ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದರು
ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಹಿಂದಿಯನ್ನು ಮಿತ್ರಭಾಷೆಯನ್ನಾಗಿಸುವ ಗುರಿಯೊಂದಿಗೆ ನಾವು ಮುನ್ನಡೆಯಬೇಕು
ಯಾವುದೇ ಭಾರತೀಯ ಭಾಷೆಯೊಂದಿಗೆ ಪೈಪೋಟಿ ನಡೆಸದೆ, ಹಿಂದಿಯ ಸ್ವೀಕಾರವನ್ನು ಹೆಚ್ಚಿಸಬೇಕಾಗಿದೆ
ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಿಧ ಭಾರತೀಯ ಭಾಷೆಗಳಿಂದ ಹಿಂದಿಗೆ ಪದಗಳನ್ನು ಸೇರಿಸಿದೆ, ಪುಷ್ಟೀಕರಿಸುತ್ತದೆ ಮತ್ತು ಹೆಚ್ಚು ಹೊಂದಿಕೊಳ್ಳುವಂತೆ ಮಾಡಿದೆ
2047ರ ವೇಳೆಗೆ ದೇಶದ ಎಲ್ಲಾ ಸರ್ಕಾರಿ ವ್ಯವಸ್ಥೆಗಳು ಭಾರತೀಯ ಭಾಷೆಗಳಲ್ಲಿಯೇ ಕಾರ್ಯನಿರ್ವಹಿಸಬೇಕು ಎಂಬ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ
ಮಕ್ಕಳ ಪ್ರಾಥಮಿಕ ಶಿಕ್ಷಣವು ಅವರ ಮಾತೃಭಾಷೆಯಲ್ಲಿದ್ದಾಗ, ಅವರು ಇತರ ಭಾರತೀಯ ಭಾಷೆಗಳನ್ನೂ ಸುಲಭವಾಗಿ ಕಲಿಯಬಹುದು
ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾಷೆಗೆ ಹೊಸ ಜೀವ ನೀಡಿ ಅದರ ಸ್ವೀಕಾರವನ್ನು ಹೆಚ್ಚಿಸುವ ಮೂಲಕ ಸ್ವಾತಂತ್ರ್ಯ ಚಳವಳಿಯ ದಾರ್ಶನಿಕರ ಕನಸನ್ನು ನನಸಾಗಿಸಬೇಕು
Posted On:
09 SEP 2024 8:19PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ, ಅಧಿಕೃತ ಭಾಷೆಯ ಸಂಸದೀಯ ಸಮಿತಿಯನ್ನು ಪುನರ್ ರಚಿಸಲು ಇಂದು ನವದೆಹಲಿಯಲ್ಲಿ ಸಂಸದೀಯ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಶ್ರೀ ಅಮಿತ್ ಶಾ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಶ್ರೀ ಅಮಿತ್ ಶಾ ಅವರು ಈ ಮೊದಲು 2019 ರಿಂದ 2024 ರವರೆಗೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವರು ತಮ್ಮನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕಾಗಿ ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಕೇಂದ್ರ ಗೃಹ ಸಚಿವರು ತಮ್ಮ ಭಾಷಣದಲ್ಲಿ, ಕಳೆದ 75 ವರ್ಷಗಳಿಂದ ನಾವು ಅಧಿಕೃತ ಭಾಷೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದ್ದೇವೆ, ಆದರೆ ಕಳೆದ 10 ವರ್ಷಗಳಲ್ಲಿ ಅದರ ವಿಧಿ-ವಿಧಾನದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ಪ್ರಚಾರ ಮಾಡಲು ಹಿಂದಿ ಯಾವುದೇ ಸ್ಥಳೀಯ ಭಾಷೆಗೆ ಪೈಪೋಟಿ ನೀಡಬಾರದು ಎಂದು ಕೆ.ಎಂ. ಮುನ್ಷಿ ಹಾಗೂ ಎನ್.ಜಿ. ಅಯ್ಯಂಗಾರ್ ಅವರು ಹಲವರ ಜತೆ ಸಮಾಲೋಚನೆ ನಡೆಸಿ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ, ಸಮಿತಿಯು ಹಿಂದಿ ಎಲ್ಲಾ ಸ್ಥಳೀಯ ಭಾಷೆಗಳ ಸ್ನೇಹಿತನಾಗಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಮತ್ತು ಅದು ಯಾವುದೇ ಭಾಷೆಯೊಂದಿಗೂ ಸ್ಪರ್ಧಿಸುವುದಿಲ್ಲ. ಯಾವುದೇ ಸ್ಥಳೀಯ ಭಾಷೆ ಮಾತನಾಡುವವರು ಕೀಳರಿಮೆ ಹೊಂದದಂತೆ ಎಚ್ಚರ ವಹಿಸಬೇಕು, ಹಿಂದಿಯನ್ನು ಸಾಮಾನ್ಯವಾಗಿ ಒಮ್ಮತ ಮತ್ತು ಸಹಮತದಿಂದ ಕಾರ್ಯ ಭಾಷೆಯಾಗಿ ಸ್ವೀಕರಿಸಬೇಕು ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದ ಭಾಷೆಯಲ್ಲಿ ಆಡಳಿತ ನಡೆಸುವುದು ಬಹಳ ಮುಖ್ಯ ಮತ್ತು ಈ ನಿಟ್ಟಿನಲ್ಲಿ ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಶಬ್ದಕೋಶವನ್ನು ರಚಿಸಿದ್ದೇವೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಥಳೀಯ ಭಾಷೆಗಳಿಂದ ಹಿಂದಿಗೆ ಸಾವಿರಾರು ಪದಗಳನ್ನು ಸೇರಿಸಿದ್ದೇವೆ. ಹಿಂದಿಯಲ್ಲಿ ಸಮಾನಾರ್ಥಕ ಪದಗಳು ಲಭ್ಯವಿಲ್ಲದ ಅನೇಕ ಪದಗಳಿವೆ, ಆದರೆ ಇತರ ಭಾಷೆಗಳಿಂದ ಅನೇಕ ಪದಗಳನ್ನು ಸ್ವೀಕರಿಸಿ, ನಾವು ಹಿಂದಿಯಲ್ಲಿ ಬಳಸಿ, ಹಿಂದಿಯನ್ನು ಶ್ರೀಮಂತಗೊಳಿಸಿದ್ದೇವೆ ಮತ್ತು ಅದನ್ನು ಹೊಂದಿಕೊಳ್ಳುವಂತೆ ಮಾಡಿದ್ದೇವೆ. ಆದರ ಜೊತೆಗೆ , ನಿರ್ದಿಷ್ಟವಾಗಿ ಯಾವುದೇ ಭಾರತೀಯ ಭಾಷೆ ಮತ್ತು ಹಿಂದಿ ನಡುವಿನ ಸಂಬಂಧವನ್ನು ಕೂಡಾ ಬಲಪಡಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು.
8ನೇ ಶೆಡ್ಯೂಲ್ ನ ಎಲ್ಲಾ ಭಾಷೆಗಳನ್ನು ತಾಂತ್ರಿಕ ಆಧಾರದ ಮೇಲೆ ಸ್ವಯಂಚಾಲಿತವಾಗಿ ಭಾಷಾಂತರಿಸುವಂತಹ ತಂತ್ರಾಂಶವನ್ನು ಅಧಿಕೃತ ಭಾಷಾ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಈ ಕೆಲಸ ಪೂರ್ಣಗೊಂಡ ನಂತರ, ಹಿಂದಿ ಸ್ವೀಕಾರವನ್ನು ಪಡೆಯುತ್ತದೆ ಮತ್ತು ನಮ್ಮ ಕೆಲಸದಲ್ಲಿ ಅತ್ಯಂತ ವೇಗದಲ್ಲಿ ವಿಕಸನಗೊಳ್ಳುತ್ತದೆ. ಕಳೆದ 5 ವರ್ಷಗಳಲ್ಲಿ ನಾವು ಬಹಳ ಕಷ್ಟಪಟ್ಟು ಸಮಿತಿಯ ವರದಿಯ ಮೂರು ಬೃಹತ್ ಸಂಪುಟಗಳನ್ನು ಅಧ್ಯಕ್ಷರಿಗೆ ನೀಡಿದ್ದೇವೆ, ಇದು ಹಿಂದೆಂದೂ ಆಗಿಲ್ಲ. ಈ ವೇಗವನ್ನು ನಾವು ಉಳಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.
ಸಹಕಾರ ಮತ್ತು ಸ್ವೀಕಾರ ನಮ್ಮ ಕೆಲಸದ ಎರಡು ಮೂಲ ಅಡಿಪಾಯಗಳಾಗಿರಬೇಕು. 2047ರ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶದ ಸಂಪೂರ್ಣ ಕಾರ್ಯವನ್ನು ಭಾರತೀಯ ಭಾಷೆಗಳಲ್ಲಿ ಹೆಮ್ಮೆಯಿಂದ ಮಾಡುವಂತಹ ಗುರಿಯೊಂದಿಗೆ ನಾವು ಮುನ್ನಡೆಯಬೇಕಾಗಿದೆ. 1000 ವರ್ಷಗಳಷ್ಟು ಹಳೆಯ ಹಿಂದಿ ಭಾಷೆಗೆ ಹೊಸ ಬದುಕು ನೀಡಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಿ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಮುಂದಿರುವ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.
ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾಷೆಗೆ ಹೊಸ ಜೀವ ನೀಡಿ ಅದರ ಸ್ವೀಕಾರವನ್ನು ಹೆಚ್ಚಿಸುವ ಮೂಲಕ ಸ್ವಾತಂತ್ರ್ಯ ಚಳವಳಿಯ ದಾರ್ಶನಿಕರ ಕನಸನ್ನು ನನಸಾಗಿಸಬೇಕು ಎಂದು ಗೃಹ ಸಚಿವರು ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್, ಲೋಕಮಾನ್ಯ ತಿಲಕ್, ಮಹಾತ್ಮಾ ಗಾಂಧಿ, ಲಾಲಾ ಲಜಪತ್ ರಾಯ್, ಸಿ.ರಾಜಗೋಪಾಲಾಚಾರಿ, ಕೆ.ಎಂ.ಮುನ್ಷಿ ಮತ್ತು ಸರ್ದಾರ್ ಪಟೇಲ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯೇತರ ರಾಜ್ಯಗಳಿಂದ ಬಂದವರಾದರೂ, ಅವರೆಲ್ಲರೂ ಅದನ್ನು ( ಹಿಂದಿ ಭಾಷೆಯನ್ನು ) ಚೆನ್ನಾಗಿ ಅರಿತುಕೊಂಡಿದ್ದರು ಎಂದು ಅವರು ಹೇಳಿದರು. ನಮ್ಮ ದೇಶವು ಪ್ರತಿ ರಾಜ್ಯ-ರಾಜ್ಯಗಳ ನಡುವೆ ಸಂವಹನ ಮಾಧ್ಯಮವಾಗಿ ಕೆಲಸ ಮಾಡುವ ಒಂದು ಭಾರತೀಯ ಭಾಷೆಯನ್ನು ಹೊಂದಿರಬೇಕು. ಅದಕ್ಕಾಗಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ಮಗುವಿನ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂದು ಒತ್ತು ನೀಡಲಾಗಿದೆ. ಮಗು ತನ್ನ ಮಾತೃಭಾಷೆಯನ್ನು ಕಲಿತಾಗ, ಅವನು ದೇಶದ ಅನೇಕ ಭಾಷೆಗಳೊಂದಿಗೆ ಸಂಪರ್ಕ ಹೊಂದುತ್ತಾನೆ ಎಂದು ಗೃಹ ಸಚಿವರು ಹೇಳಿದರು.
ಮುನ್ಷಿ-ಅಯ್ಯಂಗಾರ್ ಸಮಿತಿಯ ಅಡಿಯಲ್ಲಿ, ಭಾಷಾ ವೈವಿಧ್ಯತೆಯನ್ನು ಪರಿಗಣಿಸುವ ಭಾಷಾ ಆಯೋಗವನ್ನು ಪ್ರತಿ 5 ವರ್ಷಗಳಿಗೊಮ್ಮೆ ರಚಿಸಲಾಗುವುದು ಎಂದು ಈ ಮೊದಲು ನಿರ್ಧರಿಸಲಾಯಿತು, ಆದರೆ ಅದನ್ನು ಆನಂತರ ಮರೆತು ಬಿಡಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಯಾವುದೇ ಭಾರತೀಯ ಭಾಷೆಗೆ ಪೈಪೋಟಿ ನೀಡದೆ ಹಿಂದಿಯ ಸ್ವೀಕಾರವನ್ನು ಸಹಭಾಷೆಯಾಗಿ ಹೆಚ್ಚಿಸಬೇಕಿದೆ. ಹಿಂದಿ ಭಾಷೆಯು ಈಗ ಉದ್ಯೋಗ, ತಂತ್ರಜ್ಞಾನದೊಂದಿಗೆ ಸಂಬಂಧ ಹೊಂದಿದೆ ಮತ್ತು ಭಾರತ ಸರ್ಕಾರವು ಎಲ್ಲಾ ಹೊಸ ಯುಗದ ತಂತ್ರಜ್ಞಾನಗಳನ್ನು ಹಿಂದಿ ಭಾಷೆಯೊಂದಿಗೆ ಸಂಯೋಜಿಸಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲ ಮಾತೃಭಾಷೆಗೂ ಪ್ರಾಮುಖ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಗಿದ್ದು, ಈ ಸಮಿತಿಯು ಇದನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದೆ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಿ ಇದು 75 ನೇ ವರ್ಷವಾಗಿದ್ದು, ಈ ಸಂದರ್ಭದಲ್ಲಿ ದೆಹಲಿಯ ಭಾರತ ಮಂಟಪದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಧಿಕೃತ ಭಾಷೆಗಳ ಕಾಯಿದೆ, 1963 ರ ಸೆಕ್ಷನ್ 4 ರ ನಿಬಂಧನೆಗಳ ಅಡಿಯಲ್ಲಿ ಅಧಿಕೃತ ಭಾಷೆಯ ಸಂಸದೀಯ ಸಮಿತಿಯನ್ನು 1976 ರಲ್ಲಿ ರಚಿಸಲಾಯಿತು. ಸಮಿತಿಯು ಸಂಸತ್ತಿನ 30 ಸದಸ್ಯರನ್ನು ಒಳಗೊಂಡಿರುತ್ತದೆ, ಅದರಲ್ಲಿ 20 ಲೋಕಸಭೆಯಿಂದ ಮತ್ತು 10 ರಾಜ್ಯಸಭೆಯಿಂದ ಆಯ್ಕೆ ಆಗಿರುತ್ತಾರೆ.
ಇಂದಿನ ಸಭೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಿಂದ ಸಮಿತಿಗೆ ಹೊಸದಾಗಿ ನೇಮಕಗೊಂಡ ಸಂಸದರು ಕೂಡ ಉಪಸ್ಥಿತರಿದ್ದರು. ಸಂಸದೀಯ ಸಮಿತಿಯ ಅಧಿಕಾರಿಗಳೊಂದಿಗೆ ಕಾರ್ಯದರ್ಶಿ ಶ್ರೀಮತಿ ಅಂಶುಲಿ ಆರ್ಯ ಅವರ ನೇತೃತ್ವದಲ್ಲಿ ಅಧಿಕೃತ ಭಾಷಾ ಇಲಾಖೆಯ ಅಧಿಕಾರಿಗಳು, ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
*****
(Release ID: 2053320)
Visitor Counter : 79