ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

2025-26 ಹಂಗಾಮಿಗಾಗಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ಸಂಪುಟದ ಅನುಮೋದನೆ


Posted On: 22 JAN 2025 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ (ಸಿಸಿಇಎ) ಸಭೆ 2025-26ನೇ ಸಾಲಿನ ಮಾರುಕಟ್ಟೆ ಹಂಗಾಮಿಗಾಗಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ)ಯನ್ನು ಅನುಮೋದಿಸಿದೆ.  

2025-26ನೇ ಸಾಲಿಗೆ ಕಚ್ಚಾ ಸೆಣಬಿನ (ಟಿಡಿ-3 ದರ್ಜೆ) ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 5,650/- ರೂ. ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇ. 66.8 ರಷ್ಟು ಹೆಚ್ಚಿನ ಆದಾಯವನ್ನು ಖಾತ್ರಿಪಡಿಸುತ್ತದೆ. 2025-26ನೇ ಸಾಲಿಗೆ ಮಾರುಕಟ್ಟೆ ಋತುವಿಗಾಗಿ ಕಚ್ಚಾ ಸೆಣಬಿನ ಅನುಮೋದಿತ ಎಂಎಸ್‌ಪಿ, 2018-19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದಂತೆ ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚಿದ್ದು, ಅದು ಎಂಎಸ್‌ಪಿಯನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿದೆ.

2025-26ರ ಮಾರುಕಟ್ಟೆ ಹಂಗಾಮಿನಲ್ಲಿ ಕಚ್ಚಾ ಸೆಣಬಿನ ಎಂ ಎಸ್ ಪಿ ಹಿಂದಿನ ಮಾರುಕಟ್ಟೆ ಹಂಗಾಮಿಗಿಂತ ಕ್ವಿಂಟಾಲ್‌ಗೆ 315/- ರೂ. ಹೆಚ್ಚಾಗಿದೆ. ಭಾರತ ಸರ್ಕಾರವು 2014-15ರಲ್ಲಿ ಕ್ವಿಂಟಾಲ್‌ಗೆ 2400/- ರೂ.ಗಳಿಂದ 2025-26ರಲ್ಲಿ ಕ್ವಿಂಟಾಲ್‌ಗೆ 5,650/- ರೂ.ಗಳಿಗೆ ಹೆಚ್ಚಿಸಿದ್ದು, ಇದು ಕ್ವಿಂಟಾಲ್‌ಗೆ 3250/- ರೂ. (2.35 ಪಟ್ಟು) ಹೆಚ್ಚಳವನ್ನು ದಾಖಲಿಸಿದೆ. 

2014-15 ರಿಂದ 2024-25ರ ಅವಧಿಯಲ್ಲಿ ಸೆಣಬು ಬೆಳೆಗಾರರಿಗೆ ಪಾವತಿಸಲಾದ ಎಂ ಎಸ್ ಪಿ ಮೊತ್ತವು 1300 ಕೋಟಿ ರೂ.ಗಳಾಗಿದ್ದರೆ, 2004-05 ರಿಂದ 2013-14ರ ಅವಧಿಯಲ್ಲಿ ಪಾವತಿಸಲಾದ ಒಟ್ಟು ಮೊತ್ತವು ಕೇವಲ 441 ಕೋಟಿ ರೂಪಾಯಿಗಳಾಗಿತ್ತು.

ಸುಮಾರು 40 ಲಕ್ಷ ಕೃಷಿ ಕುಟುಂಬಗಳ ಜೀವನೋಪಾಯವು ನೇರವಾಗಿ ಅಥವಾ ಪರೋಕ್ಷವಾಗಿ ಸೆಣಬು ಉದ್ಯಮವನ್ನು ಅವಲಂಬಿಸಿದೆ. ಸುಮಾರು 4 ಲಕ್ಷ ಕಾರ್ಮಿಕರು ಸೆಣಬಿನ ಗಿರಣಿಗಳಲ್ಲಿ ನೇರ ಉದ್ಯೋಗವನ್ನು ಪಡೆದಿದ್ದಾರೆ ಮತ್ತು ಸೆಣಬು ವ್ಯಾಪಾರದಲ್ಲಿ ತೊಡಗಿದ್ದಾರೆ. ಕಳೆದ ವರ್ಷ 1 ಲಕ್ಷ 70 ಸಾವಿರ ರೈತರಿಂದ ಸೆಣಬನ್ನು ಖರೀದಿಸಲಾಗಿದೆ. ಶೇ.82 ರಷ್ಟು ಸೆಣಬು ರೈತರು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದರೆ, ಉಳಿದ ಅಸ್ಸಾಂ ಮತ್ತು ಬಿಹಾರ ರಾಜ್ಯಗಳು ಸೆಣಬು ಉತ್ಪಾದನೆಯಲ್ಲಿ ತಲಾ ಶೇ.9 ರಷ್ಟು ಪಾಲನ್ನು ಹೊಂದಿವೆ.

ಭಾರತೀಯ ಸೆಣಬು ನಿಗಮ (ಜೆಸಿಐ) ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಉಂಟಾದ ನಷ್ಟಗಳು, ಯಾವುದಾದರೂ ಇದ್ದರೆ, ಕೇಂದ್ರ ಸರ್ಕಾರದಿಂದ ಅದನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು.

 

*****


(Release ID: 2095099) Visitor Counter : 23