ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಬ್ರೂನೈ ಸುಲ್ತಾನರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ ಹೇಳಿಕೆಗಳ ಕನ್ನಡ ಅನುವಾದ

Posted On: 04 SEP 2024 3:18PM by PIB Bengaluru

ಗೌರವಾನ್ವಿತ ಮಹಾರಾಜರೇ,

ನಿಮ್ಮ ಸೌಜನ್ನದ ಮಾತುಗಳು, ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ನಿಮಗೆ ಮತ್ತು ನಿಮ್ಮ ಇಡೀ ರಾಜಮನೆತನಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಮೊದಲನೆಯದಾಗಿ, 1.4 ಶತಕೋಟಿ ಭಾರತೀಯರ ಪರವಾಗಿ, ನಿಮ್ಮ ದೇಶದ ಸ್ವಾತಂತ್ರ್ಯದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ನಿಮಗೆ ಮತ್ತು ಬ್ರೂನೈಯ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸ ಬಯಸುತ್ತೇನೆ.

ಗೌರವಾನ್ವಿತ ಮಹಾರಾಜರೇ,

ನಮ್ಮ ದೇಶಗಳ ನಡುವೆ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಸಂಬಂಧವಿದೆ. ನಮ್ಮ ನಡುವಿನ ಮಹಾನ್ ಸಂಸ್ಕೃತಿ ಸಂಪ್ರದಾಯಗಳೇ ಈ ಸ್ನೇಹದ ಬುನಾದಿಯಾಗಿದೆ. ನಿಮ್ಮ ನಾಯಕತ್ವದಲ್ಲಿ ನಮ್ಮ ಈ ಎರಡು ದೇಶಗಳ ನಡುವಿನ ಸಂಬಂಧಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿವೆ. 2018ರಲ್ಲಿ ನಮ್ಮ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ನೀವು ಭಾರತಕ್ಕೆ ಭೇಟಿ ನೀಡಿದ್ದನ್ನು ಭಾರತದ ಜನರು ಇನ್ನೂ ಬಹಳ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದಾರೆ.

ಗೌರವಾನ್ವಿತ ಮಹಾರಾಜರೇ,

ನನ್ನ ಮೂರನೇ ಅವಧಿಯ ಆರಂಭದಲ್ಲಿ, ಬ್ರೂನೈಗೆ ಭೇಟಿ ನೀಡಲು ಮತ್ತು ನಿಮ್ಮೊಂದಿಗೆ ಭವಿಷ್ಯದ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ದೊರಕಿರುವುದು ನನಗೆ ತುಂಬಾ ಸಂತೋಷದ ವಿಷಯವಾಗಿದೆ. ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯ 40ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದು ಸಹ ಬಹಳ ಸಂತೋಷದ ವಿಷಯವಾಗಿದೆ. ಭಾರತದ “ಆಕ್ಟ್ ಈಸ್ಟ್” ನೀತಿ ಮತ್ತು “ಇಂಡೋ-ಪೆಸಿಫಿಕ್” ದೃಷ್ಟಿಕೋನದಲ್ಲಿ ಬ್ರೂನೈ ಪ್ರಮುಖ ಪಾಲುದಾರ ದೇಶವಾಗಿರುವುದು, ನಮಗೆ ಉಜ್ವಲ ಭವಿಷ್ಯದ ಭರವಸೆಯ ವಿಷಯವಾಗಿದೆ. ನಾವು ಪರಸ್ಪರ ಭಾವನೆಗಳನ್ನು ಗೌರವಿಸುತ್ತೇವೆ. ಈ ಭೇಟಿ ಮತ್ತು ನಮ್ಮ ಚರ್ಚೆಗಳು ಮುಂದಿನ ದಿನಗಳಲ್ಲಿ ನಮ್ಮ ಸಂಬಂಧಗಳಿಗೆ ವ್ಯೂಹಾತ್ಮಕ ಕಾರ್ಯತಂತ್ರದ ನಿರ್ದೇಶನವನ್ನು ನೀಡುತ್ತವೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಈ ಸಂದರ್ಭದಲ್ಲಿ, ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.


ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಕನ್ನಡ ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****



(Release ID: 2051792) Visitor Counter : 27