ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಾವೊ ಪಿಡಿಆರ್‌ ನ ವಿಯೆಂಟಿಯಾನ್‌ ನಲ್ಲಿ ನಡೆದ 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅವತರಣಿಕೆ

Posted On: 10 OCT 2024 7:14PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ  ಶ್ರೀ ಸೋನೆಕ್ಸೆ ಸಿಫಾಂಡೋನ್ ಅವರೇ,

ಮಹಾರಾಜ ಅವರೇ,

ಮಹನೀಯರುಗಳೇ,

ಎಲ್ಲರಿಗೂ ನಮಸ್ಕಾರ.

ಇಂದು, ಆಸಿಯಾನ್ ಕುಟುಂಬದೊಂದಿಗೆ ಹನ್ನೊಂದನೇ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಗೌರವ ವಿಷಯವಾಗಿದೆ.

ಹತ್ತು ವರ್ಷಗಳ ಹಿಂದೆ, ನಾನು ಭಾರತದ ‘ಆಕ್ಟ್ ಈಸ್ಟ್’ ನೀತಿಯನ್ನು ಘೋಷಿಸಿದೆ. ಕಳೆದ ದಶಕದಲ್ಲಿ, ಈ ಉಪಕ್ರಮವು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುನರುಜ್ಜೀವನಗೊಳಿಸಿದೆ, ಅವುಗಳನ್ನು ಈಗ ನವೀಕರಿಸಿ ಇನ್ನೂ ಉತ್ತಮ  ಶಕ್ತಿ, ನಿರ್ದೇಶನ ಮತ್ತು ಆವೇಗದೊಂದಿಗೆ ರೂಪಿಸಿದ್ದೇವೆ.

ಆಸಿಯಾನ್ ದೇಶಗಳ ಕೇಂದ್ರೀಕರಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾ, ನಾವು 2019 ರಲ್ಲಿ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಉಪಕ್ರಮವು "ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್  ಔಟ್‌ಲುಕ್" ಗೆ ಪೂರಕವಾಗಿದೆ.

ಕಳೆದ ವರ್ಷ, ನಾವು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಕಡಲ ಅಭ್ಯಾಸಕ್ರಮಗಳನ್ನು ಪ್ರಾರಂಭಿಸಿದ್ದೇವೆ.

ಕಳೆದ 10 ವರ್ಷಗಳಲ್ಲಿ, ಆಸಿಯಾನ್ ಪ್ರದೇಶದೊಂದಿಗಿನ ನಮ್ಮ ವ್ಯಾಪಾರವು ಸುಮಾರು ದ್ವಿಗುಣಗೊಂಡಿದೆ, 130 ಶತಕೋಟಿ ಯು.ಎಸ್.‌ ಡಾಲರ್‌ ಅನ್ನು ಮೀರಿದೆ.

ಇಂದು, ಭಾರತವು ಏಳು ಆಸಿಯಾನ್ ದೇಶಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ ಮತ್ತು ಶೀಘ್ರದಲ್ಲೇ, ಬ್ರೂನೈಗೆ ಸಹ ನೇರ ವಿಮಾನಗಳ ಸಂಪರ್ಕ ಪ್ರಾರಂಭವಾಗಲಿವೆ.

ಹೆಚ್ಚುವರಿಯಾಗಿ, ನಾವು ಟಿಮೋರ್-ಲೆಸ್ಟೆಯಲ್ಲಿ ಹೊಸ ರಾಯಭಾರ ಕಚೇರಿಯನ್ನು ತೆರೆದಿದ್ದೇವೆ.

ಆಸಿಯಾನ್ ಪ್ರದೇಶದಲ್ಲಿ, ನಾವು ಫಿನ್‌ ಟೆಕ್‌  ಸಂಪರ್ಕವನ್ನು ಸ್ಥಾಪಿಸಿದ ಮೊದಲ ದೇಶ ಸಿಂಗಾಪುರವಾಗಿದೆ, ಮತ್ತು ಈ ಯಶಸ್ಸನ್ನು ಈಗ ಇತರ ರಾಷ್ಟ್ರಗಳಲ್ಲಿ ಅನುಕರಿಸಲಾಗುತ್ತಿದೆ.

ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಜನಕೇಂದ್ರಿತ ವಿಧಾನದ ಮೇಲೆ ಸ್ಥಾಪಿತವಾಗಿದೆ. 300 ಕ್ಕೂ ಹೆಚ್ಚು ಆಸಿಯಾನ್ ವಿದ್ಯಾರ್ಥಿಗಳು ನಳಂದ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿವೇತನದೊಂದಿಗೆ ಪ್ರಯೋಜನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಬೃಹತ್‌ ಜಾಲವನ್ನು ಪ್ರಾರಂಭಿಸಲಾಗಿದೆ.

ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾದಲ್ಲಿ ನಮ್ಮ ಪರಂಪರೆಯನ್ನು ಸಂರಕ್ಷಿಸಲು ನಾವು ಕೆಲಸ ಮಾಡಿದ್ದೇವೆ.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಅಥವಾ ನೈಸರ್ಗಿಕ ವಿಕೋಪಗಳಿಗೆ ಪ್ರತಿಕ್ರಿಯೆಯಾಗಿ, ನಾವು ಪರಸ್ಪರ ಸಹಾಯವನ್ನು ಒದಗಿಸಿದ್ದೇವೆ ಮತ್ತು ನಮ್ಮ ಮಾನವೀಯ ಜವಾಬ್ದಾರಿಗಳನ್ನು ಪೂರೈಸಿದ್ದೇವೆ.

ವಿಜ್ಞಾನ ಮತ್ತು ತಂತ್ರಜ್ಞಾನ ನಿಧಿ, ಡಿಜಿಟಲ್ ನಿಧಿ ಮತ್ತು ಹಸಿರು ನಿಧಿ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಯೋಗಕ್ಕಾಗಿ ನಿಧಿಗಳನ್ನು ಸ್ಥಾಪಿಸಲಾಗಿದೆ. ಈ ಉಪಕ್ರಮಗಳಿಗೆ ಭಾರತವು 30 ಮಿಲಿಯನ್‌‌ ಯು.ಎಸ್.‌ ಡಾಲರ್‌ ಗಿಂತಲೂ ಹೆಚ್ಚಿನ ಕೊಡುಗೆ ನೀಡಿದೆ. ಪರಿಣಾಮವಾಗಿ, ನಮ್ಮ ಸಹಕಾರವು ಈಗ ನೀರೊಳಗಿನ ಯೋಜನೆಗಳಿಂದ ಪ್ರಾರಂಭವಾಗಿ ಬಾಹ್ಯಾಕಾಶ ಪರಿಶೋಧನೆಯವರೆಗೆ ವ್ಯಾಪಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ ದಶಕದಲ್ಲಿ ನಮ್ಮ ಪಾಲುದಾರಿಕೆಯು ಪ್ರತಿಯೊಂದು ಅಂಶದಲ್ಲೂ ಗಮನಾರ್ಹವಾಗಿ ವಿಸ್ತರಿಸಿದೆ.

ಮತ್ತು, 2022 ರಲ್ಲಿ ನಾವು ಅದನ್ನು 'ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ'ದ ಸ್ಥಾನಮಾನಕ್ಕೆ ಏರಿಸಿದ್ದೇವೆ ಎಂಬುದು ಬಹಳ ತೃಪ್ತಿಯ ವಿಷಯವಾಗಿದೆ.

ಸ್ನೇಹಿತರೇ,

ನಾವು ನೆರೆಹೊರೆಯವರು, ಜಾಗತಿಕ ದಕ್ಷಿಣದಲ್ಲಿ ಪಾಲುದಾರರು ಮತ್ತು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಭೌಗೋಳಿಕ ಪ್ರದೇಶದಲ್ಲಿದ್ದೇವೆ. ನಾವು ಶಾಂತಿ-ಪ್ರೀತಿಯ ರಾಷ್ಟ್ರಗಳು, ಅದು ಪರಸ್ಪರರ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುತ್ತದೆ ಮತ್ತು ನಮ್ಮ ಯುವಕರಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.

21 ನೇ ಶತಮಾನವು ಭಾರತ ಮತ್ತು ಆಸಿಯಾನ್ ದೇಶಗಳಿಗೆ "ಏಷ್ಯನ್ ಶತಮಾನ" ಎಂದು ನಾನು ನಂಬುತ್ತೇನೆ. ಇಂದು, ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷ ಮತ್ತು ಉದ್ವಿಗ್ನತೆ ಇರುವಾಗ, ಭಾರತ ಮತ್ತು ಆಸಿಯಾನ್ ನಡುವಿನ ಸ್ನೇಹ, ಸಮನ್ವಯ, ಮಾತುಕತೆ ಮತ್ತು ಸಹಕಾರವು ಅತ್ಯಂತ ಮಹತ್ವದ್ದಾಗಿದೆ.

ಆಸಿಯಾನ್  ನ ಯಶಸ್ವಿ ಅಧ್ಯಕ್ಷ ಸ್ಥಾನಕ್ಕಾಗಿ ಲಾವೊ ಪಿಡಿಆರ್ ನ ಪ್ರಧಾನಮಂತ್ರಿ ಶ್ರೀ ಸೋನೆಕ್ಸೆ ಸಿಫಾಂಡೋನ್  ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇಂದಿನ ಸಭೆಯು ಭಾರತ-ಆಸಿಯಾನ್ ಪಾಲುದಾರಿಕೆಗೆ ಹೊಸ ಆಯಾಮಗಳನ್ನು ತರುತ್ತದೆ ಎಂಬ ವಿಶ್ವಾಸ ನನಗಿದೆ.

ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಟಿಪ್ಪಣಿಯ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****

 



(Release ID: 2064062) Visitor Counter : 17