ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಒಡಿಶಾದ ಭುವನೇಶ್ವರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 17 SEP 2024 3:30PM by PIB Bengaluru

ಜೈ ಜಗನ್ನಾಥ!

ಜೈ ಜಗನ್ನಾಥ!

ಜೈ ಜಗನ್ನಾಥ!

ಒಡಿಶಾ ರಾಜ್ಯಪಾಲರಾದ ರಘುಬರ್ ದಾಸ್ ಜಿ, ಒಡಿಶಾದ ಜನಪ್ರಿಯ ಮುಖ್ಯಮಂತ್ರಿ, ಮೋಹನ್ ಮಾಂಝಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಮ್ ಜಿ, ಧರ್ಮೇಂದ್ರ ಪ್ರಧಾನ್ ಜಿ ಮತ್ತು ಅನ್ನಪೂರ್ಣ ದೇವಿ ಜಿ, ಒಡಿಶಾದ ಉಪಮುಖ್ಯಮಂತ್ರಿ ಕೆ.ವಿ. ಸಿಂಗ್ ದೇವ್ ಜಿ ಮತ್ತು ಸಂಸತ್ ಸದಸ್ಯೆ ಶ್ರೀಮತಿ ಪ್ರವತಿ ಪರಿದಾ ಜಿ, ವಿಧಾನಸಭೆಯ ಸದಸ್ಯರೆ, ದೇಶದ ಮೂಲೆ ಮೂಲೆಯಿಂದ ಬಂದು ನಮ್ಮೊಂದಿಗೆ ಸೇರಿರುವ ಇತರೆ ಎಲ್ಲ ಗಣ್ಯರೆ, ಒಡಿಶಾದ ನನ್ನ ಸಹೋದರ ಸಹೋದರಿಯರೆ.

ಒಡಿಶಾದ ಆತ್ಮೀಯ ಸಹೋದರ ಸಹೋದರಿಯರೆ,

ಮುಂಬರುವ ಹಬ್ಬದ ಋತುವಿಗೆ ನನ್ನ ಹಾರ್ದಿಕ ಶುಭಾಶಯಗಳು.

ಜಗನ್ನಾಥನ ಕೃಪೆಯಿಂದ ಮತ್ತೊಮ್ಮೆ ಒಡಿಶಾದ ಪುಣ್ಯಭೂಮಿಗೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ಭಗವಾನ್ ಜಗನ್ನಾಥನು ತನ್ನ ಕೃಪೆ ತೋರಿದಾಗ, ಭಗವಾನ್ ಜಗನ್ನಾಥನ ಆಶೀರ್ವಾದವು ನಮ್ಮ ಮೇಲೆ ಸುರಿದಾಗ, ಅದು ಭಗವಾನ್ ಜಗನ್ನಾಥನ ಸೇವೆ ಮಾಡುವ ಜತೆಗೆ ಜನರಿಗೆ, ಹೇರಳವಾಗಿ ಸೇವೆ ಮಾಡುವ ಅವಕಾಶ ತರುತ್ತದೆ.

ಸ್ನೇಹಿತರೆ,

ಇಂದು ಇಡೀ ದೇಶ ಗಣೇಶ ಹಬ್ಬ ಆಚರಿಸುತ್ತಿದ್ದು, ಗಣೇಶನಿಗೆ ವಿದಾಯ ಹೇಳಲಾಗುತ್ತಿದೆ. ಇಂದು ಅನಂತ ಚತುರ್ದಶಿಯ ಪವಿತ್ರ ಸಂದರ್ಭವೂ ಹೌದು. ಹೆಚ್ಚುವರಿಯಾಗಿ ಇಂದು ವಿಶ್ವಕರ್ಮ ಜಯಂತಿ. ಭಗವಾನ್ ವಿಶ್ವಕರ್ಮನ ರೂಪದಲ್ಲಿ ಶ್ರಮ ಮತ್ತು ಕೌಶಲ್ಯವನ್ನು ಪೂಜಿಸುವ ವಿಶ್ವದ ಏಕೈಕ ದೇಶ ಭಾರತ. ನಾನು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂತಹ ಶುಭ ದಿನದಂದು ಒಡಿಶಾದ ನನ್ನ ತಾಯಂದಿರು ಮತ್ತು ಸಹೋದರಿಯರಿಗಾಗಿ ಸುಭದ್ರಾ ಯೋಜನೆ ಪ್ರಾರಂಭಿಸಲು ನನಗೆ ಅವಕಾಶ ಸಿಕ್ಕಿದೆ. ಇದೂ ಕೂಡ ಜಗನ್ನಾಥನ ಕೃಪೆಯೇ ಆಗಿದೆ. ಮಾತಾ ಸುಭದ್ರೆಯ ಹೆಸರಿನಲ್ಲಿ ಯೋಜನೆ ಜಾರಿಯಾಗುತ್ತಿದ್ದು, ನಮ್ಮನ್ನು ಆಶೀರ್ವದಿಸಲು ಇಂದ್ರನೂ ಆಗಮಿಸಿದ್ದಾನೆ. ಜಗನ್ನಾಥನ ಈ ಭೂಮಿಯಿಂದ ಇಂದು ದೇಶಾದ್ಯಂತ 30 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನೀಡಲಾಗಿದೆ. ಇವುಗಳಲ್ಲಿ 26 ಲಕ್ಷ ಮನೆಗಳನ್ನು ಹಳ್ಳಿಗಳಲ್ಲಿ ಕಟ್ಟಲಾಗಿದೆ. ನಮ್ಮ ದೇಶದ ವಿವಿಧ ನಗರಗಳಲ್ಲಿ 400,000 ಮನೆಗಳನ್ನು ನಿರ್ಮಿಸಲಾಗಿದೆ. ಒಡಿಶಾದ ಬೆಳವಣಿಗೆಗಾಗಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಲವಾರು ಅಭಿವೃದ್ಧಿ ಯೋಜನೆಗಳು ಉದ್ಘಾಟನೆಗೊಂಡಿವೆ, ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ, ಒಡಿಶಾದ ಜನತೆಗೆ ಮತ್ತು ಎಲ್ಲಾ ದೇಶವಾಸಿಗಳಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಹೋದರ ಸಹೋದರಿಯರೆ,

ಒಡಿಶಾದಲ್ಲಿ ಬಿಜೆಪಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದೆ. ಆ ನಂತರ ಇದು ನನ್ನ ಮೊದಲ ಭೇಟಿ. ಇಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಯಾದರೆ ಒಡಿಶಾ ಅಭಿವೃದ್ಧಿಯ ಹೊಸ ಉತ್ತುಂಗಕ್ಕೆ ಏರುತ್ತದೆ ಎಂದು ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೆ. ಹಳ್ಳಿಯ ಬಡವರು ಮತ್ತು ನಿರ್ಲಕ್ಷಿತ ಕುಟುಂಬಗಳು, ದಲಿತರು, ಆದಿವಾಸಿಗಳು, ನಮ್ಮ ತಾಯಂದಿರು, ಸಹೋದರಿಯರು, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಕನಸುಗಳು, ಹಾಗೆಯೇ ನಮ್ಮ ಯುವಕರು ಯುವತಿಯರು ಮತ್ತು ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದ ಕನಸುಗಳು ನನಸಾಗುತ್ತವೆ. ನನಗೆ ಇದರಲ್ಲಿ ನಂಬಿಕೆಯಿದೆ, ಮತ್ತು ಇದು ಜಗನ್ನಾಥನ ಆಶೀರ್ವಾದದಿಂದ ಕೂಡಿದೆ. ಇಂದು ನಾವು ನೀಡಿದ ಭರವಸೆಗಳು ಅಭೂತಪೂರ್ವ ವೇಗದಲ್ಲಿ ಈಡೇರುತ್ತಿರುವುದನ್ನು ನೀವು ನೋಡಬಹುದು. ನಮ್ಮ ಸರ್ಕಾರ ರಚನೆಯಾದ ಕೂಡಲೇ ಜಗನ್ನಾಥ ದೇವಾಲಯದ 4 ದ್ವಾರಗಳನ್ನು ತೆರೆಯುತ್ತೇವೆ ಎಂದು ಭರವಸೆ ನೀಡಿದ್ದೆವು. ಸರ್ಕಾರ ರಚನೆಯಾದ ತಕ್ಷಣವೇ ಜಗನ್ನಾಥ ದೇವಾಲಯ ಸಂಕೀರ್ಣದ ಮುಚ್ಚಿದ ಗೇಟ್‌ಗಳನ್ನು ತೆರೆಯಲಾಗಿದೆ, ಇದನ್ನು ನಾವು ಖಚಿತಪಡಿಸಿದ್ದೇವೆ. ನಾವು ಹೇಳಿದಂತೆ, ದೇವಾಲಯದ "ರತ್ನ ಭಂಡಾರ"(ಖಜಾನೆ)ವನ್ನು ಸಹ ತೆರೆಯಲಾಗಿದೆ. ಬಿಜೆಪಿ ಸರಕಾರ ಜನರ ಸೇವೆಯಲ್ಲಿ ಹಗಲಿರುಳು ದುಡಿಯುತ್ತಿದೆ. ಮೋಹನ್ ಜಿ ಅವರ ನೇತೃತ್ವದಲ್ಲಿ ಕೆ.ವಿ. ಸಿಂಗ್ ದೇವ್ ಜಿ, ಸಹೋದರಿ ಪರವತಿ ಪರಿದಾ ಜಿ ಮತ್ತು ಸರ್ಕಾರದ ಎಲ್ಲಾ ಸಚಿವರು ನೇರವಾಗಿ ಜನರನ್ನು ತಲುಪಿ ಅವರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ, ನನ್ನ ಇಡೀ ತಂಡವನ್ನು ಮತ್ತು ಇಲ್ಲಿರುವ ನನ್ನ ಎಲ್ಲ ಸಹೋದ್ಯೋಗಿಗಳನ್ನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ. ನಾನು ಅವರನ್ನು ಅಭಿನಂದಿಸುತ್ತೇನೆ.

ಸಹೋದರ ಸಹೋದರಿಯರೆ,

ಇನ್ನೊಂದು ಕಾರಣಕ್ಕೂ ಇಂದು ವಿಶೇಷ ದಿನವಾಗಿದೆ. ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಇಂದಿಗೆ 100 ದಿನಗಳು ತುಂಬಿವೆ. ಈ ಸಮಯದಲ್ಲಿ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ 100 ದಿನಗಳಲ್ಲಿ ಬಡವರಿಗೆ 3 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವುದಾಗಿ ತೀರ್ಮಾನಿಸಲಾಗಿದೆ. ಕಳೆದ 100 ದಿನಗಳಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ರಧಾನ ಮಂತ್ರಿ ಪ್ಯಾಕೇಜ್ ಘೋಷಿಸಲಾಗಿದೆ, ಇದು ಯುವಜನರಿಗೆ ಹೆಚ್ಚು ಪ್ರಯೋಜನ ಒದಗಿಸುತ್ತದೆ. ಈ ಯೋಜನೆಯಡಿ, ಖಾಸಗಿ ಕಂಪನಿಗಳಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕರಿಗೆ ಸರ್ಕಾರವು ಮೊದಲ ಸಂಬಳ ನೀಡುತ್ತದೆ. ಒಡಿಶಾ ಸೇರಿದಂತೆ ದೇಶಾದ್ಯಂತ 75,000 ಹೊಸ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಕೆಲವು ದಿನಗಳ ಹಿಂದೆ, 25,000 ಹಳ್ಳಿಗಳನ್ನು ಸುಸಜ್ಜಿತ ರಸ್ತೆಗಳೊಂದಿಗೆ ಸಂಪರ್ಕಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು ನನ್ನ ಒಡಿಶಾದ ಹಳ್ಳಿಗಳಿಗೂ ಪ್ರಯೋಜನ ನೀಡುತ್ತದೆ. ಬುಡಕಟ್ಟು ಸಚಿವಾಲಯದ ಬಜೆಟ್ ಅನ್ನು 2 ಪಟ್ಟು ಹೆಚ್ಚಿಸಲಾಗಿದೆ. ದೇಶಾದ್ಯಂತ ಸುಮಾರು 60,000 ಬುಡಕಟ್ಟು ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಘೋಷಿಸಲಾಗಿದೆ. ಕಳೆದ 100 ದಿನಗಳಲ್ಲಿ ಸರ್ಕಾರಿ ನೌಕರರಿಗೂ ಅತ್ಯುತ್ತಮ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಹೆಚ್ಚುವರಿಯಾಗಿ, ಉದ್ಯೋಗಿಗಳು, ಅಂಗಡಿಯವರು ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಆದಾಯ ತೆರಿಗೆ ಕಡಿತ ಮಾಡಲಾಗಿದೆ.

ಸ್ನೇಹಿತರೆ,

ಕಳೆದ 100 ದಿನಗಳಲ್ಲಿ ಒಡಿಶಾ ಸೇರಿದಂತೆ ದೇಶಾದ್ಯಂತ 11 ಲಕ್ಷ ಹೊಸ "ಲಖಪತಿ ದೀದಿಗಳನ್ನು" ಸೃಜಿಸಲಾಗಿದೆ. ಇತ್ತೀಚೆಗಷ್ಟೇ ಭತ್ತದ ಬೆಳೆಗಾರರು, ಎಣ್ಣೆಕಾಳು ಬೆಳೆಗಾರರು, ಈರುಳ್ಳಿ ಬೆಳೆಗಾರರಿಗಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ಖಚಿತಪಡಿಸಲು ವಿದೇಶಿ ತೈಲದ ಮೇಲಿನ ಆಮದು ಸುಂಕ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಬಾಸ್ಮತಿ ಅಕ್ಕಿ ಮೇಲಿನ ರಫ್ತು ಸುಂಕ ಕಡಿಮೆ ಮಾಡಲಾಗಿದೆ, ಇದು ಅಕ್ಕಿ ರಫ್ತುಗಳನ್ನು ಹೆಚ್ಚಿಸುತ್ತದೆ, ಬಾಸ್ಮತಿ ಅಕ್ಕಿ ಬೆಳೆಗಾರರಿಗೆ ಪ್ರಯೋಜನ ನೀಡುತ್ತದೆ. ಮುಂಗಾರು(ಖಾರಿಫ್) ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಹೆಚ್ಚಿಸಲಾಗಿದ್ದು, ದೇಶಾದ್ಯಂತ ಲಕ್ಷಾಂತರ ರೈತರಿಗೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಮೊತ್ತದ ಲಾಭ ಒದಗಿಸಲಾಗಿದೆ. ಕಳೆದ 100 ದಿನಗಳಲ್ಲಿ, ಎಲ್ಲರ ಅನುಕೂಲಕ್ಕಾಗಿ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸ್ನೇಹಿತರೆ,

ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಯು ಅದರ ಅರ್ಧದಷ್ಟು ಜನಸಂಖ್ಯೆಯ ಸಮಾನ ಭಾಗವಹಿಸುವಿಕೆ ಇದ್ದಾಗ ಮಾತ್ರ ಪ್ರಗತಿ ಹೊಂದುತ್ತದೆ, ಅಂದರೆ ನಮ್ಮ ಮಹಿಳೆಯರು. ಆದ್ದರಿಂದ, ಮಹಿಳೆಯರ ಪ್ರಗತಿ ಮತ್ತು ಬೆಳೆಯುತ್ತಿರುವ ಶಕ್ತಿ ಒಡಿಶಾದ ಅಭಿವೃದ್ಧಿ ಮಂತ್ರವಾಗಿದೆ. ಇಲ್ಲಿ, ಜಗನ್ನಾಥನ ಜತೆಗೆ ಸುಭದ್ರಾ ದೇವಿಯ ಉಪಸ್ಥಿತಿಯು ನಮಗೆ ಈ ಪಾಠವನ್ನು ಕಲಿಸುತ್ತದೆ. ನಾನು ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಸುಭದ್ರಾ ದೇವಿಯ ರೂಪದಲ್ಲಿ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸುಭದ್ರಾ ಯೋಜನೆಯನ್ನು ಉಡುಗೊರೆಯಾಗಿ ನೀಡುವುದು ಹೊಸ ಬಿಜೆಪಿ ಸರ್ಕಾರದ ಆರಂಭಿಕ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಒಡಿಶಾದ 1 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯಡಿ ಮಹಿಳೆಯರು ಒಟ್ಟು 50,000 ರೂಪಾಯಿ ಪಡೆಯುತ್ತಾರೆ, ಅದನ್ನು ಅವರಿಗೆ ಕಂತುಗಳಲ್ಲಿ ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ, ನೇರವಾಗಿ ನಿಮಗೆ ಹಣ ತಲುಪುತ್ತದೆ. ಈ ಯೋಜನೆಯು ಆರ್‌ಬಿಐನ ಡಿಜಿಟಲ್ ಕರೆನ್ಸಿ ಪೈಲಟ್ ಯೋಜನೆಯೊಂದಿಗೆ ಸಂಪರ್ಕ ಹೊಂದಿದೆ. ಈ ಡಿಜಿಟಲ್ ಕರೆನ್ಸಿಯ ಮೂಲಕ, ನೀವು ಎಲ್ಲಾ ಸಹೋದರಿಯರು ನೀವು ಬಯಸಿದಾಗಲೆಲ್ಲಾ ಹಣವನ್ನು ಡಿಜಿಟಲ್ ಆಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ. ಒಡಿಶಾದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ದೇಶದಲ್ಲಿ ಈ ಮೊದಲ ರೀತಿಯ ಡಿಜಿಟಲ್ ಕರೆನ್ಸಿ ಯೋಜನೆಯ ಭಾಗವಾಗಿದ್ದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸುಭದ್ರಾ ಯೋಜನೆಯು ನನ್ನ ತಾಯಂದಿರು ಮತ್ತು ಸಹೋದರಿಯರನ್ನು ಸಶಕ್ತಗೊಳಿಸಲಿ, ಅವರಿಗೆ ಆಶೀರ್ವಾದ ಸಿಗಲಿ ಎಂದು ನಾನು ಸುಭದ್ರಾ ದೇವಿಯನ್ನು ಪ್ರಾರ್ಥಿಸುತ್ತೇನೆ.

ಸಹೋದರ ಸಹೋದರಿಯರೆ,

ಸುಭದ್ರಾ ಯೋಜನೆಯು ಒಡಿಶಾದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಹೆಣ್ಣು ಮಗಳನ್ನು ತಲುಪುವುದನ್ನು ಖಚಿತಪಡಿಸಲು ರಾಜ್ಯಾದ್ಯಂತ ವಿವಿಧ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂಬುದು ನನಗೆ ತಿಳಿದುಬಂದಿದೆ. ಯೋಜನೆ ಕುರಿತು ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ  ನೀಡಲಾಗುತ್ತಿದೆ. ಈ ಸೇವಾ ಅಭಿಯಾನದಲ್ಲಿ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಕೂಡ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಈ ಜಾಗೃತಿ ಅಭಿಯಾನದಲ್ಲಿ ಶ್ರಮಿಸಿದ ಸರ್ಕಾರ, ಆಡಳಿತ, ಬಿಜೆಪಿ ಶಾಸಕರು, ಸಂಸದರು ಮತ್ತು ಲಕ್ಷಾಂತರ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಭಾರತದಲ್ಲಿರುವ ಮಹಿಳಾ ಸಬಲೀಕರಣದ ಮತ್ತೊಂದು ಪ್ರತಿಬಿಂಬವೆಂದರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ. ಈ ಯೋಜನೆಯ ಮೂಲಕ ಈಗ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಮಹಿಳೆಯರ ಹೆಸರಿಗೆ ಆಸ್ತಿ ನೋಂದಣಿಯಾಗುತ್ತಿದೆ. ಇಂದು ದೇಶಾದ್ಯಂತ ಸುಮಾರು 30 ಲಕ್ಷ ಕುಟುಂಬಗಳಿಗೆ ಹೊಸ ಮನೆಗಳನ್ನು ಹಸ್ತಾಂತರಿಸಲಾಗಿದೆ. ನಮ್ಮ ಸರ್ಕಾರದ ಈ 3ನೇ ಅವಧಿಯ ಕೆಲವೇ ತಿಂಗಳು ಕಳೆದಿದ್ದರೂ, ಈ ಅಲ್ಪಾವಧಿಯಲ್ಲಿ 15 ಲಕ್ಷ ಹೊಸ ಫಲಾನುಭವಿಗಳಿಗೆ ಅನುಮೋದನೆ ಪತ್ರಗಳನ್ನು ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ.  ಒಡಿಶಾದ ಜಗನ್ನಾಥನ ಈ ಪವಿತ್ರ ಭೂಮಿಯಿಂದ ಈ ಮಂಗಳಕರ ಕಾರ್ಯ ಪ್ರಾರಂಭಿಸಲಾಗಿದೆ. ಒಡಿಶಾದ ಹೆಚ್ಚಿನ ಸಂಖ್ಯೆಯ ಬಡ ಕುಟುಂಬಗಳು ಈ ಪ್ರಯೋಜನಗಳನ್ನು ಪಡೆಯುವವರಲ್ಲಿ ಸೇರಿವೆ. ಇಂದು ಶಾಶ್ವತ ಮನೆಯನ್ನು ಪಡೆದ ಅಥವಾ ಪಡೆಯುವ ಭರವಸೆ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ, ಇದು ಅವರ ಜೀವನದಲ್ಲಿ ಹೊಸ ಆರಂಭ ಮತ್ತು ಉದಾತ್ತ ಆರಂಭವನ್ನು ಸೂಚಿಸುತ್ತದೆ.

