ಚುನಾವಣಾ ಆಯೋಗ
2024 ರ ಸಾರ್ವತ್ರಿಕ ಚುನಾವಣೆಗಳು ಶಾಂತಿಯುತ ಮತ್ತು ಆಮಿಷ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು ಹಾಗೂ ಕೇಂದ್ರೀಯ ಏಜೆನ್ಸಿಗಳ ಮುಖ್ಯಸ್ಥರಿಗೆ ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದೆ
ಅಕ್ರಮ ಮದ್ಯ, ನಗದು, ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಉಚಿತ ವಸ್ತುಗಳ ಸಾಗಣೆಯನ್ನು ತಡೆಯಲು ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಕಟ್ಟುನಿಟ್ಟಾದ ನಿಗಾ ಇಡುವಂತೆ ಸೂಚಿಸಿದೆ
Posted On:
03 APR 2024 6:31PM by PIB Bengaluru
2024ರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತ್ತು ಆಮಿಷ ಮುಕ್ತ ಚುನಾವಣೆಗಾಗಿ ಕಾನೂನು ಮತ್ತು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳ ತಡೆಗಟ್ಟುವಿಕೆ, ವಶಪಡಿಸಿಕೊಳ್ಳುವಿಕೆ ಮತ್ತು ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಕಟ್ಟುನಿಟ್ಟಿನ ಜಾಗರೂಕತೆಯನ್ನು ಪರಿಶೀಲಿಸಲು ಭಾರತದ ಚುನಾವಣಾ ಆಯೋಗವು ಇಂದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರ್ಣಾಯಕ ಸಭೆಯನ್ನು ನಡೆಸಿತು. ಗಡಿಗಳನ್ನು ಕಾಪಾಡುವ ಕೇಂದ್ರೀಯ ಏಜೆನ್ಸಿಗಳ ಜೊತೆಗೆ ನೆರೆಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳ ನಡುವೆ ತಡೆರಹಿತ ಸಮನ್ವಯ ಮತ್ತು ಸಹಕಾರಕ್ಕಾಗಿ ಎಲ್ಲಾ ಸಂಬಂಧಿತ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರುವುದು ಈ ಸಂಯೋಜಿತ ಪರಿಶೀಲನೆಯ ಉದ್ದೇಶವಾಗಿತ್ತು. ಆಯೋಗವು ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ನಿರ್ಣಾಯಕ ಸಮಸ್ಯೆಗಳನ್ನು ವಿವರವಾಗಿ ಪರಿಶೀಲಿಸಿತು.
ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರ ಜೊತೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಗಡಿಗಳನ್ನು ಕಾಪಾಡುವ ಕೇಂದ್ರ ಏಜೆನ್ಸಿಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ತಮ್ಮ ಆರಂಭಿಕ ಮಾತುಗಳಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತ್ತು ಆಮಿಷ ಮುಕ್ತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಆಯೋಗದ ಬದ್ಧತೆಯನ್ನು ಒತ್ತಿಹೇಳಿದರು ಮತ್ತು ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನು ಎತ್ತಿಹಿಡಿಯಲು ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವಂತೆ ಎಲ್ಲಾ ಭಾಗೀದಾರರಿಗೆ ಕರೆ ನೀಡಿದರು. ಪ್ರತಿಯೊಬ್ಬ ಮತದಾರರು ಭಯ ಅಥವಾ ಆತಂಕವಿಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದರು. ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತ್ತು ಬೆದರಿಕೆ-ಮುಕ್ತ ಚುನಾವಣೆಯ ತಮ್ಮ 'ಸಂಕಲ್ಪ'ವನ್ನು ದೃಢ 'ಕ್ರಮ'ಗಳಾಗಿ ಪರಿವರ್ತಿಸುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಏಜೆನ್ಸಿಗಳಿಗೆ ಅವರು ಕರೆ ನೀಡಿದರು.
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು ನೆರೆಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಹೆಚ್ಚಿನ ಸಮನ್ವಯ; ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒದಗಿಸಲಾದ CAPF ನ ಸಮರ್ಪಕ ನಿಯೋಜನೆ; ಚುನಾವಣೆ ನಡೆಯುವ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ CAPF ಸಿಬ್ಬಂದಿಯ ಚಲನೆ ಮತ್ತು ಸಾಗಣೆಗೆ ಲಾಜಿಸ್ಟಿಕ್ಸ್ ಬೆಂಬಲ; ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದಾದ ಗಡಿ ಪ್ರದೇಶಗಳಲ್ಲಿ ಫ್ಲ್ಯಾಷ್ಪಾಯಿಂಟ್ ಗಳ ಗುರುತಿಸುವಿಕೆ ಮತ್ತು ಮೇಲ್ವಿಚಾರಣೆ; ಹಿಂದಿನ ಅನುಭವಗಳ ಆಧಾರದ ಮೇಲೆ ಕೋಮು ಉದ್ವಿಗ್ನತೆಯನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಸೂಕ್ಷ್ಮ ಗಡಿಗಳನ್ನು ಭದ್ರಪಡಿಸುವ ಅನಿವಾರ್ಯತೆಯ ಅಗತ್ಯವನ್ನು ಒಳಗೊಂಡಿದ್ದವು. ಅಂತಾರಾಷ್ಟ್ರೀಯ ಗಡಿಗಳಲ್ಲಿ ಮಾದಕ ದ್ರವ್ಯಗಳು, ಮದ್ಯ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಸೇರಿದಂತೆ ನಿಷಿದ್ಧ ವಸ್ತುಗಳ ಸಾಗಣೆಯನ್ನು ತಡೆಯಲು ಕಟ್ಟುನಿಟ್ಟಾದ ಜಾಗರೂಕತೆಯ ಪ್ರಾಮುಖ್ಯತೆಯನ್ನು ಆಯೋಗವು ಒತ್ತಿಹೇಳಿತು. ಗಡಿಯಲ್ಲಿ ಮದ್ಯ ಮತ್ತು ನಗದು ಸಾಗಣೆಯ ನಿರ್ಗಮನ ಮತ್ತು ಪ್ರವೇಶ ಬಿಂದುಗಳನ್ನು ಗುರುತಿಸುವಂತೆ, ಕೆಲವು ರಾಜ್ಯಗಳಲ್ಲಿ ಅಕ್ರಮ ಗಾಂಜಾ ಕೃಷಿಯನ್ನು ತಡೆಯುವಂತೆಯೂ ನಿರ್ದೇಶನ ನೀಡಲಾಯಿತು.
ಅರುಣಾಚಲ ಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರದಂತಹ 11 ರಾಜ್ಯಗಳ ಸವಾಲಿನ ಪ್ರದೇಶಗಳಲ್ಲಿ ಮತಗಟ್ಟೆ ತಂಡಗಳನ್ನು ಸಾಗಿಸಲು ಭಾರತೀಯ ವಾಯುಪಡೆ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಬೆಂಬಲವನ್ನು ಆಯೋಗವು ಪರಿಶೀಲಿಸಿತು. ಸಂಭಾವ್ಯ ಬೆದರಿಕೆಯ ಆಧಾರದ ಮೇಲೆ ವಿಶೇಷವಾಗಿ ಛತ್ತೀಸಗಢ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ರಾಜಕೀಯ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ರಕ್ಷಿಸಲು ಸಾಕಷ್ಟು ಭದ್ರತಾ ಕ್ರಮಗಳಿಗೆ ನಿರ್ದೇಶನಗಳನ್ನು ನೀಡಲಾಯಿತು, ಮಣಿಪುರದಲ್ಲಿ ಇತ್ತೀಚಿನ ಹಿಂಸಾಚಾರ ಮತ್ತು ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಶಾಂತಿಯುತ ಚುನಾವಣೆಗಳನ್ನು ನಡೆಸುವ ಬಗ್ಗೆಯೂ ಪರಿಶೀಲಿಸಲಾಯಿತು, ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ಕೈಗೊಳ್ಳುವಂತೆ ಆಯೋಗವು ಸೂಚಿಸಿತು.
