ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಂದೇಶ ಸೇವೆಗಳ ದುರುಪಯೋಗವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಎಕ್ಸಸ್ ಸೇವಾ ಪೂರೈಕೆದಾರರಿಗೆ ನಿರ್ದೇಶನಗಳನ್ನು ನೀಡಿದ ಟಿ.ಆರ್.ಎ.ಐ. 

Posted On: 20 AUG 2024 2:01PM by PIB Bengaluru

ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿ.ಆರ್.ಎ.ಐ.) ಇಂದು ಸಂದೇಶ ಕಳುಹಿಸುವ ಸೇವೆಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಮೋಸದ ಅಭ್ಯಾಸಗಳಿಂದ ಗ್ರಾಹಕರನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಜಾರಿಗೊಳಿಸಲು ಪರಿಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದೆ. ಇಂದು ಹೊರಡಿಸಿದ ನಿರ್ದೇಶನದ ಮೂಲಕ, ಕೆಳಗಿನ ನಿಯಮಗಳನ್ನು ಖಚಿತಪಡಿಸಿಕೊಳ್ಳಲು  ಎಲ್ಲಾ ಎಕ್ಸಸ್ ಸೇವಾ ಪೂರೈಕೆದಾರರಿಗೆ ಟಿ.ಆರ್.ಎ.ಐ.  ಕಡ್ಡಾಯಗೊಳಿಸಿದೆ:

ಎ. ಉತ್ತಮ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ 30ನೇ ಸೆಪ್ಟೆಂಬರ್ 2024 ರೊಳಗೆ 140 ಸರಣಿಗಳಿಂದ ಪ್ರಾರಂಭವಾಗುವ ಟೆಲಿಮಾರ್ಕೆಟಿಂಗ್ ಕರೆಗಳನ್ನು ಆನ್ ಲೈನ್ ಡಿ.ಎಲ್.ಟಿ ಪ್ಲಾಟ್ಫಾರ್ಮ್ಗೆ ಸ್ಥಳಾಂತರಿಸಲು ಎಕ್ಸಸ್ ಸೇವಾ ಪೂರೈಕೆದಾರರನ್ನು ಟಿ.ಆರ್.ಎ.ಐ. ಕಡ್ಡಾಯಗೊಳಿಸಿದೆ.

ಬಿ. 1 ನೇ ಸೆಪ್ಟೆಂಬರ್ 2024 ರಿಂದ ಜಾರಿಗೆ ಬರುವಂತೆ, ಎಲ್ಲಾ ಎಕ್ಸಸ್ ಸೇವಾ ಪೂರೈಕೆದಾರರು ಯು.ಆರ್.ಎಲ್. ಗಳು, ಎ.ಪಿ.ಕೆ. ಗಳು, ಒಟಿಟಿ ಲಿಂಕ್ಗಳು ಅಥವಾ ಕಳುಹಿಸುವವರಿಂದ ಶ್ವೇತಪಟ್ಟಿ ಮಾಡದಿರುವ ಸಂಖ್ಯೆಗಳನ್ನು ಹೊಂದಿರುವವರಿಗೆ ಸಂದೇಶಗಳನ್ನು ರವಾನಿಸುವುದನ್ನು ನಿಷೇಧಿಸಲಾಗಿದೆ.

ಸಿ. ಸಂದೇಶದ ಪತ್ತೆಹಚ್ಚುವಿಕೆಯನ್ನು ಹೆಚ್ಚಿಸಲು, ಕಳುಹಿಸುವವರಿಂದ ಸ್ವೀಕರಿಸುವವರಿಗೆ ಎಲ್ಲಾ ಸಂದೇಶಗಳ ಜಾಡು 1ನೇ ನವೆಂಬರ್ 1, 2024 ರಿಂದ ಪತ್ತೆಹಚ್ಚಬೇಕು ಎಂದು ಟಿ.ಆರ್.ಎ.ಐ.  ಕಡ್ಡಾಯಗೊಳಿಸಿದೆ. ವ್ಯಾಖ್ಯಾನಿಸದ ಅಥವಾ ಹೊಂದಿಕೆಯಾಗದ ಸರಣಿಯನ್ನು ಹೊಂದಿರುವ ಯಾವುದೇ ಟೆಲಿಮಾರ್ಕೆಟಿಂಗ್ ಸಂಸ್ಥೆಯ ಸಂದೇಶವನ್ನು ತಿರಸ್ಕರಿಸಲಾಗುತ್ತದೆ.

ಡಿ. ಪ್ರಚಾರದ ವಿಷಯಕ್ಕಾಗಿ ಟೆಂಪ್ಲೇಟ್ ಗಳ ದುರುಪಯೋಗವನ್ನು ತಡೆಯಲು, ಟಿ.ಆರ್.ಎ.ಐ. ಅನುವರ್ತನೆಗಾಗಿ ದಂಡನಾತ್ಮಕ ಕ್ರಮಗಳನ್ನು ಪರಿಚಯಿಸಿದೆ. ತಪ್ಪಾದ ವರ್ಗದ ಅಡಿಯಲ್ಲಿ ನೋಂದಾಯಿಸಲಾದ ವಿಷಯ ಟೆಂಪ್ಲೇಟ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಪುನರಾವರ್ತಿತ ಅಪರಾಧಗಳು ಕಳುಹಿಸುವವರ ಸೇವೆಗಳ ಒಂದು ತಿಂಗಳ ಅಮಾನತಿಗೆ ಕಾರಣವಾಗುತ್ತವೆ.

ಇ. ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಡಿ.ಎಲ್.ಟಿ. ನಲ್ಲಿ ನೋಂದಾಯಿಸಲಾದ ಎಲ್ಲಾ ಹೆಡರ್ ಗಳು ಮತ್ತು ವಿಷಯ ಟೆಂಪ್ಲೇಟ್ ಗಳು ನಿಗದಿತ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ಹೆಚ್ಚುವರಿಯಾಗಿ, ಒಂದೇ ವಿಷಯದ ಟೆಂಪ್ಲೇಟ್ ಅನ್ನು ಬಹು ಹೆಡರ್ ಗಳಿಗೆ ಲಿಂಕ್ ಮಾಡಲಾಗುವುದಿಲ್ಲ.

ಎಫ್. ಯಾವುದೇ ಕಳುಹಿಸುವವರ ಹೆಡರ್ ಅಥವಾ ವಿಷಯ ಟೆಂಪ್ಲೇಟ್ಗಳ ದುರುಪಯೋಗವು ಗಮನಕ್ಕೆ ಬಂದರೆ, ಅವರ ಪರಿಶೀಲನೆಗಾಗಿ ಆ ಕಳುಹಿಸುವವರ ಎಲ್ಲಾ ಹೆಡರ್ಗಳು ಮತ್ತು ಕಂಟೆಂಟ್ ಟೆಂಪ್ಲೇಟ್ಗಳಿಂದ ಟ್ರಾಫಿಕ್ ಅನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಟಿ.ಆರ್.ಎ.ಐ. ನಿರ್ದೇಶಿಸಿದೆ. ಅಂತಹ ದುರುಪಯೋಗದ ವಿರುದ್ಧ ಕಾನೂನು ಕ್ರಮ ಕೈಗೊಂಡ ನಂತರ ಕಳುಹಿಸುವರ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ. ಇದಲ್ಲದೆ, ಎರಡು ವ್ಯವಹಾರ ದಿನಗಳಲ್ಲಿ ಅಂತಹ ದುರುಪಯೋಗಕ್ಕೆ ಜವಾಬ್ದಾರರಾಗಿರುವ ಘಟಕಗಳನ್ನು ಡೆಲಿವರಿ-ಟೆಲಿಮಾರ್ಕೆಟರ್ಗಳು ಗುರುತಿಸಬೇಕು, ವಿಫಲವಾದರೆ ಅವರು ಇದೇ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ನಿರ್ದೇಶನದ ನಿಖರವಾದ ಪಠ್ಯ ಉಲ್ಲೇಖಗಳಿಗಾಗಿ ಟಿ.ಆರ್.ಎ.ಐ. ವೆಬ್ ಸೈಟ್ http://www.trai.gov.in ನ್ನು ಸಂಪರ್ಕಿಸಬೇಕು.  

ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಶುದ್ಧ ಮತ್ತು ಸುರಕ್ಷಿತ ಸಂದೇಶ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ಮತ್ತು ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಈ ಉಪಕ್ರಮಗಳನ್ನು ಟಿ.ಆರ್.ಎ.ಐ. ತೆಗೆದುಕೊಂಡಿರುತ್ತದೆ.
 

*****


(Release ID: 2047103) Visitor Counter : 48