ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಂಪಾಕ್ಸ್ ಅನ್ನು ಅಂತಾರಾಷ್ಟ್ರೀಯ ಕಳವಳದ ತುರ್ತು ಆರೋಗ್ಯ ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನಿಗಾ ವಹಿಸುವಿಕೆ ಮುಂದುವರಿಕೆ


ಎಂಪಾಕ್ಸ್ ನಿರ್ವಹಣೆಗೆ ಸಿದ್ಧತೆ ಪರಾಮರ್ಶೆ ಸಂಬಂಧ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪಿ.ಕೆ.ಮಿಶ್ರಾ ಅವರಿಂದ ಉನ್ನತ ಮಟ್ಟದ ಸಭೆಯ ನೇತೃತ್ವ

ತ್ವರಿತ ಪತ್ತೆಗಾಗಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಸಲಹೆ

ಪ್ರಯೋಗಾಲಯಗಳು ಸನ್ನದ್ಧವಾಗಿರಲಿ

ರೋಗದ ವಿರುದ್ಧ ಸಾರ್ವಜನಿಕ ಆರೋಗ್ಯ ರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿಗಾಗಿ ಅಭಿಯಾನ

Posted On: 18 AUG 2024 7:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂಪಾಕ್ಸ್ ಬಗ್ಗೆ ನಿರಂತರ ನಿಗಾ ವಹಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸೂಚನೆಯಂತೆ ಪ್ರಧಾನಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಾದ ಡಾ.ಪಿ.ಕೆ.ಮಿಶ್ರಾ ಅವರು ದೇಶದಲ್ಲಿ ಎಂಪಾಕ್ಸ್ ನಿರ್ವಹಣೆಗೆ ಸಿದ್ಧತೆಯ ಸ್ಥಿತಿಗತಿ ಮತ್ತು ಸಂಬಂಧಿತ ಸಾರ್ವಜನಿಕ ಆರೋಗ್ಯ ಕ್ರಮಗಳ ಪರಾಮರ್ಶೆ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಂಕಿಪಾಕ್ಸ್ ಅಸ್ತಿತ್ವದಲ್ಲಿದ್ದು ಆಫ್ರಿಕಾದ ಹಲವು ಭಾಗಗಳಲ್ಲಿ ಹರಡಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಮತ್ತೊಮ್ಮೆ 2024ರ ಆಗಸ್ಟ್ 14 ರಂದು ಎಂಪಾಕ್ಸ್ ಅನ್ನು ಅಂತಾರಾಷ್ಟ್ರೀಯ ಕಳವಳದ ಸಾರ್ವಜನಿಕ ತುರ್ತು ಆರೋಗ್ಯ ಪರಿಸ್ಥಿತಿ (ಪಿ ಎಚ್ ಇ ಐ ಸಿ) ಎಂದು ಘೋಷಿಸಿದೆ. ಡಬ್ಲ್ಯು ಎಚ್ ಒ, ಈ ಹಿಂದೆ ನೀಡಿರುವ ಹೇಳಿಕೆ ಅನ್ವಯ 2022ರಿಂದ 116 ದೇಶಗಳಲ್ಲಿ 99,176 ಎಂಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, 208 ಜನರು ಸಾವನ್ನಪ್ಪಿದ್ದಾರೆ. ಕಾಂಗೋ ಗಣರಾಜ್ಯದಲ್ಲಿ ಎಂಪಾಕ್ಸ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ ಎಂಬುದು ಸಹ ನಂತರದಲ್ಲಿ ವರದಿಯಾಗಿದೆ. ಕಳೆದ ವರ್ಷ ವರದಿಯಾದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಈ ವರ್ಷ ಈವರೆಗೆ 15,600 ಪ್ರಕರಣಗಳು ಮತ್ತು 537 ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆಯು ಕಳೆದ ವರ್ಷದ ಒಟ್ಟು ಪ್ರಕರಣಗಳಿಗಿಂತ ಹೆಚ್ಚಾಗಿದೆ. 2022 ರಲ್ಲಿ ಡಬ್ಲ್ಯು ಎಚ್ ಒ ಅಂತಾರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿದ ಬಳಿಕ, ಭಾರತದಲ್ಲಿ 30 ಪ್ರಕರಣಗಳು ವರದಿಯಾಗಿವೆ. ಮಾರ್ಚ್ 2024 ರಲ್ಲಿ ಎಂಪಾಕ್ಸ್ ನ ಕೊನೆಯ ಪ್ರಕರಣ ಪತ್ತೆಯಾಗಿತ್ತು.

ದೇಶದಲ್ಲಿ ಪ್ರಸ್ತುತ ಎಂಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ ಎಂದು ಸಭೆಗೆ ತಿಳಿಸಲಾಯಿತು. ಪ್ರಸ್ತುತದ ಪರಿಶೀಲನೆ ಅನ್ವಯ, ಸಮಾನ ನಿರಂತರ ಹರಡುವಿಕೆಯೊಂದಿಗೆ ಬೃಹತ್ ಪ್ರಮಾಣದಲ್ಲಿ ಎಂಪಾಕ್ಸ್ ಹರಡುವ ಅಪಾಯದ ಸಾಧ್ಯತೆ ಕಡಿಮೆ ಇದೆ.

ಎಂಪಾಕ್ಸ್ ಸೋಂಕುಗಳು ಸಾಮಾನ್ಯವಾಗಿ ಸ್ವಯಂ ಮಿತಿ ಹೊಂದಿದ್ದು 2 ರಿಂದ 4 ವಾರಗಳಿರುತ್ತವೆ ಎಂಬ ಬಗ್ಗೆ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಯಿತು; ಎಂಪಾಕ್ಸ್ ರೋಗಿಗಳು ಸಾಮಾನ್ಯವಾಗಿ ವೈದ್ಯಕೀಯ ಕಾಳಜಿಯ ಬೆಂಬಲ ಮತ್ತು ನಿರ್ವಹಣೆಯೊಂದಿಗೆ ಚೇತರಿಸಿಕೊಳ್ಳಲಿದ್ದಾರೆ; ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಾಕಾಲದ ಮತ್ತು ನಿಕಟ ನಂಟಿನೊಂದಿಗೆ ಮಾತ್ರ ಎಂಪಾಕ್ಸ್ ಸೋಂಕು ಹರಡಲಿದೆ. ಅದು ಮುಖ್ಯವಾಗಿ ಲೈಂಗಿಕ ಸಂಪರ್ಕದಿಂದ, ರೋಗಿಯ ದೇಹ/ ಗಾಯದ ಸ್ರಾವದೊಂದಿಗೆ ನೇರ ಸಂಪರ್ಕ ಅಥವಾ ಕಲುಷಿತ ಬಟ್ಟೆ/ಸೋಂಕಿತ ವ್ಯಕ್ತಿಯ ಬಟ್ಟೆಯ ಮೂಲಕ ಹರಡಬಹುದಾಗಿದೆ. 

ಕಳೆದೊಂದು ವಾರದಲ್ಲಿ ಈ ಕೆಳಗಿನ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿಗಳು ತಿಳಿಸಿದರು:

  • ಭಾರತದಲ್ಲಿ ಸೋಂಕಿನಿಂದಾಗಬಹುದಾದ ಸಂಭಾವ್ಯ ಅಪಾಯಗಳ ಕುರಿತಂತೆ 2024ರ ಆಗಸ್ಟ್ 12 ರಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ ಸಿ ಡಿ ಸಿ)ಯ ತಜ್ಞರು ಸಭೆ ನಡೆಸಿದರು. 
  • ಎಂ ಪಾಕ್ಸ್ ಬಗ್ಗೆ ಈ ಹಿಂದೆ ಎನ್ ಸಿ ಡಿ ಸಿ ನೀಡಿದ ಹರಡಬಲ್ಲ ರೋಗ (ಕಮ್ಯುನಿಕೆಬಲ್ ಡಿಸೀಸ್ - ಸಿಡಿ) ಎಚ್ಚರಿಕೆಯನ್ನು ಇತ್ತೀಚಿನ ಬೆಳವಣಿಗೆಗಳನ್ನಾಧರಿಸಿ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತಿದೆ.
  • ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಪ್ರವೇಶದ ಸ್ಥಳಗಳಲ್ಲಿ) ಆರೋಗ್ಯ ಕಾರ್ಯಕರ್ತರ ಸಮರ್ಪಕ ಸೇವೆ ಖಾತರಿಪಡಿಸಲಾಗಿದೆ.

ಆರೋಗ್ಯ ಸೇವೆಗಳ ಮಹಾ ಕಾರ್ಯದರ್ಶಿ (ಡಿಜಿಎಚ್ಎಸ್) ಇಂದು ಬೆಳಗ್ಗೆ 200 ಕ್ಕೂ ಹೆಚ್ಚು ಭಾಗಿದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು ಎಂದೂ ಸಹ ಸಭೆಗೆ ಮಾಹಿತಿ ನೀಡಲಾಯಿತು. ರಾಜ್ಯಗಳಲ್ಲಿನ ಸಮಗ್ರ ರೋಗ ನಿಗಾ ಕಾರ್ಯಕ್ರಮ (ಐ ಡಿ ಎಸ್ ಪಿ) ಘಟಕಗಳು ಸೇರಿದಂತೆ ರಾಜ್ಯ ಮಟ್ಟದ ಆರೋಗ್ಯ ಪ್ರಾಧಿಕಾರಗಳು ಮತ್ತು ಪ್ರವೇಶಾವಕಾಶ ಸ್ಥಳಗಳಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ರೋಗದ ತ್ವರಿತ ಪತ್ತೆಗೆ ಸುಧಾರಿತ ಮತ್ತು ಪರಿಣಾಮಕಾರಿ ನಿಗಾ ವ್ಯವಸ್ಥೆಗೆ ಪ್ರಧಾನಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಾದ ಡಾ.ಪಿ.ಕೆ.ಮಿಶ್ರಾ ಸೂಚಿಸಿದ್ದಾರೆ. ಸೋಂಕಿನ ಶೀಘ್ರ ಪತ್ತೆಗೆ ಪ್ರಯೋಗಾಲಯಗಳ ಜಾಲವನ್ನು ಸನ್ನದ್ದುಗೊಳಿಸುವಂತೆ ಅವರು ಸೂಚಿಸಿದ್ದಾರೆ. ಪ್ರಸ್ತುತ 32 ಪ್ರಯೋಗಾಲಯಗಳು ಈ ಪರೀಕ್ಷೆ ನಡೆಸುವ ಸೌಲಭ್ಯ ಹೊಂದಿವೆ. 

ರೋಗ ನಿಯಂತ್ರಣ ಮತ್ತು ಚಿಕಿತ್ಸಾ ವಿಧಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಡಾ.ಪಿ.ಕೆ.ಮಿಶ್ರಾ ಸೂಚಿಸಿದ್ದಾರೆ. ರೋಗ ಲಕ್ಷಣಗಳು ಮತ್ತು ಸಂಕೇತಗಳ ಬಗ್ಗೆ ಮತ್ತು ನಿಗಾ ವ್ಯವಸ್ಥೆಯ ಮೂಲಕ ಸಮಯಕ್ಕೆ ಸರಿಯಾದ ಮಾಹಿತಿ ಒದಗಿಸುವಿಕೆಯ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಸೇವಾದಾತರಿಗೆ ಜಾಗೃತಿ ಅಭಿಯಾನದ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದ್ದಾರೆ. 

ನೀತಿ ಆಯೋಗದ ಸದಸ್ಯರಾದ ಡಾ.ವಿ.ಕೆ.ಪೌಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಡಾ.ರಾಜೀವ್ ಭಲ್ಹ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ ಕೃಷ್ಣ ಎಸ್ ವತ್ಸ, ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ನಿಯೋಜಿತ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ ಮೋಹನ್ ಸೇರಿದಂತೆ ಇತರ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

*****


(Release ID: 2046515) Visitor Counter : 52