ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

18 ನೇ "ದತ್ತಾಂಶ ದಿನ" ವನ್ನು ಇಂದು "ನಿರ್ಧಾರ ತೆಗೆದುಕೊಳ್ಳುವಲ್ಲಿ ದತ್ತಾಂಶ (ಡೇಟಾ) ದ ಬಳಕೆ" ಎಂಬ ವಿಷಯದೊಂದಿಗೆ ಆಚರಿಸಲಾಯಿತು


ಭಾರತವು ಅಭಿವೃದ್ಧಿ ಪಥದಲ್ಲಿ ಸಾಗಲು ತನ್ನ ದತ್ತಾಂಶ ಆಧಾರಿತ ನೀತಿ ನಿರೂಪಣೆಯನ್ನು ಮುಂದುವರಿಸಬೇಕು ಎಂದು 16 ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ್ ಪನಗರಿಯಾ ಹೇಳಿದರು

ಈ ಸಂದರ್ಭದಲ್ಲಿ ಇ-ಸಾಂಖ್ಯಕಿ ಪೋರ್ಟಲ್ ಗೆ ಚಾಲನೆ ನೀಡಲಾಯಿತು

Posted On: 29 JUN 2024 2:48PM by PIB Bengaluru

ಸಂಖ್ಯಾಶಾಸ್ತ್ರ ಮತ್ತು ಆರ್ಥಿಕ ಯೋಜನೆ ಕ್ಷೇತ್ರಗಳಲ್ಲಿ ಪ್ರೊಫೆಸರ್ (ದಿವಂಗತ) ಪ್ರಶಾಂತ್ ಚಂದ್ರ ಮಹಾಲನೋಬಿಸ್ ಅವರು ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ, ಭಾರತ ಸರ್ಕಾರವು ಅವರ ಜನ್ಮದಿನದಂದು ಪ್ರತಿವರ್ಷ ಜೂನ್ 29 ನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕಾದ ವಿಶೇಷ ದಿನಗಳ ವಿಭಾಗದಲ್ಲಿ "ಅಂಕಿಅಂಶಗಳ ದಿನ" ಎಂದು ನಿಗದಿಪಡಿಸಿದೆ. ಅಂಕಿಅಂಶಗಳ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ದೇಶದ ಅಭಿವೃದ್ಧಿಗಾಗಿ ಸಾಮಾಜಿಕ-ಆರ್ಥಿಕ ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಅಂಕಿಅಂಶಗಳ ಪಾತ್ರ ಮತ್ತು ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದಾಗಿದೆ.

2007 ರಿಂದ, ಸಮಕಾಲೀನ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯ ಶೀರ್ಷಿಕೆಯೊಂದಿಗೆ  ಪ್ರತಿವರ್ಷ ಅಂಕಿಅಂಶಗಳ ದಿನವನ್ನು ಆಚರಿಸಲಾಗುತ್ತದೆ. 2024 ರ ಅಂಕಿಅಂಶಗಳ ದಿನದ ಶೀರ್ಷಿಕೆ "ನಿರ್ಧಾರ ತೆಗೆದುಕೊಳ್ಳುವಲ್ಲಿ  ದತ್ತಾಂಶ(ಡೇಟಾ)ದ ಬಳಕೆ". ಯಾವುದೇ ಕ್ಷೇತ್ರದಲ್ಲಿ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಡೇಟಾ ಚಾಲಿತ ನಿರ್ಧಾರ ತೆಗೆದುಕೊಳ್ಳುವ ಪರಿಕಲ್ಪನೆಯು ಬಹಳ ಪ್ರಾಮುಖ್ಯತೆಯನ್ನು ಗಳಿಸಿದೆ. ಮತ್ತು ಅಧಿಕೃತ ಅಂಕಿಅಂಶಗಳಿಂದ ಲಭಿಸುವ ಸಂಖ್ಯಾಶಾಸ್ತ್ರೀಯ ಮಾಹಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಹಾಗು ಪುರಾವೆ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಪೂರ್ವ ಅವಶ್ಯಕತೆಗಳಲ್ಲಿ ಒಂದಾಗಿದೆ.

2024 ರ ಅಂಕಿಅಂಶಗಳ ದಿನದ ಮುಖ್ಯ ಕಾರ್ಯಕ್ರಮವನ್ನು ಹೊಸದಿಲ್ಲಿಯ ದೆಹಲಿ ಕಂಟೋನ್ಮೆಂಟ್ ನಲ್ಲಿರುವ  ಮಾಣೆಕ್ ಷಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ, 16 ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ್ ಪನಗರಿಯಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಭಾರತೀಯ ಸಂಖ್ಯಾಶಾಸ್ತ್ರ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್ ವಹಿಸಿದ ಪಾತ್ರವನ್ನು ಅವರು ವಿವರಿಸಿದರು. ಭಾರತವು ಅಭಿವೃದ್ಧಿ ಪಥದಲ್ಲಿ ಸಾಗಲು ತನ್ನ ದತ್ತಾಂಶ ಚಾಲಿತ ನೀತಿ ನಿರೂಪಣೆಯನ್ನು ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. 

ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅಧ್ಯಕ್ಷ ಪ್ರೊ.ರಾಜೀವ್ ಲಕ್ಷ್ಮಣ್ ಕರಂಡಿಕರ್ ಮತ್ತು ಎಂಒಎಸ್ಪಿಐ ಕಾರ್ಯದರ್ಶಿ ಡಾ.ಸೌರಭ್ ಗರ್ಗ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು. ಎನ್ಎಸ್ಸಿ ಅಧ್ಯಕ್ಷರು, ಡೇಟಾವನ್ನು ಹೆಚ್ಚು ಹೆಚ್ಚು ಲಭ್ಯವಾಗಿಸಲು,  ಮತ್ತು ಬಳಸಲು ಸಾಧ್ಯವಾಗುವಂತೆ ಮಾಡುವ ಅಗತ್ಯವನ್ನು ಒತ್ತಿಹೇಳಿದರು ಹಾಗು ಅವಶ್ಯಕ ಡೇಟಾವನ್ನು ಉತ್ಪಾದಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಚಿವಾಲಯದ ಪ್ರಯತ್ನಗಳು ಮುಂದುವರಿಯಬೇಕಾಗಿದೆ ಎಂದೂ ಸಲಹೆ ನೀಡಿದರು. ಮಧ್ಯಸ್ಥಗಾರರ/ ಭಾಗೀದಾರರ ನಡುವೆ ಸಮನ್ವಯದ ಮೂಲಕ ವಿವಿಧ ಏಜೆನ್ಸಿಗಳು ರೂಪಿಸಿದ ಡೇಟಾಬೇಸ್ ಗಳ ಪರಸ್ಪರ ಕಾರ್ಯಸಾಧ್ಯತೆ ಮತ್ತು ಸಂಪರ್ಕದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಎಂಒಎಸ್ಪಿಐ ಕಾರ್ಯದರ್ಶಿ, ಕಂಪ್ಯೂಟರ್-ನೆರವಿನ ವೈಯಕ್ತಿಕ ಸಂದರ್ಶನ (ಸಿಎಪಿಐ), ಹೊಸ ಸಮೀಕ್ಷೆಗಳು, ಬಳಕೆದಾರರ ತೊಡಗಿಸಿಕೊಳ್ಳುವಿಕೆ ಮತ್ತು ಹೊಸದಾಗಿ ಪ್ರಾರಂಭಿಸಲಾದ ಇ ಸಾಂಖ್ಯಕಿ ಪೋರ್ಟಲ್ ನಂತಹ ಸಮೀಕ್ಷೆಯ ದತ್ತಾಂಶದಲ್ಲಿ ಸಮಯದ ವಿಳಂಬವನ್ನು ಕಡಿಮೆ ಮಾಡಲು ಸಚಿವಾಲಯದ ಇತ್ತೀಚಿನ ಉಪಕ್ರಮಗಳನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಸಂಖ್ಯಾಶಾಸ್ತ್ರ ದಿನಾಚರಣೆಯ ಸ್ಪೂರ್ತಿ ಸಂಖ್ಯಾಶಾಸ್ತ್ರೀಯ ಸಿಬ್ಬಂದಿ ಮತ್ತು ಯೋಜಕರಿಗೆ ಪ್ರೇರಣೆ ನೀಡುವುದನ್ನು ಮುಂದುವರಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. 

ಕೇಂದ್ರ ಸಚಿವಾಲಯಗಳು/ ಇಲಾಖೆಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಹಿರಿಯ ಅಧಿಕಾರಿಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು, ವಿಶ್ವ ಬ್ಯಾಂಕ್ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗು ಇತರ ಭಾಗೀದಾರರು/ಮಧ್ಯಸ್ಥಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಚಿವಾಲಯದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಮೂಲಕ ವೆಬ್-ಕಾಸ್ಟ್ / ಲೈವ್ ಸ್ಟ್ರೀಮ್ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ 'ಆನ್ ದಿ ಸ್ಪಾಟ್ (ಸ್ಥಳದಲ್ಲಿಯೇ) ಪ್ರಬಂಧ ಬರೆಯುವ ಸ್ಪರ್ಧೆ 2024'ರ ವಿಜೇತರನ್ನು ಸನ್ಮಾನಿಸಲಾಯಿತು.

ತಾಂತ್ರಿಕ ಅಧಿವೇಶನದಲ್ಲಿ, ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಅವರು ಆಡಳಿತದಲ್ಲಿ ದತ್ತಾಂಶದ ಪ್ರಾಮುಖ್ಯತೆಯ ಬಗ್ಗೆ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಕ್ರಿಯಾತ್ಮಕವಾಗಿ ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ದತ್ತಾಂಶದ (ಡೇಟಾದ) ಮಹತ್ವ ಮತ್ತು ಎಂಒಎಸ್ಪಿಐನ ಹೆಚ್ಚುತ್ತಿರುವ ಪಾತ್ರ ಹಾಗು ವ್ಯಾಪ್ತಿಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಬಳಿಕ ವಿಶ್ವ ಬ್ಯಾಂಕ್ ಸಮೂಹದ ಬಡತನ ಮತ್ತು ಈಕ್ವಿಟಿ ಜಾಗತಿಕ ಪದ್ಧತಿಯ  ಜಾಗತಿಕ ನಿರ್ದೇಶಕ ಶ್ರೀ ಲೂಯಿಸ್ ಫೆಲಿಪೆ ಲೋಪೆಜ್-ಕಾಲ್ವಾ ಅವರು ನಿರ್ಧಾರ ತೆಗೆದುಕೊಳ್ಳಲು ಡೇಟಾವನ್ನು ಬಳಸುವ ಜಾಗತಿಕ ಅನುಭವದ ಬಗ್ಗೆ ಪ್ರಸ್ತುತಿಯನ್ನು ನೀಡಿದರು.  ಪ್ರಚಲಿತ ಜಾಗತಿಕ ಅಭ್ಯಾಸಗಳನ್ನು/ಪದ್ಧತಿಗಳನ್ನು ಹಂಚಿಕೊಳ್ಳುವಾಗ ಪರಿಣಾಮಕಾರಿ ನೀತಿ ನಿರೂಪಣೆಗೆ ದತ್ತಾಂಶವು ಅತ್ಯಗತ್ಯ ಮೂಲಸೌಕರ್ಯವಾಗಿದೆ ಎಂದೂ  ಅವರು ಒತ್ತಿ ಹೇಳಿದರು.

ನವೀಕರಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳು - ರಾಷ್ಟ್ರೀಯ ಸೂಚಕ ಚೌಕಟ್ಟು (ಎಸ್ಡಿಜಿಗಳು- ಎನ್ಐಎಫ್) ಆಧಾರದ ಮೇಲೆ, ಪ್ರತಿ ವರ್ಷ ಎಂಒಎಸ್ಪಿಐಯು ಅಂಕಿಅಂಶಗಳ ದಿನದಂದು (ಅಂದರೆ ಜೂನ್ 29 ರಂದು) ಕಾಲಾಧಾರಿತ ಸರಣಿ ಡೇಟಾದೊಂದಿಗೆ ಎಸ್ಡಿಜಿಗಳ ಪ್ರಗತಿ ವರದಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ಈ ಸಂದರ್ಭದಲ್ಲಿ ಈ ಕೆಳಗಿನ ಮೂರು ವರದಿಗಳನ್ನು ಬಿಡುಗಡೆ ಮಾಡಲಾಯಿತು:
          i. ಸುಸ್ಥಿರ ಅಭಿವೃದ್ಧಿ ಗುರಿಗಳು - ರಾಷ್ಟ್ರೀಯ ಸೂಚಕ ಚೌಕಟ್ಟು ಪ್ರಗತಿ ವರದಿ, 2024'
          ii. 'ಸುಸ್ಥಿರ ಅಭಿವೃದ್ಧಿ ಗುರಿಗಳ ದತ್ತಾಂಶ ಸ್ನ್ಯಾಪ್ ಶಾಟ್ - ರಾಷ್ಟ್ರೀಯ ಸೂಚಕ ಚೌಕಟ್ಟು, 2024'
          iii. 'ಸುಸ್ಥಿರ ಅಭಿವೃದ್ಧಿ ಗುರಿಗಳು- ರಾಷ್ಟ್ರೀಯ ಸೂಚಕ ಚೌಕಟ್ಟು, 2024'

ಈ ವರದಿಗಳು ಎಂಒಎಸ್ಪಿಐ ಜಾಲತಾಣದಲ್ಲಿ (http://www.mospi.gov.in) ಲಭ್ಯವಿವೆ. ಎಸ್ಡಿಜಿ ಸೂಚಕಗಳಲ್ಲಿನ ಸಮಯ ಸರಣಿ ಡೇಟಾವನ್ನು ವರದಿಯಿಂದ ಎಂಎಸ್ ಎಕ್ಸೆಲ್ ಸ್ವರೂಪದಲ್ಲಿ ಡೌನ್ಲೋಡ್ ಮಾಡಬಹುದು.

ದೇಶದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಸಾರವನ್ನು/ಲಭ್ಯತೆಯನ್ನು ಸುಲಭಗೊಳಿಸಲು ಸಮಗ್ರ ದತ್ತಾಂಶ ನಿರ್ವಹಣೆ ಮತ್ತು ಹಂಚಿಕೆ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಸಚಿವಾಲಯವು ಇ-ಸಾಂಖ್ಯಕಿ ಪೋರ್ಟಲ್ (https://esankhyiki.mospi.gov.in) ಪ್ರಾರಂಭಿಸಿತು. ಎಂಒಎಸ್ಪಿಐ (https://mospi.gov.in/) ಜಾಲತಾಣದ ಮೂಲಕವೂ ಪೋರ್ಟಲ್ ಪ್ರವೇಶಿಸಬಹುದು. ಇದು ಯೋಜಕರು, ನೀತಿ ನಿರೂಪಕರು, ಸಂಶೋಧಕರು ಮತ್ತು ಸಾರ್ವಜನಿಕರಿಗೆ ಸಮಯೋಚಿತ ಮಾಹಿತಿಯ ಒಳಹರಿವುಗಳನ್ನು ಒದಗಿಸುತ್ತದೆ. ಇ-ಸಾಂಖ್ಯಕಿ ಪೋರ್ಟಲ್ ಎರಡು ವಿಭಾಗಗಳನ್ನು ಹೊಂದಿದೆ, ಇದು ಡೇಟಾದ ಸುಲಭ ಲಭ್ಯತೆ ಮತ್ತು ಮರುಬಳಕೆಯನ್ನು ಸುಗಮಗೊಳಿಸುತ್ತದೆ, ಅವುಗಳೆಂದರೆ:

i. ಡೇಟಾ ಕ್ಯಾಟಲಾಗ್: ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳು, ಗ್ರಾಹಕ ಬೆಲೆ ಸೂಚ್ಯಂಕ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ, ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ ಮತ್ತು ಗೃಹ ಬಳಕೆ ವೆಚ್ಚ ಸಮೀಕ್ಷೆಯಂತಹ ಸಚಿವಾಲಯದ ಪ್ರಮುಖ ದತ್ತಾಂಶ ಸ್ವತ್ತುಗಳನ್ನು ಕ್ಯಾಟಲಾಗ್ ಒಂದೆಡೆ ಪಟ್ಟಿ ಮಾಡುತ್ತದೆ ಮತ್ತು ಲಭಿಸುವಂತೆ ಮಾಡುತ್ತದೆ.

ii.  ಮ್ಯಾಕ್ರೊ ಸೂಚಕಗಳು: ಇದು ಫಿಲ್ಟರಿಂಗ್ ಮತ್ತು ದೃಶ್ಯೀಕರಣದ ವೈಶಿಷ್ಟ್ಯಗಳೊಂದಿಗೆ ಪ್ರಮುಖ ಮ್ಯಾಕ್ರೊ ಸೂಚಕಗಳ ಸಮಯ ಸರಣಿ ಡೇಟಾವನ್ನು ಒದಗಿಸುತ್ತದೆ. ಬಳಕೆದಾರರಿಗೆ ಕಸ್ಟಮ್ ಡೇಟಾಸೆಟ್ಗಳು, ದೃಶ್ಯೀಕರಣಗಳನ್ನು ಡೌನ್ಲೋಡ್ ಮಾಡಲು ಮತ್ತು ಎಪಿಐಗಳ ಮೂಲಕ ಪ್ರವೇಶಿಸಲು ಅನುಮತಿಸುತ್ತದೆ, ಆ ಮೂಲಕ ಡೇಟಾದ ಮರುಬಳಕೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ, ಈ ವಿಭಾಗವು ಎಂಒಎಸ್ಪಿಐನ ನಾಲ್ಕು ಪ್ರಮುಖ ಉತ್ಪನ್ನಗಳನ್ನು ಒಳಗೊಂಡಿದೆ: ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳು, ಗ್ರಾಹಕ ಬೆಲೆ ಸೂಚ್ಯಂಕ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಮತ್ತು ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ. ಇವು  ಕಳೆದ ಹತ್ತು ವರ್ಷಗಳ ಡೇಟಾವನ್ನು ಒಳಗೊಂಡಿವೆ.

 

*****



(Release ID: 2029608) Visitor Counter : 5