ಪ್ರಧಾನ ಮಂತ್ರಿಯವರ ಕಛೇರಿ
ಉದಯೋನ್ಮುಖ(ರೈಸಿಂಗ್) ಈಶಾನ್ಯ ಹೂಡಿಕೆದಾರರ ಶೃಂಗಸಭೆ; ನವದೆಹಲಿಯಲ್ಲಿ ಮೇ 23ರಂದು ಪ್ರಧಾನಮಂತ್ರಿ ಉದ್ಘಾಟನೆ
ಗಮನ ಹರಿಸಲಿರುವ(ಆದ್ಯತೆಯ) ಕ್ಷೇತ್ರಗಳು: ಪ್ರವಾಸೋದ್ಯಮ, ಕೃಷಿ-ಆಹಾರ ಸಂಸ್ಕರಣೆ, ಜವಳಿ, ಮಾಹಿತಿ ತಂತ್ರಜ್ಞಾನ, ಮೂಲಸೌಕರ್ಯ, ಇಂಧನ, ಮನರಂಜನೆ ಮತ್ತು ಕ್ರೀಡೆ
ಈ ಶೃಂಗಸಭೆಯು ಈಶಾನ್ಯ ಪ್ರದೇಶವನ್ನು ಅವಕಾಶಗಳ ನೆಲೆಯಾಗಿ ಎತ್ತಿ ತೋರಿಸುವ, ಜಾಗತಿಕ ಮತ್ತು ದೇಶೀಯ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ
Posted On:
22 MAY 2025 4:13PM by PIB Bengaluru
ದೇಶದ ಈಶಾನ್ಯ ಪ್ರದೇಶವನ್ನು ಅವಕಾಶಗಳ ತಾಣವಾಗಿ ಎತ್ತಿ ತೋರಿಸುವ, ಜಾಗತಿಕ ಮತ್ತು ದೇಶೀಯ ಹೂಡಿಕೆ ಆಕರ್ಷಿಸುವ ಮತ್ತು ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಗುರಿ ಹೊಂದಿರುವ “ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆ”ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 23ರಂದು ಬೆಳಗ್ಗೆ 10:30ರ ಸುಮಾರಿಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಉದ್ಘಾಟಿಸಲಿದ್ದಾರೆ.
ಮೇ 23ರಿಂದ 24ರ ವರೆಗೆ 2 ದಿನಗಳ ಕಾಲ ನಡೆಯುವ ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆಯು, ಸರಣಿ ರೋಡ್ ಶೋಗಳು ಮತ್ತು ರಾಜ್ಯಗಳ ದುಂಡು ಮೇಜಿನ ಸಭೆಗಳು ಸೇರಿದಂತೆ ವಿವಿಧ ಶೃಂಗಸಭೆ ಪೂರ್ವ ಚಟುವಟಿಕೆಗಳ ಉನ್ನತ ವೇದಿಕೆಯಾಗಿದೆ. ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳ ಸಕ್ರಿಯ ಬೆಂಬಲದೊಂದಿಗೆ ಕೇಂದ್ರ ಸರ್ಕಾರವು ಆಯೋಜಿಸುವ ರಾಯಭಾರಿ ಸಭೆ ಮತ್ತು ದ್ವಿಪಕ್ಷೀಯ ಮಂಡಳಿ ಸಭೆ ಇದರಲ್ಲಿ ಸೇರಿವೆ. ಶೃಂಗಸಭೆಯಲ್ಲಿ ಸಚಿವರ ಕಲಾಪಗಳು, ಉದ್ಯಮ ಮತ್ತು ಸರ್ಕಾರದ ಕಲಾಪಗಳು, ಉದ್ಯಮ-ಉದ್ಯಮ ಕಲಾಪ ಸಭೆಗಳು, ನವೋದ್ಯಮಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸಚಿವಾಲಯಗಳು ಹೂಡಿಕೆ ಉತ್ತೇಜನಕ್ಕಾಗಿ ತೆಗೆದುಕೊಂಡ ನೀತಿ ಮತ್ತು ಸಂಬಂಧಿತ ಉಪಕ್ರಮಗಳ ವಸ್ತುಪ್ರದರ್ಶನಗಳು ಸೇರಿವೆ.
ಪ್ರವಾಸೋದ್ಯಮ ಮತ್ತು ಆತಿಥ್ಯ, ಕೃಷಿ-ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ವಲಯಗಳು, ಜವಳಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳು, ಆರೋಗ್ಯ ರಕ್ಷಣೆ; ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಅಥವಾ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ಮೂಲಸೌಕರ್ಯ ಮತ್ತು ಸರಕು ಸಾಗಣೆ, ಇಂಧನ, ಮನರಂಜನೆ ಮತ್ತು ಕ್ರೀಡೆಗಳು ಹೂಡಿಕೆ ಉತ್ತೇಜನದ ಪ್ರಮುಖ ಕ್ಷೇತ್ರಗಳಾಗಿವೆ.
*****
(Release ID: 2130671)
Read this release in:
English
,
Urdu
,
Marathi
,
Hindi
,
Nepali
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam