ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಜಾರ್ಖಂಡ್ ನ ಟಾಟಾನಗರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ/ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 15 SEP 2024 1:21PM by PIB Bengaluru

ಜಾರ್ಖಂಡ್ ರಾಜ್ಯಪಾಲ ಶ್ರೀ ಸಂತೋಷ್ ಗಂಗ್ವಾರ್ ಜೀ, ನನ್ನ ಸಂಪುಟ  ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಜೀ, ಅನ್ನಪೂರ್ಣ ದೇವಿ ಜೀ ಮತ್ತು ಸಂಜಯ್ ಸೇಠ್ ಜೀ, ಸಂಸದ ವಿದ್ಯುತ್ ಮಹತೋ ಜೀ, ರಾಜ್ಯ ಸರ್ಕಾರದ ಸಚಿವ ಇರ್ಫಾನ್ ಅನ್ಸಾರಿ ಜೀ, ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಜೀ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷ ಸುದೇಶ್ ಮಹತೋ ಜೀ, ಶಾಸಕರು, ಇತರ ಗೌರವಾನ್ವಿತ ಅತಿಥಿಗಳು, ಸಹೋದರ ಸಹೋದರಿಯರೇ,

ನಾನು ಬಾಬಾ ಬೈದ್ಯನಾಥ್ ಮತ್ತು ಬಾಬಾ ಬಸುಕಿನಾಥ್ ಅವರ ಪಾದಗಳಿಗೆ ಶಿರಬಾಗಿ ನಮಸ್ಕರಿಸುತ್ತೇನೆ. ಧೈರ್ಯಶಾಲಿ ಬಿರ್ಸಾ ಮುಂಡಾ ಅವರ ನೆಲಕ್ಕೆ  ನಾನು ಗೌರವ ಸಲ್ಲಿಸುತ್ತೇನೆ. ಇಂದು ಬಹಳ ಶುಭ ದಿನ. ಪ್ರಸ್ತುತ, ಜಾರ್ಖಂಡ್ ಕರ್ಮ ಹಬ್ಬವನ್ನು ಆಚರಿಸುತ್ತಿದೆ, ಇದು ಪ್ರಕೃತಿ ಪೂಜೆಯನ್ನು ಒಳಗೊಂಡಿದೆ. ನಾನು ಇಂದು ಬೆಳಿಗ್ಗೆ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಾಗ, ಒಬ್ಬ ಸಹೋದರಿ ಕರ್ಮ ಹಬ್ಬದ ಸಂಕೇತವಾದ ಸಾಂಪ್ರದಾಯಿಕ ಜಾವಾದೊಂದಿಗೆ ನನ್ನನ್ನು ಸ್ವಾಗತಿಸಿದರು. ಈ ಹಬ್ಬದ ಸಮಯದಲ್ಲಿ ಸಹೋದರಿಯರು ತಮ್ಮ ಸಹೋದರರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ಮ ಹಬ್ಬದ ಸಂದರ್ಭದಲ್ಲಿ ನಾನು ಜಾರ್ಖಂಡ್ ಜನತೆಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಶುಭ ದಿನದಂದು, ಜಾರ್ಖಂಡ್ ಅಭಿವೃದ್ಧಿಯ ಹೊಸ ಆಶೀರ್ವಾದವನ್ನು ಪಡೆದಿದೆ. ಆರು ಹೊಸ ವಂದೇ ಭಾರತ್ ರೈಲುಗಳು, 650 ಕೋಟಿ ರೂ.ಗಳ ರೈಲ್ವೆ ಯೋಜನೆಗಳು, ಸಂಪರ್ಕ ಮತ್ತು ಪ್ರಯಾಣ ಸೌಲಭ್ಯಗಳ ವಿಸ್ತರಣೆ ಮತ್ತು ಇವೆಲ್ಲದರ ಜೊತೆಗೆ, ಜಾರ್ಖಂಡಿನ  ಸಾವಿರಾರು ಜನರು ಪಿಎಂ ಆವಾಸ್ ಯೋಜನೆಯಡಿ ತಮ್ಮದೇ ಆದ ಪಕ್ಕಾ ಮನೆಗಳನ್ನು ಪಡೆಯಲಿದ್ದಾರೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಜಾರ್ಖಂಡ್ ಜನರನ್ನು ಅಭಿನಂದಿಸುತ್ತೇನೆ. ಈ ವಂದೇ ಭಾರತ್ ರೈಲುಗಳೊಂದಿಗೆ ಜೋಡಿಸಲ್ಪಟ್ಟಿರುವ  ಎಲ್ಲಾ ರಾಜ್ಯಗಳನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಆಧುನಿಕ ಸೌಲಭ್ಯಗಳು ಮತ್ತು ಅಭಿವೃದ್ಧಿಯು ದೇಶದ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ಕಾಲವಿತ್ತು.  ಜಾರ್ಖಂಡ್ ನಂತಹ ರಾಜ್ಯಗಳು ಆಧುನಿಕ ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದಾಗ್ಯೂ, 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಮಂತ್ರವು ದೇಶದ ಮನಸ್ಥಿತಿ ಮತ್ತು ಆದ್ಯತೆಗಳನ್ನು ಬದಲಾಯಿಸಿದೆ. ಈಗ, ದೇಶದ ಆದ್ಯತೆ ಬಡವರು. ಈಗ, ದೇಶದ ಆದ್ಯತೆ ಬುಡಕಟ್ಟು ಸಮುದಾಯಗಳು. ಈಗ, ದೇಶದ ಆದ್ಯತೆ ದಲಿತರು, ದೀನದಲಿತರು ಮತ್ತು ಸಮಾಜದ ಹಿಂದುಳಿದ ವರ್ಗಗಳು. ಈಗ, ದೇಶದ ಆದ್ಯತೆ ಮಹಿಳೆಯರು, ಯುವಜನರು ಮತ್ತು ರೈತರು. ಅದಕ್ಕಾಗಿಯೇ, ಜಾರ್ಖಂಡ್, ಇತರ ರಾಜ್ಯಗಳಂತೆ, ವಂದೇ ಭಾರತ್ ಮತ್ತು ಆಧುನಿಕ ಮೂಲಸೌಕರ್ಯಗಳಂತಹ ಹೈಟೆಕ್ ರೈಲುಗಳನ್ನು ಪಡೆಯುತ್ತಿದೆ.

