ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ಬೇಗುಸರಾಯ್‌ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

Posted On: 02 MAR 2024 7:39PM by PIB Bengaluru

ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಅವರೇ, ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರೇ, ಸಂಪುಟದ ನನ್ನ ಸಹೋದ್ಯೋಗಿಗಳಾದ ಗಿರಿರಾಜ್ ಸಿಂಗ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರೇ, ಉಪ ಮುಖ್ಯಮಂತ್ರಿಗಳಾದ ವಿಜಯ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಅವರೇ, ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಗೌರವಾನ್ವಿತ ಗಣ್ಯರೇ ಮತ್ತು ಬೇಗುಸರಾಯ್‌ನ ನನ್ನ ಉತ್ಸಾಹಿ ಸಹೋದರ-ಸಹೋದರಿಯರೇ!

ʻಜೈ ಮಂಗಲ ಘರ್ ಮಂದಿರʼ ಮತ್ತು ನೌಲಾಖಾ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ. ಇಂದು, ನಾನು 'ವಿಕಸಿತ ಭಾರತ'ಕ್ಕಾಗಿ(ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ) 'ವಿಕಸಿತ ಬಿಹಾರʼದ(ಅಭಿವೃದ್ಧಿ ಹೊಂದಿದ ಬಿಹಾರ) ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಬೇಗುಸರಾಯ್‌ಗೆ ಬಂದಿದ್ದೇನೆ. ಇಷ್ಟು ದೊಡ್ಡ ಜನಸಮೂಹವನ್ನು ಭೇಟಿಯಾಗುವುದು ನನ್ನ ಸೌಭಾಗ್ಯ.

ಸ್ನೇಹಿತರೇ,

ಬೇಗುಸರಾಯ್‌ನ ಈ ಭೂಮಿ ಪ್ರತಿಭಾವಂತ ಯುವಕರಿಗೆ ಸೇರಿದ್ದಾಗಿದೆ. ಈ ಭೂಮಿ ಸದಾ ದೇಶದ ರೈತರು ಮತ್ತು ಕಾರ್ಮಿಕರನ್ನು ಬಲಪಡಿಸಿದೆ. ಇಂದು, ಈ ಭೂಮಿಯ ಹಳೆಯ ವೈಭವವು ಮರಳುತ್ತಿದೆ. ಇಂದು, ಬಿಹಾರ ಮತ್ತು ಇಡೀ ದೇಶಕ್ಕೆ 1 ಲಕ್ಷ 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಒಂದೂವರೆ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳು! ಈ ಹಿಂದೆ, ಇಂತಹ ಕಾರ್ಯಕ್ರಮಗಳು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿದ್ದವು, ಆದರೆ ಇಂದು ಮೋದಿ ದೆಹಲಿಯನ್ನು ಬೇಗುಸರಾಯ್‌ಗೆ ಹೊತ್ತು ತಂದಿದ್ದಾರೆ. ಮತ್ತು ಸರಿಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಬಿಹಾರಕ್ಕೆ ಮಾತ್ರ ಸೇರಿದವೆಂಬುದು ಗಮನಾರ್ಹ. ಒಂದೇ ಕಾರ್ಯಕ್ರಮದಲ್ಲಿ ಸರ್ಕಾರವು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದು ಭಾರತದ ಸಾಮರ್ಥ್ಯ ಯಾವ ಮಟ್ಟದಲ್ಲಿ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ. ಇದು ಬಿಹಾರದ ಯುವಕರಿಗೆ ಇಲ್ಲಿಯೇ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇಂದಿನ ಯೋಜನೆಗಳು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಸಾಧನಗಳಾಗಿವೆ. ದಯವಿಟ್ಟು ತಾಳ್ಮೆಯಿಂದಿರಿ, ಸಹೋದರರೇ, ನಿಮ್ಮ ಪ್ರೀತಿಯನ್ನು ನಾನು  ಸ್ವೀಕರಿಸಿದ್ದೇನೆ, ದಯವಿಟ್ಟು ಕಾಯಿರಿ, ಕುಳಿತುಕೊಳ್ಳಿ, ಕುರ್ಚಿಗಳ ಮೇಲೆ ನಿಲ್ಲದೆ ಕೆಳಗಿಳಿಯಿರಿ, ದಯವಿಟ್ಟು, ನಾನು ನಿಮ್ಮನ್ನು ವಿನಂತಿಸುತ್ತೇನೆ, ಕುಳಿತುಕೊಳ್ಳಿ... ಹೌದು. ದಯವಿಟ್ಟು ಕುಳಿತುಕೊಳ್ಳಿ, ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ, ಇಲ್ಲದಿದ್ದರೆ, ನೀವು ಆಯಾಸಗೊಳ್ಳುತ್ತೀರಿ. ಇಂದಿನ ಯೋಜನೆಗಳು ಬಿಹಾರದಲ್ಲಿ ಅನುಕೂಲ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ. ಇಂದು, ಬಿಹಾರಕ್ಕೂ ಹೊಸ ರೈಲು ಸೇವೆಗಳು ದೊರೆತಿವೆ. ಅದಕ್ಕಾಗಿಯೇ ಇಂದು ದೇಶವು ಪೂರ್ಣ ವಿಶ್ವಾಸದಿಂದ ಹೇಳುತ್ತಿದೆ, ಪ್ರತಿ ಮಗುವೂ ಹೇಳುತ್ತಿದೆ, ಹಳ್ಳಿಗಳು ಸಹ ಹೇಳುತ್ತಿವೆ - 'ಅಬ್‌ ಕಿ ಬಾರ್ 400 ಪಾರ್, ಅಬ್‌ ಕಿ ಬಾರ್ 400 ಪಾರ್, ಅಬ್‌ ಕಿ  ಬಾರ್ 400 ಪಾರ್, ʻಎನ್‌ಡಿಎʼ ಸರ್ಕಾರ 400 ಪಾರ್ (ಈ ಬಾರಿ 400 ಸ್ಥಾನಗಳನ್ನು ಮೀರಿ)!'

ಸ್ನೇಹಿತರೇ,

2014ರಲ್ಲಿ ನೀವು ʻಎನ್‌ಡಿಎʼಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಪೂರ್ವ ಭಾರತದ ತ್ವರಿತ ಅಭಿವೃದ್ಧಿ ನಮ್ಮ ಆದ್ಯತೆ ಎಂದು ನಾನು ಹೇಳಿದ್ದೆ. ಬಿಹಾರ ಮತ್ತು ಪೂರ್ವ ಭಾರತವು ಅಭಿವೃದ್ಧಿ ಹೊಂದಿದಾಗಲೆಲ್ಲಾ ದೇಶವೂ ಬಲಗೊಳ್ಳುತ್ತದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಬಿಹಾರದಲ್ಲಿ ಪರಿಸ್ಥಿತಿಗಳು ಹದಗೆಟ್ಟಾಗ, ಅದು ದೇಶದ ಮೇಲೂ ಬಹಳ ನಕಾರಾತ್ಮಕ ಪರಿಣಾಮ ಬೀರಿತು. ಆದ್ದರಿಂದ, ಬಿಹಾರದೊಂದಿಗೆ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಬೇಗುಸರಾಯ್‌ನಿಂದ ಬಿಹಾರದ ಜನರಿಗೆ ಹೇಳುತ್ತಿದ್ದೇನೆ. ಬಿಹಾರದ ನನ್ನ ಸಹೋದರ ಸಹೋದರಿಯರೇ, ನಿಮಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ, ಮತ್ತು ನಾನು ನಿಮ್ಮ ನಡುವೆ ಇರುವ ಈ ಸಂದರ್ಭದಲ್ಲಿ, ನಾನು ಪುನರುಚ್ಚರಿಸಲು ಬಯಸುತ್ತೇನೆ - ಇದು ಬರೀ ಭರವಸೆಯಲ್ಲ, ಇದು ಸಂಕಲ್ಪ, ಇದೊಂದು ಗಮ್ಯ ಯೋಜನೆ. ಇಂದು, ಬಿಹಾರಕ್ಕೆ ದೊರೆತಿರುವ ಯೋಜನೆಗಳು, ದೇಶಕ್ಕೆ ದೊರೆತಿರುವ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ಪೆಟ್ರೋಲಿಯಂ, ರಸಗೊಬ್ಬರ ಮತ್ತು ರೈಲ್ವೆಗೆ ಸಂಬಂಧಿಸಿವೆ. ಇಂಧನ, ರಸಗೊಬ್ಬರಗಳು ಮತ್ತು ಸಂಪರ್ಕವು ಅಭಿವೃದ್ಧಿಯ ಅಡಿಪಾಯವಾಗಿದೆ. ಅದು ಕೃಷಿಯಾಗಿರಲಿ ಅಥವಾ ಕೈಗಾರಿಕೆಯಾಗಿರಲಿ, ಎಲ್ಲವೂ ಅವರ ಮೇಲೆ ಅವಲಂಬಿತವಾಗಿದೆ. ಮತ್ತು ಈ ಕ್ಷೇತ್ರಗಳಲ್ಲಿ ಕೆಲಸವು ವೇಗವಾಗಿ ಪ್ರಗತಿ ಸಾಧಿಸಿದಾಗ, ಉದ್ಯೋಗಾವಕಾಶಗಳು ಹೆಚ್ಚಾಗುವುದು ಮತ್ತು ಉದ್ಯೋಗವು ಸೃಷ್ಟಿಯಾಗುವುದು ಸ್ವಾಭಾವಿಕ. ಬರೌನಿಯಲ್ಲಿ ಮುಚ್ಚಲ್ಪಟ್ಟ ರಸಗೊಬ್ಬರ ಕಾರ್ಖಾನೆ ನೆನಪಿದೆಯೇ? ಅದನ್ನು ಮತ್ತೆ ತೆರೆಯುವ ಭರವಸೆಯನ್ನು ನಾನು ನೀಡಿದ್ದೆ. ನಿಮ್ಮ ಆಶೀರ್ವಾದದಿಂದ ಮೋದಿ ಆ ಭರವಸೆಯನ್ನು ಈಡೇರಿಸಿದ್ದಾರೆ. ಇದು ಬಿಹಾರ ಮತ್ತು ಇಡೀ ದೇಶದಾದ್ಯಂತ ರೈತರ ಪಾಲಿಗೆ ದೊಡ್ಡ ಸಾಧನೆ ಹೌದು. ಹಿಂದಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ, ಬರೌನಿ, ಸಿಂದ್ರಿ, ಗೋರಖ್‌ಪುರ ಮತ್ತು ರಾಮಗುಂಡಂನಲ್ಲಿನ ಕಾರ್ಖಾನೆಗಳು ಮುಚ್ಚಲ್ಪಟ್ಟವು ಮತ್ತು ಯಂತ್ರಗಳು ತುಕ್ಕು ಹಿಡಿಯುತ್ತಿದ್ದವು. ಇಂದು, ಈ ಎಲ್ಲಾ ಕಾರ್ಖಾನೆಗಳು ಯೂರಿಯಾದಲ್ಲಿ ಭಾರತದ ಸ್ವಾವಲಂಬನೆಯ ಹೆಮ್ಮೆಯಾಗುತ್ತಿವೆ. ಅದಕ್ಕಾಗಿಯೇ ದೇಶ ಹೇಳುತ್ತದೆ - ಮೋದಿಯವರ ಗ್ಯಾರಂಟಿ ಎಂದರೆ ಖಾತರಿಯ ಗ್ಯಾರಂಟಿ!

ಸ್ನೇಹಿತರೇ,

ಇಂದು, ಬರೌನಿ ಸಂಸ್ಕರಣಾಗಾರದ ಸಾಮರ್ಥ್ಯದ ವಿಸ್ತರಣಾ ಕಾರ್ಯ ಪ್ರಾರಂಭವಾಗಿದೆ. ಇದರ ನಿರ್ಮಾಣದ ಸಮಯದಲ್ಲಿ, ಸಾವಿರಾರು ಕಾರ್ಮಿಕರು ತಿಂಗಳುಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಕರಣಾಗಾರವು ಬಿಹಾರದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ಭಾರತವು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಕಳೆದ 10 ವರ್ಷಗಳಲ್ಲಿ ಬಿಹಾರವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ 65 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಸ್ವೀಕರಿಸಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ, ಅವುಗಳಲ್ಲಿ ಅನೇಕವು ಈಗಾಗಲೇ ಪೂರ್ಣಗೊಂಡಿವೆ. ಬಿಹಾರದ ಪ್ರತಿಯೊಂದು ಮೂಲೆಯನ್ನು ತಲುಪುವ ಅನಿಲ ಕೊಳವೆ ಮಾರ್ಗಗಳ ಜಾಲವು ಸಹೋದರಿಯರಿಗೆ ಕೈಗೆಟುಕುವ ದರದಲ್ಲಿ ಅನಿಲವನ್ನು ಒದಗಿಸಲು ಸಹಾಯ ಮಾಡುತ್ತಿದೆ. ಇದು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದನ್ನು ಸುಲಭಗೊಳಿಸುತ್ತಿದೆ.

ಸ್ನೇಹಿತರೇ,

ಇಂದು, ನಾವು 'ಆತ್ಮನಿರ್ಭರ ಭಾರತ'ಕ್ಕೆ(ಸ್ವಾವಲಂಬಿ ಭಾರತ) ಸಂಬಂಧಿಸಿದ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ. ಕರ್ನಾಟಕದ ʻಕೆ.ಜಿ ಜಲಾನಯನʼ ಪ್ರದೇಶದಿಂದ ತೈಲ ಉತ್ಪಾದನೆ ಪ್ರಾರಂಭವಾಗಿದೆ. ಇದು ಕಚ್ಚಾ ತೈಲದ ಆಮದು ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಸ್ನೇಹಿತರೇ,

ರಾಷ್ಟ್ರ ಮತ್ತು ರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಬಲವಾದ ಸರ್ಕಾರಗಳು ಮಾತ್ರ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಕುಟುಂಬ ಹಿತಾಸಕ್ತಿಗಳು ಮತ್ತು ಮತ ಬ್ಯಾಂಕ್‌ಗಳಿಗೆ ಬದ್ಧವಾಗಿರುವ ಸರ್ಕಾರಗಳಿಂದಾಗಿ ಬಿಹಾರವು ಬಹಳ ತೊಂದರೆ ಅನುಭವಿಸಿದೆ. ಪರಿಸ್ಥಿತಿಗಳು 2005ರ ಮೊದಲು ಇದ್ದಂತೆಯೇ ಇದ್ದಿದ್ದರೆ, ಬಿಹಾರದಲ್ಲಿ ಶತಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸುವ ಮೊದಲು ನೂರು ಬಾರಿ ಯೋಚಿಸಬೇಕಾಗುತ್ತದೆ. ರಸ್ತೆಗಳು, ವಿದ್ಯುತ್, ನೀರು ಮತ್ತು ರೈಲ್ವೆಗಳ ಸ್ಥಿತಿಯ ಬಗ್ಗೆ ನನಗಿಂತ ನಿಮಗೇ ಹೆಚ್ಚು ತಿಳಿದಿದೆ. 2014ಕ್ಕಿಂತ ಹತ್ತು ವರ್ಷಗಳ ಮೊದಲು ರೈಲ್ವೆ ಹೆಸರಿನಲ್ಲಿ ರೈಲ್ವೆ ಸಂಪನ್ಮೂಲಗಳನ್ನು ಹೇಗೆ ಲೂಟಿ ಮಾಡಲಾಯಿತು ಎಂಬುದು ಇಡೀ ಬಿಹಾರಕ್ಕೆ ಗೊತ್ತಿದೆ. ಆದರೆ ಇಂದು ಅದನ್ನು ನೋಡಿ, ಭಾರತೀಯ ರೈಲ್ವೆಯ ಆಧುನೀಕರಣದ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಭಾರತೀಯ ರೈಲ್ವೆಯನ್ನು ವೇಗವಾಗಿ ವಿದ್ಯುದ್ದೀಕರಣಗೊಳಿಸಲಾಗುತ್ತಿದೆ. ನಮ್ಮ ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತಹ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ.

