ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಕಿಸಾನ್ ಸಮ್ಮಾನ್ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 18 JUN 2024 7:25PM by PIB Bengaluru

ನಮ: ಪಾರ್ವತಿ ಪತಯೆ!

ಹರ ಹರ ಮಹದೇವ!

ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ನನ್ನ ಸಂಪುಟ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್, ಭಾಗೀರಥ್ ಚೌಧರಿ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್, ವಿಧಾನ ಪರಿಷತ್ ಸದಸ್ಯ ಮತ್ತು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ. ಭೂಪೇಂದ್ರ ಚೌಧರಿ, ರಾಜ್ಯ ಸರ್ಕಾರದ ಸಚಿವರೆ, ಸಾರ್ವಜನಿಕ ಪ್ರತಿನಿಧಿಗಳೆ, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನನ್ನ ರೈತ ಬಂಧುಗಳೆ ಮತ್ತು ಕಾಶಿಯ ನನ್ನ ಕುಟುಂಬ ಸದಸ್ಯರೆ!

ಇಂದು ನಾನು ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಬನಾರಸ್‌ಗೆ ಭೇಟಿ ನೀಡಿದ್ದೇನೆ. ಕಾಶಿಯ ಜನತೆಗೆ ಸಾಷ್ಟಾಂಗ ನಮಸ್ಕಾರಗಳು!

ಬಾಬಾ ವಿಶ್ವನಾಥ, ಗಂಗೆಯ ಆಶೀರ್ವಾದ ಮತ್ತು ಕಾಶಿಯ ಜನರ ಅಪಾರ ಪ್ರೀತಿಯಿಂದ ನಾನು 3ನೇ ಬಾರಿಗೆ ದೇಶದ ಪ್ರಧಾನ ಸೇವಕನಾಗುವ ಭಾಗ್ಯ ಪಡೆದಿದ್ದೇನೆ. ಸತತ 3ನೇ ಬಾರಿಗೆ ನನ್ನನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ ಕಾಶಿ ಜನತೆಗೆ ನಾನು ಆಭಾರಿಯಾಗಿದ್ದೇನೆ. ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಂತೆ ಭಾಸವಾಗುತ್ತಿದೆ, ನಾನು ಈ ಸ್ಥಳದೊಂದಿಗೆ ಒಂದಾಗಿದ್ದೇನೆ. ಬಿಸಿಲ ಹೊರತಾಗಿಯೂ, ಆಶೀರ್ವಾದ ನೀಡಲು ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದೀರಿ. ನಿಮ್ಮೆಲ್ಲರ ಸಮರ್ಪಣೆಯನ್ನು ನೋಡಿ, ಆಗಸದಲ್ಲಿ ಮೋಡ ಕವಿದಿರುವುದರಿಂದ ಸೂರ್ಯದೇವನು ಸಹ ಸ್ವಲ್ಪ ಸಮಾಧಾನ ತಂದಿದ್ದಾನೆ. ನಾನು ನಿಮಗೆ ಕೃತಜ್ಞನಾಗಿದ್ದೇನೆ, ನಾನು ನಿಮಗೆ ಋಣಿಯಾಗಿದ್ದೇನೆ.

ಸ್ನೇಹಿತರೆ,

ಭಾರತದಲ್ಲಿ 18ನೇ ಲೋಕಸಭೆ ಚುನಾವಣೆಯು ಭಾರತೀಯ ಪ್ರಜಾಪ್ರಭುತ್ವದ ವಿಶಾಲತೆ, ಶಕ್ತಿ ಸಾಮರ್ಥ್ಯ ಮತ್ತು ಆಳವಾಗಿ ಬೇರೂರಿರುವ ಸ್ವರೂಪವನ್ನು ಜಗತ್ತಿಗೆ ತೋರಿಸುತ್ತಿದೆ. ಈ ಚುನಾವಣೆಯಲ್ಲಿ 64 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ, ಇದು ಜಾಗತಿಕವಾಗಿ ಅತಿದೊಡ್ಡ ಚುನಾವಣಾ ಕಸರತ್ತಾಗಿದೆ. ಜಿ-7 ಸಭೆಗಾಗಿ ನಾನು ಇತ್ತೀಚೆಗೆ ಇಟಲಿಗೆ ಭೇಟಿ ನೀಡಿದಾಗ, ನಾವು ಎಲ್ಲಾ ಜಿ-7 ದೇಶಗಳ ಒಟ್ಟು ಮತದಾರರ ಸಂಖ್ಯೆಯನ್ನು ಒಟ್ಟುಗೂಡಿಸಿದರೂ, ಭಾರತದ ಮತದಾರರ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಅದೇ ರೀತಿ, ನಾವು ಐರೋಪ್ಯ ಒಕ್ಕೂಟದ ಎಲ್ಲಾ ಮತದಾರರನ್ನು ಒಟ್ಟುಗೂಡಿಸಿದರೆ, ಭಾರತದ  ಮತದಾರರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಈ ಚುನಾವಣೆಯಲ್ಲಿ 31 ಕೋಟಿಗೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು, ವಿಶ್ವಾದ್ಯಂತ ಯಾವುದೇ ದೇಶಕ್ಕೆ ಹೋಲಿಸಿದರೆ ಇಲ್ಲಿನ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂಬುದನ್ನು  ಗುರುತಿಸಿದ್ದೇವೆ. ಇದು ಅಮೆರಿಕದ ಸಂಪೂರ್ಣ ಜನಸಂಖ್ಯೆಗೆ ಸಮಾನವಾಗಿದೆ. ಪ್ರಜಾಸತ್ತಾತ್ಮಕ ಶಕ್ತಿ ಮತ್ತು ಸೌಂದರ್ಯದ ಈ ಗಮನಾರ್ಹ ಪ್ರದರ್ಶನವು ಜಾಗತಿಕ ಗಮನ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ರಜಾಪ್ರಭುತ್ವ ಹಬ್ಬದ ಯಶಸ್ಸಿಗೆ ಸಹಕರಿಸಿದ ಬನಾರಸ್‌ನ ಪ್ರತಿಯೊಬ್ಬ ಮತದಾರರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸಂಸದರಾಗಿ ಮಾತ್ರವಲ್ಲದೆ, ಸತತ 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿರುವ ಬನಾರಸ್ ಜನತೆಗೆ ಇದು ಅಪಾರ ಹೆಮ್ಮೆಯ ಸಂಗತಿಯಾಗಿದೆ. ಆದ್ದರಿಂದ, ನಿಮ್ಮೆಲ್ಲರಿಗೂ ಡಬಲ್ ಅಭಿನಂದನೆಗಳು.

ಸ್ನೇಹಿತರೆ,

ಈ ಬಾರಿಯ ಚುನಾವಣೆಯಲ್ಲಿ ಈ ದೇಶದ ಜನತೆ ನೀಡಿದ ಜನಾದೇಶ ನಿಜಕ್ಕೂ ಅಭೂತಪೂರ್ವವಾಗಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ. ಚುನಾಯಿತ ಸರ್ಕಾರವು ಸತತ 3ನೇ ಅವಧಿಗೆ ಮರಳುವುದು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಿಜಕ್ಕೂ ಅಪರೂಪ. ಆದರೂ, ಭಾರತದ ಜನರು ಈ ಬಾರಿ ಸಾಧಿಸಿದ್ದು ಇದನ್ನೇ. 60 ವರ್ಷಗಳ ಹಿಂದೆ ಭಾರತದಲ್ಲಿ ಇಂತಹ ಹ್ಯಾಟ್ರಿಕ್‌ ಸಾಧನೆ ಕೊನೆಯ ನಿದರ್ಶನವಾಗಿತ್ತು. ನಿಮ್ಮ ಬೆಂಬಲವೇ ನಿಮ್ಮ ಸೇವಕ ಮೋದಿಗೆ ಈ ಸೌಭಾಗ್ಯ ನೀಡಿದೆ. ಯುವಕರ ಆಕಾಂಕ್ಷೆಗಳು ಮತ್ತು ಜನರ ಕನಸುಗಳು ಅಪಾರವಾಗಿರುವ ಭಾರತದಂತಹ ರಾಷ್ಟ್ರದಲ್ಲಿ 10 ವರ್ಷಗಳ ದುಡಿಮೆಯ ನಂತರ ಸರ್ಕಾರಕ್ಕೆ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಮಹತ್ವದ ಗೆಲುವು ಮತ್ತು ನಂಬಿಕೆಯ ಅಪಾರ ಪ್ರದರ್ಶನವಾಗಿದೆ. ಈ ನಂಬಿಕೆಯೇ ನನ್ನ ದೊಡ್ಡ ಆಸ್ತಿ. ನಿಮ್ಮ ಸೇವೆಯಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಲು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಇದು ನನಗೆ ಸ್ಫೂರ್ತಿ ನೀಡಿದೆ. ನಿಮ್ಮ ಕನಸುಗಳನ್ನು ಈಡೇರಿಸಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ನಾನು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.

ಸ್ನೇಹಿತರೆ,

ನಾನು ರೈತರು, ಯುವಕರು, ಮಹಿಳೆಯರು ಮತ್ತು ಬಡವರನ್ನು ಅಭಿವೃದ್ಧಿ ಹೊಂದಿದ ಭಾರತದ ಬಲವಾದ ಆಧಾರಸ್ತಂಭಗಳೆಂದು ಪರಿಗಣಿಸುತ್ತೇನೆ. ಅವರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ನನ್ನ 3ನೇ ಅವಧಿಯನ್ನು ಆರಂಭಿಸಿದ್ದೇನೆ. ನಮ್ಮ ಸರ್ಕಾರದ ಮೊದಲ ನಿರ್ಧಾರಗಳು ರೈತರು ಮತ್ತು ಬಡ ಕುಟುಂಬಗಳ ಮೇಲೆ ಕೇಂದ್ರೀಕೃತವಾಗಿವೆ. ಇದು ದೇಶಾದ್ಯಂತ ಬಡ ಕುಟುಂಬಗಳಿಗೆ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸುವುದಿರಲಿ ಅಥವಾ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಮುನ್ನಡೆಸುವುದಿರಲಿ, ಈ ಉಪಕ್ರಮಗಳು ಕೋಟ್ಯಂತರ ಜನರಿಗೆ ಪ್ರಯೋಜನ ನೀಡುತ್ತದೆ. ಇಂದಿನ ಕಾರ್ಯಕ್ರಮವು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಈ ಮಾರ್ಗ ಬಲಪಡಿಸಲು ಸಿದ್ಧವಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ದೇಶಾದ್ಯಂತ ಹಳ್ಳಿಗಳ ಜನರು ಕಾಶಿಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಕೋಟ್ಯಂತರ ರೈತರು ಭಾಗವಹಿಸುತ್ತಾರೆ. ಇಂದು ಈ ಕಾರ್ಯಕ್ರಮದ ಭಾಗವಾಗಿರುವ ಎಲ್ಲಾ ರೈತರು, ತಾಯಂದಿರು, ಸಹೋದರರು ಮತ್ತು ಸಹೋದರಿಯರಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ. ನನ್ನ ಕಾಶಿಯಿಂದ, ನಾನು ಭಾರತದ ಪ್ರತಿಯೊಂದು ಮೂಲೆ ಮತ್ತು ಹಳ್ಳಿಯಿಂದ ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದಿದ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ಮತ್ತು ದೇಶದ ಎಲ್ಲಾ ನಾಗರಿಕರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸ್ವಲ್ಪ ಸಮಯದ ಹಿಂದೆ, ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯಿಂದ 20 ಸಾವಿರ ಕೋಟಿ ರೂ. ಹಣವನ್ನು ದೇಶಾದ್ಯಂತ ಲಕ್ಷಾಂತರ ರೈತರ ಬ್ಯಾಂಕ್ ಖಾತೆಗಳನ್ನು ತಲುಪಿಸಲಿದೆ. ಇಂದು 3 ಕೋಟಿ ಸಹೋದರಿಯರನ್ನು ಲಖ್ಪತಿ ದೀದಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೃಷಿ ಸಖಿಯರಾಗಿ ಸಹೋದರಿಯರ ಹೊಸ ಪಾತ್ರವು ಅವರಿಗೆ ಘನತೆ ಮತ್ತು ಹೊಸ ಆದಾಯದ ಮೂಲಗಳನ್ನು ಖಚಿತಪಡಿಸುತ್ತದೆ. ನನ್ನ ಎಲ್ಲಾ ರೈತ ಕುಟುಂಬಗಳಿಗೆ, ತಾಯಂದಿರಿಗೆ ಮತ್ತು ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,

ಪಿಎಂ ಕಿಸಾನ್ ಸಮ್ಮಾನ್ ನಿಧಿ ಇಂದು ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ ಕೋಟ್ಯಂತರ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ 3.25 ಲಕ್ಷ ಕೋಟಿ ರೂ., ಹೆಚ್ಚುವರಿಯಾಗಿ ವಾರಣಾಸಿ ಜಿಲ್ಲೆಯ ರೈತರ ಖಾತೆಗಳಿಗೆ 700 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ರಯೋಜನಗಳನ್ನು ತಲುಪಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ನನಗೆ ಸಂತಸ ತಂದಿದೆ. ಕೆಲವೇ ತಿಂಗಳ ಹಿಂದೆ, ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ, 1 ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆದರು. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಸುಲಭವಾಗಿ ಪ್ರವೇಶಿಸಲು ಸರ್ಕಾರವು ಅನೇಕ ನಿಯಮಗಳು ಮತ್ತು ನಿಬಂಧನೆಗಳನ್ನು ಸರಳಗೊಳಿಸಿದೆ. ಸರಿಯಾದ ಉದ್ದೇಶ ಮತ್ತು ಸೇವಾ ಮನೋಭಾವವಿದ್ದಲ್ಲಿ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಉಪಕ್ರಮಗಳು ಗಮನಾರ್ಹ ವೇಗದಲ್ಲಿ ಅನುಷ್ಠಾನಗೊಳ್ಳುತ್ತವೆ.

ಸಹೋದರ ಸಹೋದರಿಯರೆ,

21ನೇ ಶತಮಾನದ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಇರಿಸುವಲ್ಲಿ ಸಂಪೂರ್ಣ ಕೃಷಿ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ನಾವು ಜಾಗತಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಮತ್ತು ಕೃಷಿ ರಫ್ತಿನಲ್ಲಿ ಅಗ್ರಗಣ್ಯರಾಗುವುದು ನಮ್ಮ ಗುರಿಗಳಾಗಿವೆ. ಬನಾರಸ್‌ನ ಲಾಂಗ್ರಾ ಮಾವು, ಜಾನ್‌ಪುರದ ಮೂಲಂಗಿ ಮತ್ತು ಗಾಜಿಪುರದ ಬೆಂಡೆಕಾಯಿಯಂತಹ ಅನೇಕ ಉತ್ಪನ್ನಗಳು ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿವೆ. ಒಂದು ಜಿಲ್ಲೆ ಒಂದು ಉತ್ಪನ್ನ ಉಪಕ್ರಮ ಮತ್ತು ಜಿಲ್ಲಾ ಮಟ್ಟದಲ್ಲಿ ರಫ್ತು ಕೇಂದ್ರಗಳ ಸ್ಥಾಪನೆಯು ರಫ್ತುಗಳನ್ನು ಉತ್ತೇಜಿಸುತ್ತಿದೆ. ರಫ್ತು ಗುಣಮಟ್ಟ ಪೂರೈಸಲು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ವಿಶ್ವಾದ್ಯಾಂತ ಪ್ರತಿ ಮನೆಯ ಊಟದ ಮೇಜಿನ ಮೇಲೆ ಭಾರತೀಯ ಆಹಾರ ಧಾನ್ಯಗಳು ಅಥವಾ ಉತ್ಪನ್ನಗಳು ಇರಬೇಕು ಎಂಬ ದೂರದೃಷ್ಟಿಯೊಂದಿಗೆ ಪ್ಯಾಕೇಜ್ ಮಾಡಿದ ಆಹಾರಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ಉಪಸ್ಥಿತಿ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ನಾವು ಕೃಷಿಯಲ್ಲಿ 'ಶೂನ್ಯ ಪರಿಣಾಮ, ಶೂನ್ಯ ದೋಷ' ಮಂತ್ರವನ್ನು ಉತ್ತೇಜಿಸಬೇಕು. ಇದು ಸಿರಿಧಾನ್ಯ ಅಥವಾ ಶ್ರೀ ಅನ್ನ ಉತ್ಪಾದಿಸುವುದು, ಔಷಧೀಯ ಗುಣಗಳನ್ನು ಹೊಂದಿರುವ ಬೆಳೆಗಳನ್ನು ಬೆಳೆಸುವುದು ಅಥವಾ ಸಾವಯವ ಕೃಷಿಯತ್ತ ಮುನ್ನಡೆಯುವುದನ್ನು ಒಳಗೊಂಡಿದೆ, ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ರೈತರಿಗೆ ಮಹತ್ವದ ಬೆಂಬಲ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಹೋದರ ಸಹೋದರಿಯರೆ,

ನಮ್ಮ ತಾಯಂದಿರು ಮತ್ತು ಸಹೋದರಿಯರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಲ್ಲದ ಕೃಷಿ ಕಲ್ಪಿಸಿಕೊಳ್ಳುವುದು ಅಸಾಧ್ಯ. ಪರಿಣಾಮವಾಗಿ, ಕೃಷಿಗೆ ಹೊಸ ದಿಕ್ಕು ನೀಡಲು ತಾಯಿ ಮತ್ತು ಸಹೋದರಿಯರ ಪಾತ್ರವನ್ನು ಈಗ ವಿಸ್ತರಿಸಲಾಗುತ್ತಿದೆ. ನಮೋ ಡ್ರೋನ್ ದೀದಿ ಮತ್ತು ಕೃಷಿ ಸಖಿ ಕಾರ್ಯಕ್ರಮಗಳಂತಹ ಉಪಕ್ರಮಗಳು ಈ ಪ್ರಯತ್ನದ ಉದಾಹರಣೆಗಳಾಗಿವೆ. ಆಶಾ ಕಾರ್ಯಕರ್ತೆಯರಾಗಿ ಸಹೋದರಿಯರ ಕೊಡುಗೆಗಳು ಮತ್ತು ಡಿಜಿಟಲ್ ಇಂಡಿಯಾ ಉತ್ತೇಜಿಸುವಲ್ಲಿ ಬ್ಯಾಂಕ್ ಸಖಿಗಳಾಗಿ ಅವರ ಪಾತ್ರಗಳನ್ನು ನಾವು ನೋಡಿದ್ದೇವೆ. ಈಗ, ಕೃಷಿ ಸಖಿ ಉಪಕ್ರಮದ ಮೂಲಕ ಕೃಷಿಯು ಹೊಸ ಶಕ್ತಿ ಪಡೆಯುವುದನ್ನು ನಾವು ನೋಡುತ್ತೇವೆ. ಇಂದು, 30,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ 'ಕೃಷಿ ಸಖಿ'ಗಳ ಪಾತ್ರ ಗುರುತಿಸಿ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಯೋಜನೆಯನ್ನು ಪ್ರಸ್ತುತ 12 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಭವಿಷ್ಯದಲ್ಲಿ, ದೇಶಾದ್ಯಂತ ಇನ್ನೂ ಸಾವಿರಾರು ಗುಂಪುಗಳು ಇದಕ್ಕೆ ಲಿಂಕ್ ಆಗುತ್ತವೆ. ಈ ಅಭಿಯಾನವು 3 ಕೋಟಿ ಲಖ್ಪತಿ ದೀದಿಗಳನ್ನು ಸೃಜಿಸಲು ಸಹಾಯ ಮಾಡುತ್ತದೆ.

ಸಹೋದರ ಸಹೋದರಿಯರೆ,

ಕಳೆದ 10 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ಮಹತ್ವದ ಅವಕಾಶಗಳನ್ನು ಕಲ್ಪಿಸಿವೆ. ಕಳೆದ 7 ವರ್ಷಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಿದೆ. ಕಾಶಿಯಲ್ಲಿ ಬನಾಸ್ ಡೇರಿ ಸಂಕೀರ್ಣ ಸ್ಥಾಪನೆ, ರೈತರಿಗಾಗಿ ಕೊಳೆಯುವ ಆಹಾರ ಉತ್ಪನ್ನಗಳ ಸರಕು ಸಾಗಣೆ ಕೇಂದ್ರ, ವಿವಿಧ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳು ಮತ್ತು ಕಾಶಿಯಲ್ಲಿ ಸಮಗ್ರ ಪ್ಯಾಕ್ ಹೌಸ್‌ಗಳು ಪೂರ್ವಾಂಚಲ್‌ ರೈತರನ್ನು ಹೆಚ್ಚು ಸಬಲಗೊಳಿಸಿವೆ ಮತ್ತು ಅವರ ಆದಾಯ ಹೆಚ್ಚಿಸಿವೆ.

ಬನಾಸ್ ಡೇರಿಯು ಬನಾರಸ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರು ಮತ್ತು ಜಾನುವಾರು ಸಾಕಣೆದಾರರ ಅದೃಷ್ಟವನ್ನು ಮಾರ್ಪಡಿಸಿದೆ. ಇಂದು ಡೇರಿ ಪ್ರತಿದಿನ ಸುಮಾರು 3 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತದೆ. ಬನಾರಸ್ ಒಂದರಿಂದಲೇ 14,000ಕ್ಕೂ ಹೆಚ್ಚು ಜಾನುವಾರು ಸಾಕಣೆದಾರರು ಡೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.  ಮುಂದಿನ 1.5 ವರ್ಷದಲ್ಲಿ ಕಾಶಿಯಿಂದ 16,000 ಜಾನುವಾರು ಸೇರಿಸಲು ಬನಾಸ್ ಡೇರಿ ಯೋಜಿಸಿದೆ. ಬನಾಸ್ ಡೇರಿ ಪ್ರಾರಂಭವಾದಾಗಿನಿಂದ, ಬನಾರಸ್‌ನ ಅನೇಕ ಹಾಲು ಉತ್ಪಾದಕರು ತಮ್ಮ ಆದಾಯವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಿಕೊಂಡಿದ್ದಾರೆ. ರೈತರು ವಾರ್ಷಿಕ ಬೋನಸ್‌ ಸಹ ಪಡೆಯುತ್ತಾರೆ, ಕಳೆದ ವರ್ಷ 100 ಕೋಟಿ ರೂ. ಹಣವನ್ನು ಜಾನುವಾರು ಸಾಕಣೆದಾರರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಹೆಚ್ಚುವರಿಯಾಗಿ, ಬನಾಸ್ ಡೇರಿಯು ರೈತರಿಗೆ ಉತ್ತಮ ಗುಣಮಟ್ಟದ ಗಿರ್ ಮತ್ತು ಸಾಹಿವಾಲ್ ಹಸುಗಳನ್ನು ಒದಗಿಸುತ್ತಿದೆ, ಇದು ಅವರ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಸ್ನೇಹಿತರೆ,

ಬನಾರಸ್‌ನ ಮೀನು ಕೃಷಿಕರ ಆದಾಯ ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ನೂರಾರು ರೈತರು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಹೆಚ್ಚುವರಿಯಾಗಿ, ಸಮೀಪದ ಚಂದೌಲಿಯಲ್ಲಿ ಅಂದಾಜು 70 ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಮೀನು ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಈ ಮಾರುಕಟ್ಟೆಯು ಬನಾರಸ್‌ನ ಮೀನು ಕೃಷಿಕರಿಗೂ ಅನುಕೂಲವಾಗಲಿದೆ.

ಸ್ನೇಹಿತರೆ,

ಬನಾರಸ್‌ನಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಅದ್ಭುತ ಯಶಸ್ಸನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯೋಜನೆಯಡಿ ಸುಮಾರು 40,000 ಜನರು ನೋಂದಾಯಿಸಿಕೊಂಡಿದ್ದಾರೆ. ಬನಾರಸ್‌ನಲ್ಲಿ 2,100ಕ್ಕೂ ಹೆಚ್ಚು ಮನೆಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗಿದೆ, ಪ್ರಸ್ತುತ 3,000ಕ್ಕೂ ಹೆಚ್ಚು ಮನೆಗಳಲ್ಲಿ ಅವುಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಲ್ಲಿ ಭಾಗವಹಿಸುವ ಹೆಚ್ಚಿನ ಕುಟುಂಬಗಳು 2 ಪಟ್ಟು ಪ್ರಯೋಜನಗಳನ್ನು ಪಡೆದಿವೆ.  ಅವರ ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ಇಳಿಸಿರುವುದು ಮಾತ್ರವಲ್ಲ, ಅವರು 2,000-3,000 ರೂ. ಹೆಚ್ಚುವರಿಯಾಗಿ ಗಳಿಸಲು ಪ್ರಾರಂಭಿಸಿದ್ದಾರೆ.

ಸ್ನೇಹಿತರೆ,

ಬನಾರಸ್ ಮತ್ತು ಅದರ ಸುತ್ತಮುತ್ತಲ ಹಳ್ಳಿಗಳಲ್ಲಿ ಕಳೆದ ದಶಕದಲ್ಲಿ ನಡೆಸಲಾದ ಮೂಲಸೌಕರ್ಯ ಅಭಿವೃದ್ಧಿಯು ಅಪಾರ ಪ್ರಯೋಜನಕಾರಿಯಾಗಿದೆ. ಪ್ರಸ್ತುತ, ಕಾಶಿಯಲ್ಲಿ ದೇಶದ ಮೊದಲ ಸಿಟಿ ರೋಪ್‌ವೇ ಯೋಜನೆ ಮುಕ್ತಾಯದ ಹಂತದಲ್ಲಿದೆ. ಗಾಜಿಪುರ, ಅಜಂಗಢ ಮತ್ತು ಜೌನ್‌ಪುರವನ್ನು ಸಂಪರ್ಕಿಸುವ ವರ್ತುಲ ರಸ್ತೆ ಅಭಿವೃದ್ಧಿಗೆ ವೇಗವರ್ಧಕವಾಗಿದೆ. ಫುಲ್ವಾರಿಯಾ ಮತ್ತು ಚೌಕಾಘಾಟ್‌ನಲ್ಲಿ ನಿರ್ಮಿಸಲಾದ ಮೇಲ್ಸೇತುವೆಗಳು ಬನಾರಸ್ ನಿವಾಸಿಗಳಿಗೆ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ. ಕಾಶಿ, ಬನಾರಸ್ ಮತ್ತು ಕ್ಯಾಂಟ್‌ ರೈಲು ನಿಲ್ದಾಣಗಳನ್ನು ಪ್ರವಾಸಿಗರು ಮತ್ತು ಸ್ಥಳೀಯರನ್ನು ಸಮಾನವಾಗಿ ಸ್ವಾಗತಿಸುವ ರೀತಿಯಲ್ಲಿ ನವೀಕರಿಸಲಾಗಿದೆ. ಇತ್ತೀಚೆಗೆ ಪರಿಷ್ಕರಿಸಿದ ಬಬತ್‌ಪುರ ವಿಮಾನ ನಿಲ್ದಾಣವು ಟ್ರಾಫಿಕ್ ದಟ್ಟಣೆ ಸುಗಮಗೊಳಿಸುವುದಲ್ಲದೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಗಂಗಾ ಘಾಟ್‌ಗಳ ಅಭಿವೃದ್ಧಿಯ ಪ್ರಗತಿ, ಬಿಎಚ್ ಯುನಲ್ಲಿ ಹೊಸ ಆರೋಗ್ಯ ಸೌಲಭ್ಯಗಳು, ನಗರಾದ್ಯಂತ ಪುನರುಜ್ಜೀವನಗೊಳಿಸಲಾದ ಕೊಳಗಳು ಮತ್ತು ವಾರಣಾಸಿಯಾದ್ಯಂತ ವಿವಿಧ ವ್ಯವಸ್ಥೆಗಳ ಬಲವರ್ಧನೆ ಕ್ರಮಗಳು ನಿವಾಸಿಗಳಲ್ಲಿ ಹೆಮ್ಮೆಯ ಭಾವನೆಗೆ ಕೊಡುಗೆ ನೀಡುತ್ತವೆ. ಹೊಸ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಕ್ರೀಡೆಯಲ್ಲಿನ ಉಪಕ್ರಮಗಳು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೆ,

ನಮ್ಮ ಕಾಶಿ ಬಹಳ ಹಿಂದಿನಿಂದಲೂ ಸಂಸ್ಕೃತಿ ಮತ್ತು ಜ್ಞಾನದ ಧ್ಯೋತಕವಾಗಿದೆ, ಈ ಪಾರಂಪರಿಕ ನಗರವು ನಗರಾಭಿವೃದ್ಧಿಯ ಹೊಸ ಯುಗಕ್ಕೂ ನಾಂದಿ ಹಾಡಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಅಭಿವೃದ್ಧಿ ಮತ್ತು ಪರಂಪರೆಯ ಮಿಶ್ರಣವು ಕಾಶಿಯಾದ್ಯಂತ ಸ್ಪಷ್ಟವಾಗಿದೆ. ಇಲ್ಲಿನ ನಿವಾಸಿಗಳಿಗೆ ಮಾತ್ರವಲ್ಲದೆ, ಕೆಲಸ ಮತ್ತು ಇತರ ಅಗತ್ಯಗಳಿಗಾಗಿ ಇಲ್ಲಿಗೆ ಬರುವ ಪೂರ್ವಾಂಚಲ್‌ ಕುಟುಂಬಗಳಿಗೂ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಬಾಬಾ ವಿಶ್ವನಾಥನ ಆಶೀರ್ವಾದದಿಂದ ಕಾಶಿಯ ಅಭಿವೃದ್ಧಿಯ ಈ ನಿರಂತರ ಪಯಣ ನಿರಂತರವಾಗಿ ಮುಂದುವರಿಯುತ್ತದೆ. ದೇಶಾದ್ಯಂತ ಇರುವ ಎಲ್ಲಾ ರೈತ ಮಿತ್ರರು, ಸಹೋದರ ಸಹೋದರಿಯರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಶಿಯ ಜನತೆಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ನಮ: ಪಾರ್ವತಿ ಪತಯೆ!

ಹರ ಹರ ಮಹಾದೇವ!

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 



(Release ID: 2026983) Visitor Counter : 21