ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಸೂರ್ಯ ಘರ್: ಭಾರತದ ಸೌರ ಕ್ರಾಂತಿ


ಉಚಿತ ವಿದ್ಯುತ್ ಯೋಜನೆಯು 10 ಲಕ್ಷ ಸ್ಥಾಪನೆಗಳ ಮೈಲಿಗಲ್ಲನ್ನು ದಾಟಿದೆ

Posted On: 13 MAR 2025 11:52AM by PIB Bengaluru

ಪರಿಚಯ

ವಿಶ್ವದ ಅತಿದೊಡ್ಡ ದೇಶೀಯ ಮೇಲ್ಛಾವಣಿ ಸೌರ ಉಪಕ್ರಮವಾದ ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ (ಪಿ ಎಂ ಎಸ್‌ ಜಿ ಎಂ ಬಿ ವೈ), ಮಾರ್ಚ್ 10, 2025 ರ ವೇಳೆಗೆ ದೇಶಾದ್ಯಂತ 10.09 ಲಕ್ಷ ಸ್ಥಾಪನೆಗಳನ್ನು ಪೂರ್ಣಗೊಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಪ್ರಾರಂಭಿಸಿದ ಈ ಪರಿವರ್ತನಾ ಯೋಜನೆಯು ಭಾರತದ ಇಂಧನ ಕ್ಷೇತ್ರವನ್ನು ವೇಗವಾಗಿ ಮರುರೂಪಿಸುತ್ತಿದೆ. 47.3  ಲಕ್ಷ ಅರ್ಜಿಗಳನ್ನು ಸ್ವೀಕರಿಸಿರುವ ಈ ಉಪಕ್ರಮವು ಈಗಾಗಲೇ 6.13 ಲಕ್ಷ ಫಲಾನುಭವಿಗಳಿಗೆ ₹4,770 ಕೋಟಿ ಸಹಾಯಧನವನ್ನು ವಿತರಿಸಿದೆ, ಇದು ಸೌರಶಕ್ತಿಯನ್ನು ಹಿಂದೆಂದಿಗಿಂತಲೂ ಹೆಚ್ಚು ಪ್ರವೇಶಿಸುವಂತೆ ಮಾಡಿದೆ. 12 ಸಾರ್ವಜನಿಕ ವಲಯದ ಬ್ಯಾಂಕುಗಳ ಮೂಲಕ ಶೇ.6.75 ರಿಯಾಯ್ತಿ ಬಡ್ಡಿದರದಲ್ಲಿ ₹2 ಲಕ್ಷದವರೆಗೆ ಮೇಲಾಧಾರ-ರಹಿತ ಸಾಲಗಳು ಸೇರಿದಂತೆ ಸುಲಭ ಹಣಕಾಸು ಆಯ್ಕೆಗಳು ಯೋಜನೆಯ ಅಳವಡಿಕೆಯನ್ನು ಮತ್ತಷ್ಟು ವೇಗಗೊಳಿಸಿವೆ. ಇಲ್ಲಿಯವರೆಗೆ, 3.10 ಲಕ್ಷ ಸಾಲ ಅರ್ಜಿಗಳನ್ನು ಸ್ವೀಕರಿಸಲಾಗಿದೆ, 1.58 ಲಕ್ಷ ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು 1.28 ಲಕ್ಷ ಸಾಲಗಳನ್ನು ವಿತರಿಸಲಾಗಿದೆ, ಎಲ್ಲರನ್ನೂ ಒಳಗೊಂಡ ಆರ್ಥಿಕತೆಯನ್ನು ಖಚಿತಪಡಿಸುತ್ತಿದೆ. 15 ದಿನಗಳ ಸುಗಮ ಸಹಾಯಧನ ವರ್ಗಾವಣೆ ಪ್ರಕ್ರಿಯೆ ಮತ್ತು ಅನೇಕ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್‌ಗಳೊಂದಿಗೆ, ಈ ಯೋಜನೆಯು ಮನೆಗಳಿಗೆ ವಿದ್ಯುತ್ ಒದಗಿಸುವುದಲ್ಲದೆ, ಜನರನ್ನು ಸಬಲೀಕರಣಗೊಳಿಸುತ್ತಿದೆ. ಪಿ ಎಂ ಎಸ್‌ ಜಿ ಎಂ ಬಿ ವೈ ಅಡಿಯಲ್ಲಿ ನಡೆಯುವ ಪ್ರತಿಯೊಂದು ಸೌರಶಕ್ತಿ ಸ್ಥಾಪನೆಯು 100 ಮರಗಳನ್ನು ನೆಡುವುದಕ್ಕೆ ಸಮನಾದ ಇಂಗಾಲದ ಹೊರಸೂಸುವಿಕೆಯನ್ನು ತಡೆಯುತ್ತದೆ, ಭಾರತವನ್ನು ಸ್ವಚ್ಛ, ಹಸಿರು ಮತ್ತು ಸ್ವಾವಲಂಬಿ ಭವಿಷ್ಯದತ್ತ ಕೊಂಡೊಯ್ಯುತ್ತದೆ.

ಹಲವಾರು ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ

ಈ ಯೋಜನೆಯು ಹಲವಾರು ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಗಮನಾರ್ಹವಾಗಿ, ಚಂಡೀಗಢ ಮತ್ತು ದಮನ್ ಮತ್ತು ಡಿಯು ತಮ್ಮ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸೌರಶಕ್ತಿಯಲ್ಲಿ ಶೇ.100 ರಷ್ಟು ಗುರಿ ಸಾಧಿಸಿವೆ, ದೇಶವನ್ನು ಶುದ್ಧ ಇಂಧನ ಅಳವಡಿಕೆಯಲ್ಲಿ ಮುನ್ನಡೆಸಿವೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳು ಕೂಡ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ, ಒಟ್ಟಾರೆ ಸ್ಥಾಪನಾ ಅಂಕಿಅಂಶಗಳಿಗೆ ಗಣನೀಯ ಕೊಡುಗೆ ನೀಡುತ್ತಿವೆ. 2026-27ರ ವೇಳೆಗೆ 1 ಕೋಟಿ ಮನೆಗಳನ್ನು ತಲುಪುವ ಗುರಿಯೊಂದಿಗೆ ಯೋಜನೆಯ ಸುಗಮ ಮತ್ತು ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಪ್ರಗತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್‌ ಯೋಜನೆಯಡಿಯಲ್ಲಿ ಅತಿ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುತ್ತಿರುವ ಅಗ್ರ 5 ರಾಜ್ಯಗಳು.

ಪ್ರಮುಖ ಪ್ರಯೋಜನಗಳು

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯು ಭಾಗವಹಿಸುವ ಕುಟುಂಬಗಳಿಗೆ ಹಲವಾರು ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ:

  • ಮನೆಗಳಿಗೆ ಉಚಿತ ವಿದ್ಯುತ್: ಈ ಯೋಜನೆಯು ಸಹಾಯಧನಯೊಂದಿಗೆ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುತ್ತದೆ, ಇದು ಅವರ ಇಂಧನ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
  • ಸರ್ಕಾರಕ್ಕೆ ವಿದ್ಯುತ್ ವೆಚ್ಚ ಕಡಿತ: ಸೌರಶಕ್ತಿಯ ವ್ಯಾಪಕ ಬಳಕೆಯನ್ನು ಉತ್ತೇಜಿಸುವ ಮೂಲಕ, ಈ ಯೋಜನೆಯು ಸರ್ಕಾರಕ್ಕೆ ವಾರ್ಷಿಕವಾಗಿ ಅಂದಾಜು ₹75,000 ಕೋಟಿ ವಿದ್ಯುತ್ ವೆಚ್ಚವನ್ನು ಉಳಿಸುವ ನಿರೀಕ್ಷೆಯಿದೆ.
  • ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಹೆಚ್ಚಳ: ಈ ಯೋಜನೆಯು ನವೀಕರಿಸಬಹುದಾದ ಇಂಧನ ಮೂಲಗಳ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತದೆ, ಇದು ಭಾರತದಲ್ಲಿ ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ ಇಂಧನ ಮಿಶ್ರಣಕ್ಕೆ ಕೊಡುಗೆ ನೀಡುತ್ತದೆ.
  • ಇಂಗಾಲ ಹೊರಸೂಸುವಿಕೆಯಲ್ಲಿ ಕಡಿತ: ಈ ಯೋಜನೆಯಡಿಯಲ್ಲಿ ಸೌರಶಕ್ತಿಗೆ ಪರಿವರ್ತನೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಭಾರತದ ಬದ್ಧತೆಯನ್ನು ಬೆಂಬಲಿಸುತ್ತದೆ.

ಸಹಾಯಧನ ವಿವರಗಳು

ಯೋಜನೆಯಡಿಯಲ್ಲಿ ಒದಗಿಸಲಾದ ಸಹಾಯಧನವು ಮನೆಯ ಸರಾಸರಿ ಮಾಸಿಕ ವಿದ್ಯುತ್ ಬಳಕೆ ಮತ್ತು ಅನುಗುಣವಾದ ಮೇಲ್ಛಾವಣಿ ಸೌರ ಸ್ಥಾವರದ ಸಾಮರ್ಥ್ಯವನ್ನು ಅವಲಂಬಿಸಿ ಬದಲಾಗುತ್ತದೆ:

ಮಾಸಿಕ ಸರಾಸರಿ ವಿದ್ಯುತ್ ಬಳಕೆ (ಯೂನಿಟ್ಗಳು)

ಸೂಕ್ತವಾದ ಮೇಲ್ಛಾವಣಿ ಸೌರ ಸ್ಥಾವರ ಸಾಮರ್ಥ್ಯ

ಸಹಾಯಧನ ನೆರವು

0-150

1-2 ಕಿ.ವ್ಯಾ.

₹30,000-₹60,000

150-300

2-3 ಕಿ.ವ್ಯಾ.

₹60,000-₹78,000

>300

3 ಕಿ.ವ್ಯಾ. ಗೆ ಮೇಲ್ಪಟ್ಟು

₹78,000

 

ಸಹಾಯಧನ ಅರ್ಜಿ ಮತ್ತು ಮಾರಾಟಗಾರರ ಆಯ್ಕೆ: ಕುಟುಂಬಗಳು ರಾಷ್ಟ್ರೀಯ ಪೋರ್ಟಲ್ ಮೂಲಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು, ಅಲ್ಲಿ ಅವರು ಚಾವಣಿಯ ಮೇಲೆ ಸೌರಶಕ್ತಿಯನ್ನು ಸ್ಥಾಪಿಸಲು ಸೂಕ್ತವಾದ ಮಾರಾಟಗಾರರನ್ನು ಸಹ ಆಯ್ಕೆ ಮಾಡಬಹುದು. ಸೂಕ್ತವಾದ ಸಿಸ್ಟಮ್ ಗಾತ್ರಗಳು, ಪ್ರಯೋಜನಗಳ ಲೆಕ್ಕಾಚಾರ, ಮಾರಾಟಗಾರರ ರೇಟಿಂಗ್‌ ಮತ್ತು ಇತರ ಸಂಬಂಧಿತ ವಿವರಗಳ ಕುರಿತು ಮಾಹಿತಿಯನ್ನು ಒದಗಿಸುವ ಮೂಲಕ ರಾಷ್ಟ್ರೀಯ ಪೋರ್ಟಲ್ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ರಾಷ್ಟ್ರೀಯ ಪೋರ್ಟಲ್‌ ನಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸುವುದರೊಂದಿಗೆ, ಗ್ರಾಹಕರು ಮರುಪಾವತಿ ವಿನಂತಿಯನ್ನು ಮಾಡಿದ ನಂತರ ಸಿ ಎಫ್‌ ಎ ಅನ್ನು ಪ್ರಕ್ರಿಯೆಗೊಳಿಸಲು ತೆಗೆದುಕೊಳ್ಳುವ ಸರಾಸರಿ ಸಮಯ ಸುಮಾರು 15 ದಿನಗಳು.

ಮೇಲಾಧಾರ ರಹಿತ ಸಾಲಗಳು: 3 ಕಿ.ವ್ಯಾ. ವರೆಗಿನ ವಸತಿ ಮೇಲ್ಛಾವಣಿ ಸೌರಶಕ್ತಿ (ಆರ್‌ ಟಿ ಎಸ್) ವ್ಯವಸ್ಥೆಗಳ ಅಳವಡಿಕೆಗಾಗಿ ಮನೆಗಳಿಗೆ ಸುಮಾರು ಶೇ.7 ಬಡ್ಡಿದರದಲ್ಲಿ ಮೇಲಾಧಾರ ರಹಿತ, ಕಡಿಮೆ ಬಡ್ಡಿದರದ ಸಾಲಗಳು ದೊರೆಯುತ್ತವೆ.

ಅರ್ಹತೆ

ಅರ್ಜಿ ಸಲ್ಲಿಕೆಯ ಪ್ರಕ್ರಿಯೆ

ಸೌರ ಫಲಕ ಅಳವಡಿಕೆಯ ಸುಗಮ ಮತ್ತು ಪರಿಣಾಮಕಾರಿ ಸಲ್ಲಿಕೆ ಮತ್ತು ಅನುಮೋದನೆಯನ್ನು ಖಚಿತಪಡಿಸಿಕೊಳ್ಳಲು ಅರ್ಜಿ ಪ್ರಕ್ರಿಯೆಯು ಒಂಬತ್ತು ನಿರ್ದಿಷ್ಟ ಹಂತಗಳನ್ನು ಒಳಗೊಂಡಿರುತ್ತದೆ.

ಪರಿಣಾಮ

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್‌ ಯೋಜನೆಯು ವೈಯಕ್ತಿಕ ಮನೆಗಳು ಮತ್ತು ಇಡೀ ರಾಷ್ಟ್ರಕ್ಕೆ ದೂರಗಾಮಿ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ:

