ಗೃಹ ವ್ಯವಹಾರಗಳ ಸಚಿವಾಲಯ

ಸೈಬರ್ ಅಪರಾಧಿಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು, ಎನ್.ಸಿ.ಬಿ. ಸಿಬಿಐ, ಆರ್.ಬಿ.ಐ ಮತ್ತು ಇತರೆ ಜಾರಿ ಸಂಸ್ಥೆಗಳ ಸೋಗಿನಲ್ಲಿ ‘ಬ್ಲಾಕ್ ಮೇಲ್’ ಹಾಗೂ ಡಿಜಿಟಲ್ ಬಂಧನ’ದಂತಹ ಅಪರಾಧಿ ಕೆಲಸಗಳಲ್ಲಿ ತೊಡಗಿದ್ದು ಈ ಬಗ್ಗೆ ಜಾಗ್ರತೆ ವಹಿಸುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ

Posted On: 14 MAY 2024 4:15PM by PIB Bengaluru

ಪೊಲೀಸ್ ಅಧಿಕಾರಿಗಳು, ಕೇಂದ್ರೀಯ ತನಿಖಾ ದಳ (ಸಿಬಿಐ), ಮಾದಕ ದ್ರವ್ಯ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, ಜಾರಿ ನಿರ್ದೇಶನಾಲಯ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ಸೋಗಿನಲ್ಲಿ ಸೈಬರ್ ಅಪರಾಧಿಗಳಿಂದ ಬೆದರಿಕೆ, ಬ್ಲ್ಯಾಕ್‌ಮೇಲ್, ಸುಲಿಗೆ ಮತ್ತು “ಡಿಜಿಟಲ್ ಬಂಧನ”ಕ್ಕೆ ಸಂಬಂಧಿಸಿದಂತೆ  ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ನಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳು ಸಲ್ಲಿಕೆಯಾಗುತ್ತಿವೆ. 

ಈ ವಂಚಕರು ಸಾಮಾನ್ಯವಾಗಿ ಸಂಭಾವ್ಯ ಬಲಿಪಶುಗಳಿಗೆ ಬಲೆ ಬೀಸುತ್ತಾರೆ ಮತ್ತು ಬಲಿಪಶುವು ಅಕ್ರಮ ಸರಕುಗಳು, ಔಷಧಗಳು, ನಕಲಿ ಪಾಸ್‌ಪೋರ್ಟ್‌ಗಳು ಅಥವಾ ಯಾವುದೇ ಇತರ ನಿಷಿದ್ಧ ವಸ್ತುಗಳನ್ನು ಒಳಗೊಂಡಿರುವ ಪಾರ್ಸೆಲ್ ಅನ್ನು ಕಳುಹಿಸಿರುವುದಾಗಿ ತಿಳಿಸುತ್ತಾರೆ ಅಥವಾ ಉದ್ದೇಶಿತ ಸರಕುಗಳನ್ನು ಸ್ವೀಕರಿಸುವವರಿಗೆ  ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ, ಬಲಿಪಶುಗಳಲ್ಲಿ ಹತ್ತಿರದ ಅಥವಾ ಆತ್ಮೀಯರೊಬ್ಬರು ಅಪರಾಧ ಅಥವಾ ಅಪಘಾತಕ್ಕೀಡಾಗಿದ್ದಾರೆ ಮತ್ತು ಅವರ ವಶದಲ್ಲಿದ್ದಾರೆ ಎಂದು ಅವರು ತಿಳಿಸುತ್ತಾರೆ.

ಇಂತಹ "ಪ್ರಕರಣ" ವನ್ನು ರಾಜಿ ಮಾಡಲು ಹಣದ ಬೇಡಿಕೆ ಇಡುತ್ತಾರೆ. ಕೆಲವು ನಿದರ್ಶನಗಳಲ್ಲಿ, ಅನುಮಾನಾಸ್ಪದ ಬಲಿಪಶುಗಳನ್ನು "ಡಿಜಿಟಲ್ ಬಂಧನ" ಕ್ಕೆ ಒಳಪಡಿಸಲಾಗುತ್ತದೆ ಮತ್ತು ಅವರ ಬೇಡಿಕೆಗಳನ್ನು ಪೂರೈಸುವವರೆಗೆ ವಂಚಕರು ಸ್ಕೈಪ್ ಅಥವಾ ಇತರ ವೀಡಿಯೊ ಕಾನ್ಫರೆನ್ಸಿಂಗ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವಂಚಕರು ಪೊಲೀಸ್ ಠಾಣೆಗಳು ಮತ್ತು ಸರ್ಕಾರಿ ಕಚೇರಿಗಳ ಮಾದರಿಯ ಸ್ಟುಡಿಯೋಗಳನ್ನು ಬಳಸುತ್ತಾರೆ ಮತ್ತು ಅಸಲಿ ವ್ಯಕ್ತಿಗಳಾಗಿ ಕಾಣಿಸಿಕೊಳ್ಳಲು ಸಮವಸ್ತ್ರ ಧರಿಸಿರುತ್ತಾರೆ.

ಇಂತಹ ವಂಚಕರಿಂದ ದೇಶಾದ್ಯಂತ ಹಲವಾರು ಮಂದಿ ದೊಡ್ಡ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಇದು ಸಂಘಟಿತ ಆನ್‌ಲೈನ್ ಆರ್ಥಿಕ ಅಪರಾಧವಾಗಿದೆ ಮತ್ತು ಗಡಿಯಾಚೆಗೆ ಸಿಂಡಿಕೇಟ್‌ಗಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸುವುದನ್ನು ಈ ವಂಚಕರು ಕಲಿತಿದ್ದಾರೆ. 

ದೇಶದಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು [ಐ4ಸಿ] ರಚಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆರ್.ಬಿ.ಐ ಮತ್ತು ಇತರೆ ಸಂಸ್ಥೆಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ವಂಚನೆಗಳನ್ನು ಹತ್ತಿಕ್ಕುತ್ತಿವೆ. ಐ4ಸಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪ್ರಾಧಿಕಾರಗಳಿಗೆ ಇಂತಹ ಪ್ರಕರಣಗಳನ್ನು ಪತ್ತೆ ಮಾಡಲು ಮತ್ತು ತನಿಖೆ ನಡೆಸಲು ತಾಂತ್ರಿಕ ನೆರವು ಮತ್ತು ಬೆಂಬಲ ನೀಡುತ್ತಿವೆ. 

ಐ4ಸಿ ಈಗಾಗಲೇ ಮೈಕ್ರೋಸಾಪ್ಟ್ ಸಹಯೋಗದಲ್ಲಿ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ 1,000 ಕ್ಕೂ ಅಧಿಕ ಸ್ಕೈಪ್ ಐಡಿಗಳನ್ನು ತಡೆ ಹಿಡಿಯಲಾಗಿದೆ. ವಂಚಕರು ಬಳಸುವ ನಕಲಿ ಖಾತೆಗಳು, ಮೊಬೈಲ್ ಸಾಧನಗಳು ಮತ್ತು ಸಿಮ್ ಕಾರ್ಡ್ ಗಳನ್ನು ಸಹ ತಡೆಹಿಡಿಯುವ ಸೌಲಭ್ಯ ಕಲ್ಪಿಸಲಾಗಿದೆ. ಐ4ಸಿ ಎಕ್ಸ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ “ಸೈಬರ್ ಡೋಸ್ಟ್’ ನಲ್ಲಿ ಇನ್ಫೋಗ್ರಾಫಿಕ್ಸ್ ಮತ್ತು ವಿಡಿಯೋಗಳ ಮೂಲಕ ಎಚ್ಚರಿಕೆಗಳನ್ನು ನೀಡಿದೆ. 

ಇಂತಹ ವಂಚನೆಗಳ ಬಗ್ಗೆ ನಾಗರಿಕರು ಜಾಗ್ರತೆ ವಹಿಸಬೇಕು ಮತ್ತು ಜನ ಜಾಗೃತಿ ಮೂಡಿಸಬೇಕಾಗಿದೆ. ಈ ರೀತಿಯ ಕರೆಗಳನ್ನು ಸ್ವೀಕರಿಸಿದ ತಕ್ಷಣ ನಾಗರಿಕರು ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ  1930 ಮಾಹಿತಿ ನೀಡುವಂತೆ ಅಥವಾ http://www.cybercrime.gov.in ಗೆ ವರದಿ ಮಾಡುವಂತೆ ಕೋರಲಾಗಿದೆ. 

*****



(Release ID: 2020611) Visitor Counter : 70