ಪ್ರಧಾನ ಮಂತ್ರಿಯವರ ಕಛೇರಿ
'ವಿಕಸಿತ ಭಾರತ ವಿಕಸಿತ ಛತ್ತೀಸ್‌ಗಢ' ಕಾರ್ಯಕ್ರಮದಲ್ಲಿನ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಪ್ರಸ್ತುತಿ
Posted On:
24 FEB 2024 2:50PM by PIB Bengaluru
ಜೈ ಜೋಹರ್!
ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಜಿ ಅವರೇ, ಛತ್ತೀಸ್‌ಗಢದ ಮಂತ್ರಿಗಳೇ, ಇತರೇ ಜನ ಪ್ರತಿನಿಧಿಗಳೆ ಮತ್ತು ಛತ್ತೀಸ್‌ಗಢದ ನನ್ನ ಪ್ರೀತಿಯ ಜನರೇ! ಛತ್ತೀಸ್ ಗಢ ರಾಜ್ಯಾದ್ಯಂತ 90 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಮೊದಲನೆಯದಾಗಿ, ಛತ್ತೀಸ್‌ಗಢದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಮಾಯಿಸಿರುವ ನನ್ನ ಲಕ್ಷಾಂತರ ಕುಟುಂಬ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೀವು ನಮಗೆ ಹೇರಳವಾಗಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದದ ಫಲವಾಗಿಯೇ ಇಂದು ನಾವು ‘ವಿಕಸಿತ ಛತ್ತೀಸ್‌ಗಢ’ ಎಂಬ ಸಂಕಲ್ಪದೊಂದಿಗೆ ನಿಮ್ಮ ಮಧ್ಯೆ ಇದ್ದೇವೆ. ಈ ಪರಿಕಲ್ಪನೆಯನ್ನು ಬಿಜೆಪಿ ಹುಟ್ಟು ಹಾಕಿದೆ ಮತ್ತು ಅದನ್ನು ಸಾಕಾರಗೊಳಿಸುತ್ತದೆ ಕೂಡ. ಇಂದಿನ ಈ ಕಾರ್ಯಕ್ರಮ ಈ ಸಂಕಲ್ಪವನ್ನು ಪುನರುಚ್ಚರಿಸುತ್ತಿದೆ.
ಸ್ನೇಹಿತರೇ,
ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಗೊಳಿಸುವ ಮೂಲಕ 'ವಿಕಸಿತ ಛತ್ತೀಸ್‌ಗಢ' ಸಂಕಲ್ಪವನ್ನು ಸಾಕಾರಗೊಲಿಸಬಹುದಾಗಿದೆ. ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ 'ವಿಕಸಿತ ಛತ್ತೀಸ್‌ಗಢ'ದ ಅಡಿಪಾಯವನ್ನು ಬಲಪಡಿಸಲಾಗುವುದು. ಅದಕ್ಕಾಗಿಯೇ ಇಂದು ಛತ್ತೀಸ್‌ಗಢದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು 35,000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ನಡೆದಿದೆ. ಈ ಯೋಜನೆಗಳು ಕಲ್ಲಿದ್ದಲು, ಸೌರ ಶಕ್ತಿ, ವಿದ್ಯುತ್ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳನ್ನು ಒಳಗೊಂಡಿವೆ. ಈ ಯೋಜನೆಗಳು ಛತ್ತೀಸ್‌ಗಢದ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಹೊಸ ದಾರಿಗಳನ್ನು ಸೃಷ್ಟಿಸಲಿವೆ. ಈ ಯೋಜನೆಗಳನ್ನು ಪಡೆದುಕೊಳ್ಳುತ್ತಿರುವ ಛತ್ತೀಸ್‌ಗಢದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು.
ಸ್ನೇಹಿತರೇ
ಇಂದು, NTPC ಯ 1,600 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಹಂತದ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಇದೇ ಸಮಯದಲ್ಲಿ 1,600 ಮೆಗಾವ್ಯಾಟ್ ಸಾಮರ್ಥ್ಯದ ಹಂತ-ಎರಡಕ್ಕೂ ಅಡಿಪಾಯ ಹಾಕಲಾಗಿದೆ. ಈ ಸ್ಥಾವರಗಳು ರಾಜ್ಯದ ಜನರಿಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ನೀಡಲಿವೆ. ಛತ್ತೀಸ್‌ಗಢವನ್ನು ಸೌರಶಕ್ತಿಯ ಪ್ರಮುಖ ಕೇಂದ್ರವನ್ನಾಗಿ ಮಾಡುವ ಗುರಿಯನ್ನೂ ನಾವು ಹೊಂದಿದ್ದೇವೆ. ಇಂದು, ರಾಜನಂದಗಾಂವ್ ಮತ್ತು ಭಿಲಾಯಿಗಳಲ್ಲಿ ಬೃಹತ್ ಸಾಮರ್ಥ್ಯದ ಸೌರ ಸ್ಥಾವರಗಳನ್ನು ಉದ್ಘಾಟಿಸಲಾಗಿದೆ. ಈ ಸ್ಥಾವರಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ರಾತ್ರಿಯೂ ವಿದ್ಯುತ್ ಒದಗಿಸುವ ವ್ಯವಸ್ಥೆಗಳನ್ನು ಹೊಂದಿವೆ. ಸೌರಶಕ್ತಿಯ ಮೂಲಕ ಜನರಿಗೆ ವಿದ್ಯುತ್ ನೀಡುವುದು ಮಾತ್ರವಲ್ಲದೆ ಅವರ ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ತರುವುದು ಭಾರತ ಸರ್ಕಾರದ ಗುರಿಯಾಗಿದೆ. ಪ್ರತಿ ಮನೆಯೂ ಸೋಲಾರ್ ಹೋಮ್ (ಸೌರಶಕ್ತಿ ಬಳಸುವ ಮನೆ) ಆಗಬೇಕೆಂಬುದು ಮೋದಿ ಬಯಕೆ. ಮನೆಯಲ್ಲಿ ವಿದ್ಯುತ್ ಉತ್ಪಾದಿಸುವುದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಪ್ರತಿ ಕುಟುಂಬಕ್ಕೆ ಮತ್ತೊಂದು ಆದಾಯದ ಮೂಲವನ್ನು ಒದಗಿಸಲು ಮೋದಿ ಬಯಸುತ್ತಾರೆ. ಇದೇ ಗುರಿಯೊಂದಿಗೆ ನಾವು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಆರಂಭಿಕವಾಗಿ ಈ ಯೋಜನೆ ಒಂದು ಕೋಟಿ ಕುಟುಂಬಗಳನ್ನುಕವರ್ ಮಾಡಲಿದೆ. ಈ ಯೋಜನೆಯಡಿ, ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರವು ನೆರವು ನೀಡುತ್ತದೆ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪ್ರತಿಯೊಂದು ಕುಟುಂಬವು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲಿದೆ. ೩೦೦ ಯೂನಿಟ್ ಗಿಂತ ಹೆಚ್ಚಿಗೆ ಉತ್ಪಾದಿಸಿದರೆ ಆ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರವೇ ಖರೀದಿಸಲಿದೆ. ಇದರಿಂದ ಪ್ರತಿ ಕುಟುಂಬವೂ ಪ್ರತಿ ವರ್ಷ ಸಾವಿರಾರು ರೂಪಾಯಿಗಳನ್ನು ಗಳಿಸಲಿದೆ. ನಮ್ಮ ಸರಕಾರವು ರೈತರನ್ನು ಇಂಧನ ಉತ್ಪಾದಕರನ್ನಾಗಿ ಮಾಡುವತ್ತಲೂ ಗಮನ ಹರಿಸುತ್ತಿದೆ. ಸರ್ಕಾರವು ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಳ್ಳಲು ನೆರವು ನೀಡುವುದರ ಜೊತೆಗೆ ಹೊಲಗಳ ಅಂಚುಗಳಲ್ಲಿ ಅಥವಾ ಬಂಜರು ಭೂಮಿಯಲ್ಲಿ ಸಣ್ಣ ಗಾತ್ರದ ಸೋಲಾರ್ ಪ್ಲಾಂಟ್‌ಗಳನ್ನು ಸ್ಥಾಪಿಸುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ಛತ್ತೀಸ್‌ಗಢದ ಡಬಲ್ ಇಂಜಿನ್ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುತ್ತಿರುವ ರೀತಿ ಅತ್ಯಂತ ಶ್ಲಾಘನೀಯ. ಛತ್ತೀಸ್‌ಗಢದ ಲಕ್ಷಾಂತರ ರೈತರಿಗೆ ಈಗಾಗಲೇ ಎರಡು ವರ್ಷಗಳಿಂದ ಬಾಕಿ ಇರುವ ಬೋನಸ್ ನೀಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಟೆಂಡೂ ಎಲೆ ಕಲೆ ಹಾಕುವವರಿಗೆ ಕೂಲಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದೆ, ಡಬಲ್ ಇಂಜಿನ್ ಸರ್ಕಾರ ಈ ಭರವಸೆಯನ್ನೂ ಈಡೇರಿಸಿದೆ. ಹಿಂದಿನ ಕಾಂಗ್ರೆಸ್ ಸರಕಾರ ಬಡವರ ಮನೆ ನಿರ್ಮಾಣಕ್ಕೆ ಅಡ್ಡಿ ಮಾಡಿದ್ದು ಮಾತ್ರವಲ್ಲದೆ ಹಲವಾರು ಅಡೆತಡೆಗಳನ್ನು ಒಡ್ಡಿತ್ತು. ಇದೀಗ ಬಿಜೆಪಿ ಸರಕಾರ ಬಡವರಿಗೆ ಮನೆ ನಿರ್ಮಿಸುವ ಕೆಲಸವನ್ನೂ ತ್ವರಿತವಾಗಿ ಆರಂಭಿಸಿದೆ. ಸರ್ಕಾರವು ಹರ್ ಘರ್ ಜಲ್ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುತ್ತಿದೆ. ಪಿಎಸ್‌ಸಿ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.... ಮಹತಾರೀ ವಂದನಾ ಯೋಜನೆಗಾಗಿ ನಾನು ಛತ್ತೀಸ್‌ಗಢದ ಸಹೋದರಿಯರನ್ನು ಅಭಿನಂದಿಸ ಬಯಸುತ್ತೇನೆ. ಈ ಯೋಜನೆಯು ಲಕ್ಷಾಂತರ ಸಹೋದರಿಯರಿಗೆ ಪ್ರಯೋಜನ ತರಲಿದೆ. ಈ ಎಲ್ಲಾ ನಿರ್ಧಾರಗಳು ಬಿಜೆಪಿ ಹೇಳುವುದಷ್ಟೇ ಅಲ್ಲ ಹೇಳಿದ್ದನ್ನು ಮಾಡುತ್ತದೆ ಕೂಡ ಎಂಬುದನ್ನು ತೋರಿಸುತ್ತದೆ. ಅದಕ್ಕಾಗಿಯೇ ಮೋದಿ ಗ್ಯಾರಂಟಿ ಅಂದರೆ ಈಡೇರುವ ಗ್ಯಾರಂಟಿ ಎಂದು ಜನರು ಹೇಳುತ್ತಾರೆ.
ಸ್ನೇಹಿತರೇ,
ಛತ್ತೀಸ್‌ಗಢವು ಕಷ್ಟಪಟ್ಟು ದುಡಿಯುವ ರೈತರು, ಪ್ರತಿಭಾಶಾಲಿ ಯುವಕರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಭಂಡಾರವನ್ನೇ ಹೊಂದಿದೆ. ಅಭಿವೃದ್ಧಿಗೆ ಬೇಕಾದ ಎಲ್ಲವೂ ಛತ್ತೀಸ್‌ಗಢದಲ್ಲಿ ಈ ಮೊದಲೂ ಇತ್ತು. ಈಗಲೂ ಇದೆ. ಆದರೆ, ಸ್ವಾತಂತ್ರ್ಯಾನಂತರ ದೇಶವನ್ನು ಬಹುಕಾಲದವರೆಗೆ ಆಳಿದವರಿಗೆ ದೂರದೃಷ್ಟಿಯ ಕೊರತೆ ಇತ್ತು. ಕೇವಲ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅವರು ನಿರ್ಧಾರಗಳನ್ನು ತೆಗೆದುಕೊಂಡರು. ಕಾಂಗ್ರೆಸ್ ಪದೇ ಪದೇ ಸರ್ಕಾರಗಳನ್ನು ರಚಿಸಿತು. ಅವರ ಏಕೈಕ ಗುರಿ ಸರ್ಕಾರ ರಚನೆಯಾಗಿದ್ದರಿಂದ ಅವರು ಭಾರತದ ಭವಿಷ್ಯವನ್ನು ನಿರ್ಮಿಸುವುದನ್ನು ಮರೆತರು. ರಾಷ್ಟ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುವುದು ಅವರ ಕಾರ್ಯಸೂಚಿಯ ಭಾಗವಾಗಿರಲಿಲ್ಲ. ಇಂದಿಗೂ ಕಾಂಗ್ರೆಸ್ ರಾಜಕಾರಣದ ಪರಿಸ್ಥಿತಿ ಮತ್ತು ದಿಕ್ಕು ಹಾಗೆಯೇ ಇದೆ. ವಂಶಾಡಳಿತ, ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣವನ್ನು ಮೀರಿ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ. ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡುವವರು ಎಂದಿಗೂ ನಿಮ್ಮ ಕುಟುಂಬಗಳ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ತಮ್ಮ ಸ್ವಂತ ಮಕ್ಕಳ ಭವಿಷ್ಯವನ್ನು ಭದ್ರಪಡಿಸುವತ್ತ ಮಾತ್ರ ಗಮನಹರಿಸುವವರು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಎಂದಿಗೂ ಚಿಂತಿಸಲಾರರು. ಆದರೆ ಮೋದಿಯವರಿಗೆ..... ನೀವೆಲ್ಲರೂ ಮೋದಿಯ ಕುಟುಂಬ... ನಿಮ್ಮ ಕನಸುಗಳೇ ಮೋದಿಯ ಸಂಕಲ್ಪ. ಆದ್ದರಿಂದಲೇ, ನಾನು ಇಂದು ವಿಕಸಿತ ಭಾರತ್, ವಿಕಸಿತ ಛತ್ತೀಸ್‌ಗಢದ ಬಗ್ಗೆ ಮಾತನಾಡುತ್ತಿದ್ದೇನೆ.
ಈ ನಿಮ್ಮ ‘ಸೇವಕ’ ದೇಶದ 140 ಕೋಟಿ ಜನರಿಗೆ ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಭರವಸೆಯನ್ನು ನೀಡಿದ್ದಾನೆ. ಪ್ರತಿಯೊಬ್ಬ ಭಾರತೀಯನೂ ಜಗತ್ತಿನಾದ್ಯಂತ ಗರ್ವದಿಂದ ತಲೆ ಎತ್ತಿ ಓಡಾಡುವಂತೆ ಮಾಡುವ ಸರ್ಕಾರ ನೀಡುವುದಾಗಿ ೨೦೧೪ ರಲ್ಲಿ ಮೋದಿ ಭರವಸೆ ನೀಡಿದ್ದರು. ಈ ಭರವಸೆಯನ್ನು ಪೂರೈಸಲು ನಾನು ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ. 2014ರಲ್ಲಿ ಮೋದಿ ತಮ್ಮ ಸರಕಾರದಲ್ಲಿ ಬಡವರಿಗಾಗಿ ಯಾವುದೇ ರಾಜಿ ಇಲ್ಲ ಎಂದು ಭರವಸೆ ನೀಡಿದ್ದರು. ಬಡವರನ್ನು ಲೂಟಿ ಮಾಡಿದವರು ಬಡವರಿಗೆ ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಹೇಳಿದ್ದೆ. ಇಂದು ಬಡವರ ಹಣ ಲೂಟಿ ಹೊಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಡವರ ಲೂಟಿ ತಡೆದು ಅದರಿಂದ ಉಳಿಸಿದ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಉಚಿತ ಪಡಿತರ, ಉಚಿತ ಚಿಕಿತ್ಸೆ, ಕೈಗೆಟಕುವ ದರದಲ್ಲಿ ಔಷಧಗಳು, ಬಡವರಿಗೆ ಮನೆ, ಪ್ರತಿ ಮನೆಗೆ ಕೊಳವೆ ನೀರು, ಪ್ರತಿ ಮನೆಗೆ ಗ್ಯಾಸ್ ಸಂಪರ್ಕ, ಪ್ರತಿ ಮನೆಗೆ ಶೌಚಾಲಯ- ಈ ಎಲ್ಲಾ ಕಾರ್ಯಗಳನ್ನು ಸಾಧಿಸಲಾಗುತ್ತಿದೆ. ತಮ್ಮ ಮನೆಗಳಲ್ಲಿ ಇಂತಹ ಸೌಲಭ್ಯಗಳನ್ನು ಎಂದೂ ಊಹಿಸದ ಬಡವರ ಮನೆಗಳಿಗೆ ಈ ಸೌಲಭ್ಯಗಳು ತಲುಪುತ್ತಿವೆ.
