ಹಣಕಾಸು ಸಚಿವಾಲಯ
azadi ka amrit mahotsav

ನೂತನ ಕೌಶಲ್ಯಗಳ ಅಭಿವೃದ್ಧಿಗೆ ಕ್ರಮ ಮತ್ತು ಅಸ್ತಿತ್ವದಲ್ಲಿರುವ ಕೌಶಲ್ಯಗಳ ಪರಿಷ್ಕರಣೆಗೆ  ಆದ್ಯತೆ ನೀಡುವುದನ್ನು ಸರಕಾರ ಮುಂದುವರಿಸಬೇಕು:  2023-24 ರ ಆರ್ಥಿಕ ಸಮೀಕ್ಷೆ 


ಕೌಶಲ್ಯ ಸೃಷ್ಟಿಯಲ್ಲಿ ಮುಂದಾಳತ್ವ ವಹಿಸಲು ಉದ್ಯಮಕ್ಕೆ ಸಮೀಕ್ಷೆ ಕರೆ 

ಹೆಚ್ಚಿನ ಬೆಳವಣಿಗೆ ಇರುವ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ಉದ್ಯೋಗ ಆಧಾರಿತ ಪ್ರೋತ್ಸಾಹ ಯೋಜನೆಗಳನ್ನು ಕೌಶಲ್ಯ ಅಭಿವೃದ್ಧಿಯೊಂದಿಗೆ ಸಂಯೋಜಿಸುವುದು ಕೌಶಲ್ಯಗಳ ಉನ್ನತೀಕರಣಕ್ಕೆ ಸಹಾಯ ಮಾಡಲಿದೆ

ಹೆಚ್ಚುತ್ತಿರುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆಗನುಗುಣವಾಗಿ ಭಾರತವು ಕೃಷಿಯೇತರ ವಲಯದಲ್ಲಿ ವಾರ್ಷಿಕವಾಗಿ ಸುಮಾರು 78.51 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ

Posted On: 22 JUL 2024 2:37PM by PIB Bengaluru

ಭಾರತದ ಶಿಕ್ಷಣ ಮತ್ತು ಕೌಶಲ್ಯ ನೀತಿಗಳು, ಕಲಿಕೆ ಮತ್ತು ಕೌಶಲ್ಯದ ಫಲಿತಾಂಶಗಳ ಮೇಲೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಅವು ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24ರಲ್ಲಿ ಹೇಳಿರುವಂತೆ ಮಧ್ಯಮಾವಧಿಯಲ್ಲಿ ವಿಕಸಿತ ಭಾರತ್@2047 ರ ಗುರಿಯನ್ನು ಸಾಧಿಸುವಲ್ಲಿ ನಿಗದಿಪಡಿಸಿರುವ ಆರು ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. 2020ರ ಹೊಸ ಶಿಕ್ಷಣ ನೀತಿ (ಎನ್ ಇ ಪಿ)  ಈ ಉದ್ದೇಶವನ್ನು ಸಾಧಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸಮೀಕ್ಷೆಯು ಹೊಸ ಕೌಶಲ್ಯ ಉಪಕ್ರಮಗಳು ಮತ್ತು ಅಸ್ತಿತ್ವದಲ್ಲಿರುವ ಕೌಶಲ್ಯ  ಅಭಿವೃದ್ಧಿ ಉಪಕ್ರಮಗಳನ್ನು ಪುನರುಜ್ಜೀವನಗೊಳಿಸುವುದು ಸರ್ಕಾರದ ಆದ್ಯತೆಯಾಗಿ ಮುಂದುವರಿಯಬೇಕು ಎಂದು ಹೇಳಿದೆ. 

ದೇಶದ ಶಿಕ್ಷಣ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದಿಂದ ದೊರಕುವ ಜ್ಞಾನದ ಅಡಿಪಾಯದ  ಮೇಲೆ ಯುವಕರು ಕೌಶಲ್ಯಗಳನ್ನು ಪಡೆದುಕೊಳ್ಳುತ್ತಾರೆ.  ಆದ್ದರಿಂದ, ಶಾಲಾ ಶಿಕ್ಷಣವು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಮೂಲಭೂತ ಅವಶ್ಯಕತೆಗಳ ಮೇಲೆ ಮತ್ತು ಗ್ರೇಡ್- ಅಪ್ರೊಪ್ರಿಯೇಟ್ ಕಲಿಕೆಯ ಫಲಿತಾಂಶಗಳ ಸಾಕ್ಷಾತ್ಕಾರದ ಮೇಲೆ ತನ್ನ ಗಮನ ಕೇಂದ್ರೀಕರಿಸಬೇಕು ಎಂದು ಸಮೀಕ್ಷೆ ಹೇಳಿದೆ. ಮುಂದುವರೆದು, ಕೌಶಲ್ಯ ಸೃಷ್ಟಿಯಲ್ಲಿ ಮುಂದಾಳತ್ವ ವಹಿಸುವಂತೆ ಉದ್ಯಮಗಳಿಗೆ ಕರೆ ನೀಡುತ್ತದೆ. ಕೇವಲ ಸರಕಾರಗಳಿಗೆ ಈ ಜವಾಬ್ದಾರಿಯನ್ನು ವರ್ಗಾಯಿಸುವ ಬದಲು, ಉದ್ಯಮಗಳು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಈ ನಿಟ್ಟಿನಲ್ಲಿ ಕೈಗೊಳ್ಳುವ ಉಪಕ್ರಮಗಳಿಂದ ಉದ್ಯಮಗಳಿಗೇ ಹೆಚ್ಚಿನ ಲಾಭವಿದೆ ಎಂದು ಸಮೀಕ್ಷೆ ಹೇಳುತ್ತದೆ. 

ಭಾರತದ ಯುವಕರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳಿಗೆ ಪೂರಕವಾಗಿ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು  2023-24 ರ ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಎಲ್ಲಾ ಸಾಮಾಜಿಕ-ಆರ್ಥಿಕ ಸ್ತರಗಳಲ್ಲಿ  ಕೌಶಲ್ಯ ಹೊಂದಿದ ಜನರ ಅನುಪಾತದಲ್ಲಿ ಆಗಿರುವ ಗಮನಾರ್ಹ ಸುಧಾರಣೆಯ ಬಗ್ಗೆ ಉಲ್ಲೇಖಿಸಿರುವ ಸಮೀಕ್ಷೆಯು, 15-29 ವರ್ಷ ವಯಸ್ಸಿನ ಯುವಕರಲ್ಲಿ, 4.4% ರಷ್ಟು ಯುವಕರು ಔಪಚಾರಿಕವಾಗಿ ವೃತ್ತಿಪರ/ತಾಂತ್ರಿಕ ತರಬೇತಿಯನ್ನು ಪಡೆದಿಕೊಂಡಿದ್ದಾರೆ. ಇನ್ನೂ 16.6% ರಷ್ಟು ಯುವಕರು ಅನೌಪಚಾರಿಕ ಮೂಲಗಳ ಮೂಲಕ ತರಬೇತಿ ಪಡೆದಿದ್ದಾರೆ ಎಂದು ಹೇಳಿದೆ. 

 

ಬೇರೆಯದೇ ರೀತಿಯ ಉದ್ಯೋಗ ಮತ್ತು ಕೌಶಲ್ಯಗಳನ್ನು ಬೇಡುವ ಯಾಂತ್ರೀಕರಣ, ಹವಾಮಾನ ಬದಲಾವಣೆಯ ವಿರುದ್ಧ ಕ್ರಮ, ಉತ್ಪನ್ನಗಳು ಮತ್ತು ಸೇವೆಗಳ ಡಿಜಿಟಲೀಕರಣದಂತಹ ಜಾಗತಿಕ ಮೆಗಾಟ್ರೆಂಡ್‌ಗಳ ನಡುವೆ ಕೌಶಲ್ಯ ಅಭಿವೃದ್ಧಿಯು ಶಿಕ್ಷಣ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕೇಂದ್ರಬಿಂದುವಾಗಿ  ಹೊರಹೊಮ್ಮಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. 28 ರ ಸರಾಸರಿ ವಯಸ್ಸಿನೊಂದಿಗೆ ಅತ್ಯಂತ ಕಿರಿಯ ವಯಸ್ಸಿನ ಜನಸಂಖ್ಯೆಯನ್ನು ಹೊಂದಿದ ಜಗತ್ತಿನ ಕೆಲವೇ  ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು,  ಕೌಶಲ್ಯಗಳನ್ನು ಹೊಂದಿರುವ ಮತ್ತು ಉದ್ಯಮದ ಅಗತ್ಯತೆಗಳಿಗೆ ಸಿದ್ಧರಾಗಿರುವ ಉದ್ಯೋಗಿಗಳನ್ನು ಪೋಷಿಸುವ ಮೂಲಕ  ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಅದು ಹೇಳುತ್ತದೆ.

ಭಾರತವು ತನ್ನ ಯುವ ಉದ್ಯೋಗಿಗಳ ಸಾಮರ್ಥ್ಯವನ್ನು ಮಾತ್ರ ಗುರುತಿಸದೇ, ಇಂತಹ ಬೃಹತ್ ಜನಸಂಖ್ಯೆಯನ್ನು ಕೌಶಲ್ಯಗೊಳಿಸವಲ್ಲಿ ಇರುವ ಸಮಸ್ಯೆಗಳನ್ನು ಸಹ ಗುರುತಿಸಿದೆ ಎಂದು ಸಮೀಕ್ಷೆ ಉಲ್ಲೇಖಿಸುತ್ತದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ನೀತಿ (NPSDE) ಈ ಸಂಬಂಧ ಇರುವ ಕೊರತೆಗಳನ್ನು ತುಂಬಲು, ಉದ್ಯಮಗಳ ಜೊತೆಗಿನ ಒಡನಾಟ ಹೆಚ್ಚಿಸಲು, ಗುಣಮಟ್ಟದ ಭರವಸೆಯ ಚೌಕಟ್ಟನ್ನು ನಿರ್ಮಿಸಲು, ತಂತ್ರಜ್ಞಾನವನ್ನು ಬಳಸಿಕೊಂಡು ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ವಿಸ್ತರಿಸುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಅದು ಹೇಳುತ್ತದೆ.  ಇದು, ರಾಷ್ಟ್ರೀಯ ಶಿಕ್ಷಣ ನೀತಿಯ (NEP)ಯ ಸಂಯೋಜನೆಯೊಂದಿಗೆ, ಭಾರತದಲ್ಲಿ ಶಿಕ್ಷಣ-ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡವ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಸಮೀಕ್ಷೆ ಹೇಳುತ್ತದೆ. 

ವೇಗವಾಗಿ ಬೆಳೆಯುತ್ತಿರುವ ಭಾರತದ ಜನಸಂಖ್ಯೆಯ ಶೇಕಡ ಅರವತ್ತೈದರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಒಂದು ಅಂದಾಜಿನ ಪ್ರಕಾರ ಸುಮಾರು 51.25% ರಷ್ಟು ಯುವಕರು ಉದ್ಯೋಗಸ್ಥರಾಗಲು ಅರ್ಹತೆ ಹೊಂದಿದ್ದಾರೆ. ಕಳೆದ ದಶಕದಲ್ಲಿ ಈ ಶೇಕಡಾವಾರು ಪ್ರಮಾಣ ಶೇಕಡಾ 34 ರಿಂದ ಶೇಕಡಾ 51.3 ಕ್ಕೆ ಏರಿದೆ ಎಂಬುದು ಗಮನಾರ್ಹ ಎಂದು ಸಮೀಕ್ಷೆ ಹೇಳಿದೆ. 

ದೇಶದ ಬೆಳವಣಿಗೆ ಮತ್ತು ಎಲ್ಲರನ್ನು ಒಳಗೊಳ್ಳುವಿಕೆಗೆ ಉತ್ಪಾದಕ (ಪ್ರೊಡಕ್ಟಿವ್) ಉದ್ಯೋಗಗಳು ಅವಶ್ಯ ಎಂದು ಅಭಿಪ್ರಾಯಪಟ್ಟಿರುವ ಸಮೀಕ್ಷೆಯು, ಭಾರತದ ಉದ್ಯೋಗಿಗಳ ಸಂಖ್ಯೆ ಸುಮಾರು 56.5 ಕೋಟಿ ಎಂದು ಅಂದಾಜಿಸಲಾಗಿದ್ದು ಈ ಸಂಖ್ಯೆ 2044 ರವರೆಗೆ ಬೆಳೆಯುತ್ತಲೇ ಇರುತ್ತದೆ ಎಂದಿದೆ. ಇದಕ್ಕಾಗಿ ಭಾರತೀಯ ಆರ್ಥಿಕತೆಯು ಕೃಷಿಯೇತರ ವಲಯದಲ್ಲಿ ವಾರ್ಷಿಕವಾಗಿ ಸುಮಾರು 78.51 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಇಷ್ಟು ದೊಡ್ಡ ಸಂಖ್ಯೆಯ  ಉದ್ಯೋಗಗಳನ್ನು ಸೃಷ್ಟಿಸಲು, ಕೃಷಿಯಲ್ಲಿ ಉತ್ಪಾದಕತೆಯನ್ನು ಸುಧಾರಿಸುವ ಜೊತೆಗೆ, ಕೃಷಿಯ ಹೊರತಾಗಿ ಇತರೆ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಉತ್ಪಾದಕ ಉದ್ಯೋಗಗಳ ತ್ವರಿತ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಅವಶ್ಯಕತೆಯಿದೆ ಎಂದು ಸಮೀಕ್ಷೆ ಹೇಳಿದೆ. 

ವಿವಿಧ ಕೌಶಲ್ಯದ ಉಪಕ್ರಮಗಳನ್ನು ಸಮ್ಮಿಳಿತಗೊಳಿಸುವ ಮೂಲಕ ಗರಿಷ್ಟ ಫಲಿತಾಂಶ ಪಡೆಯಲು ಮತ್ತು ಇತರೆ ಉದ್ಯೋಗ-ಕೇಂದ್ರಿತ ಕಾರ್ಯಕ್ರಮಗಳೊಂದಿಗಿನ ಸಿನರ್ಜಿಗಳನ್ನು ಬಳಸಿಕೊಳ್ಳಲು ಸಮೀಕ್ಷೆಯು ಕರೆ ನೀಡುತ್ತದೆ. ಆಟಿಕೆ, ಉಡುಪು, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್, ಜವಳಿ, ಚರ್ಮೋದ್ಯಮ ಮುಂತಾದ ಹೆಚ್ಚಿನ ಬೆಳವಣಿಗೆ ಇರುವ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ಉದ್ಯೋಗ- ಆಧಾರಿತ  ಪ್ರೋತ್ಸಾಹ ಯೋಜನೆಗಳೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ಲಿಂಕ್ ಮಾಡುವುದರಿಂದ ಇದು ಕೌಶಲ್ಯಗಳ ನವೀಕರಣಕ್ಕೆ ಸಹಾಯ ಮಾಡುತ್ತದೆ.  ಅಪ್ರೆಂಟಿಸ್‌ಶಿಪ್ ಅನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ, ಸರಕಾರದ ನಿಯಂತ್ರಣಾ ಚೌಕಟ್ಟಲ್ಲೂ ನಮ್ಯತೆ ತರಲು  ಸಾಕಷ್ಟು ಅವಕಾಶವಿದೆ ಎಂದು ಸಮೀಕ್ಷೆಯ ಹೇಳಿದೆ. 


*****


(Release ID: 2036745) Visitor Counter : 62