ಸ್ನೇಹಿತರೇ,

ಬಿಹಾರವು ದಶಕಗಳಿಂದ ಸ್ವಜನಪಕ್ಷಪಾತದ ಪರಿಣಾಮಗಳನ್ನು ಅನುಭವಿಸಿದೆ ಮತ್ತು ಸ್ವಜನಪಕ್ಷಪಾತದ ಕುಟುಕುವಿಕೆಯನ್ನು ಸಹಿಸಿಕೊಂಡಿದೆ. ಸ್ವಜನಪಕ್ಷಪಾತ ಮತ್ತು ಸಾಮಾಜಿಕ ನ್ಯಾಯವು ಪರಸ್ಪರ ವಿರೋಧಾಭಾಸವಾಗಿದೆ. ಸ್ವಜನಪಕ್ಷಪಾತವು ಸಾಮಾಜಿಕ ನ್ಯಾಯದ ದೊಡ್ಡ ಶತ್ರುವಾಗಿದೆ, ವಿಶೇಷವಾಗಿ ಯುವಕರು ಮತ್ತು ಪ್ರತಿಭೆಗಳಿಗೆ. ಇದು ಭಾರತರತ್ನ ಕರ್ಪೂರಿ ಠಾಕೂರ್ ಜೀ ಅವರ ಶ್ರೀಮಂತ ಪರಂಪರೆಯನ್ನು ಹೊಂದಿರುವ ಬಿಹಾರ. ನಿತೀಶ್ ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ಈ ಪರಂಪರೆಯನ್ನು ಮುಂದುವರಿಸುತ್ತಿದೆ. ಮತ್ತೊಂದೆಡೆ, ಆರ್‌ಜೆಡಿ-ಕಾಂಗ್ರೆಸ್ ಮೈತ್ರಿ ಆಳವಾಗಿ ಬೇರೂರಿರುವ ಸ್ವಜನಪಕ್ಷಪಾತವನ್ನು ಪ್ರತಿನಿಧಿಸುತ್ತದೆ. ಆರ್‌ಜೆಡಿ-ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿರುವ ಜನರು ತಮ್ಮ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ದಲಿತರು, ಸಮಾಜದ ಅಂಚಿನಲ್ಲಿರುವ ಮತ್ತು ಹಿಂದುಳಿದ ಸಮುದಾಯಗಳನ್ನು ದಾಳಗಳಾಗಿ ಬಳಸುತ್ತಾರೆ. ಇದು ಸಾಮಾಜಿಕ ನ್ಯಾಯವಲ್ಲ, ಸಮಾಜದ ನಂಬಿಕೆಗೆ ಮಾಡಿದ ದ್ರೋಹ. ಇಲ್ಲದಿದ್ದರೆ, ಕೇವಲ ಒಂದು ಕುಟುಂಬವು ಸಶಕ್ತವಾಗಲು ಮತ್ತು ಸಮಾಜದ ಉಳಿದ ಕುಟುಂಬಗಳು ಹಿಂದೆ ಉಳಿಯಲು ಕಾರಣವೇನು? ಉದ್ಯೋಗ ಒದಗಿಸುವ ನೆಪದಲ್ಲಿ, ಇಲ್ಲಿನ ಒಂದು ಕುಟುಂಬದ ಲಾಭಕ್ಕಾಗಿ ಯುವಕರಿಗೆ ಸೇರಿದ ಭೂಮಿಯನ್ನು ಹೇಗೆ ಅತಿಕ್ರಮಿಸಲಾಗಿದೆ ಎಂಬುದನ್ನು ದೇಶವು ನೋಡಿದೆ.

ಸ್ನೇಹಿತರೇ,

ನಿಜವಾದ ಸಾಮಾಜಿಕ ನ್ಯಾಯವು ಪರಿಪೂರ್ಣತೆಯ ಮೂಲಕ ಬರುತ್ತದೆ. ನಿಜವಾದ ಸಾಮಾಜಿಕ ನ್ಯಾಯವು ತೃಪ್ತಿಯಿಂದ ಬರುತ್ತದೆಯೇ ಹೊರತು ತುಷ್ಟೀಕರಣದ ಮೂಲಕ ಅಲ್ಲ. ಮೋದಿ ಅವರು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಉಚಿತ ಪಡಿತರವು ಪ್ರತಿ ಫಲಾನುಭವಿಗೆ ತಲುಪಿದಾಗ, ಪ್ರತಿ ಬಡ ಫಲಾನುಭವಿಗೆ ಶಾಶ್ವತ ಮನೆ ದೊರೆತಾಗ, ಪ್ರತಿ ಸಹೋದರಿಗೆ ತನ್ನ ಮನೆಯಲ್ಲಿ ಗ್ಯಾಸ್, ನೀರಿನ ಸಂಪರ್ಕ ಮತ್ತು ಶೌಚಾಲಯ ಲಭ್ಯವಾದಾಗ, ಕಡು ಬಡವರು ಸಹ ಉತ್ತಮ ಮತ್ತು ಉಚಿತ ಆರೋಗ್ಯ ರಕ್ಷಣೆಯನ್ನು ಪಡೆದಾಗ, ಪ್ರತಿಯೊಬ್ಬ ರೈತ ಫಲಾನುಭವಿಯೂ ಅವರ ಬ್ಯಾಂಕ್ ಖಾತೆಗಳಿಗೆ ʻಕಿಸಾನ್‌ ಸಮ್ಮಾನ್ʼ ನಿಧಿಯನ್ನು ಪಡೆದಾಗ, ಆಗ ಸಂತೃಪ್ತತೆ ಮೂಡುತ್ತದೆ. ಮತ್ತು ಇದು ನಿಜವಾದ ಸಾಮಾಜಿಕ ನ್ಯಾಯ. ಕಳೆದ 10 ವರ್ಷಗಳಲ್ಲಿ, ಮೋದಿಯವರ ಭರವಸೆಯು ಹಲವಾರು ಕುಟುಂಬಗಳನ್ನು ತಲುಪಿದೆ, ಅವರಲ್ಲಿ ಹೆಚ್ಚಿನವರು ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರು. ಅವರೆಲ್ಲರೂ ನನ್ನ ಕುಟುಂಬವೇ.

