ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ
Posted On:
31 JAN 2025 12:31PM by PIB Bengaluru
ಗೌರವಾನ್ವಿತ ಸದಸ್ಯರೇ,
ಸಂಸತ್ತಿನ ಈ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನನಗೆ ಬಹಳ ಸಂತೋಷವಾಗುತ್ತಿದೆ.
ಕೇವಲ ಎರಡು ತಿಂಗಳ ಹಿಂದೆ, ನಾವು ಸಂವಿಧಾನವನ್ನು ಅಳವಡಿಸಿಕೊಂಡ 75 ನೇ ವಾರ್ಷಿಕೋತ್ಸವವನ್ನು ಆಚರಿಸಿದೆವು, ಮತ್ತು ಕೆಲವು ದಿನಗಳ ಹಿಂದೆ, ಭಾರತೀಯ ಗಣರಾಜ್ಯವು ಸಹ 75 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿತು. ಈ ಸಂದರ್ಭವು ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಗೌರವವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ. ಎಲ್ಲಾ ದೇಶವಾಸಿಗಳ ಪರವಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಎಲ್ಲಾ ಸಂವಿಧಾನ ನಿರ್ಮಾತೃಗಳಿಗೆ ನಾನು ನಮನವನ್ನು ಸಲ್ಲಿಸುತ್ತೇನೆ..
ಗೌರವಾನ್ವಿತ ಸದಸ್ಯರೇ,
ದೇಶದಲ್ಲಿ ಐತಿಹಾಸಿಕ ಮಹಾ ಕುಂಭ ಮೇಳವೂ ನಡೆಯುತ್ತಿದೆ. ಮಹಾ ಕುಂಭ ಮೇಳವು ಭಾರತದ ಸಾಂಸ್ಕೃತಿಕ ಸಂಪ್ರದಾಯ ಮತ್ತು ಸಾಮಾಜಿಕ ಪ್ರಜ್ಞೆಯ ಹಬ್ಬವಾಗಿದೆ. ದೇಶದ ಮತ್ತು ಪ್ರಪಂಚದ ಕೋಟ್ಯಂತರ ಭಕ್ತರು ಪ್ರಯಾಗ್ ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೌನಿ ಅಮವಾಸ್ಯೆಯ ದಿನದಂದು ಸಂಭವಿಸಿದ ಅಪಘಾತದ ಬಗ್ಗೆ ನಾನು ದುಃಖ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ಕೆಲವು ದಿನಗಳ ಹಿಂದೆಯಷ್ಟೇ ನಾವು ದೇಶದ ಮಾಜಿ ಪ್ರಧಾನಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಜಿ ಅವರನ್ನು ಕಳೆದುಕೊಂಡೆವು. ಮನಮೋಹನ್ ಸಿಂಗ್ ಜಿ ಪ್ರಧಾನಿಯಾಗಿ 10 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದರು ಮತ್ತು ಅವರು ದೀರ್ಘಕಾಲ ಸಂಸತ್ತಿನ ಸದಸ್ಯರೂ ಆಗಿದ್ದರು. ಮನಮೋಹನ್ ಸಿಂಗ್ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.
ಗೌರವಾನ್ವಿತ ಸದಸ್ಯರೇ,
ಇಂದು, ನನ್ನ ಸರ್ಕಾರವು ಅಭೂತಪೂರ್ವ ಸಾಧನೆಗಳ ಮೂಲಕ ಭಾರತದ ಅಭಿವೃದ್ಧಿ ಪಯಣದ ಈ ಅಮೃತ ಕಾಲಕ್ಕೆ ಹೊಸ ಶಕ್ತಿಯನ್ನು ನೀಡುತ್ತಿದೆ. ಮೂರನೇ ಅವಧಿಯಲ್ಲಿ, ಕೆಲಸದ ವೇಗವು ಮೂರು ಪಟ್ಟು ಹೆಚ್ಚಾಗಿದೆ. ಇಂದು, ದೇಶವು ಪ್ರಮುಖ ನಿರ್ಧಾರಗಳು ಮತ್ತು ನೀತಿಗಳನ್ನು ಅಸಾಧಾರಣ ವೇಗದಲ್ಲಿ ಜಾರಿಗೆ ತರುವುದನ್ನು ನೋಡುತ್ತಿದೆ. ಮತ್ತು ಈ ನಿರ್ಧಾರಗಳಲ್ಲಿ, ದೇಶದ ಬಡವರು, ಮಧ್ಯಮ ವರ್ಗ, ಯುವಕರು, ಮಹಿಳೆಯರು ಮತ್ತು ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನನ್ನ ಸರ್ಕಾರ ತನ್ನ ಮೂರನೇ ಅವಧಿಯಲ್ಲಿ “ಎಲ್ಲರಿಗೂ ವಸತಿ”ಯನ್ನು ಒದಗಿಸುವ ಉದ್ದೇಶವನ್ನು ಸಾಧಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಂಡಿದೆ. ಮೂರು ಕೋಟಿ ಹೆಚ್ಚುವರಿ ಕುಟುಂಬಗಳಿಗೆ ಹೊಸ ಮನೆಗಳನ್ನು ಒದಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 5,36,000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ನನ್ನ ಸರ್ಕಾರವು ಹಳ್ಳಿಗಳಲ್ಲಿರುವ ಬಡವರಿಗೆ ವಸತಿ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ನೀಡಲು ಮತ್ತು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಲು ಬದ್ಧವಾಗಿದೆ. ಈ ದಿಕ್ಕಿನಲ್ಲಿ, ಇಲ್ಲಿಯವರೆಗೆ 2.25 ಕೋಟಿ ಆಸ್ತಿ ಕಾರ್ಡ್‌ಗಳನ್ನು ಸ್ವಾಮಿತ್ವ (SVAMITVA)(ಯೋಜನೆಯಡಿಯಲ್ಲಿ ನೀಡಲಾಗಿದೆ. ಇವುಗಳಲ್ಲಿ ಸುಮಾರು 70 ಲಕ್ಷ ಆಸ್ತಿ ಕಾರ್ಡ್‌ಗಳನ್ನು ಕಳೆದ ಆರು ತಿಂಗಳಲ್ಲಿಯೇ ವಿತರಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಕೋಟ್ಯಂತರ ರೈತರಿಗೆ 41,000 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.
ಬುಡಕಟ್ಟು ಸಮುದಾಯಗಳ ಐದು ಕೋಟಿ ಜನರ ಉನ್ನತಿಗಾಗಿ "ಧರ್ತಿ ಆಬಾ ಬುಡಕಟ್ಟು ಗ್ರಾಮ ಉತ್ಕರ್ಷ್" ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮಕ್ಕಾಗಿ 80,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಆರು ಕೋಟಿ ಹಿರಿಯ ನಾಗರಿಕರಿಗೆ ಪ್ರತಿ ವರ್ಷ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಸಿಗಲಿದೆ.
ಸಣ್ಣ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿಯ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ನನ್ನ ಸರ್ಕಾರ ಯುವಜನರ ಶಿಕ್ಷಣ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ವಿಶೇಷ ಗಮನ ಹರಿಸಿದೆ. ಉನ್ನತ ಶಿಕ್ಷಣಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಂದು ಕೋಟಿ ಯುವಕರಿಗೆ ಅಗ್ರ ಐದುನೂರು ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಮತ್ತು ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.
ಸಹಕಾರದಿಂದ ಸಮೃದ್ಧಿಯ ಮನೋಭಾವವನ್ನು ಅನುಸರಿಸಿ, ಸರ್ಕಾರವು 'ತ್ರಿಭುವನ್' ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೇ ಹಂತದಲ್ಲಿ 25,000 ವಸತಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರವು 70,000 ಕೋಟಿ ರೂಪಾಯಿ.ಗಳನ್ನು ಅನುಮೋದಿಸಿದೆ. ಇಂದು, ನಮ್ಮ ದೇಶವು ಅಟಲ್ ಜಿ ಅವರ ಜನ್ಮ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿರುವಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವುದನ್ನು ಮುಂದುವರೆಸಿದೆ.
ದೇಶದಲ್ಲಿ ಈಗ 71 ವಂದೇ ಭಾರತ್, ಅಮೃತ ಭಾರತ್ ಮತ್ತು ನಮೋ ಭಾರತ್ ರೈಲುಗಳು ಓಡುತ್ತಿದ್ದು, ಕಳೆದ ಆರು ತಿಂಗಳಲ್ಲಿಯೇ 17 ಹೊಸ ವಂದೇ ಭಾರತ್ ಮತ್ತು ಒಂದು ನಮೋ ಭಾರತ್ ರೈಲುಗಳನ್ನು ಸೇರಿಸಲಾಗಿದೆ.
"ಒಂದು ರಾಷ್ಟ್ರ-ಒಂದು ಚುನಾವಣೆ" ಮತ್ತು "ವಕ್ಫ್ ಕಾಯ್ದೆ ತಿದ್ದುಪಡಿ" ಯಂತಹ ನಿರ್ಣಾಯಕ ವಿಷಯಗಳ ಬಗ್ಗೆಯೂ ಸರ್ಕಾರವು ತ್ವರಿತ ಪ್ರಗತಿಯನ್ನು ಸಾಧಿಸಿದೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರದ ಒಂದು ದಶಕದ ಅವಧಿಯು ʼವಿಕಸಿತ ಭಾರತʼದ ಪ್ರಯಾಣಕ್ಕೆ ಹೊಸ ಶಕ್ತಿಯನ್ನು ನೀಡಿದೆ.
'ವಿಕಸಿತ ಭಾರತʼದ ದೃಷ್ಟಿಕೋನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಸಾಮೂಹಿಕ ಶಕ್ತಿ ಇದೆ, ದೇಶದ ಆರ್ಥಿಕ ಪ್ರಗತಿಗೆ ಮಾರ್ಗಸೂಚಿಯನ್ನು, ಡಿಜಿಟಲ್ ಕ್ರಾಂತಿಯ ರೂಪದಲ್ಲಿ ತಂತ್ರಜ್ಞಾನದ ಶಕ್ತಿ ಮತ್ತು ಆಧುನಿಕ ಮೂಲಸೌಕರ್ಯದ ಅಡಿಪಾಯವನ್ನು ಹೊಂದಿದೆ.
'ವಿಕಸಿತ ಭಾರತ'ದೆಡೆಗಿನ ಪ್ರಯಾಣವು ನಮ್ಮ ಸಂವಿಧಾನದ ಆದರ್ಶಗಳಿಂದ ಮಾರ್ಗದರ್ಶನ ಹೊಂದುವುದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ನಾಲ್ಕು ಪ್ರಮುಖ ತತ್ವಗಳಾದ ಸೇವೆ, ಉತ್ತಮ ಆಡಳಿತ, ಸಮೃದ್ಧಿ ಮತ್ತು ಸ್ವಾಭಿಮಾನವನ್ನು ತನ್ನ ಆಡಳಿತದ ಮೂಲದಲ್ಲಿ ಇರಿಸಿದೆ.
ಸುಧಾರಣೆ, ಸಾಧನೆ ಮತ್ತು ರೂಪಾಂತರದ ಸಂಕಲ್ಪದೊಂದಿಗೆ ಸರ್ಕಾರ ವೇಗವಾಗಿ ಮಂದುವರಿಯುತ್ತಿದೆ.
ನನ್ನ ಸರ್ಕಾರದ ಮಾರ್ಗದರ್ಶನ ನೀಡುವ ಮಂತ್ರ “ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮತ್ತು ಅದರ ಗುರಿಯು ʼವಿಕಸಿತ ಭಾರತʼದ ಸೃಷ್ಟಿ ಮಾಡುವುದಾಗಿದೆ.
ಗೌರವಾನ್ವಿತ ಸದಸ್ಯರೇ,
ದೇಶದ ಅಭಿವೃದ್ಧಿಯ ಲಾಭಗಳು ಸಮಾಜದ ಕಟ್ಟಕಡೆಯ ಅಂಚಿನಲ್ಲಿರುವ ವ್ಯಕ್ತಿಗೂ ತಲುಪಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಇದು ಅಂತ್ಯೋದಯದ ಸಾರ, ಇದಕ್ಕೆ ನನ್ನ ಸರ್ಕಾರ ಅಚಲವಾಗಿ ಬದ್ಧವಾಗಿದೆ.
ಬಡವರಿಗೆ ಗೌರವಯುತ ಜೀವನವನ್ನು ಒದಗಿಸಿದಾಗ, ಅದು ಬಡತನದ ವಿರುದ್ಧ ಹೋರಾಡಲು ಸಹಾಯ ಮಾಡುವ ಸಬಲೀಕರಣದ ಭಾವನೆಯನ್ನು ಅವರಿಗೆ ತುಂಬುತ್ತದೆ.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 10 ಕೋಟಿ ಉಚಿತ ಎಲ್.ಪಿ.ಜಿ ಸಂಪರ್ಕಗಳನ್ನು ನೀಡಲಾಗಿದೆ, 80 ಕೋಟಿ ನಿರ್ಗತಿಕರಿಗೆ ಪಡಿತರ, ಸೌಭಾಗ್ಯ ಯೋಜನೆ, ಜಲ ಜೀವನ್ ಮಿಷನ್ ಮತ್ತು ಅಂತಹ ಹಲವು ಯೋಜನೆಗಳು ಬಡವರಿಗೆ ತಾವು ಘನತೆಯಿಂದ ಬದುಕಬಲ್ಲೆವು ಎನ್ನುವ ವಿಶ್ವಾಸವನ್ನು ನೀಡಿವೆ. ಇಂತಹ ಪ್ರಯತ್ನಗಳಿಂದಾಗಿ, ದೇಶದ 25 ಕೋಟಿ ಜನರು ಇಂದು ಬಡತನವನ್ನು ಸೋಲಿಸಿ ತಮ್ಮ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಅವರು ನವ ಮಧ್ಯಮ ವರ್ಗದ ಗುಂಪನ್ನು ಸೃಷ್ಟಿಸಿದ್ದಾರೆ, ಇದು ಭಾರತದ ಬೆಳವಣಿಗೆಗೆ ಹೊಸ ಶಕ್ತಿಯನ್ನು ತುಂಬುತ್ತಿದೆ.
ಗೌರವಾನ್ವಿತ ಸದಸ್ಯರೇ,
ಭಾರತದಂತಹ ದೇಶದ ಆರ್ಥಿಕ ಪ್ರಗತಿಯನ್ನು ಮಧ್ಯಮ ವರ್ಗದ ಜನರ ಆಕಾಂಕ್ಷೆಗಳು ಮತ್ತು ಅವುಗಳ ಈಡೇರಿಕೆಯಿಂದ ವ್ಯಾಖ್ಯಾನಿಸಲಾಗುತ್ತದೆ. ಮಧ್ಯಮ ವರ್ಗದವರ ಕನಸುಗಳು ದೊಡ್ಡದಾದಷ್ಟೂ ದೇಶವು ಎತ್ತರಕ್ಕೆ ಹಾರುತ್ತದೆ. ನನ್ನ ಸರ್ಕಾರ ಮಧ್ಯಮ ವರ್ಗದ ಕೊಡುಗೆಯನ್ನು ಪ್ರತಿ ಸಂದರ್ಭದಲ್ಲೂ ಬಹಿರಂಗವಾಗಿ ಒಪ್ಪಿಕೊಂಡಿದೆ ಹಾಗು ಶ್ಲಾಘಿಸಿದೆ.
ಸರ್ಕಾರಿ ನೌಕರರು ಸಹ ಮಧ್ಯಮ ವರ್ಗದ ಪ್ರಮುಖ ಪ್ರತಿನಿಧಿಗಳು. ಇತ್ತೀಚೆಗೆ ನನ್ನ ಸರ್ಕಾರ ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ ಎಂಟನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಈ ನಿರ್ಧಾರವು ಮುಂಬರುವ ವರ್ಷಗಳಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಪ್ರಮುಖ ಹೆಚ್ಚಳಕ್ಕೆ ಆಧಾರವಾಗಲಿದೆ.
ಹೆಚ್ಚುವರಿಯಾಗಿ, ಏಕೀಕೃತ ಪಿಂಚಣಿ ಯೋಜನೆಯಡಿ ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ 50% ಖಚಿತ ಪಿಂಚಣಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇದನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ.
ಮಧ್ಯಮ ವರ್ಗದವರ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು ನನ್ನ ಸರ್ಕಾರವು ಅಷ್ಟೇ ಬದ್ಧವಾಗಿದೆ. ರೇರಾ ನಂತಹ ಕಾನೂನುಗಳನ್ನು ಮಾಡುವ ಮೂಲಕ ಮಧ್ಯಮ ವರ್ಗದ ಕನಸುಗಳನ್ನು ರಕ್ಷಿಸಲಾಗಿದೆ. ಗೃಹ ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತಿದೆ.
ಉಡಾನ್ ಯೋಜನೆಯು ಸುಮಾರು 1.5 ಕೋಟಿ ಜನರ ವಿಮಾನದಲ್ಲಿ ಹಾರುವ ಕನಸನ್ನು ನನಸಾಗಿಸಿದೆ. ಜನೌಷಧಿ ಕೇಂದ್ರಗಳಲ್ಲಿ ಶೇ. 80 ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳು ಲಭ್ಯವಿರುವುದರಿಂದ ದೇಶದ ಜನರಿಗೆ 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಉಳಿತಾಯವಾಗಿದೆ. ಪ್ರತಿಯೊಂದು ವಿಭಾಗಗಗಳಲ್ಲಿ ಅಧ್ಯಯನ ಮಾಡಲು ಸೀಟುಗಳ ಸಂಖ್ಯೆಯಲ್ಲಿ ಹಲವು ಪಟ್ಟು ಹೆಚ್ಚಳದಿಂದ ಮಧ್ಯಮ ವರ್ಗವು ಹೆಚ್ಚಿನ ಪ್ರಯೋಜನವನ್ನು ಪಡೆದಿದೆ.
ರಾಷ್ಟ್ರ ನಿರ್ಮಾಣಕ್ಕೆ ತೆರಿಗೆದಾರರ ಪಾತ್ರವನ್ನು ಗುರುತಿಸಿ ನನ್ನ ಸರ್ಕಾರ ತೆರಿಗೆ ಸಂಬಂಧಿತ ವಿಷಯಗಳನ್ನು ಸರಳೀಕರಿಸಿದೆ. ತೆರಿಗೆ ವಿವಾದಗಳನ್ನು ಕಡಿಮೆ ಮಾಡಲು ಮುಖರಹಿತ ಮೌಲ್ಯಮಾಪನವನ್ನು ಪರಿಚಯಿಸುವ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ.
ಈಗ, 75 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಪಿಂಚಣಿ ಮಾತ್ರ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಬಗ್ಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮೂಲಕ ರಾಷ್ಟ್ರವನ್ನು ಸಬಲೀಕರಣಗೊಳಿಸುವಲ್ಲಿ ದೃಢವಾಗಿ ನಂಬಿಕೆ ಇಟ್ಟಿದೆ.
ನಾರಿ ಶಕ್ತಿ ವಂದನ ಕಾಯ್ದೆಯ ಮೂಲಕ ಇರುವ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 91ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸಲಾಗುತ್ತಿದೆ. ದೇಶದ 10 ಕೋಟಿಗೂ ಹೆಚ್ಚು ಮಹಿಳೆಯರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ. ಬ್ಯಾಂಕ್ ಸಂಪರ್ಕದ ಮೂಲಕ ಅವರಿಗೆ ಒಟ್ಟು 9 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವಿತರಿಸಲಾಗಿದೆ.
ದೇಶದಲ್ಲಿ 3 ಕೋಟಿ ಲಖಪತಿ ದೀದಿಗಳನ್ನು ಸೃಷ್ಟಿಸುವುದು ನನ್ನ ಸರ್ಕಾರದ ಗುರಿ. ಇಂದು 1.15 ಹೆಚ್ಚು ಲಖಪತಿ ದೀದಿಗಳು ಗೌರವಯುತ ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಸುಮಾರು 50 ಲಕ್ಷ ಜನರು ಕಳೆದ 6 ತಿಂಗಳಲ್ಲಿ ಲಖಪತಿಗಳಾಗಿದ್ದಾರೆ. ಈ ಮಹಿಳೆಯರು ಉದ್ಯಮಿಗಳಾಗಿ ತಮ್ಮ ಕುಟುಂಬದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ.
“ಎಲ್ಲರಿಗೂ ವಿಮೆ” ಎನ್ನುವ ಭಾವನೆಯೊಂದಿಗೆ, ಕೆಲವು ತಿಂಗಳ ಹಿಂದೆ ಬಿಮಾ ಸಖಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ನಮ್ಮ ಬ್ಯಾಂಕಿಂಗ್ ಮತ್ತು ಡಿಜಿ ಪಾವತಿ ಸಖಿಗಳು ದೂರದ ಪ್ರದೇಶಗಳ ಜನರನ್ನು ಹಣಕಾಸು ವ್ಯವಸ್ಥೆಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಕೃಷಿ ಸಖಿಗಳು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಪಶು ಸಖಿಗಳ ಮೂಲಕ ನಮ್ಮ ಜಾನುವಾರು ಸಂಪನ್ಮೂಲಗಳನ್ನು ಬಲಪಡಿಸುತ್ತಿದ್ದಾರೆ.
ಡ್ರೋನ್ ದೀದಿ ಯೋಜನೆ ಮಹಿಳೆಯರ ಆರ್ಥಿಕ ಮತ್ತು ತಾಂತ್ರಿಕ ಸಬಲೀಕರಣದ ಮಾಧ್ಯಮವಾಗಿದೆ.
ಭಾರತದ ಹೆಣ್ಣುಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ, ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ ಮತ್ತು ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರೂ ಆಗಿದ್ದಾರೆ ಎನ್ನುವುದು ಈ ಸಂಸತ್ತಿಗೆ ಹೆಮ್ಮೆಯ ವಿಷಯವಾಗಿದೆ. ನನ್ನ ಸರ್ಕಾರದ ನಿರ್ಧಾರದ ನಂತರ, ರಾಷ್ಟ್ರೀಯ ಮಿಲಿಟರಿ ಶಾಲೆಗಳಲ್ಲಿ ಹುಡುಗಿಯರ ನೇಮಕಾತಿ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳಾ ಕೆಡೆಟ್‌ಗಳ ನೇಮಕಾತಿ ಕೂಡ ಆರಂಭವಾಗಿದೆ.
ನಮ್ಮ ಹೆಣ್ಣುಮಕ್ಕಳು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತರುತ್ತಿದ್ದಾರೆ.
ಈ ಸಂಸತ್ತಿನ ಮೂಲಕ, ನಾನು 'ನಾರಿ ಶಕ್ತಿ'ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಗೌರವಾನ್ವಿತ ಸದಸ್ಯರೇ,
ಕಳೆದ ದಶಕದಲ್ಲಿ, ಭಾರತದ ಯುವಕರು ಮುಂದೆ ಬಂದು ದೇಶದ ಪ್ರತಿಯೊಂದು ಪ್ರಮುಖ ಪ್ರಯತ್ನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂದು ನಮ್ಮ ಯುವಕರು ನವೋದ್ಯಮಗಳಿಂದ ಹಿಡಿದು ಕ್ರೀಡೆ ಮತ್ತು ಬಾಹ್ಯಾಕಾಶದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ದೇಶವು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಮೈ ಭಾರತ್ ಪೋರ್ಟಲ್ ಮೂಲಕ ಲಕ್ಷಾಂತರ ಯುವಕರು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಯುವಕರಿಗೆ ಅನೇಕ ಉದ್ಯೋಗಾವಕಾಶಗಳನ್ನು ಒದಗಿಸಿವೆ. ಕಳೆದ ಎರಡು ವರ್ಷಗಳಲ್ಲಿ, ಸರ್ಕಾರವು ದಾಖಲೆಯ 10 ಲಕ್ಷ ಶಾಶ್ವತ ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ.
ನನ್ನ ಸರ್ಕಾರವು ಯುವಕರ ಉತ್ತಮ ಕೌಶಲ್ಯ ಮತ್ತು ಹೊಸ ಅವಕಾಶಗಳ ಸೃಷ್ಟಿಗಾಗಿ 2 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಅನುಮೋದಿಸಿದೆ.
ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮವು, ಅವರಿಗೆ ನೈಜ ಪ್ರಪಂಚದ ವಾಸ್ತವವಾಗಿ ಕೆಲಸ ಮಾಡುವ ಅನುಭವವನ್ನು ಒದಗಿಸುತ್ತದೆ.
ಇಂದು ದೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ನವೋದ್ಯಮಗಳಿದ್ದು, ಅವು ನಾವೀನ್ಯತೆಯ ಆಧಾರಸ್ತಂಭಗಳಾಗಿ ಹೊರಹೊಮ್ಮುತ್ತಿವೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ವೆಂಚರ್ ಫಂಡ್ ನಿಧಿಯನ್ನು ಪ್ರಾರಂಭಿಸಲಾಗಿದೆ.
2025 ರ ಕ್ಯೂ ಎಸ್ ವಿಶ್ವ ಭವಿಷ್ಯದ ಕೌಶಲ್ಯ ಸೂಚ್ಯಂಕದಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿ, ಕೆಲಸದ ಭವಿಷ್ಯ ವಿಭಾಗದಲ್ಲಿ, ಭಾರತವು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದಾಳತ್ವವನ್ನು ಪ್ರದರ್ಶಿಸುತ್ತಿದೆ.
ಗ್ಲೋಬಲ್ ಇನ್ನೋವೇಷನ್ ಇಂಡೆಕ್ಸ್ (ಜಾಗತಿಕ ನಾವೀನ್ಯತೆ ಸೂಚ್ಯಂಕ) ದಲ್ಲಿ ಭಾರತದ ಶ್ರೇಯಾಂಕವು ಗಮನಾರ್ಹವಾಗಿ ಸುಧಾರಣೆಯಾಗಿದ್ದು, 76 ನೇ ಸ್ಥಾನದಿಂದ 39 ನೇ ಸ್ಥಾನಕ್ಕೆ ಏರಿದೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ.
ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಹೆಚ್ಚುವರಿಯಾಗಿ ಹದಿಮೂರು ಭಾರತೀಯ ಭಾಷೆಗಳಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಮೂಲಕ ಭಾಷಾ ಅಡೆತಡೆಗಳನ್ನು ತೆಗೆದುಹಾಕಲಾಗುತ್ತಿದೆ.
ಮಕ್ಕಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಹತ್ತು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ತೆರೆಯಲಾಗಿದೆ.
ಇತ್ತೀಚೆಗೆ "ಸಂಶೋಧನೆಯನ್ನು ಹೆಚ್ಚು ಸುಲಭಗೊಳಿಸುವುದಕ್ಕಾಗಿ" ಒಂದು ರಾಷ್ಟ್ರ-ಒಂದು ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಲಾಗಿದೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಸಾಮಗ್ರಿಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ. ಕಳೆದ ದಶಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳ ಗುಣಮಟ್ಟವೂ ಗಮನಾರ್ಹವಾಗಿ ಸುಧಾರಿಸಿದೆ. ಏಷ್ಯಾದ ಕ್ಯೂ ಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳಲ್ಲಿ 163 ಭಾರತದ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟಿಸುವ ಮೂಲಕ, ಶಿಕ್ಷಣದಲ್ಲಿ ಭಾರತದ ಹಳೆಯ ವೈಭವದ ಪುನರುಜ್ಜೀವನಗೊಳಿಸಲಾಗಿದೆ.
ಭಾರತದಲ್ಲಿ ನಿರ್ಮಿಸಲಾದ ಗಗನಯಾನ್ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯರು ಬಾಹ್ಯಾಕಾಶಕ್ಕೆ ಹೋಗುವ ದಿನ ದೂರವಿಲ್ಲ. ಕೆಲವು ದಿನಗಳ ಹಿಂದೆ ಬಾಹ್ಯಾಕಾಶ ಡಾಕಿಂಗ್‌ನಲ್ಲಿನ ಯಶಸ್ಸು ಭಾರತದ ಸ್ವಂತ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಮತ್ತಷ್ಟು ದಾರಿಯನ್ನು ಮಾಡಿದೆ.
ಕೆಲವೇ ದಿನಗಳ ಹಿಂದೆ, ಇಸ್ರೋ ತನ್ನ 100ನೇ ಉಡಾವಣೆಯನ್ನು ನಡೆಸಿ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.. ಈ ಸಾಧನೆಗಾಗಿ ನಾನು ಇಸ್ರೋ ಮತ್ತು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.
ಗೌರವಾನ್ವಿತ ಸದಸ್ಯರೇ,
ದೇಶದಲ್ಲಿ ವಿಶ್ವ ದರ್ಜೆಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವ ಸಲುವಾಗಿ ನನ್ನ ಸರ್ಕಾರ ಖೇಲೋ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿದೆ; ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ TOPS ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಂತಹ ಹಲವು ಕ್ರಮಗಳು ಉಪಕ್ರಮಗಳು ಈ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಿವೆ.
ವಿಶೇಷಚೇತನ (ದಿವ್ಯಾಂಗ) ಕ್ರೀಡಾಪಟುಗಳಿಗಾಗಿ ವಿಶೇಷ ಕ್ರೀಡಾ ಕೇಂದ್ರವನ್ನು ಗ್ವಾಲಿಯರ್‌ನಲ್ಲಿ ತೆರೆಯಲಾಗಿದೆ.
ಒಲಿಂಪಿಕ್ಸ್ ಆಗಿರಲಿ ಅಥವಾ ಪ್ಯಾರಾಲಿಂಪಿಕ್ಸ್ ಆಗಿರಲಿ, ಎಲ್ಲೆಡೆ ಭಾರತೀಯ ತಂಡಗಳು ನಿರಂತರವಾಗಿ ಅದ್ಭುತ ಪ್ರದರ್ಶನ ನೀಡಿವೆ. ಇತ್ತೀಚೆಗೆ, ಭಾರತವು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಗಮನಾರ್ಹ ಯಶಸ್ಸನ್ನು ಸಾಧಿಸಿದೆ.
ಫಿಟ್ ಇಂಡಿಯಾ ಆಂದೋಲನದ ನಡೆಸುವ ಮೂಲಕ, ನಾವು ಸಶಕ್ತ ಯುವ ಶಕ್ತಿಯನ್ನು ನಿರ್ಮಿಸುತ್ತಿದ್ದೇವೆ.
ಗೌರವಾನ್ವಿತ ಸದಸ್ಯರೇ,
ʼವಿಕಸಿತ ಭಾರತʼವನ್ನು ನಿರ್ಮಿಸುವಲ್ಲಿ ರೈತರು, ಸೈನಿಕರು ಮತ್ತು ವಿಜ್ಞಾನದ ಮಾತ್ರದ ಜೊತೆ ಸಂಶೋಧನೆಗಳು ಅಪಾರ ಮಹತ್ವವನ್ನು ಹೊಂದಿವೆ. ಭಾರತವನ್ನು ಜಾಗತಿಕ ನಾವೀನ್ಯತೆ ಶಕ್ತಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ.
ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು, 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ.
"ವಿದ್ಯಾಧಾರ ಯೋಜನೆ"ಯಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲಾಗುತ್ತಿದೆ, ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಗಳ ಹೂಡಿಕೆಯನ್ನು ಮಾಡಲಾಗುತ್ತಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಹೆಚ್ಚಿಸಲು "ಇಂಡಿಯಾ ಎಐ ಮಿಷನ್" ಅನ್ನು ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಕ್ವಾಂಟಮ್ ಮಿಷನ್ ಭಾರತವನ್ನು ನವೀನ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಸ್ಥಾನ ನೀಡುವ ಗುರಿಯನ್ನು ಹೊಂದಿದೆ.
ಜೈವಿಕ ಉತ್ಪಾದನೆಯನ್ನು ಹೆಚ್ಚಿಸಲು ನನ್ನ ಸರ್ಕಾರ ಬಯೋಇ 3 ನೀತಿಯನ್ನು ಪರಿಚಯಿಸಿದೆ.
ಈ ನೀತಿಯು ಭವಿಷ್ಯದ ಕೈಗಾರಿಕಾ ಕ್ರಾಂತಿಯ ಹಿಂದಿನ ಪ್ರೇರಕ ಶಕ್ತಿಯಾಗಲಿದೆ. ಜೈವಿಕ ಆರ್ಥಿಕತೆಯ ಉದ್ದೇಶ ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ಬಳಕೆಯಾಗಿದ್ದು, ಇದು ಪರಿಸರವನ್ನು ಸಂರಕ್ಷಿಸುವುದರ ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಗೌರವಾನ್ವಿತ ಸದಸ್ಯರೇ,
ನೀತಿ ಜಾರಿಯಲ್ಲಿ ಅಡೆತಡೆ ಮುಂತಾದ ಸನ್ನಿವೇಶಗಳಿಂದ ಆರ್ಥಿಕತೆಯನ್ನು ರಕ್ಷಿಸಲು ನನ್ನ ಸರ್ಕಾರ ಬಲವಾದ ಇಚ್ಛಾಶಕ್ತಿಯಿಂದ ಕೆಲಸ ಮಾಡಿದೆ. ಕೋವಿಡ್, ನಂತರದ ಪರಿಸ್ಥಿತಿ ಮತ್ತು ಯುದ್ಧದಂತಹ ಜಾಗತಿಕ ಕಳವಳಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ತೋರಿಸಿರುವ ಸ್ಥಿರತೆ ಮತ್ತು ಚೇತರಿಕೆಯು ಅದರ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ʼಸುಲಭ ವ್ಯವಹಾರʼವನ್ನು ಉತ್ತೇಜಿಸಲು ನನ್ನ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಜಾರಿಗೆ ತಂದಿದೆ.
'ಒಂದು ರಾಷ್ಟ್ರ, ಒಂದು ತೆರಿಗೆ' ಎಂಬ ಭಾವದೊಂದಿಗೆ, ಜಿ.ಎಸ್.ಟಿ. ವ್ಯವಸ್ಥೆಯನ್ನು ಪರಿಚಯಿಸಲಾಯಿತು, ಇದು ದೇಶಾದ್ಯಂತ ಎಲ್ಲಾ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತಿದೆ.
'ಮೇಕ್ ಇನ್ ಇಂಡಿಯಾʼದಂತಹ ನೀತಿಗಳಿಂದಾಗಿ, ಅನೇಕ ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳು ಈಗ ತಮ್ಮ ಉತ್ಪನ್ನಗಳ ಮೇಲೆ 'ಮೇಡ್ ಇನ್ ಇಂಡಿಯಾ' ಎನ್ನುವ ಲೇಬಲ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತವೆ.
ಗೌರವಾನ್ವಿತ ಸದಸ್ಯರೇ,
ಭಾರತದ ಸಣ್ಣ ಉದ್ಯಮಿಗಳು, ಹಳ್ಳಿಗಳಿಂದ ನಗರಗಳವರೆಗೆ, ಆರ್ಥಿಕ ಪ್ರಗತಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳನ್ನು ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸುತ್ತದೆ ಹಾಗು ಅವರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ.
ಎಂ.ಎಸ್.ಎಂ.ಇ. ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮತ್ತು ಇ-ಕಾಮರ್ಸ್ ರಫ್ತು ಕೇಂದ್ರಗಳ ಸ್ಥಾಪನೆಯು ವಿವಿಧ ಕೈಗಾರಿಕೆಗಳನ್ನು ಉತ್ತೇಜಿಸುತ್ತಿದೆ.
ಈ ಮೂರನೇ ಅವಧಿಯಲ್ಲಿ, ಮುದ್ರಾ ಯೋಜನೆಯಡಿ ಸಾಲದ ಮಿತಿಯನ್ನು 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ಇದು ಕೋಟ್ಯಂತರ ಸಣ್ಣ ಉದ್ಯಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ನನ್ನ ಸರ್ಕಾರ ಸಾಲ ಸೌಲಭ್ಯವನ್ನು ಸುಲಭಗೊಳಿಸಿದೆ. ಇದು ಹಣಕಾಸು ಸೇವೆಗಳನ್ನು ಸಾರ್ವತ್ರಿಕಗೊಳಿಸಿದೆ. ಇಂದು ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು, ವಿಮೆಯಂತಹ ಉತ್ಪನ್ನಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿವೆ.
ದಶಕಗಳಿಂದ, ಬೀದಿ ವ್ಯಾಪಾರಿಗಳಾಗಿ ಗಳಿಸುತ್ತಿದ್ದ ನಮ್ಮ ಸಹೋದರ ಸಹೋದರಿಯರು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗೆ ಇದ್ದರು. ಇಂದು ಅವರು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ, ಇದು ಅವರ ಡಿಜಿಟಲ್ ವಹಿವಾಟು ದಾಖಲೆಗಳ ಆಧಾರದ ಮೇಲೆ ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಹೆಚ್ಚುವರಿ ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಒ.ಎನ್.ಡಿ.ಸಿ ವ್ಯವಸ್ಥೆಯು ಡಿಜಿಟಲ್ ವಾಣಿಜ್ಯ ವ್ಯವಸ್ಥೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಿದೆ. ಇಂದು, ಆನ್‌ಲೈನ್ ಶಾಪಿಂಗ್ ಪರಿಸರ ವ್ಯವಸ್ಥೆಯಲ್ಲಿ ದೇಶದಲ್ಲಿ ಸಣ್ಣ ವ್ಯಾಪಾರಿಗಳು ಸಹ ಬೆಳೆಯಲು ಸಮಾನ ಅವಕಾಶವನ್ನು ಪಡೆಯುತ್ತಿದ್ದಾರೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರ ಹತ್ತು ವರ್ಷಗಳಲ್ಲಿ ಬರೆದ ಪ್ರಗತಿಯ ಹೊಸ ಅಧ್ಯಾಯಗಳಲ್ಲಿ, ಭಾರತದ ಡಿಜಿಟಲ್ ಕ್ರಾಂತಿಯು ಒಂದು ಸುವರ್ಣ ಮೈಲಿಗಲ್ಲಾಗಿದೆ.
ಇಂದು ಭಾರತವು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಆಟಗಾರನಾಗಿ ಹೊರಹೊಮ್ಮಿದೆ ವಿಶ್ವದ ಪ್ರಮುಖ ದೇಶಗಳೊಂದಿಗೆ ಭಾರತದಲ್ಲಿ 5ಜಿ ಸೇವೆಗಳ ಆರಂಭವು ಈ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಭಾರತದ ಯ.ಪಿ.ಐ. ತಂತ್ರಜ್ಞಾನವು ಅನೇಕ ಅಭಿವೃದ್ಧಿ ಹೊಂದಿದ ದೇಶಗಳ ಮೇಲೂ ಪ್ರಭಾವ ಬೀರಿದೆ. ವಿಶ್ವದ ನೈಜಸಮಯದ ಡಿಜಿಟಲ್ ವಹಿವಾಟುಗಳಲ್ಲಿ 50% ಕ್ಕಿಂತ ಹೆಚ್ಚು ಭಾಗ ಈಗ ಭಾರತದಲ್ಲಿ ನಡೆಯುತ್ತದೆ.
ನನ್ನ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ಸಾಧನವಾಗಿ ಬಳಸಿಕೊಂಡಿದೆ. ಡಿಜಿಟಲ್ ಪಾವತಿಗಳು ಇನ್ನು ಮುಂದೆ ಕೇವಲ ಆಯ್ದ ವ್ಯಕ್ತಿಗಳು ಅಥವಾ ವರ್ಗಗಳಿಗೆ ಸೀಮಿತವಾಗಿಲ್ಲ. ಇಂದು, ಭಾರತದ ಚಿಕ್ಕ ಅಂಗಡಿಯವರು ಸಹ ಈ ಸೌಲಭ್ಯದಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಬ್ಯಾಂಕಿಂಗ್ ಸೇವೆಗಳು ಮತ್ತು ಯ.ಪಿ.ಐ ನಂತಹ ವಿಶ್ವ ದರ್ಜೆಯ ತಂತ್ರಜ್ಞಾನವು ಈಗ ಹಳ್ಳಿಗಳಲ್ಲಿಯೂ ಲಭ್ಯವಿದೆ. ಕಳೆದ ಹತ್ತು ವರ್ಷಗಳಲ್ಲಿ, 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನಾಗರಿಕರಿಗೆ ಹಲವಾರು ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಲು ಅವಕಾಶ ಮಾಡಿಕೊಡುತ್ತದೆ.
ಜನರ ದೈನಂದಿನ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು, ನನ್ನ ಸರ್ಕಾರವು ಇ-ಆಡಳಿತಕ್ಕೆ ಒತ್ತು ನೀಡಿದೆ. ಉದಾಹರಣೆಗೆ, ಡಿಜಿಲಾಕರ್ ವ್ಯಕ್ತಿಗಳು ತಮ್ಮ ಪ್ರಮುಖ ದಾಖಲೆಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಪಡೆಯಲು ಮತ್ತು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.
ಏನೇ ಆದರೂ, ಹೆಚ್ಚುತ್ತಿರುವ ಡಿಜಿಟಲ್ ಸಮಾಜದಲ್ಲಿ, ಸೈಬರ್ ಸುರಕ್ಷತೆಯು ರಾಷ್ಟ್ರೀಯ ಪ್ರಾಮುಖ್ಯತೆಯ ನಿರ್ಣಾಯಕ ವಿಷಯವಾಗಿದೆ. ಡಿಜಿಟಲ್ ವಂಚನೆ, ಸೈಬರ್ ಅಪರಾಧ ಮತ್ತು ಡೀಪ್ ಫ್ರಾಡ್ ಗಳಂತಹ ಹೊಸ ತಂತ್ರಜ್ಞಾನಗಳು ನಮ್ಮ ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸವಾಲುಗಳನ್ನು ಒಡ್ಡುತ್ತವೆ. ಈ ಸೈಬರ್ ಬೆದರಿಕೆಗಳನ್ನು ನಿಯಂತ್ರಿಸಲು ನನ್ನ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಯುವಕರಿಗೆ ಸೈಬರ್ ಭದ್ರತಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸೈಬರ್ ಭದ್ರತೆಯಲ್ಲಿ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನನ್ನ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಪ್ರಯತ್ನಗಳ ಪರಿಣಾಮವಾಗಿ, ಭಾರತವು ಜಾಗತಿಕ ಸೈಬರ್ ಭದ್ರತಾ ಸೂಚ್ಯಂಕದಲ್ಲಿ ಶ್ರೇಣಿ-1ರ ಸ್ಥಾನವನ್ನು ಸಾಧಿಸಿದೆ.
ಗೌರವಾನ್ವಿತ ಸದಸ್ಯರೇ,
ಯಾವುದೇ ದೇಶದ ಆಧುನಿಕ ಮೂಲಸೌಕರ್ಯವು ತನ್ನ ನಾಗರಿಕರಿಗೆ ಉತ್ತಮ ಜೀವನವನ್ನು ಒದಗಿಸುವುದಲ್ಲದೆ ಮತ್ತು ರಾಷ್ಟ್ರಕ್ಕೆ ಹೊಸ ಗುರುತನ್ನು ನೀಡುತ್ತದೆ ಮಾತ್ರವಲ್ಲದೆ ರಾಷ್ಟ್ರದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬುತ್ತದೆ. ಕಳೆದ ದಶಕದಲ್ಲಿ, ಭಾರತವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಈ ಆಧುನಿಕ ಮೂಲಸೌಕರ್ಯವು ಜಾಗತಿಕವಾಗಿ ಭಾರತದ ಚಿತ್ರಣವನ್ನು ಬಲಪಡಿಸಿದೆ, ರಾಷ್ಟ್ರದಲ್ಲಿ ಹೂಡಿಕೆದಾರರ ನಂಬಿಕೆಯನ್ನು ಹೆಚ್ಚಿಸಿದೆ, ಕೈಗಾರಿಕೆಗಳನ್ನು ಹೆಚ್ಚಿಸಿದೆ ಹಾಗು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ದೇಶದ ಪ್ರತಿಯೊಂದು ಭಾಗವನ್ನು ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳೊಂದಿಗೆ ಸಂಪರ್ಕಿಸಲು ನನ್ನ ಸರ್ಕಾರ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ. ʼಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಯೋಜನೆಗಳ ಪೂರ್ಣಗೊಳಿಸುವಿಕೆಯ ವೇಗವನ್ನು ಹೆಚ್ಚಿಸಿದೆ.
ಹತ್ತು ವರ್ಷಗಳ ಹಿಂದೆ, ಮೂಲಸೌಕರ್ಯ ಬಜೆಟ್ ಸುಮಾರು 2 ಲಕ್ಷ ಕೋಟಿ ರೂಪಾಯಿಗಳಾಗಿತ್ತು, ಅದು ಈಗ ಕಳೆದ ಬಜೆಟ್‌ನಲ್ಲಿ 11 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ.
ಕಳೆದ ದಶಕದ ಪ್ರಗತಿಯನ್ನು ಮುಂದುವರೆಸುತ್ತಾ, ನನ್ನ ಸರ್ಕಾರವು ಕಳೆದ ಆರು ತಿಂಗಳಲ್ಲಿ ಭವಿಷ್ಯದ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡಿದೆ.
ವಾಧವಣ್ ನಲ್ಲಿ ಭಾರತದ ಮೊದಲ ಆಳವಾದ ನೀರಿನ ಮೆಗಾ ಬಂದರಿಗೆ ಅಡಿಪಾಯ ಹಾಕಲಾಗಿದೆ. 76,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಬಂದರು ವಿಶ್ವದ ಅಗ್ರ ಹತ್ತು ಬಂದರುಗಳಲ್ಲಿ ಒಂದಾಗುವ ಸ್ಥಾನ ಪಡೆಯುತ್ತದೆ.
ಕಾಶ್ಮೀರದಿಂದ ಕನ್ಯಾಕುಮಾರಿಗೆ ರೈಲ್ವೆ ಮಾರ್ಗದ ಮೂಲಕ ರಾಷ್ಟ್ರವನ್ನು ಸಂಪರ್ಕಿಸುವ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ ಪೂರ್ಣಗೊಂಡಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಭಾರತದ ಮೊದಲ ರೈಲು ಕೇಬಲ್ ಸೇತುವೆ, ಅಂಜಿ ಸೇತುವೆಯು ಪೂರ್ಣಗೊಂಡಿದೆ.
ಶಿಂಕುನ್ ಲಾ ಸುರಂಗದ ಕೆಲಸವೂ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಇದು ಪೂರ್ಣಗೊಂಡಾಗ, ಇದು ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ, ಲಡಾಖ್ ಮತ್ತು ಹಿಮಾಚಲ ಪ್ರದೇಶ ನಡುವೆ ವರ್ಷಪೂರ್ತಿ ಸಂಪರ್ಕವನ್ನು ಖಚಿತಪಡಿಸುತ್ತದೆ.
ಭಾರತದ ವಾಯುಯಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ದೇಶದ ವಿಮಾನಯಾನ ಕಂಪನಿಗಳು 1,700 ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಖರೀದಿ ಆದೇಶಗಳನ್ನು ನೀಡಿವೆ. ಇಷ್ಟು ದೊಡ್ಡ ಸಂಖ್ಯೆಯ ವಿಮಾನ ಹಾರಾಟಗಳನ್ನು ನಿರ್ವಹಿಸಲು ನಾವು ವಿಮಾನ ನಿಲ್ದಾಣಗಳನ್ನು ವಿಸ್ತರಿಸುತ್ತಿದ್ದೇವೆ. ಕಳೆದ ದಶಕದಲ್ಲಿ, ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಗೌರವಾನ್ವಿತ ಸದಸ್ಯರೇ,
ʼವಿಕಸಿತ ಭಾರತʼದ ಕಡೆಗೆ ಪ್ರಯಾಣವನ್ನು ವೇಗಗೊಳಿಸಲು, ನಮ್ಮ ನಗರಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ಅತ್ಯಗತ್ಯ.
ಈ ದಿಕ್ಕಿನಲ್ಲಿ, ನನ್ನ ಸರ್ಕಾರವು ನಗರ ಸೌಲಭ್ಯಗಳನ್ನು ಆಧುನೀಕರಿಸುವ ಮತ್ತು ಅವುಗಳನ್ನು ಇಂಧನ ದಕ್ಷತೆಯಾಗಿಸುವತ್ತ ಗಮನಹರಿಸಿದೆ. ಅದೇ ಸಮಯದಲ್ಲಿ, ಹೊಸ ನಗರಗಳ ಅಭಿವೃದ್ಧಿಗೆ ಅಡಿಪಾಯ ಹಾಕಲಾಗುತ್ತಿದೆ.
ನನ್ನ ಸರ್ಕಾರವು ದೇಶಾದ್ಯಂತ ನಗರಗಳ ಬಳಿ 12 ಕೈಗಾರಿಕಾ ಘಟಕಗಳು ಮತ್ತು 100 ಕೈಗಾರಿಕಾ ಪಾರ್ಕ್ ಗಳನ್ನು ಸುಮಾರು 28000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಸ್ಥಾಪಿಸಲು ನಿರ್ಧರಿಸಿದೆ.
ನಗರ ಸಾರಿಗೆಯನ್ನು ಸುಗಮಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ದೆಹಲಿ, ಪುಣೆ, ಥಾಣೆ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಯೋಜನೆಗಳು, ಇತ್ತೀಚೆಗೆ ಅಹಮದಾಬಾದ್-ಭುಜ್ ಮಾರ್ಗದಲ್ಲಿ ಪ್ರಾರಂಭಿಸಲಾದ ನಮೋ ಭಾರತ್ ರ‍್ಯಾಪಿಡ್ ರೈಲು ಸೇವೆಗಳೊಂದಿಗೆ, ವಿಕಸಿತ ಭಾರತ ನಗರಗಳನ್ನು ರೂಪಿಸುತ್ತಿವೆ. ಕೆಲವೇ ವಾರಗಳ ಹಿಂದೆ, ದೆಹಲಿಯ ರಿಥಾಲಾ-ನರೇಲಾ-ಕುಂಡ್ಲಿ ಕಾರಿಡಾರ್‌ನಲ್ಲಿ ಕೆಲಸ ಪ್ರಾರಂಭವಾಯಿತು, ಇದು ದೆಹಲಿ ಮೆಟ್ರೋ ಜಾಲದ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ. ನನ್ನ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ದೆಹಲಿಯಲ್ಲಿ ಮೆಟ್ರೋ ಮಾರ್ಗಗಳು ವೇಗವಾಗಿ ವಿಸ್ತರಿಸುತ್ತಿವೆ. 2014ರಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿ ಒಟ್ಟು ಮೆಟ್ರೋ ಜಾಲವು 200 ಕಿಲೋಮೀಟರ್‌ಗಳಿಗಿಂತ ಕಡಿಮೆಯಿತ್ತು. ಈಗ ಅದು ದ್ವಿಗುಣಗೊಂಡಿದೆ.
ಇಂದು, ಭಾರತದ ಮೆಟ್ರೋ ಜಾಲವು 1,000 ಕಿಲೋಮೀಟರ್‌ಗಳ ಮೈಲಿಗಲ್ಲನ್ನು ದಾಟಿದೆ ಎನ್ನುವ ವಿಷಯವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಮೆಟ್ರೋ ಜಾಲಗಳ ವಿಷಯದಲ್ಲಿ ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ.
ಹೆಚ್ಚುವರಿಯಾಗಿ, 8,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ದೇಶದಲ್ಲಿ 52,000 ವಿದ್ಯುತ್ ಬಸ್‌ಗಳನ್ನು ನಿಯೋಜಿಸುವ ನಿರ್ಧಾರವು ಸುಗಮ ಮತ್ತು ಸ್ವಚ್ಛ ನಗರ ಸಾರಿಗೆಯನ್ನು ಒದಗಿಸುತ್ತದೆ. ಈ ಉಪಕ್ರಮವು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸಂಪರ್ಕವನ್ನು ಹೆಚ್ಚಿಸಲು ಮತ್ತು ನಗರ ಪ್ರವಾಸೋದ್ಯಮವನ್ನು ಉತ್ತೇಜಿಸಲು, ದೇಶಾದ್ಯಂತ 15 ರೋಪ್‌ವೇ ಯೋಜನೆಗಳ ಬಗ್ಗೆ ಕೆಲಸ ನಡೆಯುತ್ತಿದೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರವು ಬಹು ಆಯಾಮದ, ಸಾಮರಸ್ಯ ಮತ್ತು ಸರ್ವವ್ಯಾಪಿ ಅಭಿವೃದ್ಧಿಯ ನೀತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿಯೇ, ನನ್ನ ಸರ್ಕಾರವು ಭೌತಿಕ ಮೂಲಸೌಕರ್ಯಕ್ಕೆ ಎಷ್ಟು ಒತ್ತು ನೀಡಿದೆಯೋ, ಅಷ್ಟೇ ತೀವ್ರವಾದ ಪ್ರಯತ್ನಗಳನ್ನು ಸಾಮಾಜಿಕ ಮೂಲಸೌಕರ್ಯ ಕ್ರಾಂತಿಗೂ ಮಾಡಿದೆ.
ಸಮಾಜದ ಪ್ರತಿಯೊಂದು ವರ್ಗಕ್ಕೂ ಕೈಗೆಟುಕುವ, ಸುಲಭವಾಗಿ ಸಿಗುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ತಲುಪುವುದು ನನ್ನ ಸರ್ಕಾರದ ಆದ್ಯತೆಯಾಗಿದೆ. ಸುಧಾರಿತ ಆಸ್ಪತ್ರೆಗಳು, ಚಿಕಿತ್ಸೆ ಮತ್ತು ಔಷಧಿಗಳ ವ್ಯವಸ್ಥೆಯಿಂದಾಗಿ, ಸಾಮಾನ್ಯ ಕುಟುಂಬಗಳಲ್ಲಿ ಆರೋಗ್ಯದ ಮೇಲಿನ ಖರ್ಚು ನಿರಂತರವಾಗಿ ಕಡಿಮೆಯಾಗುತ್ತಿದೆ.
ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ದೇಶಾದ್ಯಂತ 1,75,000 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ.
ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಮತ್ತು ಚಿಕಿತ್ಸೆಯ ಹೆಚ್ಚಿನ ವೆಚ್ಚವನ್ನು ಪರಿಗಣಿಸಿ, ಹಲವಾರು ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಸುಮಾರು 9 ಕೋಟಿ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಮಾಡಲಾಗಿದೆ.
ನನ್ನ ಸರ್ಕಾರದ ಪ್ರಯತ್ನಗಳಿಂದಾಗಿ, ಎನ್ಸೆಫಾಲಿಟಿಸ್ ಅನ್ನು ಎದುರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ, ಈ ಕಾಯಿಲೆಯಿಂದ ಉಂಟಾಗುವ ಮರಣ ಪ್ರಮಾಣವು 6% ಕ್ಕೆ ಇಳಿದಿದೆ.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ, ಕ್ಷಯರೋಗ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಕ್ಷಯರೋಗ ಮುಕ್ತ ಭಾರತ ಅಭಿಯಾನದ ಯಶಸ್ಸಿಗೆ ಕೊಡುಗೆ ನೀಡಬೇಕೆಂದು ನಾನು ಎಲ್ಲಾ ನಾಗರಿಕರು ಮತ್ತು ಗೌರವಾನ್ವಿತ ಸಂಸದರನ್ನು ಒತ್ತಾಯಿಸುತ್ತೇನೆ.
ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣದಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದೆ.
ಗರ್ಭಿಣಿಯರು ಮತ್ತು ಮಕ್ಕಳಿಗೆ ಲಸಿಕೆ ಕಾರ್ಯಕ್ರಮಗಳ ನಿಖರವಾಗಿ ಪತ್ತೆ ಹಚ್ಚಲು, ಯು-ವಿನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ, ಸುಮಾರು 30 ಕೋಟಿ ಲಸಿಕೆ ಡೋಸ್‌ಗಳನ್ನು ಈ ವೇದಿಕೆಯಲ್ಲಿ ದಾಖಲಿಸಲಾಗಿದೆ.
ಟೆಲಿಮೆಡಿಸಿನ್ ಮೂಲಕ, 30 ಕೋಟಿಗೂ ಹೆಚ್ಚು ಇ-ಟೆಲಿಕನ್ಸಲ್ಟೇಶನ್‌ಗಳು ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಿವೆ.
ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 75,000 ಹೊಸ ಸೀಟುಗಳನ್ನು ಸೃಷ್ಟಿಸುವ ಕೆಲಸವನ್ನೂ ಸರ್ಕಾರ ಮಾಡುತ್ತಿದೆ.
ಸರ್ಕಾರ ಆರೋಗ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ದೇಶದಲ್ಲಿ ಹೊಸ ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನಗಳ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಗೌರವಾನ್ವಿತ ಸದಸ್ಯರೇ,
ಭಾರತದಲ್ಲಿ ಆಧುನಿಕ ಮತ್ತು ಸ್ವಾವಲಂಬಿ ಕೃಷಿ ವ್ಯವಸ್ಥೆಯು ನಮ್ಮ ಗುರಿಯಾಗಿದೆ. ರೈತರಿಗೆ ಬೆಳೆಗಳ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ನನ್ನ ಸರ್ಕಾರ ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದೆ.
2023-24ರಲ್ಲಿ, ಭಾರತವು 332 ಮಿಲಿಯನ್ ಟನ್ ಆಹಾರ ಧಾನ್ಯಗಳ ದಾಖಲೆಯ ಉತ್ಪಾದನೆಯನ್ನು ಸಾಧಿಸಿದೆ. ಇಂದು, ಭಾರತವು ವಿಶ್ವದಲ್ಲೇ ಹಾಲು, ಧಾನ್ಯಗಳು ಮತ್ತು ಮಸಾಲೆಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.
ಸರ್ಕಾರವು ಖಾರಿಫ್ ಮತ್ತು ರಬಿ ಬೆಳೆಗಳೆರಡಕ್ಕೂ ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿರಂತರವಾಗಿ ಹೆಚ್ಚಿಸಿದೆ.
ಕಳೆದ ದಶಕದಲ್ಲಿ, ಭತ್ತ, ಗೋಧಿ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಒರಟು ಧಾನ್ಯಗಳ ಖರೀದಿಗೆ ಮೂರು ಪಟ್ಟು ಹೆಚ್ಚು ಹಣ ಖರ್ಚು ಮಾಡಲಾಗಿದೆ.
ಕಳೆದ 6 ತಿಂಗಳಲ್ಲಿ, 109 ಹವಾಮಾನ ಸ್ನೇಹಿ, ಜೈವಿಕ-ಬಲವರ್ಧಿತ ಮತ್ತು ಹೆಚ್ಚಿನ ಇಳುವರಿ ನೀಡುವ ಸುಧಾರಿತ ಬೆಳೆ ಪ್ರಭೇದಗಳನ್ನು ರೈತರಿಗೆ ನೀಡಲಾಗಿದೆ.
ಕೃಷಿ ಮೂಲಸೌಕರ್ಯವನ್ನು ಬಲಪಡಿಸಲು, ಕೃಷಿ ಮೂಲಸೌಕರ್ಯ ನಿಧಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಎಣ್ಣೆಬೀಜ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಖಾದ್ಯ ಎಣ್ಣೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು, ʼರಾಷ್ಟ್ರೀಯ ಎಣ್ಣೆಬೀಜಗಳ ಮಿಷನ್ʼ ಅನ್ನು ಅನುಮೋದಿಸಲಾಗಿದೆ.
ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಒಂದು ರಾಷ್ಟ್ರೀಯ ಮಿಷನ್ ಅನ್ನು ಸಹ ಜಾರಿಗೆ ತರಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ, ರೈತರಿಗೆ ಕೈಗೆಟುಕುವ ದರದಲ್ಲಿ ಡಿಎಪಿ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಪ್ಯಾಕೇಜ್‌ನ ಅವಧಿಯನ್ನು ವಿಸ್ತರಿಸಲಾಯಿತು.
ಮೀನುಗಾರಿಕೆಯನ್ನು ಉತ್ತೇಜಿಸಲು, 11 ʼಇಂಟಿಗ್ರೇಟೆಡ್ ಅಕ್ವಾ ಪಾರ್ಕ್ʼಗಳನ್ನು ಸ್ಥಾಪಿಸಲಾಗುತ್ತಿದೆ.
ಗೌರವಾನ್ವಿತ ಸದಸ್ಯರೇ,
ಕೆಲವು ವಾರಗಳ ಹಿಂದೆಯಷ್ಟೇ, ಭಾರತೀಯ ಹವಾಮಾನ ಇಲಾಖೆಯು ತನ್ನ 150 ವರ್ಷಗಳನ್ನು ಪೂರ್ಣಗೊಳಿಸಿತು. ಹವಾಮಾನಕ್ಕೆ ಸಿದ್ಧವಾದ ಮತ್ತು ಹವಾಮಾನ ಸ್ಮಾರ್ಟ್ ಭಾರತಕ್ಕಾಗಿ, ನನ್ನ ಸರ್ಕಾರ 2000 ಕೋಟಿ ರೂ. ವೆಚ್ಚದಲ್ಲಿ "ಮಿಷನ್ ಮೌಸಮ್" ಅನ್ನು ಪ್ರಾರಂಭಿಸಿದೆ, ಇದು ನಮ್ಮ ರೈತರಿಗೂ ಪ್ರಯೋಜನವನ್ನು ನೀಡುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ಅನುಸರಿಸಿ, ನಮ್ಮ ಸರ್ಕಾರವು ದೇಶದ ಬರ ಪೀಡಿತ ಪ್ರದೇಶಗಳಲ್ಲಿ ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸಲು ಎರಡು ಐತಿಹಾಸಿಕ ನದಿ ಜೋಡಣೆ ಯೋಜನೆಗಳಲ್ಲಿ ಪ್ರಗತಿ ಸಾಧಿಸಿದೆ
44,000 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದ ಕೆನ್-ಬೆಟ್ವಾ ಲಿಂಕ್ ಯೋಜನೆಯು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತದೆ.
ಪರಿಷ್ಕೃತ ಪರ್ಬತಿ-ಕಾಳಿಸಿಂಧ್-ಚಂಬಲ್ ಲಿಂಕ್ ಯೋಜನೆಯು ರಾಜಸ್ಥಾನ ಮತ್ತು ಮಧ್ಯಪ್ರದೇಶದ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತದೆ.
ಪೋಲಾವರಂ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.
ಗೌರವಾನ್ವಿತ ಸದಸ್ಯರೇ,
ನಮ್ಮ 8ಲಕ್ಷ ಸಹಕಾರಿ ಸಂಸ್ಥೆಗಳು ಮತ್ತು ಅವುಗಳ 29 ಕೋಟಿ ಪಾಲುದಾರ ಸದಸ್ಯರು ಗ್ರಾಮೀಣ ಭಾರತದ ಸುಮಾರು 90% ಭಾಗವನ್ನು ಪ್ರತಿನಿಧಿಸುತ್ತಾರೆ. ಕಳೆದ ವರ್ಷಗಳಲ್ಲಿ, ಸಹಕಾರಿ ಸಂಸ್ಥೆಗಳು ನಗರ ಪ್ರದೇಶಗಳಲ್ಲಿಯೂ ವಿಸ್ತರಿಸಿವೆ.
ಸಹಕಾರಿ ಕ್ಷೇತ್ರದ ಆರ್ಥಿಕ ಸಬಲೀಕರಣಕ್ಕಾಗಿ ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವಾಗಿ, ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
2025ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರಿ ವರ್ಷವೆಂದು ಆಚರಿಸಲಾಗುತ್ತಿದ್ದು, ಈ ಜಾಗತಿಕ ಉಪಕ್ರಮದಲ್ಲಿ ಭಾರತವು ಮಹತ್ವದ ಪಾತ್ರ ವಹಿಸುತ್ತಿದೆ.
ಗೌರವಾನ್ವಿತ ಸದಸ್ಯರೇ,
ನಾವು ದೇಶದ ಅಭಿವೃದ್ಧಿ ಮತ್ತು ಸಾಧನೆಗಳ ಬಗ್ಗೆ ಮಾತನಾಡುವಾಗ, ನಾವು ಮೂಲಭೂತವಾಗಿ ಅದರ ನಾಗರಿಕರ ಸಾಮರ್ಥ್ಯಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುತ್ತಿದ್ದೇವೆ. ಇಂದು, ರಾಷ್ಟ್ರದ ಅಭಿವೃದ್ಧಿಯಲ್ಲಿ ಎಲ್ಲರ ಸಾಮೂಹಿಕ ಭಾಗವಹಿಸುವಿಕೆ ಇದೆ ಮತ್ತು ಅದಕ್ಕಾಗಿಯೇ ನಾವು ಅದರ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವಂತಾಗಿದೆ.
ದೇಶದ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯದವರು ನನ್ನ ಸರ್ಕಾರದ ಪ್ರಯತ್ನಗಳಿಂದ ಗರಿಷ್ಠ ಲಾಭ ಪಡೆಯುತ್ತಿದ್ದಾರೆ.
ಸ್ವಾತಂತ್ರ್ಯದ ನಂತರ ದಶಕಗಳಿಂದ, ನಮ್ಮ ಬುಡಕಟ್ಟು ಸಮುದಾಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದವು. ನನ್ನ ಸರ್ಕಾರವು ಅವರ ಕಲ್ಯಾಣಕ್ಕೆ ಆದ್ಯತೆ ನೀಡಿದೆ.
'ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ' ಮತ್ತು 'ಪಿಎಂ-ಜನ್ಮಾನ್ ಯೋಜನೆ' ಈ ಉಪಕ್ರಮದ ಪ್ರತ್ಯಕ್ಷ ಉದಾಹರಣೆಗಳಾಗಿವೆ.
ಸುಮಾರು 1.25 ಲಕ್ಷ ಬುಡಕಟ್ಟು ಮಕ್ಕಳು 470 ಕ್ಕೂ ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಕಳೆದ 10 ವರ್ಷಗಳಲ್ಲಿ, ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ 30 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ಬುಡಕಟ್ಟು ಸಮುದಾಯಗಳಲ್ಲಿನ ಕುಡಗೋಲು ಕೋಶ ಕಾಯಿಲೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ರಾಷ್ಟ್ರೀಯ ಮಿಷನ್ ಕಾರ್ಯನಿರ್ವಹಿಸುತ್ತಿದೆ, ಸುಮಾರು 5 ಕೋಟಿ ವ್ಯಕ್ತಿಗಳ ತಪಾಸಣೆ ಈಗಾಗಲೇ ಪೂರ್ಣಗೊಂಡಿದೆ.
ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ನನ್ನ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ವರ್ಷ, ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಜನಜಾತಿಯ ಗೌರವ ವರ್ಷ ಎಂದು ಆಚರಿಸಲಾಗುತ್ತಿದೆ.
ಗೌರವಾನ್ವಿತ ಸದಸ್ಯರೇ,
'ವಿಕಸಿತ ಭಾರತʼದ ಒಂದು ಪ್ರಮುಖ ಮಾನದಂಡವೆಂದರೆ ದೇಶದ ಸಮತೋಲಿತ ಅಭಿವೃದ್ಧಿ. ಯಾವುದೇ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬ ಭಾವನೆ ಇರಬಾರದು.
ನನ್ನ ಸರ್ಕಾರವು ಈಶಾನ್ಯ ಪ್ರದೇಶದ ಜನರ ಆಕಾಂಕ್ಷೆಗಳ ಬಗ್ಗೆ ಅರಿತಿದೆ ಮತ್ತು ಅವರ ಪರಕೀಯತೆಯ ಭಾವನೆಯನ್ನು ತೊಡೆದುಹಾಕಲು ಕೆಲಸ ಮಾಡಿದೆ.
10 ಕ್ಕೂ ಹೆಚ್ಚು ಶಾಂತಿ ಒಪ್ಪಂದಗಳ ಮೂಲಕ, ಹಲವಾರು ಗುಂಪುಗಳನ್ನು ಶಾಂತಿಯ ಹಾದಿಗೆ ತರಲಾಗಿದೆ.
ಈಶಾನ್ಯದ ಎಂಟು ರಾಜ್ಯಗಳ ಸಾಮರ್ಥ್ಯವನ್ನು ಇಡೀ ದೇಶವು ನೋಡಲು ಅನುವು ಮಾಡಿಕೊಡುವ ಸಲುವಾಗಿ, ಮೊದಲ ಅಷ್ಟಲಕ್ಷ್ಮಿ ಮಹೋತ್ಸವವನ್ನು ಆಯೋಜಿಸಲಾಯಿತು.
ಈಶಾನ್ಯ ಭಾಗದ ಅಭಿವೃದ್ಧಿಯ ಜೊತೆಗೆ, ದೇಶದ "ಪೂರ್ವೋದಯ" ಅಂದರೆ ಪೂರ್ವ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯನ್ನು ರೂಪಿಸಲು ಸರ್ಕಾರ ಪ್ರಾರಂಭಿಸಿದೆ, ಇದು ಹೊಸ ಉದ್ಯೋಗಾವಕಾಶಗಳನ್ನು ಸಹ ಒದಗಿಸುತ್ತದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗು ಲಕ್ಷದ್ವೀಪಗಳಲ್ಲಿ, ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಈ ಪ್ರದೇಶಗಳು ರಾಷ್ಟ್ರದ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಶಾಂತಿಯುತವಾಗಿ ನಡೆದವು. ಈ ಸಾಧನೆಗಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಪ್ರಶಂಸೆಗೆ ಅರ್ಹರು.
ಗೌರವಾನ್ವಿತ ಸದಸ್ಯರೇ,
ಒಂದು ರಾಷ್ಟ್ರ ಅಥವಾ ಸಮಾಜದ ಯಶಸ್ಸು ಎಲ್ಲರನ್ನೂ ಒಳಗೊಳ್ಳುವ ಮತ್ತು ಸರ್ವವ್ಯಾಪಿಯಾಗುವ ಸಾಧ್ಯತೆ ಇರುವುದು ಅದು ತತ್ವಗಳಿಂದ ಮಾರ್ಗದರ್ಶನ ಪಡೆದಾಗ ಮಾತ್ರ. ಅದಕ್ಕಾಗಿಯೇ ನನ್ನ ಸರ್ಕಾರವು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ತತ್ವಗಳನ್ನು ಯಾವಾಗಲೂ ತನ್ನ ನೀತಿಗಳ ತಿರುಳಿನಲ್ಲಿ ಇರಿಸಿಕೊಂಡಿದೆ. ಸಂವಿಧಾನದ ಬೆಳಕಿನಲ್ಲಿ, ನನ್ನ ಸರ್ಕಾರದ ಪ್ರಮುಖ ಸೈದ್ಧಾಂತಿಕ ಸ್ಫೂರ್ತಿ - ಸೇವೆ!
140 ಕೋಟಿ ನಾಗರಿಕರಿಗೆ ಸೇವೆ ಸಲ್ಲಿಸುವುದು ಅದರ ಪ್ರಮುಖ ಕರ್ತವ್ಯ ಎಂದು ನನ್ನ ಸರ್ಕಾರ ದೃಢವಾಗಿ ನಂಬುತ್ತದೆ ಮತ್ತು ಈ ದಿಕ್ಕಿನಲ್ಲಿ ಅದು ಅತ್ಯಂತ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸುತ್ತಿದೆ.
ಸಮಾಜದ ಹಿಂದುಳಿದ ವರ್ಗಗಳು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸುಲಭ ಸಾಲಗಳನ್ನು ಒದಗಿಸಲು, ಪಿಎಂ-ಸೂರಜ್ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
ಸರ್ಕಾರಿ ಯೋಜನೆಗಳ ಪ್ರಯೋಜನಗಳು ವಿಶೇಷಚೇತನ ವ್ಯಕ್ತಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು, 1 ಕೋಟಿಗೂ ಹೆಚ್ಚು ʼದಿವ್ಯಾಂಗ್ ಗುರುತಿನ ಚೀಟಿʼಗಳನ್ನು ನೀಡಲಾಗಿದೆ.
ನೈರ್ಮಲ್ಯ ಕಾರ್ಯಕರ್ತರಿಗಾಗಿ ಪ್ರಾರಂಭಿಸಲಾದ "ನಮಸ್ತೆ ಯೋಜನೆ"ಯನ್ನು ಸ್ವಚ್ಛತೆಯ ಉದಾತ್ತ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಎಲ್ಲರನ್ನು ಸೇರಿಸಲು ವಿಸ್ತರಿಸಲಾಗಿದೆ.
'ವಿಕಸಿತ ಭಾರತ'ದ ಪ್ರಯಾಣದಲ್ಲಿ ಯಾರೂ ಹಿಂದೆ ಉಳಿಯಬಾರದು ಎಂದು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ, ನನ್ನ ಸರ್ಕಾರವು ಸ್ಯಾಚುರೇಶನ್ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ.
ಗೌರವಾನ್ವಿತ ಸದಸ್ಯರೇ,
ಕಳೆದ ದಶಕವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಪುನರುಜ್ಜೀವನದ ದಶಕವಾಗಿದೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಅಭಿವೃದ್ಧಿಗೆ ಸಮರ್ಪಣೆಯೊಂದಿಗೆ, ಸಂಸ್ಕೃತಿ ಮತ್ತು ಪ್ರಗತಿ ಜೊತೆಜೊತೆಯಲ್ಲಿ ಸಾಗುವ ಭವಿಷ್ಯವನ್ನು ನಾವು ನಿರ್ಮಿಸುತ್ತಿದ್ದೇವೆ.
ಈ ವರ್ಷ, "ನಿಜವಾದ ರಾಷ್ಟ್ರೀಯತೆ ಭಾರತದ ಭೌತಿಕ ಏಕತೆಯಲ್ಲಿ ಮಾತ್ರವಲ್ಲ, ಅದರ ಸಾಂಸ್ಕೃತಿಕ ಏಕತೆಯನ್ನು ಬಲಪಡಿಸುವಲ್ಲಿ ಅಡಗಿದೆ" ಎಂದು ಹೇಳಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮ ದಿನಾಚರಣೆಯನ್ನು ನಾವು ಆಚರಿಸುತ್ತೇವೆ.
ಇದೇ ಉತ್ಸಾಹದಲ್ಲಿ, ಭಗವಾನ್ ಮಹಾವೀರರ 2550 ನೇ ನಿರ್ವಾಣ ಉತ್ಸವವನ್ನು ಭಕ್ತಿಯಿಂದ ಆಚರಿಸಲಾಯಿತು. ದೇಶವು ಸಂತ ಮೀರಾಬಾಯಿಯವರ 525 ನೇ ಜನ್ಮ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಿತು.
ಮಹಾ ಕವಿ ಸಂತ ತಿರುವಳ್ಳುವರ್ ಅವರ ಸ್ಮರಣಾರ್ಥ ಹಲವಾರು ದೇಶಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ನನ್ನ ಸರ್ಕಾರವು ಕಾಶಿ ತಮಿಳು ಸಂಗಮ, ಕಾಶಿ ತೆಲುಗು ಸಂಗಮ ಮತ್ತು ಸೌರಾಷ್ಟ್ರ ತಮಿಳು ಸಂಗಮದಂತಹ ಸಾಂಸ್ಕೃತಿಕ ಉಪಕ್ರಮಗಳ ಮೂಲಕ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುತ್ತಿದೆ.
ಗೌರವಾನ್ವಿತ ಸದಸ್ಯರೇ,
ನಮ್ಮ ಹಸ್ತಪ್ರತಿಗಳು ನಮ್ಮ ಅಮೂಲ್ಯವಾದ ಪರಂಪರೆ, ಅವು ಮಾನವಕುಲದ ಪ್ರಯೋಜನಕ್ಕಾಗಿ ಅಧ್ಯಯನ, ಸಂಶೋಧನೆ ಮತ್ತು ಬಳಸಿಕೊಳ್ಳಬೇಕಾದ ಅಪಾರ ಜ್ಞಾನವನ್ನು ಹೊಂದಿವೆ. ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಈ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಸಂರಕ್ಷಿಸುವ ಪ್ರಕ್ರಿಯೆಯನ್ನು ಮಿಷನ್ ಮೋಡ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ.
ರಾಷ್ಟ್ರದ ಪರಂಪರೆಯ ಮಹತ್ವದ ಆಧಾರಸ್ತಂಭವೆಂದರೆ ನಮ್ಮ ಶ್ರೀಮಂತ ಭಾಷಾ ಸಂಸ್ಕೃತಿ. ಸರ್ಕಾರವು ಅಸ್ಸಾಮಿ, ಮರಾಠಿ, ಪಾಲಿ, ಪ್ರಾಕೃತ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಭಾರತದ ಎಲ್ಲಾ ಭಾಷೆಗಳಲ್ಲಿ ಸುಲಭ ಸಂವಹನಕ್ಕಾಗಿ, ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ ಭಾಷಾ ವೇದಿಕೆ ʼಭಾಷಿಣಿʼಯನ್ನು ದೇಶದ ನಾಗರಿಕರು ವ್ಯಾಪಕವಾಗಿ ಬಳಸುತ್ತಿದ್ದಾರೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರದ ಪ್ರಯತ್ನಗಳಿಂದಾಗಿ, ಭಾರತವು ವಿಶ್ವ ಸಾಂಸ್ಕೃತಿಕ ವೇದಿಕೆಯಲ್ಲಿ ಜಾಗತಿಕ ನಾಯಕನಾಗಿ ತನ್ನನ್ನು ಸ್ಥಾಪಿಸಿಕೊಂಡಿದೆ.
ಎಲ್ಲಾ ಏಷ್ಯಾದ ಬೌದ್ಧ ರಾಷ್ಟ್ರಗಳನ್ನು ಸಂಪರ್ಕಿಸಲು, ನನ್ನ ಸರ್ಕಾರವು ಮೊದಲ ಏಷ್ಯನ್ ಬೌದ್ಧ ಸಮ್ಮೇಳನವನ್ನು ಆಯೋಜಿಸಿತು. ಕಳೆದ ವರ್ಷ, ವಿಶ್ವ ಪರಂಪರೆಯ ಸಮಿತಿಯ ಸಭೆಯನ್ನು ಭಾರತದಲ್ಲಿ ಕೂಡ ನಡೆಸಲಾಯಿತು, ಇದರಲ್ಲಿ 140 ದೇಶಗಳು ಭಾಗವಹಿಸಿದ್ದವು.
ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಯ ಮೂಲಕ, ಇಡೀ ಜಗತ್ತು ಈಗ ಭಾರತದ ಶ್ರೀಮಂತ ಯೋಗ ಸಂಪ್ರದಾಯವನ್ನು ಅಳವಡಿಸಿಕೊಳ್ಳುತ್ತಿದೆ.
ಗೌರವಾನ್ವಿತ ಸದಸ್ಯರೇ,
ಪ್ರಗತಿಯ ಭವ್ಯ ಕಟ್ಟಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಬಲವಾದ ಸ್ತಂಭಗಳು ಅಗತ್ಯವಿದೆ. ಭಾರತದ ಅಭಿವೃದ್ಧಿಗಾಗಿ, ನನ್ನ ಸರ್ಕಾರವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ಎಂಬ ಮೂರು ಬಲವಾದ ಸ್ತಂಭಗಳನ್ನು ಸ್ಥಾಪಿಸಿದೆ. ಇಂದು, ಈ ಪದಗಳು ಪ್ರಪಂಚದಾದ್ಯಂತ ಭಾರತದ ಹೊಸ ಆಡಳಿತ ಮಾದರಿಯ ಸಮಾನಾರ್ಥಕ ಪದಗಳಾಗಿವೆ.
ಸಂವಿಧಾನ ಜಾರಿಗೆ ಬರುವ ಮೊದಲು ಜಾರಿಗೆ ತಂದ ಕಾನೂನುಗಳ ವಿವರವಾದ ಪರಿಶೀಲನೆಯನ್ನು ಸರ್ಕಾರ ನಡೆಸಿದೆ. ಇಡೀ ವ್ಯವಸ್ಥೆಯು ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಅನೇಕ ಕಾನೂನುಗಳನ್ನು ರದ್ದುಗೊಳಿಸಲಾಗುತ್ತಿದೆ ಅಥವಾ ತಿದ್ದುಪಡಿ ಮಾಡಲಾಗುತ್ತಿದೆ.
ಇಲ್ಲಿಯವರೆಗೆ, ಸರ್ಕಾರವು 1,500ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಿದೆ. ವಸಾಹತುಶಾಹಿ ಯುಗದ ಕಾನೂನುಗಳನ್ನು ತೆಗೆದುಹಾಕುವ ಮೂಲಕ, ದಂಡ ಸಂಹಿತೆಯ ಬದಲಿಗೆ 'ನ್ಯಾಯ ಸಂಹಿತೆʼಯನ್ನು ಪರಿಚಯಿಸಲಾಗಿದೆ.
'ಜನ ವಿಶ್ವಾಸ' (ನಾಗರಿಕರ ನಂಬಿಕೆ) ಮತ್ತು 'ಜನ ಭಾಗೀದಾರಿ' (ಜನರ ಭಾಗವಹಿಸುವಿಕೆ) ಯೊಂದಿಗೆ, ನನ್ನ ಸರ್ಕಾರವು ನಾಗರಿಕರ ಜೀವನವನ್ನು ಉತ್ತಮಗೊಳಿಸಲು ಕೆಲಸ ಮಾಡುತ್ತಿದೆ. ವಿವಾದಗಳನ್ನು ಪರಿಹರಿಸಲು "ವಿವಾದ್ ಸೆ ವಿಶ್ವಾಸ್" ಉಪಕ್ರಮವನ್ನು ಪ್ರಾರಂಭಿಸಲಾಗಿದೆ.
ಅದೇ ರೀತಿ, 40,000 ಕ್ಕೂ ಹೆಚ್ಚು ನಿಯಮಗಳನ್ನು ಸರಳೀಕರಿಸಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಮತ್ತು 3,500 ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಲಾಗಿದೆ.
ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ನನ್ನ ಸರ್ಕಾರವು ಉತ್ತಮ ಆಡಳಿತದ ವಿಶಿಷ್ಟ ಪ್ರಯೋಗವನ್ನು ಮಾಡಿದೆ. ಈ ಕಾರ್ಯಕ್ರಮವು ಈ ಜಿಲ್ಲೆಗಳಲ್ಲಿ ಆರೋಗ್ಯ, ಪೋಷಣೆ, ಕೃಷಿ, ಸಾಮಾಜಿಕ ಅಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ಉಪಕ್ರಮವನ್ನು ಯು.ಎನ್.ಡಿ.ಪಿ. ವರದಿಯಲ್ಲಿ ಹೆಚ್ಚು ಪ್ರಶಂಸಿಸಲಾಗಿದೆ. ಈ ಯಶಸ್ಸಿನಿಂದ ಪ್ರೇರಿತರಾಗಿ, ದೇಶದ 500 ಮಹತ್ವಾಕಾಂಕ್ಷಿ ಬ್ಲಾಕ್‌ಗಳಲ್ಲಿ ಸಮಗ್ರ ಅಭಿವೃದ್ಧಿಗಾಗಿ ಅಭಿಯಾನವನ್ನು ಈಗ ಪ್ರಾರಂಭಿಸಲಾಗಿದೆ.
ಉತ್ತಮ ಆಡಳಿತದ ಮೇಲೆ ಕೇಂದ್ರೀಕರಿಸಿ, ಐ-ಗಾಟ್ ಕರ್ಮಯೋಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ರಚಿಸಲಾಗಿದೆ, ಸರ್ಕಾರಿ ನೌಕರರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ನಿಜವಾದ ಕರ್ಮಯೋಗಿಗಳಾಗಲು ಪ್ರೋತ್ಸಾಹಿಸುತ್ತದೆ. ಈ ವೇದಿಕೆಯು 1,700 ಕೋರ್ಸ್‌ಗಳನ್ನು ನೀಡುತ್ತದೆ ಮತ್ತು 2 ಕೋಟಿಗೂ ಹೆಚ್ಚು ಕೋರ್ಸ್ ಗಳು ಪೂರ್ಣಗೊಂಡಿವೆ.
ಗೌರವಾನ್ವಿತ ಸದಸ್ಯರೇ,
ಈ ವರ್ಷ, ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ, ನನ್ನ ಸರ್ಕಾರವು "ದೇಶ ಮೊದಲು" ಎನ್ನುವ ತತ್ವದೊಂದಿಗೆ ಮುಂದುವರಿಯುತ್ತಿದೆ.
ದೇಶದ ಗಡಿಗಳನ್ನು ರಕ್ಷಿಸಲು ಮತ್ತು ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದೆ.
ವಿಶೇಷವಾಗಿ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ನಾವು ಹೆಚ್ಚು ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ಕಂಡಿದ್ದೇವೆ.
ʼಮೇಕ್ ಇನ್ ಇಂಡಿಯಾʼದಿಂದ, ನಾವು ʼಮೇಕ್ ಫಾರ್ ದಿ ವರ್ಲ್ಡ್ʼಗೆ ಪರಿವರ್ತನೆಗೊಂಡಿದ್ದೇವೆ, ಇದು ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.
ಒಂದು ಐತಿಹಾಸಿಕ ಕ್ಷಣದಲ್ಲಿ, ಭಾರತದಲ್ಲಿ ನಿರ್ಮಿಸಲಾದ ಎರಡು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಯನ್ನು ಇತ್ತೀಚೆಗೆ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು.
ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ಸ್ಥಾಪಿಸುವ ಮೂಲಕ ಮತ್ತು ರಕ್ಷಣಾ ನವೋದ್ಯಮಗಳನ್ನು ಉತ್ತೇಜಿಸುವ ಮೂಲಕ ನಾವು ಸ್ವಾವಲಂಬನೆ ಮತ್ತು ಸ್ವ-ಉದ್ಯೋಗವನ್ನು ಬಲಪಡಿಸುತ್ತಿದ್ದೇವೆ.
ಗಡಿಗಳನ್ನು ರಕ್ಷಿಸುವುದರ ಜೊತೆಗೆ, ದೇಶದ ಗಡಿ ಪ್ರದೇಶಗಳ ಅಭಿವೃದ್ಧಿಯೂ ನಮ್ಮ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಗಡಿ ಪ್ರದೇಶದ ರಸ್ತೆಗಳು ಮತ್ತು ಅಟಲ್ ಸುರಂಗ, ಸೆಲಾ ಸುರಂಗ, ಸೋನಾಮಾರ್ಗ್ ಸುರಂಗದಂತಹ ಆಧುನಿಕ ಮೂಲಸೌಕರ್ಯಗಳು ರಕ್ಷಣಾ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿವೆ. ಗಡಿಯಲ್ಲಿರುವ ದೇಶದ ಮೊದಲ ಹಳ್ಳಿಗಳಲ್ಲಿ "ವೈಬ್ರಂಟ್ ವಿಲೇಜ್" ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
ವಾಮಪಂಥೀಯ ಉಗ್ರವಾದವನ್ನು ನಿರ್ಮೂಲನೆ ಮಾಡುವ ಅಂತಿಮ ಹಂತವೂ ಪ್ರಾರಂಭವಾಗಿದೆ. ಸರ್ಕಾರದ ಪ್ರಯತ್ನಗಳಿಂದಾಗಿ, ವಾಮಪಂಥೀಯ ಉಗ್ರವಾದ ಪೀಡಿತ ಜಿಲ್ಲೆಗಳ ಸಂಖ್ಯೆ ಇಂದು 126 ರಿಂದ 38 ಕ್ಕೆ ಇಳಿದಿದೆ.
ಗೌರವಾನ್ವಿತ ಸದಸ್ಯರೇ,
ಜಾಗತಿಕ ಅಸ್ಥಿರತೆಯ ವಾತಾವರಣದಲ್ಲಿ, ಭಾರತವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿರತೆಯ ಆಧಾರಸ್ತಂಭವಾಗುವ ಮೂಲಕ ಜಗತ್ತಿಗೆ ಒಂದು ಮಾದರಿಯಾಗಿದೆ. ಅದು ಜಿ7 ಶೃಂಗಸಭೆಯಾಗಿರಲಿ, ಕ್ವಾಡ್ ಶೃಂಗಸಭೆಯಾಗಿರಲಿ, ಬ್ರಿಕ್ಸ್, ಎಸ್‌ಸಿಒ ಅಥವಾ ಜಿ20 ಆಗಿರಲಿ, ಇಡೀ ಜಗತ್ತು ಭಾರತದ ಸಾಮರ್ಥ್ಯಗಳು, ನೀತಿಗಳು ಮತ್ತು ಉದ್ದೇಶಗಳಲ್ಲಿ ತನ್ನ ವಿಶ್ವಾಸವನ್ನು ಇರಿಸಿದೆ.
ಇಂದು, ಭಾರತವು ಅತಿದೊಡ್ಡ ಜಾಗತಿಕ ವೇದಿಕೆಗಳಲ್ಲಿಯೂ ಸಹ ತನ್ನ ಹಿತಾಸಕ್ತಿಗಳನ್ನು ಬಲವಾಗಿ ಪ್ರಸ್ತುತಪಡಿಸುತ್ತದೆ. ಜಿ20 ಮತ್ತು ದೆಹಲಿ ಘೋಷಣೆಯ ಯಶಸ್ವಿ ಆತಿಥ್ಯವು ಇದಕ್ಕೆ ಉದಾಹರಣೆಗಳಾಗಿವೆ. ಮೂರನೇ ಜಾಗತಿಕ ದಕ್ಷಿಣ ಶೃಂಗಸಭೆ, ಭಾರತ-ಆಸಿಯಾನ್ ಶೃಂಗಸಭೆ ಮತ್ತು ಭಾರತ-ಕಾರಿಕಾಮ್ ಶೃಂಗಸಭೆಯಲ್ಲಿ, ನಾವು ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ನಾವು ಭವಿಷ್ಯದ ಶೃಂಗಸಭೆಯಲ್ಲಿ ಭಾರತದ “ಭವಿಷ್ಯದ ದೃಷ್ಟಿಕೋನ”ವನ್ನು ಪ್ರಸ್ತುತಪಡಿಸಿದ್ದೇವೆ.
ಈ ತಿಂಗಳ ಆರಂಭದಲ್ಲಿ, ನನ್ನ ಸರ್ಕಾರ ಭುವನೇಶ್ವರದಲ್ಲಿ ʼಪ್ರವಾಸಿ ಭಾರತೀಯ ದಿವಸʼವನ್ನು ಆಯೋಜಿಸಿತ್ತು.
ನಮ್ಮ ಅನಿವಾಸಿ ಭಾರತೀಯ ಸಹೋದರ ಸಹೋದರಿಯರ ಕಲ್ಯಾಣ ಮತ್ತು ಅನುಕೂಲತೆಯು ಆದ್ಯತೆಯಾಗಿ ಉಳಿದಿದೆ, ಅದಕ್ಕಾಗಿಯೇ ನನ್ನ ಸರ್ಕಾರ ಆರು ಹೊಸ ರಾಯಭಾರ ಕಚೇರಿಗಳು ಮತ್ತು ನಾಲ್ಕು ಹೊಸ ದೂತಾವಾಸಗಳನ್ನು ತೆರೆಯಲು ನಿರ್ಧರಿಸಿದೆ.
'ವಿಶ್ವ ಬಂಧು' ಎನ್ನುವ ಭಾರತದ ಚಿತ್ರವನ್ನು ಬಲಪಡಿಸುವ ಮೂಲಕ, ದೇಶವು ಪ್ರಪಂಚದಾದ್ಯಂತ ಅನೇಕ ವಿಪತ್ತು ಪೀಡಿತ ಪ್ರದೇಶಗಳಿಗೆ ತಕ್ಷಣದ ಸಹಾಯಹಸ್ತವನ್ನು ಚಾಚಿದೆ.
ಭಾರತವು ಹಲವಾರು ರಾಷ್ಟ್ರಗಳೊಂದಿಗೆ ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಂಚಿಕೊಂಡಿದೆ ಮತ್ತು ಜನೌಷಧಿ ಕೇಂದ್ರವನ್ನು ಸ್ಥಾಪಿಸಿದೆ.
ಗೌರವಾನ್ವಿತ ಸದಸ್ಯರೇ,
ನನ್ನ ಸರ್ಕಾರವು ಪ್ರಸ್ತುತ ಪೀಳಿಗೆಯನ್ನು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ನಾವು ರಾಷ್ಟ್ರವನ್ನು ಹಸಿರು ಭವಿಷ್ಯ ಮತ್ತು ಹಸಿರು ಉದ್ಯೋಗಗಳತ್ತ ಕೊಂಡೊಯ್ಯುತ್ತಿದ್ದೇವೆ.
2030ರ ವೇಳೆಗೆ 500 ಗಿಗಾವ್ಯಾಟ್ ಗಳ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯನ್ನು ಸಾಧಿಸುವತ್ತ ಕಳೆದ ಆರು ತಿಂಗಳಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರಧಾನಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆಯಡಿಯಲ್ಲಿ, 75,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿಯವರೆಗೆ, 7.5 ಲಕ್ಷಕ್ಕೂ ಹೆಚ್ಚು ಮನೆಗಳು ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಿವೆ, ಇದು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ರಾಷ್ಟ್ರೀಯ ಹಸಿರು ಜಲಜನಕ ಮಿಷನ್ 8 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೊಂದಿದ್ದು, 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ನಾವು ಪರಮಾಣು ಶಕ್ತಿಯನ್ನು ವಿಸ್ತರಿಸುವತ್ತ ವೇಗವಾಗಿ ಕೆಲಸ ಮಾಡುತ್ತಿದ್ದೇವೆ.
ನನ್ನ ಸರ್ಕಾರವು ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ತಂದಿದೆ, ಇದರಿಂದ ಹಳೆಯ ವಾಹನಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು ಮತ್ತು ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಇದಕ್ಕೆ ಅನುಗುಣವಾಗಿ, 2024 ರ ವಿಶ್ವ ಪರಿಸರ ದಿನದಂದು 'ಏಕ್ ಪೆಡ್ ಮಾ ಕೆ ನಾಮ್' (ಮಾತೆಯ ಹೆಸರಲ್ಲಿ ಒಂದು ಮರ) ಅಭಿಯಾನವನ್ನು ಪ್ರಾರಂಭಿಸಲಾಯಿತು. ಲಕ್ಷಾಂತರ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದಾರೆ ಮತ್ತು ಈ ಉಪಕ್ರಮವನ್ನು ವಿಶ್ವಾದ್ಯಂತ ಪ್ರಶಂಸಿಸಲಾಗಿದೆ.
ಗೌರವಾನ್ವಿತ ಸದಸ್ಯರೇ,
ನಮ್ಮ ಭಾರತವು 140 ಕೋಟಿ ಜನರ ದೇಶ. ನಮ್ಮಲ್ಲಿ ವೈವಿಧ್ಯಮಯ ರಾಜ್ಯಗಳು, ವೈವಿಧ್ಯಮಯ ಪ್ರದೇಶಗಳು ಮತ್ತು ವೈವಿಧ್ಯಮಯ ಭಾಷೆಗಳಿವೆ, ಆದರೆ ಒಂದು ರಾಷ್ಟ್ರವಾಗಿ ನಮಗೆ ಒಂದೇ ಗುರುತು ಇದೆ - ಭಾರತ.
ಮತ್ತು ನಮಗೆ ಇರುವುದು ಒಂದೇ ಒಂದು ಸಂಕಲ್ಪ, ಒಂದೇ ಗುರಿ - 'ವಿಕಸಿತ ಭಾರತ'!
ಮುಂಬರುವ ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ದೃಢ ಸಂಕಲ್ಪ ಮಾಡಿದ್ದೇವೆ.
ಈ ಸಂಕಲ್ಪವು ರಾಷ್ಟ್ರದ ಹುತಾತ್ಮರ ತ್ಯಾಗ, ಪೂಜ್ಯ ಬಾಪು ಅವರ ಕರುಣಾಮಯ ಆದರ್ಶಗಳು ಮತ್ತು ಸರ್ದಾರ್ ಪಟೇಲ್ ಅವರಂತಹ ಭಾರತ ಮಾತೆಯ ಪುತ್ರರು ನಮಗೆ ನೀಡಿದ ಏಕತೆಯ ಪ್ರಮಾಣವಚನದಿಂದ ಪ್ರೇರಿತವಾಗಿದೆ. ನಾವು ಈ ಸ್ಫೂರ್ತಿಗಳನ್ನು ಮುಂದುವರಿಸಬೇಕು ಮತ್ತು ಏಕತೆಯ ಬಲದಿಂದ, ವಿಕಸಿತ ಭಾರತದ ಬದ್ಧತೆಯನ್ನು ಪೂರೈಸಬೇಕು.
ಭಾರತದ ಕನಸುಗಳನ್ನು ನನಸಾಗಿಸಲು ಒಗ್ಗೂಡುವ ಮತ್ತು ಬದ್ಧರಾಗುವ ನಮ್ಮ ಸಂಕಲ್ಪವನ್ನು ಮತ್ತೊಮ್ಮೆ ದೃಢೀಕರಿಸೋಣ!
ನಾವು ಒಟ್ಟಾಗಿ ಮುನ್ನಡೆದಾಗ, ನಮ್ಮ ಭವಿಷ್ಯದ ಪೀಳಿಗೆಗಳು 2047ರಲ್ಲಿ ಅಭಿವೃದ್ಧಿ ಹೊಂದಿದ, ಬಲಿಷ್ಠ, ಸಮರ್ಥ ಮತ್ತು ಸಮೃದ್ಧ ಭಾರತವನ್ನು ಖಂಡಿತವಾಗಿಯೂ ನೋಡುತ್ತವೆ.
ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.
ಧನ್ಯವಾದಗಳು.
ಜೈ ಹಿಂದ್!
ಜೈ ಭಾರತ!
*****
(Release ID: 2100505)
Visitor Counter : 68