ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಜ್‌ಗಾರ್ ಮೇಳದಡಿ 51,000ಕ್ಕಿಂತ ಹೆಚ್ಚಿನ ನೇಮಕಾತಿ ಪತ್ರಗಳ ವಿತರಣೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 26 APR 2025 1:08PM by PIB Bengaluru

ನಮಸ್ಕಾರ!

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 51,000ಕ್ಕಿಂತ ಹೆಚ್ಚಿನ ಯುವಕರಿಗೆ ಸರ್ಕಾರಿ ಕಾಯಂ ಹುದ್ದೆಗಳಿಗೆ ಇಂದು ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಯುವಕರೇ, ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳಲ್ಲಿ ನಿಮಗೆ ಜವಾಬ್ದಾರಿಗಳ ಹೊಸ ಅಧ್ಯಾಯ ಪ್ರಾರಂಭವಾಗಿದೆ. ದೇಶದ ಆರ್ಥಿಕತೆ ಬಲಪಡಿಸುವುದು ಈಗ ನಿಮ್ಮ ಕರ್ತವ್ಯವಾಗಿದೆ, ದೇಶದ ಆಂತರಿಕ ಭದ್ರತೆ ಬಲಪಡಿಸುವುದು ನಿಮ್ಮ ಕರ್ತವ್ಯವಾಗಿದೆ, ರಾಷ್ಟ್ರದೊಳಗೆ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನಿಮ್ಮ ಕರ್ತವ್ಯವಾಗಿದೆ. ಕಾರ್ಮಿಕರ ಜೀವನದಲ್ಲಿ ಮೂಲಭೂತ ಸುಧಾರಣೆಗಳನ್ನು ತರುವುದು ಸಹ ನಿಮ್ಮ ಕರ್ತವ್ಯವಾಗಿದೆ. ನೀವು ನಿಮ್ಮ ಕಾರ್ಯಗಳನ್ನು ಹೆಚ್ಚು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸಿದಷ್ಟೂ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತವು ಸಾಗುವ ಸುದೀರ್ಘ ಪ್ರಯಾಣದ ಮೇಲೆ ಹೆಚ್ಚು ಮಹತ್ವಪೂರ್ಣ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ನಿಮ್ಮ ಜವಾಬ್ದಾರಿಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತೀರಿ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಯಾವುದೇ ರಾಷ್ಟ್ರದ ಪ್ರಗತಿ ಮತ್ತು ಯಶಸ್ಸಿನ ಭದ್ರ ಬುನಾದಿಯು ಯುವ ಸಮುದಾಯದ ಮೇಲಿದೆ. ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ, ದೇಶವು ವೇಗವಾಗಿ ಮುನ್ನಡೆಯುತ್ತದೆ ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಅಸ್ತಿತ್ವ(ಸ್ಥಾನ)ವನ್ನು ಸ್ಥಾಪಿಸುತ್ತದೆ. ಇಂದು ಭಾರತದ ಯುವಕರು ತಮ್ಮ ಕಠಿಣ ಪರಿಶ್ರಮ ಮತ್ತು ನಾವೀನ್ಯತೆಯ ಮೂಲಕ, ನಮ್ಮ ರಾಷ್ಟ್ರದಲ್ಲಿ ಅಡಗಿರುವ ಅಗಾಧ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದಾರೆ. ನಮ್ಮ ಸರ್ಕಾರವು ಪ್ರತಿ ಹಂತದಲ್ಲೂ ದೇಶದ ಯುವಕರಿಗೆ ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಎರಡಕ್ಕೂ ಅವಕಾಶಗಳನ್ನು ವಿಸ್ತರಿಸುತ್ತಿದೆ. ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ವಿವಿಧ ಉಪಕ್ರಮಗಳು ಈ ದಿಕ್ಕಿನಲ್ಲಿ ಯುವ ಜನರಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ. ಈ ಉಪಕ್ರಮಗಳ ಮೂಲಕ, ಭಾರತದ ಯುವಕರು ತಮ್ಮ ಪ್ರತಿಭೆ ಪ್ರದರ್ಶಿಸಲು ನಾವು ಮುಕ್ತ ವೇದಿಕೆ ಒದಗಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ಈ ದಶಕದಲ್ಲಿ ನಮ್ಮ ಯುವಕರು ತಂತ್ರಜ್ಞಾನ, ಡೇಟಾ ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವದಲ್ಲೇ  ಮುಂಚೂಣಿಗೆ ತಂದಿದ್ದಾರೆ.

