ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿ ನೂತನ ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಅನ್ನು ಉದ್ಘಾಟಿಸಿದರು
ಆಪರೇಷನ್ ಸಿಂಧೂರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಲವಾದ ರಾಜಕೀಯ ಇಚ್ಛಾಶಕ್ತಿ, ಗುಪ್ತಚರ ಸಂಸ್ಥೆಗಳ ನಿಖರ ಮಾಹಿತಿ ಮತ್ತು ನಮ್ಮ ಮೂರು ಸಶಸ್ತ್ರ ಪಡೆಗಳ ದೋಷರಹಿತ ದಾಳಿ ಸಾಮರ್ಥ್ಯದ ವಿಶಿಷ್ಟ ಸಂಕೇತವಾಗಿದೆ
ಭಾರತವು ತನ್ನ ಮೂರು ಸಶಸ್ತ್ರ ಪಡೆಗಳು, ಗಡಿ ಭದ್ರತಾ ಪಡೆ ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳ ಬಗ್ಗೆ ಹೆಮ್ಮೆಪಡುತ್ತದೆ
ಛತ್ತೀಸಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗಟ್ಟಲು ಬೆಟ್ಟಗಳಲ್ಲಿ (ಕೆಜಿಎಚ್) ನಡೆಸಲಾದ ಐತಿಹಾಸಿಕ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳು, ನಮ್ಮ ಭದ್ರತಾ ಪಡೆಗಳ ನಡುವಿನ ಅತ್ಯುತ್ತಮ ಸಮನ್ವಯವನ್ನು ತೋರಿಸುತ್ತವೆ
ಹೊಸ ಎಂಎಸಿ ಎಲ್ಲಾ ಸಂಸ್ಥೆಗಳ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಮತ್ತು ಸಂಕೀರ್ಣ ಮತ್ತು ಪರಸ್ಪರ ಸಂಬಂಧ ಹೊಂದಿರುವ ಪ್ರಸ್ತುತ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ನಿಭಾಯಿಸಲು ತಡೆರಹಿತ ಮತ್ತು ಸಂಯೋಜಿತ ವೇದಿಕೆಯನ್ನು ಒದಗಿಸುತ್ತದೆ
ಹೊಸ ಜಾಲವು ಭಯೋತ್ಪಾದನೆ, ಉಗ್ರವಾದ, ಸಂಘಟಿತ ಅಪರಾಧ ಮತ್ತು ಸೈಬರ್ ದಾಳಿಯಂತಹ ಗಂಭೀರ ಬೆದರಿಕೆಗಳನ್ನು ಎದುರಿಸಲು ದೇಶದ ಪ್ರಯತ್ನಗಳನ್ನು ಬಲಪಡಿಸುತ್ತದೆ
Posted On:
16 MAY 2025 6:01PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿ ನೂತನ ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಮಾತನಾಡಿದ ಶ್ರೀ ಅಮಿತ್ ಶಾ, ಆಪರೇಷನ್ ಸಿಂಧೂರ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬಲವಾದ ರಾಜಕೀಯ ಇಚ್ಛಾಶಕ್ತಿ, ಗುಪ್ತಚರ ಸಂಸ್ಥೆಗಳ ನಿಖರ ಮಾಹಿತಿ ಮತ್ತು ನಮ್ಮ ಮೂರು ಸಶಸ್ತ್ರ ಪಡೆಗಳ ದೋಷರಹಿತ ದಾಳಿಯ ಸಾಮರ್ಥ್ಯದ ವಿಶಿಷ್ಟ ಸಂಕೇತವಾಗಿದೆ ಎಂದು ಹೇಳಿದರು. ಭಾರತವು ತನ್ನ ಮೂರು ಸಶಸ್ತ್ರ ಪಡೆಗಳು, ಗಡಿ ಭದ್ರತಾ ಪಡೆ ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಛತ್ತೀಸಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗಟ್ಟಲು ಬೆಟ್ಟಗಳಲ್ಲಿ (ಕೆಜಿಎಚ್) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ನಡೆಸಿದ ಐತಿಹಾಸಿಕ ನಕ್ಸಲ್ ನಿಗಗ್ರಹ ಕಾರ್ಯಾಚರಣೆಗಳ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವರು, ನಕ್ಸಲರ ವಿರುದ್ಧದ ಈ ಐತಿಹಾಸಿಕ ಕಾರ್ಯಾಚರಣೆಗಳು ನಮ್ಮ ಭದ್ರತಾ ಪಡೆಗಳ ನಡುವಿನ ಅತ್ಯುತ್ತಮ ಸಮನ್ವಯವನ್ನು ತೋರಿಸುತ್ತವೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿಯೂ ಇದೇ ರೀತಿಯ ಸಮನ್ವಯವನ್ನು ಕಂಡುಬಂದಿತು, ಇದು ನಮ್ಮ ಗುಪ್ತಚರ ಸಂಸ್ಥೆಗಳು ಮತ್ತು ಮೂರು ಸಶಸ್ತ್ರ ಪಡೆಗಳ ಪ್ರಕ್ರಿಯೆ ಮತ್ತು ಚಿಂತನೆಯಲ್ಲಿ ಉತ್ತಮ ಸಮನ್ವಯವನ್ನು ತೋರಿಸುತ್ತದೆ ಎಂದು ಶ್ರೀ ಶಾ ಹೇಳಿದರು.

ಇಂದಿನ ಪರಿಸ್ಥಿಯಲ್ಲಿ ಎದುರಿಸುತ್ತಿರುವ ಸಂಕೀರ್ಣ ಮತ್ತು ಪರಸ್ಪರ ಸಂಬಂಧ ಹೊಂದಿರುವ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಪರಿಹರಿಸುವಲ್ಲಿ ಎಲ್ಲಾ ಸಂಸ್ಥೆಗಳ ಪ್ರಯತ್ನಗಳನ್ನು ಒಟ್ಟುಗೂಡಿಸಲು ಹೊಸ ಎಂಎಸಿ ಸುಗಮ ಮತ್ತು ಸಂಯೋಜಿತ ವೇದಿಕೆಯನ್ನು ಒದಗಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಯೋತ್ಪಾದನೆ, ಉಗ್ರವಾದ, ಸಂಘಟಿತ ಅಪರಾಧ ಮತ್ತು ಸೈಬರ್ ದಾಳಿಯಂತಹ ಗಂಭೀರ ಬೆದರಿಕೆಗಳನ್ನು ನಿಭಾಯಿಸುವ ದೇಶದ ಪ್ರಯತ್ನಗಳನ್ನು ಈ ಹೊಸ ಜಾಲವು ಬಲಪಡಿಸುತ್ತದೆ ಎಂದು ಅವರು ಆಶಿಸಿದರು.

ಶ್ರೀ ಅಮಿತ್ ಶಾ ಅವರು ಹೊಸ ಎಂಎಸಿ ಜಾಲವನ್ನು ಶ್ಲಾಘಿಸಿದರು ಮತ್ತು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಬಂಧಿತ ಕಾರ್ಯಗಳನ್ನು ದಾಖಲೆ ಸಮಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ತೃಪ್ತಿ ವ್ಯಕ್ತಪಡಿಸಿದರು. ಎಂಎಸಿ ಮತ್ತು ಜಿಐಎಸ್ ಸೇವೆಗಳೊಂದಿಗೆ ವಿಶಾಲವಾದ ಡೇಟಾಬೇಸ್ ನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎಂಬೆಡೆಡ್ ಎಐ/ಎಂಎಲ್ ತಂತ್ರಗಳಂತಹ ಭವಿಷ್ಯದ ಸಾಮರ್ಥ್ಯಗಳನ್ನು ಇದು ಸಂಯೋಜಿಸುತ್ತದೆ ಎಂದು ಅವರು ಹೇಳಿದರು. ಹೊಸ ಎಂಎಸಿಯೊಂದಿಗೆ ಲಭ್ಯವಿರುವ ಸುಧಾರಿತ ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಳ್ಳಲು, ವಿವಿಧ ಕೇಂದ್ರ ಸಂಸ್ಥೆಗಳೊಂದಿಗೆ ಇರಿಸಲಾಗಿರುವ ಇತರ ಮಹತ್ವದ ಡೇಟಾಬೇಸ್ ಗಳನ್ನು ಈ ವೇದಿಕೆಯಲ್ಲಿ ಸಂಯೋಜಿಸುವ ಅಗತ್ಯವನ್ನು ಒತ್ತಿ ಹೇಳುವ ಮೂಲಕ ಅವರು ಭವಿಷ್ಯದ ಮಾರ್ಗಸೂಚಿಯನ್ನು ಹಾಕಿದರು. ಈ ಹೊಸ ಜಾಲವು ಎಂಎಸಿ ಜಾಲದಲ್ಲಿ ಉತ್ಪತ್ತಿಯಾಗುವ ದತ್ತಾಂಶ ವಿಶ್ಲೇಷಣೆಯ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ನಿಖರವಾದ ಪ್ರವೃತ್ತಿ ವಿಶ್ಲೇಷಣೆ, ಹಾಟ್‌ಸ್ಪಾಟ್ ಮ್ಯಾಪಿಂಗ್ ಮತ್ತು ಟೈಮ್ ಲೈನ್ ವಿಶ್ಲೇಷಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಸಂಘಟಿತ ಅಪರಾಧದೊಂದಿಗೆ ಸಂಕೀರ್ಣವಾದ ಸಂಪರ್ಕಗಳನ್ನು ಹೊಂದಿರುವ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಎದುರಿಸುವಲ್ಲಿ ಹೊಸ ಎಂಎಸಿ ಬಹಳಷ್ಟು ನೆರವಾಗುತ್ತದೆ ಎಂದು ಅವರು ಹೇಳಿದರು.

ಭಾರತದ ಪ್ರಮುಖ ಗುಪ್ತಚರ ಸಮ್ಮಿಳನ ಕೇಂದ್ರವಾಗಿ, ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) 2001 ರಿಂದ ಅಸ್ತಿತ್ವದಲ್ಲಿದೆ ಮತ್ತು ಕೇಂದ್ರ ಗೃಹ ಸಚಿವರು ಎಂಎಸಿಯ ತಾಂತ್ರಿಕ ಉನ್ನತೀಕರಣಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಗುಪ್ತಚರ ಬ್ಯೂರೋದ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಹೊಸ ಎಂಎಸಿ ಎಲ್ಲಾ ಗುಪ್ತಚರ, ಭದ್ರತೆ, ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳನ್ನು ಜೋಡಿಸಿದೆ. 500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಕಾರ್ಯಗತಗೊಳಿಸಲಾದ ಹೊಸ ಎಂಎಸಿ ನೆಟ್‌ವರ್ಕ್ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಬದಲಾವಣೆಗಳನ್ನು ತಂದಿದೆ. ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಹೊಸ ಎಂಎಸಿ ಜಾಲವು ದೇಶದ ದ್ವೀಪ ಪ್ರದೇಶಗಳು, ದಂಗೆ ಪೀಡಿತ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳನ್ನು ಒಟ್ಟುಗೂಡಿಸಿದೆ, ದೂರದ ಪ್ರದೇಶಗಳಲ್ಲಿ ಜಿಲ್ಲಾ ಎಸ್ ಪಿ ಗಳ ಮಟ್ಟದವರೆಗೆ ಕೊನೆಯ ಮೈಲಿ ಸಂಪರ್ಕವನ್ನು ಮತ್ತು ವೇಗದ ಮತ್ತು ಸ್ವತಂತ್ರ ಸುರಕ್ಷಿತ ಜಾಲವನ್ನು ಖಚಿತಪಡಿಸುತ್ತದೆ.
*****
(Release ID: 2129205)