ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 4

ಪ್ರಸಾರ ಭಾರತಿಯ ಒ ಟಿ ಟಿ ಪ್ಲಾಟ್‌ಫಾರ್ಮ್ ವೇವ್ಸ್ ಶುದ್ಧ ಕುಟುಂಬ ಮನರಂಜನೆಯನ್ನು ಒದಗಿಸುತ್ತದೆ: ಶ್ರೀ ನವನೀತ್ ಕುಮಾರ್ ಸೆಹಗಲ್, ಅಧ್ಯಕ್ಷರು, ಪ್ರಸಾರ ಭಾರತಿ


ಭಾರತೀಯರು ಮತ್ತು ತಮ್ಮ ಭಾರತೀಯ ಮೂಲಗಳೊಂದಿಗೆ ಸಂಪರ್ಕದಲ್ಲಿರಲು ಬಯಸುವ ಎಲ್ಲರಿಗೂ ವೇವ್ಸ್  ಕಂಟೆಂಟ್‌ ಒದಗಿಸುತ್ತದೆ: ಗೌರವ್ ದ್ವಿವೇದಿ, ಸಿಇಒ, ಪ್ರಸಾರ ಭಾರತಿ

ವಿಶ್ವದಾದ್ಯಂತ ಲಭ್ಯವಿರುವ ರಾಮಾಯಣದ ವಿವಿಧ ಆವೃತ್ತಿಗಳ ಸಂಶೋಧನೆಯ ಆಧಾರದ ಮೇಲೆ 'ಕಾಕ್ ಭೂಷಂಡಿ ರಾಮಾಯಣ'ವನ್ನು ವೇವ್ಸ್ ಮತ್ತು ದೂರದರ್ಶನಗಳು ಪ್ರಸ್ತುತ ಪಡಿಸಲಿವೆ

ಇಂದು ಗೋವಾದಲ್ಲಿ ನಡೆದ 55ನೇ ಐ ಎಫ್ ಎಫ್ ಐ ನಲ್ಲಿ ವೇವ್ಸ್ ಒ ಟಿ ಟಿ ಮತ್ತು ಅದರ ಕೊಡುಗೆಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಸಾರ ಭಾರತಿಯ ಅಧ್ಯಕ್ಷರಾದ ಶ್ರೀ ನವನೀತ್ ಸಿಂಗ್ ಸೆಹಗಲ್, "ರಾಷ್ಟ್ರೀಯ ಪ್ರಸಾರಕರಾಗಿ ಸಮಾಜಕ್ಕೆ ಶುದ್ಧವಾದ ಕುಟುಂಬ ಮನರಂಜನೆಯನ್ನು ಒದಗಿಸುವುದು ನಮ್ಮ ಕರ್ತವ್ಯ" ಎಂದು ಹೇಳಿದರು. ಪ್ರಸಾರ ಭಾರತಿಯ ಒ ಟಿ ಟಿ ಪ್ಲಾಟ್‌ ಫಾರ್ಮ್‌ಗಾಗಿ ವೇವ್ಸ್ ಪ್ರಾರಂಭಿಸಲು ಕಾರಣವಾಯಿತು. ಸುದ್ದಿ, ಕ್ರೀಡೆಗಳಲ್ಲದೆ ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳೂ ನಾಗರಿಕರಿಗೆ ಲಭ್ಯವಾಗುವಂತೆ ಮಾಡಬೇಕು,'' ಎಂದರು. ಈ ವೇದಿಕೆಯಲ್ಲಿ ಭಾರತದ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಪ್ರದರ್ಶಿಸಲಾಗುವುದು. ಕೆಲವು ಪ್ರೀಮಿಯರ್ ಕಾರ್ಯಕ್ರಮಗಳನ್ನು ಹೊರತುಪಡಿಸಿ ವೇವ್ಸ್ ಒ ಟಿ ಟಿ ಡೌನ್‌ಲೋಡ್ ಮಾಡಲು ಮತ್ತು ಅದರಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಯಾವುದೇ ಶುಲ್ಕವಿಲ್ಲ ಎಂದು ಅವರು ಮಾಹಿತಿ ನೀಡಿದರು.

ಪ್ರಸಾರ ಭಾರತಿಯ ಸಿ.ಇ.ಒ. ಶ್ರೀ ಗೌರವ್ ದ್ವಿವೇದಿ ಅವರು, "ನಮ್ಮ  ದೇಶದಾದ್ಯಂತ ಪ್ರೇಕ್ಷಕರಿಗೆ ಮಾಹಿತಿ ಮತ್ತು ವಿಷಯವನ್ನು ಲಭ್ಯವಾಗುವಂತೆ ಮಾಡಬೇಕಾಗಿರುವುದರಿಂದ ಸಾರ್ವಜನಿಕ ಪ್ರಸಾರಕರು ಎಲ್ಲಾ ವೇದಿಕೆಗಳಲ್ಲಿ ಉಪಸ್ಥಿತರಿರುವ ಅವಶ್ಯಕತೆಯಿದೆ" ಎಂದು ಹೇಳಿದರು. ತಮ್ಮ ಬೇರುಗಳಿಂದ ದೂರ ಸರಿದ ಆದರೆ ತಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರಲು ಬಯಸುವ ಎಲ್ಲ ಭಾರತೀಯರಿಗೆ ಈ ಮಾಧ್ಯಮವು ತುಂಬಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.
 
'ಫೌಜಿ 2.0' ವೇವ್ಸ್ ಒ ಟಿ ಟಿ ನಲ್ಲಿ ಲಭ್ಯವಿರುತ್ತದೆ

1980ರ ದಶಕದಲ್ಲಿ, ಶಾರುಖ್ ಖಾನ್ ದೂರದರ್ಶನ ಧಾರಾವಾಹಿ ಫೌಜಿಯಲ್ಲಿ ನಟಿಸಿದರು. ಫೌಜಿ 2.0 ಅದೇ ದೂರದರ್ಶನ ಸರಣಿಯ ಆಧುನಿಕ ದಿನದ ರೂಪಾಂತರವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸಂದೀಪ್ ಸಿಂಗ್, ನಾಯಕ ನಟರಾದ ಗೌಹರ್ ಖಾನ್, ವಿಕ್ಕಿ ಜೈನ್ ಮತ್ತು ಚಿತ್ರತಂಡದವರು ಭಾಗವಹಿಸಿದ್ದರು. ಈ ಹೊಸ ಯೋಜನೆಯ ಬಗ್ಗೆ ಮಾತನಾಡಿದ ನಟ ಗೌಹರ್ ಖಾನ್, "ಫೌಜಿ 2 ಧಾರಾವಾಹಿಯು ಭಾರತವನ್ನು ಪ್ರತಿನಿಧಿಸುವ ಮತ್ತು ರಕ್ಷಿಸುವ ವ್ಯಕ್ತಿಗಳ ಜೀವನವನ್ನು ಪ್ರಸ್ತುತಪಡಿಸುತ್ತದೆ" ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನಟ ವಿಕ್ಕಿ ಜೈನ್ ದೂರದರ್ಶನದ ಬಗ್ಗೆ ತಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ದೂರದರ್ಶನದ ಎಲ್ಲ ಕಾರ್ಯಕ್ರಮಗಳೂ ಒಂದು ರೀತಿಯ ಬ್ರಾಂಡ್ ಆಗಿವೆ ಎಂದು ಹೊಗಳಿದರು. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ನಮ್ಮಲ್ಲಿ ಹಲವರು ದೂರದರ್ಶನದಲ್ಲಿ ನಮ್ಮ ಕುಟುಂಬದೊಂದಿಗೆ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ವೀಕ್ಷಿಸಿದ್ದೇವೆ ಎಂದು ಅವರು  ನೆನಪಿಸಿದರು. ದೂರದರ್ಶನ ಪ್ರೇಕ್ಷಕರು, ಕೇಬಲ್ ಟಿವಿಗೆ ಪ್ರವೇಶವನ್ನು ಹೊಂದಿರದ ಜನರನ್ನು ಒಳಗೊಂಡಿದೆ ಎಂದು ಅವರು ಒತ್ತಿ ಹೇಳಿದರು. ಮೇರಿ ಕೋಮ್, ಅಲಿಘರ್, ಸರಬ್ಜಿತ್ ಮುಂತಾದ ಪ್ರಸಿದ್ಧ ಚಿತ್ರಗಳ ನಿರ್ಮಾಪಕ ಸಂದೀಪ್ ಸಿಂಗ್ ಕೂಡ ಪ್ರೇಕ್ಷಕರ ಮುಂದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ದೂರದರ್ಶನದಂತಹ ವೇದಿಕೆಯಲ್ಲಿ ಅವರ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಗೌರವದ ಸಂಗತಿ’ ಎಂದು ಅವರು ಅಭಿಪ್ರಾಯಪಟ್ಟರು.

ಡಿಡಿ ನ್ಯಾಷನಲ್‌ನಲ್ಲಿ ಪ್ರಾರಂಭವಾದ ಹೊಸ ಕಾರ್ಯಕ್ರಮ 'ಕಾಕ್ ಭೂಷಂಡಿ ರಾಮಾಯಣ'  ವೇವ್ಸ್ ಒ ಟಿ ಟಿ ಯಲ್ಲಿಯೂ ಲಭ್ಯವಿರುತ್ತದೆ

ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಮಾನಂದ್ ಸಾಗರ್ ಅವರ ಮೊಮ್ಮಗ ಶ್ರೀ ಶಿವ ಸಾಗರ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು ಮತ್ತು ಮಹಾಕಾವ್ಯ ಸರಣಿಯು ಯುವ ವೀಕ್ಷಕರನ್ನು ಹೇಗೆ ಆಕರ್ಷಿಸುತ್ತದೆ ಎಂಬುದರ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು. 'ಕಾಕ್ ಭೂಷಂಡಿ ರಾಮಾಯಣ' ಮಾಡಲು ಜಗತ್ತಿನಾದ್ಯಂತ 350ಕ್ಕೂ ಹೆಚ್ಚು ರಾಮಾಯಣಗಳನ್ನು ಸಂಶೋಧಿಸಲಾಗಿದೆ ಎಂಬುದನ್ನು ವಿವರಿಸಿದರು. "ಅತ್ಯುತ್ತಮ ಕಥೆಗಳನ್ನು ತೆಗೆದುಕೊಂಡು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ " ಎಂದು ಅವರು ಹೇಳಿದರು. ವೇವ್ಸ್ ಒ ಟಿ ಟಿ ಕುರಿತು ಮಾತನಾಡಿದ ಶ್ರೀ ಶಿವ ಸಾಗರ್, ಭಾರತದ ಶ್ರೀಮಂತ ಇತಿಹಾಸಕ್ಕೆ ಸೂಕ್ತ ವೇದಿಕೆ ಸಿಗಲಿದೆ ಎಂದರು.

ವೇವ್ಸ್ ಒ ಟಿ ಟಿ ಪ್ಲಾಟ್‌ ಫಾರ್ಮ್

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು 55ನೇ ಅಂತರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸಾರ್ವಜನಿಕ ಪ್ರಸಾರಣ ಸಂಸ್ಥೆ ಪ್ರಸಾರ್ ಭಾರತಿಯ 'ವೇವ್ಸ್' ಓವರ್-ದಿ-ಟಾಪ್ (ಒ ಟಿ ಟಿ) ಪ್ಲಾಟ್‌ ಫಾರ್ಮ್ ಅನ್ನು ಲಾಂಚ್ ಮಾಡಿದರು. ಈ ಪ್ಲಾಟ್‌ಫಾರ್ಮ್‌ನ ಪ್ರಾರಂಭದೊಂದಿಗೆ, ಭಾರತದ ಸಾರ್ವಜನಿಕ ಪ್ರಸಾರಕರಾದ ದೂರದರ್ಶನ, ಡಿಜಿಟಲ್ ಸ್ಟ್ರೀಮಿಂಗ್ ಸೇವೆಗಳ ಹೆಚ್ಚುತ್ತಿರುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಆ ಜಾಗದಲ್ಲಿ ತೊಡಗಿದೆ. ಈ ಪ್ಲಾಟ್‌ಫಾರ್ಮ್ ಕ್ಲಾಸಿಕ್ ವಿಷಯ ಮತ್ತು ಇಂದಿನ ಕಾರ್ಯಕ್ರಮಗಳ ಸಮೃದ್ಧ ಮಿಶ್ರಣವನ್ನು ಒದಗಿಸುವ ಮೂಲಕ ನಾಸ್ಟಾಲ್ಜಿಯನ್ನು ಮರುಜೀವಂತಗೊಳಿಸಲು ಮತ್ತು ಆಧುನಿಕ ಡಿಜಿಟಲ್ ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳಲು ಉದ್ದೇಶಿಸಿದೆ.

ವೇವ್ಸ್ ಒಂದು ಪ್ರಮುಖ ಸಮಗ್ರ ಒ ಟಿ ಟಿ ಪ್ಲಾಟ್‌ ಫಾರ್ಮ್ ಆಗಿ ಪಾದಾರ್ಪಣೆ ಮಾಡಿದೆ . ಇದು ಅಂತರ್ಗತ ಭಾರತದ ವಿಷಯವನ್ನು ಪ್ರಸ್ತುತಪಡಿಸುತ್ತದೆ, ಇದು ಭಾರತೀಯ ಸಂಸ್ಕೃತಿಯ ದೃಷ್ಟಿಕೋನವನ್ನು ಅಂತರರಾಷ್ಟ್ರೀಯ ದೃಷ್ಟಿಕೋನದಿಂದ ಪ್ರಸ್ತುತಪಡಿಸುತ್ತದೆ. ಇದರ ಕಾರ್ಯಕ್ರಮಗಳು ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ 12 ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಸಾರವಾಗಲಿದೆ. ಇದು ಬೇಡಿಕೆಯ ಮೇರೆಗೆ ವೀಡಿಯೊ, ಫ್ರೀ-ಟು-ಪ್ಲೇ ಗೇಮಿಂಗ್, ರೇಡಿಯೋ ಸ್ಟ್ರೀಮಿಂಗ್, ಲೈವ್ ಟಿವಿ ಸ್ಟ್ರೀಮಿಂಗ್, 65 ಲೈವ್ ಚಾನೆಲ್‌ ಗಳು ಮತ್ತು ವೀಡಿಯೊ ಮತ್ತು ಗೇಮಿಂಗ್ ವಿಷಯಕ್ಕಾಗಿ ಅಪ್ಲಿಕೇಶನ್-ಇನ್-ಆಪ್ ಇಂಟಿಗ್ರೇಷನ್‌ಗಳನ್ನು ಸಹ ಒಳಗೊಂಡಿದೆ. ಒ ಎನ್ ಡಿ ಸಿ ಬೆಂಬಲಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ವೇವ್ಸ್ ನಲ್ಲಿ ಆನ್‌ ಲೈನ್ ಶಾಪಿಂಗ್ ಸಹ ಮಾಡಬಹುದು.

ವೇವ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಓದಿ: https://pib.gov.in/PressReleaseIframePage.aspx?PRID=2075273

 

*****

iffi reel

(Release ID: 2075972) Visitor Counter : 6