ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ 46ನೇ ಪ್ರಗತಿ ಸಂವಾದ ಸಭೆ
90,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ 8 ಮಹತ್ವದ ಯೋಜನೆಗಳ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ
ಬಯೋಮೆಟ್ರಿಕ್ಸ್ ಆಧಾರಿತ ಆಧಾರ್ ದೃಢೀಕರಣ ಅಥವಾ ಪರಿಶೀಲನೆಯ ಮೂಲಕ ಕಟ್ಟುನಿಟ್ಟಾಗಿ ಫಲಾನುಭವಿಗಳನ್ನು ಗುರುತಿಸುವುದನ್ನು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಖಚಿತಪಡಿಸಿಕೊಳ್ಳಬೇಕು: ಪ್ರಧಾನಮಂತ್ರಿ ನಿರ್ದೇಶನ
ನಗರಗಳ ಬೆಳವಣಿಗೆಗೆ ಹೊಂದಿಕೆಯಾಗುವಂತೆ ವಿಶಾಲ ನಗರ ಯೋಜನಾ ಪ್ರಯತ್ನಗಳ ಪ್ರಮುಖ ಭಾಗವಾಗಿ ವರ್ತುಲ ರಸ್ತೆಗಳನ್ನು ಸಂಯೋಜಿಸಬೇಕು: ಪ್ರಧಾನಮಂತ್ರಿ
ಜಲ ಮಾರ್ಗ ವಿಕಾಸ ಯೋಜನೆಯ ಪರಾಮರ್ಶೆ ನಡೆಸಿದ ಪ್ರಧಾನ ಮಂತ್ರಿ; ಸಾಗರ ವಿಹಾರಯಾನ(ಕ್ರೂಸ್) ಪ್ರವಾಸೋದ್ಯಮ ಉತ್ತೇಜಿಸಲು ವಿಸ್ತಾರಗಳ ಉದ್ದಕ್ಕೂ ಬಲವಾದ ಸಮುದಾಯ ಸಂಪರ್ಕ ಸ್ಥಾಪಿಸಲು ಪ್ರಯತ್ನಗಳನ್ನು ಮಾಡಬೇಕು; ಪ್ರಧಾನಮಂತ್ರಿ ನಿರ್ದೇಶನ
ಸಮಗ್ರ ಮತ್ತು ಭವಿಷ್ಯದ ಯೋಜನೆಯನ್ನು ಸಕ್ರಿಯಗೊಳಿಸಲು ಪ್ರಧಾನಮಂತ್ರಿ ಗತಿ ಶಕ್ತಿ ಮತ್ತು ಇತರ ಸಂಯೋಜಿತ ವೇದಿಕೆಗಳಂತಹ ಯೋಜನೆಗಳನ್ನು ಬಳಸಿಕೊಳ್ಳುವ ಮಹತ್ವವಿದೆ; ಪ್ರಧಾನಮಂತ್ರಿ ಪುನರುಚ್ಚಾರ
Posted On:
30 APR 2025 8:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಐಸಿಟಿ ಆಧಾರಿತ ಬಹು-ಮಾದರಿ ವೇದಿಕೆ “ಪ್ರಗತಿ”ಯ 46ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ 8 ಮಹತ್ವದ ಯೋಜನೆಗಳ ಪರಾಮರ್ಶೆ ನಡೆಸಲಾಯಿತು. ಇದರಲ್ಲಿ 3 ರಸ್ತೆ ಯೋಜನೆಗಳು, ರೈಲ್ವೆ ಮತ್ತು ಬಂದರು, ಹಡಗು ಮತ್ತು ಜಲಮಾರ್ಗಗಳ ತಲಾ 2 ಯೋಜನೆಗಳು ಸೇರಿವೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು 90,000 ಕೋಟಿ ರೂ. ಆಗಿದೆ.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ(ಪಿಎಂಎಂವಿವೈ)ಗೆ ಸಂಬಂಧಿಸಿದ ಕುಂದುಕೊರತೆ ಪರಿಹಾರ ಪರಿಶೀಲಿಸುವಾಗ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಬಯೋಮೆಟ್ರಿಕ್ಸ್ ಆಧಾರಿತ ಆಧಾರ್ ದೃಢೀಕರಣ ಅಥವಾ ಪರಿಶೀಲನೆಯ ಮೂಲಕ ಕಟ್ಟುನಿಟ್ಟಾಗಿ ಫಲಾನುಭವಿಗಳನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನಿರ್ದೇಶನ ನೀಡಿದರು. ಮಾತೃ ವಂದನಾ ಯೋಜನೆಗೆ ಹೆಚ್ಚುವರಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಸಾಮರ್ಥ್ಯವನ್ನು ಅನ್ವೇಷಿಸಬೇಕು ಎಂದು ಅವರು ಸೂಚಿಸಿದರು. ವಿಶೇಷವಾಗಿ ಮಕ್ಕಳ ಆರೈಕೆ ಉತ್ತೇಜಿಸುವುದು, ಆರೋಗ್ಯ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಸುಧಾರಿಸುವುದು, ಶುಚಿತ್ವ ಖಚಿತಪಡಿಸಿಕೊಳ್ಳುವುದು, ತಾಯಿ ಮತ್ತು ನವಜಾತ ಶಿಶುವಿನ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಇತರೆ ಸಂಬಂಧಿತ ಅಂಶಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮಗಳಿಗೆ ವಿಶೇಷ ಗಮನ ನೀಡಬೇಕು ಎಂದರು.
ವರ್ತುಲ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳ ಪರಾಮರ್ಶೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು, ವರ್ತುಲ ರಸ್ತೆಗಳ ಅಭಿವೃದ್ಧಿಯನ್ನು ವಿಶಾಲ ನಗರ ಯೋಜನಾ ಪ್ರಯತ್ನಗಳ ಪ್ರಮುಖ ಭಾಗವಾಗಿ ಸಂಯೋಜಿಸಬೇಕು ಎಂದು ಒತ್ತಿ ಹೇಳಿದರು. ಅಭಿವೃದ್ಧಿಯನ್ನು ಸಮಗ್ರವಾಗಿ ರೂಪಿಸಬೇಕು, ಮುಂದಿನ 25ರಿಂದ 30 ವರ್ಷಗಳಲ್ಲಿ ನಗರಗಳ ಬೆಳವಣಿಗೆಯ ಪಥದೊಂದಿಗೆ ಅದು ಹೊಂದಿಕೆಯಾಗುತ್ತದೆ ಮತ್ತು ಬೆಂಬಲಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ದೀರ್ಘಕಾಲೀನ ಕಾರ್ಯಸಾಧ್ಯತೆ ಮತ್ತು ವರ್ತುಲ ರಸ್ತೆಗಳ ದಕ್ಷ ನಿರ್ವಹಣೆಯ ಸಂದರ್ಭದಲ್ಲಿ, ಸ್ವಯಂ-ಸುಸ್ಥಿರತೆಯನ್ನು ಉತ್ತೇಜಿಸುವ ವಿವಿಧ ಯೋಜನಾ ಮಾದರಿಗಳನ್ನು ಅಧ್ಯಯನ ಮಾಡಬೇಕೆಂದು ಪ್ರಧಾನ ಮಂತ್ರಿ ನಿರ್ದೇಶನ ನೀಡಿದರು. ಸಾರ್ವಜನಿಕ ಸಾರಿಗೆಗೆ ಪೂರಕ ಮತ್ತು ಸುಸ್ಥಿರ ಪರ್ಯಾಯವಾಗಿ ನಗರದ ಸಾರಿಗೆ ಮೂಲಸೌಕರ್ಯದೊಳಗೆ ವೃತ್ತಾಕಾರದ ರೈಲು ಜಾಲ ಸಂಯೋಜಿಸುವ ಸಾಧ್ಯತೆ ಅನ್ವೇಷಿಸಲು ಅವರು ಸೂಚನೆ ನೀಡಿದರು.
ಜಲ ಮಾರ್ಗ ವಿಕಾಸ ಯೋಜನೆಯ ಪರಾಮರ್ಶೆ ಸಂದರ್ಭದಲ್ಲಿ ಅವರು, ಸಾಗರ ವಿಹಾರ ಯಾನ(ಕ್ರೂಸ್)ದ ಪ್ರವಾಸೋದ್ಯಮ ಉತ್ತೇಜಿಸಲು ವಿಸ್ತಾರವಾದ ಮತ್ತು ಬಲವಾದ ಸಮುದಾಯ ಸಂಪರ್ಕ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದರು. ಇದು ವ್ಯಾಪಾರ ಅಭಿವೃದ್ಧಿಗೆ, ವಿಶೇಷವಾಗಿ 'ಒಂದು ಜಿಲ್ಲೆ ಒಂದು ಉತ್ಪನ್ನ'(ಒಡಿಒಪಿ) ಉಪಕ್ರಮ ಮತ್ತು ಇತರ ಸ್ಥಳೀಯ ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ರೋಮಾಂಚಕ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಬೆಳೆಸುತ್ತದೆ. ಈ ವಿಧಾನವು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ, ಜಲಮಾರ್ಗದ ಪಕ್ಕದಲ್ಲಿರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಮತ್ತು ಜೀವನೋಪಾಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಅಂತಹ ಒಳನಾಡಿನ ಜಲಮಾರ್ಗಗಳು ಪ್ರವಾಸೋದ್ಯಮಕ್ಕೂ ಚಾಲನಾಶಕ್ತಿಯಾಗಿರಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು.
ಸಂವಾದ ಸಮಯದಲ್ಲಿ, ಪ್ರಧಾನ ಮಂತ್ರಿ ಅವರು ಸಮಗ್ರ ಮತ್ತು ಭವಿಷ್ಯದ ಯೋಜನೆಗಳನ್ನು ಸಕ್ರಿಯಗೊಳಿಸಲು ಪಿಎಂ ಗತಿಶಕ್ತಿ ಮತ್ತು ಇತರೆ ಸಂಯೋಜಿತ ವೇದಿಕೆಗಳಂತಹ ಯೋಜನೆಗಳನ್ನು ಬಳಸಿಕೊಳ್ಳುವ ಮಹತ್ವವಿದೆ ಎಂದು ಪುನರುಚ್ಚರಿಸಿದರು. ವಿವಿಧ ವಲಯಗಳಲ್ಲಿ ಸಮಷ್ಟಿ ಪರಿಣಾಮ ಸಾಧಿಸಲು ಮತ್ತು ಪರಿಣಾಮಕಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಅಂತಹ ಯೋಜನೆಗಳ ಬಳಕೆಯು ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು.
ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪರಿಣಾಮಕಾರಿ ಯೋಜನೆಗೆ ವಿಶ್ವಾಸಾರ್ಹ ಮತ್ತು ಪ್ರಸ್ತುತ ದತ್ತಾಂಶವು ಅತ್ಯಗತ್ಯವಾಗಿರುವುದರಿಂದ, ಎಲ್ಲಾ ಪಾಲುದಾರರು ತಮ್ಮ ಡೇಟಾಬೇಸ್‌ಗಳನ್ನು ನಿಯಮಿತವಾಗಿ ನವೀಕರಿಸಲಾಗಿದೆ ಮತ್ತು ನಿಖರವಾಗಿ ನಿರ್ವಹಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನ ಮಂತ್ರಿ ಅವರು ನಿರ್ದೇಶನ ನೀಡಿದರು.
ಪ್ರಗತಿ ಸಭೆಗಳ 46ನೇ ಆವೃತ್ತಿಯವರೆಗೆ, ಸುಮಾರು 20 ಲಕ್ಷ ಕೋಟಿ ರೂ.ಗಳ ಒಟ್ಟು ವೆಚ್ಚದ 370 ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ.
*****
(Release ID: 2125731)
Visitor Counter : 6
Read this release in:
Assamese
,
Bengali
,
Tamil
,
Malayalam
,
Odia
,
English
,
Urdu
,
Marathi
,
Hindi
,
Punjabi
,
Gujarati
,
Telugu