ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ


ಮುದ್ರಾ ಯೋಜನೆ ಯಾವುದೇ ನಿರ್ದಿಷ್ಟ ಗುಂಪಿಗೆ ಸೀಮಿತವಾಗಿಲ್ಲ, ಬದಲಾಗಿ ಯುವಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ: ಪ್ರಧಾನಮಂತ್ರಿ

ಮುದ್ರಾ ಯೋಜನೆ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವಲ್ಲಿ ಪರಿವರ್ತನಾತ್ಮಕ ಪರಿಣಾಮವನ್ನು ಬೀರುತ್ತಿದೆ: ಪ್ರಧಾನಮಂತ್ರಿ

ಮುದ್ರಾ ಯೋಜನೆಯು ಉದ್ಯಮಶೀಲತೆಯ ಬಗ್ಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯೊಂದಿಗೆ ಮೌನ ಕ್ರಾಂತಿಯನ್ನು ತಂದಿದೆ: ಪ್ರಧಾನಮಂತ್ರಿ

ಮುದ್ರಾ ಯೋಜನೆಯ ಅತಿ ದೊಡ್ಡ ಫಲಾನುಭವಿಗಳು ಮಹಿಳೆಯರು: ಪ್ರಧಾನಮಂತ್ರಿ

ಯೋಜನೆಯಡಿಯಲ್ಲಿ 52 ಕೋಟಿ ಸಾಲಗಳನ್ನು ವಿತರಿಸಲಾಗಿದೆ, ಇದು ಜಾಗತಿಕವಾಗಿ ಅಭೂತಪೂರ್ವ ಸಾಧನೆಯಾಗಿದೆ: ಪ್ರಧಾನಮಂತ್ರಿ

Posted On: 08 APR 2025 12:03PM by PIB Bengaluru

ಪ್ರಧಾನಮಂತ್ರಿ ಮುದ್ರಾ ಯೋಜನೆಗೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಅವರು ಹಾಜರಿದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸುವ ಸಾಂಸ್ಕೃತಿಕ ಮಹತ್ವ ಮತ್ತು ಮನೆಯಲ್ಲಿ ಅವರ ಉಪಸ್ಥಿತಿಯು ತರುವ ಪಾವಿತ್ರ್ಯವನ್ನು ಒತ್ತಿ ಹೇಳಿದರು. ಭಾಗವಹಿಸುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಅವರು ಆಹ್ವಾನಿಸಿದರು. ಸಾಕುಪ್ರಾಣಿ ಸರಬರಾಜು, ಔಷಧಿ ಮತ್ತು ಸೇವೆಗಳ ಉದ್ಯಮಿಯಾಗಿ ಬದಲಾದ ಫಲಾನುಭವಿಯೊಂದಿಗೆ ಶ್ರೀ ಮೋದಿ ಅವರು ಸಂವಾದ ನಡೆಸುತ್ತಾ, ಸವಾಲಿನ ಸಮಯದಲ್ಲಿ ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟವರಿಗೆ ಕೃತಜ್ಞತೆ ವ್ಯಕ್ತಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಾಲ ಮಂಜೂರು ಮಾಡಿದ ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸಿ, ಸಾಲದಿಂದ ಆಗಿರುವ ಪ್ರಗತಿಯನ್ನು ತೋರಿಸುವಂತೆ ಅವರು ಫಲಾನುಭವಿಗೆ ತಿಳಿಸಿದರು. ಇಂತಹ ಕ್ರಮಗಳು ಅವರ ನಂಬಿಕೆಯನ್ನು ದೃಢೀಕರಿಸುವುದಲ್ಲದೆ, ದೊಡ್ಡ ಕನಸು ಕಾಣುವ ಧೈರ್ಯವಿರುವ ವ್ಯಕ್ತಿಗಳನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವಲ್ಲಿ ವಿಶ್ವಾಸವನ್ನು ತುಂಬುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಅವರ ಬೆಂಬಲದಿಂದ ಬಂದ ಫಲಿತಾಂಶಗಳನ್ನು ಪ್ರದರ್ಶಿಸುವುದರಿಂದ ಬೆಳವಣಿಗೆ ಮತ್ತು ಯಶಸ್ಸನ್ನು ಉತ್ತೇಜಿಸುವಲ್ಲಿ ತಮ್ಮ ಕೊಡುಗೆಯ ಬಗ್ಗೆ ಅವರು ನಿಸ್ಸಂದೇಹವಾಗಿ ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಕೇರಳದ ಉದ್ಯಮಿ ಶ್ರೀ ಗೋಪಿ ಕೃಷ್ಣ ಅವರೊಂದಿಗೆ ಮಾತನಾಡಿದ ಪ್ರಧಾನಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಎತ್ತಿ ತೋರಿಸಿದರು, ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಮನೆಗಳು ಮತ್ತು ಕಚೇರಿಗಳಿಗೆ ನವೀಕರಿಸಬಹುದಾದ ಇಂಧನ ಪರಿಹಾರಗಳ ಮೇಲೆ ಕೇಂದ್ರೀಕರಿಸಿ ಯಶಸ್ವಿ ಉದ್ಯಮಿಯಾಗಿ ಪರಿವರ್ತನೆಗೊಳ್ಳಲು ಅನುವು ಮಾಡಿಕೊಟ್ಟಿತು. ಮುದ್ರಾ ಸಾಲದ ಬಗ್ಗೆ ತಿಳಿದ ನಂತರ ದುಬೈನಲ್ಲಿರುವ ತಮ್ಮ ಕಂಪನಿಗೆ ರಾಜೀನಾಮೆ ನೀಡಲು ನಿರ್ಧರಿಸಿದ ಫಲಾನುಭವಿಯ ಪ್ರಯಾಣವನ್ನು ಪ್ರಧಾನಿ ವಿವರಿಸಿದರು. ಪ್ರಧಾನಮಂತ್ರಿ ಸೂರ್ಯ ಘರ್ ಉಪಕ್ರಮದ ಅಡಿಯಲ್ಲಿ ಸೌರ ಸ್ಥಾಪನೆಗಳು ಎರಡು ದಿನಗಳಲ್ಲಿ ಪೂರ್ಣಗೊಂಡವು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಸೂರ್ಯ ಘರ್ ಉಪಕ್ರಮದ ಫಲಾನುಭವಿಗಳ ಪ್ರತಿಕ್ರಿಯೆಗಳ ಬಗ್ಗೆಯೂ ಅವರು ಕೇಳಿದರು, ಭಾರೀ ಮಳೆ ಮತ್ತು ದಟ್ಟವಾದ ಮರಗಳಂತಹ ಸವಾಲುಗಳ ಹೊರತಾಗಿಯೂ ಕೇರಳದ ಮನೆಗಳು ಈಗ ಉಚಿತ ವಿದ್ಯುತ್ ಅನ್ನು ಆನಂದಿಸುತ್ತಿವೆ ಎಂದು ಹೇಳಿದರು. ಈ ಹಿಂದೆ ₹3,000 ರಷ್ಟಿದ್ದ ವಿದ್ಯುತ್ ಬಿಲ್‌ ಗಳು ಈಗ ₹240-₹250 ಕ್ಕೆ ಇಳಿದಿವೆ ಮತ್ತು ತಮ್ಮ ಮಾಸಿಕ ಗಳಿಕೆ ₹2.5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನದನ್ನು ತಲುಪಿದೆ ಎಂದು ಫಲಾನುಭವಿ ಶ್ರೀ ಕೃಷ್ಣ ಹೇಳಿದರು.

ಪ್ರಧಾನಮಂತ್ರಿಯವರು ಛತ್ತೀಸಗಢದ ರಾಯಪುರದ ಹೌಸ್ ಆಫ್ ಪುಚ್ಕಾದ ಸಂಸ್ಥಾಪಕಿ ಮತ್ತು ಮಹಿಳಾ ಉದ್ಯಮಿಯೊಂದಿಗೆ ಸಂವಾದ ನಡೆಸಿದರು, ಅವರು ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಯಶಸ್ವಿ ಕೆಫೆ ವ್ಯವಹಾರವನ್ನು ಸ್ಥಾಪಿಸುವವರೆಗಿನ ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿಕೊಂಡರು. ಈ ಉದ್ಯಮಶೀಲತೆಯ ಯಶಸ್ಸಿನಲ್ಲಿ ಲಾಭ ಮತ್ತು ಆಹಾರ ವೆಚ್ಚ ನಿರ್ವಹಣೆಯ ಕುರಿತಾದ ಸಂಶೋಧನೆಯು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಯುವಕರ ಮನಸ್ಸಿನಲ್ಲಿ ಭಯವಿದೆ ಎಂದ ಅವರು, ಅನೇಕರು ಅಪಾಯಗಳನ್ನು ತೆಗೆದುಕೊಳ್ಳುವ ಬದಲು ಉದ್ಯೋಗಗಳನ್ನು ಮಾಡಲು ಬಯಸುತ್ತಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿಯವರು, ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯದ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಹೌಸ್ ಆಫ್ ಪುಚ್ಕಾದ ಸಂಸ್ಥಾಪಕಿ 23 ನೇ ವಯಸ್ಸಿನಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ತಮ್ಮ ವ್ಯವಹಾರವನ್ನು ನಿರ್ಮಿಸಲು ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು ಎಂದು ಹೇಳಿದರು. ಫಲಾನುಭವಿಯು ರಾಯಪುರದ ಸ್ನೇಹಿತರು, ಕಾರ್ಪೊರೇಟ್ ಜಗತ್ತು ಮತ್ತು ವಿದ್ಯಾರ್ಥಿಗಳ ನಡುವಿನ ಚರ್ಚೆಗಳ ಬಗ್ಗೆ ಹೇಳಿದರು, ಉದ್ಯಮಶೀಲತೆಯ ಬಗ್ಗೆ ಅವರ ಕುತೂಹಲ ಮತ್ತು ಪ್ರಶ್ನೆಗಳನ್ನು ವಿವರಿಸಿದರು. ಮೇಲಾಧಾರವಿಲ್ಲದೆ ಹಣವನ್ನು ಒದಗಿಸುವ ಸರ್ಕಾರಿ ಯೋಜನೆಗಳ ಬಗ್ಗೆ ಯುವಕರಲ್ಲಿ ಅರಿವಿನ ಕೊರತೆಯಿದೆ ಎಂದು ಅವರು ಹೇಳಿದರು. ಮುದ್ರಾ ಸಾಲ ಮತ್ತು ಪಿಎಂಇಜಿಪಿ ಸಾಲದಂತಹ ಯೋಜನೆಗಳು ಸಾಮರ್ಥ್ಯವಿರುವವರಿಗೆ ಗಮನಾರ್ಹ ಅವಕಾಶಗಳನ್ನು ನೀಡುತ್ತವೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಈ ಯೋಜನೆಗಳ ಬಗ್ಗೆ ಸಂಶೋಧಿಸಲು ಮತ್ತು ದಿಟ್ಟ ಹೆಜ್ಜೆಗಳನ್ನು ಇಡಲು ಯುವಜನರನ್ನು ಪ್ರೋತ್ಸಾಹಿಸಿದರು, ಬೆಳೆಯಲು ಮತ್ತು ಯಶಸ್ವಿಯಾಗಲು ಇಚ್ಛಿಸುವವರಿಗೆ ಆಕಾಶವು ಯಾವುದೇ ಮಿತಿಗಳನ್ನು ಹೊಂದಿಲ್ಲ ಎಂದು ಹೇಳಿದರು.

ಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಬೇಕ್ ಮೈ ಕೇಕ್‌ ನ ಮಾಲೀಕರಾದ ಶ್ರೀ ಮುದಾಸೀರ್ ನಕ್ಷಬಂದಿ ಅವರು, ಉದ್ಯೋಗಾಕಾಂಕ್ಷಿಯಿಂದ ಉದ್ಯೋಗ ಸೃಷ್ಟಿಕರ್ತರಾಗಿ ಬದಲಾದ ಪ್ರಯಾಣವನ್ನು ಹಂಚಿಕೊಂಡರು, ಬಾರಾಮುಲ್ಲಾದ ದೂರದ ಪ್ರದೇಶಗಳ 42 ವ್ಯಕ್ತಿಗಳಿಗೆ ತಾವು ಸ್ಥಿರ ಉದ್ಯೋಗವನ್ನು ಒದಗಿಸಿರುವುದಾಗಿ ಅವರು ಹೇಳಿದರು. ಮುದ್ರಾ ಸಾಲವನ್ನು ಪಡೆಯುವ ಮೊದಲು ಇದ್ದ  ಗಳಿಕೆಯ ಬಗ್ಗೆ ಪ್ರಧಾನಿಯವರು ವಿಚಾರಿಸಿದರು, ಅದಕ್ಕೆ ಪ್ರತಿಕ್ರಿಯಿಸಿದ ಮುದಾಸೀರ್ ತಮ್ಮ ಗಳಿಕೆ ಸಾವಿರದಲ್ಲಿತ್ತು, ಆದರೆ ತಮ್ಮ ಉದ್ಯಮಶೀಲತಾ ಪ್ರಯಾಣವು ಈಗ ಲಕ್ಷ ಮತ್ತು ಕೋಟಿಗಳನ್ನು ಗಳಿಸುವ ಮಟ್ಟಕ್ಕೆ ಹೆಚ್ಚಿದೆ ಎಂದು ಉತ್ತರಿಸಿದರು. ಮುದಾಸೀರ್ ಅವರ  ವ್ಯವಹಾರ ಕಾರ್ಯಾಚರಣೆಗಳಲ್ಲಿ ಯುಪಿಐನ ವ್ಯಾಪಕ ಬಳಕೆಯನ್ನು ಪ್ರಧಾನಿ ಶ್ಲಾಘಿಸಿದರು. ಶೇ.90 ರಷ್ಟು ವಹಿವಾಟುಗಳು ಯುಪಿಐ ಮೂಲಕ ನಡೆಸಲ್ಪಡುತ್ತವೆ, ಕೇವಲ ಶೇ.10 ರಷ್ಟು ಮಾತ್ರ ನಗದಿನಲ್ಲಿ ನಡೆಯುತ್ತವೆ ಎಂಬ ಮುದಾಸೀರ್ ಅವರ ಅಭಿಪ್ರಾಯವನ್ನು ಪ್ರಧಾನಿಯವರು ಉಲ್ಲೇಖಿಸಿದರು.

ನಂತರ ಪ್ರಧಾನಿಯವರು ವಾಪಿಯಲ್ಲಿನ ಉದ್ಯೋಗದಿಂದ ಸಿಲ್ವಾಸ್ಸಾದಲ್ಲಿ ಯಶಸ್ವಿ ಉದ್ಯಮಿಯಾಗುವತ್ತ ಪರಿವರ್ತನೆಗೊಂಡ ಶ್ರೀ ಸುರೇಶ್ ಅವರ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ಕೇಳಿದರು. 2022 ರಲ್ಲಿ, ಕೇವಲ ಉದ್ಯೋಗ ಸಾಕಾಗುವುದಿಲ್ಲ ಎಂದು ಅರಿತುಕೊಂಡು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸುರೇಶ್ ಹೇಳಿದರು. ನನ್ನ ಯಶಸ್ಸಿನೊಂದಿಗೆ, ಕೆಲವು ಸ್ನೇಹಿತರು ಈಗ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಮುದ್ರಾ ಸಾಲಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಉದ್ಯಮಶೀಲತೆಯತ್ತ ದಿಟ್ಟ ಹೆಜ್ಜೆಗಳನ್ನು ಇಡಲು ಇತರರನ್ನು ಪ್ರೇರೇಪಿಸುವಲ್ಲಿ ಇಂತಹ ಯಶೋಗಾಥೆಗಳ ಪರಿಣಾಮದ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು.

ರಾಯಬರೇಲಿಯ ಮಹಿಳಾ ಉದ್ಯಮಿಯೊಬ್ಬರು ಪ್ರಧಾನಿಯವರ ನಾಯಕತ್ವದಲ್ಲಿ ಎಂ ಎಸ್‌ ಎಂ ಇ ಗಳಿಗೆ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಪರವಾನಗಿಗಳು ಮತ್ತು ಹಣಕಾಸು ಪಡೆಯುವುದು ಈಗ ಸುಲಭವಾಗಿದೆ, ಆದರೆ ಈ ಹಿಂದೆ ಅವು ಸವಾಲಿನದ್ದಾಗಿದ್ದವು ಎಂದು ಅವರು ಹೇಳಿದರು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಪ್ರಧಾನಮಂತ್ರಿಯವರು ಅವರ ಭಾವನೆಯನ್ನು ಶ್ಲಾಘಿಸಿದರು ಮತ್ತು ಏಳರಿಂದ ಎಂಟು ಮಂದಿಗೆ ಉದ್ಯೋಗವನ್ನು ಒದಗಿಸುವ, ಮಾಸಿಕ ₹2.5 ರಿಂದ ₹3 ಲಕ್ಷ ವಹಿವಾಟು ಹೊಂದಿರುವ ಬೇಕರಿ ವ್ಯವಹಾರವನ್ನು ನಡೆಸುತ್ತಿರುವ ಅವರ ಯಶಸ್ಸನ್ನು ಶ್ಲಾಘಿಸಿದರು.

ಮಧ್ಯಪ್ರದೇಶದ ಭೋಪಾಲ್‌ ನ ಶ್ರೀ ಲವಕುಶ್ ಮೆಹ್ರಾ ಅವರು 2021 ರಲ್ಲಿ ₹5 ಲಕ್ಷ ಆರಂಭಿಕ ಸಾಲದೊಂದಿಗೆ ತಮ್ಮ ಫಾರ್ಮಾಸ್ಯೂಟಿಕಲ್‌ ವ್ಯವಹಾರವನ್ನು ಪ್ರಾರಂಭಿಸಿದರು. ಆರಂಭಿಕ ಅನುಮಾನಗಳ ಹೊರತಾಗಿಯೂ, ಅವರು ತಮ್ಮ ಸಾಲವನ್ನು ₹9.5 ಲಕ್ಷಕ್ಕೆ ವಿಸ್ತರಿಸಿದರು ಮತ್ತು ವಹಿವಾಟನ್ನು ಮೊದಲ ವರ್ಷದಲ್ಲಿದ್ದ ₹12 ಲಕ್ಷದಿಂದ ₹50 ಲಕ್ಷದವರೆಗೆ ಹೆಚ್ಚಿಸಿದರು. ಮುದ್ರಾ ಯೋಜನೆ ಯಾವುದೇ ನಿರ್ದಿಷ್ಟ ಗುಂಪಿಗೆ ಸೀಮಿತವಾಗಿಲ್ಲ, ಬದಲಾಗಿ ಯುವಕರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ₹34 ಲಕ್ಷ ಮೌಲ್ಯದ ಮನೆಯ ಖರೀದಿ ಮತ್ತು ತಿಂಗಳಿಗೆ ₹1.5 ಲಕ್ಷಕ್ಕೂ ಹೆಚ್ಚು ಗಳಿಕೆ ಸೇರಿದಂತೆ ಲವಕುಶ್ ಅವರ ಇತ್ತೀಚಿನ ಸಾಧನೆಗಳ ಬಗ್ಗೆ ಅವರು ಮಾತನಾಡಿದರು, ಇದು ಅವರು ಹಿಂದಿನ ಕೆಲಸದಿಂದ ಗಳಿಸುತ್ತಿದ್ದ  60,000 - 70,000 ರೂ.ಗಳಿಂದ ಗಮನಾರ್ಹ ಜಿಗಿತವಾಗಿದೆ ಎಂದರು. ಅವರನ್ನು ಅಭಿನಂದಿಸಿದ ಪ್ರಧಾನಿಯವರು ಯಶಸ್ಸನ್ನು ಸಾಧಿಸುವಲ್ಲಿ ಕಠಿಣ ಪರಿಶ್ರಮದ ಪಾತ್ರವನ್ನು ಶ್ಲಾಘಿಸಿದರು. ಮುದ್ರಾ ಸಾಲ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಮತ್ತಷ್ಟು ಮಾಹಿತಿಯನ್ನು ಹರಡುವಂತೆ ಅವರು ಫಲಾನುಭವಿಗಳಿಗೆ ಕರೆ ನೀಡಿದರು.

ನಂತರ ಪ್ರಧಾನಿಯವರು ಗುಜರಾತಿನ ಭಾವನಗರದ ಯುವ ಉದ್ಯಮಿಯೊಬ್ಬರು ತಮ್ಮ 21 ನೇ ವಯಸ್ಸಿನಲ್ಲಿ ಆದಿತ್ಯ ಲ್ಯಾಬ್ ಅನ್ನು ಸ್ಥಾಪಿಸಿದ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ಕೇಳಿದರು. ಅಂತಿಮ ವರ್ಷದ ಮೆಕಾಟ್ರಾನಿಕ್ಸ್ ವಿದ್ಯಾರ್ಥಿಯಾಗಿರುವ ಈ ಉದ್ಯಮಿ, ಕಿಶೋರ್ ವಿಭಾಗದ ಅಡಿಯಲ್ಲಿ ₹2 ಲಕ್ಷ ಮುದ್ರಾ ಸಾಲವನ್ನು ಯಶಸ್ವಿಯಾಗಿ ಬಳಸಿಕೊಂಡು 3ಡಿ ಮುದ್ರಣ, ರಿವರ್ಸ್ ಎಂಜಿನಿಯರಿಂಗ್, ಕ್ಷಿಪ್ರ ಮೂಲಮಾದರಿ ಮತ್ತು ರೊಬೊಟಿಕ್ಸ್‌ ನಲ್ಲಿ ವ್ಯವಹಾರವನ್ನು ಪ್ರಾರಂಭಿಸಿದರು. ವಾರದ ದಿನಗಳಲ್ಲಿ ಕಾಲೇಜು ಮತ್ತು ವಾರಾಂತ್ಯದಲ್ಲಿ ವ್ಯವಹಾರದ ಕೆಲಸಗಳನ್ನು ಸಮತೋಲನಗೊಳಿಸುತ್ತಾ, ಕುಟುಂಬದ ಬೆಂಬಲದೊಂದಿಗೆ ದೂರದಿಂದಲೇ ಕೆಲಸ ಮಾಡುತ್ತಾ ಮಾಸಿಕ ₹30,000 ರಿಂದ ₹35,000 ಗಳಿಸುವ ಉದ್ಯಮಿಯ ಸಮರ್ಪಣೆಯನ್ನು ಪ್ರಧಾನಿಯವರು ಶ್ಲಾಘಿಸಿದರು.

ಮನಾಲಿಯ ಮಹಿಳಾ ಉದ್ಯಮಿಯೊಬ್ಬರು ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಮೂಲಕ ಯಶಸ್ವಿ ವ್ಯವಹಾರ ನಡೆಸುತ್ತಿರುವ ತಮ್ಮ ಕಥೆಯನ್ನು ಹಂಚಿಕೊಂಡರು. 2015-16ರಲ್ಲಿ ₹2.5 ಲಕ್ಷ ಮುದ್ರಾ ಸಾಲದೊಂದಿಗೆ ಪ್ರಾರಂಭಿಸಿ, ಎರಡೂವರೆ ವರ್ಷಗಳಲ್ಲಿ ಅದನ್ನು ಮರುಪಾವತಿಸಿದ್ದಾಗಿ ಅವರು ಹೇಳಿದರು. ನಂತರದ ₹5 ಲಕ್ಷ, ₹10 ಲಕ್ಷ ಮತ್ತು ₹15 ಲಕ್ಷ ಸಾಲಗಳೊಂದಿಗೆ, ಅವರು ತರಕಾರಿ ಅಂಗಡಿಯಿಂದ ಪಡಿತರ ಅಂಗಡಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಿದರು, ವಾರ್ಷಿಕ ₹10 ರಿಂದ ₹15 ಲಕ್ಷ ಆದಾಯವನ್ನು ಸಾಧಿಸಿರುವುದಾಗಿ ಅವರು ಹೇಳಿದರು. ದೇಶಾದ್ಯಂತ ಉದ್ಯಮಿಗಳನ್ನು ಸಬಲೀಕರಣಗೊಳಿಸುವಲ್ಲಿ ಮುದ್ರಾ ಯೋಜನೆಯ ಸಕಾರಾತ್ಮಕ ಪರಿಣಾಮವನ್ನು ಪ್ರಧಾನಿಯವರು ಶ್ಲಾಘಿಸಿದರು.

ಗೃಹಿಣಿಯಿಂದ ಯಶಸ್ವಿ ಸೆಣಬಿನ ಚೀಲ ವ್ಯವಹಾರವನ್ನು ನಡೆಸುವ ಉದ್ಯಮಿಯಾಗಿ ಬದಲಾದ ಆಂಧ್ರಪ್ರದೇಶದ ಮಹಿಳಾ ಉದ್ಯಮಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಪ್ರಧಾನಿಯವರು ಆಲಿಸಿದರು. 2019 ರಲ್ಲಿ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ನಂತರ, ಯಾವುದೇ ಮೇಲಾಧಾರವಿಲ್ಲದೆ ಕೆನರಾ ಬ್ಯಾಂಕಿನಿಂದ 2 ಲಕ್ಷ ರೂ. ಮುದ್ರಾ ಸಾಲವನ್ನು ಪಡೆದಿದ್ದೇನೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಅವರ ದೃಢನಿಶ್ಚಯ ಮತ್ತು ಅವರ ಸಾಮರ್ಥ್ಯದ ಮೇಲೆ ಬ್ಯಾಂಕ್ ಹೊಂದಿರುವ ವಿಶ್ವಾಸವನ್ನು ಗಮನಿಸಿದರು. ಸೆಣಬು ಸಮುದಾಯದ ಸದಸ್ಯೆ ಮತ್ತು ಉದ್ಯಮಿಯಾಗಿ ಅವರ ದ್ವಿಪಾತ್ರವನ್ನು ಅವರು ಶ್ಲಾಘಿಸಿದರು ಮತ್ತು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಅವರ ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸಿದರು. ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವಲ್ಲಿ ಮುದ್ರಾ ಯೋಜನೆಯ ಪರಿವರ್ತನಾತ್ಮಕ ಪರಿಣಾಮದ ಬಗ್ಗೆ ಪ್ರಧಾನಿಯವರು ಮಾತನಾಡಿದರು.

ನಾಗರಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಭಾರತದಾದ್ಯಂತ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಮುದ್ರಾ ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಪ್ರಧಾನಿಯವರು ಎತ್ತಿ ತೋರಿಸಿದರು. ಈ ಯೋಜನೆಯು ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಆರ್ಥಿಕ ಬೆಂಬಲವನ್ನು ಹೇಗೆ ಒದಗಿಸಿದೆ, ಖಾತರಿಗಳು ಅಥವಾ ವ್ಯಾಪಕವಾದ ದಾಖಲೆಗಳ ಅಗತ್ಯವಿಲ್ಲದೆ ಅವರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು ಹೇಗೆ ಅನುವು ಮಾಡಿಕೊಟ್ಟಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಮುದ್ರಾ ಯೋಜನೆ ತಂದ ಮೌನ ಕ್ರಾಂತಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಉದ್ಯಮಶೀಲತೆಯನ್ನು ಕುರಿತು ಸಮಾಜದ ಮನೋಭಾವದಲ್ಲಿನ ಗಮನಾರ್ಹ ಬದಲಾವಣೆಯನ್ನು ಉಲ್ಲೇಖಿಸಿದರು. ಈ ಯೋಜನೆಯು ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದಲ್ಲದೆ, ತಮ್ಮ ವ್ಯವಹಾರಗಳನ್ನು ಮುನ್ನಡೆಸಲು ಮತ್ತು ಬೆಳೆಸಲು ಅವಕಾಶಗಳನ್ನು ಸೃಷ್ಟಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಿದೆ ಎಂದು ಒತ್ತಿ ಹೇಳಿದರು. ಸಾಲದ ಅರ್ಜಿಗಳು, ಅನುಮೋದನೆಗಳು ಮತ್ತು ತ್ವರಿತ ಮರುಪಾವತಿಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಅವರು ಪ್ರಧಾನಿ ಹೇಳಿದರು.

ಮುದ್ರಾ ಸಾಲಗಳ ಜವಾಬ್ದಾರಿಯುತ ಬಳಕೆಯ ಮೂಲಕ ವ್ಯಕ್ತಿಗಳಲ್ಲಿ ಬಂದಿರುವ ಶಿಸ್ತನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಎತ್ತಿ ತೋರಿಸಿದರು. ಈ ಯೋಜನೆಯು ಜೀವನ ಮತ್ತು ವೃತ್ತಿಜೀವನವನ್ನು ನಿರ್ಮಿಸಲು ಅವಕಾಶವನ್ನು ಒದಗಿಸುವುದು ಮಾತ್ರವಲ್ಲ ನಿಧಿಯ ದುರುಪಯೋಗ ಅಥವಾ ಅನುತ್ಪಾದಕ ಪ್ರಯತ್ನಗಳನ್ನು ನಿರುತ್ಸಾಹಗೊಳಿಸುತ್ತದೆ ಎಂದು ಅವರು ಹೇಳಿದರು. ಮುದ್ರಾ ಯೋಜನೆಯಡಿಯಲ್ಲಿ ಭಾರತದ ನಾಗರಿಕರಿಗೆ ಖಾತರಿಗಳ ಅಗತ್ಯವಿಲ್ಲದೆ ₹33 ಲಕ್ಷ ಕೋಟಿ ವಿತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಈ ಮೊತ್ತವು ಅಸಾಧಾರಣವಾದುದು ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಸಾಮೂಹಿಕವಾಗಿ ನೀಡಲಾಗುವ ಯಾವುದೇ ಆರ್ಥಿಕ ಬೆಂಬಲವನ್ನು ಮೀರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉದ್ಯೋಗ ಸೃಷ್ಟಿಸಲು ಮತ್ತು ಆರ್ಥಿಕತೆಯನ್ನು ಉತ್ತೇಜಿಸಲು ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ದೇಶದ ಪ್ರತಿಭಾನ್ವಿತ ಯುವಜನರ ಮೇಲೆ ಅವರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.

ಮುದ್ರಾ ಯೋಜನೆಯ ಮೂಲಕ ಉದ್ಯೋಗ ಸೃಷ್ಟಿಯು ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಸಾಮಾನ್ಯ ನಾಗರಿಕರ ಗಳಿಕೆ ಹೆಚ್ಚಾಗಿದೆ, ಇದರಿಂದಾಗಿ ಅವರು ತಮ್ಮ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ತಮ್ಮ ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಈ ಯೋಜನೆಯಿಂದ ಉಂಟಾಗುವ ಸಾಮಾಜಿಕ ಪ್ರಯೋಜನಗಳನ್ನು ಅವರು ಶ್ಲಾಘಿಸಿದರು.

ಸರ್ಕಾರದ ಬದ್ಧತೆಯ ಬಗ್ಗೆ ಮಾತನಾಡಿದ ಅವರು, ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಯೋಜನೆ ಅನುಷ್ಠಾನಗೊಂಡ 10 ವರ್ಷಗಳ ನಂತರ ತಮ್ಮ ಆಡಳಿತವು ಸಕ್ರಿಯವಾಗಿ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂದು ಹೇಳಿದರು. ರಾಷ್ಟ್ರವ್ಯಾಪಿ ಫಲಾನುಭವಿಗಳು ಮತ್ತು ಗುಂಪುಗಳೊಂದಿಗೆ ಸಮಾಲೋಚಿಸುವ ಮೂಲಕ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವ, ಸುಧಾರಣೆಗೆ ಅವಕಾಶಗಳನ್ನು ಗುರುತಿಸುವ ಮತ್ತು ಮತ್ತಷ್ಟು ಯಶಸ್ಸಿಗೆ ಅಗತ್ಯವಾದ ಸುಧಾರಣೆಗಳನ್ನು ಜಾರಿಗೆ ತರುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಆರಂಭದಲ್ಲಿ ₹50,000 ರಿಂದ ₹5 ಲಕ್ಷದವರೆಗೆ ಇದ್ದ ಮುದ್ರಾ ಸಾಲಗಳ ವ್ಯಾಪ್ತಿಯನ್ನು ಈಗ ₹20 ಲಕ್ಷಕ್ಕೆ ವಿಸ್ತರಿಸುವಲ್ಲಿ ಸರ್ಕಾರ ಪ್ರದರ್ಶಿಸಿರುವ ಗಮನಾರ್ಹ ವಿಶ್ವಾಸವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಈ ವಿಸ್ತರಣೆಯು ಭಾರತದ ನಾಗರಿಕರ ಉದ್ಯಮಶೀಲತಾ ಮನೋಭಾವ ಮತ್ತು ಸಾಮರ್ಥ್ಯಗಳಲ್ಲಿ ಇರಿಸಲಾಗಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ, ಇದು ಯೋಜನೆಯ ಯಶಸ್ವಿ ಅನುಷ್ಠಾನದ ಮೂಲಕ ಬಲಗೊಂಡಿದೆ ಎಂದು ಹೇಳಿದರು.

ಮುದ್ರಾ ಯೋಜನೆಯನ್ನು ಬಳಸಿಕೊಳ್ಳಲು ಮತ್ತು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಇತರರನ್ನು ಪ್ರೋತ್ಸಾಹಿಸುವ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ವ್ಯಕ್ತಿಗಳು ಕನಿಷ್ಠ ಐದರಿಂದ ಹತ್ತು ಜನರಿಗೆ ಸ್ಫೂರ್ತಿ ಮತ್ತು ಬೆಂಬಲ ನೀಡಬೇಕು, ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು. ಈ ಯೋಜನೆಯಡಿಯಲ್ಲಿ 52 ಕೋಟಿ ಸಾಲಗಳನ್ನು ವಿತರಿಸಲಾಗಿದೆ, ಇದು ಜಾಗತಿಕವಾಗಿ ಅಭೂತಪೂರ್ವ ಸಾಧನೆಯಾಗಿದೆ ಎಂದು ಅವರು ಹೇಳಿದರು.

ಗುಜರಾತಿನಲ್ಲಿ ತಮ್ಮ ಅಧಿಕಾರಾವಧಿಯನ್ನು ನೆನಪಿಸಿಕೊಂಡ ಶ್ರೀ ಮೋದಿ, "ಗರೀಬ್ ಕಲ್ಯಾಣ ಮೇಳ" ವನ್ನು ಉಲ್ಲೇಖಿಸಿದರು. ಅಲ್ಲಿ ಸ್ಫರ್ತಿದಾಯಕ ಬೀದಿ ನಾಟಕಗಳು ಬಡತನವನ್ನು ಹೋಗಲಾಡಿಸಲು ಜನರನ್ನು ಪ್ರೇರೇಪಿಸಿದವು ಎಂದು ಹೇಳಿದರು. ಆರ್ಥಿಕ ಸ್ವಾತಂತ್ರ್ಯ ಗಳಿಸಿದ ನಂತರ ವ್ಯಕ್ತಿಗಳು ತಮ್ಮ ಸರ್ಕಾರಿ ಸವಲತ್ತುಗಳನ್ನು ತ್ಯಜಿಸುವ ಬಗ್ಗೆ ಒಂದು ಉಪಾಖ್ಯಾನವನ್ನು ಅವರು ಹಂಚಿಕೊಂಡರು. ಗುಜರಾತಿನ ಬುಡಕಟ್ಟು ಗುಂಪೊಂದು ಸಣ್ಣ ಸಾಲದಿಂದ ಸಾಂಪ್ರದಾಯಿಕ ಸಂಗೀತ ಪ್ರದರ್ಶನದ ವೃತ್ತಿಪರ ಬ್ಯಾಂಡ್ ಅನ್ನು ರಚಿಸುವತ್ತ ಪರಿವರ್ತನೆಗೊಂಡ ಬಗ್ಗೆ ಅವರು ಸ್ಪೂರ್ತಿದಾಯಕ ಕಥೆಯನ್ನು ವಿವರಿಸಿದರು. ಈ ಉಪಕ್ರಮವು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದಲ್ಲದೆ, ಸಣ್ಣ ಪ್ರಯತ್ನಗಳು ಹೇಗೆ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬುದನ್ನು ಎತ್ತಿ ತೋರಿಸಿತು. ಅಂತಹ ಪರಿವರ್ತನೆಯ ಕಥೆಗಳು ತಮಗೆ ಸ್ಫೂರ್ತಿ ನೀಡುತ್ತವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಾಮೂಹಿಕ ಪ್ರಯತ್ನಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ಹೇಳಿದರು.

ಜನರ ಆಕಾಂಕ್ಷೆಗಳು ಮತ್ತು ಸನ್ನಿವೇಶಗಳನ್ನು ಅಧ್ಯಯನ ಮಾಡಲು ಮತ್ತು ಪರಿಹರಿಸಲು ಮುದ್ರಾ ಯೋಜನೆಯು ಒಂದು ಸಾಧನವಾಗಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು. ಯೋಜನೆಯ ಯಶಸ್ಸಿನ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಫಲಾನುಭವಿಗಳು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಸಮಾಜಕ್ಕೆ ಕೊಡುಗೆ ನೀಡುವುದರಿಂದ ಸಿಗುವ ತೃಪ್ತಿಯನ್ನು ಅವರು ಒತ್ತಿ ಹೇಳಿದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು ಸಂವಾದದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

*****


(Release ID: 2120020) Visitor Counter : 32