ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಅಹಮದಾಬಾದ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮದಲ್ಲಿ  ಪ್ರಧಾನಮಂತ್ರಿಯವರ ಭಾಷಣ

Posted On: 16 SEP 2024 8:25PM by PIB Bengaluru

ಭಾರತ್ ಮಾತಾ ಕಿ -ಜೈ!

ಭಾರತ್ ಮಾತಾ ಕಿ -ಜೈ!

ಗುಜರಾತ್ ರಾಜ್ಯಪಾಲರು, ಆಚಾರ್ಯ ದೇವವ್ರತ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸಿ.ಆರ್.ಪಾಟೀಲ್, ಎಲ್ಲಾ ರಾಜ್ಯಪಾಲರು, ಉಪಮುಖ್ಯಮಂತ್ರಿಗಳು, ಸಂಸದರು, ವಿಧಾನಸಭೆಯ ಸದಸ್ಯರು, ಇತರ ಸಾರ್ವಜನಿಕ ಪ್ರತಿನಿಧಿಗಳು ಸೇರಿದ್ದಾರೆ. ದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಇತರ ಜನಪ್ರತಿನಿಧಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ.

ನೀವೆಲ್ಲರೂ ಹೇಗಿದ್ದೀರಿ? ಎಲ್ಲರೂ ಚೆನ್ನಾಗಿದ್ದೀರಾ? ದೇಶದ ಇತರ ರಾಜ್ಯಗಳಿಂದ ಹಲವು ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಸೇರಿಕೊಂಡಿರುವುದರಿಂದ ಇಂದು ನಾನು ಈ  ಭಾಷಣವನ್ನು ಹಿಂದಿಯಲ್ಲಿ ನೀಡುತ್ತೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಮತ್ತು ಹಿಂದಿ ಗುಜರಾತಿನಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ, ಅಲ್ಲವೇ? ಅದು ಕೆಲಸ ಮಾಡುತ್ತದೆ, ಅಲ್ಲವೇ?

ಇಂದು ಇಡೀ ದೇಶವು ಗಣೇಶ ಉತ್ಸವದ ಆಚರಣೆಯಲ್ಲಿ ಮುಳುಗಿದೆ. ಮನೆಗಳಲ್ಲಿ ಗಣಪತಿಯನ್ನು ಸ್ಥಾಪಿಸಲಾಗಿದೆ. ಇಂದು ಮೀಲಾದ್-ಉನ್-ನಬಿ ಕೂಡ. ದೇಶದ ವಿವಿಧ ಭಾಗಗಳಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ಆಚರಣೆಗಳ ನಡುವೆ, ಭಾರತದ ಅಭಿವೃದ್ಧಿಯ ಆಚರಣೆ ಮುಂದುವರಿಯುತ್ತಿದೆ. ಇಲ್ಲಿ ಇಂದು, ಸುಮಾರು ₹8,500 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳ ಅಡಿಗಲ್ಲು ಹಾಕಲಾಗಿದೆ. ಇದರಲ್ಲಿ ರೈಲ್ವೆ, ರಸ್ತೆ, ಮೆಟ್ರೋ ಮತ್ತು ಇತರ ಅನೇಕ ಯೋಜನೆಗಳು ಒಳಗೊಂಡಿವೆ. ಇಂದು, ಗುಜರಾತ್ನ ವೈಭವಕ್ಕೆ ಮತ್ತೊಂದು ನಕ್ಷತ್ರವನ್ನು ಸೇರಿಸಲಾಗಿದೆ. ನಮೋ ಭಾರತ್ ರಾಪಿಡ್ ರೈಲು ಕೂಡ ಇಂದು ಪ್ರಾರಂಭವಾಗಿದೆ. ಇದು ಭಾರತದಲ್ಲಿ ನಗರ ಸಂಪರ್ಕಕ್ಕೆ ಮೈಲಿಗಲ್ಲಾಗಲಿದೆ. ಗುಜರಾತ್ನಲ್ಲಿ ಸಾವಿರಾರು ಕುಟುಂಬಗಳು ಇಂದು ತಮ್ಮ ಹೊಸ ಮನೆಗಳಿಗೆ ಪ್ರವೇಶಿಸುತ್ತಿವೆ. ಇಂದು ಸಾವಿರಾರು ಕುಟುಂಬಗಳಿಗೆ ಅವರ ಶಾಶ್ವತ ಮನೆಯ ಮೊದಲ ಕಂತಿನ ಹಣವೂ ಬಿಡುಗಡೆಯಾಗಿದೆ. ಇನ್ನು ಮುಂದೆ ನೀವು ನವರಾತ್ರಿ, ದಸರಾ, ದುರ್ಗಾ ಪೂಜೆ, ಧನತೇರಸ್, ದೀಪಾವಳಿ ಮತ್ತು ಎಲ್ಲಾ ಇತರ ಹಬ್ಬಗಳನ್ನು ನಿಮ್ಮ ಹೊಸ ಮನೆಗಳಲ್ಲಿ ಅದೇ ಉತ್ಸಾಹದಿಂದ ಆಚರಿಸುತ್ತೀರಿ ಎಂದು ನಾನು ಆಶಿಸುತ್ತೇನೆ. ನಿಮಗೆ ಆಶೀರ್ವಾದಪೂರ್ಣ ಗೃಹಪ್ರವೇಶವಾಗಲಿ ಮತ್ತು ಅದು ನಿಮ್ಮ ಕನಸುಗಳಿಗೆ ರೆಕ್ಕೆ ನೀಡಲಿ ಎಂದು ಹಾರೈಸುತ್ತೇನೆ. ಯಾರ ಹೆಸರಿನಲ್ಲಿ ಈ ಮನೆಗಳನ್ನು ನೋಂದಾಯಿಸಲಾಗಿದೆಯೋ ಆ ಸಾವಿರಾರು ಮಹಿಳೆಯರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ಗುಜರಾತ್ ಮತ್ತು ದೇಶದ ಜನರಿಗೆ ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಈ ಹಬ್ಬದ ವಾತಾವರಣದ ನಡುವೆಯೂ ಒಂದು ನೋವಿದೆ. ಈ ವರ್ಷ ಗುಜರಾತಿನ ಅನೇಕ ಪ್ರದೇಶಗಳಲ್ಲಿ ಏಕಕಾಲದಲ್ಲಿ ಭಾರೀ ಮಳೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ವ್ಯಾಪಕ ಮತ್ತು ತೀವ್ರವಾದ ಮಳೆಯನ್ನು ನಾವು ಕಂಡಿದ್ದೇವೆ. ಈ ಪರಿಸ್ಥಿತಿ ಕೇವಲ ಪ್ರತ್ಯೇಕ ಸ್ಥಳಗಳಲ್ಲಿ ಮಾತ್ರವಲ್ಲದೆ ಗುಜರಾತಿನ ಪ್ರತಿಯೊಂದು ಮೂಲೆಯಲ್ಲೂ ಉಂಟಾಗಿದೆ ಮತ್ತು ಇದರ ಪರಿಣಾಮವಾಗಿ ನಾವು ಅನೇಕ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಜೀವ ಮತ್ತು ಆಸ್ತಿಗೆ ಗಣನೀಯ ಹಾನಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪೀಡಿತರಿಗೆ ಸಾಧ್ಯವಾದ ಎಲ್ಲಾ ಪರಿಹಾರವನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆ ಪಡೆಯುತ್ತಿರುವ ಸ್ನೇಹಿತರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ.

ಸ್ನೇಹಿತರೇ, 

ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ನನ್ನ ಮೊದಲ ಗುಜರಾತ್ ಭೇಟಿ, ನಿಮ್ಮೆಲ್ಲರ ನಡುವೆ ನನ್ನ ಮೊದಲ ಭೇಟಿ. ಗುಜರಾತ್ ನನ್ನ ಜನ್ಮಸ್ಥಳ; ಗುಜರಾತ್ ನನಗೆ ಜೀವನದ ಎಲ್ಲಾ ಪಾಠಗಳನ್ನು ಕಲಿಸಿದೆ. ನೀವು ಯಾವಾಗಲೂ ನನ್ನ ಮೇಲೆ ಪ್ರೀತಿಯನ್ನು ಧಾರೆಯೆರೆದಿದ್ದೀರಿ. ಮತ್ತು ಒಬ್ಬ ಮಗ ಮನೆಗೆ ಹಿಂತಿರುಗಿದಾಗ, ತನ್ನ ಸ್ವಂತ ಜನರಿಂದ ಆಶೀರ್ವಾದ ಪಡೆದಾಗ, ಅವನಿಗೆ ಹೊಸ ಶಕ್ತಿ ಸಿಗುತ್ತದೆ. ಅವನ ಉತ್ಸಾಹ ಮತ್ತು ಮನೋಭಾವ ಇನ್ನಷ್ಟು ಹೆಚ್ಚಾಗುತ್ತದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಶೀರ್ವಾದ ನೀಡಲು ಇಲ್ಲಿಗೆ ಬಂದಿರುವುದನ್ನು ನಾನು  ನನ್ನ ಮಹಾ ಭಾಗ್ಯವೆಂದು  ಪರಿಗಣಿಸುತ್ತೇನೆ.

ಸ್ನೇಹಿತರೇ, 

ನಿಮ್ಮ ನಿರೀಕ್ಷೆಗಳ ಬಗ್ಗೆಯೂ ನನಗೆ ತಿಳಿದಿದೆ. ನಾನು ವಿವಿಧ ಮೂಲೆಗಳಿಂದ ಪದೇ ಪದೇ ಸಂದೇಶಗಳನ್ನು ಪಡೆಯುತ್ತಿದ್ದೆ. ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಆದಷ್ಟು ಬೇಗ ನಿಮ್ಮ ಬಳಿಗೆ ಬರಬೇಕೆಂದು ನೀವು ಬಯಸಿದ್ದಿರಿ. ಮತ್ತು ಇದು ಸ್ವಾಭಾವಿಕವೂ ಹೌದು - 60 ವರ್ಷಗಳ ನಂತರ, ಈ ದೇಶದ ಜನರು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಒಂದು ಸರ್ಕಾರಕ್ಕೆ ಮೂರನೇ ಅವಧಿಗೆ ಸತತವಾಗಿ ದೇಶ ಸೇವೆ ಮಾಡುವ ಅವಕಾಶ ನೀಡಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಒಂದು ಮಹತ್ವದ  ಘಟನೆ,. ಆದ್ದರಿಂದ "ನರೇಂದ್ರ ಭಾಯಿ  ನಮ್ಮವರು, ಅವರು ತಕ್ಷಣವೇ ಗುಜರಾತ್ ಗೆ ಬರಬೇಕು" ಎಂದು ಗುಜರಾತ್ ಭಾವಿಸುವುದು ಸ್ವಾಭಾವಿಕ. ನಿಮ್ಮ ಭಾವನೆ ಸಮರ್ಥನೀಯವಾಗಿದೆ. ಆದರೆ ನೀವೇ ನನ್ನನ್ನು ದೇಶ ಮೊದಲು ಎಂಬ ಸಂಕಲ್ಪದೊಂದಿಗೆ ದೆಹಲಿಗೆ ಕಳುಹಿಸಿದವರು. ಲೋಕಸಭಾ  ಚುನಾವಣೆಯ ಸಮಯದಲ್ಲಿ, ನಾನು ನಿಮಗೆ - ಈ ದೇಶದ ಜನರಿಗೆ - ಒಂದು ಗ್ಯಾರಂಟಿ ನೀಡಿದ್ದೆ. ಮೂರನೇ ಅವಧಿಯ ಮೊದಲ 100  ದಿನಗಳಲ್ಲಿ ದೇಶಕ್ಕಾಗಿ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಾನು ಹೇಳಿದ್ದೆ. ಈ 100 ದಿನಗಳಲ್ಲಿ, ಈ ಕಾರ್ಯಸೂಚಿಯನ್ನು ಈಡೇರಿಸಲು ನಾನು ಹಗಲಿರುಳು ಶ್ರಮಿಸಿದ್ದೇನೆ, ಯಾವುದೇ ಕಲ್ಲನ್ನು ಬಿಡಲಿಲ್ಲ. ದೇಶದೊಳಗೆ ಅಥವಾ ವಿದೇಶದಲ್ಲಿ, ಎಲ್ಲೆಲ್ಲಿ ಪ್ರಯತ್ನಗಳ ಅಗತ್ಯವಿತ್ತೋ, ಅವುಗಳನ್ನು ಮಾಡಲಾಯಿತು - ಏನೂ ಅಪೂರ್ಣವಾಗಿ ಬಿಡಲಿಲ್ಲ. ಕಳೆದ 100 ದಿನಗಳಲ್ಲಿ ವಿವಿಧ ರೀತಿಯ ವಿಷಯಗಳು ಹೇಗೆ ಸಂಭವಿಸಿದವು ಎಂಬುದನ್ನು ನೀವು ನೋಡಿರಬೇಕು. ಈ ಸಮಯದಲ್ಲಿ, ಅವರು ನನ್ನನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು... ಮೋದಿಯನ್ನು ಗೇಲಿ ಮಾಡುತ್ತಿದ್ದರು... ಎಲ್ಲಾ ರೀತಿಯ ವಾದ ಮತ್ತು ಪ್ರತಿವಾದಗಳನ್ನು ಮಂಡಿಸುತ್ತಿದ್ದರು. ಅವರು ಅದನ್ನು ಆನಂದಿಸುತ್ತಿದ್ದರು, ಮತ್ತು ಜನರು ಆಶ್ಚರ್ಯಚಕಿತರಾಗಿ, "ಮೋದಿ ಏನು ಮಾಡುತ್ತಿದ್ದಾರೆ? ಅವರು ಏಕೆ ಮೌನವಾಗಿದ್ದಾರೆ? ಇಷ್ಟೊಂದು ಅಪಹಾಸ್ಯ ನಡೆಯುತ್ತಿದೆ... ಇಷ್ಟೊಂದು ಅವಮಾನ" ಎಂದು ಯೋಚಿಸುತ್ತಿದ್ದರು.