ಸ್ನೇಹಿತರೇ,
ಹತ್ತು ವರ್ಷಗಳ ಹಿಂದೆ ಮೋದಿ ಮತ್ತೊಂದು ಗ್ಯಾರಂಟಿ ಕೊಟ್ಟಿದ್ದರು. ನಮ್ಮ ಹಿಂದಿನ ತಲೆಮಾರುಗಳು ಬಹಳ ಭರವಸೆಯಿಂದ ಕಂಡ ಕನಸುಗಳನ್ನು ನನಸಾಗಿಸುವ ಭಾರತವನ್ನು ನಾವು ರೂಪಿಸುತ್ತೇವೆ ಎಂದು ನಾನು ಅಂದು ಹೇಳಿದ್ದೆ. ಇಂದು ನಮ್ಮ ಪೂರ್ವಜರು ಕಂಡ ಕನಸಿನಂತೆ ಹೊಸ ಭಾರತ ರೂಪುಗೊಳ್ಳುತ್ತಿದೆ. ಹಳ್ಳಿಗಳಲ್ಲಿಯೂ ಡಿಜಿಟಲ್ ಪಾವತಿ ಸಾಧ್ಯ ಎಂದು ಹತ್ತು ವರ್ಷಗಳ ಹಿಂದೆ ಯಾರಾದರೂ ಯೋಚಿಸಿದ್ದರಾ? ಅಥವಾ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳು, ಬಿಲ್ ಪಾವತಿಗಳು, ಅರ್ಜಿ ಸಲ್ಲಿಕೆ ಮನೆಯಿಂದಲೇ ಮಾಡಬಹುದೆಂದು? ರಾಜ್ಯ ಬಿಟ್ಟು ದುಡಿಯಲು ಹೋದ ಮಗ ಹಳ್ಳಿಯಲ್ಲಿರುವ ತನ್ನ ಕುಟುಂಬಕ್ಕೆ ಕ್ಷಣಾರ್ಧದಲ್ಲಿ ಹಣ ಕಳುಹಿಸಬಹುದು ಎಂದು ಯಾರಾದರೂ ಯೋಚಿಸಿದ್ದರಾ? ಕೇಂದ್ರದ ಬಿಜೆಪಿ ಸರಕಾರ ಬಡವರ ಖಾತೆಗೆ ಹಣ ಕಳುಹಿಸುತ್ತದೆ ಮತ್ತು ತಕ್ಷಣವೇ ಆ ಹಣ ಜಮೆಯಾಗಿದೆ ಎಂದು ಬಡವರ ಮೊಬೈಲ್‌ಗೆ ಸಂದೇಶ ಬರುತ್ತದೆ ಎಂದು ಯಾರಾದರೂ ಯೋಚಿಸಿದ್ದರಾ? ಇಂದು ಇದೆಲ್ಲಾ ಸಾಧ್ಯವಾಗಿದೆ. ನಿಮಗೆ ನೆನಪಿರಬಹುದು. ಹಿಂದೆ ಕಾಂಗ್ರೆಸ್‌ನ ಒಬ್ಬ ಪ್ರಧಾನಿ ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಅದರಲ್ಲಿ ಕೇವಲ ೧೫ ಪೈಸೆ ಮಾತ್ರ ಹಳ್ಳಿಗಳಿಗೆ ತಲುಪುತ್ತದೆ. ಉಳಿದ 85 ಪೈಸೆ ದಾರಿಯಲ್ಲಿಯೇ ಮಾಯವಾಗುತ್ತದೆ ಎಂದು ಹೇಳಿದ್ದರು. ಅವರು ಅವರದೇ ಕಾಂಗ್ರೆಸ್ ಸರಕಾರದ ಬಗ್ಗೆ ಹೇಳಿದ್ದರು. ಇದೇ ಪರಿಸ್ಥಿತಿ ಈಗಲೂ ಮುಂದುವರೆದಿದ್ದರೆ ಇಂದು ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರವು 34 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೇರವಾಗಿ ದೇಶದ ಜನರ ಬ್ಯಾಂಕ್ ಖಾತೆಗಳಿಗೆ ಹಾಕಿದೆ. ದೆಹಲಿಯಿಂದ ಡಿಬಿಟಿ ಮೂಲಕ ದೇಶದ ಜನರ ಬ್ಯಾಂಕ್ ಖಾತೆಗಳಿಗೆ 34 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ರವಾನೆಯಾಗಿದೆ. ಈಗ ಊಹಿಸಿ, ಕಾಂಗ್ರೆಸ್ ಸರಕಾರ ಇದ್ದಿದ್ದರೆ 1 ರೂಪಾಯಿಯಲ್ಲಿ 15 ಪೈಸೆಯ ಸಂಪ್ರದಾಯ ಮುಂದುವರಿದಿದ್ದರೆ ಆಗ ಏನಾಗುತ್ತಿತ್ತು. 34 ಲಕ್ಷ ಕೋಟಿ ರೂ.ಗಳಲ್ಲಿ ಮಧ್ಯವರ್ತಿಗಳು 29 ಲಕ್ಷ ಕೋಟಿ ರೂಪಾಯಿಗಳನ್ನು ಗುಳುಂ ಮಾಡುತ್ತಿದ್ದರು.
ಬಿಜೆಪಿ ಸರ್ಕಾರವು ಮುದ್ರಾ ಯೋಜನೆಯಡಿ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ 28 ಲಕ್ಷ ಕೋಟಿ ರೂಪಾಯಿಗಳ ನೆರವು ನೀಡಿದೆ. ಕಾಂಗ್ರೆಸ್ ಸರಕಾರ ಇದ್ದಿದ್ದರೆ ಅವರ ಮಧ್ಯವರ್ತಿಗಳು ಸುಮಾರು 24 ಲಕ್ಷ ಕೋಟಿ ರೂಪಾಯಿಗಳನ್ನು ನುಂಗಿ ಹಾಕುತ್ತಿದ್ದರು. ಬಿಜೆಪಿ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 2.75 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಒಂದು ವೇಳೆ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಸುಮಾರು 2.25 ಲಕ್ಷ ಕೋಟಿ ರೂಪಾಯಿಗಳನ್ನು ತಾವೇ ತಿಂದು ಬಿಡುತ್ತಿದ್ದರು. ಆ ಹಣ ರೈತರಿಗೆ ತಲುಪುತ್ತಿರಲಿಲ್ಲ. ಇಂದು ಬಿಜೆಪಿ ಸರಕಾರ ಬಡವರ ಅವರ ಹಕ್ಕುಗಳನ್ನು ಖಾತ್ರಿ ಪಡಿಸಿದೆ. ಆ ಮೂಲಕ ಅವರಿಗೆ ಸಲ್ಲಬೇಕಾದ ಪಾಲನ್ನು ನೀಡಿದೆ. ಭ್ರಷ್ಟಾಚಾರ ನಿಂತಾಗ, ಅಭಿವೃದ್ಧಿ ಯೋಜನೆಗಳು ಪ್ರಾರಂಭವಾಗುತ್ತವೆ ಮತ್ತು ಉದ್ಯೋಗಕ್ಕಾಗಿ ಅನೇಕ ಅವಕಾಶಗಳು ಹೊರಹೊಮ್ಮುತ್ತವೆ. ಇದರೊಂದಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂದು ಅಗಲವಾದ ರಸ್ತೆಗಳು , ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಬಿಜೆಪಿ ಸರ್ಕಾರದ ಉತ್ತಮ ಆಡಳಿತದ ಫಲ.
ಸಹೋದರ ಸಹೋದರಿಯರೇ,
21ನೇ ಶತಮಾನದ ಆಧುನಿಕ ಅಗತ್ಯಗಳಿಗೆ ತಕ್ಕಂತಹ ಉಪಕ್ರಮಗಳ ಮೂಲಕ ‘ವಿಕಸಿತ ಛತ್ತೀಸ್‌ಗಢ’ದ ಕನಸನ್ನು ನನಸು ಮಾಡಲಾಗುವುದು. ಛತ್ತೀಸ್‌ಗಢ ಅಭಿವೃದ್ಧಿಯಾದರೆ ಭಾರತದ ಪ್ರಗತಿಯನ್ನು ಯಾರೂ ತಡೆಯಲಾರರು. ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾದಾಗ, ಛತ್ತೀಸ್‌ಗಢವೂ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಲಿದೆ. ಶಾಲಾ, ಕಾಲೇಜುಗಳಲ್ಲಿನ ಯುವ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಮೊದಲ ಬಾರಿಯ ಮತದಾರರಿಗೆ ಇದೊಂದು ಮಹತ್ವದ ಅವಕಾಶವಾಗಿದೆ. ‘ವಿಕಸಿತ ಛತ್ತೀಸ್‌ಗಢ’ ಅವರ ಕನಸುಗಳನ್ನು ಈಡೇರಿಸಲಿದೆ. ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದನೆಗಳು.
ಧನ್ಯವಾದಗಳು!
Disclaimer: ಇದು ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
*****
(Release ID: 2009294)
Visitor Counter : 78
Read this release in:
Bengali
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Malayalam