ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ನಮ್ಮ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್ಎಂಇಗಳು ಪರಿವರ್ತಕ ಪಾತ್ರವನ್ನು ವಹಿಸುತ್ತಿವೆ, ಈ ವಲಯವನ್ನು ಪೋಷಿಸಲು ಮತ್ತು ಬಲಪಡಿಸಲು ನಾವು ಬದ್ಧರಾಗಿದ್ದೇವೆ: ಪ್ರಧಾನಮಂತ್ರಿ

ಕಳೆದ 10 ವರ್ಷಗಳಲ್ಲಿ, ಸುಧಾರಣೆಗಳು, ಆರ್ಥಿಕ ಶಿಸ್ತು, ಪಾರದರ್ಶಕತೆ ಮತ್ತು ಅಂತರ್ಗತ ಬೆಳವಣಿಗೆಗೆ ಭಾರತವು ನಿರಂತರವಾಗಿ ತನ್ನ ಬದ್ಧತೆಯನ್ನು ತೋರಿಸಿದೆ: ಪ್ರಧಾನಮಂತ್ರಿ

ಸ್ಥಿರತೆ ಮತ್ತು ಸುಧಾರಣೆಗಳ ಭರವಸೆ, ಅದ್ಭುತ ಬದಲಾವಣೆಯನ್ನು ತಂದಿದೆ, ಇದು ನಮ್ಮ ಉದ್ಯಮದಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ: ಪ್ರಧಾನಮಂತ್ರಿ

ಇಂದು ವಿಶ್ವದ ಪ್ರತಿಯೊಂದು ದೇಶವೂ ಭಾರತದೊಂದಿಗೆ ತನ್ನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಬಯಸುತ್ತಿದೆ: ಪ್ರಧಾನಮಂತ್ರಿ

ಈ ಪಾಲುದಾರಿಕೆಯ ಗರಿಷ್ಠ ಲಾಭ ಪಡೆಯಲು ನಮ್ಮ ಉತ್ಪಾದನಾ ವಲಯ ಮುಂದೆ ಬರಬೇಕು: ಪ್ರಧಾನಮಂತ್ರಿ

ನಾವು ಸ್ವಾವಲಂಬಿ ಭಾರತ್ ನಿರ್ಮಾಣದ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ದಿದ್ದೇವೆ ಮತ್ತು ನಮ್ಮ ಸುಧಾರಣೆಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದೇವೆ: ಪ್ರಧಾನಮಂತ್ರಿ

ನಮ್ಮ ಪ್ರಯತ್ನಗಳು ಆರ್ಥಿಕತೆಯ ಮೇಲೆ ಕೋವಿಡ್ ಪರಿಣಾಮವನ್ನು ಕಡಿಮೆ ಮಾಡಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲು ಸಹಾಯ ಮಾಡಿದವು: ಪ್ರಧಾನಮಂತ್ರಿ

ಭಾರತದ ಉತ್ಪಾದನಾ ಪಯಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಿದೆ, ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗಿದೆ ಮತ್ತು ತ್ವರಿತಗೊಳಿಸಬೇಕಾಗಿದೆ: ಪ್ರಧಾನಮಂತ್ರಿ

ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ನವೀನ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸಬಹುದು, ಜೊತೆಗೆ ಉತ್ಪನ್ನಗಳಿಗೆ ಮೌಲ್ಯವನ್ನು ಸೇರಿಸಬಹುದು: ಪ್ರಧಾನಮಂತ್ರಿ

ಎಂಎಸ್ಎಂಇ ವಲಯವು ಭಾರತದ ಉತ್ಪಾದನೆ ಮತ್ತು ಕೈಗಾರಿಕಾ ಬೆಳವಣಿಗೆಯ ಬೆನ್ನೆಲುಬಾಗಿದೆ: ಪ್ರಧಾನಮಂತ್ರಿ

Posted On: 04 MAR 2025 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ನಂತರದ ವೆಬಿನಾರ್ ಗಳನ್ನುದ್ದೇಶಿಸಿ ಭಾಷಣ ಮಾಡಿದರು. ಬೆಳವಣಿಗೆಯ ಎಂಜಿನ್ ಆಗಿ ಎಂಎಸ್ಎಂಇ ಕುರಿತು ವೆಬಿನಾರ್ಗಳು ನಡೆದವು; ಉತ್ಪಾದನೆ, ರಫ್ತು ಮತ್ತು ಪರಮಾಣು ಶಕ್ತಿ ಕಾರ್ಯಾಚರಣೆಗಳು; ನಿಯಂತ್ರಣ, ಹೂಡಿಕೆ ಮತ್ತು ಸುಗಮ ವ್ಯಾಪಾರ ಸುಧಾರಣೆಗಳು ಇದರಲ್ಲಿ ಸೇರಿದ್ದವು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ಪಾದನೆ ಮತ್ತು ರಫ್ತು ಕುರಿತ ಬಜೆಟ್ ನಂತರದ ವೆಬಿನಾರ್ ಗಳು ಬಹಳ ಮಹತ್ವದ್ದಾಗಿವೆ ಎಂದರು. ಈ ಬಜೆಟ್ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಎಂದು ಉಲ್ಲೇಖಿಸಿದ ಅವರು, ಈ ಬಜೆಟ್ ಅತ್ಯಂತ ಗಮನಾರ್ಹ ಅಂಶವೆಂದರೆ ಅದರ ವಿತರಣೆ, ಇದು ನಿರೀಕ್ಷೆಗಳನ್ನು ಮೀರಿದೆ ಎಂದು ಒತ್ತಿ ಹೇಳಿದರು. ಹಲವಾರು ವಲಯಗಳಲ್ಲಿ, ತಜ್ಞರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂಬುದರತ್ತ ಶ್ರೀ ಮೋದಿ ಗಮನಸೆಳೆದರು. ಈ ಬಜೆಟ್ ನಲ್ಲಿ ಉತ್ಪಾದನೆ ಮತ್ತು ರಫ್ತಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ದೇಶವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ಥಿರವಾದ ಸರ್ಕಾರದ ನೀತಿಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ಭಾರತವು ಸುಧಾರಣೆಗಳು, ಹಣಕಾಸು ಶಿಸ್ತು, ಪಾರದರ್ಶಕತೆ ಮತ್ತು ಅಂತರ್ಗತ ಬೆಳವಣಿಗೆಗೆ ಬದ್ಧತೆಯನ್ನು ತೋರಿಸಿದೆ ಎಂದು ಒತ್ತಿ ಹೇಳಿದರು. ಸ್ಥಿರತೆ ಮತ್ತು ಸುಧಾರಣೆಗಳ ಭರವಸೆಯು ಉದ್ಯಮದಲ್ಲಿ ಹೊಸ ವಿಶ್ವಾಸವನ್ನು ತಂದಿದೆ ಎಂದು ಅವರು ನುಡಿದರು. ಮುಂಬರುವ ವರ್ಷಗಳಲ್ಲಿ ಸ್ಥಿರತೆ ಮುಂದುವರಿಯುತ್ತದೆ ಎಂದು ಅವರು ಉತ್ಪಾದನೆ ಮತ್ತು ರಫ್ತು ಮಾಡುವ ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ಭಾಗೀದಾರರಿಗೆ ಭರವಸೆ ನೀಡಿದರು. ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ದೇಶಕ್ಕೆ ಉತ್ಪಾದನೆ ಮತ್ತು ರಫ್ತಿಗೆ ಹೊಸ ಮಾರ್ಗಗಳನ್ನು ತೆರೆಯಲು ಮಧ್ಯಸ್ಥಗಾರರನ್ನು ಪ್ರೋತ್ಸಾಹಿಸಿದ ಶ್ರೀ ಮೋದಿ, ವಿಶ್ವದ ಪ್ರತಿಯೊಂದು ದೇಶವು ಭಾರತದೊಂದಿಗೆ ತನ್ನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಬಯಸುತ್ತದೆ ಎಂದು ಒತ್ತಿ ಹೇಳಿದರು. ಉತ್ಪಾದನಾ ವಲಯವು ಪಾಲುದಾರಿಕೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಯಾವುದೇ ದೇಶದ ಅಭಿವೃದ್ಧಿಗೆ ಸ್ಥಿರ ನೀತಿ ಮತ್ತು ಉತ್ತಮ ವ್ಯಾಪಾರ ವಾತಾವರಣ ನಿರ್ಣಾಯಕವಾಗಿದೆ", ಎಂದು ಹೇಳಿದ ಪ್ರಧಾನಿ, ಕೆಲವು ವರ್ಷಗಳ ಹಿಂದೆ, ಸರ್ಕಾರವು ಜನ ವಿಶ್ವಾಸ್ ಕಾಯ್ದೆಯನ್ನು ಪರಿಚಯಿಸಿತು ಮತ್ತು ಅನುಸರಣೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮಾಡಿತು ಎಂದು ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ, ಇದು ವ್ಯವಹಾರವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆ ಮುಂದುವರಿಯಬೇಕು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸರ್ಕಾರವು ಸರಳೀಕೃತ ಆದಾಯ ತೆರಿಗೆ ನಿಬಂಧನೆಗಳನ್ನು ಪರಿಚಯಿಸಿದೆ ಮತ್ತು ಜನ ವಿಶ್ವಾಸ್ 2.0 ಮಸೂದೆಯ ಮೇಲೆ ಕೆಲಸ ಮಾಡುತ್ತಿದೆ ಎಂದು ಉಲ್ಲೇಖಿಸಿದರು. ಹಣಕಾಸುಯೇತರ ವಲಯದಲ್ಲಿನ ನಿಯಮಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ, ಅವುಗಳನ್ನು ಆಧುನಿಕ, ಹೊಂದಿಕೊಳ್ಳುವ, ಜನಸ್ನೇಹಿ ಮತ್ತು ವಿಶ್ವಾಸ ಆಧಾರಿತವಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು ಮತ್ತು ಪ್ರಕ್ರಿಯೆಯಲ್ಲಿ ಉದ್ಯಮದ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು. ಪರಿಹರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಮಸ್ಯೆಗಳನ್ನು ಗುರುತಿಸಲು, ಪ್ರಕ್ರಿಯೆಗಳನ್ನು ಸರಳೀಕರಿಸುವ ಮಾರ್ಗಗಳನ್ನು ಸೂಚಿಸಲು ಮತ್ತು ತ್ವರಿತ ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಲು ತಂತ್ರಜ್ಞಾನವನ್ನು ಎಲ್ಲಿ ಬಳಸಬಹುದು ಎಂದು ಮಾರ್ಗದರ್ಶನ ನೀಡಲು ಅವರು ಮಧ್ಯಸ್ಥಗಾರರನ್ನು ಉತ್ತೇಜಿಸಿದರು.

ಜಗತ್ತು ಪ್ರಸ್ತುತ ರಾಜಕೀಯ ಅನಿಶ್ಚಿತತೆಯನ್ನು ಅನುಭವಿಸುತ್ತಿದೆ, ಮತ್ತು ಇಡೀ ಜಗತ್ತು ಭಾರತವನ್ನು ಬೆಳವಣಿಗೆಯ ಕೇಂದ್ರವಾಗಿ ನೋಡುತ್ತಿದೆ "ಎಂದು ಶ್ರೀ ಮೋದಿ ಹೇಳಿದರು, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ಜಾಗತಿಕ ಆರ್ಥಿಕತೆಯು ನಿಧಾನಗೊಂಡಾಗ, ಭಾರತವು ಜಾಗತಿಕ ಬೆಳವಣಿಗೆಯನ್ನು ವೇಗಗೊಳಿಸಿತು. ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ಮೂಲಕ ಮತ್ತು ಸುಧಾರಣೆಗಳನ್ನು ತ್ವರಿತಗೊಳಿಸುವ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಆರ್ಥಿಕತೆಯ ಮೇಲೆ ಕೋವಿಡ್ ಪರಿಣಾಮವನ್ನು ಕಡಿಮೆ ಮಾಡಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಲು ಸಹಾಯ ಮಾಡಿವೆ ಎಂದು ಅವರು ಒತ್ತಿ ಹೇಳಿದರು. "ಭಾರತವು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಆಗಿ ಉಳಿದಿದೆ ಮತ್ತು ಸವಾಲಿನ ಸಂದರ್ಭಗಳಲ್ಲಿ ತನ್ನ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ" ಎಂದು ಅವರು ಹೇಳಿದರು. ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಜಗತ್ತಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸುವ ವಿಶ್ವಾಸಾರ್ಹ ಪಾಲುದಾರರ ಅಗತ್ಯವಿದೆ ಎಂಬುದರತ್ತ ಗಮನಸೆಳೆದ ಶ್ರೀ ಮೋದಿ, ಭಾರತವು ಅಗತ್ಯವನ್ನು ಪೂರೈಸಲು ಸಮರ್ಥವಾಗಿದೆ ಎಂದು ಒತ್ತಿ ಹೇಳಿದರು, ಇದು ದೇಶಕ್ಕೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದವರು ಅಭಿಪ್ರಾಯಪಟ್ಟರು.

ಉದ್ಯಮವು ಕೇವಲ ಪ್ರೇಕ್ಷಕನಂತಿರದೆ ಸಕ್ರಿಯವಾಗಿ ತನ್ನ ಪಾತ್ರವನ್ನು ಹುಡುಕಬೇಕು ಮತ್ತು ಅವಕಾಶಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಹಿಂದಿನದಕ್ಕೆ ಹೋಲಿಸಿದರೆ ಇಂದು ಇದು ಸುಲಭವಾಗಿದೆ, ಏಕೆಂದರೆ ದೇಶವು ಸ್ನೇಹಪರ ನೀತಿಗಳನ್ನು ಹೊಂದಿದೆ ಮತ್ತು ಸರ್ಕಾರವು ಉದ್ಯಮದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂಬುದರತ್ತ  ಅವರು ಗಮನಸೆಳೆದರು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಅವಕಾಶಗಳನ್ನು ಹುಡುಕುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಬಲವಾದ ಸಂಕಲ್ಪ, ವಸ್ತುನಿಷ್ಠತೆಯನ್ನು ಅನುಸರಿಸುವಂತೆ ಪ್ರಧಾನಿ ಕರೆ ನೀಡಿದರು. ಪ್ರತಿಯೊಂದು ಉದ್ಯಮವೂ ಸಾಮೂಹಿಕವಾಗಿ ಒಂದು ಹೆಜ್ಜೆ ಮುಂದೆ ಇಟ್ಟರೆ,  ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದು ಎಂದೂ ಅವರು ಒತ್ತಿ ಹೇಳಿದರು.

ಪಿಎಲ್ಐ ಯೋಜನೆಯಿಂದ ಪ್ರಸ್ತುತ 14 ವಲಯಗಳು ಪ್ರಯೋಜನ ಪಡೆಯುತ್ತಿವೆ ಎಂದು ಒತ್ತಿ ಹೇಳಿದ ಪ್ರಧಾನಿ, ಈ ಯೋಜನೆಯಡಿ 750 ಕ್ಕೂ ಹೆಚ್ಚು ಘಟಕಗಳಿಗೆ ಅನುಮೋದನೆ ನೀಡಲಾಗಿದೆ, ಇದರ ಪರಿಣಾಮವಾಗಿ 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ, 13 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಉತ್ಪಾದನೆ ಮತ್ತು ರಫ್ತು 5 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಹೇಳಿದರು. ಅವಕಾಶಗಳನ್ನು ನೀಡಿದಾಗ ಉದ್ಯಮಿಗಳು ಹೊಸ ಕ್ಷೇತ್ರಗಳಲ್ಲಿ ಹೇಗೆ ಮುಂದುವರಿಯಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉತ್ಪಾದನೆ ಮತ್ತು ರಫ್ತು ಉತ್ತೇಜಿಸಲು ಎರಡು ಮಿಷನ್ ಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಶ್ರೀ ಮೋದಿ ಪ್ರಕಟಿಸಿದರು. ಉತ್ತಮ ತಂತ್ರಜ್ಞಾನ ಮತ್ತು ಗುಣಮಟ್ಟದ ಉತ್ಪನ್ನಗಳ ಮೇಲೆ ಗಮನ ಸೆಳೆದ ಅವರು, ವೆಚ್ಚವನ್ನು ಕಡಿಮೆ ಮಾಡಲು ಕೌಶಲ್ಯಕ್ಕೆ ಒತ್ತು ನೀಡುವ ಅಗತ್ಯವನ್ನು ಪ್ರತಿಪಾದಿಸಿದರು. ಭಾರತದಲ್ಲಿ ತಯಾರಿಸಬಹುದಾದ ಜಾಗತಿಕವಾಗಿ ಬೇಡಿಕೆಯಲ್ಲಿರುವ ಹೊಸ ಉತ್ಪನ್ನಗಳನ್ನು ಗುರುತಿಸುವಂತೆ ಅವರು ಎಲ್ಲಾ ಮಧ್ಯಸ್ಥಗಾರರನ್ನು ಒತ್ತಾಯಿಸಿದರು ಮತ್ತು ರಫ್ತು ಸಾಮರ್ಥ್ಯ ಹೊಂದಿರುವ ದೇಶಗಳನ್ನು ವ್ಯೂಹಾತ್ಮಕವಾಗಿ ಸಂಪರ್ಕಿಸಲು ಪ್ರೋತ್ಸಾಹಿಸಿದರು.

"ಭಾರತದ ಉತ್ಪಾದನಾ ಪಯಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ಅಲ್ಲಿ ಹೆಚ್ಚಿನ ಪ್ರಗತಿ ಮತ್ತು ವೇಗವರ್ಧನೆಯ ಅಗತ್ಯವಿದೆ" ಎಂದು ಪ್ರಧಾನಿ ಹೇಳಿದರು. ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ, ನವೀನ ಉತ್ಪನ್ನಗಳು ಮತ್ತು ಅಸ್ತಿತ್ವದಲ್ಲಿರುವ ಉತ್ಪನ್ನಗಳಿಗೆ ಮೌಲ್ಯವರ್ಧನೆಯತ್ತ ಗಮನ ಹರಿಸಬಹುದು ಎಂದು ಅವರು ಒತ್ತಿ ಹೇಳಿದರು. ಭಾರತದ ಆಟಿಕೆ, ಪಾದರಕ್ಷೆ ಮತ್ತು ಚರ್ಮದ ಕೈಗಾರಿಕೆಗಳ ಸಾಮರ್ಥ್ಯವನ್ನು ಜಗತ್ತು ಗುರುತಿಸಿದೆ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಬಹುದು ಎಂದು ಅವರು ನುಡಿದರು. ಈ ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಚಾಂಪಿಯನ್ ಆಗಬಹುದು, ಇದು ರಫ್ತುಗಳಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ಈ ಬೆಳವಣಿಗೆಯು ಕಾರ್ಮಿಕ-ಕೇಂದ್ರಿತ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರಂಭದಿಂದ ಕೊನೆಯವರೆಗೆ (ಎಂಡ್-ಟು-ಎಂಡ್ ) ಬೆಂಬಲವನ್ನು ಒದಗಿಸುತ್ತದೆ ಎಂದು ಉಲ್ಲೇಖಿಸಿದ ಅವರು, ಈ ಕುಶಲಕರ್ಮಿಗಳನ್ನು ಹೊಸ ಅವಕಾಶಗಳೊಂದಿಗೆ ಸಂಪರ್ಕಿಸುವ ಪ್ರಯತ್ನಗಳು ನಡೆಯಬೇಕು ಎಂದರು. ಮತ್ತು ಕ್ಷೇತ್ರಗಳಲ್ಲಿ ಹುದುಗಿರುವ ಸಾಮರ್ಥ್ಯವನ್ನು ವಿಸ್ತರಿಸಲು ಎಲ್ಲಾ ಪಾಲುದಾರರು ಮುಂದೆ ಬರಬೇಕು ಎಂದು ಕರೆ ನೀಡಿದರು.