ಆದರೆ ಗುಜರಾತ್ನ ನನ್ನ ಸಹೋದರ ಸಹೋದರಿಯರೇ,

ಈ ಮಗ ಹುಟ್ಟಿದ್ದು ಸರ್ದಾರ್ ಪಟೇಲರ ನಾಡಿನಲ್ಲಿ. ಪ್ರತಿಯೊಂದು ತಮಾಷೆ, ಪ್ರತಿಯೊಂದು ಅಪಹಾಸ್ಯ, ಪ್ರತಿಯೊಂದು ಅವಮಾನವನ್ನು ಸಹಿಸಿಕೊಂಡು, ನಾನು ಪ್ರತಿಜ್ಞೆ ಮಾಡಿ ಈ 100 ದಿನಗಳನ್ನು ನಿಮ್ಮ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ನೀತಿಗಳನ್ನು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಗಮನಹರಿಸಿದೆ. ನನ್ನನ್ನು ಅಪಹಾಸ್ಯ ಮಾಡಲು ಬಯಸುವವರು ಹಾಗೆಯೇ ಮಾಡಲಿ ಎಂದು ನಾನು ನಿರ್ಧರಿಸಿದ್ದೆ. ಅವರು ಅದನ್ನು ಆನಂದಿಸಲಿ, ಮುಂದುವರಿಯಲಿ. ಮತ್ತು ಆ ಯಾವುದೇ ವ್ಯಂಗ್ಯಗಳಿಗೆ ಪ್ರತಿಕ್ರಿಯಿಸದಿರಲು ನಾನು ನಿರ್ಧರಿಸಿದೆ. ತಮಾಷೆಗಳು, ಅಪಹಾಸ್ಯ, ಅಥವಾ ಗೇಲಿ ಏನೇ ಇರಲಿ, ನಾನು ರಾಷ್ಟ್ರದ ಕಲ್ಯಾಣದ ಹಾದಿಯಿಂದ ದೂರ ಸರಿಯುವುದಿಲ್ಲ. ಇಂದು, ನಾನು ಸಂತೋಷದಿಂದಿದ್ದೇನೆ ಏಕೆಂದರೆ ಆ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು, ಈ 100 ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಕುಟುಂಬ ಮತ್ತು ಸಮಾಜದ ಪ್ರತಿಯೊಂದು ವರ್ಗದ ಕಲ್ಯಾಣವನ್ನು ಖಾತ್ರಿಪಡಿಸಿದೆ. ಈ 100 ದಿನಗಳಲ್ಲಿ, 15 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಚುನಾವಣೆಯ ಸಮಯದಲ್ಲಿ, ನಾನು ದೇಶಕ್ಕೆ 3 ಕೋಟಿ ಹೊಸ ಮನೆಗಳ ಗ್ಯಾರಂಟಿ ನೀಡಿದ್ದೆ. ಈ ಗ್ಯಾರಂಟಿ ಮೇಲಿನ ಕೆಲಸ ವೇಗವಾಗಿ ಮುಂದುವರಿಯುತ್ತಿದೆ. ಇಂದು, ಈ ಕಾರ್ಯಕ್ರಮದಲ್ಲಿಯೂ ಸಹ, ಗುಜರಾತಿನ ಸಾವಿರಾರು ಕುಟುಂಬಗಳು ತಮ್ಮದೇ ಆದ ಶಾಶ್ವತ ಮನೆಗಳನ್ನು ಪಡೆದಿವೆ. ನಿನ್ನೆ, ನಾನು ಜಾರ್ಖಂಡ್ ನಲ್ಲಿದೆ. ಅಲ್ಲಿಯೂ ಸಾವಿರಾರು ಕುಟುಂಬಗಳು ಮನೆಗಳನ್ನು ಪಡೆದವು. ಹಳ್ಳಿಯಲ್ಲಿರಲಿ ಅಥವಾ ನಗರದಲ್ಲಿರಲಿ, ಎಲ್ಲರಿಗೂ ಉತ್ತಮ ವಾಸಸ್ಥಾನ ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಗರದ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆಗಳಿಗಾಗಿ ಆರ್ಥಿಕ ನೆರವು ನೀಡುವುದು, ಕಾರ್ಮಿಕರಿಗೆ ನ್ಯಾಯಯುತ ದರಗಳಲ್ಲಿ ಉತ್ತಮ ಬಾಡಿಗೆ ಮನೆಗಳನ್ನು ಒದಗಿಸಲು ಅಭಿಯಾನಗಳನ್ನು ಪ್ರಾರಂಭಿಸುವುದು, ಕಾರ್ಖಾನೆ ಕಾರ್ಮಿಕರಿಗೆ ವಿಶೇಷ ವಸತಿ ಯೋಜನೆಗಳು, ಅಥವಾ ದೇಶಾದ್ಯಂತ ಕೆಲಸ ಮಾಡುವ ಮಹಿಳೆಯರಿಗೆ ಹೊಸ  ವಸತಿಗೃಹಗಳನ್ನು  ನಿರ್ಮಿಸುವುದು - ಸರಕಾರವು ಈ ಯೋಜನೆಗಳಿಗೆ ಸಾವಿರಾರು  ಕೋಟಿ  ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಸ್ನೇಹಿತರೇ, 

ಕೆಲವು ದಿನಗಳ ಹಿಂದೆ, ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಬಹಳ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ದೇಶದಲ್ಲಿ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಈ ಭರವಸೆಯನ್ನು ಕೂಡ ಈಡೇರಿಸಲಾಗಿದೆ. ಈಗ, ಮಧ್ಯಮ ವರ್ಗದ ಮಕ್ಕಳು ತಮ್ಮ ಪೋಷಕರ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗ, ನಿಮ್ಮ ಮಗ ಅದನ್ನು ನೋಡಿಕೊಳ್ಳುತ್ತಾನೆ.

ಸ್ನೇಹಿತರೇ, 
ಈ 100 ದಿನಗಳಲ್ಲಿ, ಯುವಜನರ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಯುವಜನರಿಗಾಗಿ 2 ಲಕ್ಷ ಕೋಟಿ ರೂಪಾಯಿಗಳ  ವಿಶೇಷ ಪ್ರಧಾನ ಮಂತ್ರಿ ಪ್ಯಾಕೇಜ್ ಘೋಷಿಸಲಾಗಿದೆ. 4 ಕೋಟಿಗೂ ಹೆಚ್ಚು ಯುವಜನರು ಇದರಿಂದ ಲಾಭ ಪಡೆಯಲಿದ್ದಾರೆ. ಈಗ, ಒಂದು ಕಂಪನಿ ಮೊದಲ ಬಾರಿಗೆ ಯುವಕರಿಗೆ ಉದ್ಯೋಗ ನೀಡುತ್ತಿದ್ದರೆ, ಆ ಕಂಪನಿಯಲ್ಲಿ ಯುವಕನ ಮೊದಲ ಉದ್ಯೋಗದ ಮೊದಲ  ಸಂಬಳಕ್ಕಾಗಿ ಸರ್ಕಾರವೇ ಹಣ ಒದಗಿಸಲಿದೆ. ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತಂದಿರುವ ಮತ್ತು ಅತ್ಯಂತ ಯಶಸ್ವಿಯಾಗಿರುವ ಮುದ್ರಾ ಸಾಲ ಯೋಜನೆಯ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಇದರ ಯಶಸ್ಸನ್ನು ನೋಡಿ, ಹಿಂದಿನ 10 ಲಕ್ಷ ರೂಪಾಯಿಗಳ ಮಿತಿಯನ್ನು 20 ಲಕ್ಷ ರೂಪಾಯಿಗಳಿಗೆ  ಹೆಚ್ಚಿಸಲಾಗಿದೆ.

ಸ್ನೇಹಿತರೇ, 

ದೇಶದಲ್ಲಿ 3 ಕೋಟಿ 'ಲಕ್ಷಪತಿ ದೀದಿ'ಗಳನ್ನು ಸೃಷ್ಟಿಸುವುದಾಗಿ ನಾನು ತಾಯಂದಿರು ಮತ್ತು ಸಹೋದರಿಯರಿಗೆ ಖಾತರಿ ನೀಡಿದ್ದೆ. ಕಳೆದ ವರ್ಷಗಳಲ್ಲಿ 1 ಕೋಟಿ 'ಲಕ್ಷಪತಿ ದೀದಿ'ಗಳನ್ನು ಈಗಾಗಲೇ ಮಾಡಲಾಗಿದೆ. ಆದರೆ ನನ್ನ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ, ಗುಜರಾತ್ ಸೇರಿದಂತೆ ದೇಶಾದ್ಯಂತ 11 ಲಕ್ಷ ಹೊಸ 'ಲಕ್ಷಪತಿ ದೀದಿ'ಗಳನ್ನು ಸೃಷ್ಟಿಸಲಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಇತ್ತೀಚೆಗೆ, ಸರ್ಕಾರವು ಎಣ್ಣೆಕಾಳು ರೈತರ ಪರವಾಗಿ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ನಮ್ಮ ಎಣ್ಣೆಕಾಳು ರೈತರಿಗೆ ಹೆಚ್ಚಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗಿಂತ ಹೆಚ್ಚಿನ ಬೆಲೆ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಣ್ಣೆಕಾಳು ರೈತರಿಗೆ ಲಾಭವಾಗುವಂತೆ, ಎಣ್ಣೆ ಆಮದುಗಳ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ. ಇದು ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಯುವ ರೈತರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಇದು ದೇಶವನ್ನು ಸಾವಯವ ಎಣ್ಣೆಗಳಲ್ಲಿ ಸ್ವಾವಲಂಬಿಯನ್ನಾಗಿಸುವ ಮಿಷನ್ ಅನ್ನು ವೇಗಗೊಳಿಸುತ್ತದೆ. ಸರ್ಕಾರವು ಬಾಸ್ಮತಿ ಅಕ್ಕಿ ಮತ್ತು ಈರುಳ್ಳಿ ರಫ್ತು ನಿಷೇಧವನ್ನು ಸಹ ತೆಗೆದುಹಾಕಿದೆ. ಇದರ ಪರಿಣಾಮವಾಗಿ, ಭಾರತೀಯ ಅಕ್ಕಿ ಮತ್ತು ಈರುಳ್ಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ನಿರ್ಧಾರದಿಂದ ದೇಶಾದ್ಯಂತ ಲಕ್ಷಾಂತರ ರೈತರಿಗೂ ಲಾಭವಾಗುತ್ತದೆ.

