ಪ್ರಧಾನ ಮಂತ್ರಿಯವರ ಕಛೇರಿ
ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಇಂಗ್ಲಿಷ್ ಅವತರಣಿಕೆ
Posted On:
25 JAN 2025 6:53PM by PIB Bengaluru
ಗೌರವಾನ್ವಿತ ಅಧ್ಯಕ್ಷರು ಮತ್ತು ನನ್ನ ಸಹೋದರ ಪ್ರಬೋವೊ ಸುಬಿಯಾಂಟೊ,
ಎರಡೂ ದೇಶಗಳ ಪ್ರತಿನಿಧಿಗಳು,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಭಾರತದ ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ನಮ್ಮ ಮುಖ್ಯ ಅತಿಥಿಯಾಗಿತ್ತು. ಮತ್ತು ನಾವು ನಮ್ಮ 75 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಮತ್ತೊಮ್ಮೆ, ಇಂಡೋನೇಷ್ಯಾ ಈ ಮಹತ್ವದ ಸಂದರ್ಭದ ಭಾಗವಾಗಲು ಗೌರವಯುತವಾಗಿ ಒಪ್ಪಿಕೊಂಡಿದೆ ಎಂಬುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ ನಾನು ಅಧ್ಯಕ್ಷ ಪ್ರಬೋವೊ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೇ,
2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ನಾವು ನಮ್ಮ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯತ್ತ ಕೊಂಡೊಯ್ದಿದ್ದೇವೆ. ಇಂದು, ನಾವು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಪರಸ್ಪರ ಸಹಕಾರದ ವಿವಿಧ ಅಂಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು, ರಕ್ಷಣಾ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ.
ನಾವು ಕಡಲ ಭದ್ರತೆ, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹದಲ್ಲಿ ಸಹಕಾರಕ್ಕೆ ಒತ್ತು ನೀಡಿದ್ದೇವೆ. ಕಡಲ ಸುರಕ್ಷತೆ ಮತ್ತು ಭದ್ರತೆ ಕುರಿತ ಇಂದು ಅಂಕಿತ ಹಾಕಲಾದ ಒಪ್ಪಂದವು ಅಪರಾಧ ತಡೆ, ಶೋಧ ಮತ್ತು ಪಾರುಗಾಣಿಕಾ/ಪರಿಹಾರ-ರಕ್ಷಣಾ ಕಾರ್ಯಾಚರಣೆ ಹಾಗು ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದ್ವಿಪಕ್ಷೀಯ ವ್ಯಾಪಾರವು ವೇಗವಾಗಿ ಬೆಳೆದಿದೆ ಮತ್ತು ಕಳೆದ ವರ್ಷ ಇದು 30 ಬಿಲಿಯನ್ ಡಾಲರ್ ದಾಟಿದೆ.
ಇದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯಲು, ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಬುಟ್ಟಿಯನ್ನು ವೈವಿಧ್ಯಮಯಗೊಳಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದೇವೆ. ಈ ಪ್ರಯತ್ನಗಳಲ್ಲಿ ಖಾಸಗಿ ವಲಯವೂ ಸಮಾನ ಪಾಲುದಾರನಾಗಿದೆ. ಇಂದು ನಡೆದ ಸಿಇಒ ಫೋರಂ ಸಭೆ ಮತ್ತು ಖಾಸಗಿ ವಲಯದಲ್ಲಿ ಅಂತಿಮಗೊಳಿಸಲಾದ ಒಪ್ಪಂದಗಳನ್ನು ನಾವು ಸ್ವಾಗತಿಸುತ್ತೇವೆ. ಫಿನ್ ಟೆಕ್, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.
ಆರೋಗ್ಯ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿ, ಭಾರತವು ಮಧ್ಯಾಹ್ನದ ಊಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಕಲಿತದ್ದನ್ನು ಮತ್ತು ಅನುಭವವನ್ನು ಇಂಡೋನೇಷ್ಯಾದೊಂದಿಗೆ ಹಂಚಿಕೊಳ್ಳುತ್ತಿದೆ. ಇಂಧನ, ನಿರ್ಣಾಯಕ ಖನಿಜಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸ್ಟೆಮ್ ಶಿಕ್ಷಣ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಎರಡೂ ದೇಶಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಜಂಟಿ ಸಮರಾಭ್ಯಾಸ ನಡೆಸಲು ಒಗ್ಗೂಡಬೇಕು.
ಸ್ನೇಹಿತರೇ,
ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಸಾವಿರಾರು ವರ್ಷಗಳಷ್ಟು ಹಳೆಯದು. ರಾಮಾಯಣ ಮತ್ತು ಮಹಾಭಾರತದಿಂದ ಸ್ಫೂರ್ತಿ ಪಡೆದ ಕಥೆಗಳು ಮತ್ತು 'ಬಲಿ ಜಾತ್ರೆ' ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳಿಗೆ ಜೀವಂತ ಸಾಕ್ಷಿಗಳಾಗಿವೆ. ಬೌದ್ಧ ಬೊರೊಬುದೂರ್ ದೇವಾಲಯದ ನಂತರ, ಭಾರತವು ಈಗ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲಿದೆ ಎಂಬುದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ.
ಇದಲ್ಲದೆ, 2025 ವರ್ಷವನ್ನು ಇಂಡೋ-ಆಸಿಯಾನ್ ಪ್ರವಾಸೋದ್ಯಮ ವರ್ಷವಾಗಿ ಆಚರಿಸಲಾಗುವುದು. ಇದು ಭಾರತ ಮತ್ತು ಇಂಡೋನೇಷ್ಯಾ ನಡುವೆ ಸಾಂಸ್ಕೃತಿಕ ವಿನಿಮಯ ಹಾಗು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
ಸ್ನೇಹಿತರೇ,
ಆಸಿಯಾನ್ ಮತ್ತು ಇಂಡೋ-ಪೆಸಿಫಿಕ್ ವಲಯಗಳಲ್ಲಿ ಇಂಡೋನೇಷ್ಯಾ ನಮ್ಮ ಪ್ರಮುಖ ಪಾಲುದಾರ. ಈ ಇಡೀ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸಮೃದ್ಧಿ ಮತ್ತು ನಿಯಮ/ಕಾನೂನು ಆಧಾರಿತ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಎರಡೂ ದೇಶಗಳು ಬದ್ಧವಾಗಿವೆ. ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ನೌಕಾಯಾನ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾವು ಒಪ್ಪುತ್ತೇವೆ.
ನಮ್ಮ ಆಕ್ಟ್ ಈಸಿ ಪಾಲಿಸಿಯಲ್ಲಿ ಆಸಿಯಾನ್ ಏಕತೆ ಮತ್ತು ಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ನಾವು ಜಿ-20, ಆಸಿಯಾನ್ ಮತ್ತು ಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್ ನಂತಹ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದೇವೆ.
ಈಗ ನಾವು ಬ್ರಿಕ್ಸ್ ನಲ್ಲಿ ಇಂಡೋನೇಷ್ಯಾದ ಸದಸ್ಯತ್ವವನ್ನೂ ಸ್ವಾಗತಿಸುತ್ತಿದ್ದೇವೆ. ಈ ಎಲ್ಲಾ ವೇದಿಕೆಗಳಲ್ಲಿ, ನಾವು ಜಾಗತಿಕ ದಕ್ಷಿಣದ ರಾಷ್ಟ್ರಗಳ ಹಿತಾಸಕ್ತಿಗಳು ಮತ್ತು ಆದ್ಯತೆಗಳಿಗಾಗಿ ಸಮನ್ವಯ ಮತ್ತು ಸಹಕಾರದಿಂದ ಕೆಲಸ ಮಾಡುತ್ತೇವೆ.
ಗೌರವಾನ್ವಿತರೇ,
ನಾಳೆ ನಮ್ಮ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ನೀವು ಭಾರತಕ್ಕೆ ಭೇಟಿ ನೀಡಿರುವುದು ನಮಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಇಂಡೋನೇಷ್ಯಾದ ಪಥಸಂಚಲನ ತಂಡವನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಮತ್ತೊಮ್ಮೆ, ನಾನು ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಭಾರತದ ಆತ್ಮೀಯ ಸ್ವಾಗತ ಕೋರುತ್ತೇನೆ.
ತುಂಬ ಧನ್ಯವಾದಗಳು.
ಘೋಷಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
(Release ID: 2096248)
Visitor Counter : 24
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam