WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಜಾಗತಿಕ ಮಾಧ್ಯಮ ಸಂವಾದ 2025: ಸದಸ್ಯ ರಾಷ್ಟ್ರಗಳು ವೇವ್ಸ್ ಘೋಷಣೆಯನ್ನು ಅಂಗೀಕರಿಸಿವೆ ಮತ್ತು ಎಐ ಯುಗದಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವಾಗ ಸಂಪ್ರದಾಯಗಳು ಮತ್ತು ಪರಂಪರೆಯನ್ನು  ಬೆಂಬಲಿಸಲು ಒಪ್ಪಿಕೊಂಡಿವೆ


ವೇವ್ಸ್ ಘೋಷಣೆಯು ಉದಯೋನ್ಮುಖ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವ ಮೂಲಕ ಡಿಜಿಟಲ್ ಅಂತರವನ್ನು ನಿವಾರಿಸಲು ಪ್ರಯತ್ನಿಸುತ್ತದೆ, ಪಕ್ಷಪಾತವನ್ನು ಕಡಿಮೆ ಮಾಡುತ್ತದೆ, ಕಂಟೆಂಟ್‌ ಅನ್ನು ಪ್ರಜಾಸತ್ತಾತ್ಮಕಗೊಳಿಸುತ್ತದೆ ಮತ್ತು ನೈತಿಕತೆಗೆ ಆದ್ಯತೆ ನೀಡುತ್ತದೆ

ವೇವ್ಸ್‌ ಘೋಷಣೆಯು ಜನರನ್ನು ಒಗ್ಗೂಡಿಸಲು, ಸಾಮಾನ್ಯ ಸಾಂಸ್ಕೃತಿಕ ಅಭ್ಯಾಸಗಳನ್ನು ಉತ್ತೇಜಿಸಲು, ಜಾಗತಿಕವಾಗಿ ಪರಸ್ಪರ ಸಂಪರ್ಕ ಹೊಂದಿದ ಮಾರುಕಟ್ಟೆಗಳಲ್ಲಿ ನಾವೀನ್ಯತೆ ಮತ್ತು ದೃಢತೆಯನ್ನು ಗಾಢವಾಗಿಸಲು ಮಾಧ್ಯಮ ಮತ್ತು ಮನರಂಜನೆಯ ಶಕ್ತಿಯನ್ನು ದೃಢಪಡಿಸುತ್ತದೆ

ಸಂಬಂಧಿತ ಕೌಶಲ್ಯ ಅಭಿವೃದ್ಧಿಯ ಮೂಲಕ ಯುವ ಪ್ರತಿಭೆಯನ್ನು ಸೃಜನಶೀಲ ಸಹಯೋಗದ ಯುಗಕ್ಕೆ ಸಿದ್ಧಪಡಿಸುವುದು ನಿರ್ಣಾಯಕ: ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್

ಸಹ-ನಿರ್ಮಾಣ ಒಪ್ಪಂದಗಳು, ಜಂಟಿ ನಿಧಿಗಳು ಮತ್ತು ಸೃಜನಶೀಲತೆಯ ಜಾಗತಿಕ ಸೇತುವೆಯನ್ನು ಆಲೋಚನೆಗಳ ಎಕ್ಸ್‌ಪ್ರೆಸ್‌ವೇಗೆ ವಿಸ್ತರಿಸುವ ಘೋಷಣೆಯ ಮೇಲೆ ಕೇಂದ್ರೀಕರಿಸಿ: ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್


 Posted On: 02 MAY 2025 3:20PM |   Location: PIB Bengaluru

"ಜಾಗತಿಕ ಸಹಯೋಗವು ಸೃಜನಶೀಲತೆಯನ್ನು ಉತ್ತೇಜಿಸುವ ಮುಂದಿನ ದಾರಿಯಾಗಿದೆ, ಅದೇ ಸಮಯದಲ್ಲಿ ಪರಸ್ಪರರ ಅಂತರ-ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕು." ಇದು ಮುಂಬೈನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್ 2025) ಸಂದರ್ಭದಲ್ಲಿ ನಡೆದ ಜಾಗತಿಕ ಮಾಧ್ಯಮ ಸಂವಾದದ ಹಲವಾರು ಫಲಿತಾಂಶಗಳಲ್ಲೊಂದಾಗಿದೆ. ದೇಶಗಳಾದ್ಯಂತ ಸೃಜನಶೀಲ ಸ್ಥಳಗಳನ್ನು ವಿಸ್ತರಿಸುವುದು ನಮ್ಮ ಸಾಮೂಹಿಕ ಪ್ರಗತಿಗೆ ಪ್ರಮುಖವಾಗಿದೆ, ನಾವೆಲ್ಲರೂ ಡಿಜಿಟಲ್ ಅಂತರವನ್ನು ನಿವಾರಿಸುವತ್ತ ಸಾಗುತ್ತಿದ್ದೇವೆ ಎಂದು ಸಂವಾದದಲ್ಲಿ ಭಾಗವಹಿಸಿದ ದೇಶಗಳು ಅಭಿಪ್ರಾಯಪಟ್ಟವು. ಹೆಚ್ಚುತ್ತಿರುವ ಜಾಗತೀಕರಣಗೊಂಡ ಮಾಧ್ಯಮ ಪರಿಸರದ ಮಧ್ಯೆ ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸರ್ಕಾರಗಳ ಪಾತ್ರವನ್ನು ಕುರಿತು ಈ ಸಂವಾದವು ಕೇಂದ್ರೀಕರಿಸಿತು, ಸದಸ್ಯ ರಾಷ್ಟ್ರಗಳು ವೇವ್ಸ್ ಘೋಷಣೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಂವಾದ ಮುಕ್ತಾಯವಾಯಿತು.

ಪ್ರಪಂಚದಾದ್ಯಂತದ ಸಂಸ್ಕೃತಿಗಳನ್ನು ಚಿತ್ರಿಸುವ ಚಲನಚಿತ್ರಗಳು ಜನರನ್ನು ಹತ್ತಿರ ತರುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂಬ ಅಭಿಪ್ರಾಯವನ್ನು ಜಾಗತಿಕ ಮಾಧ್ಯಮ ಸಂವಾದವು ಪ್ರತಿಧ್ವನಿಸಿತು ಮತ್ತು ಭಾಗವಹಿಸಿದ ರಾಷ್ಟ್ರಗಳು ಈ ನಿಟ್ಟಿನಲ್ಲಿ ಭಾರತೀಯ ಚಲನಚಿತ್ರಗಳ ಪಾತ್ರವನ್ನು ಶ್ಲಾಘಿಸಿದವುವು. ಕಥೆ ಹೇಳುವ ಮನರಂಜನಾ ಸ್ವರೂಪವಾಗಿ, ಚಲನಚಿತ್ರಗಳು ಸಹಯೋಗಕ್ಕೆ ಬಲವಾದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಮನರಂಜನಾ ಜಗತ್ತನ್ನು ಮರು ವ್ಯಾಖ್ಯಾನಿಸುವ ಕಥೆ ಹೇಳುವ ಕಲೆಯಲ್ಲಿ ತಂತ್ರಜ್ಞಾನದ ಸಂಗಮದೊಂದಿಗೆ ವೈಯಕ್ತಿಕ ಕಥೆಗಳು ಸೃಜನಶೀಲ ಆರ್ಥಿಕತೆಯಲ್ಲಿ ಬಲವಾದ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಕೆಲವು ಸದಸ್ಯ ರಾಷ್ಟ್ರಗಳು "ಜವಾಬ್ದಾರಿಯುತ ಪತ್ರಿಕೋದ್ಯಮ"ದ ಅಗತ್ಯತೆಯ ಬಗ್ಗೆ ಕಳವಳಗಳನ್ನು ಹಂಚಿಕೊಂಡವು, ಇದನ್ನು ವೇವ್ಸ್ ವೇದಿಕೆಯಲ್ಲಿ ಪರಸ್ಪರ ಸಹಯೋಗದ ಮೂಲಕ ಪರಿಹರಿಸಬಹುದು ಎಂದು ಅವುಗಳು ಅಭಿಪ್ರಾಯಪಟ್ಟವು.

ವೇವ್ಸ್ 2025 ಅನ್ನು ಜಾಗತಿಕ ಸಮುದಾಯದ ಸೂಕ್ಷ್ಮರೂಪ ಎಂದು ಬಣ್ಣಿಸಿದ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಈ ಶೃಂಗಸಭೆಯು ಕಂಟೆಂಟ್ ರಚನೆಕಾರರು, ನೀತಿ ನಿರೂಪಕರು, ನಟರು, ಬರಹಗಾರರು, ನಿರ್ಮಾಪಕರು ಮತ್ತು ದೃಶ್ಯ ಕಲಾವಿದರನ್ನು ಮಾಧ್ಯಮ ಮತ್ತು ಮನರಂಜನಾ ವಲಯದ ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸಲು ಸಾಮಾನ್ಯ ವೇದಿಕೆಯಲ್ಲಿ ಒಟ್ಟುಗೂಡಿಸಿದೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ, ಡಾ. ಜೈಶಂಕರ್ ಅವರು 2025 ರ ಜಾಗತಿಕ ಮಾಧ್ಯಮ ಸಂವಾದದಲ್ಲಿ ಪರಿಗಣನೆಯಲ್ಲಿರುವ ವಿಶಾಲ ಚೌಕಟ್ಟಿನ ಕುರಿತು ಮಾತನಾಡಿದರು. ಬಲವಾದ ಸಾಂಸ್ಕೃತಿಕ ಆಯಾಮವನ್ನು ಹೊಂದಿರುವ ವಿಶ್ವ ಕ್ರಮಾಂಕವು ಇಂದು ಬದಲಾವಣೆಯ ಹಂತದಲ್ಲಿದೆ ಎಂದು ಅವರು ಹೇಳಿದರು. "ನಮ್ಮ ಸಂಪ್ರದಾಯಗಳು, ಪರಂಪರೆಗಳು, ಆಲೋಚನೆಗಳು, ಆಚರಣೆಗಳು ಮತ್ತು ಸೃಜನಶೀಲತೆಗೆ ನಾವು ಧ್ವನಿಯಾಗುವುದು ಅತ್ಯಗತ್ಯ" ಎಂದು ಅವರು ಹೇಳಿದರು.

ತಂತ್ರಜ್ಞಾನ ಮತ್ತು ಸಂಪ್ರದಾಯವು ಪರಸ್ಪರ ಪೂರಕವಾಗಿರಬೇಕು, ಏಕೆಂದರೆ ತಂತ್ರಜ್ಞಾನವು ನಮ್ಮ ವಿಶಾಲ ಪರಂಪರೆಯ ಬಗ್ಗೆ ಜಾಗೃತಿಯನ್ನು ಬಲಪಡಿಸುತ್ತದೆ ಮತ್ತು ವಿಶೇಷವಾಗಿ ಯುವ ಪೀಳಿಗೆಗೆ ಅದರ ಬಗ್ಗೆ ಪ್ರಜ್ಞೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. "ಸಂಬಂಧಿತ ಕೌಶಲ್ಯ ಅಭಿವೃದ್ಧಿಯ ಮೂಲಕ ಸೃಜನಶೀಲ ಸಹಯೋಗದ ಯುಗಕ್ಕೆ ಯುವ ಪ್ರತಿಭೆಗಳನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ. ವಿಕಸಿತ ಭಾರತವನ್ನು ನಿರ್ಮಿಸಲು ನಾವೀನ್ಯತೆ ಪ್ರಮುಖವಾಗಿದೆ" ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ಸಾಧ್ಯತೆಗಳು ಕಲ್ಪನೆಗೂ ಮೀರಿವೆ, ಆದರೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅವಶ್ಯಕತೆಯಿದೆ ಎಂದು ಡಾ. ಜೈಶಂಕರ್ ಹೇಳಿದರು. ಪಕ್ಷಪಾತವನ್ನು ಕಡಿಮೆ ಮಾಡುವುದು, ಕಂಟೆಂಟ್‌ ಅನ್ನು ಪ್ರಜಾಪ್ರಭುತ್ವಗೊಳಿಸುವುದು ಮತ್ತು ಅದರ ನೈತಿಕತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. "ಜಾಗತಿಕ ಕೆಲಸದ ಸ್ಥಳ ಮತ್ತು ಜಾಗತಿಕ ಕಾರ್ಮಿಕಪಡೆಗೆ ಮನಸ್ಥಿತಿ, ಚೌಕಟ್ಟು, ನೀತಿಗಳು ಮತ್ತು ಅಭ್ಯಾಸಗಳಲ್ಲಿ ಬದಲಾವಣೆಯ ಅಗತ್ಯವಿದೆ" ಎಂದು ಅವರು ಹೇಳಿದರು. ಜಾಗತಿಕ ಮಾಧ್ಯಮ ಮತ್ತು ಮನರಂಜನಾ ವಲಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ವೇವ್ಸ್ ಒಂದು ವೇದಿಕೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಗತ ಭಾಷಣದೊಂದಿಗೆ ಸಂವಾದವನ್ನು ಆರಂಭಿಸಿದ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಸಂಸ್ಕೃತಿಯು ಸೃಜನಶೀಲತೆಯನ್ನು ಪ್ರೇರೇಪಿಸುತ್ತದೆ, ಇದು ಗಡಿಗಳನ್ನು ಮೀರಿ ಜನರನ್ನು ಸಂಪರ್ಕಿಸುತ್ತದೆ ಎಂದು ಹೇಳಿದರು. ತಂತ್ರಜ್ಞಾನವು ನಮ್ಮ ಕಥೆಗಳನ್ನು ಹೇಳುವ ವಿಧಾನವನ್ನು ಮರುರೂಪಿಸುತ್ತಿರುವುದರಿಂದ ಕಂಟೆಂಟ್ ರಚನೆ ಮತ್ತು ಬಳಕೆ ವೇಗವಾಗಿ ಬದಲಾಗುತ್ತಿದೆ ಎಂದು ಅವರು ಹೇಳಿದರು. ಸ್ಥಳೀಯ ಕಂಟೆಂಟ್ ರಚನೆಯನ್ನು ಪ್ರೋತ್ಸಾಹಿಸಬೇಕಾದ ನಿರ್ಣಾಯಕ ಒಂದು ಹಂತದಲ್ಲಿ ನಾವಿದ್ದೇವೆ ಎಂದು ಅವರು ಹೇಳಿದರು.

ಕನಸಿನ ನಗರಿ ಮುಂಬೈಗೆ 77 ದೇಶಗಳ ಪ್ರತಿನಿಧಿಗಳನ್ನು ಸ್ವಾಗತಿಸಿದ ಶ್ರೀ ವೈಷ್ಣವ್, ಸಹಯೋಗದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು ಮತ್ತು ಸಾಮಾನ್ಯ ಯಶಸ್ಸಿಗೆ, ನಾವು ಸಹ-ನಿರ್ಮಾಣ ಒಪ್ಪಂದಗಳು, ಜಂಟಿ ನಿಧಿಗಳು ಮತ್ತು ಡಿಜಿಟಲ್ ಅಂತರವನ್ನು ನಿವಾರಿಸಲು, ಸಹೋದರತ್ವ, ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಸಹಾಯ ಮಾಡುವ ಘೋಷಣೆಯ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ಪ್ರತಿಪಾದಿಸಿದರು. ನಾವು ಸೃಜನಶೀಲತೆಯ ಜಾಗತಿಕ ಸೇತುವೆಯನ್ನು ಆಲೋಚನೆಗಳ ಎಕ್ಸ್‌ಪ್ರೆಸ್‌ವೇ ಆಗಿ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಹಿರಿಯ ಸಚಿವ ಮಟ್ಟದ ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಚರ್ಚೆಗಳ ಸಮಯದಲ್ಲಿ, ಭಾರತವು ಭಾಗವಹಿಸಿದ ರಾಷ್ಟ್ರಗಳಿಗೆ 32 ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ ಗಳ ಬಗ್ಗೆ ಮಾಹಿತಿ ನೀಡಿತು, ಇದರ ಪರಿಣಾಮವಾಗಿ ವೇವ್ಸ್ ನ ಮೊದಲ ಋತುವಿನಲ್ಲಿ ಪ್ರಪಂಚದಾದ್ಯಂತದ 700 ಕ್ಕೂ ಹೆಚ್ಚು ಉನ್ನತ ಕಂಟೆಂಟ್‌ ಸೃಷ್ಟಿಕರ್ತರನ್ನು ಗುರುತಿಸಲಾಗಿದೆ ಎಂದು ಹೇಳಿತು. ಮುಂದಿನ ಆವೃತ್ತಿಯಿಂದ, ಈ ಸವಾಲುಗಳನ್ನು 25 ಜಾಗತಿಕ ಭಾಷೆಗಳಲ್ಲಿ ನಡೆಸಲಾಗುವುದು. ಇದರಿಂದಾಗಿ ಪ್ರಪಂಚದಾದ್ಯಂತದ ಸೃಜನಶೀಲ ಪ್ರತಿಭೆಗಳನ್ನು ವಿವಿಧ ಭಾಷೆಗಳಲ್ಲಿ ಗುರುತಿಸಬಹುದು. ಇದು ವೇವ್ಸ್ ವೇದಿಕೆಯಲ್ಲಿ ತಮ್ಮ ಸೃಜನಶೀಲ ಕಂಟೆಂಟ್‌ ಪ್ರದರ್ಶಿಸಲು ಅವರಿಗೆ ಸಹಾಯ ಮಾಡುತ್ತದೆ ಎಂದು ಭಾರತ ಸದಸ್ಯ ರಾಷ್ಟ್ರಗಳಿಗೆ ತಿಳಿಸಿತು.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

For official updates on realtime, please follow us: 

On X : 

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram: 

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****


Release ID: (Release ID: 2126195)   |   Visitor Counter: 17