ಸ್ನೇಹಿತರೇ,

ಇಂದು, ಪ್ರತಿ ರಾಜ್ಯ ಮತ್ತು ನಗರವು ತ್ವರಿತ ಅಭಿವೃದ್ಧಿಗಾಗಿ ವಂದೇ ಭಾರತ್ ನಂತಹ ಹೈಸ್ಪೀಡ್ ರೈಲುಗಳನ್ನು ಬಯಸುತ್ತದೆ. ಕೆಲವು ದಿನಗಳ ಹಿಂದೆ, ನಾನು ಉತ್ತರ ಮತ್ತು ದಕ್ಷಿಣ ರಾಜ್ಯಗಳಿಗೆ 3 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದೆ. ಇಂದು, ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸೇವೆಗಳು ಟಾಟಾನಗರದಿಂದ ಪಾಟ್ನಾ, ಟಾಟಾನಗರದಿಂದ ಒಡಿಶಾದ ಬ್ರಹ್ಮಪುರ, ರೂರ್ಕೆಲಾದಿಂದ ಟಾಟಾನಗರಕ್ಕೆ ಅಲ್ಲಿಂದ  ಹೌರಾ, ಭಾಗಲ್ಪುರದಿಂದ ದುಮ್ಕಾ ಮತ್ತು ಅಲ್ಲಿಂದ  ಹೌರಾ, ದಿಯೋಘರ್ ನಿಂದ  ಗಯಾ ಮತ್ತು ಅಲ್ಲಿಂದ ವಾರಣಾಸಿ ಮತ್ತು ಗಯಾದಿಂದ ಕೊಡೆರ್ಮಾ-ಪರಸ್ನಾಥ್-ಧನ್ಬಾದ್ ಮತ್ತು ಅಲ್ಲಿಂದ  ಹೌರಾಗೆ ಪ್ರಾರಂಭವಾಗಿವೆ. ವೇದಿಕೆಯಲ್ಲಿ ವಸತಿ ವಿತರಣಾ ಕಾರ್ಯಕ್ರಮ ನಡೆಯುತ್ತಿರುವಾಗ, ನಾನು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದೆ ಮತ್ತು ಅವು ತಮ್ಮ ಗಮ್ಯಸ್ಥಾನಗಳತ್ತ ಹೊರಟಿವೆ. ಪೂರ್ವ ಭಾರತದಲ್ಲಿ ರೈಲು ಸಂಪರ್ಕದ ವಿಸ್ತರಣೆಯು ಇಡೀ ಪ್ರದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಈ ರೈಲುಗಳು ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. ಇದು ಇಲ್ಲಿ ಆರ್ಥಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ವೇಗಗೊಳಿಸುತ್ತದೆ. ನಿಮಗೆ ತಿಳಿದಿರುವಂತೆ, ದೇಶ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಕಾಶಿಗೆ ಬರುತ್ತಾರೆ. ವಂದೇ ಭಾರತ್ ರೈಲುಗಳು ಕಾಶಿಯಿಂದ ದಿಯೋಘರ್ ಗೆ ಪ್ರಯಾಣವನ್ನು ಸುಗಮಗೊಳಿಸುತ್ತವೆ ಮತ್ತು ಅನೇಕರು ಬಾಬಾ ಬೈದ್ಯನಾಥ್ ಗೆ ಕೂಡಾ ಭೇಟಿ ನೀಡುತ್ತಾರೆ. ಇದು ಇಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಟಾಟಾನಗರವು ದೇಶದ ಬಹಳ ದೊಡ್ಡ ಕೈಗಾರಿಕಾ ತಾಣವಾಗಿದೆ. ಉತ್ತಮ ಸಾರಿಗೆ ಸೌಲಭ್ಯಗಳು ಅದರ ಕೈಗಾರಿಕಾ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸಲಿವೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಿಗೆ ಉತ್ತೇಜನದಿಂದ ಜಾರ್ಖಂಡದ ಯುವ ಜನರಿಗೆ ಉದ್ಯೋಗಾವಕಾಶಗಳು ಕೂಡಾ ಹೆಚ್ಚಲಿವೆ.

ಸ್ನೇಹಿತರೇ,

ತ್ವರಿತ ಅಭಿವೃದ್ಧಿಗೆ ಆಧುನಿಕ ರೈಲು ಮೂಲಸೌಕರ್ಯ ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಇಂದು ಇಲ್ಲಿ ಹಲವಾರು ಹೊಸ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. ಮಧುಪುರ್ ಬೈಪಾಸ್ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಪೂರ್ಣಗೊಂಡ ನಂತರ, ಹೌರಾ-ದಿಲ್ಲಿ ಮುಖ್ಯ ಮಾರ್ಗದಲ್ಲಿ ರೈಲುಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಬೈಪಾಸ್ ಮಾರ್ಗವು ಗಿರಿದಿಹ್ ಮತ್ತು ಜಸಿದಿಹ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇಂದು ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಹಲವಾರು ಹೊಸ ರೈಲು ಸೇವೆಗಳನ್ನು ಪರಿಚಯಿಸಲು ಅನುಕೂಲವಾಗಲಿದೆ. ಕುರ್ಕುರಿಯಾದಿಂದ ಕನರೋನ್ ವರೆಗಿನ ರೈಲು ಮಾರ್ಗದ ದ್ವಿಗುಣಗೊಳಿಸುವಿಕೆಯು ಜಾರ್ಖಂಡ್ ನಲ್ಲಿ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ಈ ವಿಭಾಗದ ದ್ವಿಗುಣಗೊಳಿಸುವಿಕೆ ಪೂರ್ಣಗೊಂಡರೆ  ಉಕ್ಕು ಉದ್ಯಮಕ್ಕೆ ಸಂಬಂಧಿಸಿದ ಸರಕುಗಳ ಸಾಗಣೆ ಸುಲಭವಾಗುತ್ತದೆ.

ಸ್ನೇಹಿತರೇ,

ಕೇಂದ್ರ ಸರ್ಕಾರವು ಜಾರ್ಖಂಡ್ ನಲ್ಲಿ ಅದರ ಅಭಿವೃದ್ಧಿಗಾಗಿ ಹೂಡಿಕೆಯನ್ನು ಹೆಚ್ಚಿಸಿದೆ ಮತ್ತು ಕೆಲಸದ/ಕಾಮಗಾರಿಯ  ವೇಗವನ್ನು ಹೆಚ್ಚಿಸಿದೆ. ಈ ವರ್ಷ ಜಾರ್ಖಂಡಿನಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. 10 ವರ್ಷಗಳ ಹಿಂದೆ ಮೀಸಲಿಟ್ಟ ಬಜೆಟ್ ಗೆ ಹೋಲಿಸಿದರೆ, ಇದು 16 ಪಟ್ಟು ಹೆಚ್ಚಾಗಿದೆ. ಹೆಚ್ಚಿದ ರೈಲ್ವೆ ಬಜೆಟ್ ಪರಿಣಾಮವನ್ನು ನೀವು ನೋಡಬಹುದು; ಇಂದು, ಹೊಸ ರೈಲು ಮಾರ್ಗಗಳನ್ನು ಹಾಕುವಲ್ಲಿ, ಅಸ್ತಿತ್ವದಲ್ಲಿರುವ ಮಾರ್ಗಗಳನ್ನು ದ್ವಿಗುಣಗೊಳಿಸುವಲ್ಲಿ ಮತ್ತು ರಾಜ್ಯದ ನಿಲ್ದಾಣಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ಇಂದು, ಜಾರ್ಖಂಡ್ ಕೂಡ ರೈಲ್ವೆ ಜಾಲದ 100 ಪ್ರತಿಶತ ವಿದ್ಯುದ್ದೀಕರಣಗೊಂಡ ರಾಜ್ಯಗಳೊಂದಿಗೆ ಸೇರಿಕೊಂಡಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ, ಜಾರ್ಖಂಡಿನ  50 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ.

ಸ್ನೇಹಿತರೇ,

ಇಂದು, ಜಾರ್ಖಂಡಿನಲ್ಲಿ ಸಾವಿರಾರು ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲು ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. ಪಿಎಂ ಆವಾಸ್ ಯೋಜನೆಯಡಿ ಸಾವಿರಾರು ಜನರಿಗೆ ಪಕ್ಕಾ ಮನೆಗಳನ್ನು ಸಹ ಒದಗಿಸಲಾಗಿದೆ. ಮನೆಗಳ ಜೊತೆಗೆ, ಅವರಿಗೆ ಶೌಚಾಲಯಗಳು, ನೀರು, ವಿದ್ಯುತ್ ಮತ್ತು ಅನಿಲ ಸಂಪರ್ಕಗಳಂತಹ ಸೌಲಭ್ಯಗಳನ್ನು ಸಹ ನೀಡಲಾಗಿದೆ. ನಾವು ನೆನಪಿಟ್ಟುಕೊಳ್ಳಬೇಕು... ಒಂದು ಕುಟುಂಬವು ತನ್ನದೇ ಆದ ಮನೆಯನ್ನು ಪಡೆದಾಗ, ಅವರ ಸ್ವಾಭಿಮಾನ ಹೆಚ್ಚಾಗುತ್ತದೆ. ಅವರು ತಮ್ಮ ವರ್ತಮಾನವನ್ನು ಸುಧಾರಿಸುವ ಬಗ್ಗೆ ಮಾತ್ರವಲ್ಲದೆ ಉತ್ತಮ ಭವಿಷ್ಯದ ಬಗ್ಗೆಯೂ ಯೋಚಿಸಲು ಪ್ರಾರಂಭಿಸುತ್ತಾರೆ. ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಅವರು ತಮ್ಮದೇ ಆದ ಮನೆಯನ್ನು ಹೊಂದುವ ಬಗ್ಗೆ ಯೋಚಿಸುತ್ತಿರುತ್ತಾರೆ. ಮತ್ತು, ಪಿಎಂ ಆವಾಸ್ ಯೋಜನೆಯೊಂದಿಗೆ, ಜಾರ್ಖಂಡ್ ಜನರು ಶಾಶ್ವತ ಮನೆಗಳನ್ನು ಪಡೆಯುತ್ತಿರುವುದು ಮಾತ್ರವಲ್ಲದೆ, ಇದು ಹಳ್ಳಿಗಳು ಮತ್ತು ನಗರಗಳಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೇ,

2014 ರಿಂದ, ದೇಶದ ಬಡವರು, ದಲಿತರು, ದೀನದಲಿತರು, ಅವಕಾಶ ವಂಚಿತರು ಮತ್ತು ಬುಡಕಟ್ಟು ಕುಟುಂಬಗಳನ್ನು ಸಬಲೀಕರಣಗೊಳಿಸಲು ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಾರ್ಖಂಡ್ ಸೇರಿದಂತೆ ದೇಶಾದ್ಯಂತ ಬುಡಕಟ್ಟು ಸಹೋದರ ಸಹೋದರಿಯರಿಗಾಗಿ ಪಿಎಂ ಜನಮಾನ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಅತ್ಯಂತ ಹಿಂದುಳಿದ ಬುಡಕಟ್ಟುಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಕುಟುಂಬಗಳಿಗೆ ಮನೆಗಳು, ರಸ್ತೆಗಳು, ವಿದ್ಯುತ್, ನೀರು ಮತ್ತು ಶಿಕ್ಷಣವನ್ನು ಒದಗಿಸಲು ಅಧಿಕಾರಿಗಳೇ ಈ ಕುಟುಂಬಗಳನ್ನು ತಲುಪುತ್ತಾರೆ. ಈ ಪ್ರಯತ್ನಗಳು 'ವಿಕಸಿತ ಜಾರ್ಖಂಡ್' (ಅಭಿವೃದ್ಧಿ ಹೊಂದಿದ ಜಾರ್ಖಂಡ್) ಗೆ ನಮ್ಮ ಬದ್ಧತೆಯ ಭಾಗವಾಗಿವೆ. ಎಲ್ಲರ ಆಶೀರ್ವಾದದೊಂದಿಗೆ, ಈ ಬದ್ಧತೆ ಖಂಡಿತವಾಗಿಯೂ ಈಡೇರುತ್ತದೆ ಮತ್ತು ನಾವು ಜಾರ್ಖಂಡ್ ಕನಸುಗಳನ್ನು ಸಾಕಾರಗೊಳಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ. ಈ ಕಾರ್ಯಕ್ರಮದ ನಂತರ, ನಾನು ಮತ್ತೊಂದು ದೊಡ್ಡ ಸಾರ್ವಜನಿಕ ಸಭೆಗೆ ಹೋಗುತ್ತಿದ್ದೇನೆ. ನಾನು 5-10 ನಿಮಿಷಗಳಲ್ಲಿ ಅಲ್ಲಿಗೆ ತಲುಪುತ್ತೇನೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ನನಗಾಗಿ ಕಾಯುತ್ತಿದ್ದಾರೆ. ಜಾರ್ಖಂಡ್ ಗೆ ಸಂಬಂಧಿಸಿದ ಇತರ ವಿಷಯಗಳನ್ನು ನಾನು ಅಲ್ಲಿ ವಿವರವಾಗಿ ಚರ್ಚಿಸುತ್ತೇನೆ. ಆದರೆ ನಾನು ಜಾರ್ಖಂಡ್ ಜನರ ಕ್ಷಮೆಯನ್ನು ಕೂಡಾ ಕೋರುತ್ತೇನೆ, ಏಕೆಂದರೆ, ನಾನು ರಾಂಚಿಯನ್ನು ತಲುಪಿದ್ದರೂ, ಪ್ರಕೃತಿ ಸಹಕರಿಸಲಿಲ್ಲ, ಮತ್ತು ನನಗೆ ಇಲ್ಲಿಂದ ಹೆಲಿಕಾಪ್ಟರಿನಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ನನಗೆ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಮತ್ತು ಈ ಕಾರಣಕ್ಕಾಗಿ ನಾನು ಈ ಎಲ್ಲಾ ಕಾರ್ಯಕ್ರಮಗಳನ್ನು ಇಂದು ವೀಡಿಯೋ  ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸುತ್ತಿದ್ದೇನೆ. ನಾನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಮತ್ತೊಮ್ಮೆ ನೀವೆಲ್ಲರೂ ಇಲ್ಲಿಗೆ ಬಂದಿರುವುದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನಮಸ್ಕಾರ.

 

*****



(Release ID: 2055332) Visitor Counter : 22