ಪ್ರಧಾನ ಮಂತ್ರಿಯವರ ಕಛೇರಿ
ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿತವಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
26 NOV 2024 9:01PM by PIB Bengaluru
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಜಿ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಜಿ, ಸೂರ್ಕಕಾಂತ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಅಟಾರ್ನಿ ಜನರಲ್ ಶ್ರೀ ವೆಂಕಟರಮಣಿ ಜಿ, ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಜಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕಪಿಲ್ ಸಿಬಲ್ ಜಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಇತರೆ ಗೌರವಾನ್ವಿತ ಅತಿಥಿಗಳು, ಗೌರವಾನ್ವಿತ ಮಹಿಳೆಯರು ಮತ್ತು ಮಹನೀಯರೇ!
ಸಂವಿಧಾನ ದಿನದಂದು ನಿಮಗೆ ಮತ್ತು ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತೇನೆ. ಭಾರತದ ಸಂವಿಧಾನದ 75ನೇ ವರ್ಷವು ಇಡೀ ರಾಷ್ಟ್ರಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಇಂದು ನಾನು ಭಾರತದ ಸಂವಿಧಾನಕ್ಕೆ ಮತ್ತು ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಗೆ ನಮ್ರತೆಯಿಂದ ಗೌರವ ಸಲ್ಲಿಸುತ್ತೇನೆ.
ಸ್ನೇಹಿತರೆ,
ಈ ಮಹತ್ವದ ಪ್ರಜಾಸತ್ತಾತ್ಮಕ ಹಬ್ಬವನ್ನು ನಾವು ಸ್ಮರಿಸುವಾಗ, ಇಂದು ಮುಂಬೈ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವವೂ ಆಗಿದೆ ಎಂಬುದನ್ನು ನಾವು ಮರೆಯಬಾರದು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಭಾರತದ ಭದ್ರತೆಗೆ ಸವಾಲು ಹಾಕುವ ಯಾವುದೇ ಭಯೋತ್ಪಾದಕ ಸಂಘಟನೆಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸುತ್ತೇನೆ.
ಸ್ನೇಹಿತರೆ,
ಸಂವಿಧಾನ ಸಭೆಯ ವ್ಯಾಪಕ ಚರ್ಚೆಗಳ ಸಂದರ್ಭದಲ್ಲಿ ಭಾರತದ ಪ್ರಜಾಸತ್ತಾತ್ಮಕ ಭವಿಷ್ಯದ ಬಗ್ಗೆ ಗಂಭೀರ ಚರ್ಚೆಗಳು ನಡೆದವು. ನೀವೆಲ್ಲರೂ ಆ ಚರ್ಚೆಗಳನ್ನು ಚೆನ್ನಾಗಿ ತಿಳಿದಿದ್ದೀರಿ. ಆ ಸಮಯದಲ್ಲಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು "ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದರ ಆತ್ಮವು ಯಾವಾಗಲೂ ಯುಗದ ಆತ್ಮವಾಗಿದೆ" ಎಂದಿದ್ದರು. ಬಾಬಾ ಸಾಹೇಬರು ಹೇಳಿದ ಈ ಚೇತನವು ಅತ್ಯಂತ ಮಹತ್ವದ್ದು. ನಮ್ಮ ಸಂವಿಧಾನದ ನಿಬಂಧನೆಗಳು ಬದಲಾಗುತ್ತಿರುವ ಸಮಯ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಅದನ್ನು ಅರ್ಥೈಸಲು ನಮಗೆ ಅವಕಾಶ ಮಾಡಿಕೊಡುತ್ತವೆ. ಭಾರತದ ಆಕಾಂಕ್ಷೆಗಳು ಮತ್ತು ಕನಸುಗಳು ಕಾಲಾನಂತರದಲ್ಲಿ ಹೊಸ ಎತ್ತರವನ್ನು ತಲುಪುತ್ತವೆ, ಸ್ವತಂತ್ರ ಭಾರತ ಮತ್ತು ಭಾರತದ ನಾಗರಿಕರ ಅಗತ್ಯತೆಗಳು ಮತ್ತು ಸವಾಲುಗಳು ವಿಕಸನಗೊಳ್ಳುತ್ತವೆ ಎಂದು ನಮ್ಮ ಸಂವಿಧಾನದ ರಚನೆಕಾರರು ಗುರುತಿಸಿದ್ದಾರೆ. ಹೀಗಾಗಿ, ಅವರು ನಮ್ಮ ಸಂವಿಧಾನವನ್ನು ಕೇವಲ ಕಾನೂನು ದಾಖಲೆಯಾಗಿ ಬಿಡದೆ, ಅದನ್ನು ಚಲನಶೀಲ, ನಿರಂತರವಾಗಿ ಹರಿಯುವ ಪ್ರವಾಹವನ್ನಾಗಿ ಮಾಡಿದರು.
ಸ್ನೇಹಿತರೆ,
ನಮ್ಮ ಸಂವಿಧಾನವು ನಮ್ಮ ವರ್ತಮಾನ ಮತ್ತು ನಮ್ಮ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕಳೆದ 75 ವರ್ಷಗಳಲ್ಲಿ, ದೇಶವು ಎದುರಿಸಿದ ಸವಾಲುಗಳಿಗೆ ನಮ್ಮ ಸಂವಿಧಾನವು ಸೂಕ್ತ ಪರಿಹಾರಗಳನ್ನು ಒದಗಿಸಿದೆ. ಪ್ರಜಾಪ್ರಭುತ್ವಕ್ಕೆ ಮಹತ್ವದ ಸವಾಲಿನ ಅವಧಿಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ನಮ್ಮ ಸಂವಿಧಾನವು ಪ್ರಬಲವಾಗಿ ಹೊರಹೊಮ್ಮಿತು. ನಮ್ಮ ಸಂವಿಧಾನವು ದೇಶದ ಪ್ರತಿಯೊಂದು ಅಗತ್ಯತೆ ಮತ್ತು ಪ್ರತಿ ನಿರೀಕ್ಷೆಗಳನ್ನು ಪೂರೈಸಿದೆ. ಸಂವಿಧಾನದ ಈ ಬಲವು ಇಂದು ಬಾಬಾ ಸಾಹೇಬರ ಸಂವಿಧಾನವು ಜಮ್ಮು-ಕಾಶ್ಮೀರದಲ್ಲೂ ಸಂಪೂರ್ಣವಾಗಿ ಅನುಷ್ಠಾನಗೊಂಡಿದೆ ಎಂಬುದನ್ನು ಖಚಿತಪಡಿಸಿದೆ. ಮೊದಲ ಬಾರಿಗೆ ಅಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.
ಸ್ನೇಹಿತರೆ,
ಭಾರತವು ಪ್ರಚಂಡ ಪರಿವರ್ತನೆಯ ಅವಧಿಗೆ ಒಳಗಾಗುತ್ತಿದೆ, ಅಂತಹ ನಿರ್ಣಾಯಕ ಸಮಯದಲ್ಲಿ, ನಮ್ಮ ಸಂವಿಧಾನವು ನಮಗೆ ಸ್ಪಷ್ಟ ದಾರಿ ತೋರಿಸುತ್ತಿದೆ, ನಮಗೆ ಮಾರ್ಗದರ್ಶಿ ಬೆಳಕಾಗಿ ಉಳಿದಿದೆ.
ಸ್ನೇಹಿತರೆ,
ಭಾರತಕ್ಕೆ ಮುಂದಿನ ಹಾದಿಯು ದೊಡ್ಡ ಕನಸುಗಳು ಮತ್ತು ಸಂಕಲ್ಪಗಳನ್ನು ಈಡೇರಿಸುವುದಾಗಿದೆ. ಇಂದು, ಪ್ರತಿಯೊಬ್ಬ ನಾಗರಿಕನು ಒಂದೇ ಗುರಿಯಿಂದ ಒಂದಾಗಿದ್ದಾನೆ – ಅದೇ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣ. ‘ವಿಕಸಿತ ಭಾರತ’ ಎಂದರೆ ಪ್ರತಿಯೊಬ್ಬ ನಾಗರಿಕರು ಜೀವನದ ಗುಣಮಟ್ಟ ಮತ್ತು ಜೀವನದ ಘನತೆಯನ್ನು ಆನಂದಿಸುವ ರಾಷ್ಟ್ರ. ಇದು ಸಾಮಾಜಿಕ ನ್ಯಾಯದ ಪ್ರಮುಖ ಚಾಲನಾಶಕ್ತಿಯಾಗಿದೆ, ಇದು ಸಂವಿಧಾನದ ಮೂಲ ಚೇತನವೂ ಆಗಿದೆ. ಆದ್ದರಿಂದ, ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ದಶಕದಲ್ಲಿ, ಈ ಹಿಂದೆ ಬ್ಯಾಂಕ್‌ಗಳಿಗೆ ಪ್ರವೇಶವಿಲ್ಲದಿದ್ದ 53 ಕೋಟಿಗೂ ಹೆಚ್ಚು ಭಾರತೀಯರು ಖಾತೆಗಳನ್ನು ತೆರೆದಿದ್ದಾರೆ. ಕಳೆದ 10 ವರ್ಷಗಳಲ್ಲಿ, ತಲೆಮಾರುಗಳಿಂದ ಮನೆಗಳಿಲ್ಲದ 4 ಕೋಟಿ ನಿರಾಶ್ರಿತ ನಾಗರಿಕರಿಗೆ ಶಾಶ್ವತ ವಸತಿಗಳನ್ನು ಒದಗಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, 10 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಗ್ಯಾಸ್ ಸಂಪರ್ಕಗಳನ್ನು ಪಡೆದಿದ್ದಾರೆ, ಅವರು ಹಲವಾರು ವರ್ಷಗಳಿಂದ ತಮ್ಮ ಮನೆಗಳಲ್ಲಿ ಗ್ಯಾಸ್ ಸಂಪರ್ಕಕ್ಕಾಗಿ ಕಾಯುತ್ತಿದ್ದರು. ಇಂದಿನ ಜೀವನದಲ್ಲಿ, ನಾವು ಮನೆಯಲ್ಲಿ ನಲ್ಲಿ ನೀರು ಪಡೆಯುವುದು ತುಂಬಾ ಸರಳವಾಗಿದೆ, ಇದೀಗ ಸರಾಗವಾಗಿ ನೀರು ಹರಿಯುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ 3 ಕೋಟಿ ಕುಟುಂಬಗಳಿಗೆ ಮಾತ್ರ ನಲ್ಲಿ ನೀರು ಸಿಗುತ್ತಿತ್ತು. ಲಕ್ಷಾಂತರ ಜನರು ಇನ್ನೂ ತಮ್ಮ ಮನೆಗಳಲ್ಲಿ ನಲ್ಲಿ ನೀರಿಗಾಗಿ ಕಾಯುತ್ತಿದ್ದರು. ನಮ್ಮ ಸರ್ಕಾರವು 5-6 ವರ್ಷಗಳ ಅವಧಿಯಲ್ಲಿ 12 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರು ಒದಗಿಸಿದೆ ಎಂಬ ತೃಪ್ತಿ ನನಗಿದೆ, ಇದು ನಾಗರಿಕರ, ವಿಶೇಷವಾಗಿ ಮಹಿಳೆಯರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಸಂವಿಧಾನದ ಸ್ಫೂರ್ತಿಯನ್ನು ಬಲಪಡಿಸುತ್ತದೆ.
ಸ್ನೇಹಿತರೆ,
ನಿಮಗೆ ತಿಳಿದಿರುವಂತೆ, ನಮ್ಮ ಸಂವಿಧಾನದ ಮೂಲ ಹಸ್ತಪ್ರತಿಯು ಭಗವಾನ್ ಶ್ರೀರಾಮ, ತಾಯಿ ಸೀತಾಮಾತೆ, ಹನುಮಾನ್ ಜಿ, ಬುದ್ಧ, ಮಹಾವೀರ ಮತ್ತು ಗುರು ಗೋಬಿಂದ್ ಸಿಂಗ್ ಜಿ, ಭಾರತದ ಸಂಸ್ಕೃತಿಯ ಸಂಕೇತಗಳನ್ನು ಒಳಗೊಂಡಿದೆ. ಸಂವಿಧಾನದಲ್ಲಿರುವ ಈ ದೃಷ್ಟಾಂತಗಳು ಮಾನವೀಯ ಮೌಲ್ಯಗಳ ಮಹತ್ವವನ್ನು ನಮಗೆ ನೆನಪಿಸುತ್ತವೆ. ಈ ಮೌಲ್ಯಗಳು ಆಧುನಿಕ ಭಾರತದ ನೀತಿಗಳು ಮತ್ತು ನಿರ್ಧಾರಗಳ ಆಧಾರವಾಗಿದೆ. ಭಾರತೀಯರಿಗೆ ತ್ವರಿತ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಹೊಸ ನ್ಯಾಯಾಂಗ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಶಿಕ್ಷೆ ಆಧಾರಿತ ವ್ಯವಸ್ಥೆ ಈಗ ನ್ಯಾಯ ಆಧಾರಿತ ವ್ಯವಸ್ಥೆಯಾಗಿ ಪರಿವರ್ತನೆಯಾಗಿದೆ. ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾರಿ ಶಕ್ತಿ ವಂದನ್ ಅಧಿನಿಯಮದೊಂದಿಗೆ ಐತಿಹಾಸಿಕ ನಿರ್ಧಾರ ಮಾಡಲಾಗಿದೆ. ತೃತೀಯ ಲಿಂಗಿಗಳಿಗೆ ಮಾನ್ಯತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚುವರಿಯಾಗಿ, ನಾವು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಸುಲಭಗೊಳಿಸಲು ಕ್ರಮಗಳನ್ನು ಜಾರಿಗೆ ತಂದಿದ್ದೇವೆ.
ಸ್ನೇಹಿತರೆ,
ಇಂದು, ರಾಷ್ಟ್ರವು ತನ್ನ ಪ್ರಜೆಗಳಿಗೆ ಬದುಕುವ ಸೌಕರ್ಯಗಳನ್ನು ಸುಧಾರಿಸುವಲ್ಲಿ ಹೆಚ್ಚು ಗಮನ ಹರಿಸಿದೆ. ಪಿಂಚಣಿ ಪಡೆಯುವ ಹಿರಿಯ ನಾಗರಿಕರು ತಾವು ಬದುಕಿದ್ದೇವೆ ಎಂದು ಸಾಬೀತುಪಡಿಸಲು ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾದ ಸಮಯವಿತ್ತು. ಈಗ, ಹಿರಿಯ ನಾಗರಿಕರು ತಮ್ಮ ಮನೆಯ ಸೌಕರ್ಯದಿಂದ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಅನುಕೂಲ ಪಡೆಯಬಹುದು. ಇದುವರೆಗೆ ಸುಮಾರು 1.5 ಕೋಟಿ ಹಿರಿಯ ನಾಗರಿಕರು ಈ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ. ಇಂದು, ಭಾರತವು ಪ್ರತಿ ಬಡ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡುವ ದೇಶವಾಗಿದೆ. ಇದು 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧರಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ದೇಶವಾಗಿದೆ. ಕೈಗೆಟುಕುವ ಔಷಧಿಗಳು ದೇಶಾದ್ಯಂತ ಸಾವಿರಾರು ಜನ ಔಷಧಿ ಕೇಂದ್ರಗಳಲ್ಲಿ ಶೇಕಡ 80ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದೆ. ನಮ್ಮ ದೇಶದಲ್ಲಿ ಆರೋಗ್ಯ ರಕ್ಷಣೆ 60 ಪ್ರತಿಶತಕ್ಕಿಂತ ಕಡಿಮೆಯಿರುವ ಸಮಯವಿತ್ತು, ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಲಸಿಕೆಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಇಂದು, ಮಿಷನ್ ಇಂದ್ರಧನುಷ್‌ಗೆ ಧನ್ಯವಾದಗಳು, ಭಾರತದ ರೋಗನಿರೋಧಕ ವ್ಯಾಪ್ತಿಯು 100 ಪ್ರತಿಶತ ತಲುಪುತ್ತಿರುವುದನ್ನು ನೋಡಿ ನಾನು ತೃಪ್ತಿ ಹೊಂದಿದ್ದೇನೆ. ದೂರದ ಹಳ್ಳಿಗಳಲ್ಲಿಯೂ ಈಗ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಲಾಗುತ್ತಿದೆ. ಈ ಪ್ರಯತ್ನಗಳು ಬಡವರು ಮತ್ತು ಮಧ್ಯಮ ವರ್ಗದವರ ಚಿಂತೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಸ್ನೇಹಿತರೆ,
ಇಂದು ದೇಶ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿಯಾನವೇ ಉದಾಹರಣೆಯಾಗಿದೆ. ಹಿಂದೆ ಹಿಂದುಳಿದ 100 ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಮರುವ್ಯಾಖ್ಯಾನಿಸಲಾಗಿದೆ, ಅಲ್ಲಿ ಎಲ್ಲಾ ನಿಯತಾಂಕಗಳಾದ್ಯಂತ ಅಭಿವೃದ್ಧಿಯನ್ನು ವೇಗಗೊಳಿಸಲಾಗಿದೆ. ಇಂದು, ಈ ಮಹತ್ವಾಕಾಂಕ್ಷೆಯ ಹಲವು ಜಿಲ್ಲೆಗಳು ಇತರ ಜಿಲ್ಲೆಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಮಾದರಿ ನಿರ್ಮಿಸಿ, ನಾವು ಈಗ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ.
ಸ್ನೇಹಿತರೆ,
ಜನರು ಎದುರಿಸುತ್ತಿರುವ ದೈನಂದಿನ ಸವಾಲುಗಳನ್ನು ತೊಡೆದುಹಾಕಲು ದೇಶವು ಈಗ ಹೆಚ್ಚಿನ ಒತ್ತು ನೀಡುತ್ತಿದೆ. ಕೆಲವೇ ವರ್ಷಗಳ ಹಿಂದೆ, ಭಾರತದಲ್ಲಿ 2.5 ಕೋಟಿ ಕುಟುಂಬಗಳು ಇದ್ದವು, ಅವುಗಳು ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿ ಪ್ರತಿದಿನ ಸಂಜೆ ಕತ್ತಲೆಯಲ್ಲಿ ಮುಳುಗುತ್ತಿದ್ದವು. ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ ನೀಡುವ ಮೂಲಕ ರಾಷ್ಟ್ರವು ಅವರ ಬಾಳು ಬೆಳಗಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಜನರು 4-ಜಿ ಮತ್ತು 5-ಜಿ ಸಂಪರ್ಕಕ್ಕೆ ಪ್ರವೇಶ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ದೂರದ ಪ್ರದೇಶಗಳಲ್ಲಿ ಸಾವಿರಾರು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಈ ಹಿಂದೆ, ನೀವು ಅಂಡಮಾನ್ ಅಥವಾ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರೆ, ಬ್ರಾಡ್‌ಬ್ಯಾಂಡ್ ಸಂಪರ್ಕ ಲಭ್ಯವಿರಲಿಲ್ಲ. ಇಂದು, ಸಮುದ್ರದೊಳಗಿನ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಈ ದ್ವೀಪಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸುತ್ತಿವೆ. ಹಳ್ಳಿಯ ಮನೆಗಳು ಮತ್ತು ಗ್ರಾಮೀಣ ಪ್ರದೇಶಗಳ ಜಮೀನಿನ ಬಗ್ಗೆ ಉದ್ಭವಿಸುವ ಹಲವಾರು ವಿವಾದಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ವಿಶ್ವಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಸಹ ಭೂ ದಾಖಲೆಗಳೊಂದಿಗೆ ಗಮನಾರ್ಹ ಸವಾಲುಗಳನ್ನು ಎದುರಿಸುತ್ತವೆ. ಆದರೆ, ಇಂದಿನ ಭಾರತ ಈ ಸಮಸ್ಯೆ ಪರಿಹರಿಸುವಲ್ಲಿ ಮುಂದಾಳತ್ವ ವಹಿಸುತ್ತಿದೆ. ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆ ಅಡಿ, ಗ್ರಾಮೀಣ ಮನೆಗಳ ಡ್ರೋನ್ ಮ್ಯಾಪಿಂಗ್ ನಡೆಸಲಾಗುತ್ತಿದೆ, ನಿವಾಸಿಗಳಿಗೆ ಕಾನೂನು ದಾಖಲೆಗಳನ್ನು ನೀಡಲಾಗುತ್ತಿದೆ.
ಸ್ನೇಹಿತರೆ,
ಆಧುನಿಕ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯು ದೇಶದ ಪ್ರಗತಿಗೆ ಅಷ್ಟೇ ಅವಶ್ಯಕವಾಗಿದೆ. ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ರಾಷ್ಟ್ರದ ಸಂಪನ್ಮೂಲಗಳನ್ನು ಉಳಿಸುವುದಲ್ಲದೆ, ಈ ಯೋಜನೆಗಳ ಉಪಯುಕ್ತತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ದೂರದೃಷ್ಟಿಯೊಂದಿಗೆ, ಪ್ರಗತಿ ಹೆಸರಿನ ವೇದಿಕೆ ರಚಿಸಲಾಗಿದೆ, ಅಲ್ಲಿ ಮೂಲಸೌಕರ್ಯ ಯೋಜನೆಗಳ ನಿಯಮಿತ ವಿಮರ್ಶೆಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ಕೆಲವು ಯೋಜನೆಗಳು 30-40 ವರ್ಷಗಳಿಂದ ಬಾಕಿ ಉಳಿದಿವೆ. ನಾನು ವೈಯಕ್ತಿಕವಾಗಿ ಇಂತಹ ಸಭೆಗಳ ಅಧ್ಯಕ್ಷತೆ ವಹಿಸುತ್ತೇನೆ. ಇಲ್ಲಿಯವರೆಗೆ 18 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಪರಿಶೀಲಿಸಲಾಗಿದೆ, ಅವುಗಳ ಪೂರ್ಣಗೊಳಿಸುವಿಕೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ಪರಿಹರಿಸಲಾಗಿದೆ. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಯೋಜನೆಗಳು ಜನಜೀವನದ ಮೇಲೆ ಆಳವಾದ ಸಕಾರಾತ್ಮಕ ಪರಿಣಾಮ ಬೀರುತ್ತಿವೆ. ಈ ಪ್ರಯತ್ನಗಳು ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸುತ್ತಿವೆ ಮತ್ತು ಸಂವಿಧಾನದ ಮೂಲ ಮೌಲ್ಯಗಳನ್ನು ಬಲಪಡಿಸುತ್ತಿವೆ.
ಸ್ನೇಹಿತರೆ,
ಡಾ. ರಾಜೇಂದ್ರ ಪ್ರಸಾದ್ ಅವರ ಮಾತುಗಳೊಂದಿಗೆ ನನ್ನ ಭಾಷಣವನ್ನು ಮುಕ್ತಾಯಗೊಳಿಸಲು ಬಯಸುತ್ತೇನೆ. ಇದೇ ದಿನ, ನವೆಂಬರ್ 26, 1949ರಂದು, ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಸಮಾರೋಪ ಭಾಷಣದಲ್ಲಿ, "ಇಂದು ಭಾರತಕ್ಕೆ ತಮ್ಮ ಸ್ವಂತ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಗಳನ್ನು ಮುಂದಿಡುವ ಪ್ರಾಮಾಣಿಕ ಜನರ ಗುಂಪನ್ನು ಹೊರತುಪಡಿಸಿ ಬೇರೇನೂ ಬೇಕಾಗಿಲ್ಲ" ಎಂದು ಹೇಳಿದ್ದರು. ‘ದೇಶ ಮೊದಲು, ಎಲ್ಲಕ್ಕಿಂತ ರಾಷ್ಟ್ರ’ ಎಂಬ ಮನೋಭಾವವು ಭಾರತದ ಸಂವಿಧಾನವನ್ನು ಹಲವು ಶತಮಾನಗಳವರೆಗೆ ಜೀವಂತವಾಗಿರಿಸುತ್ತದೆ. ಸಂವಿಧಾನ ನನಗೆ ನೀಡಿರುವ ಕೆಲಸ, ಅದರ ಪರಿಮಿತಿಯಲ್ಲೇ ಉಳಿಯಲು ಪ್ರಯತ್ನಿಸಿದ್ದೇನೆ, ಯಾವುದೇ ಅತಿಕ್ರಮಣಕ್ಕೆ ಯತ್ನಿಸಿಲ್ಲ. ಸಂವಿಧಾನವು ಈ ಕೆಲಸವನ್ನು ನನಗೆ ವಹಿಸಿರುವುದರಿಂದ, ನನ್ನ ಮಿತಿಗಳನ್ನು ಉಳಿಸಿಕೊಂಡು ನನ್ನ ಆಲೋಚನೆಗಳನ್ನು ಮಂಡಿಸಿದ್ದೇನೆ. ಇಲ್ಲಿ ಕೇವಲ ಸುಳಿವು ಸಾಕು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.
ತುಂಬು ಧನ್ಯವಾದಗಳು.
*****
(Release ID: 2078403)
Visitor Counter : 59
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil