ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಹೊಸ ದಾಖಲೆ ನಿರ್ಮಿಸಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗಗಳ ವಹಿವಾಟು 1 ಲಕ್ಷ 70 ಸಾವಿರ ಕೋಟಿ ರೂ.ಗಳನ್ನು ದಾಟಿದೆ.
2024-25ರ ಆರ್ಥಿಕ ವರ್ಷದ ತಾತ್ಕಾಲಿಕ ದತ್ತಾಂಶವನ್ನು ಬಿಡುಗಡೆ ಮಾಡಿದ ಕೆವಿಐಸಿ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್.
ಕಳೆದ 11 ವರ್ಷಗಳಲ್ಲಿ, ಉತ್ಪಾದನೆಯು 347% ಜಿಗಿತದೊಂದಿಗೆ ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು ಮಾರಾಟವು 447% ಏರಿಕೆಯೊಂದಿಗೆ ಐದು ಪಟ್ಟು ಹೆಚ್ಚಾಗಿದೆ.
11 ವರ್ಷಗಳಲ್ಲಿ ಒಟ್ಟು ಉದ್ಯೋಗ ಸೃಷ್ಟಿಯ ಕ್ಷೇತ್ರದಲ್ಲಿ 49.23% ಐತಿಹಾಸಿಕ ಹೆಚ್ಚಳ, ಕೆವಿಐಸಿ 1.94 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.
ಹೊಸದಿಲ್ಲಿಯ ಖಾದಿ ಗ್ರಾಮೋದ್ಯೋಗ ಭವನದ ವಹಿವಾಟು ಮೊದಲ ಬಾರಿಗೆ ದಾಖಲೆಯ 110.01 ಕೋಟಿ ರೂ.ಗೆ ತಲುಪಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಎಂಎಸ್ಎಂಇ ಸಚಿವಾಲಯದ ಮಾರ್ಗದರ್ಶನದಲ್ಲಿ, ಕೆವಿಐಸಿಯ ಯೋಜನೆಗಳು ಮತ್ತು ಸಾಧನೆಗಳು 'ವಿಕಸಿತ ಭಾರತ' ಗೆ ಬಲವಾದ ಅಡಿಪಾಯವನ್ನು ಸ್ಥಾಪಿಸಿವೆ ಎಂದಿದ್ದಾರೆ ಕೆವಿಐಸಿ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್
Posted On:
21 APR 2025 3:35PM by PIB Bengaluru
ದೇಶದಲ್ಲಿ ಸ್ವಾವಲಂಬನೆಯ ಮನೋಭಾವವನ್ನು ಸಶಕ್ತಗೊಳಿಸುವ ಖಾದಿ ಮತ್ತು ಗ್ರಾಮೋದ್ಯೋಗ ವಲಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಮಾರ್ಗದರ್ಶನದಲ್ಲಿ ಕಳೆದ 11 ವರ್ಷಗಳಲ್ಲಿ ಹೊಸ ಸಾಧನೆಯ ಎತ್ತರವನ್ನು ಮುಟ್ಟಿದೆ ಮಾತ್ರವಲ್ಲ, ಕೋಟ್ಯಂತರ ಗ್ರಾಮಸ್ಥರ ಜೀವನದಲ್ಲಿ ಭರವಸೆಯ ಹೊಸ ಬೆಳಕನ್ನು ತಂದಿದೆ. ಪೂಜ್ಯ ಬಾಪು ಅವರ ಪರಂಪರೆಯಾದ ಖಾದಿ ಈಗ ಕೇವಲ ಬಟ್ಟೆಯಾಗಿ ಉಳಿದಿಲ್ಲ, ಬದಲು ಅದು 'ಏಕ್ ಭಾರತ್, ಶ್ರೇಷ್ಠ ಭಾರತ್' ಸೃಷ್ಟಿಯ ಸಂಕೇತವಾಗಿದೆ. ಹೊಸದಿಲ್ಲಿಯ ರಾಜ್ ಘಾಟ್ ನಲ್ಲಿರುವ ಕಚೇರಿಯಲ್ಲಿ ಸೋಮವಾರ 2024-25ರ ಹಣಕಾಸು ವರ್ಷದ ಖಾದಿ ಮತ್ತು ಗ್ರಾಮೋದ್ಯೋಗದ ತಾತ್ಕಾಲಿಕ ದತ್ತಾಂಶವನ್ನು ಬಿಡುಗಡೆ ಮಾಡುವಾಗ ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. 2024-25ರ ಆರ್ಥಿಕ ವರ್ಷದಲ್ಲಿ ಉತ್ಪಾದನೆ, ಮಾರಾಟ ಮತ್ತು ಹೊಸ ಉದ್ಯೋಗ ಸೃಷ್ಟಿಯಲ್ಲಿ ಕೆವಿಐಸಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ 11 ವರ್ಷಗಳಲ್ಲಿ ಮಾರಾಟದಲ್ಲಿ ಶೇ.447, ಉತ್ಪಾದನೆಯಲ್ಲಿ ಶೇ.347 ಮತ್ತು ಉದ್ಯೋಗ ಸೃಷ್ಟಿಯಲ್ಲಿ ಶೇ.49.23ರಷ್ಟು ಹೆಚ್ಚಳವಾಗಿದೆ. 2013-14ನೇ ಸಾಲಿಗೆ ಹೋಲಿಸಿದರೆ 2023-24ರ ಆರ್ಥಿಕ ವರ್ಷದಲ್ಲಿ ಮಾರಾಟದಲ್ಲಿ ಶೇ.399.69 ಮತ್ತು ಉತ್ಪಾದನೆಯಲ್ಲಿ ಶೇ.314.79ರಷ್ಟು ಹೆಚ್ಚಳವಾಗಿದೆ ಎಂದವರು ಅಂಕಿ ಅಂಶಗಳನ್ನು ನೀಡಿದರು.
ಕೆವಿಐಸಿಯ ಈ ಅತ್ಯುತ್ತಮ ಕಾರ್ಯಕ್ಷಮತೆಯು 2047 ರ ವೇಳೆಗೆ 'ವಿಕಸಿತ ಭಾರತ' ಸಂಕಲ್ಪವನ್ನು ಸಾಕಾರಗೊಳಿಸಲು ಮತ್ತು ಭಾರತವನ್ನು ವಿಶ್ವದ ಮೂರನೇ ಆರ್ಥಿಕತೆಯನ್ನಾಗಿ ಮಾಡಲು ಮಹತ್ವದ ಕೊಡುಗೆ ನೀಡಿದೆ ಎಂದು ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಹೇಳಿದರು. ಈ ಐತಿಹಾಸಿಕ ಸಾಧನೆಗೆ ಪೂಜ್ಯ ಬಾಪು ಅವರ ಸ್ಫೂರ್ತಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭರವಸೆ, ಎಂಎಸ್ಎಂಇ ಸಚಿವಾಲಯದ ಮಾರ್ಗದರ್ಶನ ಮತ್ತು ದೇಶದ ದೂರದ ಹಳ್ಳಿಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಕುಶಲಕರ್ಮಿಗಳ ದಣಿವರಿಯದ ಕಠಿಣ ಪರಿಶ್ರಮ ಕಾರಣ ಎಂದು ಅವರು ಹೇಳಿದರು. 2013-14ರ ಆರ್ಥಿಕ ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಉತ್ಪಾದನೆ 26109.07 ಕೋಟಿ ರೂ.ಗಳಾಗಿದ್ದರೆ, 2024-25ರ ಆರ್ಥಿಕ ವರ್ಷದಲ್ಲಿ ಇದು ಸುಮಾರು ನಾಲ್ಕು ಪಟ್ಟು ಏರಿಕೆಯಾಗಿ 116599.75 ಕೋಟಿ ರೂ.ಗೆ ತಲುಪಿದೆ ಎಂದು ಕೆವಿಐಸಿ ಅಧ್ಯಕ್ಷರು ವಿವರ ಹಂಚಿಕೊಂಡರು. 2013-14ರ ಆರ್ಥಿಕ ವರ್ಷದಲ್ಲಿ ಮಾರಾಟವು 31154.19 ಕೋಟಿ ರೂ.ಗಳಷ್ಟಾಗಿದ್ದರೆ, 2024-25ರ ಆರ್ಥಿಕ ವರ್ಷದಲ್ಲಿ ಇದು ಅಭೂತಪೂರ್ವ ಬೆಳವಣಿಗೆಯೊಂದಿಗೆ ಸುಮಾರು ಐದು ಪಟ್ಟು ಏರಿಕೆಯಾಗಿ 170551.37 ಕೋಟಿ ರೂ.ಗೆ ತಲುಪಿದೆ. ಇದು ಇಂದಿನ ದಿನಾಂಕದವರೆಗೆ ಸಾರ್ವಕಾಲಿಕ ಗರಿಷ್ಟವಾದುದು ಎಂದರು.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 11 ವರ್ಷಗಳಲ್ಲಿ ಖಾದಿ ಬಟ್ಟೆಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟರು. 2013-14ನೇ ಸಾಲಿನಲ್ಲಿ ಖಾದಿ ಬಟ್ಟೆಗಳ ಉತ್ಪಾದನೆ 811.08 ಕೋಟಿ ರೂ.ಗಳಷ್ಟಾಗಿದ್ದರೆ, 2024-25ನೇ ಸಾಲಿನಲ್ಲಿ ಶೇ.366ರಷ್ಟು ಏರಿಕೆಯಾಗಿದ್ದು, ನಾಲ್ಕೂವರೆ ಪಟ್ಟು ಹೆಚ್ಚಳವಾಗಿ 3783.36 ಕೋಟಿ ರೂ.ಗೆ ತಲುಪಿದೆ. ಇದು ಇಂದಿನ ದಿನಾಂಕದವರೆಗೆ ಅತ್ಯುತ್ತಮ ಸಾಧನೆಯಾಗಿದೆ. ಖಾದಿ ಬಟ್ಟೆಗಳ ಮಾರಾಟದಲ್ಲೂ ಭಾರಿ ಏರಿಕೆ ಕಂಡುಬಂದಿದೆ. 2013-14ರ ಆರ್ಥಿಕ ವರ್ಷದಲ್ಲಿ ಅದರ ಮಾರಾಟವು ಕೇವಲ 1081.04 ಕೋಟಿ ರೂ.ಗಳಾಗಿದ್ದರೆ, 2024-25ರ ಆರ್ಥಿಕ ವರ್ಷದಲ್ಲಿ ಇದು ಸುಮಾರು ಆರೂವರೆ ಪಟ್ಟು ಏರಿಕೆಯಾಗಿ 7145.61 ಕೋಟಿ ರೂ.ಗೆ ತಲುಪಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೊಡ್ಡ ವೇದಿಕೆಯಿಂದ ಖಾದಿಯನ್ನು ಉತ್ತೇಜಿಸಿದ್ದು ಖಾದಿ ಬಟ್ಟೆಗಳ ಮಾರಾಟದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಅವರು ಪುನರುಚ್ಚರಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉದ್ದೇಶದ ಬಗ್ಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು ಕೆವಿಐಸಿಯ ಪ್ರಮುಖ ಉದ್ದೇಶವಾಗಿದೆ ಎಂದರು. ಈ ಕ್ಷೇತ್ರದಲ್ಲೂ ಕೆವಿಐಸಿ ಕಳೆದ 11 ವರ್ಷಗಳಲ್ಲಿ ದಾಖಲೆ ನಿರ್ಮಿಸಿದೆ. 2013-14ರ ಆರ್ಥಿಕ ವರ್ಷದಲ್ಲಿ ಸಂಚಿತ ಉದ್ಯೋಗವು 1.30 ಕೋಟಿಯಷ್ಟಿದ್ದರೆ, 2024-25ರಲ್ಲಿ ಇದು ಶೇಕಡಾ 49.23 ರಷ್ಟು ಹೆಚ್ಚಳದೊಂದಿಗೆ 1.94 ಕೋಟಿಗೆ ಏರಿದೆ. ಹೊಸದಿಲ್ಲಿಯ ಖಾದಿ ಮತ್ತು ಗ್ರಾಮೋದ್ಯೋಗ ಭವನದ ವ್ಯವಹಾರದಲ್ಲೂ ಅಭೂತಪೂರ್ವ ಹೆಚ್ಚಳ ದಾಖಲಾಗಿದೆ. 2013-14ರ ಆರ್ಥಿಕ ವರ್ಷದಲ್ಲಿ ಭವನದ ವ್ಯವಹಾರವು 51.02 ಕೋಟಿ ರೂ.ಗಳಾಗಿದ್ದರೆ, ಇದು ಸುಮಾರು 2 ಪಟ್ಟು ಹೆಚ್ಚಾಗಿದೆ ಮತ್ತು 2024-25ರ ಆರ್ಥಿಕ ವರ್ಷದಲ್ಲಿ 110.01 ಕೋಟಿ ರೂ.ಗೆ ತಲುಪಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಪ್ರಾರಂಭವಾದಾಗಿನಿಂದ, ಒಟ್ಟು 1018185 ಘಟಕಗಳನ್ನು ಸ್ಥಾಪಿಸಲಾಗಿದೆ, ಇದಕ್ಕಾಗಿ ಭಾರತ ಸರ್ಕಾರವು 73348.39 ಕೋಟಿ ರೂ.ಗಳ ಸಾಲಕ್ಕೆ ಸಂಬಂಧಿಸಿ 27166.07 ಕೋಟಿ ರೂ.ಗಳ ಮಾರ್ಜಿನ್ ಮನಿ ಸಬ್ಸಿಡಿಯನ್ನು ವಿತರಿಸಿದೆ. ಇಲ್ಲಿಯವರೆಗೆ 90,04,541 ಜನರು ಪಿಎಂಇಜಿಪಿ ಮೂಲಕ ಉದ್ಯೋಗ ಪಡೆದಿದ್ದಾರೆ.
ಗ್ರಾಮೋದ್ಯೋಗ ವಿಕಾಸ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಟ ಸಂಖ್ಯೆಯ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ, ಕೆವಿಐಸಿ 2021-22ರ ಆರ್ಥಿಕ ವರ್ಷದಲ್ಲಿ ಇದ್ದ 25.65 ಕೋಟಿ ರೂ.ಗಳ ಬಜೆಟ್ ಅನ್ನು 2025-26ರ ಆರ್ಥಿಕ ವರ್ಷದಲ್ಲಿ 134 ಪ್ರತಿಶತದಷ್ಟು ಹೆಚ್ಚಿಸಿ 60 ಕೋಟಿ ರೂ.ಗೆ ದ್ವಿಗುಣಗೊಳಿಸಿದೆ ಎಂದು ಅವರು ಹೇಳಿದರು. ಈವರೆಗೆ 39244 ವಿದ್ಯುತ್ ಚಾಲಿತ ಕುಂಬಾರಿಕೆ ಚಕ್ರಗಳು, 227049 ಜೇನು ಪೆಟ್ಟಿಗೆಗಳು ಮತ್ತು ಜೇನು ಕಾಲೋನಿಗಳು, 2344 ಸ್ವಯಂಚಾಲಿತ ಮತ್ತು ಪೆಡಲ್ ಚಾಲಿತ ಧೂಪದ್ರವ್ಯ/ಅಗರಬತ್ತಿ ತಯಾರಿಕಾ ಯಂತ್ರಗಳು, 7735 ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿ ಟೂಲ್ ಕಿಟ್ ಗಳು, 964 ಪೇಪರ್ ಪ್ಲೇಟ್ ಮತ್ತು ಡೋನಾ ಉತ್ಪಾದನಾ ಯಂತ್ರಗಳು, 3494 ಎಸಿ, ಮೊಬೈಲ್, ಹೊಲಿಗೆ, ಎಲೆಕ್ಟ್ರಿಷಿಯನ್, ಪ್ಲಂಬರ್ ಟೂಲ್ ಕಿಟ್ ಗಳು, 4555 ಟರ್ನ್ ವುಡ್, ವೇಸ್ಟ್ ವುಡ್ ಕ್ರಾಫ್ಟ್, ಮರದ ಆಟಿಕೆ ತಯಾರಿಕೆ ಯಂತ್ರಗಳು ಮತ್ತು 2367 ತಾಳೆ ಬೆಲ್ಲ, ಎಣ್ಣೆ , ಹುಣಿಸೆ ಹಣ್ಣು ಸಂಸ್ಕರಣಾ ಯಂತ್ರಗಳನ್ನು ಗ್ರಾಮೋದ್ಯೋಗ ವಿಕಾಸ್ ಯೋಜನಾ ಅಡಿಯಲ್ಲಿ ವಿತರಿಸಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳ ಬಗ್ಗೆ ಮಾತನಾಡುವುದಾದರೆ, 2022-23ರಲ್ಲಿ ಒಟ್ಟು 22284, 2023-24ರ ಆರ್ಥಿಕ ವರ್ಷದಲ್ಲಿ 29854 ಮತ್ತು 2024-25ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು 37218 ಯಂತ್ರಗಳು ಮತ್ತು ಉಪಕರಣಗಳನ್ನು ವಿತರಿಸಲಾಗಿದೆ. ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ, ಕೆವಿಐಸಿ ಇಲ್ಲಿಯವರೆಗೆ ಒಟ್ಟು 287752 ಯಂತ್ರಗಳು, ಟೂಲ್ಕಿಟ್ಗಳು ಮತ್ತು ಉಪಕರಣಗಳನ್ನು ವಿತರಿಸುವ ಮೂಲಕ ಸ್ವಾವಲಂಬಿ ಭಾರತ ಸೃಷ್ಟಿಯಲ್ಲಿ ಮಹತ್ವದ ಕೊಡುಗೆ ನೀಡಿದೆ.
ಮಹಿಳಾ ಸಬಲೀಕರಣಕ್ಕೆ ನೀಡಿದ ಮಹತ್ವದ ಕೊಡುಗೆಯ ಬಗ್ಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ, ಕೆವಿಐಸಿಯ 18 ಇಲಾಖಾ ಮತ್ತು 17 ಇಲಾಖಾೇತರ ತರಬೇತಿ ಕೇಂದ್ರಗಳ ಮೂಲಕ 7,43,904 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ, ಅದರಲ್ಲಿ 57.45 ಪ್ರತಿಶತ ಅಂದರೆ 4,27,394 ಮಂದಿ ಮಹಿಳೆಯರು. ಇದಲ್ಲದೆ, 5 ಲಕ್ಷ ಖಾದಿ ಕುಶಲಕರ್ಮಿಗಳಲ್ಲಿ 80 ಪ್ರತಿಶತದಷ್ಟು ಮಹಿಳೆಯರು. ಕಳೆದ 11 ವರ್ಷಗಳಲ್ಲಿ ಖಾದಿ ಕುಶಲಕರ್ಮಿಗಳ ವೇತನವನ್ನು ಶೇ.275ರಷ್ಟು ಹೆಚ್ಚಿಸಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಶೇ.100ರಷ್ಟು ಹೆಚ್ಚಿಸಲಾಗಿದೆ ಎಂದರು.
*****
(Release ID: 2123598)
Read this release in:
English
,
Khasi
,
Urdu
,
Marathi
,
Hindi
,
Nepali
,
Bengali
,
Bengali-TR
,
Assamese
,
Tamil
,
Telugu