ಪ್ರಧಾನ ಮಂತ್ರಿಯವರ ಕಛೇರಿ
ಬ್ರೂನೈ ದೊರೆ ಸುಲ್ತಾನ್ ಹಾಜಿ ಹಸ್ಸನಲ್ ಬೋಲ್ಕಾಯ್ ಅವರೊಂದಿಗಿನ ಪ್ರಧಾನಮಂತ್ರಿಗಳ ಭೇಟಿ
Posted On:
04 SEP 2024 12:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಂದರ್ ಸೆರಿ ಬೆಗವಾನ್ನಲ್ಲಿರುವ ಇಸ್ತಾನಾ ನುರುಲ್ ಇಮಾನ್ಗೆ ತಲುಪಿದರು. ಅಲ್ಲಿ ಅವರನ್ನು ಬ್ರೂನೈನ ದೊರೆ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಬ್ರೂನೈಗೆ ಆಹ್ವಾನ ನೀಡಿದ್ದಕ್ಕೆ ವಂದಿಸುತ್ತಾ ಪ್ರಧಾನಮಂತ್ರಿಗಳು, ಭಾರತ ಸರ್ಕಾರದ ಮುಖ್ಯಸ್ಥರೊಬ್ಬರ ಪ್ರಪ್ರಥಮ ದ್ವಿಪಕ್ಷೀಯ ಭೇಟಿಯು ಎರಡೂ ದೇಶಗಳ ನಡುವಿನ ಬಾಂಧವ್ಯಗಳನ್ನು ಬಲಪಡಿಸುವ ಭಾರತದ ಅದಮ್ಯ ಬಯಕೆಯನ್ನು ಪ್ರತಿಫಲಿಸುತ್ತದೆ ಎಂದು ಹೇಳಿದರು. 'ಆಕ್ಟ್ ಈಸ್ಟ್’ ನೀತಿಯನ್ನು ದಶಕದ ಸಂದರ್ಭದಲ್ಲಿ ಬಲಪಡಿಸುವ ಭಾರತದ ಬದ್ಧತೆಗೆ ಅನುಗುಣವಾಗಿ ಈ ಭೇಟಿ ನಡೆದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿಸ್ತೃತ ಪಾಲುದಾರಿಕೆಗಾಗಿ ದ್ವಿಪಕ್ಷೀಯ ಬಾಂಧವ್ಯದ ಬಲವರ್ಧನೆಯನ್ನು ಉಭಯ ನಾಯಕರು ಸ್ವಾಗತಿಸಿದರು. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಶಿಕ್ಷಣ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ, ಸಾಮರ್ಥ್ಯ ನಿರ್ಮಾಣ, ಸಂಸ್ಕೃತಿ, ಜನರ ನಡುವಿನ ವಿನಿಮಯ ಸೇರಿದಂತೆ ವಿವಿಧ ವಿಷಯಗಳ ಕುರಿತು ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಫಿನ್ ಟೆಕ್, ಸೈಬರ್ ಭದ್ರತೆ, ನವೀನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ನವೀಕರಿಸಬಹುದಾದ ಇಂಧನ ಮೊದಲಾದ ವಲಯಗಳಲ್ಲಿ ಅನ್ವೇಷಣೆ ಮತ್ತು ಸಹಕಾರಕ್ಕೆ ಇಬ್ಬರೂ ನಾಯಕರು ಸಮ್ಮತಿಸಿದರು. ಪ್ರಧಾನಮಂತ್ರಿ ಮತ್ತು ಬ್ರೂನೈ ದೊರೆ ಇಬ್ಬರೂ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಉಭಯ ನಾಯಕರು ಖಂಡಿಸಿದರು ಹಾಗೂ ಅದನ್ನು ನಿರಾಕರಿಸುವಂತೆ ರಾಷ್ಟ್ರಗಳಿಗೆ ಕರೆ ನೀಡಿದರು. ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಪರಸ್ಪರ ಲಾಭದಾಯಕ ವಲಯಗಳಲ್ಲಿ ನಿಕಟವಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಹವಾಮಾನ ಬದಲಾವಣೆಗಾಗಿ ಆಸಿಯಾನ್ ಕೇಂದ್ರದ ಸ್ಥಾಪನೆಯ ಬ್ರೂನೈ ದಾರುಸ್ಸಲಾಮ್ ಪ್ರಯತ್ನಗಳಿಗೆ ಭಾರತದ ನೀಡಿದ ಬೆಂಬಲವನ್ನು ದೊರೆ ಹಾಜಿ ಹಸನಲ್ ಬೊಲ್ಕಿಯಾ ಶ್ಲಾಘಿಸಿದರು.
ಉಪಗ್ರಹ ಮತ್ತು ಉಪಗ್ರಹ ವಾಹಕಗಳಿಗಾಗಿ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಟೆಲಿಕಮಾಂಡ್ ಸ್ಟೇಷನ್ಗಳ ಕಾರ್ಯಾಚರಣೆಯಲ್ಲಿ ಸಹಕಾರ ಒಪ್ಪಂದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ಬ್ರೂನೈ ಸಾರಿಗೆ ಮತ್ತು ಮಾಹಿತಿ ಸಂವಹನಗಳ ಸಚಿವ ಪೆಂಗಿರಾನ್ ದಾತೋ ಶಮ್ಹರಿ ಪೆಂಗಿರನ್ ದಾತೋ ಮುಸ್ತಫಾ ಸಹಿ ಹಾಕಿದ್ದು ಉಭಯ ನಾಯಕರು ಈ ಸಹಕಾರ ಮತ್ತು ವಿನಿಮಯಕ್ಕೆ ಸಾಕ್ಷಿಯಾದರು. ಬಂದರ್ ಸೆರಿ ಬೇಗವಾನ್ ಮತ್ತು ಚೆನ್ನೈ ನಡುವೆ ನೇರ ವಿಮಾನಯಾನ ಆರಂಭವನ್ನು ಉಭಯ ದೇಶಗಳ ನಾಯಕರು ಸ್ವಾಗತಿಸಿದರು. ಮಾತುಕತೆಯ ನಂತರ ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು.
ಪ್ರಧಾನಮಂತ್ರಿ ಅವರಿಗೆ ಗೌರವ ಸೂಚಕವಾಗಿ ಬ್ರೂನೈ ದೊರೆ ಅಧಿಕೃತ ಔತಣಕೂಟವನ್ನು ಏರ್ಪಡಿಸಿದ್ದರು.
ಉಭಯ ನಾಯಕರ ನಡುವಿನ ಇಂದಿನ ಚರ್ಚೆಗಳು ಭಾರತ-ಬ್ರೂನೈ ನಡುವಣ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ಗಟ್ಟಿಗೊಳಿಸಲಿದೆ. ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡುವಂತೆ ಬ್ರೂನೈ ದೊರೆ ಅವರಿಗೆ ಆಹ್ವಾನ ನೀಡಿದರು. ಪ್ರಧಾನಮಂತ್ರಿಯವರ ಈ ಐತಿಹಾಸಿಕ ಭೇಟಿಯು ಭಾರತದ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್ ದೂರದೃಷ್ಟಿಯಡಿ ಇನ್ನಷ್ಟು ಕಾರ್ಯಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ.
*****
(Release ID: 2051709)
Visitor Counter : 44
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam