ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕಾರ್ಯಕ್ರಮ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 24 APR 2025 3:34PM by PIB Bengaluru

ನನ್ನ ಭಾಷಣ ಆರಂಭಿಸುವ ಮುನ್ನ ನಾನು ನಿಮ್ಮೆಲ್ಲರಿಗೂ ಒಂದು ಮನವಿ ಮಾಡಲು ಬಯಸುತ್ತೇನೆ, ನೀವು ಎಲ್ಲಿದ್ದರೂ, ನಿಮ್ಮ ಸ್ಥಳದಲ್ಲೇ ಕುಳಿತುಕೊಳ್ಳಿ, ನಿಲ್ಲುವ ಅಗತ್ಯವಿಲ್ಲ. ಏ.22ರಂದು ನಾವು ಕಳೆದುಕೊಂಡ ಕುಟುಂಬ ಸದಸ್ಯರಿಗೆ ನಾವು ಕುಳಿತು ಗೌರವ ನಮನ ಸಲ್ಲಿಸೋಣ. ನಮ್ಮ ಸ್ಥಳದಲ್ಲಿ ಕೆಲವು ಕ್ಷಣ ಕುಳಿತು, ಮೌನ ಆಚರಿಸುವ ಮೂಲಕ ಮತ್ತು ನಮ್ಮ ದೇವತೆಗಳನ್ನು ಸ್ಮರಿಸುವ ಮೂಲಕ, ನಾವು ಅವರೆಲ್ಲರಿಗೂ ಗೌರವ ಸಲ್ಲಿಸೋಣ. ಅದಾದ ನಂತರ ನಾನು ಇಂದು ನನ್ನ ಭಾಷಣ ಆರಂಭಿಸುತ್ತೇನೆ.

ಓಂ ಶಾಂತಿ-ಶಾಂತಿ-ಶಾಂತಿ.

ಬಿಹಾರದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ಶ್ರೀ ನಿತೀಶ್ ಕುಮಾರ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

ಇಂದು ಪಂಚಾಯತ್ ರಾಜ್ ದಿನದಂದು ಇಡೀ ದೇಶವು ಮಿಥಿಲಾದೊಂದಿಗೆ ಸಂಪರ್ಕ ಹೊಂದಿದೆ, ಬಿಹಾರದೊಂದಿಗೆ ಸಂಪರ್ಕ ಹೊಂದಿದೆ. ಇಂದು ದೇಶ ಮತ್ತು ಬಿಹಾರದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ವಿದ್ಯುತ್, ರೈಲ್ವೆ, ಮೂಲಸೌಕರ್ಯ ವಲಯದ ವಿವಿಧ ಕಾರ್ಯಗಳು ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಇಂದು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಜಿ ಅವರ ಪುಣ್ಯತಿಥಿಯೂ ಆಗಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೆ,

ಬಿಹಾರವು ಪೂಜ್ಯ ಬಾಪೂಜಿ ಸತ್ಯಾಗ್ರಹದ ಮಂತ್ರ ಹರಡಿದ ಪುಣ್ಯ ಭೂಮಿ. ಭಾರತದ ಹಳ್ಳಿಗಳು ಬಲಿಷ್ಠವಾಗದ ಹೊರತು ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಪೂಜ್ಯ ಬಾಪು ದೃಢವಾಗಿ ನಂಬಿದ್ದರು. ದೇಶದಲ್ಲಿ ಪಂಚಾಯತ್ ರಾಜ್ ಪರಿಕಲ್ಪನೆಯ ಹಿಂದಿನ ಸ್ಫೂರ್ತಿ ಇದೇ ಆಗಿದೆ. ಕಳೆದ ದಶಕದಲ್ಲಿ, ಪಂಚಾಯತ್‌ಗಳನ್ನು ಸಬಲೀಕರಣಗೊಳಿಸಲು ಒಂದರ ನಂತರ ಒಂದರಂತೆ ಹೆಜ್ಜೆ ಇಡಲಾಗಿದೆ. ಪಂಚಾಯತ್‌ಗಳನ್ನು ತಂತ್ರಜ್ಞಾನದ ಮೂಲಕವೂ ಸಬಲೀಕರಣಗೊಳಿಸಲಾಗಿದೆ. ಕಳೆದ ದಶಕದಲ್ಲಿ, 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಇಂಟರ್ನೆಟ್‌ಗೆ ಸಂಪರ್ಕಿಸಲಾಗಿದೆ. ಹಳ್ಳಿಗಳಲ್ಲಿ 5.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಚಾಯಿತಿಗಳು ಡಿಜಿಟಲ್ ಆಗುವುದರಿಂದ ಮತ್ತೊಂದು ಪ್ರಯೋಜನವಿದೆ. ಜೀವ-ಮರಣ ಪ್ರಮಾಣಪತ್ರಗಳು, ಭೂ ಮಾಲೀಕತ್ವ ಪ್ರಮಾಣಪತ್ರಗಳು ಮತ್ತು ಅಂತಹ ಅನೇಕ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರ, ದೇಶವು ಹೊಸ ಸಂಸತ್ತು ಕಟ್ಟಡ ನಿರ್ಮಿಸಿದಾಗಲೇ ದೇಶದಲ್ಲಿ 30 ಸಾವಿರ ಹೊಸ ಪಂಚಾಯಿತಿ ಕಟ್ಟಡಗಳನ್ನು ಸಹ ನಿರ್ಮಿಸಲಾಯಿತು. ಪಂಚಾಯಿತಿಗಳು ಸಾಕಷ್ಟು ಹಣ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಕಳೆದ 10 ವರ್ಷಗಳಲ್ಲಿ ಪಂಚಾಯಿತಿಗಳು 2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣ ಪಡೆದಿವೆ. ಈ ಎಲ್ಲಾ ಹಣವನ್ನು ಗ್ರಾಮಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲಾಗಿದೆ.

ಸ್ನೇಹಿತರೆ,

ಗ್ರಾಮ ಪಂಚಾಯಿತಿಗಳ ಮತ್ತೊಂದು ಪ್ರಮುಖ ಸಮಸ್ಯೆ ಭೂ ವಿವಾದಗಳಿಗೆ ಸಂಬಂಧಿಸಿದೆ. ವಾಸಿಸುವ ಭೂಮಿ, ಅದು ಕೃಷಿ ಭೂಮಿ, ಅದು ಪಂಚಾಯಿತಿ ಭೂಮಿ, ಅದು ಸರ್ಕಾರಿ ಭೂಮಿಯ ಬಗ್ಗೆ ಆಗಾಗ್ಗೆ ವಿವಾದಗಳು ನಡೆಯುತ್ತಿದ್ದವು. ಇದನ್ನು ಪರಿಹರಿಸಲು, ಭೂಮಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಭೂ ದಾಖಲೆಗಳ ಡಿಜಿಟಲೀಕರಣವು ಅನಗತ್ಯ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡಿದೆ.

ಸ್ನೇಹಿತರೆ,

ಪಂಚಾಯಿತಿಗಳು ಸಾಮಾಜಿಕ ಭಾಗವಹಿಸುವಿಕೆಯನ್ನು ಹೇಗೆ ಸಬಲೀಕರಣಗೊಳಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ಇವುಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಬಿಹಾರ, ಆದ್ದರಿಂದ ನಾನು ನಿತೀಶ್ ಜಿ ಅವರನ್ನು ಅಭಿನಂದಿಸುತ್ತೇನೆ. ಇಂದು ಬಡವರು, ದಲಿತರು, ಮಹಾದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳ ಹೆಚ್ಚಿನ ಸಂಖ್ಯೆಯ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಬಿಹಾರದಲ್ಲಿ ಸಾರ್ವಜನಿಕ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ನಿಜವಾದ ಸಾಮಾಜಿಕ ನ್ಯಾಯ, ಇದು ನಿಜವಾದ ಸಾಮಾಜಿಕ ಭಾಗವಹಿಸುವಿಕೆ. ಗರಿಷ್ಠ ಭಾಗವಹಿಸುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ, ಬಲಗೊಳ್ಳುತ್ತದೆ. ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯ ಕಾನೂನು ಸಹ ಮಾಡಲಾಗಿದೆ. ದೇಶದ ಪ್ರತಿಯೊಂದು ರಾಜ್ಯದ ಮಹಿಳೆಯರು ಇದರಿಂದ ಪ್ರಯೋಜನ ಪಡೆಯುತ್ತಾರೆ, ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಾರೆ.

ಸ್ನೇಹಿತರೆ,

ದೇಶದಲ್ಲಿ ಮಹಿಳೆಯರ ಆದಾಯ ಹೆಚ್ಚಿಸಲು ಮತ್ತು ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರವು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಬಿಹಾರದಲ್ಲಿ ನಡೆಯುತ್ತಿರುವ ಜೀವಿಕಾ ದೀದಿ ಕಾರ್ಯಕ್ರಮವು ಅನೇಕ ಸಹೋದರಿಯರ ಜೀವನ ಬದಲಾಯಿಸಿದೆ. ಇಂದು ಬಿಹಾರದ ಸಹೋದರಿಯರ ಸ್ವ-ಸಹಾಯ ಗುಂಪುಗಳಿಗೆ ಸುಮಾರು 1 ಸಾವಿರ ಕೋಟಿ ರೂಪಾಯಿ ಸಹಾಯ ನೀಡಲಾಗಿದೆ. ಇದು ಸಹೋದರಿಯರ ಆರ್ಥಿಕ ಸಬಲೀಕರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ದೇಶದಲ್ಲಿ 3 ಕೋಟಿ ಲಕ್ಷಪತಿ ದೀದಿಗಳನ್ನು ರಚಿಸುವ ಗುರಿ ಸಾಧಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಕಳೆದ ದಶಕದಿಂದ ಗ್ರಾಮೀಣ ಆರ್ಥಿಕತೆಯು ಹೊಸ ವೇಗ ಪಡೆದುಕೊಂಡಿದೆ. ಹಳ್ಳಿಗಳಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ, ರಸ್ತೆಗಳನ್ನು ನಿರ್ಮಿಸಲಾಗಿದೆ, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಲಾಗಿದೆ. ಹಳ್ಳಿಗಳಲ್ಲಿ ಅನಿಲ ಸಂಪರ್ಕ ಒದಗಿಸಲಾಗಿದೆ, ನೀರಿನ ಸಂಪರ್ಕ ಒದಗಿಸಲಾಗಿದೆ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಂತಹ ಪ್ರತಿಯೊಂದು ಕೆಲಸದ ಮೂಲಕ ಲಕ್ಷಾಂತರ ಮತ್ತು ಕೋಟ್ಯಂತರ ರೂಪಾಯಿ ಹಳ್ಳಿಗಳನ್ನು ತಲುಪಿವೆ. ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಲಾಗಿದೆ. ಕಾರ್ಮಿಕರಿಂದ ರೈತರವರೆಗೆ ಮತ್ತು ಬಂಡಿ ಚಾಲಕರಿಂದ ಅಂಗಡಿ ವ್ಯಾಪಾರದವರೆಗೆ, ಪ್ರತಿಯೊಬ್ಬರೂ ಸಂಪಾದಿಸಲು ಹೊಸ ಅವಕಾಶಗಳನ್ನು ಪಡೆದಿದ್ದಾರೆ. ಇದು ತಲೆಮಾರುಗಳಿಂದ ವಂಚಿತರಾಗಿದ್ದ ಸಮಾಜಕ್ಕೆ ಹೆಚ್ಚು ಪ್ರಯೋಜನ ನೀಡುತ್ತಿದೆ. ನಾನು ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದಾಹರಣೆ ನೀಡುತ್ತೇನೆ. ಈ ಯೋಜನೆಯ ಉದ್ದೇಶವೆಂದರೆ, ದೇಶದಲ್ಲಿ ಯಾವುದೇ ಬಡ ಕುಟುಂಬವು ನಿರಾಶ್ರಿತರಾಗಿರಬಾರದು, ಪ್ರತಿಯೊಬ್ಬರೂ ತಮ್ಮ ತಲೆಯ ಮೇಲೆ ಕಾಂಕ್ರೀಟ್ ಸೂರು ಹೊಂದಿರಬೇಕು. ಇದೀಗ, ನಾನು ಈ ತಾಯಂದಿರು ಮತ್ತು ಸಹೋದರಿಯರಿಗೆ ಮನೆಯ ಕೀಲಿಗಳನ್ನು ನೀಡುವಾಗ, ಅವರ ಮುಖಗಳಲ್ಲಿ ಕಾಣುತ್ತಿದ್ದ ತೃಪ್ತಿ, ಅವರಲ್ಲಿ ಕಾಣುತ್ತಿದ್ದ ಹೊಸ ವಿಶ್ವಾಸ, ನಿಜವಾಗಿಯೂ ಈ ಬಡ ಜನರಿಗೆ ಕೆಲಸ ಮಾಡಲು ಸ್ಫೂರ್ತಿ ನೀಡಿತು. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಕಳೆದ ದಶಕದಲ್ಲಿ 4 ಕೋಟಿಗೂ ಹೆಚ್ಚು ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲಾಗಿದೆ. ಬಿಹಾರದಲ್ಲಿಯೂ ಸಹ, ಇಲ್ಲಿಯವರೆಗೆ 57 ಲಕ್ಷ ಬಡ ಕುಟುಂಬಗಳಿಗೆ ಕಾಂಕ್ರೀಟ್ ಮನೆಗಳನ್ನು ನೀಡಲಾಗಿದೆ. ಈ ಮನೆಗಳನ್ನು ಬಡವರು, ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರು, ಪಾಸ್ಮಾಂಡ ಕುಟುಂಬಗಳು ಮತ್ತು ಸಮಾಜದ ಸೌಲಭ್ಯವಂಚಿತ ಕುಟುಂಬಗಳಿಗೆ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ 3 ಕೋಟಿ ಹೆಚ್ಚು ಕಾಂಕ್ರೀಟ್ ಮನೆಗಳನ್ನು ಬಡವರಿಗೆ ನೀಡಲಾಗುವುದು. ಇಂದು ಬಿಹಾರದ ಸುಮಾರು 1.5 ಲಕ್ಷ ಕುಟುಂಬಗಳು ತಮ್ಮ ಹೊಸ ಪಕ್ಕಾ ಮನೆಗಳನ್ನು ಪ್ರವೇಶಿಸುತ್ತಿವೆ. ದೇಶಾದ್ಯಂತ 15 ಲಕ್ಷ ಬಡ ಕುಟುಂಬಗಳಿಗೆ ಹೊಸ ಮನೆಗಳ ನಿರ್ಮಾಣಕ್ಕಾಗಿ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಇವುಗಳಲ್ಲಿ, ಮೂರುವರೆ ಲಕ್ಷ ಫಲಾನುಭವಿಗಳು ನಮ್ಮ ಬಿಹಾರದವರಾಗಿದ್ದಾರೆ. ಇಂದು ಸುಮಾರು 10 ಲಕ್ಷ ಬಡ ಕುಟುಂಬಗಳಿಗೆ ಅವರ ಕಾಂಕ್ರೀಟ್ ಮನೆಗಳಿಗಾಗಿ ಆರ್ಥಿಕ ನೆರವು ಒದಗಿಸಲಾಗಿದೆ. ಇದರಲ್ಲಿ 80 ಸಾವಿರ ಗ್ರಾಮೀಣ ಕುಟುಂಬಗಳು ಮತ್ತು ಬಿಹಾರದ 1 ಲಕ್ಷ ನಗರ ಕುಟುಂಬಗಳು ಸೇರಿವೆ.

ಸ್ನೇಹಿತರೆ,

ಕಳೆದ ದಶಕವು ಭಾರತದ ಮೂಲಸೌಕರ್ಯದ ದಶಕವಾಗಿದೆ. ಈ ಆಧುನಿಕ ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸುತ್ತಿದೆ. ಮೊದಲ ಬಾರಿಗೆ, ದೇಶದಲ್ಲಿ 12 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳ ಮನೆಗಳಿಗೆ ನಲ್ಲಿ ನೀರು ತಲುಪಿದೆ. ವಿದ್ಯುತ್ ಸಂಪರ್ಕ 2.5 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಿದೆ. ಗ್ಯಾಸ್ ಸ್ಟೌವ್ ಮೇಲೆ ಅಡುಗೆ ಮಾಡುವ ಬಗ್ಗೆ ಎಂದಿಗೂ ಯೋಚಿಸದವರಿಗೆ ಗ್ಯಾಸ್ ಸಿಲಿಂಡರ್‌ಗಳು ಸಿಕ್ಕಿವೆ. ನೀವು ಇತ್ತೀಚೆಗೆ ಸುದ್ದಿಗಳನ್ನು ಓದಿರಬೇಕು. ಲಡಾಖ್ ಮತ್ತು ಸಿಯಾಚಿನ್‌ನಲ್ಲಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸಹ ಕಷ್ಟಕರವಾಗಿರುವ ಸ್ಥಳಗಳಲ್ಲಿ, 4ಜಿ ಮತ್ತು 5ಜಿ ಮೊಬೈಲ್ ಸಂಪರ್ಕಗಳು ಈಗ ಅಲ್ಲಿಗೆ ತಲುಪಿವೆ. ಇದು ಇಂದಿನ ದೇಶದ ಆದ್ಯತೆಗಳು ಏನೆಂದು ತೋರಿಸುತ್ತಿದೆ. ಆರೋಗ್ಯದಂತಹ ಕ್ಷೇತ್ರದ ಉದಾಹರಣೆಯೂ ನಮಗಿದೆ. ಹಿಂದೆ, ಏಮ್ಸ್ ನಂತಹ ಆಸ್ಪತ್ರೆಗಳು ದೆಹಲಿಯಂತಹ ದೊಡ್ಡ ನಗರಗಳಲ್ಲಿ ಮಾತ್ರ ಇದ್ದವು. ಇಂದು ಏಮ್ಸ್ ಅನ್ನು ದರ್ಭಂಗಾದಲ್ಲೇ ನಿರ್ಮಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ. ಝಂಝಾರ್‌ಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ.

ಸ್ನೇಹಿತರೆ,

ಹಳ್ಳಿಗಳಿಗೆ ಉತ್ತಮ ಆಸ್ಪತ್ರೆಗಳನ್ನು ಒದಗಿಸುವ ಉದ್ದೇಶದಿಂದ ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ. ಬಿಹಾರದಲ್ಲಿ 10 ಸಾವಿರಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಜನೌಷಧಿ ಕೇಂದ್ರಗಳು ದೊಡ್ಡ ಪರಿಹಾರವಾಗಿದೆ. ಇಲ್ಲಿ ಕಡಿಮೆ ಬೆಲೆಯ ಔಷಧಿಗಳು ಶೇಕಡ 80ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಬಿಹಾರದಲ್ಲಿ 800ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಬಿಹಾರದ ಜನರಿಗೆ ಔಷಧಿಗಳ ಮೇಲೆ 2,000 ಕೋಟಿ ರೂಪಾಯಿಗಳನ್ನು ಉಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಬಿಹಾರದ ಲಕ್ಷಾಂತರ ಕುಟುಂಬಗಳು ಉಚಿತ ಚಿಕಿತ್ಸೆ ಪಡೆದಿವೆ. ಇದು ಈ ಕುಟುಂಬಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿಸಿದೆ.