ಸ್ನೇಹಿತರೇ, 

ಕಳೆದ 100 ದಿನಗಳಲ್ಲಿ, ರೈಲು, ರಸ್ತೆ, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಮೆಟ್ರೋಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ವಿಡಿಯೋದಲ್ಲಿ ತೋರಿಸಿರುವಂತೆ ಇಂದಿನ ಕಾರ್ಯಕ್ರಮದಲ್ಲಿಯೂ ಇದು ಪ್ರತಿಫಲಿಸುತ್ತದೆ. ಗುಜರಾತ್ ನಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಅಡಿಪಾಯ ಹಾಕಲಾಗಿದೆ. ಸ್ವಲ್ಪ ಹಿಂದೆ, ನಾನು ಗಿಫ್ಟ್ ಸಿಟಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದೆ. ಈ ಪ್ರಯಾಣದ ಸಮಯದಲ್ಲಿ ಅನೇಕ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಹಮದಾಬಾದ್ ಮೆಟ್ರೋ ವಿಸ್ತರಣೆಯಿಂದ ಎಲ್ಲರೂ ಸಂತಸಗೊಂಡಿದ್ದಾರೆ. ಕಳೆದ 100 ದಿನಗಳಲ್ಲಿ, ದೇಶದಾದ್ಯಂತ ಅನೇಕ ನಗರಗಳಲ್ಲಿ ಮೆಟ್ರೋ ಸೇವೆಗಳನ್ನು ವಿಸ್ತರಿಸಲು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸ್ನೇಹಿತರೇ, 

ಇಂದಿನ ದಿನ ಗುಜರಾತ್ ಗೆ ಇನ್ನೊಂದು ಕಾರಣದಿಂದಲೂ ವಿಶೇಷವಾಗಿದೆ. ಇಂದಿನಿಂದ, ಅಹಮದಾಬಾದ್ ಮತ್ತು ಭುಜ್ ನಡುವಿನ ನಮೋ ಭಾರತ್ ರಾಪಿಡ್ ರೈಲು ಓಡಲು ಆರಂಭಿಸಿದೆ. ನಮೋ ಭಾರತ್ ರಾಪಿಡ್ ರೈಲು ನಗರಗಳ ನಡುವೆ ದೈನಂದಿನ ಪ್ರಯಾಣ ಮಾಡುವ ನಮ್ಮ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಉದ್ಯೋಗ, ವ್ಯಾಪಾರ ಮತ್ತು ಶಿಕ್ಷಣದಲ್ಲಿ ತೊಡಗಿರುವವರಿಗೆ ಅನುಕೂಲವನ್ನು ಒದಗಿಸುತ್ತದೆ. ಮುಂಬರುವ ಕಾಲದಲ್ಲಿ, ದೇಶಾದ್ಯಂತ ಅನೇಕ ನಗರಗಳು ನಮೋ ಭಾರತ್ ರಾಪಿಡ್ ರೈಲಿನಿಂದ ಸಂಪರ್ಕ ಹೊಂದಲಿವೆ.

ಸ್ನೇಹಿತರೇ,

ಕಳೆದ 100 ದಿನಗಳಲ್ಲಿ ವಂದೇ ಭಾರತ್ ರೈಲುಗಳ ಜಾಲದ ವೇಗದ ವಿಸ್ತರಣೆಯು ಅಸಾಧಾರಣವಾಗಿದೆ. ಈ ಅವಧಿಯಲ್ಲಿ, ವಂದೇ ಭಾರತ್ ರೈಲುಗಳಿಗೆ 15 ಕ್ಕೂ ಹೆಚ್ಚು ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಇದರರ್ಥ, ಕಳೆದ 15 ವಾರಗಳಲ್ಲಿ, ಸರಾಸರಿ ಪ್ರತಿ ವಾರ ಒಂದು ಹೊಸ ವಂದೇ ಭಾರತ್ ರೈಲನ್ನು ಆರಂಭಿಸಲಾಗಿದೆ. ನಿನ್ನೆಯಷ್ಟೇ, ನಾನು ಜಾರ್ಖಂಡ್ ನಿಂದ ಹಲವಾರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದೆ. ಇಂದು ಕೂಡ, ನಾಗಪುರ-ಸಿಕಂದರಾಬಾದ್, ಕೊಲ್ಹಾಪುರ-ಪುಣೆ, ಆಗ್ರಾ ಕ್ಯಾಂಟ್-ಬನಾರಸ್, ದುರ್ಗ್-ವಿಶಾಖಪಟ್ಟಣಂ ಮತ್ತು ಪುಣೆ-ಹುಬ್ಬಳ್ಳಿ ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳು ಓಡಲು ಆರಂಭಿಸಿವೆ. ವಾರಾಣಸಿ ಮತ್ತು ನವದೆಹಲಿ ನಡುವೆ ಓಡುವ ವಂದೇ ಭಾರತ್ ರೈಲಿಗೆ ಈಗ 20 ಬೋಗಿಗಳಿವೆ. ಇಂದು, ದೇಶಾದ್ಯಂತ 125 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತಿವೆ.

ಸ್ನೇಹಿತರೇ, 

ನಾವು, ಗುಜರಾತಿನ ಜನರು, ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತೇವೆ. ಇದು ಭಾರತದ ಸುವರ್ಣ ಕಾಲ, ಭಾರತದ 'ಅಮೃತ ಕಾಲ.' ಮುಂದಿನ 25 ವರ್ಷಗಳಲ್ಲಿ, ನಾವು ನಮ್ಮ ದೇಶವನ್ನು ಅಭಿವೃದ್ಧಿಪಡಿಸಬೇಕು, ಮತ್ತು ಇದರಲ್ಲಿ ಗುಜರಾತ್ಗೆ ಗಣನೀಯ ಪಾತ್ರವಿದೆ. ಇಂದು, ಗುಜರಾತ್ ಉತ್ಪಾದನೆಯ ಪ್ರಮುಖ ಕೇಂದ್ರವಾಗುತ್ತಿದೆ. ಗುಜರಾತ್ ಭಾರತದಲ್ಲಿ ಅತ್ಯಂತ ಉತ್ತಮವಾಗಿ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಗುಜರಾತ್ ತನ್ನ ಮೊದಲ ಮೇಡ್ ಇನ್ ಇಂಡಿಯಾ ಸಾರಿಗೆ ವಿಮಾನ ಸಿ-295 ಅನ್ನು ಭಾರತಕ್ಕೆ ನೀಡುವ ದಿನ ದೂರವಿಲ್ಲ. ಅಸಾಧಾರಣವಾದ ಸೆಮಿಕಂಡಕ್ಟರ್ ಮಿಷನ್ನಲ್ಲಿ ಗುಜರಾತ್ ಕೂಡ ಮುನ್ನಡೆ ಸಾಧಿಸಿದೆ.ಇಂದು, ಗುಜರಾತ್ ನಲ್ಲಿ ಪೆಟ್ರೋಲಿಯಂ, ಫೊರೆನ್ಸಿಕ್ಸ್, ಅಥವಾ ಆರೋಗ್ಯ ಕ್ಷೇತ್ರದಲ್ಲಿ ಕೆಲವು ಅತ್ಯುತ್ತಮ ವಿಶ್ವವಿದ್ಯಾಲಯಗಳಿವೆ. ಆಧುನಿಕ ವಿಷಯಗಳನ್ನು ಅಧ್ಯಯನ ಮಾಡಲು ಗುಜರಾತ್ ನಲ್ಲಿ ಉತ್ತಮ ಅವಕಾಶಗಳಿವೆ.  ವಿದೇಶಿ ವಿಶ್ವವಿದ್ಯಾಲಯಗಳು ಕೂಡ ಇಲ್ಲಿ ತಮ್ಮ ಕ್ಯಾಂಪಸ್ ಗಳನ್ನು ತೆರೆಯುತ್ತಿವೆ. ಸಂಸ್ಕೃತಿಯಿಂದ ಕೃಷಿಯವರೆಗೆ ಗುಜರಾತ್ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ. ನಾವು ಊಹಿಸಲೂ ಸಾಧ್ಯವಿಲ್ಲದ ಬೆಳೆಗಳು ಮತ್ತು ಧಾನ್ಯಗಳನ್ನು ಈಗ ಗುಜರಾತ್ನಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇವೆಲ್ಲವನ್ನೂ ಸಾಧ್ಯವಾಗಿಸಿದ್ದು ಯಾರು? ಗುಜರಾತ್ನಲ್ಲಿ ಈ ಪರಿವರ್ತನೆಯನ್ನು ತಂದವರು ಯಾರು?

ಸ್ನೇಹಿತರೇ, 

ಗುಜರಾತಿನ ಶ್ರಮಜೀವಿಗಳೇ ಈ ಪರಿವರ್ತನೆಯನ್ನು ತಂದಿದ್ದಾರೆ. ಗುಜರಾತಿನ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಾ ಒಂದು ಪೀಳಿಗೆಯೇ ಕಳೆದುಹೋಗಿದೆ. ಈಗ, ಇಲ್ಲಿಂದ, ನಾವು ಗುಜರಾತ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ನಾನು ಇತ್ತೀಚೆಗೆ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಭಾರತದಲ್ಲಿ ತಯಾರಾದ ಉತ್ಪನ್ನಗಳ ಗುಣಮಟ್ಟದ  ಬಗ್ಗೆ ಮಾತನಾಡಿದ್ದನ್ನು ನೀವು ನೆನಪಿಸಿಕೊಳ್ಳುವಿರಿ. ನಾವು ಯಾವುದನ್ನಾದರೂ 'ರಫ್ತು ಗುಣಮಟ್ಟ' ಎಂದು ಹೇಳುವಾಗ, ರಫ್ತು ಆಗದ ಉತ್ಪನ್ನಗಳು ಅದೇ ಉನ್ನತ ಗುಣಮಟ್ಟದ್ದಾಗಿರುವುದಿಲ್ಲ ಎಂದು ನಾವು ಹೆಚ್ಚಾಗಿ ಸೂಚಿಸುತ್ತೇವೆ. ಅದಕ್ಕಾಗಿಯೇ ನಾವು ಅದನ್ನು 'ರಫ್ತು ಗುಣಮಟ್ಟ' ಎಂದು ಕರೆಯುತ್ತೇವೆ. ನಾವು ಈ ಮನೋಭಾವದಿಂದ ಹೊರಬರಬೇಕು. ಭಾರತದಲ್ಲಿ ಮತ್ತು ವಿಶ್ವದಾದ್ಯಂತ ತನ್ನ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳಿಗಾಗಿ ಗುಜರಾತ್ ಒಂದು ಉತ್ತಮ ಖ್ಯಾತಿಯನ್ನು ಸ್ಥಾಪಿಸಬೇಕೆಂದು ನಾನು ಬಯಸುತ್ತೇನೆ.

ಸ್ನೇಹಿತರೇ,

ಇಂದು, ಭಾರತವು ಹೊಸ ಸಂಕಲ್ಪಗಳೊಂದಿಗೆ ಕೆಲಸ ಮಾಡುತ್ತಿರುವ ರೀತಿಯನ್ನು ವಿಶ್ವವು ಪ್ರಶಂಸಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ನನಗೆ ಅನೇಕ ದೇಶಗಳಲ್ಲಿ ವಿವಿಧ ದೊಡ್ಡ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ವಿಶ್ವದಾದ್ಯಂತ ಭಾರತವು ಎಷ್ಟು ಗೌರವ ಪಡೆಯುತ್ತಿದೆ ಎಂಬುದನ್ನು ನೀವೂ ನೋಡಿರಬೇಕು. ಎಲ್ಲರೂ ಭಾರತ ಮತ್ತು ಭಾರತೀಯರನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಾರೆ. ಪ್ರತಿಯೊಬ್ಬರೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಬಯಸುತ್ತಾರೆ. ಎಲ್ಲಿಯಾದರೂ ಬಿಕ್ಕಟ್ಟು ಅಥವಾ ಸಮಸ್ಯೆ ಇದ್ದರೆ, ಜನರು ಪರಿಹಾರಗಳಿಗಾಗಿ ಭಾರತದತ್ತ ತಿರುಗುತ್ತಾರೆ. ಭಾರತದ ಜನರು ಮೂರನೇ ಬಾರಿಗೆ ನಿರಂತರವಾಗಿ ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಿರುವ ರೀತಿ ಮತ್ತು ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರೀತಿ ನಮ್ಮ ಮೇಲೆ ವಿಶ್ವದ ನಿರೀಕ್ಷೆಗಳನ್ನು ಹೆಚ್ಚಿಸಿದೆ. 140 ಕೋಟಿ ಭಾರತೀಯರ ಅಚಲ ನಂಬಿಕೆಯೇ ನಾನು ಹೆಮ್ಮೆಯಿಂದ ನಿಂತು ನಮ್ಮ ರಾಷ್ಟ್ರದ ಶಕ್ತಿಯ ಬಗ್ಗೆ ವಿಶ್ವಕ್ಕೆ ಭರವಸೆ ನೀಡಲು ಅನುವು ಮಾಡಿಕೊಡುತ್ತದೆ. ಭಾರತದ ಮೇಲಿನ ಬೆಳೆಯುತ್ತಿರುವ ನಂಬಿಕೆಯು ನಮ್ಮ ರೈತರು ಮತ್ತು ಯುವಕರಿಗೆ ನೇರವಾಗಿ ಲಾಭ ನೀಡುತ್ತದೆ. ಭಾರತದ ಮೇಲಿನ ವಿಶ್ವದ ನಂಬಿಕೆ ಹೆಚ್ಚಾದಂತೆ, ನಮ್ಮ ಕುಶಲ ಯುವಕರ ಬೇಡಿಕೆ ಹೆಚ್ಚಾಗುತ್ತದೆ. ಭಾರತದ ಮೇಲಿನ ನಂಬಿಕೆ ಹೆಚ್ಚಾದಂತೆ, ನಮ್ಮ ರಫ್ತುಗಳು ಬೆಳೆಯುತ್ತವೆ ಮತ್ತು ದೇಶಕ್ಕೆ ಹೆಚ್ಚಿನ ಹೂಡಿಕೆ ಬರುತ್ತದೆ. ಭಾರತದ ಮೇಲಿನ ನಂಬಿಕೆ ಹೆಚ್ಚಾದಂತೆ, ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಇಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಆಯ್ಕೆ ಮಾಡುತ್ತಾರೆ.

ಸಹೋದರ ಸಹೋದರಿಯರೇ,

ಒಂದೆಡೆ, ಪ್ರತಿಯೊಬ್ಬ ಭಾರತೀಯನು ದೇಶದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಬಯಸುತ್ತಾನೆ ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾನೆ. ಇನ್ನೊಂದೆಡೆ, ನಕಾರಾತ್ಮಕತೆಯಿಂದ ತುಂಬಿದ ಕೆಲವು ಜನರು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರು ದೇಶದ ಏಕತೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಸರ್ದಾರ್ ಪಟೇಲ್ ಭಾರತವನ್ನು ಏಕೀಕರಣಗೊಳಿಸಲು 500 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿದರು. ಈ ಅಧಿಕಾರದ ಹಸಿವುಳ್ಳ ಜನರು ಭಾರತವನ್ನು ತುಂಡು ಮಾಡಲು ಬಯಸುತ್ತಾರೆ. ಈ ಜನರು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರುವುದಾಗಿ ಹೇಳುತ್ತಿದ್ದಾರೆ ಎಂಬುದನ್ನು ನೀವು ಕೇಳಿರಬಹುದು. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಸಂವಿಧಾನಗಳು ಮತ್ತು ಎರಡು ಕಾನೂನುಗಳ ಆಳ್ವಿಕೆಯನ್ನು ಮರಳಿ ತರಲು ಬಯಸುತ್ತಾರೆ. ಕೆಲವು ಗುಂಪುಗಳನ್ನು ಮೆಚ್ಚಿಸಲು ಅವರು ಯಾವುದೇ ಮಟ್ಟಿಗೆ ಹೋಗಲು ಸಿದ್ಧರಾಗಿದ್ದಾರೆ. ದ್ವೇಷದಿಂದ ತುಂಬಿರುವ ಈ ಜನರು ಭಾರತವನ್ನು ಅವಮಾನಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಅವರು ಗುಜರಾತ್ ಅನ್ನು ಸಹ ನಿರಂತರವಾಗಿ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಗುಜರಾತ್ ಎಚ್ಚರದಿಂದಿರಬೇಕು ಮತ್ತು ಈ ಜನರ ಮೇಲೆ ಕಣ್ಣಿಡಬೇಕು.