ಎಂ.ಎಸ್.ಎಂ.ಇ. ವಲಯವು ಭಾರತದ ಉತ್ಪಾದನೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಬೆನ್ನೆಲುಬಾಗಿದೆ", ಎಂದು ಪ್ರಧಾನಿ ಹೇಳಿದರು. 2020 ರಲ್ಲಿ, 14 ವರ್ಷಗಳ ನಂತರ ಎಂಎಸ್ಎಂಇಗಳ ವ್ಯಾಖ್ಯಾನವನ್ನು ಪರಿಷ್ಕರಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಇದು ಎಂಎಸ್ಎಂಇಗಳು ಬೆಳೆದರೆ ಸರ್ಕಾರಿ ಪ್ರಯೋಜನಗಳನ್ನು ಕಳೆದುಕೊಳ್ಳುತ್ತವೆ ಎಂಬ ಭಯವನ್ನು ನಿವಾರಿಸಿದೆ ಎಂದು ಅವರು ಒತ್ತಿ ಹೇಳಿದರು. ದೇಶದಲ್ಲಿ ಎಂಎಸ್ಎಂಇಗಳ ಸಂಖ್ಯೆ 6 ಕೋಟಿಗೆ ಏರಿದೆ, ಇದು ಕೋಟಿಗಟ್ಟಲೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. ಈ ಬಜೆಟ್ ನಲ್ಲಿ ಎಂ.ಎಸ್.ಎಂ.ಇ.ಗಳ ವ್ಯಾಖ್ಯಾನವನ್ನು ಮತ್ತಷ್ಟು ವಿಸ್ತರಿಸಲಾಗಿದೆ ಮತ್ತು ಅವುಗಳ ನಿರಂತರ ಬೆಳವಣಿಗೆಯಲ್ಲಿ ವಿಶ್ವಾಸವನ್ನು ಮೂಡಿಸಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದು ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ ಅವರು, ಎಂಎಸ್ಎಂಇಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಸಾಲ ಪಡೆಯುವಲ್ಲಿನ ತೊಂದರೆ ಎಂದು ಒತ್ತಿ ಹೇಳಿದರು. ಹತ್ತು ವರ್ಷಗಳ ಹಿಂದೆ, ಎಂಎಸ್ಎಂಇಗಳು ಸುಮಾರು 12 ಲಕ್ಷ ಕೋಟಿ ರೂ.ಗಳ ಸಾಲವನ್ನು ಪಡೆದವು, ಅದು ಈಗ ಸುಮಾರು 30 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಅವರು ಹೇಳಿದರು. ಈ ಬಜೆಟ್ ನಲ್ಲಿ ಎಂಎಸ್ ಎಂಇ ಸಾಲಗಳ ಗ್ಯಾರಂಟಿ ಕವರ್ ಅನ್ನು 20 ಕೋಟಿ ರೂ.ಗೆ ದ್ವಿಗುಣಗೊಳಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದರು.ಹೆಚ್ಚುವರಿಯಾಗಿ, ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸಲು ₹ 5 ಲಕ್ಷ ಮಿತಿಯೊಂದಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸಲಾಗುವುದು ಎಂದವರು ನುಡಿದರು.

ಸರ್ಕಾರವು ಸಾಲದ ಲಭ್ಯತೆಯನ್ನು ಸುಗಮಗೊಳಿಸಿದೆ ಮತ್ತು ಹೊಸ ರೀತಿಯ ಸಾಲವನ್ನು ಪರಿಚಯಿಸಿದೆ ಎಂದು ಒತ್ತಿಹೇಳಿದ ಶ್ರೀ ಮೋದಿ, ಜನರು ಈಗ ಖಾತರಿಯಿಲ್ಲದೆ ಸಾಲಗಳನ್ನು ಪಡೆಯುತ್ತಿದ್ದಾರೆ, ಇದನ್ನು ಅವರು ಹಿಂದೆಂದೂ ಊಹಿಸಿರಲಿಲ್ಲ ಎಂದೂ ಹೇಳಿದರು. ಕಳೆದ 10 ವರ್ಷಗಳಲ್ಲಿ, ಖಾತರಿ ರಹಿತ (ಗ್ಯಾರಂಟಿ ಇಲ್ಲದೆ)  ಸಾಲಗಳನ್ನು ಒದಗಿಸುವ ಮುದ್ರಾದಂತಹ ಯೋಜನೆಗಳು ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡಿವೆ, ಟ್ರೇಡ್ಸ್ ಪೋರ್ಟಲ್ ಅನೇಕ ಸಾಲ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ಅವರು ಹೇಳಿದರು. ಸಾಲ ವಿತರಣೆಯ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರತಿ ಎಂಎಸ್ಎಂಇಗೆ ಕಡಿಮೆ ವೆಚ್ಚದ ಮತ್ತು ಸಮಯೋಚಿತ ಸಾಲದ ಲಭ್ಯತೆಯನ್ನು ಖಾತ್ರಿಪಡಿಸಿದರು. ಮಹಿಳೆಯರು, ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಐದು ಲಕ್ಷದಷ್ಟು ಮಂದಿಗೆ  ಮೊದಲ ಬಾರಿಗೆ ಉದ್ಯಮಗಳನ್ನು ಸ್ಥಾಪಿಸಿದ ಉದ್ಯಮಿಗಳಿಗೆ 2 ಕೋಟಿ ರೂ.ಗಳ ಸಾಲವನ್ನು ನೀಡಲಾಗುವುದು ಎಂದು ಅವರು ಘೋಷಿಸಿದರು. ಮೊದಲ ಬಾರಿಗೆ ಉದ್ಯಮಿಗಳಾದವರಿಗೆ  ಸಾಲದ ಬೆಂಬಲ ಮಾತ್ರವಲ್ಲದೆ ಮಾರ್ಗದರ್ಶನವೂ ಬೇಕು ಎಂದು ಅವರು ಒತ್ತಿ ಹೇಳಿದರು ಮತ್ತು ವ್ಯಕ್ತಿಗಳಿಗೆ ಸಹಾಯ ಮಾಡಲು ಮಾರ್ಗದರ್ಶನ ಕಾರ್ಯಕ್ರಮವನ್ನು ರೂಪಿಸುವಂತೆ ಉದ್ಯಮ ವಲಯವನ್ನು ಅವರು ಒತ್ತಾಯಿಸಿದರು.

ಹೂಡಿಕೆಯನ್ನು ಹೆಚ್ಚಿಸುವಲ್ಲಿ ರಾಜ್ಯಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಹೆಚ್ಚು ರಾಜ್ಯಗಳು ಸುಗಮವಾಗಿ ವಾಣಿಜ್ಯ ನಡೆಸುವುದನ್ನು ಉತ್ತೇಜಿಸಿದಷ್ಟೂ ಅವು ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುತ್ತವೆ ಎಂದು ಒತ್ತಿ ಹೇಳಿದರು. ಇದು ಆಯಾ ರಾಜ್ಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬುದರತ್ತಲೂ ಅವರು ಗಮನಸೆಳೆದರು. ಈ ಬಜೆಟ್ ಯಾರು ಹೆಚ್ಚು ಬಳಸಿಕೊಳ್ಳಬಹುದು ಎಂಬುದನ್ನು ನೋಡಲು ರಾಜ್ಯಗಳ ನಡುವೆ ಸ್ಪರ್ಧೆಯನ್ನು ಅವರು ಪ್ರೋತ್ಸಾಹಿಸಿದರು. ಪ್ರಗತಿಪರ ನೀತಿಗಳನ್ನು ಹೊಂದಿರುವ ರಾಜ್ಯಗಳು ತಮ್ಮ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಕಂಪನಿಗಳನ್ನು ಆಕರ್ಷಿಸುತ್ತವೆ ಎಂಬುದರತ್ತ  ಅವರು ಬೆಟ್ಟು ಮಾಡಿದರು.

ಇದರಲ್ಲಿ ಪಾಲ್ಗೊಂಡವರು  ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ವೆಬಿನಾರ್ ಕ್ರಿಯಾತ್ಮಕ ಪರಿಹಾರಗಳನ್ನು ನಿರ್ಧರಿಸುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸುವಲ್ಲಿ ಭಾಗವಹಿಸುವವರ ಸಹಕಾರದ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಬಜೆಟ್ ನಂತರ ಅನುಷ್ಠಾನ ಕಾರ್ಯತಂತ್ರಗಳನ್ನು ರೂಪಿಸಲು ಇದು ಸಹಾಯ ಮಾಡುತ್ತದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು/ಭಾಗವಹಿಸುವವರ ಕೊಡುಗೆಗಳು ಬಹಳ ಉಪಯುಕ್ತವೆಂಬ  ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು.

ಸಂದರ್ಭದಲ್ಲಿ ಹಲವಾರು ಕೇಂದ್ರ ಸಚಿವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇತರ ಗಣ್ಯರೊಂದಿಗೆ ಉಪಸ್ಥಿತರಿದ್ದರು.

ಹಿನ್ನೆಲೆ

ವೆಬಿನಾರ್ಗಳು ಸರ್ಕಾರಿ ಅಧಿಕಾರಿಗಳು, ಉದ್ಯಮದ ನಾಯಕರು ಮತ್ತು ವ್ಯಾಪಾರ ತಜ್ಞರಿಗೆ ಭಾರತದ ಕೈಗಾರಿಕಾ, ವ್ಯಾಪಾರ ಮತ್ತು ಇಂಧನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಹಯೋಗದ ವೇದಿಕೆಯನ್ನು ಒದಗಿಸುತ್ತವೆ. ಚರ್ಚೆಗಳು ನೀತಿ ಅನುಷ್ಠಾನ, ಹೂಡಿಕೆ ಸೌಲಭ್ಯ ಮತ್ತು ತಂತ್ರಜ್ಞಾನ ಅಳವಡಿಕೆ, ಬಜೆಟ್ ಪರಿವರ್ತಕ ಕ್ರಮಗಳ ತಡೆರಹಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುತ್ತವೆ. ವೆಬಿನಾರ್ಗಳು ಪ್ರಯತ್ನಗಳನ್ನು ಸರಿಹೊಂದಿಸಲು ಮತ್ತು ಬಜೆಟ್ ಘೋಷಣೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಚಾಲನೆ ನೀಡಲು ಖಾಸಗಿ ವಲಯದ ತಜ್ಞರು, ಉದ್ಯಮದ  ಪ್ರತಿನಿಧಿಗಳು ಮತ್ತು ವಿಷಯ ತಜ್ಞರನ್ನು ತೊಡಗಿಸಿಕೊಳ್ಳುತ್ತವೆ.

 

 

*****


(Release ID: 2108348) Visitor Counter : 37