ಕೆಳಗಿನ ಸಾಮಾನ್ಯ ನಿರ್ದೇಶನಗಳನ್ನು ನೀಡಲಾಯಿತು:
ಕಾನೂನು ಮತ್ತು ಸುವ್ಯವಸ್ಥೆ
1. ಕಟ್ಟುನಿಟ್ಟಾದ ಕಣ್ಗಾವಲಿಗಾಗಿ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಗಡಿಗಳಲ್ಲಿ ಸಂಯೋಜಿತ ಚೆಕ್ ಪೋಸ್ಟ್ ಗಳು
2. ಗಡಿ ಜಿಲ್ಲೆಗಳ ನಡುವೆ ಅಪರಾಧಿಗಳು ಮತ್ತು ಸಮಾಜ ವಿರೋಧಿ ಶಕ್ತಿಗಳ ಕುರಿತ ಗುಪ್ತಚರ ಮಾಹಿತಿ ಹಂಚಿಕೆ
3. ನಕಲಿ ಮತದಾನವನ್ನು ತಡೆಗಟ್ಟಲು ಕೊನೆಯ 48 ಗಂಟೆಗಳಲ್ಲಿ ಅಂತರ-ರಾಜ್ಯ ಗಡಿಗಳನ್ನು ಮುಚ್ಚುವುದು
4. ಗಡಿ ಜಿಲ್ಲೆಗಳ ನಿಯಮಿತ ಅಂತರ-ರಾಜ್ಯ ಸಮನ್ವಯ ಸಭೆಗಳು
5. ರಾಜ್ಯ ಪೊಲೀಸರಿಂದ ಅಂತರರಾಜ್ಯ ಗಡಿ ಜಿಲ್ಲೆಗಳಲ್ಲಿ ಗಸ್ತು ತೀವ್ರಗೊಳಿಸುವುದು
6. ಗಡಿ ರಾಜ್ಯಗಳ ಸಮನ್ವಯದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ನಾಕಾಬಂದಿಗಳನ್ನು ಸ್ಥಾಪಿಸುವುದು
7. ಮತದಾನದ ದಿನದಂದು ಅಂತರ-ರಾಜ್ಯ ಗಡಿಯನ್ನು ಮುಚ್ಚುವುದು
8. ಗಡಿಯಲ್ಲಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಬಕಾರಿ ಆಯುಕ್ತರು ಪರವಾನಿಗೆಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ಗಡಿ ಜಿಲ್ಲೆಗಳ ಮದ್ಯದ ಅಂಗಡಿಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸುವುದು
9. ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ ಸಕಾಲಿಕ ಠೇವಣಿ ಮತ್ತು ಜಾಮೀನು ರಹಿತ ವಾರಂಟ್ ಗಳನ್ನು ಜಾರಿಗೊಳಿಸುವುದು
10. ಚುನಾವಣಾ ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿರುವವರು , ರೌಡಿ ಶೀಟರ್ ಗಳು, ಅಪರಾಧಿಗಳ ವಿರುದ್ಧ ಕ್ರಮ
11. ಸಂಭಾವ್ಯ ಬೆದರಿಕೆಯ ಆಧಾರದ ಮೇಲೆ ರಾಜಕೀಯ ಕಾರ್ಯಕರ್ತರು/ಅಭ್ಯರ್ಥಿಗಳಿಗೆ ಸಾಕಷ್ಟು ಭದ್ರತೆ ಒದಗಿಸುವುದು
ವೆಚ್ಚ ಮೇಲ್ವಿಚಾರಣೆ
1. ಅಂತರ-ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಅಕ್ರಮ ಮದ್ಯ, ನಗದು, ಮಾದಕ ವಸ್ತುಗಳ ಸಾಗಾಟವನ್ನು ತಡೆಯುವುದು.
2. ಸಿಸಿಟಿವಿ ಕ್ಯಾಮೆರಾ ಅಳವಡಿಕೆಯೊಂದಿಗೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಲಪಡಿಸುವುದು
3. ಪೊಲೀಸ್, ಅಬಕಾರಿ, ಸಾರಿಗೆ, ಜಿ ಎಸ್ ಟಿ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ತಪಾಸಣೆ ಮತ್ತು ಕಾರ್ಯಾಚರಣೆಗಳನ್ನು ನಡೆಸುವುದು
4. ಹೆಲಿಪ್ಯಾಡ್ ಗಳು, ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಟ್ಟುನಿಟ್ಟಾದ ಜಾಗರೂಕತೆ ವಹಿಸುವುದು
5. ಮದ್ಯ ಮತ್ತು ಮಾದಕ ವಸ್ತುಗಳ ಸಾಗಣೆದಾರರ ವಿರುದ್ಧ ಕಠಿಣ ಕ್ರಮ; ದೇಶೀಯ ಮದ್ಯದ ಹರಿವಿಗೆ ಕಡಿವಾಣ; ಅದನ್ನು ವ್ಯವಸ್ಥಿತವಾಗಿ ತಡೆಯಲು ಮುಂದಿನ ಮತ್ತು ಹಿಂದಿನ ಸಂಪರ್ಕಗಳನ್ನು ಮುಚ್ಚುವುದು
6. ಮದ್ಯ, ನಗದು, ಡ್ರಗ್ಸ್ ಮತ್ತು ಉಚಿತ ವಸ್ತುಗಳ ಸಾಗಣೆಗೆ ಬಳಸುವ ಸೂಕ್ಷ್ಮ ಮಾರ್ಗಗಳನ್ನು ಪತ್ತೆ ಹಚ್ಚುವುದು
ಕೇಂದ್ರೀಯ ಏಜೆನ್ಸಿಗಳಿಗೆ ನಿರ್ದೇಶನಗಳು
1. ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸಾಂ ರೈಫಲ್ಸ್; ವಿಶೇಷವಾಗಿ ನೇಪಾಳದೊಂದಿಗೆ ಸೂಕ್ಷ್ಮ ಗಡಿಯನ್ನು ಹೊಂದಿರುವ ಪ್ರದೇಶಗಳ ಭಾರತ-ನೇಪಾಳ ಗಡಿಯಲ್ಲಿ ಎಸ್ ಎಸ್ ಬಿ; ಭಾರತ-ಬಾಂಗ್ಲಾದೇಶ ಮತ್ತು ಪಶ್ಚಿಮ ಗಡಿಗಳಲ್ಲಿ ಬಿ ಎಸ್ ಎಫ್; ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ಮತ್ತು ಕರಾವಳಿ ಪ್ರದೇಶದ ರಾಜ್ಯಗಳಲ್ಲಿ ಭಾರತೀಯ ಕರಾವಳಿ ಕಾವಲುಪಡೆಗಳಿಂದ ಕಟ್ಟುನಿಟ್ಟಿನ ಕಣ್ಗಾವಲು.
