ಸಂಪುಟ

ಕೇಂದ್ರ ವಲಯದ ಯೋಜನೆ "ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯ ವರ್ಧನೆ ಯೋಜನೆ" (ಎನ್.ಎಫ್.ಐ.ಇ.ಎಸ್.) ಗೆ ಸಂಪುಟದ ಅನುಮೋದನೆ

Posted On: 19 JUN 2024 8:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2024-25 ರಿಂದ 2028-29ರ ಅವಧಿಯಲ್ಲಿ ಒಟ್ಟು 2254.43 ಕೋಟಿ ರೂ.ಗಳ ಹಣಕಾಸು ವೆಚ್ಚದ ಕೇಂದ್ರ ವಲಯದ ಯೋಜನೆ "ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯ ವರ್ಧನೆ ಯೋಜನೆ (ಎನ್.ಎಫ್.ಐ.ಇ.ಎಸ್.) ಗಾಗಿ ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.  ಕೇಂದ್ರ ವಲಯದ ಯೋಜನೆಯ ಹಣಕಾಸು ವೆಚ್ಚವನ್ನು ಗೃಹ ಸಚಿವಾಲಯವು ತನ್ನದೇ ಆದ ಬಜೆಟ್ ನಿಂದ ಭರಿಸಲಿದೆ.

ಈ ಯೋಜನೆಯಡಿ ಈ ಕೆಳಗಿನ ಘಟಕಗಳಿಗೆ ಸಂಪುಟ ಅನುಮೋದನೆ ನೀಡಿದೆ:

                            i   ದೇಶದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ (ಎನ್ಎಫ್ಎಸ್ಯು) ಕ್ಯಾಂಪಸ್ ಗಳ ಸ್ಥಾಪನೆ.

                            ii. ದೇಶದಲ್ಲಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ.

                           iii. ಎನ್.ಎಫ್.ಎಸ್.ಯು.ನ ದೆಹಲಿ ಕ್ಯಾಂಪಸ್ ನಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ವರ್ಧನೆ.

ಸಾಕ್ಷ್ಯಗಳ ವೈಜ್ಞಾನಿಕ ಮತ್ತು ಸಮಯೋಚಿತ ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ ಪರಿಣಾಮಕಾರಿ ಮತ್ತು ದಕ್ಷ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತ ಸರ್ಕಾರ ಬದ್ಧವಾಗಿದೆ. ಈ ಯೋಜನೆಯು ಪರಿಣಾಮಕಾರಿ ಕ್ರಿಮಿನಲ್ ನ್ಯಾಯ ಪ್ರಕ್ರಿಯೆಗಾಗಿ ಪುರಾವೆಗಳ ಸಮಯೋಚಿತ ಮತ್ತು ವೈಜ್ಞಾನಿಕ ಪರಿಶೀಲನೆಯಲ್ಲಿ ಉತ್ತಮ ಗುಣಮಟ್ಟದ, ತರಬೇತಿ ಪಡೆದ ವಿಧಿವಿಜ್ಞಾನ ವೃತ್ತಿಪರರ ಮಹತ್ವವನ್ನು ಒತ್ತಿಹೇಳುತ್ತದೆ, ತಂತ್ರಜ್ಞಾನದ ಪ್ರಗತಿಯನ್ನು ಹೆಚ್ಚಿಸುತ್ತದೆ ಮತ್ತು ಅಪರಾಧದ ಅಭಿವ್ಯಕ್ತಿಗಳು ಹಾಗು ವಿಧಾನಗಳನ್ನು ವಿಕಸನಗೊಳಿಸುತ್ತದೆ.

7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಒಳಗೊಂಡ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸುವ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವುದರೊಂದಿಗೆ, ವಿಧಿವಿಜ್ಞಾನ ಪ್ರಯೋಗಾಲಯಗಳ ಕೆಲಸದ ಹೊರೆಯಲ್ಲಿ ಗಮನಾರ್ಹ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಇದಲ್ಲದೆ, ದೇಶದ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್ಎಸ್ಎಲ್) ತರಬೇತಿ ಪಡೆದ ವಿಧಿವಿಜ್ಞಾನ ಮಾನವಶಕ್ತಿಯ ಗಮನಾರ್ಹ ಕೊರತೆಯಿದೆ.

ಈ ಹೆಚ್ಚಿದ ಬೇಡಿಕೆಯನ್ನು ಪೂರೈಸಲು, ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯದಲ್ಲಿ ಗಮನಾರ್ಹ ಹೂಡಿಕೆ ಮತ್ತು ಹೆಚ್ಚಳ ಅನಿವಾರ್ಯವಾಗಿದೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್ಎಫ್ಎಸ್ಯು) ಮತ್ತು ಹೊಸ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳ (ಸಿಎಫ್ಎಸ್ಎಲ್) ಹೆಚ್ಚುವರಿ ಆಫ್-ಕ್ಯಾಂಪಸ್ಗಳ ಸ್ಥಾಪನೆಯು ತರಬೇತಿ ಪಡೆದ ವಿಧಿವಿಜ್ಞಾನ ಮಾನವಶಕ್ತಿಯ ಕೊರತೆಯನ್ನು ನೀಗಿಸುತ್ತದೆ, ವಿಧಿವಿಜ್ಞಾನ ಪ್ರಯೋಗಾಲಯಗಳ ಪ್ರಕರಣಗಳ ಹೊರೆ / ಬಾಕಿಯನ್ನು ನಿವಾರಿಸುತ್ತದೆ ಮತ್ತು 90% ಕ್ಕಿಂತ ಹೆಚ್ಚಿನ ಶಿಕ್ಷೆಯ ಪ್ರಮಾಣವನ್ನು ಸಾಧಿಸುವ  ಭಾರತ ಸರ್ಕಾರದ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ.

*****



(Release ID: 2026819) Visitor Counter : 33