  • ಮನೆಯ ಉಳಿತಾಯ ಮತ್ತು ಆದಾಯ ಸೃಷ್ಟಿ: ಮನೆಗಳು ತಮ್ಮ ವಿದ್ಯುತ್ ಬಿಲ್‌ ಗಳಲ್ಲಿ ಗಮನಾರ್ಹ ಉಳಿತಾಯದಿಂದ ಪ್ರಯೋಜನ ಪಡೆಯುತ್ತವೆ. ಹೆಚ್ಚುವರಿಯಾಗಿ, ಅವರು ತಮ್ಮ ಮೇಲ್ಛಾವಣಿ ಸೌರ ವ್ಯವಸ್ಥೆಗಳಿಂದ ಉತ್ತಾದನೆಯಾಗುವ ಹೆಚ್ಚುವರಿ ವಿದ್ಯುತ್‌ ಅನ್ನು ಡಿಸ್ಕಾಂ (DISCOM) ಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಉದಾಹರಣೆಗೆ, 3-ಕಿ.ವ್ಯಾ. ವ್ಯವಸ್ಥೆಯು ತಿಂಗಳಿಗೆ ಸರಾಸರಿ 300 ಯೂನಿಟ್‌ ಗಳಿಗಿಂತ ಹೆಚ್ಚು ಉತ್ಪಾದಿಸಬಹುದು, ಇದು ವಿಶ್ವಾಸಾರ್ಹ ಇಂಧನ ಮತ್ತು ಸಂಭಾವ್ಯ ಆದಾಯದ ಮೂಲವನ್ನು ಒದಗಿಸುತ್ತದೆ.
  • ಸೌರ ಸಾಮರ್ಥ್ಯದ ವಿಸ್ತರಣೆ: ಈ ಯೋಜನೆಯು ವಸತಿ ವಲಯದಲ್ಲಿ ಮೇಲ್ಛಾವಣಿ ಸ್ಥಾಪನೆಗಳ ಮೂಲಕ 30 ಗಿ.ವ್ಯಾ. ಸೌರ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದೆ, ಇದು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳಿಗೆ ಗಣನೀಯ ಕೊಡುಗೆ ನೀಡುತ್ತದೆ.
  • ಪರಿಸರ ಪ್ರಯೋಜನಗಳು: ಈ ಮೇಲ್ಛಾವಣಿ ವ್ಯವಸ್ಥೆಗಳ 25 ವರ್ಷಗಳ ಜೀವಿತಾವಧಿಯಲ್ಲಿ, ಈ ಯೋಜನೆಯು 1000 BU ಗಳಷ್ಟು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು 720 ಮಿಲಿಯನ್ ಟನ್‌ ಗಳಷ್ಟು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ, ಇದು ಪರಿಸರದ ಮೇಲೆ ಗಣನೀಯ ಧನಾತ್ಮಕ ಪರಿಣಾಮ ಬೀರುತ್ತದೆ.
  • ಉದ್ಯೋಗ ಸೃಷ್ಟಿ: ಈ ಯೋಜನೆಯು ಉತ್ಪಾದನೆ, ಲಾಜಿಸ್ಟಿಕ್ಸ್, ಪೂರೈಕೆ ಸರಪಳಿ, ಮಾರಾಟ, ಸ್ಥಾಪನೆ, ಕಾರ್ಯಾಚರಣೆಗಳು ಮತ್ತು ನಿರ್ವಹಣೆ (ಒ&ಎಂ) ಮತ್ತು ಇತರ ಸೇವೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಸುಮಾರು 17 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದರಿಂದಾಗಿ ದೇಶದಲ್ಲಿ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸ್ವಾವಲಂಬಿ ಭಾರತ ಉಪಕ್ರಮಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯು ಭಾರತದಲ್ಲಿ ಉತ್ಪಾದಿಸಲಾದ ಸೌರ ಘಟಕಗಳು ಮತ್ತು ಕೋಶಗಳ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ದೇಶೀಯ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಮಾರ್ಚ್ 10, 2025 ರ ಹೊತ್ತಿಗೆ, ಈ ಯೋಜನೆಯು 3 ಗಿಗಾ ವ್ಯಾಟ್‌ ಗಿಂತ ಹೆಚ್ಚಿನ ಮೇಲ್ಛಾವಣಿ ಸೌರ ಸಾಮರ್ಥ್ಯದ ಸ್ಥಾಪನೆಯನ್ನು ಸುಗಮಗೊಳಿಸಿದೆ, ಮಾರ್ಚ್ 2027 ರ ವೇಳೆಗೆ ಹೆಚ್ಚುವರಿ 27 ಗಿಗಾ ವ್ಯಾಟ್‌ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಉಪಕ್ರಮವು ಇನ್ವರ್ಟರ್‌ ಮತ್ತು ಬ್ಯಾಲನ್ಸ್‌ ಆಫ್‌ ಪ್ಲಾಂಟ್‌ (ಬಿಒಪಿ) ಬಿಡಿಭಾಗಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಭಾರತದ ನವೀಕರಿಸಬಹುದಾದ ಇಂಧನ ಪೂರಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ.

ಮಾದರಿ ಸೌರ ಗ್ರಾಮ

ಯೋಜನೆಯ "ಮಾದರಿ ಸೌರ ಗ್ರಾಮ" ಘಟಕದ ಅಡಿಯಲ್ಲಿ, ಭಾರತದಾದ್ಯಂತ ಪ್ರತಿ ಜಿಲ್ಲೆಯಲ್ಲಿ ಒಂದು ಮಾದರಿ ಸೌರ ಗ್ರಾಮವನ್ನು ಸ್ಥಾಪಿಸಲು ಗಮನಹರಿಸಲಾಗಿದೆ. ಈ ಉಪಕ್ರಮದ ಉದ್ದೇಶವು ಸೌರಶಕ್ತಿ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಇಂಧನ ಸ್ವಾವಲಂಬನೆಯನ್ನು ಸಾಧಿಸಲು ಗ್ರಾಮೀಣ ಸಮುದಾಯಗಳನ್ನು ಸಶಕ್ತಗೊಳಿಸುವುದಾಗಿದೆ. ಈ ಉದ್ದೇಶಕ್ಕಾಗಿ ₹800 ಕೋಟಿ ಮಂಜೂರು ಮಾಡಲಾಗಿದ್ದು, ಆಯ್ಕೆಯಾದ ಪ್ರತಿ ಮಾದರಿ ಸೌರ ಗ್ರಾಮಕ್ಕೆ ₹1 ಕೋಟಿ ನೀಡಲಾಗಿದೆ.

ಅಭ್ಯರ್ಥಿ ಗ್ರಾಮವಾಗಿ ಅರ್ಹತೆ ಪಡೆಯಲು, ಇದು 5,000 ಕ್ಕಿಂತ ಹೆಚ್ಚು (ಅಥವಾ ವಿಶೇಷ ವರ್ಗದ ರಾಜ್ಯಗಳಲ್ಲಿ 2,000) ಜನಸಂಖ್ಯೆಯನ್ನು ಹೊಂದಿರುವ ಕಂದಾಯ ಗ್ರಾಮವಾಗಿರಬೇಕು. ಗ್ರಾಮಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ, ಇದನ್ನು ಜಿಲ್ಲಾ ಮಟ್ಟದ ಸಮಿತಿ (ಡಿ ಎಲ್‌ ಸಿ) ಗುರುತಿಸುತ್ತದೆ ಮತ್ತು ಗುರುತಿಸಿದ ಆರು ತಿಂಗಳ ನಂತರ ಅವುಗಳ ಒಟ್ಟಾರೆ ವಿತರಿಸಲಾದ ನವೀಕರಿಸಬಹುದಾದ ಇಂಧನ (ಆರ್‌ ಇ) ಸಾಮರ್ಥ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿರುವ ಗ್ರಾಮಕ್ಕೆ ₹1 ಕೋಟಿ ಕೇಂದ್ರ ಹಣಕಾಸು ನೆರವು ಅನುದಾನ ಸಿಗಲಿದೆ. ಡಿ ಎಲ್‌ ಸಿ ಯ ಮೇಲ್ವಿಚಾರಣೆಯಡಿಯಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ, ಈ ಮಾದರಿ ಗ್ರಾಮಗಳು ಯಶಸ್ವಿಯಾಗಿ ಸೌರಶಕ್ತಿಗೆ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತದೆ ಮತ್ತು ದೇಶದಾದ್ಯಂತ ಇತರರಿಗೆ ಮಾನದಂಡವನ್ನು ನಿದಿಪಡಿಸುತ್ತದೆ.

ಮುಕ್ತಾಯ

ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್‌ ಯೋಜನೆಯು ಒಂದು ಪರಿವರ್ತಕ ಉಪಕ್ರಮವಾಗಿದೆ, ಲಕ್ಷಾಂತರ ಮನೆಗಳಿಗೆ ಸೌರಶಕ್ತಿಯನ್ನು ಪ್ರವೇಶಿಸುವ, ಕೈಗೆಟುಕುವ ಮತ್ತು ಪರಿಣಾಮಕಾರಿ ಮಾಡುವ ಯೋಜನೆಯಾಗಿದೆ. 10 ಲಕ್ಷ ಸ್ಥಾಪನೆಗಳು ಈಗಾಗಲೇ ಪೂರ್ಣಗೊಂಡಿದ್ದು, ಈ ಯೋಜನೆಯು 1 ಕೋಟಿ ಸೌರಶಕ್ತಿ ಚಾಲಿತ ಮನೆಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ. ಗಣನೀಯ ಸಬ್ಸಿಡಿಗಳು, ಸುಲಭ ಹಣಕಾಸು ಆಯ್ಕೆಗಳು ಮತ್ತು ಸುವ್ಯವಸ್ಥಿತ ಡಿಜಿಟಲ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ, ನಗರ ಮತ್ತು ಗ್ರಾಮೀಣ ಭಾರತದಾದ್ಯಂತದ ಮನೆಗಳು ಕನಿಷ್ಠ ಆರ್ಥಿಕ ಹೊರೆಯೊಂದಿಗೆ ಶುದ್ಧ ಇಂಧನಕ್ಕೆ ಪರಿವರ್ತನೆಗೊಳ್ಳುವುದನ್ನು ಕಾರ್ಯಕ್ರಮವು ಖಚಿತಪಡಿಸುತ್ತಿದೆ. ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ, ಈ ಯೋಜನೆಯು ಇಂಧನ ಸ್ವಾವಲಂಬನೆ, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ, ಇದು ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿದೆ.

 

ಉಲ್ಲೇಖಗಳು:

PM Surya Ghar: India’s Solar Revolution

*****


(Release ID: 2111168) Visitor Counter : 60