2. ರಾಜ್ಯ ಪೊಲೀಸ್, ಸಿಎಪಿಎಫ್ ಇತ್ಯಾದಿಗಳೊಂದಿಗೆ ಅಸ್ಸಾಂ ರೈಫಲ್ಸ್ ನಿಯಮಿತ ಜಂಟಿ ಭದ್ರತಾ ಸಮನ್ವಯ ಸಭೆಗಳನ್ನು ನಡೆಸುವುದು
3. ಯಾವುದೇ ಅಕ್ರಮ ಚಟುವಟಿಕೆಗಾಗಿ ವಿಶೇಷವಾಗಿ ಮತದಾನದ 72 ಗಂಟೆಗಳ ಮೊದಲು ನೇಪಾಳ ಮತ್ತು ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಗಳ ಮೇಲೆ ಎಸ್ ಎಸ್ ಬಿ ಯಿಂದ ಕಟ್ಟುನಿಟ್ಟಾದ ನಿಗಾ ಇರಿಸುವುದು
4. ನಾಗರಿಕ ಆಡಳಿತದೊಂದಿಗೆ ಸಮನ್ವಯದೊಂದಿಗೆ ಹೊಸದಾಗಿ ಸೇರ್ಪಡೆಗೊಂಡ ಸಿಎಪಿಎಫ್ ತಂಡಗಳಿಗೆ ಪ್ರದೇಶದ ಪರಿಚಿತತೆಯನ್ನು ಖಚಿತಪಡಿಸಿಕೊಳ್ಳುವುದು
5. ರಾಜ್ಯ ಪೊಲೀಸರೊಂದಿಗೆ ಸಮನ್ವಯದೊಂದಿಗೆ ಜಂಟಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸುವುದು
ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾ ನಿರ್ದೇಶಕರು, ಪ್ರಧಾನ ಕಾರ್ಯದರ್ಶಿ (ಗೃಹ), ಪ್ರಧಾನ ಕಾರ್ಯದರ್ಶಿ (ಅಬಕಾರಿ), ಮುಖ್ಯ ಚುನಾವಣಾ ಅಧಿಕಾರಿ ಮತ್ತು ರಾಜ್ಯ ಪೊಲೀಸ್ ನೋಡಲ್ ಅಧಿಕಾರಿಗಳು, ಗಡಿ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಸಶಸ್ತ್ರ ಸೀಮಾ ಬಲ, ಇಂಡೋ ಟಿಬೆಟಿಯನ್ ಗಡಿ ಪೋಲೀಸ್ ಮತ್ತು ಕರಾವಳಿ ಕಾವಲುಪಡೆಯ ಜೊತೆಗೆ ಸಿ ಆರ್ ಪಿ ಎಫ್ ಮುಖ್ಯಸ್ಥರು, ಕೇಂದ್ರ ಸಿಎಪಿಎಫ್ ನೋಡಲ್ ಅಧಿಕಾರಿ, ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ರಕ್ಷಣಾ ಮತ್ತು ರೈಲ್ವೇ ಸಚಿವಾಲಯದ ಪ್ರತಿನಿಧಿಗಳು ಗಡಿ ಕಾಯುವಲ್ಲಿ ತೊಡಗಿರುವ ಕೇಂದ್ರೀಯ ಏಜೆನ್ಸಿಗಳ ಮುಖ್ಯಸ್ಥರು ಈ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
*****
(Release ID: 2017104)
Visitor Counter : 172
Read this release in:
Marathi
,
Tamil
,
Telugu
,
Malayalam
,
Bengali-TR
,
Khasi
,
English
,
Urdu
,
Hindi
,
Assamese
,
Punjabi
,
Gujarati
,
Odia