ಸಹೋದರ ಸಹೋದರಿಯರೆ,

ಇಲ್ಲಿಗೆ ಬರುವ ಮುನ್ನ ಬುಡಕಟ್ಟು ಕುಟುಂಬವೊಂದರ ಮನೆಗೆ ಅವರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಈ ಕುಟುಂಬವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ, ತಮ್ಮ ಹೊಸ ಮನೆ ಪಡೆದುಕೊಂಡಿದೆ. ಅವರ ಮುಖದಲ್ಲಿದ್ದ ಸಂತೋಷ ಮತ್ತು ಅವರು ಅನುಭವಿಸಿದ ತೃಪ್ತಿ ನಾನು ಎಂದಿಗೂ ಮರೆಯಲಾಗದ ಸಂಗತಿಗಳಾಗಿವೆ. ಆ ಬುಡಕಟ್ಟು ಕುಟುಂಬದ ಸಹೋದರಿ ಸಂತೋಷದಿಂದ ನನಗೆ ‘ಖೀರ್’ (ಅಕ್ಕಿ ಕಡುಬು) ನೀಡಿದರು! ಖೀರ್ ತಿನ್ನುತ್ತಿದ್ದಾಗ ಸಹಜವಾಗಿಯೇ ಅಮ್ಮನ ನೆನಪಾಯಿತು. ನನ್ನ ತಾಯಿ ಬದುಕಿದ್ದಾಗ, ನನ್ನ ಜನ್ಮದಿನದಂದು ಅವರ ಆಶೀರ್ವಾದ ಪಡೆಯಲು ನಾನು ಅವರನ್ನು ಭೇಟಿ ಮಾಡುತ್ತಿದ್ದೆ, ಅವರು ಯಾವಾಗಲೂ ನನಗೆ ಸಿಹಿ ತಿನ್ನಿಸುತ್ತಿದ್ದರು. ನನ್ನ ತಾಯಿ ನನ್ನೊಂದಿಗೆ ಇಲ್ಲದಿದ್ದರೂ, ಇಂದು, ನನ್ನ ಜನ್ಮದಿನದಂದು ಬುಡಕಟ್ಟು ತಾಯಿ ನನಗೆ ಖೀರ್ ತಿನ್ನಿಸಿ ಆಶೀರ್ವದಿಸಿದರು. ಈ ಅನುಭವ, ಈ ಭಾವನೆ, ನನ್ನ ಜೀವನದುದ್ದಕ್ಕೂ ನಾನು ಋಣಿಯಾಗಿರುತ್ತೇನೆ. ಬಡವರು, ದಲಿತರು, ನಿರ್ಲಕ್ಷಿತರು ಮತ್ತು ಬುಡಕಟ್ಟು ಸಮುದಾಯಗಳ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳು, ಅವರ ಸಂತೋಷ ನನಗೆ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡುವ ಶಕ್ತಿ ನೀಡುತ್ತದೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ರಾಜ್ಯವಾಗಲು ಬೇಕಾದ ಎಲ್ಲವನ್ನೂ ಒಡಿಶಾ ಹೊಂದಿದೆ. ಇಲ್ಲಿರುವ ಯುವಕರ ಪ್ರತಿಭೆ, ಮಹಿಳೆಯರ ಶಕ್ತಿ, ನೈಸರ್ಗಿಕ ಸಂಪನ್ಮೂಲಗಳು, ಕೈಗಾರಿಕೆಗಳಿಗೆ ಇರುವ ಅವಕಾಶಗಳು ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಸಾಮರ್ಥ್ಯ ಹೀಗೆ...ಒಡಿಶಾಗೆ ಏನು ಕೊರತೆಯಿದೆ? ಕಳೆದ 10 ವರ್ಷಗಳಲ್ಲಿ ನಾವು ಕೇಂದ್ರ ಸರ್ಕಾರದಲ್ಲಿದ್ದುಕೊಂಡು ಒಡಿಶಾ ನಮಗೆ ಎಷ್ಟು ಆದ್ಯತೆಯಾಗಿದೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. 10 ವರ್ಷಗಳ ಹಿಂದೆ ಪಡೆದ ಹಣಕ್ಕೆ ಹೋಲಿಸಿದರೆ ಇಂದು ಒಡಿಶಾ 3 ಪಟ್ಟು ಹಣವನ್ನು ಕೇಂದ್ರ ಸರ್ಕಾರದಿಂದ ಪಡೆಯುತ್ತಿದೆ. ಒಡಿಶಾದಲ್ಲಿ ಈ ಹಿಂದೆ ಜಾರಿಯಾಗದ ಯೋಜನೆಗಳು ಈಗ ಕಾರ್ಯಗತಗೊಳ್ಳುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಒಡಿಶಾದ ಜನರು ಈಗ 5 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ. ನಿಮ್ಮ ಆದಾಯ ಲೆಕ್ಕಿಸದೆ, ನಿಮ್ಮ ಮನೆಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿದ್ದರೆ, ಮೋದಿ ಅವರ ವೈದ್ಯಕೀಯ ಅಗತ್ಯಗಳ ಆರೈಕೆ ಮಾಡುತ್ತಾರೆ. ಲೋಕಸಭೆ ಚುನಾವಣೆ ವೇಳೆ ಮೋದಿ ನಿಮಗೆ ಈ ಭರವಸೆ ನೀಡಿದ್ದರು, ಮೋದಿ ಅದೇ ಭರವಸೆ ಈಡೇರಿಸಿದ್ದಾರೆ.

ಸ್ನೇಹಿತರೆ,

ಬಡತನದ ವಿರುದ್ಧ ಬಿಜೆಪಿ ಅಭಿಯಾನದ ದೊಡ್ಡ ಫಲಾನುಭವಿಗಳು ಒಡಿಶಾದಲ್ಲಿ ವಾಸಿಸುವ ದಲಿತ, ನಿರ್ಲಕ್ಷಿತ ಮತ್ತು ಬುಡಕಟ್ಟು ಸಮುದಾಯಗಳಾಗಿವೆ. ಬುಡಕಟ್ಟು ಸಮಾಜದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದು, ಅವರ ಬೇರುಗಳು, ಕಾಡುಗಳು ಮತ್ತು ಭೂಮಿಯ ಹಕ್ಕುಗಳನ್ನು ನೀಡುವುದು, ಬುಡಕಟ್ಟು ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಒದಗಿಸುವುದು ಅಥವಾ ಒಡಿಶಾದ ಬುಡಕಟ್ಟು ಮಹಿಳೆಯನ್ನು ದೇಶದ ಗೌರವಾನ್ವಿತ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವುದು - ಇವು ನಾವು ಮೊದಲ ಬಾರಿಗೆ ತೆಗೆದುಕೊಂಡ ಉಪಕ್ರಮಗಳು.

ಸ್ನೇಹಿತರೆ,

ಒಡಿಶಾದಲ್ಲಿ ಹಲವು ಬುಡಕಟ್ಟು ಪ್ರದೇಶಗಳು ಮತ್ತು ಗುಂಪುಗಳು ತಲೆಮಾರುಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿವೆ. ಕೇಂದ್ರ ಸರ್ಕಾರವು ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳಿಗಾಗಿ ಪ್ರಧಾನಮಂತ್ರಿ ಜನ್ಮ ಯೋಜನೆ ಪ್ರಾರಂಭಿಸಿದೆ. ಒಡಿಶಾದಲ್ಲಿ ಇಂತಹ 13 ಬುಡಕಟ್ಟು ಸಮುದಾಯಗಳನ್ನು ಗುರುತಿಸಲಾಗಿದೆ. ಜನ್ಮನ್ ಯೋಜನೆಯಡಿ, ಅಭಿವೃದ್ಧಿ ಕಾರ್ಯಕ್ರಮಗಳು ಈ ಎಲ್ಲಾ ಸಮುದಾಯಗಳನ್ನು ತಲುಪುವುದನ್ನು ಸರ್ಕಾರ ಖಾತ್ರಿಪಡಿಸುತ್ತಿದೆ. ಹೆಚ್ಚುವರಿಯಾಗಿ, ಕುಡುಗೋಲು ಜೀವಕೋಶದ ರಕ್ತಹೀನತೆ ರೋಗದಿಂದ ಬುಡಕಟ್ಟು ಪ್ರದೇಶಗಳನ್ನು ಮುಕ್ತಗೊಳಿಸಲು ಅಭಿಯಾನ ನಡೆಸಲಾಗುತ್ತಿದೆ. ಕಳೆದ 3 ತಿಂಗಳಲ್ಲಿ ಈ ಅಭಿಯಾನದಡಿ 13 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಸಹೋದರ ಸಹೋದರಿಯರೆ,

ಇಂದು ನಮ್ಮ ದೇಶವು ಹಿಂದೆಂದಿಗಿಂತಲೂ ಸಾಂಪ್ರದಾಯಿಕ ಕೌಶಲ್ಯಗಳ ಸಂರಕ್ಷಣೆಯತ್ತ ಗಮನ ಹರಿಸುತ್ತಿದೆ. ನೂರಾರು ಮತ್ತು ಸಾವಿರಾರು ವರ್ಷಗಳಿಂದ ಕಮ್ಮಾರರು, ಕುಂಬಾರರು, ಅಕ್ಕಸಾಲಿಗರು ಮತ್ತು ಶಿಲ್ಪಿಗಳಂತಹ ಜನರು ನಮ್ಮ ಸಮಾಜದಲ್ಲಿ ನೆಲೆಸಿದ್ದಾರೆ. ಇಂತಹ 18 ವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ವಿಶ್ವಕರ್ಮ ದಿನದಂದು ವಿಶ್ವಕರ್ಮ ಯೋಜನೆ ಪ್ರಾರಂಭಿಸಲಾಯಿತು. ಈ ಯೋಜನೆಗೆ ಸರ್ಕಾರ 13,000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಈವರೆಗೆ 20 ಲಕ್ಷ ಮಂದಿ ಇದರಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ವಿಶ್ವಕರ್ಮ ಕುಶಲಕರ್ಮಿಗಳಿಗೆ ತರಬೇತಿ ನೀಡಿ, ಆಧುನಿಕ ಉಪಕರಣ ಖರೀದಿಸಲು ಸಾವಿರಾರು ರೂಪಾಯಿ ಒದಗಿಸಲಾಗುತ್ತಿದೆ, ಬ್ಯಾಂಕ್‌ಗಳಿಂದ ಸುಲಭವಾಗಿ, ಜಾಮೀನು ರಹಿತ ಸಾಲ ನೀಡಲಾಗುತ್ತಿದೆ. ಬಡವರಿಗೆ ಆರೋಗ್ಯ ಭದ್ರತೆಯಿಂದ ಹಿಡಿದು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯವರೆಗೆ, ಈ ಖಾತರಿಗಳು ಮತ್ತು ಅವರ ಜೀವನದಲ್ಲಿ ಅವರು ತರುವ ಬದಲಾವಣೆಗಳು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ)ದ ನಿಜವಾದ ಶಕ್ತಿಯಾಗುತ್ತವೆ.

ಸ್ನೇಹಿತರೆ,

ಒಡಿಶಾವು ಅಂತಹ ವಿಶಾಲವಾದ ಕರಾವಳಿ, ಹೇರಳವಾದ ಖನಿಜ ಸಂಪನ್ಮೂಲಗಳು ಮತ್ತು ನೈಸರ್ಗಿಕ ಸಂಪತ್ತು ಹೊಂದಿದೆ. ನಾವು ಈ ಸಂಪನ್ಮೂಲಗಳನ್ನು ಒಡಿಶಾದ ಶಕ್ತಿಯಾಗಿ ಪರಿವರ್ತಿಸಬೇಕಾಗಿದೆ. ಮುಂದಿನ 5 ವರ್ಷಗಳಲ್ಲಿ ಒಡಿಶಾದ ರಸ್ತೆ ಮತ್ತು ರೈಲ್ವೆ ಸಂಪರ್ಕವನ್ನು ಹೊಸ ಎತ್ತರಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಇಂದು ರೈಲು ಮತ್ತು ರಸ್ತೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಲಾಂಜಿಗಢ ರಸ್ತೆ-ಅಂಬೋದಲ-ದಿಕ್ಕುಲು ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಭಾಗ್ಯ ನನಗೆ ಸಿಕ್ಕಿದೆ. ಲಕ್ಷ್ಮೀಪುರ ರಸ್ತೆ-ಸಿಂಗಾರಂ-ಟಿಕಿರಿ ರೈಲು ಮಾರ್ಗವೂ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಇದರೊಂದಿಗೆ ಧೆಂಕನಾಲ್-ಸದಾಶಿಬ್‌ಪುರ-ಹಿಂದೋಲ್ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಪರದೀಪದಿಂದ ಸಂಪರ್ಕ ಹೆಚ್ಚಿಸುವ ಕೆಲಸವೂ ಆರಂಭವಾಗಿದೆ. ಜೈಪುರ-ನುವಾಪಾದ ಹೊಸ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ಮಾಡುವ ಅದೃಷ್ಟವೂ ನನಗೆ ಸಿಕ್ಕಿದೆ. ಈ ಯೋಜನೆಗಳು ಒಡಿಶಾದ ಯುವಕರಿಗೆ ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಪುರಿ-ಕೋನಾರ್ಕ್ ರೈಲು ಮಾರ್ಗದ ಕಾಮಗಾರಿಯೂ ಕ್ಷಿಪ್ರಗತಿಯಲ್ಲಿ ಆರಂಭವಾಗುವ ದಿನ ದೂರವಿಲ್ಲ. ಹೈಟೆಕ್ ‘ನಮೋ ಭಾರತ್ ರಾಪಿಡ್ ರೈಲ್’ ಶೀಘ್ರದಲ್ಲೇ ಒಡಿಶಾಗೆ ಬರಲಿದೆ. ಈ ಆಧುನಿಕ ಮೂಲಸೌಕರ್ಯವು ಒಡಿಶಾಗೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ.

ಸ್ನೇಹಿತರೆ,

ಇಂದು ಸೆಪ್ಟೆಂಬರ್ 17, ದೇಶವು ಹೈದರಾಬಾದ್ ವಿಮೋಚನಾ ದಿನ ಆಚರಿಸುತ್ತಿದೆ. ಸ್ವಾತಂತ್ರ್ಯಾ ನಂತರ ನಮ್ಮ ದೇಶವನ್ನು ವಿದೇಶಿ ಶಕ್ತಿಗಳು ತುಂಡು ತುಂಡಾಗಿ ಒಡೆಯುವ ಸ್ಥಿತಿಯಲ್ಲಿತ್ತು. ಅವಕಾಶವಾದಿಗಳು ಅಧಿಕಾರಕ್ಕಾಗಿ ದೇಶವನ್ನು ವಿಭಜಿಸಲು ಸಿದ್ಧರಾಗಿದ್ದರು. ಆ ಸಂದರ್ಭಗಳಲ್ಲಿ, ಸರ್ದಾರ್ ಪಟೇಲ್ ಮುಂದೆ ಬಂದು ದೇಶವನ್ನು ಒಂದುಗೂಡಿಸಲು ಅಸಾಧಾರಣ ಇಚ್ಛಾಶಕ್ತಿ ತೋರಿಸಿದರು. ಸೆಪ್ಟೆಂಬರ್ 17ರಂದು, ಭಾರತ ವಿರೋಧಿ ಉಗ್ರಗಾಮಿ ಶಕ್ತಿಗಳನ್ನು ಹತ್ತಿಕ್ಕುವ ಮೂಲಕ ಹೈದರಾಬಾದ್ ಅನ್ನು ಬಿಡುಗಡೆ ಮಾಡಲಾಯಿತು. ಆದ್ದರಿಂದ, ಹೈದರಾಬಾದ್ ವಿಮೋಚನಾ ದಿನವು ಕೇವಲ ದಿನಾಂಕವಲ್ಲ. ಇದು ರಾಷ್ಟ್ರೀಯ ಸಮಗ್ರತೆ ಮತ್ತು ರಾಷ್ಟ್ರದ ಏಕತೆ ಕಡೆಗೆ ಸಾಗುವ ನಮ್ಮ ಜವಾಬ್ದಾರಿಗಳಿಗೆ ಸ್ಫೂರ್ತಿಯಾಗಿದೆ.

ಸ್ನೇಹಿತರೆ,

ಈ ಮಹತ್ವದ ದಿನದಂದು, ದೇಶವನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುವ ಸವಾಲುಗಳ ಬಗ್ಗೆಯೂ ನಾವು ಗಮನ ಹರಿಸಬೇಕು. ನಾವು ಗಣಪತಿ ಮೂರ್ತಿಯನ್ನು ಬೀಳ್ಕೊಡುವಾಗ, ನಾನು ಇದಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎತ್ತುತ್ತಿದ್ದೇನೆ. ಗಣೇಶ ಹಬ್ಬ ನಮ್ಮ ದೇಶಕ್ಕೆ ಕೇವಲ ನಂಬಿಕೆಯ ಹಬ್ಬವಲ್ಲ. ಇದು ನಮ್ಮ ದೇಶದ ಸ್ವಾತಂತ್ರ್ಯದಲ್ಲೂ ಮಹತ್ವದ ಪಾತ್ರ ವಹಿಸಿದೆ. ಬ್ರಿಟಿಷರು ತಮ್ಮ ಅಧಿಕಾರದ ಹಸಿವಿನಿಂದ ದೇಶವನ್ನು ವಿಭಜಿಸುತ್ತಿರುವಾಗ, ಕೋಮು ವೈಷಮ್ಯವನ್ನು "ಒಡೆದು ಆಳುವ" ಅಸ್ತ್ರವನ್ನಾಗಿ ಬಳಸಿದಾಗ ಲೋಕಮಾನ್ಯ ತಿಲಕರು ಗಣೇಶ ಚತುರ್ಥಿಯ ಸಾರ್ವಜನಿಕ ಆಚರಣೆ ಮೂಲಕ ಭಾರತದ ಆತ್ಮವನ್ನು ಜಾಗೃತಗೊಳಿಸಿದರು. ನಮ್ಮ ಧರ್ಮವು ನಮಗೆ ಜಾತಿ, ತಾರತಮ್ಯ ಮತ್ತು ಭಿನ್ನಾಭಿಪ್ರಾಯಗಳನ್ನು ದಾಟಿ ಮುಂದೆ ಸಾಗಲು ಕಲಿಸುತ್ತದೆ, ಗಣೇಶ ಚತುರ್ಥಿ ಅದರ ಸಂಕೇತವಾಯಿತು. ಇಂದಿಗೂ ಗಣೇಶ ಚತುರ್ಥಿಯಂದು ಎಲ್ಲರೂ ಭಾಗವಹಿಸುತ್ತಾರೆ. ಭೇದಭಾವವಿಲ್ಲ, ಯಾವುದೇ ತಾರತಮ್ಯವಿಲ್ಲ, ಇಡೀ ಸಮಾಜವು ಪ್ರಬಲ ಶಕ್ತಿಯಾಗಿ ಒಗ್ಗಟ್ಟಿನಿಂದ ನಿಂತಿದೆ.

ಸಹೋದರ ಸಹೋದರಿಯರೆ,

ಒಡೆದು ಆಳುವ ನೀತಿ ಅನುಸರಿಸಿದ ಬ್ರಿಟಿಷರು ಅಂದು ಸಹ ಗಣೇಶ ಹಬ್ಬ ಆಚರಣೆಗೆ  ಆಕ್ಷೇಪ ಹೊರಹಾಕಿದರು. ದೇ ರೀತಿ ಇಂದು ಸಹ ಸಮಾಜ ಒಡೆಯಲು ಮತ್ತು ಒಡೆಯಲು ಪ್ರಯತ್ನಿಸುವ ಅಧಿಕಾರ ದಾಹದ ವ್ಯಕ್ತಿಗಳು ಗಣೇಶನ ಪೂಜೆಗೆ ತೊಂದರೆ ಕೊಡುತ್ತಿದ್ದಾರೆ. ನಾನು ಗಣೇಶನ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು  ಕ್ಷೋಭೆಗೆ ಒಳಗಾಗಿರುವುದನ್ನು ನೀವು ನೋಡಿರಬಹುದು. ಇದಲ್ಲದೆ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ, ಅವರು ಗಣೇಶನ ಪ್ರತಿಮೆಯನ್ನು ಜೈಲಿಗೆ ಹಾಕುವ ಮೂಲಕ ಇನ್ನೂ ದೊಡ್ಡ ಅಪರಾಧ ಮಾಡಿದ್ದಾರೆ. ಆ ಚಿತ್ರಗಳಿಂದ ಇಡೀ ದೇಶವೇ ತಲ್ಲಣಗೊಂಡಿದೆ.  ಈ ದ್ವೇಷದ ಮನಸ್ಥಿತಿ ಮತ್ತು ಸಮಾಜದಲ್ಲಿ ವಿಷ ಹರಡುವ ಮನಸ್ಥಿತಿ ನಮ್ಮ ದೇಶಕ್ಕೆ ಅಪಾಯಕಾರಿ. ಆದ್ದರಿಂದ, ಇಂತಹ ದ್ವೇಷಪೂರಿತ ಶಕ್ತಿಗಳು ಮುನ್ನಡೆಯಲು ನಾವು ಬಿಡಬಾರದು.

ಸ್ನೇಹಿತರೆ,

ನಾವು ಒಟ್ಟಾಗಿ ಅನೇಕ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಬೇಕಾಗಿದೆ. ನಾವು ಒಡಿಶಾ ಮತ್ತು ನಮ್ಮ ದೇಶವನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಒಡಿಶಾದ ನಿವಾಸಿಗಳು ಅಭಿವೃದ್ಧಿ ಹೊಂದುತ್ತಿರುವ ಒಡಿಶಾ ನೋಡಲು ಅರ್ಹರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ನನ್ನೊಂದಿಗೆ ಗಟ್ಟಿ ಧ್ವನಿಯಲ್ಲಿ ಹೇಳಿ -

ಜೈ ಜಗನ್ನಾಥ!

ಜೈ ಜಗನ್ನಾಥ!

ಜೈ ಜಗನ್ನಾಥ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ತುಂಬು ಧನ್ಯವಾದಗಳು

 

*****

 



(Release ID: 2057631) Visitor Counter : 11