ಯುಪಿಐ, ಒಎನ್‌ಡಿಸಿ ಮತ್ತು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್(ಜಿಇಎಂ)ನಂತಹ ಡಿಜಿಟಲ್ ವೇದಿಕೆಗಳ ಯಶಸ್ಸಿನಿಂದ ಇಂದು ನಮ್ಮ ಯುವಕರು ಡಿಜಿಟಲ್ ಆರ್ಥಿಕತೆಯ ಪರಿವರ್ತನೆಯನ್ನು ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ, ಭಾರತವು ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯ ನೈಜ-ಸಮಯದ ಡಿಜಿಟಲ್ ವಹಿವಾಟುಗಳನ್ನು ದಾಖಲಿಸುತ್ತಿದೆ, ಈ ಸಾಧನೆಯ ಶ್ರೇಯಸ್ಸಿನ ಬಹುಪಾಲು ಪಾಲು ನಮ್ಮ ಯುವಕರಿಗೆ ಸಲ್ಲುತ್ತದೆ.

ಸ್ನೇಹಿತರೆ,

ಈ ವರ್ಷದ ಬಜೆಟ್‌ನಲ್ಲಿ ಸರ್ಕಾರವು ಉತ್ಪಾದನಾ ಮಿಷನ್ ಘೋಷಿಸಿದೆ. 'ಮೇಕ್ ಇನ್ ಇಂಡಿಯಾ' ಉಪಕ್ರಮ ಉತ್ತೇಜಿಸುವುದು ಮತ್ತು ಭಾರತೀಯ ಯುವಕರಿಗೆ ಜಾಗತಿಕ ಮಾನದಂಡಗಳ ಉತ್ಪನ್ನಗಳನ್ನು ತಯಾರಿಸಲು ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಈ ಮಿಷನ್ ಲಕ್ಷಾಂತರ ಎಂಎಸ್ಎಂಇಗಳು ಮತ್ತು ಸಣ್ಣ ಉದ್ಯಮಿಗಳಿಗೆ ಗಮನಾರ್ಹ ಉತ್ತೇಜನ ನೀಡುವುದಲ್ಲದೆ, ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇಂದು ನಾವು ಭಾರತದ ಯುವಕರಿಗೆ ಅಭೂತಪೂರ್ವ ಅವಕಾಶಗಳ ಅವಧಿಯನ್ನು ನೋಡುತ್ತಿದ್ದೇವೆ. ಇತ್ತೀಚೆಗೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯುತ್ತದೆ ಎಂದು ದೃಢಪಡಿಸಿದೆ. ಈ ವಿಶ್ವಾಸ ಮತ್ತು ಬೆಳವಣಿಗೆಯು ಹಲವು ಅಂಶಗಳನ್ನು ಒಳಗೊಂಡಿದೆ, ಅವುಗಳಲ್ಲಿ ಅತ್ಯಂತ ಮಹತ್ವದ್ದಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಂದು ವಲಯದಲ್ಲಿ ಉದ್ಯೋಗಾವಕಾಶಗಳಲ್ಲಿ ನಿರೀಕ್ಷಿತ ಹೆಚ್ಚಳವಾಗಲಿದೆ. ಇತ್ತೀಚಿನ ದಿನಗಳಲ್ಲಿ, ನಮ್ಮ ಉತ್ಪಾದನೆ ಮತ್ತು ರಫ್ತುಗಳು ಹೊಸ ಮೈಲಿಗಲ್ಲುಗಳನ್ನು ಸಾಧಿಸಿವೆ, ವಿಶೇಷವಾಗಿ ಆಟೋಮೊಬೈಲ್ ಮತ್ತು ಪಾದರಕ್ಷೆಗಳ ಉದ್ಯಮಗಳಲ್ಲಿ, ಯುವಜನರಿಗೆ ಗಣನೀಯ ಉದ್ಯೋಗವನ್ನು ಒದಗಿಸುವ ವಲಯಗಳಾಗಿವೆ. ಮೊದಲ ಬಾರಿಗೆ, ಖಾದಿ ಮತ್ತು ಗ್ರಾಮೋದ್ಯೋಗದ ಉತ್ಪನ್ನಗಳು 1.70 ಲಕ್ಷ ಕೋಟಿ ರೂ. ವಹಿವಾಟು ದಾಟಿವೆ. ವಾಸ್ತವದಲ್ಲಿ ಸುಮಾರು 1.75 ಲಕ್ಷ ಕೋಟಿ ರೂ. ಆಗಿದೆ. ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಕೆಲವೇ ದಿನಗಳ ಹಿಂದೆ, ಒಳನಾಡಿನ ಜಲ ಸಾರಿಗೆ ಕ್ಷೇತ್ರದಲ್ಲಿ ದೇಶದ ಮತ್ತೊಂದು ಗಮನಾರ್ಹ ಸಾಧನೆ ಬೆಳಕಿಗೆ ಬಂದಿತು. 2014ರ ಮೊದಲು, ನಮ್ಮ ದೇಶದಲ್ಲಿ ಒಳನಾಡು ಜಲ ಸಾರಿಗೆಯ ಮೂಲಕ ಸರಕು ಸಾಗಣೆ ವರ್ಷಕ್ಕೆ ಕೇವಲ 18 ದಶಲಕ್ಷ ಟನ್‌ಗಳಷ್ಟಿತ್ತು. ಆದಾಗ್ಯೂ, ಈ ವರ್ಷ ಒಳನಾಡಿನ ಜಲ ಸಾರಿಗೆಯ ಮೂಲಕ ಸರಕು ಸಾಗಣೆ ಗಣನೀಯವಾಗಿ ಏರಿಕೆ ಕಂಡಿದೆ, ಅದು 145 ದಶಲಕ್ಷ ಟನ್‌ಗಳನ್ನು ದಾಟಿದೆ. ಭಾರತವು ನಿರಂತರವಾಗಿ ನೀತಿಗಳನ್ನು ರೂಪಿಸಿ ಈ ವಲಯದಲ್ಲಿ ಪ್ರಗತಿಯತ್ತ ಸಜ್ಜಾಗಿರುವ ನಿರ್ಧಾರಗಳನ್ನು ತೆಗೆದುಕೊಂಡಿರುವುದರಿಂದ ಈ ಯಶಸ್ಸು ಕಂಡುಬಂದಿದೆ. ಈ ಹಿಂದೆ, ದೇಶವು ಕೇವಲ 5 ರಾಷ್ಟ್ರೀಯ ಜಲಮಾರ್ಗಗಳನ್ನು ಹೊಂದಿತ್ತು; ಇಂದು ಈ ಸಂಖ್ಯೆ 110ಕ್ಕಿಂತ ಹೆಚ್ಚಾಗಿದೆ. ಇದಕ್ಕೂ ಮೊದಲು, ಈ ಜಲಮಾರ್ಗಗಳ ಕಾರ್ಯಾಚರಣೆಯ ಉದ್ದವು ಸರಿಸುಮಾರು 2,700 ಕಿಲೋಮೀಟರ್‌ಗಳಷ್ಟಿತ್ತು – 2,500 ಕಿಲೋಮೀಟರ್‌ಗಳಿಗಿಂತ ಸ್ವಲ್ಪ ಹೆಚ್ಚು. ಈಗ, ಇದು ಸುಮಾರು 5,000 ಕಿಲೋಮೀಟರ್‌ಗಳಿಗೆ ವಿಸ್ತರಿಸಿದೆ. ಈ ಎಲ್ಲಾ ಸಾಧನೆಗಳಿಗೆ ಧನ್ಯವಾದಗಳು, ದೇಶಾದ್ಯಂತ ಯುವಕರಿಗೆ ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

ಸ್ನೇಹಿತರೆ,

ವಿಶ್ವ ದೃಶ್ಯ ಶ್ರವಣ ಮತ್ತು ಮನರಂಜನಾ ಶೃಂಗಸಭೆ “ವೇವ್ಸ್ 2025” ಮುಂಬರುವ ದಿನಗಳಲ್ಲಿ ಮುಂಬೈನಲ್ಲಿ ನಡೆಯಲಿದೆ. ದೇಶದ ಯುವಕರು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದಾರೆ. ಮೊದಲ ಬಾರಿಗೆ, ಭಾರತಾದ್ಯಂತದ ಯುವ ಸೃಷ್ಟಿಕರ್ತರು ಇಂತಹ ಪ್ರತಿಷ್ಠಿತ ವೇದಿಕೆಗೆ ಪ್ರವೇಶ ಪಡೆಯುತ್ತಾರೆ. ಮಾಧ್ಯಮ, ಗೇಮಿಂಗ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿನ ನಾವೀನ್ಯಕಾರರು ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಅಭೂತಪೂರ್ವ ಅವಕಾಶ ಒದಗಿಸುತ್ತದೆ. ಮನರಂಜನಾ ವಲಯದ ನವೋದ್ಯಮಗಳು ಹೂಡಿಕೆದಾರರು ಮತ್ತು ಉದ್ಯಮದ ನಾಯಕರೊಂದಿಗೆ ಸಂಪರ್ಕ ಸಾಧಿಸುವ ವೇದಿಕೆಯಾಗಿ ಇದು ಕಾರ್ಯ ನಿರ್ವಹಿಸುತ್ತದೆ. ಜಾಗತಿಕ ಪ್ರೇಕ್ಷಕರಿಗೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಇದು ಅತಿದೊಡ್ಡ ವೇದಿಕೆಯಾಗಿದೆ. ಯುವಜನರು ಕೃತಕ ಬುದ್ಧಿಮತ್ತೆ, ಎಕ್ಸ್ಆರ್ ಮತ್ತು ತಲ್ಲೀನಗೊಳಿಸುವ ಮಾಧ್ಯಮದಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನ್ವೇಷಿಸಲು ಮತ್ತು ಅರ್ಥ ಮಾಡಿಕೊಳ್ಳಲು ಅವಕಾಶ ಹೊಂದಿರುತ್ತಾರೆ. ಈ ಉದ್ದೇಶಕ್ಕಾಗಿ ವಿವಿಧ ಕಾರ್ಯಾಗಾರಗಳನ್ನು ನಡೆಸಲಾಗುವುದು. ಭಾರತದಲ್ಲಿ ಡಿಜಿಟಲ್ ವಿಷಯದ ಭವಿಷ್ಯಕ್ಕೆ ಹೊಸ ಶಕ್ತಿಯನ್ನು ತುಂಬಲು ವೇವ್ಸ್ ಸಜ್ಜಾಗಿದೆ.

ಸ್ನೇಹಿತರೆ,

ಭಾರತದ ಯುವಕರು ಇಂದು ಸಾಧಿಸುತ್ತಿರುವ ಯಶಸ್ಸಿನ ಅತ್ಯಂತ ಪ್ರಶಂಸನೀಯ ಅಂಶವೆಂದರೆ ಅವರ ಒಳಗೊಳ್ಳುವಿಕೆ. ಭಾರತ ಸ್ಥಾಪಿಸುತ್ತಿರುವ ದಾಖಲೆಗಳು ಸಮಾಜದ ಎಲ್ಲಾ ವರ್ಗಗಳ ಜನರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತವೆ, ನಮ್ಮ ಹೆಣ್ಣುಮಕ್ಕಳು ಈಗ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿನ ಯುಪಿಎಸ್‌ಸಿ ಫಲಿತಾಂಶಗಳು ಇದಕ್ಕೆ ಸಾಕ್ಷಿ: ಮೊದಲ 2 ಸ್ಥಾನಗಳನ್ನು ಹೆಣ್ಣು ಮಕ್ಕಳು ಪಡೆದುಕೊಂಡಿದ್ದಾರೆ, ಮೊದಲ 5 ಅಭ್ಯರ್ಥಿಗಳಲ್ಲಿ ಮೂವರು ಮಹಿಳೆಯರು ಸ್ಥಾನ ಗಳಿಸಿದ್ದಾರೆ.

ನಮ್ಮ ಮಹಿಳೆಯರು ಅಧಿಕಾರಶಾಹಿ, ಬಾಹ್ಯಾಕಾಶ ಪರಿಶೋಧನೆ ಮತ್ತು ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಹೊಸ ಎತ್ತರಕ್ಕೆ ತಲುಪುತ್ತಿದ್ದಾರೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೂ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಸ್ವಸಹಾಯ ಗುಂಪುಗಳು, ಬಿಮಾ ಸಖಿ, ಬ್ಯಾಂಕ್ ಸಖಿ ಮತ್ತು ಕೃಷಿ ಸಖಿಯಂತಹ ಉಪಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಇಂದು ದೇಶಾದ್ಯಂತ ಸಾವಿರಾರು ಮಹಿಳೆಯರು ಡ್ರೋನ್ ದೀದಿಗಳಾಗುವ ಮೂಲಕ ತಮ್ಮ ಕುಟುಂಬಗಳು ಮತ್ತು ಹಳ್ಳಿಗಳ ಏಳಿಗೆಗೆ ಕೊಡುಗೆ ನೀಡುತ್ತಿದ್ದಾರೆ. ಪ್ರಸ್ತುತ, ದೇಶದಲ್ಲಿ 90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಅಸ್ತಿತ್ವದಲ್ಲಿವೆ, ಇದರಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಸೇರಿದ್ದಾರೆ. ಅವರ ಸಾಮರ್ಥ್ಯ ಹೆಚ್ಚಿಸಲು, ನಮ್ಮ ಸರ್ಕಾರವು ತಮ್ಮ ಬಜೆಟ್ ಅನ್ನು 5 ಪಟ್ಟು ಹೆಚ್ಚಿಸಿದೆ. ಯಾವುದೇ ಮೇಲಾಧಾರ ಅಗತ್ಯವಿಲ್ಲದೆ ಈ ಗುಂಪುಗಳಿಗೆ 20 ಲಕ್ಷ ರೂ.ವರೆಗೆ ಸಾಲ ನೀಡಲು ಅವಕಾಶಗಳನ್ನು ಮಾಡಲಾಗಿದೆ. ಮುದ್ರಾ ಯೋಜನೆಯಲ್ಲೂ ಸಹ ಹೆಚ್ಚಿನ ಫಲಾನುಭವಿಗಳು ಮಹಿಳೆಯರೇ ಇದ್ದಾರೆ. ಇಂದು ಭಾರತದಲ್ಲಿ 50,000ಕ್ಕಿಂತ ಹೆಚ್ಚಿನ ಸ್ಟಾರ್ಟಪ್‌ಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿದ್ದಾರೆ. ಎಲ್ಲಾ ವಲಯಗಳಲ್ಲಿನ ಇಂತಹ ಪರಿವರ್ತನೆಗಳು ವಿಕಸಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ)ದ ದೃಷ್ಟಿಕೋನವನ್ನು ಬಲಪಡಿಸುತ್ತಿವೆ, ಅದೇ ಸಮಯದಲ್ಲಿ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಿವೆ.

ಸ್ನೇಹಿತರೆ,

ನೀವೆಲ್ಲರೂ ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಸ್ಥಾನವನ್ನು ಸಾಧಿಸಿದ್ದೀರಿ. ನಿಮ್ಮ ಜೀವನದ ಮುಂದಿನ ಹಂತಗಳನ್ನು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ರಾಷ್ಟ್ರದ ಸೇವೆಗೂ ಮೀಸಲಿಡುವ ಸಮಯ ಬಂದಿದೆ. ಸಾರ್ವಜನಿಕ ಸೇವಾ ಮನೋಭಾವವು ಮುಂಚೂಣಿಯಲ್ಲಿರಬೇಕು. ನೀವು ನಿಮ್ಮ ಕರ್ತವ್ಯವನ್ನು ಸೇವೆಯ ಅತ್ಯುನ್ನತ ರೂಪವೆಂದು ಪರಿಗಣಿಸಿದಾಗ, ನಿಮ್ಮ ಕಾರ್ಯಗಳು ದೇಶವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಶಕ್ತಿ ಹೊಂದಿರುತ್ತವೆ. ನಿಮ್ಮ ಕರ್ತವ್ಯ ಪ್ರಜ್ಞೆ, ನಿಮ್ಮ ನಾವೀನ್ಯತೆ ಮತ್ತು ನಿಮ್ಮ ಅಚಲ ಬದ್ಧತೆಯ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕನ ಜೀವನ ಸುಧಾರಿಸುತ್ತದೆ.

ಸ್ನೇಹಿತರೆ,

ನೀವು ಜವಾಬ್ದಾರಿಯುತ ಸ್ಥಾನ ವಹಿಸಿಕೊಂಡಾಗ, ನಾಗರಿಕರಾಗಿ ನಿಮ್ಮ ಕರ್ತವ್ಯಗಳು ಮತ್ತು ಪಾತ್ರವು ಹೆಚ್ಚು ಮಹತ್ವದ್ದಾಗುತ್ತದೆ. ನೀವೆಲ್ಲರೂ ಇದರ ಬಗ್ಗೆ ಜಾಗರೂಕರಾಗಿರಬೇಕು, ನಾಗರಿಕರಾಗಿ ನಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನಾವು ಸಹ ಹಿಂದೆ ಬೀಳಬಾರದು. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಪ್ರಸ್ತುತ, 'ಏಕ್ ಪೆಡ್ ಮಾ ಕೆ ನಾಮ್' ಎಂಬ ಪ್ರಮುಖ ಅಭಿಯಾನವು ದೇಶಾದ್ಯಂತ ನಡೆಯುತ್ತಿದೆ. ನೀವು ಇಂದು ಹೊಂದಿರುವ ಸ್ಥಾನ ತಲುಪುವಲ್ಲಿ ಮತ್ತು ಜೀವನದ ಈ ಹೊಸ ಹಂತ ಪ್ರಾರಂಭಿಸುವಲ್ಲಿ, ನಿಮ್ಮ ತಾಯಿ ನಿಸ್ಸಂದೇಹವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ನೀವು ಸಹ ನಿಮ್ಮ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪ್ರಕೃತಿಗೆ ಸೇವೆ ಸಲ್ಲಿಸುವ ಮೂಲಕ ನಿಮ್ಮ ಕೃತಜ್ಞತೆ ವ್ಯಕ್ತಪಡಿಸಬೇಕು. ನೀವು ಕೆಲಸ ಮಾಡುವ ಕಚೇರಿಯಲ್ಲಿ, ಸಾಧ್ಯವಾದಷ್ಟು ಜನರನ್ನು ಈ ಅಭಿಯಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ.

ನೀವು ನಿಮ್ಮ ವೃತ್ತಿಪರ ಪ್ರಯಾಣ ಪ್ರಾರಂಭಿಸುವಾಗ, ಜೂನ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಬರುತ್ತದೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಇದು ಅದ್ಭುತ ಅವಕಾಶ ಒದಗಿಸುತ್ತದೆ. ಅಂತಹ ಮಹತ್ವದ ಸಂದರ್ಭದಲ್ಲಿ, ಯಶಸ್ವಿ ವೃತ್ತಿಜೀವನ ಪ್ರಾರಂಭಿಸುವುದರ ಜತೆಗೆ, ನೀವು ಯೋಗದ ಮೂಲಕ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ನಿಮ್ಮ ವೈಯಕ್ತಿಕ ಆರೋಗ್ಯವು ನಿಮಗೆ ಅತ್ಯಗತ್ಯ ಮಾತ್ರವಲ್ಲದೆ, ನಿಮ್ಮ ಕೆಲಸದ ದಕ್ಷತೆ ಮತ್ತು ರಾಷ್ಟ್ರದ ಒಟ್ಟಾರೆ ಉತ್ಪಾದಕತೆಗೂ ಸಹ ಅತ್ಯಗತ್ಯ.

ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು, ಮಿಷನ್ ಕರ್ಮಯೋಗಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ನಿಮ್ಮ ಕೆಲಸದ ಉದ್ದೇಶ ಕೇವಲ ಒಂದು ಸ್ಥಾನ ಗಳಿಸುವುದಕ್ಕೆ ಸೀಮಿತವಾಗಿರಬಾರದು. ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದು ನಿಮ್ಮ ಪಾತ್ವಾಗಿದೆ. ಕೆಲವು ದಿನಗಳ ಹಿಂದೆ, ನಾಗರಿಕ ಸೇವಾ ದಿನದಂದು, ನಾನು ಒಂದು ಮಾರ್ಗದರ್ಶಿ ಮಂತ್ರವನ್ನು ಹಂಚಿಕೊಂಡೆ. ಸರ್ಕಾರದಲ್ಲಿರುವ ಪ್ರತಿಯೊಬ್ಬರೂ ಒಂದು ತತ್ವವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಬೇಕು. ಆ ಮಂತ್ರವೆಂದರೆ: ನಾಗರಿಕ ದೇವೋ ಭವ - ನಾಗರಿಕನೇ ದೇವರು. ನಾಗರಿಕರಿಗೆ ಸೇವೆ ಸಲ್ಲಿಸುವುದು, ನಿಮಗಾಗಿ ಮತ್ತು ನಮಗೆಲ್ಲರಿಗೂ, ದೈವವನ್ನು ಪೂಜಿಸುವುದಕ್ಕೆ ಸಮಾನ. ಯಾವಾಗಲೂ ಈ ಮಂತ್ರವನ್ನು ನಿಮ್ಮ ಹೃದಯದಲ್ಲಿ ಕಾಪಾಡಿ. ನಮ್ಮ ಸಾಮರ್ಥ್ಯಗಳು ಮತ್ತು ಸಮಗ್ರತೆಯಿಂದ, ನಾವು ಅಭಿವೃದ್ಧಿ ಹೊಂದಿದ ಮಾತ್ರವಲ್ಲದೆ, ಸಮೃದ್ಧವೂ ಆಗಿರುವ ಭಾರತವನ್ನು ನಿರ್ಮಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ನೀವು ಕನಸುಗಳನ್ನು ಹೊಂದಿರುವಂತೆಯೇ, 140 ಕೋಟಿ ಭಾರತೀಯರೂ ಸಹ ಕನಸುಗಳನ್ನು ಹೊಂದಿದ್ದಾರೆ. ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಅವಕಾಶ ಪಡೆದಿರುವಂತೆಯೇ, 140 ಕೋಟಿ ನಾಗರಿಕರ ಕನಸುಗಳನ್ನು ನನಸಾಗಿಸಲು ಈ ಅವಕಾಶ ಬಳಸಿಕೊಳ್ಳುವುದು ಈಗ ನಿಮ್ಮ ಕರ್ತವ್ಯವಾಗಿದೆ. ನೀವು ಹೊಂದಿರುವ ಹುದ್ದೆಯನ್ನು ಗೌರವಿಸುತ್ತೀರಿ, ಜನರ ಹೆಮ್ಮೆಯನ್ನು ಹೆಚ್ಚಿಸುತ್ತೀರಿ ಮತ್ತು ನಿಮ್ಮ ಜೀವನವನ್ನು ಅರ್ಥಪೂರ್ಣ ಮತ್ತು ಆಶೀರ್ವಾದದಾಯಕವಾಗಿಸಲು ನಿಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುತ್ತೀರಿ ಎಂಬ ವಿಶ್ವಾಸ ನನಗಿದೆ.

ಈ ಆತ್ಮೀಯ ಶುಭಾಶಯಗಳೊಂದಿಗೆ, ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 

 

 

 

 


(Release ID: 2125139)