ಸ್ನೇಹಿತರೆ,

ಇಂದು ಭಾರತವು ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳಂತಹ ಮೂಲಸೌಕರ್ಯಗಳೊಂದಿಗೆ ಅತ್ಯಂತ ವೇಗವಾಗಿ ಸಂಪರ್ಕ ಸಾಧಿಸುತ್ತಿದೆ. ಪಾಟ್ನಾದಲ್ಲಿ ಮೆಟ್ರೋ ಕೆಲಸ ನಡೆಯುತ್ತಿದೆ, ದೇಶದ 2 ಡಜನ್‌ಗಿಂತಲೂ ಹೆಚ್ಚು ನಗರಗಳು ಮೆಟ್ರೋ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿವೆ. ಇಂದು, ಪಾಟ್ನಾ ಮತ್ತು ಜೈನಗರ ನಡುವೆ ನಮೋ ಭಾರತ್ ರ‍್ಯಾಪಿಡ್ ರೈಲು ಸಹ ಪ್ರಾರಂಭವಾಗಿದೆ. ಇದರೊಂದಿಗೆ, ಪಾಟ್ನಾ ಮತ್ತು ಜೈನಗರ ನಡುವಿನ ಪ್ರಯಾಣ ಬಹಳ ಕಡಿಮೆ ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ನಮೋ ಭಾರತ್ ರ‍್ಯಾಪಿಡ್ ರೈಲು ಸಮಷ್ಟಿಪುರ, ದರ್ಭಂಗಾ, ಮಧುಬನಿ ಮತ್ತು ಬೇಗುಸರಾಯ್‌ನ ಲಕ್ಷಾಂತರ ಜನರಿಗೆ ಸಹಾಯ ಮಾಡುತ್ತದೆ.

ಸ್ನೇಹಿತರೆ,

ಇಂದು ಇಲ್ಲಿ ಅನೇಕ ಹೊಸ ರೈಲು ಮಾರ್ಗಗಳನ್ನು ಉದ್ಘಾಟಿಸಲಾಗಿದೆ ಮತ್ತು ಲೋಕಾರ್ಪಣೆ ಮಾಡಲಾಗಿದೆ. ಸಹರ್ಸಾದಿಂದ ಮುಂಬೈಗೆ ಆಧುನಿಕ ಅಮೃತ್ ಭಾರತ್ ರೈಲು ಆರಂಭಿಸುವುದರಿಂದ ನಮ್ಮ ಕಾರ್ಮಿಕ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ನಮ್ಮ ಸರ್ಕಾರವು ಬಿಹಾರದ ಮಧುಬನಿ ಮತ್ತು ಝಂಝಾರ್ಪುರ್ ಸೇರಿದಂತೆ ಡಜನ್ ಗಟ್ಟಲೆ ರೈಲು ನಿಲ್ದಾಣಗಳನ್ನು ಆಧುನೀಕರಿಸುತ್ತಿದೆ. ದರ್ಭಂಗಾ ವಿಮಾನ ನಿಲ್ದಾಣದೊಂದಿಗೆ ಮಿಥಿಲಾ ಮತ್ತು ಬಿಹಾರದ ವೈಮಾನಿಕ ಸಂಪರ್ಕ ಸುಧಾರಿಸಿದೆ. ಪಾಟ್ನಾ ವಿಮಾನ ನಿಲ್ದಾಣವನ್ನು ಸಹ ವಿಸ್ತರಿಸಲಾಗುತ್ತಿದೆ. ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೆ,

ನಮ್ಮ ರೈತರು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಈ ಬೆನ್ನೆಲುಬು ಬಲಿಷ್ಠವಾಗಿದ್ದಷ್ಟೂ, ಹಳ್ಳಿಗಳು ಬಲಿಷ್ಠವಾಗಿರುತ್ತವೆ, ದೇಶವೂ ಹೆಚ್ಚು ಬಲಿಷ್ಠವಾಗಿರುತ್ತದೆ. ಮಿಥಿಲಾ, ಕೋಸಿಯ ಈ ಪ್ರದೇಶವು ಪ್ರವಾಹದಿಂದ ತುಂಬಾ ತೊಂದರೆಗೊಳಗಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬಿಹಾರದಲ್ಲಿ ಪ್ರವಾಹದ ಪರಿಣಾಮ ಕಡಿಮೆ ಮಾಡಲು ಸರ್ಕಾರ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಇದರೊಂದಿಗೆ, ಬಾಗ್ಮತಿ, ಧಾರ್, ಬುರ್ಹಿ ಗಂಡಕ್ ಮತ್ತು ಕೋಸಿಯಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು. ಇದರ ಮೂಲಕ, ಕಾಲುವೆಗಳನ್ನು ನಿರ್ಮಿಸಲಾಗುವುದು, ನದಿ ನೀರಿನಿಂದ ನೀರಾವರಿ ಒದಗಿಸಲಾಗುವುದು. ಪ್ರತಿಯೊಬ್ಬ ರೈತರ ಹೊಲಕ್ಕೂ ನೀರು ತಲುಪಿಸುವ ವ್ಯವಸ್ಥೆಯೂ ಇರುತ್ತದೆ. ಇದರರ್ಥ ಈಗ ಪ್ರವಾಹದ ಸಮಸ್ಯೆ ಕಡಿಮೆಯಾಗಿ, ಸಾಕಷ್ಟು ನೀರು ಹೊಲಗಳಿಗೆ ಹರಿಯುತ್ತದೆ.

ಸ್ನೇಹಿತರೆ,

ಮಖಾನಾ(ತಾವರೆ ಬೀಜ) ಇಂದು ದೇಶ ಮತ್ತು ಜಗತ್ತಿಗೆ ಉತ್ಕೃಷ್ಟ ಆಹಾವಾಗಿದೆ. ಆದರೆ ಅದು ಮಿಥಿಲಾ ಸಂಸ್ಕೃತಿಯ ಭಾಗವಾಗಿದೆ. ನಾವು ಈ ಸಂಸ್ಕೃತಿಯನ್ನು ಇಲ್ಲಿ ಸಮೃದ್ಧಿಯ ಮೂಲವನ್ನಾಗಿ ಮಾಡುತ್ತಿದ್ದೇವೆ. ನಾವು ಮಖಾನಾಗೆ ಜಿಐ ಟ್ಯಾಗ್ ನೀಡಿದ್ದೇವೆ. ಅಂದರೆ ಮಖಾನಾ ಈ ಮಣ್ಣಿನ ಉತ್ಪನ್ನವಾಗಿದೆ, ಅದನ್ನು ಈಗ ಅಧಿಕೃತವಾಗಿ ಪ್ರಮಾಣೀಕರಿಸಲಾಗಿದೆ. ಮಖಾನಾ ಸಂಶೋಧನಾ ಕೇಂದ್ರಕ್ಕೂ ರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಮಖಾನಾ ಮಂಡಳಿಯ ರಚನೆಯು ಮಖಾನಾ ರೈತರ ಭವಿಷ್ಯವನ್ನು ಬದಲಾಯಿಸಲಿದೆ. ಬಿಹಾರದ ಮಖಾನಾ ಉತ್ಕೃಷ್ಟ ಆಹಾರವಾಗಿ  ವಿಶ್ವದ ಮಾರುಕಟ್ಟೆಗಳನ್ನು ತಲುಪಲಿದೆ. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯನ್ನು ಸಹ ನಿರ್ಮಿಸಲಾಗುವುದು. ಇದು ಇಲ್ಲಿನ ಯುವಕರಿಗೆ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಸಣ್ಣ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಕೃಷಿಯ ಜತೆಗೆ, ಬಿಹಾರವು ಮೀನು ಉತ್ಪಾದನೆಯಲ್ಲಿ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಮೀನುಗಾರರು ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆಯಲು ಸಮರ್ಥರಾಗಿದ್ದಾರೆ. ಇದು ಮೀನುಗಾರಿಕೆಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ಪ್ರಯೋಜನ ನೀಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ಬಿಹಾರದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಕೆಲಸಗಳನ್ನು ಮಾಡಲಾಗಿದೆ.

ಸ್ನೇಹಿತರೆ,

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮುಗ್ಧ ನಾಗರಿಕರನ್ನು ಕೊಂದ ಕ್ರೌರ್ಯದಿಂದ ಇಡೀ ದೇಶವು ದುಃಖಿತವಾಗಿದೆ. ಲಕ್ಷಾಂತರ ದೇಶವಾಸಿಗಳು ದುಃಖಿತರಾಗಿದ್ದಾರೆ. ಎಲ್ಲಾ ಸಂತ್ರಸ್ತ ಕುಟುಂಬಗಳೊಂದಿಗೆ ಇಡೀ ದೇಶ ನಿಂತಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಶೀಘ್ರದಲ್ಲೇ ಚೇತರಿಸಿಕೊಳ್ಳುವುದನ್ನು ಖಚಿತಪಡಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಸ್ನೇಹಿತರೆ,

ಈ ಭಯೋತ್ಪಾದಕ ದಾಳಿಯಲ್ಲಿ ಯಾರೋ ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡರು. ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು, ಕೆಲವರು ಕನ್ನಡ ಮಾತನಾಡುತ್ತಿದ್ದರು, ಕೆಲವರು ಮರಾಠಿ ಮಾತನಾಡುತ್ತಿದ್ದರು, ಕೆಲವರು ಒಡಿಯಾದವರು, ಕೆಲವರು ಗುಜರಾತಿಯವರು, ಕೆಲವರು ಬಿಹಾರದವರು. ಇಂದು ಕಾರ್ಗಿಲ್‌ನಿಂದ ಕನ್ಯಾಕುಮಾರಿಯವರೆಗೆ, ಅವರೆಲ್ಲರ ಸಾವಿನಿಂದ ನಮ್ಮ ದುಃಖ ಒಂದೇ, ನಮ್ಮ ಕೋಪ ಒಂದೇ. ಈ ದಾಳಿ ಕೇವಲ ನಿರಾಯುಧ ಪ್ರವಾಸಿಗರ ಮೇಲೆ ನಡೆದಿಲ್ಲ; ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಈ ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಿರುವುದಕ್ಕಿಂತ ದೊಡ್ಡ ಶಿಕ್ಷೆ ಸಿಗಲಿದೆ. ಈಗ ಭಯೋತ್ಪಾದಕರ ಉಳಿದ ನೆಲವನ್ನು ನಾಶ ಮಾಡುವ ಸಮಯ ಬಂದಿದೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದವರ ಬೆನ್ನು ಮುರಿಯಲಿದೆ.

ಸ್ನೇಹಿತರೆ,

ಇಂದು ಬಿಹಾರದ ಮಣ್ಣಿನಿಂದ ನಾನು ಇಡೀ ಜಗತ್ತಿಗೆ ಹೇಳುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕನನ್ನು ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆ ಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ತಳದಲ್ಲಿದ್ದರೂ ಹುಡುಕುತ್ತೇವೆ. ಭಾರತದ ಚೈತನ್ಯವನ್ನು ಭಯೋತ್ಪಾದನೆ ಎಂದಿಗೂ ಮುರಿಯಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ಸದೃಢವಾಗಿದೆ. ಮಾನವತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ಈ ಕಾಲದಲ್ಲಿ ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರು ಮತ್ತು ಅವರ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ.

ಸ್ನೇಹಿತರೆ,

ಶಾಂತಿ ಮತ್ತು ಭದ್ರತೆಯು ತ್ವರಿತ ಅಭಿವೃದ್ಧಿಯ ಪ್ರಮುಖ ಪರಿಸ್ಥಿತಿಗಳಾಗಿವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಬಿಹಾರ ಅಗತ್ಯ. ಬಿಹಾರದಲ್ಲಿ ಅಭಿವೃದ್ಧಿಯಾಗಬೇಕು ಮತ್ತು ಅಭಿವೃದ್ಧಿಯ ಪ್ರಯೋಜನಗಳು ಇಲ್ಲಿನ ಪ್ರತಿಯೊಂದು ವಿಭಾಗ ಮತ್ತು ಪ್ರತಿಯೊಂದು ಪ್ರದೇಶವನ್ನು ತಲುಪಬೇಕು ಎಂಬುದು ನಮ್ಮೆಲ್ಲರ ಪ್ರಯತ್ನವಾಗಿದೆ. ಪಂಚಾಯತ್ ರಾಜ್ ದಿನದಂದು ಈ ಕಾರ್ಯಕ್ರಮಕ್ಕೆ ಸೇರಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

ತುಂಬು ಧನ್ಯವಾದಗಳು.

ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ ಜೈ(ಭಾರತ ಮಾತೆಗೆ ನಮಸ್ಕಾರ).

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 

 

 

 

 

 

 

 

 


(Release ID: 2124890) Visitor Counter : 9