ಚುನಾವಣಾ ಆಯೋಗ
azadi ka amrit mahotsav

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತ್ತು ಸ್ವಚ್ಛ ಚುನಾವಣೆ ನಡೆಯುವಂತಾಗಲು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ ನಾಗರಿಕರು


ಕಳೆದ ಎರಡು ತಿಂಗಳಲ್ಲಿ ಸಿವಿಜಿಲ್ ನಲ್ಲಿ 4.24 ಲಕ್ಷಕ್ಕೂ ಹೆಚ್ಚು ದೂರುಗಳ ಸ್ವೀಕಾರ; ಶೇ.99.9 ಪ್ರಕರಣಗಳು ಇತ್ಯರ್ಥ


ಉಲ್ಲಂಘನೆ ನಡೆಯುವ ಸ್ಥಳಗಳಿಗೆ ಫ್ಲೈಯಿಂಗ್ ಸ್ಕ್ವಾಡ್ ಕೆಲವೇ ನಿಮಿಷಗಳಲ್ಲಿ ತಲುಪಲು ಜಿಯೋ ಟ್ಯಾಗಿಂಗ್ ನೆರವು

Posted On: 18 MAY 2024 1:23PM by PIB Bengaluru

ಲೋಕಸಭಾ ಚುನಾವಣೆ 2024 ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳನ್ನು ನಾಗರಿಕರ ನೆರವಿನೊಂದಿಗೆ ಸಮರ್ಪಕವಾಗಿ ನಿರ್ವಹಿಸುವಲ್ಲಿ ಭಾರತೀಯ ಚುನಾವಣಾ ಆಯೋಗದ ಸಿ-ವಿಜಿಲ್ ಆಪ್ ಪರಿಣಾಮಕಾರಿಯಾಗಿ ಹೊರಹೊಮ್ಮಿದೆ. ಸಾರ್ವತ್ರಿಕ ಚುನಾವಣೆ 2024 ರ ಘೋಷಣೆ ಬಳಿಕ, ಈ ಆಪ್ ಮೂಲಕ 2024ರ ಮೇ 15 ರವರೆಗೆ 4.24 ಲಕ್ಷ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 4,23,908 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು ಉಳಿದ 409 ಪ್ರಕರಣಗಳ ಇತ್ಯರ್ಥವು ಪ್ರಗತಿಯಲ್ಲಿದೆ.  ಸುಮಾರು ಶೇಕಡ 89 ರಷ್ಟು ದೂರುಗಳನ್ನು 100 ನಿಮಿಷಗಳ ಕಾಲಮಿತಿಯೊಳಗೆ ಪರಿಹರಿಸಲಾಗಿದ್ದು, ಚುನಾವಣಾ ಆಯೋಗದ ಭರವಸೆಯನ್ನು ಎತ್ತಿ ಹಿಡಿಯಲಾಗಿದೆ. 

ನಾಗರಿಕರು ಈ ಆಪ್ ಮೂಲಕ ನಿಗದಿತ ಸಮಯದ ನಂತರ ಧ್ವನಿವರ್ಧಕಗಳ ಬಳಕೆ ಅಥವಾ ಮಿತಿಮೀರಿದ ಶಬ್ದ, ನಿಷೇಧಿತ ಅವಧಿಯಲ್ಲಿ ಪ್ರಚಾರ, ಅನುಮತಿ ಇಲ್ಲದೇ ಪೋಸ್ಟರ್ ಅಥವಾ ಬ್ಯಾನರ್ ಗಳ ಅಳವಡಿಕೆ, ಅನುಮತಿಸಿದ ಮಿತಿಗಿಂತ ಹೆಚ್ಚಿನ ವಾಹನಗಳ ನಿಯೋಜನೆ, ಆಸ್ತಿ ವಿರೂಪಗೊಳಿಸುವಿಕೆ, ಶಸ್ತ್ರಾಸ್ತ್ರಗಳನ್ನು ತೋರಿಸುವುದು/ಬೆದರಿಸುವುದು ಮತ್ತು ಪ್ರಚೋದನೆಗಳ ನಿಗ್ರಹದಂತಹ ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಿದ್ದಾರೆ. ವರ್ಗಾವಾರು ದೂರುಗಳ ವಿವರಗಳು ಈ ಕೆಳಕಂಡಂತಿದೆ:

 

ಸಿವಿಜಿಲ್ ಬಳಕೆದಾರ ಸ್ನೇಹಿ ಅಪ್ಲಿಕೇಷನ್ ಆಗಿದ್ದು, ಸುಲಭವಾಗಿ ಬಳಸಬಹುದಾಗಿದೆ. ಇದು ನಾಗರಿಕರನ್ನು ಜಿಲ್ಲಾ ನಿಯಂತ್ರಣ ಕೊಠಡಿ, ರಿಟರ್ನಿಂಗ್ ಅಧಿಕಾರಿ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳೊಂದಿಗೆ ಸಂಪರ್ಕಿಸುತ್ತದೆ. ಈ ಆಪ್ ಮೂಲಕ ನಾಗರಿಕರು ರಾಜಕೀಯ ದುರ್ನಡತೆಯ ಘಟನೆಗಳನ್ನು ರಿಟರ್ನಿಂಗ್ ಅಧಿಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲದೇ ತಕ್ಷಣವೇ ವರದಿ ಮಾಡಬಹುದಾಗಿದೆ.  ಸಿ-ವಿಜಿಲ್ ಆಪ್ ಮೂಲಕ ನಾಗರಿಕರು ದೂರು ದಾಖಲಿಸುತ್ತಿದ್ದಂತೆ, ದೂರುದಾರರಿಗೆ ವಿಶಿಷ್ಟ ಐಡಿ ಸ್ವೀಕೃತವಾಗುತ್ತದೆ. ಇದರ ಮೂಲಕ ದೂರುದಾರರು ತಮ್ಮ ಮೊಬೈಲ್ ಮೂಲಕ ದೂರಿನ ಸ್ಥಿತಿಗತಿ ತಿಳಿಯಬಹುದಾಗಿದೆ. 

 

ಮೂರು ಅಂಶಗಳು ಒಟ್ಟೊಟ್ಟಿಗೆ ಕೆಲಸ ಮಾಡುತ್ತಿರುವುದು ಸಿ-ವಿಜಿಲ್ ಆಪ್ ಯಶಸ್ಸಿಗೆ ಕಾರಣವಾಗಿದೆ. ಆಪ್ ಬಳಕೆದಾರರು ಆಡಿಯೋ, ವಿಡಿಯೋ ಅಥವಾ ಫೋಟೋಗಳನ್ನು ನೈಜ ಸಮಯದಲ್ಲಿಯೇ ತೆಗೆದು , “100 ನಿಮಿಷ”ಗಳ ಇಳಿಕೆ-ಎಣಿಕೆಯ ಕಾಲಮಿತಿಯಲ್ಲಿ ದೂರುಗಳ ಪರಿಹಾರದ ಖಾತರಿಯೂ ಇದೆ. ಈ ಆಪ್ ಸ್ವಯಂಚಾಲಿತವಾಗಿ ಜಿಯೋ-ಟ್ಯಾಗಿಂಗ್ ವ್ಯವಸ್ಥೆಯನ್ನು ಬಳಸಲಿದ್ದು, ಬಳಕೆದಾರರು ದೂರು ದಾಖಲಿಸಲು ತಮ್ಮ ಕ್ಯಾಮೆರಾ ತೆರೆಯುತ್ತಿದ್ದಂತೆ ಇದು ಸಕ್ರಿಯಗೊಳ್ಳಲಿದೆ. ಅಂದರೆ ಫ್ಲೈಯಿಂಗ್ ಸ್ಕ್ವಾಡ್ (ವಿಶೇಷ ಸಂಚಾರಿ ತಂಡ) ಕ್ಕೆ ಉಲ್ಲಂಘನೆ ನಡೆದ ಸ್ಥಳದ ನಿಖರ ವಿವರಗಳು ದೊರೆಯುತ್ತದೆ, ನಾಗರಿಕರು ಕಳುಹಿಸಿದ ಚಿತ್ರಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಬಹುದಾಗಿದೆ.

ನಾಗರಿಕರು ತಮ್ಮ ಹೆಸರು ಹೇಳದೇ ಕೂಡ ದೂರನ್ನು ದಾಖಲಿಸಬಹುದು. ದುರುಪಯೋಗ ತಡೆಗಟ್ಟಲು, ಸಿ-ವಿಜಿಲ್ ಆಪ್ ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದೆ. ಭೌಗೋಳಿಕ ಇತಿಮಿತಿಗಳು, ವರದಿಗೆ ಸಮಯದ ನಿರ್ಬಂಧ, ಕ್ಷುಲ್ಲಕ ದೂರುಗಳು ಅಥವಾ ಒಂದೇ ಬಗೆಯ ದೂರುಗಳನ್ನು ಪತ್ತೆ ಮಾಡುವ ಸೌಲಭ್ಯ ಮೊದಲಾದ ಲಕ್ಷಣಗಳನ್ನು ಈ ಅಪ್ಲಿಕೇಷನ್ ಹೊಂದಿದೆ.  ಮತದಾರರು ಮತ್ತು ರಾಜಕೀಯ ಪಕ್ಷಗಳಿಗಾಗಿ ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ ಆಯೋಗವು ರೂಪಿಸಿದ ಆಪ್ ಗಳ ಪೈಕಿ ಈ ಅಪ್ಲಿಕೇಷನ್ ಪ್ರಮುಖವಾಗಿದೆ.

*****


(Release ID: 2021065) Visitor Counter : 65