ರಮುಖ ಕರ್ತವ್ಯ ಭಾರತ ಮಾತೆಯ ರಕ್ಷಣೆಯಾಗಿದೆ ಎಂದು ಪ್ರಧಾನಿ ನುಡಿದರು. ಮೇ 10 ರಂದು ಗಡಿಯಲ್ಲಿ ತಮ್ಮ ಕರ್ತವ್ಯವನ್ನು ಪೂರೈಸುವಾಗ ಹುತಾತ್ಮರಾದ ಬಿಎಸ್‌ಎಫ್ ಸಬ್-ಇನ್ಸ್‌ಪೆಕ್ಟರ್ ಶ್ರೀ ಇಮ್ತಿಯಾಜ್ ಅವರಿಗೆ ಪ್ರಧಾನ ಮಂತ್ರಿಯವರು ಗೌರವ ಸಲ್ಲಿಸಿದರು, ಬಿಹಾರದ ಧೈರ್ಯಶಾಲಿ ಪುತ್ರನಿಗೆ ತಮ್ಮ ಗಾಢವಾದ ಗೌರವವನ್ನು ಅವರು ವ್ಯಕ್ತಪಡಿಸಿದರು. ಆಪರೇಷನ್ ಸಿಂದೂರ್‌ನಲ್ಲಿ ಭಾರತ ಪ್ರದರ್ಶಿಸಿದ ಶಕ್ತಿ ಕೇವಲ ಅದರ ಬತ್ತಳಿಕೆಯಿಂದ ಬಂದ ಒಂದು ಬಾಣ ಎಂದು ಒತ್ತಿ ಹೇಳಿದರು.
“ಶತ್ರುಗಳು ಗಡಿಯಾಚೆಗೆ ಅಥವಾ ದೇಶದೊಳಗೇ ಕಾರ್ಯನಿರ್ವಹಿಸುತ್ತಿರಲಿ, ಭಾರತದ ಹೋರಾಟವು ರಾಷ್ಟ್ರದ ಪ್ರತಿಯೊಬ್ಬ ಶತ್ರುಗಳ ವಿರುದ್ಧ ಆಗಿದೆ " ಎಂದು ಶ್ರೀ ಮೋದಿ ಪ್ರತಿಪಾದಿಸಿದರು, ಬಿಹಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂಸಾತ್ಮಕ ಮತ್ತು ವಿಧ್ವಂಸಕ ಶಕ್ತಿಗಳನ್ನು ಹೇಗೆ ನಿರ್ಮೂಲನೆ ಮಾಡಲಾಗಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಸಸಾರಾಮ್, ಕೈಮೂರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಹಿಂದಿನ ಪರಿಸ್ಥಿತಿಗಳನ್ನು ಅವರು ನೆನಪಿಸಿಕೊಂಡರು, ನಕ್ಸಲ್ ವಾದವು ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿತ್ತು ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ಮುಖವಾಡ ಧರಿಸಿದ ಉಗ್ರಗಾಮಿಗಳ ಭಯವು ಜನರಿಗೆ ನಿರಂತರ ಬೆದರಿಕೆಯಾಗಿತ್ತು ಎಂದು ಒತ್ತಿ ಹೇಳಿದರು. ಸರ್ಕಾರಿ ಯೋಜನೆಗಳನ್ನು ಘೋಷಿಸಿದರೂ, ನಕ್ಸಲ್ ಬಾಧೆ ಇರುವ ಪ್ರದೇಶಗಳನ್ನು ತಲುಪಲು ಅವು ವಿಫಲವಾಗುತ್ತಿದ್ದವು, ಅಲ್ಲಿ ಆಸ್ಪತ್ರೆಗಳು ಅಥವಾ ಮೊಬೈಲ್ ಟವರ್‌ಗಳಿರುತ್ತಿರಲಿಲ್ಲ. ಶಾಲೆಗಳನ್ನು ಸುಟ್ಟು ಹಾಕಲಾಗುತ್ತಿತ್ತು ಎಂದು ಶ್ರೀ ಮೋದಿ ಹೇಳಿದರು. ರಸ್ತೆ ನಿರ್ಮಾಣ ಕಾರ್ಮಿಕರನ್ನು ಆಗಾಗ್ಗೆ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿತ್ತು. ಈ ಶಕ್ತಿಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಂಬಿಕೆ ಇಟ್ಟಿರಲಿಲ್ಲ ಎಂದು ಶ್ರೀ ಮೋದಿ ಹೇಳಿದರು. ಈ ಸವಾಲಿನ ಸಂದರ್ಭಗಳ ನಡುವೆಯೂ, ನಿತೀಶ್ ಕುಮಾರ್ ಅಭಿವೃದ್ಧಿಯತ್ತ ಕೆಲಸ ಮಾಡಿದ್ದಾರೆ ಎಂಬುದನ್ನು ಗುರುತಿಸಿದ ಅವರು, 2014 ರಿಂದ ಈ ದಿಕ್ಕಿನಲ್ಲಿ ಪ್ರಯತ್ನಗಳು ಗಮನಾರ್ಹವಾಗಿ ವೇಗಗೊಂಡಿವೆ ಎಂದು ಒತ್ತಿ ಹೇಳಿದರು. ಮಾವೋವಾದಿಗಳಿಗೆ ಅವರ ಕಾರ್ಯಗಳಿಗಾಗಿ ಸೂಕ್ತ ನ್ಯಾಯ ವ್ಯವಸ್ಥೆಗೆ ತರಲಾಗಿದೆ ಮತ್ತು ಯುವಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಪ್ರಯತ್ನಗಳು ನಡೆದಿವೆ ಎಂದೂ ಶ್ರೀ ಮೋದಿ ನುಡಿದರು. 