ಸ್ನೇಹಿತರೇ,

ನಮಗೆ ಸಾಮಾಜಿಕ ನ್ಯಾಯ ಎಂದರೆ ಮಹಿಳೆಯರ ಸಬಲೀಕರಣ. ನನ್ನನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯ ನನ್ನ ತಾಯಂದಿರು ಮತ್ತು ಸಹೋದರಿಯರು ಇಲ್ಲಿಗೆ ಬಂದಿರುವುದಕ್ಕೆ ಒಂದು ಕಾರಣವಿದೆ. ಕಳೆದ 10 ವರ್ಷಗಳಲ್ಲಿ ನಾವು ಒಂದು ಕೋಟಿ ಸಹೋದರಿಯರನ್ನು 'ಲಕ್ಷಾಧಿಪತಿ ದೀದಿ'ಯರನ್ನಾಗಿ ಮಾಡಿದ್ದೇವೆ. ಬಿಹಾರದಲ್ಲಿ ಲಕ್ಷಾಂತರ ಸಹೋದರಿಯರು ಈಗ 'ಲಕ್ಷಾಧಿಪತಿ  ದೀದಿ'ಯರಾಗಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಈಗ ಮೋದಿ ಅವರು ಮೂರು ಕೋಟಿ ಸಹೋದರಿಯರನ್ನು 'ಲಕ್ಷಾಧಿಪತಿ ದೀದಿʼಯರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಈ ಅಂಕಿ-ಅಂಶವನ್ನು ನೆನಪಿಡಿ - ಮೂರು ಕೋಟಿ ಸಹೋದರಿಯರು 'ಲಕ್ಷಾಧಿಪತಿ ದೀದಿʼಯರು! ಇತ್ತೀಚೆಗೆ, ನಾವು ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ತರಲು ಮತ್ತು ವಿದ್ಯುತ್‌ನಿಂದ ಆದಾಯವನ್ನು ಉತ್ಪಾದಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದನ್ನು ʻಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ ಎಂದು ಕರೆಯಲಾಗುತ್ತದೆ. ಇದು ಬಿಹಾರದ ಅನೇಕ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಬಿಹಾರದ ಎನ್‌ಡಿಎ ಸರ್ಕಾರವು ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಪ್ರತಿಯೊಬ್ಬರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಡಬಲ್ ಎಂಜಿನ್‌ನ ಡಬಲ್ ಪ್ರಯತ್ನದಿಂದ ಬಿಹಾರ ಅಭಿವೃದ್ಧಿಯಾಗಲಿದೆ. ಇಂದು, ನಾವು ಅಭಿವೃದ್ಧಿಯ ಅಂತಹ ದೊಡ್ಡ ಹಬ್ಬವನ್ನು ಆಚರಿಸುತ್ತಿದ್ದೇವೆ ಮತ್ತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರುವ ಮೂಲಕ ಅಭಿವೃದ್ಧಿಯ ಹಾದಿಯನ್ನು ಬಲಪಡಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ. ಕೋಟಿ ರೂಪಾಯಿ ಮೌಲ್ಯದ ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ತಾಯಂದಿರು ಮತ್ತು ಸಹೋದರಿಯರಿಗೆ ನಾನು ವಿಶೇಷವಾಗಿ ನಮಸ್ಕರಿಸುತ್ತೇನೆ. ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ - ಜೈ!

ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಗಟ್ಟಿಯಾಗಿ ಹೇಳಿ -

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಅನಂತ ಧನ್ಯವಾದಗಳು.

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

 

*****

 



(Release ID: 2012639) Visitor Counter : 38