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿರುವ ಭಾರತವು ಅಂತಹ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುತ್ತದೆ. ಭಾರತಕ್ಕೆ ಇನ್ನು ಸಮಯವನ್ನು ವ್ಯರ್ಥ ಮಾಡಲು ಸಾಧ್ಯವಿಲ್ಲ.. ನಾವು ಭಾರತದ ಖ್ಯಾತಿಯನ್ನು ಹೆಚ್ಚಿಸಬೇಕು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಘನತೆಯ ಜೀವನವನ್ನು ಖಾತರಿಪಡಿಸಬೇಕು. ಇದರಲ್ಲಿಯೂ ಗುಜರಾತ್ ಮುಂಚೂಣಿಯಲ್ಲಿರುತ್ತದೆ ಎಂದು ನನಗೆ ಗೊತ್ತು. ನಾವು ನಮ್ಮ ಎಲ್ಲ ಪ್ರಯತ್ನಗಳಿಂದ ಪ್ರತಿಯೊಂದು ಗುರಿಯನ್ನು ಸಾಧಿಸುತ್ತೇವೆ.ಇಂದು, ನೀವು ನನಗೆ ನೀಡುತ್ತಿರುವ ಉತ್ಸಾಹ ಮತ್ತು ಆಶೀರ್ವಾದದೊಂದಿಗೆ, ನಾನು ಹೊಸ ಶಕ್ತಿಯೊಂದಿಗೆ ಮುಂದೆ ಸಾಗುತ್ತೇನೆ ಮತ್ತು ಹೊಸ ಉತ್ಸಾಹದಿಂದ ಬದುಕುತ್ತೇನೆ. ನಾನು ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ನಿಮಗಾಗಿ ಮತ್ತು ನಿಮ್ಮ ಕನಸುಗಳಿಗಾಗಿ ಅರ್ಪಿಸುತ್ತೇನೆ. ನಿಮ್ಮ ಯೋಗಕ್ಷೇಮ, ನಿಮ್ಮ ಯಶಸ್ಸು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸುವುದರ ಹೊರತಾಗಿ ನನಗೆ ಬೇರೆ ಯಾವುದೇ ಆಸೆ ಅಥವಾ ಮಹತ್ವಾಕಾಂಕ್ಷೆ ಇಲ್ಲ. ನೀವು, ಭಾರತದ ಜನರೇ ನನ್ನ ದೇವರು. ಈ ದೇವರ ಆರಾಧನೆಗೆ, ಈ ಸೇವೆಯಲ್ಲಿ ನನ್ನ ಜೀವನವನ್ನು ಅರ್ಪಿಸಲು ನಾನು ನಿರ್ಧರಿಸಿದ್ದೇನೆ. ಆದ್ದರಿಂದ, ಸ್ನೇಹಿತರೇ, ನಾನು ನಿಮಗಾಗಿ ಬದುಕುತ್ತೇನೆ, ನಿಮಗಾಗಿ ಹೋರಾಡುತ್ತೇನೆ ಮತ್ತು ನಿಮಗಾಗಿ ನನ್ನ ಎಲ್ಲವನ್ನೂ ನೀಡುತ್ತೇನೆ. ನನ್ನನ್ನು ಆಶೀರ್ವದಿಸಿ. ಲಕ್ಷಾಂತರ ಜನರ ಆಶೀರ್ವಾದದೊಂದಿಗೆ, 140 ಕೋಟಿ ಭಾರತೀಯರ ಕನಸುಗಳಿಗಾಗಿ ನಾನು ಹೊಸ ವಿಶ್ವಾಸ, ಉತ್ಸಾಹ ಮತ್ತು ಧೈರ್ಯದೊಂದಿಗೆ ಜೀವಿಸುತ್ತಲೇ ಇರುತ್ತೇನೆ.ನನ್ನನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು. ನಾನು ನಿನ್ನೆ ಸಂಜೆ ಬಹಳ ದಿನಗಳ ನಂತರ ಗುಜರಾತ್ ಗೆ ಬಂದರೂ, ನಿಮ್ಮ ಪ್ರೀತಿ ಬೆಳೆಯುತ್ತಲೇ ಇದೆ, ಮತ್ತು ನನ್ನ ಸಂಕಲ್ಪ ಇನ್ನಷ್ಟು ಬಲವಾಗುತ್ತದೆ. ಹೊಸ ಸೌಲಭ್ಯಗಳು, ಹೊಸ ಯೋಜನೆಗಳು ಮತ್ತು ಹೊಸ ಅವಕಾಶಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು. ನನ್ನೊಂದಿಗೆ ಹೇಳಿ - 'ಭಾರತ ಮಾತಾ ಕಿ ಜೈ!' ನಿಮ್ಮ ಎರಡೂ ಕೈಗಳನ್ನು ಎತ್ತಿ ನಿಮ್ಮ ಎಲ್ಲ ಶಕ್ತಿಯಿಂದ ಕೂಗಿ ಹೇಳಿ --

ಭಾರತ್ ಮಾತಾ ಕಿ -ಜೈ!

ಭಾರತ್ ಮಾತಾ ಕಿ -ಜೈ!

ಭಾರತ್ ಮಾತಾ ಕಿ -ಜೈ!

ತುಂಬಾ ಧನ್ಯವಾದಗಳು.

 

ಸೂಚನೆ: ಪ್ರಧಾನಮಂತ್ರಿಯವರ ಭಾಷಣದ ಕೆಲವು ಭಾಗವು ಗುಜರಾತಿ ಭಾಷೆಯಲ್ಲಿದೆ, ಅದನ್ನು ಇಲ್ಲಿ ಅನುವಾದಿಸಲಾಗಿದೆ.

 

*****


(Release ID: 2055980) Visitor Counter : 33