11 ವರ್ಷಗಳ ದೃಢನಿಶ್ಚಯದ ಪ್ರಯತ್ನಗಳ ಫಲಿತಾಂಶಗಳು ಈಗ ಗೋಚರಿಸುತ್ತಿವೆ ಎಂಬುದರತ್ತ ಅವರು ಬೆಟ್ಟು ಮಾಡಿದರು. 2014 ಕ್ಕಿಂತ ಮೊದಲು, ಭಾರತದ 125 ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲ್ ವಾದದಿಂದ ಪ್ರಭಾವಿತವಾಗಿದ್ದವು, ಆದರೆ ಇಂದು, ಕೇವಲ 18 ಜಿಲ್ಲೆಗಳು ಮಾತ್ರ ಅದರಿಂದ ಬಾಧಿತವಾಗುಳಿದಿವೆ ಎಂದು ಅವರು ಹೇಳಿದರು. "ನಮ್ಮ ಸರ್ಕಾರವು ರಸ್ತೆಗಳನ್ನು ಮಾತ್ರವಲ್ಲದೆ ಉದ್ಯೋಗಾವಕಾಶಗಳನ್ನು ಸಹ ಒದಗಿಸುತ್ತಿದೆ, ಮಾವೋವಾದಿ ಹಿಂಸಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ದಿನ ದೂರವಿಲ್ಲ, ಹಳ್ಳಿಗಳಲ್ಲಿ ನಿರಂತರ ಶಾಂತಿ, ಭದ್ರತೆ, ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಲಾಗುವುದು" ಎಂದು ಶ್ರೀ ಮೋದಿ ದೃಢಪಡಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ನಿಂತಿಲ್ಲ ಅಥವಾ ನಿಧಾನಗೊಂಡಿಲ್ಲ ಎಂದು ಅವರು ಪ್ರತಿಪಾದಿಸಿದರು, "ಭಯೋತ್ಪಾದನೆ ಮತ್ತೆ ತಲೆ ಎತ್ತಿದರೆ, ಭಾರತ ಅದನ್ನು ಅಡಗುತಾಣದಿಂದ ಹೊರತೆಗೆದು ನಿರ್ಣಾಯಕವಾಗಿ ಹತ್ತಿಕ್ಕುತ್ತದೆ" ಎಂದು ಘೋಷಿಸಿದರು.
ಭದ್ರತೆ ಮತ್ತು ಶಾಂತಿ ಅಭಿವೃದ್ಧಿಯ ಹೊಸ ಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, 'ಜಂಗಲ್ ರಾಜ್' ಸರ್ಕಾರದ ನಿರ್ಗಮನದ ಬಳಿಕ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದ ಪ್ರಗತಿಯು ಸಮೃದ್ಧಿಯ ಹಾದಿಯಲ್ಲಿ ಸಾಗಿದೆ ಎಂದು ಒತ್ತಿ ಹೇಳಿದರು. ಹಾಳಾದ ಹೆದ್ದಾರಿಗಳು, ಹದಗೆಟ್ಟ ರೈಲ್ವೆಗಳು ಮತ್ತು ಸೀಮಿತ ವಿಮಾನ ಸಂಪರ್ಕದ ದಿನಗಳು ಈಗ ಭೂತಕಾಲದ ಸಂಗತಿಗಳಾಗಿವೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಬಿಹಾರವು ಒಂದೇ ಒಂದು ವಿಮಾನ ನಿಲ್ದಾಣವನ್ನು ಹೊಂದಿತ್ತು - ಪಾಟ್ನಾ - .ಆದರೆ ಇಂದು, ದರ್ಭಂಗಾ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುತ್ತಿದೆ, ದಿಲ್ಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಿಗೆ ನೇರ ವಿಮಾನ ಯಾನಗಳನ್ನು ಒದಗಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಪಾಟ್ನಾ ವಿಮಾನ ನಿಲ್ದಾಣದ ಟರ್ಮಿನಲ್‌ನ ಆಧುನೀಕರಣಕ್ಕಾಗಿ ಬಿಹಾರದ ಜನರ ದೀರ್ಘಕಾಲದ ಬೇಡಿಕೆಯನ್ನು ಪ್ರಸ್ತಾಪಿಸಿದರು ಮತ್ತು ಈ ಬೇಡಿಕೆ ಈಗ ಈಡೇರಿದೆ ಎಂದು ದೃಢಪಡಿಸಿದರು. ನಿನ್ನೆ ಸಂಜೆ, ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಅವರು ಒತ್ತಿ ಹೇಳಿದರು, ಇದು ಈಗ ಒಂದು ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಬಿಹ್ತಾ ವಿಮಾನ ನಿಲ್ದಾಣದಲ್ಲಿ ₹1,400 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.
ಬಿಹಾರದಾದ್ಯಂತ ನಾಲ್ಕು ಪಥ ಮತ್ತು ಆರು ಪಥದ ರಸ್ತೆಗಳ ವ್ಯಾಪಕ ಅಭಿವೃದ್ಧಿಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಪಾಟ್ನಾದಿಂದ ಬಕ್ಸಾರ್, ಗಯಾದಿಂದ ದೋಭಿ ಮತ್ತು ಪಾಟ್ನಾದಿಂದ ಬೋಧ್ ಗಯಾಗೆ ಸಂಪರ್ಕಿಸುವ ಹೆದ್ದಾರಿಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿನ ತ್ವರಿತ ಪ್ರಗತಿಯನ್ನು ಒತ್ತಿ ಹೇಳಿದರು. ಪಾಟ್ನಾ-ಅರಾ-ಸಸಾರಾಮ್ ಗ್ರೀನ್‌ಫೀಲ್ಡ್ ಕಾರಿಡಾರ್ ಅನ್ನು ಸಹ ಅವರು ಉಲ್ಲೇಖಿಸಿದರು, ಅಲ್ಲಿ ಕೆಲಸವು ತ್ವರಿತಗತಿಯಲ್ಲಿ ಸಾಗುತ್ತಿದೆ. ಗಂಗಾ, ಸೋನ್, ಗಂಡಕ್ ಮತ್ತು ಕೋಸಿಯಂತಹ ಪ್ರಮುಖ ನದಿಗಳ ಮೇಲೆ ಹೊಸ ಸೇತುವೆಗಳ ನಿರ್ಮಾಣದ ಬಗ್ಗೆ ಶ್ರೀ ಮೋದಿ ಪ್ರಸ್ತಾಪಿಸಿದರು, ಇದು ಬಿಹಾರಕ್ಕೆ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಒದಗಿಸಲಿದೆ ಎಂದರು. ಸಾವಿರಾರು ಕೋಟಿ ಮೌಲ್ಯದ ಈ ಯೋಜನೆಗಳು ಸಾವಿರಾರು ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತಿವೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರ ಎರಡನ್ನೂ ಉತ್ತೇಜಿಸುತ್ತಿವೆ ಎಂದು ಅವರು ಹೇಳಿದರು.
ಬಿಹಾರದ ರೈಲ್ವೆ ಮೂಲಸೌಕರ್ಯದ ಪರಿವರ್ತನೆಯನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಬಿಹಾರದಲ್ಲಿ ವಿಶ್ವ ದರ್ಜೆಯ ವಂದೇ ಭಾರತ್ ರೈಲುಗಳ ಪರಿಚಯ ಮತ್ತು ರೈಲ್ವೆ ಮಾರ್ಗಗಳನ್ನು ದ್ವಿಗುಣಗೊಳಿಸುವ ಹಾಗು ತ್ರಿವಳಿ ಮಾಡುವ ಪ್ರಕ್ರಿಯೆಯನ್ನು ಉಲ್ಲೇಖಿಸಿದರು. ಛಪ್ರಾ, ಮುಜಾಫರ್‌ಪುರ ಮತ್ತು ಕಟಿಹಾರ್‌ನಂತಹ ಪ್ರದೇಶಗಳಲ್ಲಿ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ಸೋನ್ ನಗರ ಮತ್ತು ಅಂಡಾಲ್ ನಡುವಿನ ಬಹು-ಟ್ರ್ಯಾಕಿಂಗ್ ಪ್ರಗತಿಯಲ್ಲಿದೆ, ಇದು ರೈಲು ಸಂಚಾರವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ಹೇಳಿದರು. ಈ ಪ್ರದೇಶದ ಅಭಿವೃದ್ಧಿ ಹೊಂದುತ್ತಿರುವ ಸಂಪರ್ಕವನ್ನು ಉಲ್ಲೇಖಿಸಿದ ಅವರು ಸಸಾರಂನಲ್ಲಿ ಈಗ 100 ಕ್ಕೂ ಹೆಚ್ಚು ರೈಲುಗಳು ನಿಲ್ಲುತ್ತವೆ ಎಂದರು. ದೀರ್ಘಕಾಲದ ಸವಾಲುಗಳನ್ನು ಪರಿಹರಿಸಲಾಗುತ್ತಿರುವಾಗ, ರೈಲ್ವೆ ಜಾಲವನ್ನು ಆಧುನೀಕರಿಸುವ ಪ್ರಯತ್ನವೂ ನಡೆಯುತ್ತಿದೆ ಎಂಬುದರತ್ತಲೂ ಅವರು ಬೆಟ್ಟು ಮಾಡಿದರು.
ಈ ಅಭಿವೃದ್ಧಿಗಳನ್ನು ಮೊದಲೇ ಜಾರಿಗೆ ತರಬಹುದಿತ್ತು, ಆದರೆ ಬಿಹಾರದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಿಸುವ ಜವಾಬ್ದಾರಿಯನ್ನು ಹೊತ್ತಿದ್ದವರು ನೇಮಕಾತಿ ಪ್ರಕ್ರಿಯೆಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡರು, ಜನರ ಹಕ್ಕುಬದ್ಧ ಅವಕಾಶಗಳನ್ನು ಕಸಿದುಕೊಂಡರು ಎಂದು ಪ್ರಧಾನಿ ಒತ್ತಿ ಹೇಳಿದರು. ಹಿಂದೆ 'ಜಂಗಲ್ ರಾಜ್' ಆಳ್ವಿಕೆ ನಡೆಸಿದವರ ವಂಚನೆ ಮತ್ತು ಸುಳ್ಳು ಭರವಸೆಗಳ ವಿರುದ್ಧ ಬಿಹಾರದ ಜನರು ಜಾಗರೂಕರಾಗಿರಬೇಕು ಎಂದು ಅವರು ಆಗ್ರಹಿಸಿದರು. ವಿದ್ಯುತ್ ಇಲ್ಲದೆ ಅಭಿವೃದ್ಧಿ ಅಪೂರ್ಣ ಎಂದು ಒತ್ತಿ ಹೇಳಿದ ಅವರು, ಕೈಗಾರಿಕಾ ಪ್ರಗತಿ ಮತ್ತು ಜೀವನದ ಅನುಕೂಲತೆಗಳು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತವಾಗಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ಬಿಹಾರ ವಿದ್ಯುತ್ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಗಮನಹರಿಸಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ದಶಕದ ಹಿಂದಿನದಕ್ಕೆ ಹೋಲಿಸಿದರೆ ಬಿಹಾರದಲ್ಲಿ ವಿದ್ಯುತ್ ಬಳಕೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ನಬಿನಗರದಲ್ಲಿ ₹30,000 ಕೋಟಿ ಹೂಡಿಕೆಯೊಂದಿಗೆ ಪ್ರಮುಖ ಎನ್‌ಟಿಪಿಸಿ ವಿದ್ಯುತ್ ಯೋಜನೆ ನಿರ್ಮಾಣ ಹಂತದಲ್ಲಿದೆ ಮತ್ತು ಈ ಯೋಜನೆಯು ಬಿಹಾರಕ್ಕೆ 1,500 ಮೆಗಾವ್ಯಾಟ್ ವಿದ್ಯುತ್ ಒದಗಿಸುತ್ತದೆ ಎಂದು ಪ್ರಧಾನಿ ಘೋಷಿಸಿದರು. ಬಕ್ಸಾರ್ ಮತ್ತು ಪಿರ್‌ಪೈಂಟಿಯಲ್ಲಿ ಹೊಸ ಉಷ್ಣ ವಿದ್ಯುತ್ ಸ್ಥಾವರಗಳ ಆರಂಭವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಭವಿಷ್ಯದ ಬಗ್ಗೆ ಸರಕಾರದ ಗಮನವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ವಿಶೇಷವಾಗಿ ಬಿಹಾರವನ್ನು ಹಸಿರು ಇಂಧನದತ್ತ ಮುನ್ನಡೆಸುವ ಬಗ್ಗೆ ಪ್ರಸ್ತಾಪಿಸುತ್ತ, ರಾಜ್ಯದ ನವೀಕರಿಸಬಹುದಾದ ಇಂಧನ ಉಪಕ್ರಮಗಳ ಭಾಗವಾಗಿ ಕಜ್ರಾದಲ್ಲಿ ಸೌರ ಉದ್ಯಾನವನ ನಿರ್ಮಾಣವನ್ನು ಉಲ್ಲೇಖಿಸಿದರು. ಪಿ.ಎಂ.ಕುಸುಮ್ (PM-KUSUM) ಯೋಜನೆಯಡಿಯಲ್ಲಿ, ರೈತರಿಗೆ ಸೌರಶಕ್ತಿಯ ಮೂಲಕ ಆದಾಯ ಗಳಿಸಲು ಅವಕಾಶಗಳನ್ನು ಒದಗಿಸಲಾಗುತ್ತಿದೆ, ಜೊತೆಗೆ ನವೀಕರಿಸಬಹುದಾದ ಕೃಷಿ ಫೀಡರ್‌ಗಳು ಜಮೀನುಗಳಿಗೆ ವಿದ್ಯುತ್ ಪೂರೈಸುತ್ತಿವೆ, ಕೃಷಿ ಉತ್ಪಾದಕತೆಯನ್ನು ಮತ್ತಷ್ಟು ಸುಧಾರಿಸುತ್ತಿವೆ ಎಂದು ಹೇಳಿದರು. ಈ ಪ್ರಯತ್ನಗಳ ಪರಿಣಾಮವಾಗಿ, ಜನರ ಜೀವನ ಸುಧಾರಿಸಿದೆ ಮತ್ತು ಮಹಿಳೆಯರು ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಆಧುನಿಕ ಮೂಲಸೌಕರ್ಯವು ಹಳ್ಳಿಗಳು, ಬಡವರು, ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆ, ಏಕೆಂದರೆ ಅವುಗಳ ಮೂಲಕ ದೊಡ್ಡ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ರಾಜ್ಯದಲ್ಲಿ ಹೊಸ ಹೂಡಿಕೆಗಳು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತವೆ ಎಂಬುದರತ್ತ ಅವರು ಗಮನ ಸೆಳೆದರು. ಕಳೆದ ವರ್ಷ ನಡೆದ ಬಿಹಾರ ವ್ಯಾಪಾರ ಶೃಂಗಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದವು ಎಂಬುದನ್ನೂ ಶ್ರೀ ಮೋದಿ ನೆನಪಿಸಿಕೊಂಡರು, ರಾಜ್ಯದೊಳಗಿನ ಕೈಗಾರಿಕಾ ಬೆಳವಣಿಗೆಯು ಕಾರ್ಮಿಕ ವಲಸೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ, ಜನರು ಮನೆಗೆ ಹತ್ತಿರದಲ್ಲಿ ಉದ್ಯೋಗವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಸುಧಾರಿತ ಸಾರಿಗೆ ಸೌಲಭ್ಯಗಳು ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ದೂರ ವ್ಯಾಪ್ತಿಯಲ್ಲೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತವೆ, ಇದು ಕೃಷಿ ವಲಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಬಿಹಾರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಿ, ಬಿಹಾರದಲ್ಲಿ 75 ಲಕ್ಷಕ್ಕೂ ಹೆಚ್ಚು ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ ಎಂದು ಹೇಳಿದರು. ಮಖಾನಾ ಮಂಡಳಿಯ ಸ್ಥಾಪನೆಯನ್ನು ಘೋಷಿಸಿದ ಅವರು, ಬಿಹಾರದ ಮಖಾನಾಗೆ ಜಿಐ ಟ್ಯಾಗ್ ನೀಡಲಾಗಿದೆ ಎಂದು ಒತ್ತಿ ಹೇಳಿದರು, ಇದು ಮಖಾನಾ ರೈತರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ. ಈ ವರ್ಷದ ಬಜೆಟ್‌ನಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆಯ ಘೋಷಣೆಯೂ ಸೇರಿದೆ ಎಂಬುದರತ್ತಲೂ ಅವರು ಗಮನ ಸೆಳೆದರು. ಕೇವಲ ಎರಡು ಮೂರು ದಿನಗಳ ಹಿಂದೆ, ಖಾರಿಫ್ ಋತುವಿಗೆ ಭತ್ತ ಸೇರಿದಂತೆ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಹೇಳಿದರು, ಈ ನಿರ್ಧಾರವು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸುತ್ತದೆ ಮತ್ತು ಹೆಚ್ಚಿನ ಆದಾಯಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.
ವಿರೋಧ ಪಕ್ಷಗಳನ್ನು ಟೀಕಿಸಿದ ಪ್ರಧಾನಿ, ಬಿಹಾರವನ್ನು ಹೆಚ್ಚು ವಂಚಿಸಿದವರು ಈಗ ಅಧಿಕಾರವನ್ನು ಮರಳಿ ಪಡೆಯಲು ಸಾಮಾಜಿಕ ನ್ಯಾಯದ ಸುಳ್ಳು ನಿರೂಪಣೆಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರು. ಅವರ ಆಳ್ವಿಕೆಯಲ್ಲಿ, ಬಿಹಾರದ ಬಡ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಉತ್ತಮ ಜೀವನವನ್ನು ಹುಡುಕುತ್ತಾ ರಾಜ್ಯವನ್ನು ತೊರೆಯಬೇಕಾಯಿತು ಎಂದು ಅವರು ಎತ್ತಿ ತೋರಿಸಿದರು. "ದಶಕಗಳಿಂದ, ಬಿಹಾರದಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳು ಮೂಲಭೂತ ನೈರ್ಮಲ್ಯ ಸೌಲಭ್ಯಗಳನ್ನು ಸಹ ಹೊಂದಿರಲಿಲ್ಲ" ಎಂದು ಪ್ರಧಾನಿ ಹೇಳಿದರು, ಈ ಸಮುದಾಯಗಳು ಬ್ಯಾಂಕಿಂಗ್ ಪ್ರವೇಶದಿಂದ ವಂಚಿತವಾಗಿದ್ದವು, ಬ್ಯಾಂಕುಗಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿತ್ತು ಮತ್ತು ಹೆಚ್ಚಾಗಿ ವಸತಿಹೀನರಾಗಿ ಉಳಿದಿದ್ದರು, ಲಕ್ಷಾಂತರ ಜನರು ಸರಿಯಾದ ವಸತಿ ಇಲ್ಲದೆ ಬದುಕುತ್ತಿದ್ದರು ಎಂದು ಒತ್ತಿ ಹೇಳಿದರು. ಹಿಂದಿನ ಸರ್ಕಾರಗಳ ಅಡಿಯಲ್ಲಿ ಬಿಹಾರದ ಜನರು ಅನುಭವಿಸಿದ ನೋವುಗಳು, ಕಷ್ಟಗಳು ಮತ್ತು ಅವರಿಗಾದ ಅನ್ಯಾಯವು ವಿರೋಧ ಪಕ್ಷಗಳು ಭರವಸೆ ನೀಡಿದಂತಹ ಸಾಮಾಜಿಕ ನ್ಯಾಯವೇ ಎಂದು ಅವರು ಪ್ರಶ್ನಿಸಿದರು. ಇದಕ್ಕಿಂತ ದೊಡ್ಡ ಅನ್ಯಾಯ ಇನ್ನೊಂದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು. ವಿರೋಧ ಪಕ್ಷಗಳು ದಲಿತರು ಮತ್ತು ಹಿಂದುಳಿದ ಸಮುದಾಯಗಳ ಹೋರಾಟಗಳ ಬಗ್ಗೆ ಎಂದಿಗೂ ನಿಜವಾದ ಕಾಳಜಿ ವಹಿಸಲಿಲ್ಲ ಎಂದು ಪ್ರಧಾನಿ ಟೀಕಿಸಿದರು ಮತ್ತು ಬಿಹಾರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಬದಲು ಅದರ ಬಡತನವನ್ನು ಪ್ರದರ್ಶಿಸಲು ವಿದೇಶಿ ನಿಯೋಗಗಳನ್ನು ಕರೆತಂದಿದ್ದಕ್ಕಾಗಿ ಅವರನ್ನು ಖಂಡಿಸಿದರು. ಪ್ರತಿಪಕ್ಷಗಳ ತಪ್ಪುಗಳಿಂದಾಗಿ ದಲಿತರು, ಸಮಾಜದ ಅಂಚಿನಲ್ಲಿರುವ ಗುಂಪುಗಳು ಮತ್ತು ಹಿಂದುಳಿದ ಸಮುದಾಯಗಳು ದೂರ ಸರಿದ ನಂತರ, ಪಕ್ಷವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮೂಲಕ ತನ್ನ ಗುರುತನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ತಮ್ಮ ಸರ್ಕಾರದ ಅಡಿಯಲ್ಲಿ, ಬಿಹಾರ ಮತ್ತು ರಾಷ್ಟ್ರವು ಸಾಮಾಜಿಕ ನ್ಯಾಯದ ಹೊಸ ಉದಯಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸರ್ಕಾರವು ಬಡವರಿಗೆ ಅಗತ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಿದೆ ಮತ್ತು ಈ ಪ್ರಯೋಜನಗಳನ್ನು ಶೇಕಡಾ ನೂರರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿಸುವತ್ತ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದರು. ನಾಲ್ಕು ಕೋಟಿ ಹೊಸ ಮನೆಗಳನ್ನು ಒದಗಿಸಲಾಗಿದೆ ಮತ್ತು 'ಲಖ್ಪತಿ ದೀದಿ' ಉಪಕ್ರಮದ ಮೂಲಕ ಮೂರು ಕೋಟಿ ಮಹಿಳೆಯರನ್ನು ಸಬಲೀಕರಣಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶಾದ್ಯಂತ 12 ಕೋಟಿಗೂ ಹೆಚ್ಚು ಮನೆಗಳು ಈಗ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದು, ಜೀವನದ ಗುಣಮಟ್ಟವನ್ನು ಸುಧಾರಿಸುತ್ತಿವೆ ಎಂದು ಅವರು ಹೇಳಿದರು. 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರು ₹5 ಲಕ್ಷದವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆಗೆ ಅರ್ಹರಾಗಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಅಗತ್ಯವಿರುವವರನ್ನು ಬೆಂಬಲಿಸಲು ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಗುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. "ನಮ್ಮ ಸರ್ಕಾರವು ಪ್ರತಿಯೊಬ್ಬ ಬಡ ಮತ್ತು ಹಿಂದುಳಿದ ವ್ಯಕ್ತಿಯೊಂದಿಗೆ ದೃಢವಾಗಿ ನಿಲ್ಲುತ್ತದೆ, ಅವರ ಯೋಗಕ್ಷೇಮ ಮತ್ತು ಉನ್ನತಿಯನ್ನು ಖಚಿತಪಡಿಸುತ್ತದೆ" ಎಂದು ಶ್ರೀ ಮೋದಿ ದೃಢಸ್ವರದಲ್ಲಿ ಹೇಳಿದರು.
ಯಾವುದೇ ಗ್ರಾಮ ಅಥವಾ ಅರ್ಹ ಕುಟುಂಬವು ತನ್ನ ಕಲ್ಯಾಣ ಉಪಕ್ರಮಗಳಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಬಿಹಾರವು ಈ ದೃಷ್ಟಿಕೋನದೊಂದಿಗೆ ಡಾ. ಭೀಮರಾವ್ ಅಂಬೇಡ್ಕರ್ ಸಮಗ್ರ ಸೇವಾ ಅಭಿಯಾನವನ್ನು ಪ್ರಾರಂಭಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಈ ಅಭಿಯಾನದ ಅಡಿಯಲ್ಲಿ, ಸರ್ಕಾರವು ಏಕಕಾಲದಲ್ಲಿ 22 ಅಗತ್ಯ ಯೋಜನೆಗಳೊಂದಿಗೆ ಹಳ್ಳಿಗಳು ಮತ್ತು ಸಮುದಾಯಗಳನ್ನು ತಲುಪುತ್ತಿದೆ ಮತ್ತು ದಲಿತರು, ಮಹಾದಲಿತರು, ಹಿಂದುಳಿದ ವರ್ಗಗಳು ಹಾಗು ಬಡವರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಇಲ್ಲಿಯವರೆಗೆ 30,000 ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಲಾಗಿದೆ ಮತ್ತು ಲಕ್ಷಾಂತರ ಜನರು ಅಭಿಯಾನದ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನೂ ಪ್ರಧಾನಿ ಗಮನಿಸಿದರು. ಸರ್ಕಾರವು ನೇರವಾಗಿ ಫಲಾನುಭವಿಗಳನ್ನು ತಲುಪಿದಾಗ, ತಾರತಮ್ಯ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ ಮತ್ತು ಅದು ಸಾಮಾಜಿಕ ನ್ಯಾಯದ ನಿಜವಾದ ಸಾಕಾರದ ವಿಧಾನವೆಂದೂ ಅವರು ನುಡಿದರು.
ಬಿಹಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್, ಕರ್ಪೂರಿ ಠಾಕೂರ್, ಬಾಬು ಜಗಜೀವನ್ ರಾಮ್ ಮತ್ತು ಜಯಪ್ರಕಾಶ್ ನಾರಾಯಣ್ ಅವರು ಕಲ್ಪಿಸಿಕೊಂಡ ಬಿಹಾರವನ್ನಾಗಿ ಪರಿವರ್ತಿಸುವ ಚಿಂತನೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಅಂತಿಮ ಗುರಿ ಅಭಿವೃದ್ಧಿ ಹೊಂದಿದ ಬಿಹಾರವಾಗಿದ್ದು, ಅದು ಅಭಿವೃದ್ಧಿ ಹೊಂದಿದ ಭಾರತಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿದರು. ಬಿಹಾರ ಪ್ರಗತಿ ಸಾಧಿಸಿದಾಗಲೆಲ್ಲಾ ಭಾರತ ಜಾಗತಿಕವಾಗಿ ಹೊಸ ಎತ್ತರವನ್ನು ತಲುಪಿದೆ ಎಂದು ಅವರು ಹೇಳಿದರು. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಜನರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರ ಮುಖ್ಯಮಂತ್ರಿ, ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ನಿತ್ಯಾನಂದ ರೈ, ಶ್ರೀ ಸತೀಶ್ ಚಂದ್ರ ದುಬೆ, ಡಾ. ರಾಜ್ ಭೂಷಣ್ ಚೌಧರಿ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಈ ವಲಯದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಔರಂಗಾಬಾದ್ ಜಿಲ್ಲೆಯಲ್ಲಿ 29,930 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನಬಿನಗರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್, ಹಂತ-II (3x800 ಮೆ.ವಾ.) ಗೆ ಅಡಿಪಾಯ ಹಾಕಿದರು, ಇದು ಬಿಹಾರ ಮತ್ತು ಪೂರ್ವ ಭಾರತಕ್ಕೆ ಇಂಧನ ಸುರಕ್ಷತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಇದು ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಕೈಗೆಟುಕುವ ದರದಲ್ಲಿ ವಿದ್ಯುತ್ ಒದಗಿಸುತ್ತದೆ.
ಈ ವಲಯದಲ್ಲಿ ರಸ್ತೆ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ವಿವಿಧ ರಸ್ತೆ ಯೋಜನೆಗಳಿಗೆ ಅಡಿಪಾಯ ಹಾಕಿದರು. ಇದರಲ್ಲಿ ಎನ್.ಎಚ್.-119ಎ ನ ಪಾಟ್ನಾ-ಅರ್ರಾ-ಸಸಾರಾಮ್ ವಿಭಾಗದ ನಾಲ್ಕು-ಪಥ, ವಾರಣಾಸಿ-ರಾಂಚಿ-ಕೋಲ್ಕತ್ತಾ ಹೆದ್ದಾರಿಯ ಆರು-ಪಥ (ಎನ್.ಎಚ್.-319 ಬಿ ) ಮತ್ತು ರಾಮನಗರ-ಕಚ್ಚಿ ದರ್ಗಾ ಮಾರ್ಗ (ಎನ್.ಎಚ್.-119ಡಿ) ಹಾಗು ಬಕ್ಸಾರ್ ಮತ್ತು ಭಾರೌಲಿ ನಡುವೆ ಹೊಸ ಗಂಗಾ ಸೇತುವೆ ನಿರ್ಮಾಣ ಸೇರಿವೆ. ಈ ಯೋಜನೆಗಳು ರಾಜ್ಯದಲ್ಲಿ ಸುಗಮ ಹೈ-ಸ್ಪೀಡ್ ಕಾರಿಡಾರ್‌ಗಳನ್ನು ಸೃಷ್ಟಿಸುವುದರ ಜೊತೆಗೆ ವ್ಯಾಪಾರ ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತವೆ. 5,520 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಎನ್.ಎಚ್-22ರ ಪಾಟ್ನಾ-ಗಯಾ-ದೋಭಿ ವಿಭಾಗದ ಚತುಷ್ಪಥ ಮತ್ತು ಎನ್.ಎಚ್. -27ರಲ್ಲಿ ಗೋಪಾಲ್‌ಗಂಜ್ ಪಟ್ಟಣದಲ್ಲಿ ಎತ್ತರಿಸಿದ ಹೆದ್ದಾರಿಯ ಚತುಷ್ಪಥ ಹಾಗು ಮೇಲ್ದರ್ಜೆಗೇರಿಸಿದ ರಸ್ತೆ ಸೇರಿದಂತೆ ಇತರ ಕಾಮಗಾರಿಗಳನ್ನು ಉದ್ಘಾಟಿಸಿದರು.
ದೇಶಾದ್ಯಂತ ರೈಲು ಮೂಲಸೌಕರ್ಯವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು 1330 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸೋನ್ ನಗರ್ - ಮೊಹಮ್ಮದ್ ಗಂಜ್ ನಡುವಿನ 3ನೇ ರೈಲು ಮಾರ್ಗವನ್ನು ಮತ್ತು ಇತರ ಕಾಮಗಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
*****
(Release ID: 2133009)
Read this release in:
Odia
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam